Wednesday, March 26, 2008

ಸಪ್ತರ್ಷಿಗಳು ಗ್ಲಾಸು ಒಡೆದರು...


"ಇನ್ಮುಂದೆ ಶಾಲೆ ಗ್ರೌಂಡ್‌ನಲ್ಲಿ ಕ್ರಿಕೆಟ್ ಆಡಿದ್ರೆ ನೋಡಿ. ಕ್ರಿಕೆಟ್ ಅಂತೆ ಕ್ರಿಕೆಟ್ಟು... ಅದರ ಬದ್ಲು ಖೋಖೋ ಆಡಿ. ಕಬಡ್ಡಿ ಆಡಿ" ಎಂದು ಒಂದು ವಾರದ ಹಿಂದಷ್ಟೇ ಗುಡುಗಿದ್ದರು ನಮ್ಮ ಪಿಇ ಮೇಸ್ಟ್ರು. ಬಹುತೇಕ ಎಲ್ಲ ಹೈಸ್ಕೂಲ್‌ಗಳಲ್ಲೂ ಪರಿಸ್ಥಿತಿ ಹೀಗೇ ಇರಬೇಕು. ಹುಡುಗರಿಗೆ ಕ್ರಿಕೆಟ್ ಬಿಟ್ಟರೆ ಬೇರೆ ಆಟಗಳೇ ಗೊತ್ತಿಲ್ಲ. ಮನೆಯೊಳಗಾಡುವ ಆಟಗಳನ್ನು ಕಂಪ್ಯೂಟರ್ ಗೇಮ್‌ಗಳು ಮರೆಸಿಬಿಟ್ಟಿದ್ದರೆ, ಹೊರಗಾಡುವ ಆಟಗಳನ್ನು ಈ ಕ್ರಿಕೆಟ್ಟು ನುಂಗಿಹಾಕಿಬಿಟ್ಟಿದೆ. ಕುಂಟೆಬಿಲ್ಲೆ, ಗಿಲ್ಲಿ ದಾಂಡು, ಲಗೋರಿಗಳನ್ನು ಜನ ಮರೆತೇ ಬಿಟ್ಟಿದ್ದಾರೆ. ಕಬ್ಬಡ್ಡಿ ಎಂದರಂತೂ ಕೆಲವರು ನಗಲು ಶುರುಮಾಡಿಬಿಡುತ್ತಾರೆ! ನಗುವಿಗೆ ನಮ್ಮ ನವರಸ ನಾಯಕ ಜಗ್ಗೇಶ್ ಪ್ರಭಾವವಿರಬೇಕು. ಅದೇನೇ ಇರಲಿ. ಕ್ರಿಕೆಟ್ಟು ಆಡುವುದನ್ನು ನಿಷೇಧಿಸಿದ ನಮ್ಮ ಮೇಸ್ಟ್ರು ಬ್ಯಾಟು ಬಾಲುಗಳನ್ನೂ ಕಿತ್ತುಕೊಂಡು ಹೋಗಿ ತಮ್ಮ ಟೇಬಲ್ ಕೆಳಗಿಟ್ಟುಕೊಂಡುಬಿಟ್ಟರು. ಸಿಟ್ಟು ತಡೆಯಲಾಗದ ನಾವು, "ನೋಡ್ರೋ... ಆಟ ಆಡ್ಬೇಡಿ ಅಂತ ಹೇಳಿದ್ರೆ ಆಗಿತ್ತಪ್ಪ... ಬ್ಯಾಟು ಬಾಲು ಯಾಕೆ ತಗೊಂಡು ಹೋಗ್ಬೇಕಿತ್ತು? ಇವತ್ತು ಸಂಜೆ ಅವರ ಮನೆಗೆ ಹೋಗಿ ನೋಡಿ ಬೇಕಿದ್ರೆ, ಅವರ ಮಗ ಅದೇ ಬ್ಯಾಟು ಬಾಲಲ್ಲಿ ಕ್ರಿಕೆಟ್ ಆಡ್ತಿರ್ತಾನೆ..." ಅಂತೆಲ್ಲ ಮಾತಾಡಿಕೊಂಡು ಸಿಟ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆವು. ನಮ್ಮ ಪಿಇ ಮೇಸ್ಟ್ರು ಕೂಡಾ ಬಹಳ ನೊಂದುಕೊಂಡುಬಿಟ್ಟಿದ್ದರು. ನಮ್ಮ ಹೈಸ್ಕೂಲ್ ಕಳೆದ ಮೂರು ವರ್ಷಗಳಿಂದ ಖೋಖೋ ಆಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಈ ವರ್ಷವಾದರೋ ನಾವು ಖೋಖೋ ಎಂದು ಕೇಳಿದಾಕ್ಷಣ ಖೋ ಕೊಟ್ಟವರಂತೆ ಓಡಿಹೋಗಿಬಿಡುತ್ತಿದ್ದೆವು. ಇವೆಲ್ಲ ವಿಷಯಗಳು ಸೇರಿಕೊಂಡು ನಮ್ಮ ಬ್ಯಾಟು ಬಾಲುಗಳಿಗೆ ಪಂಗನಾಮ ಹಾಕಿದ್ದವು.

ಮಾರನೇ ದಿನ ಶಾಲಾ ಮಟ್ಟದ ಸ್ಪೋರ್ಟ್ಸ್ ನಡೆಯುತ್ತಿತ್ತು. ನಮ್ಮ ಪಿಇ ಮೇಸ್ಟ್ರು ಎಲ್ಲಿಂದಲೋ ಒಟ್ಟು ಹಾಕಿ ಮೂರ್ನಾಲಕು ಖೋಖೋ ತಂಡಗಳನ್ನು ತಯಾರಿ ಮಾಡಿಸಿಯೇ ಬಿಟ್ಟಿದ್ದರು. ’ಯುಕ್ತಿ’ ’ಶಕ್ತಿ’ ’ಕೀರ್ತಿ’ ಮತ್ತು ’ಸ್ಪೂರ್ತಿ’ ಬಣಗಳು ಪ್ರತಿಯೊಂದು ಆಟದಲ್ಲೂ ತಾವೇ ಗೆಲ್ಲಬೇಕೆಂದು ಸೆಣಸತೊಡಗಿದ್ದವು. ಆದರೆ ಇವು ಯಾವುದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ನಾವು ಒಂದಿಷ್ಟು ಜನ ಮಾತ್ರ ಅತ್ತ ಇತ್ತ ಸುತ್ತಾಡುತ್ತ, ಹುಡುಗಿಯರು ಹೆಚ್ಚಿದ್ದ ಕಡೆ "ಥೂ... ಅವನಿಗೆ ಆಡ್ಲಿಕ್ಕೇ ಬರುದಿಲ್ಲಾ... ಅವನ್ನೆಂತಕ್ಕೆ ಸಿಲೆಕ್ಟ್ ಮಾಡಿದ್ರೋ ಮಾರಾಯ..." ಎಂದು ಕಮೆಂಟ್ ಕೊಡುತ್ತಾ ಹೀರೋಗಳಾಗಲು ಪ್ರಯತ್ನಿಸುತ್ತಿದ್ದೆವು. ಕೊನೆಗೆ ಯಾವ ಹುಡುಗಿಯೂ ಇತ್ತ ಕಣ್ಣು ಹಾಯಿಸದಿದ್ದಾಗ ನಾವೂ ಬೇಸತ್ತು ಒಂದುಕಡೆ ಸುಮ್ಮನೆ ಕುಳಿತು ಖೋಖೋ ನೋಡತೊಡಗಿದೆವು. ಆಗ ನಮ್ಮಲ್ಲೊಬ್ಬ "ಲೋ... ಕ್ರಿಕೆಟ್ ಆಡೋಣ್ವಾ?" ಅಂದ. ಎಲ್ಲರೂ ಅವನಿಗೆ ಬೈಯ್ಯತೊಡಗಿದರು. ನಿನ್ನೆ ಮಾತ್ರ ಮಂಗಳಾರತಿ ಮಾಡಿಸಿಕೊಂಡಿದ್ದು ಸಾಕಾಗ್ಲಿಲ್ವಾ... ಹಾಗೆ... ಹೀಗೆ ಎಂದು. "ಇವತ್ತು ನಮ್ಮನ್ನ ಯಾರೋ ನೋಡ್ತಾರೆ? ಪಿಇ ಮೇಸ್ಟ್ರು ಆಟ ಆಡ್ಸೋದ್ರಲ್ಲಿ ಬ್ಯುಸಿ ಇದಾರೆ. ನಾವು ಅತ್ಲಾಗೆ, ಕಾಲೇಜ್ ಹತ್ರ ಹೋಗಿ ಆಡಿದ್ರಾಯ್ತಪ್ಪಾ... ಯಾರಿಗೂ ಕಾಣೂದೂ ಇಲ್ಲಾ" ಎಂದ. ಎಲ್ಲರಿಗೂ ಅವನ ಮಾತು ಸರಿಯೆನಿಸಿತು. ಆದ್ರೆ ಬ್ಯಾಟು ಬಾಲು ಇಲ್ವಲ್ಲಾ! ಬಾಲು ಒಬ್ಬನ ಹತ್ತಿರ ಇತ್ತು. ಬ್ಯಾಟಿಗೆ, ಬ್ಯಾಟೇ ಆಗಬೇಕು ಎಂದೇನಿಲ್ಲವಲ್ಲ. ಅಲ್ಲೇ ಒಂದು ಮುರುಕು ಮನೆಗೆ ಹೋಗಿ ಒಂದು ರೀಪಿನ ಪೀಸನ್ನು ಸಂದೀಪ ಹುಡುಕಿಕೊಂಡು ಬಂದ. ಮತ್ತೆ ಶುರುವಾಯಿತು ನಮ್ಮ ಕ್ರಿಕೆಟಾಯಣ.

ಎಮ್. ಎಮ್. ಕಾಮರ್ಸ್ ಕಾಲೇಜಿನ ಹತ್ತಿರವೇ ನಮ್ಮ ಹೈಸ್ಕೂಲು. ಕಾಲೇಜು ಮತ್ತು ನಮ್ಮ ಹೈಸ್ಕೂಲಿನ ನಡುವೆ ಒಂದಿಷ್ಟು ಖಾಲಿ ಜಾಗ ಮತ್ತು ಒಂದು ಚಿಕ್ಕ ಬಿಲ್ಡಿಂಗ್ ಕೂಡಾ ಇತ್ತು. ಆ ಬಿಲ್ಡಿಂಗಿನ ಕದ ತೆರೆದದ್ದನ್ನು ನಾವಂತೂ ಯಾರೂ ನೋಡಿರಲಿಲ್ಲ. ಅದರ ಒಳಗೆ ಏನೇನೋ ನೆಡೆಯುತ್ತದೆ ಎಂಬ ಕುತೂಹಲಕಾರಿ ಕಥೆಗಳು ಮಾತ್ರ ಎಲ್ಲರಿಗೂ ತಿಳಿದಿತ್ತು. ಅದಲ್ಲದೆ ಆ ಬಿಲ್ಡಿಂಗಿನ ಗೋಡೆಯ ಸುತ್ತೆಲ್ಲಾ "ನಾಳೆ ಬಾ" ಎಂದು ಬೇರೆ ಬರೆದಿದ್ದರು. ನಮ್ಮಲ್ಲಿ ಕೆಲವರು ಇಲ್ಲಿ ಕ್ರಿಕೆಟ್ ಆಡುವುದಾ? ಎಂದು ಸ್ವಲ್ಪ ಹೆದರಿದರೂ ಕ್ರಿಕೆಟ್ಟಿನ ಆಕರ್ಷಣೆಯಲ್ಲಿ ಅದನ್ನೆಲ್ಲ ಮರೆತುಬಿಟ್ಟರು. ಸ್ಟಂಪ್ಸ್‌ಗೆ ಏನು ಮಾಡುವುದು ಎಂದು ಹುಡುಕುತ್ತಿರುವಾಗ ಚೇತನ ಒಂದು ಚಾಕ್ ಪೀಸ್ ಹಿಡಿದುಕೊಂಡು ಬಂದ. ಆ ಬಿಲ್ಡಿಂಗಿನ ಒಂದು ಕಂಬದ ಮೇಲೆ ಸ್ಟಂಪಿನ ಚಿತ್ರ ಬಿಡಿಸಿ ಇದೇ ಸ್ಟಂಪು ಎಂದ. ಎಲ್ಲರಿಗೂ ಅದೊಂದೇ ದಾರಿಯೆನಿಸಿ ಒಪ್ಪಿದರು. ಎರಡು ಟೀಮ್‌ಗಳನ್ನು ಮಾಡಿ, ಒಬ್ಬ ಹೆಚ್ಚಾದುದರಿಂದ ಅವನನ್ನು ಜೋಕರ್ ಮಾಡಿ ಆಟ ಪ್ರಾರಂಭವಾಯಿತು. ಲೆಗ್‌ಸೈಡ್ ಕಾಲೇಜಿನ ಲೈಬ್ರರಿ ಇರುವುದರಿಂದ ಲೆಗ್‌ಸೈಡ್ ರನ್ ನಿಷೇಧಿಸಲಾಯಿತು. ಕೇವಲ ಆಫ್‌ಸೈಡ್ ಅಷ್ಟೇ ರನ್ ಗಳಿಸಬೇಕಾದ್ದುದರಿಂದ ಬಾಲರ್‌ಗಳೆಲ್ಲಾ ಕೇವಲ ಲೆಗ್‌ಸೈಡ್ ಅಷ್ಟೇ ಬಾಲ್ ಹಾಕಲು ಪ್ರಾರಂಭಿಸಿದರು. ಬ್ಯಾಟ್ಸ್‌ಮನ್‌ಗಳಿಗೆ ಒಳ್ಳೇ ಕಿರಿಕಿರಿ ಪ್ರಾರಂಭವಾಗಿಬಿಟ್ಟಿತು. ಅದರಲ್ಲೂ ರಾಘು ಸಿಕ್ಕಾಪಟ್ಟೆ ಸಿಟ್ಟುಮಾಡಿಕೊಂಡಿದ್ದ. ಅವನಿಗೋ ಪಾಪ, ಲೆಗ್‌ಸೈಡ್ ಅಷ್ಟೇ ರನ್ ತೆಗೆಯಲು ಬರುತ್ತಿತ್ತು.

ಆಟ ಸುರಳೀತವಾಗಿ ಸಾಗುತ್ತಿತ್ತು. ಅತ್ತ ನಮ್ಮ ಪಿಇ ಮೇಸ್ಟ್ರು ಖೋಖೋ ಆಡಿಸುವುದರಲ್ಲಿ ಮುಳುಗಿಹೋಗಿದ್ದರು. ಖೋಖೋ ನೋಡಿ ನೋಡಿ ಬೆಸತ್ತುದಕ್ಕೋ ಏನೊ, ನಮ್ಮ ತರಗತಿಯ ಕೆಲವು ಹುಡುಗಿಯರು ಹಾಗೇ ಸುತ್ತುಹಾಕುತ್ತಾ ಕಾಲೇಜ್ ಕಡೆ ಬಂದುಬಿಟ್ಟರು. ನಾವು ಅಲ್ಲಿ ಕ್ರಿಕೆಟ್ ಆಡುತ್ತಿರುವುದನ್ನು ನೋಡಿ ತಮ್ಮ ತಮ್ಮೊಳಗೇ ಏನೇನೋ ಮಾತನಾಡಿಕೊಳ್ಳುತ್ತಾ ಮುಸಿ ಮುಸಿ ನಗತೊಡಗಿದರು. ಇದನ್ನೆಲ್ಲಾ ವೀಕ್ಷಿಸುತ್ತಾ, ಅದರಲ್ಲೂ ಬ್ಯಾಟಿಂಗ್ ಮಾಡುತ್ತಿದ್ದ ರಾಘುವಿಗೆ ಒಂದು ರೀತಿಯ ಉತ್ಸಾಹ ಉಕ್ಕಿಬಂದುಬಿಟ್ಟಿತು. ಲೆಗ್‌ಸೈಡ್ ಯಾರೂ ಫೀಲ್ಡರ್‌ಗಳು ಇಲ್ಲದ ಕಾರಣ, ಅಲ್ಲಿ ಬಾಲನ್ನು ಹೊಡೆದರೆ ಬ್ಯಾಟ್ಸ್‌ಮನ್ನೇ ಹೋಗಿ ತರಬೇಕು ಎನ್ನುವ ರೂಲ್ಸ್ ಇತ್ತು. ಈಗ ಹುಡುಗಿಯರೂ ಕಾಲೇಜಿನ ಹತ್ತಿರವೇ ಬಂದು ನಿಂತಿದ್ದರು. ಬಾಲರ್ ಕೂಡಾ ಲೆಗ್‌ಸೈಡ್ ಬಾಲ್ ಒಗೆಯುತ್ತಿದ್ದ. ರಾಘುವಿಗೆ ಹುಡುಗಿಯರ ಮುಂದೆ ಬೀಟ್ ಆಗುವುದು ಇಷ್ಟವಿರಲಿಲ್ಲ. ಈಸಲ ಲೆಗ್‌ಸೈಡಿಗೆ ಬಂದ ಬಾಲನ್ನು ಜೋರಾಗಿ ಕಾಲೇಜಿನ ಕಡೆಯೇ ಬಾರಿಸಿಬಿಟ್ಟ. ಬಾಲು ನೇರವಾಗಿ ಹೋಗಿ ಕಾಲೇಜ್ ಲೈಬ್ರರಿಯ ಕಿಟಕಿಯ ಗಾಜಿನ ಮೇಲೆ ಬಿತ್ತು. ಗಾಜು ಫಟಾರ್ ಎಂದು ಶಬ್ದ ಮಾಡುತ್ತಾ ಪುಡಿಪುಡಿಯಾಗಿ ಒಡೆದುಹೋಯಿತು. ಹುಡುಗಿಯರು ಕಿಟಾರ್ ಎಂದು ಚೀರುತ್ತಾ ಅಲ್ಲಿಂದ ದೂರಸರಿದರು. ಕಾಲೇಜ್ ಲೈಬ್ರರಿಯ ಒಳಗಿದ್ದ ಜನ ಏನಾಯಿತೆಂದು ಹೊರಗೆ ಬಂದು ನೋಡುವಷ್ಟರಲ್ಲಿ ನಮ್ಮಲ್ಲಿ ಒಬ್ಬನೂ ಅಲ್ಲಿರಲಿಲ್ಲ. ಒಂದಿಬ್ಬರು ಹೈಸ್ಕೂಲಿಗೆ ವಾಪಸ್ ಓಡಿಬಂದು ಏನೂ ಆಗಿಲ್ಲವೇನೋ ಎಂಬಂತೆ ಖೋಖೋ ನೋಡಲು ಶುರುಮಾಡಿದ್ದರು. ಒಂದಿಬ್ಬರು ಕಾಲೇಜ್ ಹಿಂದುಗಡೆಗೆ ಓಡಿಹೋಗಿ ಕಾಂಪೌಂಡ್ ಜಿಗಿದು ಮನೆಗೇ ಓಡಿದ್ದರು. ಉಳಿದವರು ಎತ್ತೆಂದರತ್ತ ಚಲ್ಲಾಪಿಲ್ಲಿಯಾಗಿ ಹೋಗಿದ್ದರು.

ಮಾರನೇ ದಿನ ಶಾಲೆಯಲ್ಲಿ ಎಲ್ಲರೂ ಭೇಟಿಯಾದಾಗ, ನಿನ್ನೆ ಏನೂ ನೆಡೆದೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದೆವು. ಆದರೆ ಒಬ್ಬರ ಮುಖವನ್ನು ಇನ್ನೊಬ್ಬ ನೋಡಿದಾಗ ತನಗೇ ಅರಿಯದ ಒಂದು ಕಳ್ಳ ನಗು ಮುಖದಲ್ಲಿ ಬಂದುಹೋಗುತ್ತಿತ್ತು. ಒಟ್ಟಿನಲ್ಲಿ ಯಾವುದೋ ಒಂದು ದೊಡ್ಡ ತಪ್ಪನ್ನು ಮಾಡಿದರೂ ಯಾರಿಗೂ ತಿಳಿಯಲೇ ಇಲ್ಲ ಎನ್ನುವ ಸಂತೋಷದಲ್ಲಿ ಎಲ್ಲರೂ ಬೀಗುತ್ತಿದ್ದೆವು. ಮಧ್ಯಾಹ್ನ ಯಾಕೋ ನಾಮ್ಮ ಮನೆಯಲ್ಲಿ ಊಟಕ್ಕೆ ತಡವಾಗಿ ನಾನು ವಾಪಸ್ ಶಾಲೆಗೆ ಹೋಗುವಾಗ ಮಧ್ಯಾಹ್ನದ ಮೊದಲನೇ ಅವಧಿ ಆಗಲೇ ಶುರುವಾಗಿಬಿಟ್ಟಿತ್ತು. ಸಂಸ್ಕೃತ ಹೇಳುತ್ತಿದ್ದ ಮೇಡಮ್ ಆಗಲೇ ಕ್ಲಾಸಿಗೆ ಬಂದಾಗಿತ್ತು. ನಾನು ಹೋಗಿ ಬಾಗಿಲಲ್ಲಿ ನಿಂತು ಮೇಡಮ್ ಅನ್ನುವಷ್ಟರಲ್ಲಿ, "ಓ... ಬಂದ್ಯೇನಪ್ಪಾ... ಬಾ. ನೋಡು... ನಿನ್ನ ಫ್ರೆಂಡ್ಸ್ ಎಲ್ಲಾ ಆ ಮೂಲೇಲಿ ನಿತ್ಕೊಂಡಿದಾರೆ. ನೀನೂ ಹೋಗಿ ಅವರ ಜೊತೆ ನಿಂತ್ಕೊ ಹೋಗು" ಎಂದರು. ನನಗೆ ಒಮ್ಮೆಲೇ ದಿಗಿಲಾಗಿ ಅತ್ತಕಡೆ ನೋಡಿದರೆ, ನಿನ್ನೆ ಕ್ರಿಕೆಟ್ ಆಡಲು ಹೋಗಿದ್ದ ಆರೂ ಜನ ತಲೆ ತಗ್ಗಿಸಿ ಒಂದುಕಡೆ ನಿಂತಿದ್ದರು. ನಾನೇ ಏಳನೆಯವನು. ನನ್ನ ಬರುವಿಗಾಗೇ ಕಾಯುತ್ತಿದ್ದರು. ಈ ವಿಷಯ ಇವರಿಗೆ ಹೇಗೆ ಗೊತ್ತಾಯ್ತಪ್ಪಾ ಎಂದುಕೊಳ್ಳುತ್ತಾ ಸಹೋದ್ಯೋಗಿಗಳ ಜೊತೆ ನಿಂತೆ. ಅಷ್ಟು ಹೊತ್ತಿಗೆ ನಮ್ಮ ಹೆಡ್ ಮಾಸ್ಟರ್ ಕ್ಲಾಸಿಗೆ ಬಂದರು. ಮೇಡಮ್ ಅವರಿಗೆ ಈ ಪ್ರಸಂಗದ ಬಗ್ಗೆ ವಿವರಿಸುತ್ತಾ "ನೋಡ್ರೀ ಈ ಸಪ್ತರ್ಷಿಗಳೇ ಹೋಗಿ ಗ್ಲಾಸ್ ಒಡದು ಬಂದದ್ದು." ಎಂದು ನಮ್ಮ ಪರಿಚಯ ಮಾಡಿಕೊಟ್ಟರು.

ಗಾಜು ಒಡೆದಾಗ ಹೆದರಿ ಓಡುವ ಭರಾಟೆಯಲ್ಲಿ ನಮ್ಮಲ್ಲೇ ಒಬ್ಬ ಕಾಲೇಜ್ ಕಾರಿಡಾರ್‌ನಲ್ಲೇ ಓಡತೊಡಗಿದ್ದ. ಕಾಲೇಜು ಪ್ಯೂನ್ ಅವನನ್ನು ಹಿಡಿದು ಯಾಕೆ ಓಡುತ್ತಿದ್ದೀಯಾ ಎಂದು ಗದರಿದಾಗ ಗಾಜು ಒಡೆದ ಸುದ್ದಿಯಿಂದ ಹಿಡಿದು ಆಟದಲ್ಲಿ ಯಾರು ಯಾರು ಇದ್ದರು ಎಂಬುದನ್ನೂ ಒಂದೂ ಬಿಡದಂತೆ ಅವನಿಗೊಪ್ಪಿಸಿಬಂದುಬಿಟ್ಟಿದ್ದ ನಮ್ಮೊಳಗಿದ್ದ ಹರಿಶ್ಚಂದ್ರ. ಆದರೂ ಯಾರಿಗೂ ಹೀಗಾಯಿತು ಎಂದು ಬಾಯಿಬಿಟ್ಟಿರಲಿಲ್ಲ. ನಮಗೆ ನಮ್ಮ ನಮ್ಮೊಳಗೇ ಸಂಶಯ ಶುರುವಾಗತೊಡಗಿತು. ಹೆಸರು ಕೊಟ್ಟಿದ್ದು ಯಾರು? ಅವನಿರಬೇಕು ಇವನಿರಬೇಕು ಎಂದು ಯೋಚಿಸುತ್ತಿರುವ ನಡುವೆಯೇ ಚೇತನ ಬಹುಶಃ ಹುಡುಗೀರು ಹೇಳಿರ್ಬೇಕು ಎನ್ನುತ್ತಿದ್ದ. ಕೊನೆಗೂ ಹೆಡ್ ಮಾಸ್ಟ್ರು ನಮ್ಮ ಹೆಸರುಗಳನ್ನು ಓದತೊಡಗಿದರು. ಎಲ್ಲರಿಗೂ ಆಶ್ಚರ್ಯ. ಯಾಕೆಂದರೆ ಅಲ್ಲಿದ್ದ ಹೆಸರುಗಳೆಲ್ಲಾ ನಮ್ಮ ನಿಕ್ ನೇಮ್ಸ್. ಅವೆಲ್ಲಾ ನಮ್ಮ ನಮ್ಮಲೇ ಇನ್ನೊಬ್ಬರನ್ನು ಕಿಚಾಯಿಸಲು ಇಟ್ಟ ಹೆಸರುಗಳು .ಡುಮ್ಮ, ಸೊಣಕ, ಕೋಳಿ, ಗಾಂಧಿ, ಮಾಣಿ, ಚುರ್‌ಮುರಿ... ಆದರೆ ಒಬ್ಬನ ಹೆಸರು ಮಾತ್ರ ಒರಿಜಿನಲ್. ಚೇತನ್ ಶೆಟ್ಟಿ! ಈ ಹೆಸರುಗಳನ್ನು ಚೇತನನೇ ಕೊಟ್ಟಿದ್ದು ಎನ್ನುವುದರಲ್ಲಿ ಯಾರಿಗೂ ಸಂಶಯ ಉಳಿಯಲಿಲ್ಲ. ಕ್ಲಾಸು ಮುಗಿದಾಗ ಎಲ್ಲರೂ ಹೋಗಿ ಚೇತನನನ್ನು ಹುರಿದು ಮುಕ್ಕುವುದೊಂದು ಬಾಕಿ ಇತ್ತು. ಎಲ್ಲರ ಮುಖದ ಮೇಲೂ ಸಿಟ್ಟು ತಾಂಡವವಾಡುತ್ತಿತ್ತು. ಗಾಜು ಒಡೆದುಬಂದ ವಿಷಯ ನಮ್ಮ ಮೇಸ್ಟ್ರುಗಳಿಗೆ ಗೊತ್ತಾಯಿತಲ್ಲಾ ಎಂಬುದಕ್ಕಲ್ಲ. ತಮ್ಮ ನಿಕ್ ನೇಮ್ ಹುಡುಗಿಯರಿಗೆ ಗೊತ್ತಾಗಿ ಅವರೆಲ್ಲಾ ನಮ್ಮನ್ನು ನೋಡಿ ನೋಡಿ ನಗತೊಡಗಿದುದಕ್ಕೆ.

Monday, March 17, 2008

ಬಿಡಿಸೋ ಸಿಗ್ನಲನು... ಮಾಮ.


ಅಬ್ಬಬ್ಬಾ... ಏನ್ ಟ್ರಾಫಿಕ್ ರೀ ಬೆಂಗ್ಳೂರು! ನಗರ ಬೆಳೀತಾ ಇದೆ ಅನ್ನೋದರ ಸಂಕೇತ ಇರ್ಬೇಕು. ಯಾವ ರೋಡ್ ನೋಡೀ ಜಾಮ್. ಯಾವ ಸಿಗ್ನಲ್ ನೋಡೀ ಬ್ಯುಸಿ. ಓಟ್ನಲ್ಲಿ ಇಲ್ಲಿನ ಜನರಿಗೆ ತಮ್ಮ ಜೀವನದ ಮೂರನೇ ಒಂದು ಭಾಗ ನಿದ್ದೆ, ಮೂರನೇ ಒಂದು ಭಾಗ ಕೆಲಸ ಆದ್ರೆ ಉಳಿದ ಭಾಗ ಟ್ರಾಫಿಕ್‌ಗೇ ಮೀಸಲು. ಊಟ ಶೌಚಕ್ಕೆ ಏನ್ರೀ ಗತಿ ಅಂತ ಮಾತ್ರ ಕೇಳ್ಬೇಡಿ. ಇದಕ್ಕೆಲ್ಲಾ ಯಾರು ಹೊಣೆ? ಸರ್ಕಾರಾನ? ಟ್ರಾಫಿಕ್ ಪೋಲೀಸ್ರಾ? ಅಥವಾ ನಮ್ಮ ಬೆಂಗ್ಳೂರಿನ infrastructureಆ??? ಯಾರಿಗೆ ಗೊತ್ತು ಬಿಡಿ. ಆದ್ರೆ ನಮ್ಮ ಎದ್ರಿಗೆ ಇದನ್ನೆಲ್ಲಾ ಮ್ಯಾನೇಜ್ ಮಾಡ್ತಿರೋದು ನಮ್ಮ (ಟ್ರಾಫಿಕ್) ಪೋಲೀಸ್ ಮಾಮ. ಅದಕ್ಕೆ ಈ ಕಷ್ಟ ಪರಿಹರಿಸ್ಲಿಕ್ಕೆ ಅವ್ನಿಗೇ ಮೊರೆ ಇಡ್ತಾ ಇದೀನಿ... (ಎರಡು ಕನಸು ಚಿತ್ರದ "ಪೂಜಿಸಲೆಂದೇ ಹೂಗಳ ತಂದೆ" ಧಾಟೀಲಿ)



ತೂರಿಸಲೆಂದೇ ಬೈಕಲಿ ಬಂದೆ
ಟ್ರಾಫಿಕ್ ಜಾಮಲಿ ನಾನೊಂದೆ
ಬಿಡಿಸೋ ಸಿಗ್ನಲನು ಮಾಮ
ಬಿಡಿಸೋ ಸಿಗ್ನಲನು ಮಾಮ

ಬೆಂಗ್ಳೂರ್ ನಗರದಿ ಜಾಮಿನ ಜೋರು
ರೋಡಿನ ಮೇಲ್ಗಡೆ ಕಾರ್‌ಗಳ ತೇರು
ಜಾಗವು ಸಿಕ್ಕೆಡೆ ಬೈಕನು ತೂರು
ಶುರುವಾಗಿದೆ ವಾರು ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ನಗರದಿ ಫುಡಾರಿ ಬಂದಿಳಿದಿಹನು
ಜನರಿಗೆ ಟ್ರಾಫಿಕ್ ಜಾಮ್ ತಂದಿಹನು
ಜಾಮನು ನೆಕ್ಕುತ ಆಗಿದೆ ಬೋರು
ಕರುಣೆಯ ತೋರಿನ್ನು ಚೂರು
ಬಿಡಿಸೋ ಸಿಗ್ನಲನು ಮಾಮ

ಬೇಗನೆ ಸಾಗುವ ಭರದಲಿ ಕಾರು
ಪಕ್ಕದ ಕಾರಿಗೆ ಉಜ್ಜಿತು ನೋಡು
ಜಗಳವ ಆಡುತ ಮೈ ಮರೆತಿಹರು
ದಯಮಾಡಿಸೊ ಇಲ್ಲಿ ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ಎದುರಲಿ ಆಟೋ ಸಾಗುತಲಿಹುದು
ಒಮ್ಮೆಲೆ ಗಿರಕಿಯ ಹೊಡೆಯುತಲಿಹುದು
ಶಿವ ಶಿವ ಎನ್ನುತ ಜನ ಹೆದರಿಹರು
ಓಡಿಸೋ ಭೂತವನು ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ಬೇಸಿಗೆ ಬಿಸಿಲನು ತಾಳದೆ ನಾನು
ಹೆಲ್ಮೆಟ್ ತೊಡದಿರೆ ಹಾಕಿದೆ ಫೈನು
ಆದರೆ ರಿಸಿಟನು ಕೊಡದೆಯೆ ನೀನು
ಕಳಿಸುವೆಯೇಕೆನ್ನ ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ಸಿಗ್ನಲ್ ಜಂಪನು ಮಾಡಿದ ಪೆದ್ದನು
ನಿನ್ನಯ ಜಾಲಕೆ ಸಿಕ್ಕಿಬಿದ್ದಹನು
ಬೇಗನೆ ಮುಗಿಸಿ ನೆಗೋಸಿಯೇಷನ್
ಪಡೆದುಕೊಳೋ ನಿನ್ನ ಕಮೀಷನ್
ಬಿಡಿಸೋ ಸಿಗ್ನಲನು ಮಾಮ

Wednesday, March 12, 2008

ಆಪರೇಷನ್ ಮಾವಿನಕಾಯಿ !


ಹೈಸ್ಕೂಲಿನಲ್ಲೆಲ್ಲಾ ನಾನು, ಸಂತೋಷ ಮತ್ತೆ ಕಿರಣ, ತ್ರಿಮೂರ್ತಿಗಳು ಎಂದೇ ಪ್ರಸಿದ್ಧ. ಈ ಮೂವರು ಸೇರಿಬಿಟ್ಟೆವು ಅಂದರೆ ಸಧ್ಯದಲ್ಲೇ ಏನೋ ಒಂದು ಕಿತಾಪತಿ ನೆಡೆಯಲೇ ಬೇಕು. ಕಿರಣ ಬಯಲುಸೀಮೆಯ ಹುಡುಗ. ಎಲ್ಲದರಲ್ಲೂ ಹುರುಪು ಜಾಸ್ತಿ. ಸಂತೋಷ ಎಲ್ಲದನ್ನೂ ವಿಚಾರಿಸಿ ಜಾಗರೂಕತೆಯಿಂದ ಹೆಜ್ಜೆಯಿಡುವವ. ನಾನು ಅವರು ಏನೇ ಹೇಳಿದರೂ ಜೈ ಎನ್ನುವ ಹಿಂಬಾಲಕ. ಮೂರೂ ಜನರ ಮನೆ ಹತ್ತಿರವೇ ಇದ್ದುದರಿಂದ ಶಾಲೆ ಮುಗಿದ ಮೇಲೆ ಅಥವಾ ರಜಾ ದಿನಗಳಲ್ಲಿ ಬರೀ ಕಂಡವರ ಮನೆಗೆ ಕಲ್ಲೊಗೆಯುವುದೇ ವಿಚಾರಗಳು. ಸಂತೋಷನ ಮನೆಯಿರುವುದು ಶಿರಸಿ ಯಲ್ಲಾಪುರ ಮೇನ್ ರೋಡ್‌ನಲ್ಲಿ. ಆ ದಾರಿಯಲ್ಲಿ ಯಾವಾಗಲೂ ಜನಸಂಚಾರ ವಾಹನಸಂಚಾರ. ಸಂತೋಷನ ಮನೆಯ ಎದುರುಗಡೆಯೇ ಇನ್ನೊಂದು ಮನೆಯಲ್ಲಿ ರೋಡಿಗೆ ತಾಗಿದಂತೆಯೇ ಬೆಳೆದ ಒಂದು ತೋತಾಪುರಿ ಮವಿನಮರ (ಗೋವೆ ಮಾವಿನಕಾಯಿ). ಆ ವರ್ಷ ಎಷ್ಟೊಂದು ಕಾಯಿ ಬಿಟ್ಟಿತ್ತೆಂದರೆ ಮರದಲ್ಲಿ ಎಲೆಗಳೇ ಕಾಯಿಗಳಿಗಿಂತ ಕಡಿಮೆಯೇನೋ ಎನಿಸುತ್ತಿತ್ತು. ಅದೂ ಅಲ್ಲದೆ ಎಲ್ಲಾ ಮಿಡಿಗಳು ಬೆಳೆದು ನಿಂತಾಗ ಮರದ ತುಂಬೆಲ್ಲಾ ಬಾಂಗಡೆ ಮೀನು ಜೋತು ಬಿಟ್ಟಿದ್ದಂತೆ ಕಾಣುತ್ತಿತ್ತು.

ಪ್ರತೀ ದಿನ ಅದೇ ದಾರಿಯಲ್ಲಿ ಶಾಲೆಗೆ ಹೋಗಿ ಹಿಂತಿರುಗುವಾಗ ನಮ್ಮ ಮೂವರ ಕಣ್ಣೂ ಅದೇ ಮರದ ಮೇಲೆ ನೆಟ್ಟಿರುತ್ತಿತ್ತು. ಹೇಗಾದರೂ ಮಾಡಿ ಆ ಮರದ ಮಾವಿನಕಾಯಿಗಳನ್ನು ಹುಡಿಮಾಡಲೇ ಬೇಕು ಎಂಬ ಸರ್ವಾನುಮತದ ನಿರ್ಣಯವನ್ನು ತೆಗೆದುಕೊಂಡುಬಿಟ್ಟೆವು. ಸರಿ, ಈಗ ಆ ದೊಡ್ಡ ಪ್ರಾಜೆಕ್ಟ್‌ಗೆ ಪ್ಲಾನಿಂಗ್ ಬೇಕಲ್ಲ! ಸಂತೋಷ ಮಾರನೇ ದಿವಸವೇ ಪ್ಲಾನ್ ಸಿದ್ಧಪಡಿಸಿಕೊಂಡು ಬಂದ. ಆ ಮರಕ್ಕೇ ತಾಗಿ ಅವರ ಕಂಪೌಂಡ್ ಪಕ್ಕದಲ್ಲಿ ಒಂದು ಹೇರ್ ಕಟಿಂಗ್ ಸಲೂನ್. ಪ್ಲಾನ್ ಏನಪ್ಪಾ ಅಂದ್ರೆ, ಯಾರೂ ಇಲ್ಲದ ಸಮಯದಲ್ಲಿ, ಹೇರ್ ಕಟಿಂಗ್ ಸಲೂನ್‌ನ ಹಂಚಿನ ಮೇಲೆ ಹತ್ತಿ, ಮಾವಿನಕಾಯಿ ಕದಿಯುವುದು ಎಂದು. ಆದರೆ ಯಾರೂ ಇಲ್ಲದ ಸಮಯ ಅಂದರೆ ಒಂದೋ ರಾತ್ರಿ ಹನ್ನೊಂದು ಘಂಟೆ ಮೇಲೆ. ಇಲ್ಲವೋ ಬೆಳಿಗ್ಗೆ ಆರು ಘಂಟೆ ಒಳಗೆ. ರಾತ್ರಿ ಮನೆಯಿಂದ ಹೊರಬರುವ ಪರವಾನಿಗೆ ನಮಗಂತೂ ಖಂಡಿತ ಸಿಗುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮುಹೂರ್ತವಿಟ್ಟಿಕೊಳ್ಳಬೇಕು. ಆದರೆ ಆಗಲೂ ಅಷ್ಟು ಬೆಳಿಗ್ಗೆ ಮನೆಯಿಂದ ಹೊರಬರುವುದು ಹೇಗೆ? ಅದಕ್ಕೂ ಸಂತೋಷನಲ್ಲಿ ಒಂದು ಪ್ಲಾನ್ ಇತ್ತು. ಬೆಳಿಗ್ಗೆ ಕಾಲೇಜ್ ರೋಡಿನಲ್ಲಿ ಸೈಕ್ಲಿಂಗ್‌ಗೆ ಹೋಗುವುದು ಎಂದು. ಸರಿ ಶುರುವಾಯಿತು ನಮ್ಮ ಬೆಳಗಿನ ಸೈಕ್ಲಿಂಗ್ ಎಕ್ಸರ್ಸೈಜ್.

ಮೊದಲನೇ ದಿನ ಏಳುವುದೇ ತಡವಾಗಿ, ನಾನು ಮತ್ತು ಕಿರಣ ಸಂತೋಷನ ಮನೆ ಮುಟ್ಟಿದಾಗ ಆಗಲೇ 6:30 ಆಗಿಹೋಗಿತ್ತು. ರೋಡ್ ತುಂಬಾ ವಾಕಿಂಗ್ ಮಾಡುವವರು ಜಾಗಿಂಗ್ ಮಾಡುವವರು ತುಂಬಿಹೋಗಿದ್ದರು. ನಾವು ಸುಮ್ಮನೇ ಕಾಲೇಜ್ ವರೆಗೆ ಸೈಕಲ್ ಹೊಡೆದುಕೊಂಡು ವಾಪಸ್ ಬರಬೇಕಾಯಿತು. ಮಾರನೇ ದಿನ ಆರು ಘಂಟೆಗೇ ಆಪರೇಷನ್ ಸ್ಪಾಟ್ ತಲುಪಿದರೂ ಪ್ರಯೋಜನವಾಗಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ವಾಕಿಂಗ್‌ಗೆ ಆಗಲೇ ಹೊರಟಾಗಿತ್ತು. ಮೂರನೇ ದಿನ, ಅಂತೂ ಬಹಳ ಬೇಗನೆ ಅಲ್ಲಿಗೆ ತಲುಪಿದೆವು. ಸಂತೋಷನನ್ನು ಎಬ್ಬಿಸಿ ಮಾವಿನಮರದ ಮನೆಗೆ ಬಂದು ಮುಟ್ಟಿದೆವು. ಆದರೆ ಯಾರೂ ಸೈಕಲ್ ಬಿಟ್ಟು ಕೆಳಗಿಳಿಯುತ್ತಲೇ ಇಲ್ಲ. ಒಬ್ಬರ ಮುಖ ಇನ್ನೊಬ್ಬರು ಮಿಕಿ ಮಿಕಿ ನೋಡುತ್ತಾ ಅಪರಿಚಿತರಂತೆ ವರ್ತಿಸತೊಡಗಿದೆವು. ಹೀಗೇ ಒಂದೈದು ನಿಮಿಷ ಕಳೆದ ಮೇಲೆ ಸಂತೋಷ ಕಿರಣನಿಗೆ, "ಯಾಕೋ ಕಾಯ್ತಿದೀಯಾ? ಮಾವಿನ್ ಕಾಯಿ ನಿನ್ನ ಕಿಸೆಗೆ ಬಂದ್ ಬೀಳ್ತದಾ? ಹೋಗಿ ಕಿತ್ಕೊಂಡ್ ಬಾರೋ" ಎಂದ. ಕೂಡಲೇ ಕಿರಣ "ನಾನೇ ಯಾಕ್ ಹೋಗ್ಬೇಕು? ನೀನು ಹೋದ್ರೆ ಮಾವಿನ್ಕಾಯಿ ಬರಲ್ಲಾ ಅಂತದಾ?" ಎಂದು ಅವನಿಗೇ ತಿರುಗಿಸಿದ. ಸಂತೋಷ ಅಷ್ಟರಲ್ಲೇ ಜಾಗರೂಕನಾಗಿ "ಹೋಗ್ಲಿ ಬಿಡು ಸಿದ್ದು ತರ್ತಾನೆ" ಎಂದು ನನ್ನ ಮೇಲೆ ಹಾಕಿಬಿಟ್ಟ. ನನಗೆ ಒಮ್ಮೆಲೇ ಕೈ ಕಾಲು ನಡುಗಲು ಶುರುವಾಯಿತು. ನಾನು ಹೋಗಲ್ಲಪ್ಪಾ ಎಂದೆ. ಯಾಕೆ ಎಂದು ಕೇಳಿದಾಗ ಉತ್ತರವೇ ಇಲ್ಲ. ಒಟ್ಟಿನಲ್ಲಿ ಅಂಗಡಿ ಹತ್ತುವುದು ಯಾರು ಎಂದು ನಿಶ್ಚಯಿಸುವುದರಲ್ಲಿ ಆಗಲೇ ಬೆಳಕಾಗಿತ್ತು. ವಾಕಿಂಗ್ ಮಾಡುವವರು ರೋಡನ್ನೇ ದಿಟ್ಟಿಸುತ್ತಾ ಸಿಟ್ಟುಮಾಡಿಕೊಂಡವರಂತೆ ಬೇಗನೆ ಹೆಜ್ಜೆಹಾಕುತ್ತಿದ್ದರು.

ಮಾರನೇ ದಿನ ಹೊರಡುವ ಮುಂಚೆಯೇ ಕಿರಣನೇ ಹತ್ತಿ ಮಾವಿನಕಾಯಿ ಕೊಯ್ಯುವುದು ಎಂದು ನಿಶ್ಚಯಿಸಿ ಆಗಿತ್ತು. ಬೆಳಿಗ್ಗೆ 5:30ಕ್ಕೇ ಆಪರೇಷನ್ ಸ್ಪಾಟ್ ತಲುಪಿದೆವು. ಸಂತೋಷ ಕೆಳಗೇ ನಿಂತು ಒಂದು ಪ್ಲಾಸ್ಟಿಕ್ ಲಕೋಟೆ ಹಿಡಿದುಕೊಂಡಿದ್ದ. ಕಿತ್ತು ಎಸೆದ ಮಾವಿನಕಾಯಿಗಳನ್ನೆಲ್ಲಾ ಆರಿಸುವುದು ಅವನ ಕೆಲಸ. ನಾನು ಆ ಮನೆಯ ಕಂಪೌಂಡ್ ಹತ್ತಿ ನಿಂತಿದ್ದೆ. ಪಕ್ಕದಲ್ಲಿನ ಹೇರ್ ಕಟಿಂಗ್ ಸಲೂನ್ ಹಂಚನ್ನು ಹತ್ತಲು ಇಳಿಯಲು ಕಿರಣನಿಗೆ ಸಹಾಯ ಮಾಡಲು. ಕಿರಣ ಅಂತೂ ಸಾಹಸ ಮಾಡಿ ಹಂಚನ್ನು ಏರಿ ಕುಳಿತಿದ್ದ. ಮರ ತಲುಪಲು ಸ್ವಲ್ಪ ಮೇಲಕ್ಕೆ ಹೋಗಬೇಕಿತ್ತು. ಅವನು ಹೆಜ್ಜೆಯಿಟ್ಟಾಗಲೆಲ್ಲಾ ಹಂಚಿನ ಸದ್ದಾಗಿ ನನಗೆ ಭಯವಾಗುತ್ತಿತ್ತು. ಸಂತೋಷ ಕೆಳಗಿನಿಂದಲೇ ಮೆಲ್ಲಗೆ ಹೋಗೋ ಎನ್ನುತ್ತಿದ್ದ. ಯಾವುದೋ ಬ್ಯಾಂಕ್ ದರೋಡೆ ಮಾಡುತ್ತಿರುವವರಂತೆ ಮೂರರದೂ ಗಂಭೀರ ಮುಖಭಾವ. ಇನ್ನೇನು ಕಿರಣ ಮಾವಿನ ಮರ ಮುಟ್ಟಿ ಮಿಡಿಗಳನ್ನು ಕೀಳಲು ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ ಹಂಚಿನ ಮೇಲೆ ಮಲಗಿದ್ದ ಓತಿಕ್ಯಾತವೊಂದು ಅವನು ಕಾಲಿಟ್ಟ ರಭಸಕ್ಕೆ ಎಚ್ಚರಗೊಂಡು ಅವನ ಕಾಲಮೇಲೆಯೇ ದಾಟಿ ಓಡಿಹೋಯಿತು. ಮೊದಲೇ ಹೆದರಿದ್ದ ಕಿರಣ ಕಾಲಹತ್ತಿರವೂ ನೋಡದೆ "ಆಯ್ಯೋ... ಹಾವು... ಹಾವು..." ಎಂದು ಚೀರಿ ಹಂಚಿನಿಂದ ಒಮ್ಮೆಲೇ ಕೆಳಗೆ ಜಿಗಿದೇಬಿಟ್ಟ. ಅವನು ಚೀರಿದ ರಭಸಕ್ಕೆ ಮನೆಯಲ್ಲಿನ ನಾಯಿ ಬೊಗಳತೊಡಗಿತು. ಓಡಿ ಜಿಗಿಯುವ ಭರಾಟಿಯಲ್ಲಿ ಒಂದೆರಡು ಹಂಚುಗಳೂ ಮುರಿದುಹೋದವು. ಮೊದಲೇ ಹೆದರಿದ್ದ ನಮ್ಮಿಬ್ಬರಿಗೆ ಏನಾಯಿತು ಎಂದೇ ತಿಳಿಯಲಿಲ್ಲ. ಒಂದೇ ನೆಗೆತಕ್ಕೆ ಸೈಕಲ್ ಏರಿ ಎರಡು ಕಿಲೋಮೀಟರ್ ದೂರ ಬಂದುಬಿಟ್ಟಿದ್ದೆವು. ಹಿಂದೆ ತಿರುಗಿ ನೋಡಿದರೆ ಕಿರಣ ಸೈಕಲನ್ನು ಹತ್ತಲೂ ಪುರುಸೊತ್ತಿಲ್ಲದೆ ತಳ್ಳಿಕೊಂಡೇ ಓಡಿಬರುತ್ತಿದ್ದ.

Thursday, March 6, 2008

ನಾನಿರುವುದೆ ನಿಮಗಾಗಿ...



ನಾನಿರುವುದೆ ನಿಮಗಾಗಿ
ನಾಡಿರುವುದೆ ನಮಗಾಗಿ

ಅಣ್ಣಾವ್ರ ದನಿಯಲ್ಲಿ ಹಾಡು ಕೇಳುತ್ತಿದ್ದರೆ ಮಯೂರನಾಗಿ ರೂಪವೆತ್ತ ಅಣ್ಣಾವ್ರು ಕಣ್ಣ ಎದುರಿಗೇ ಬಂದುಬಿಡುತ್ತಿದ್ದರು. ಆದರೆ ಈಗ ಆ ಜಾಗವನ್ನು ಬೇರೆಯೊಬ್ಬ ಆಕ್ರಮಿಸಿಕೊಂಡುಬಿಟ್ಟಿದ್ದಾನೆ! ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಹಾಡು ಕೇಳಿದಾಕ್ಷಣ ಒಬ್ಬ ಕರ್ರಗಿನ ದಪ್ಪ ಮೀಸೆಯ ಧಡೂತಿ ವ್ಯಕ್ತಿ ಆಟೋ ಓಡಿಸುತ್ತಾ ಮನೆಯ ಎದುರಿಗೆ ನಿಂತಿರುತ್ತಾನೆ! ಇದ್ಯಾಕಪ್ಪಾ ಹೀಗಾಗೋಯ್ತು? ಅಣ್ಣಾವ್ರು ಬಂದ್ರು ಅಂತ ಹೊರಗೆ ಬಂದ್ರೆ ಇದು ಯಾರೋ ಬೇರೆ ಎಂದುಕೊಳ್ಳುವಷ್ಟರಲ್ಲಿ ನೆನಪಾಗುತ್ತದೆ. ಈತ ನಮ್ಮ ಮಹಾನಗರ ಪಾಲಿಕೆಯವರು ಕಸ ವಿಲೇವಾರಿ ಮಾಡುವುದಕ್ಕೋಸ್ಕರ ನೇಮಿಸಿರುವ ಆಸಾಮಿ. ಆತನಿಗೊಂದು ಆಟೋ ಕೊಟ್ಟುಬಿಟ್ಟಿದ್ದಾರೆ. ಅವನ ಸೌಭಾಗ್ಯವೋ ಅಥವಾ ಅಣ್ಣಾವ್ರ ದುರ್ಭಾಗ್ಯವೋ ಆ ಆಟೊಕ್ಕೊಂದು ಸ್ಪೀಕರ್ ಬೇರೆ ಜೋತುಹಾಕಿಬಿಟ್ಟಿದ್ದಾರೆ. ಅದು ದಿನಬೆಳಗಾದರೆ ಹಾಡುವುದು ಒಂದೇ ಹಾಡು. ’ನಾನಿರುವುದು ನಿಮಗಾಗಿ’.

ಒಳ್ಳೇ ಹಾಡು ಎನ್ನುವುದೇನೋ ನಿಜ. ಆದರೆ ಅದನ್ನೇ ಈ ಕಸವಿಲೇವಾರಿಗೆ ಉಪಿಯೋಗಿಸಿಕೊಳ್ಳುವ ಬದಲು ಸ್ವಲ್ಪ ರೀಮಿಕ್ಸ್ ಮಾಡಿದರೆ ಹೇಗೆ ಎಂದು ಯೋಚಿಸತೊಡಗಿದೆ. ಕಸದ ಗುಂಗಿನಲ್ಲಿ ಬರೆದ ಗಬ್ಬು ಗಬ್ಬಾದ ರೀಮಿಕ್ಸ್. ದಿನನಿತ್ಯವೂ ನಮ್ಮಂಥವರು ಕುಳಿತು ಒಟ್ಟುಹಾಕಿರುವ ಕೇಜಿಗಟ್ಟಲೆ ಕಸವನ್ನು ಬೇಸರಿಸಿಕೊಳ್ಳದೆ ದೂರ ಸಾಗಿಸಿ ನಗರವನ್ನು ಶುಚಿಯಾಗಿಡಲು ಪ್ರಯತ್ನಪಡುತ್ತಿರುವ ಪಾಲಿಕೆಯ ನೌಕರರಿಗೇ ಇದನ್ನು ಅರ್ಪಿಸಿದರೆ ಚೆನ್ನ.


ನಾನಿರುವುದೆ ನಿಮಗಾಗಿ
ಕಸವಿರುವಿದೆ ನನಗಾಗಿ
ಪ್ಲಾಸ್ಟಿಕ್ ಇರಲಿ, ಪೇಪರ್ ಇರಲಿ
ಹರಿದಾಯಕ್ಕಡವೇ ಇರಲಿ
ನಾನಿರುವುದು ನಿಮಗಾಗಿ

ಒಂದೇ ಮನೆಯ ಕಸಗಳು ಹಲವು ಹೊರಗೇ ಎಸೆದರೆ ದುರ್ನಾಥ
ಎಸೆಯುವ ಬದಲು ನನಗೇ ಕೊಡಲು ಮಾಡಿದೆ ಸರ್ಕಾರ ಕಾಯಿದೆಯ
ಭರವಸೆ ನೀಡುವೆ ಇಂದು ನಾ ಬರುವೆನು ಪ್ರತಿದಿನವೆಂದು
ತಾಯಿಯ ಆಣೆ ಕಸವನು ಪಡೆಯದೆ ನಾ ಹಿಂದಿರುಗೆನು ಎಂದು

ಸಾವಿರ ಜನುಮದ ಪುಣ್ಯವೊ ಏನೊ ನಾನೀ ಕೆಲಸಕೆ ಸೇರಿರುವೆ
ದೇವರ ದಯವೋ ಪಾಲಿಕೆ ವರವೋ ನಲ್ಮೆಯ ಆಟೋ ಪಡೆದಿರುವೆ
ಕಸವನು ಬಡಿದೋಡಿಸುವ ಈ ನಾಡನು ಶುಚಿಯಾಗಿಡುವ
ಜನತೆಗೆ ನೆಮ್ಮದಿ ಸುಖವನು ತರಲು ಹೇಸಿಗೆಯನೆ ಹೊರುವೆ