Friday, December 26, 2008

ಅಹಂ ಗೃಹಸ್ಥೋಸ್ಮಿ...!!!


ಅಬ್ಬಾ....... ಅಂತೂ ಮುಗೀತು ನೋಡ್ರೀ. ಜೀವನದ ಎನೋ ಒಂದು ಮಹಾನ್ ತಿರುವು ಆಗ್ಲೇ ತಗೊಂಡ್ ಆಗೇ ಹೋಯ್ತು. ಅಕಸ್ಮಾತ್ ಆ ಟೈಮ್‌ಗೆ ನನ್ನ ಪರಿಸ್ಥಿತಿ ನೋಡ್ಲಿಕ್ಕೆ ನಿಮ್ಮನ್ನ ಕರೀಲಿಲ್ಲಾ ಅಂದ್ರೆ ಖಂಡಿತ ಬೇಜಾರ್ ಮಾಡ್ಕೋಬೇಡಿ. ಇದು ನನ್ನ ತಪ್ಪಂತೂ ಅಲ್ಲ. ಎಲ್ಲಾ ಸಮಯದ ಅಭಾವ. ದಯವಿಟ್ಟು ಕ್ಷಮಿಸಿಬಿಡಿ. ಕುರಿ ಹಳ್ಳಕ್ಕೆ ಬಿದ್ದಾಗ ಅಕ್ಕಿ ಕಾಳು ಒಗ್ಯೋ ಭಾಗ್ಯ ನಿಮಗೆ ಇಲ್ಲದಾಯ್ತಲ್ಲಾ ಅಂತ ನನಗೂ ದುಃಖ ಇದೆ. ಅದೇ ನೀವು ಅಕ್ಕಿ ಕಾಳು ಒಗದು ಹೋಗಿದೀರಾ ಅಂದ್ರೆ ಪರವಾಗಿಲ್ಲ. ಪುಗ್ಸಟ್ಟೆ ಮಜಾ ಮಾಡಿದೀರಾ... ಇರಲಿ.

ಅಂತೂ ಎಲ್ಲಾ ಸೇರಿ ನನ್ನನ್ನ ಗೃಹಸ್ಥನನ್ನಾಗಿ ಮಾಡೇ ಬಿಟ್ರು. ಮಜಾ ಅನ್ಸತ್ತೆ ಅಲ್ವಾ... ಗೃಹಸ್ಠ ಅಂದ್ಕೊಳ್ಳಕ್ಕೆ. ಆ ರೀತಿಲಿ ನೋಡಿದ್ರೆ ಬ್ರಹ್ಮಚಾರಿ ಅಂದ್ಕೊಂಡ್ರೂ ಮಜಾನೆ ಅನ್ಸತ್ತೆ. ಆ ಪ್ರಶ್ನೆ ಬೇರೆ. ಆದರೂ ಇದುವರೆಗೆ ಒಬ್ಬರೇ ಹೇಗೆ ಬೇಕೋ ಹಾಗೆ, ಉಂಡಾಡಿ ಗುಂಡರ ಥರ ಓಡಾಡ್ಕೊಂಡ್ ಇದ್ವಿ. ಈಗ ಒಮ್ಮೆಲೇ, ನೋಡಪ್ಪಾ ನಿನಗೆ ಬಹಳ ಜವಾಬ್ದಾರಿ ಬಂದ್ ಬಿಟ್ಟಿದೆ. ಇವ್ಳು ನಿನ್ನೇ ನಂಬ್ಕೊಂಡ್ ಬರ್ತಾ ಇದಾಳೆ. ಚೆನ್ನಾಗಿ ನೋಡ್ಕೊ ಅಂತೆಲ್ಲಾ ಹೇಳಿದ್ರೆ ಇದು ನಂದೇ ಜೀವನಾನಾ ಅಥವಾ ಯಾವದೋ ಫಿಲ್ಮಾ ಅಂತ ಅನ್ಸಕ್ಕೆ ಶುರು ಆಗ್ಬಿಡತ್ತೆ. ಆ ಜವಾಬ್ದಾರಿ ತಿಳ್ಕೊಳೋಕೆ ಬಹಳ ದಿನಾನೇ ಬೇಕಾಗ್ಬಹುದೇನೊ. ಒಟ್ನಲ್ಲಿ ನನಗೆ ಜವಾಬ್ದಾರಿ ಬಂದಿದೆ ಅಂತ ಉಳದವ್ರೆಲ್ಲರೂ ಅಂತೂ ತಿಳ್ಕೊಂಡಿದಾರೆ. ಹಾಗೇ ತಿಳ್ಕೊಂಡಿರ್ಲಿ ಬಿಡಿ. ಒಬ್ಬನ ಮದ್ವೆ ಆದ್ರೆ ಅವನ ಪರಿಸ್ಥಿತಿ ಏನ್ ಆಗ್ಬಿಡತ್ತೆ ಅನ್ನೋದಕ್ಕೆ ನಾನೇ ಸಾಕ್ಷಿ ನೋಡಿ. ವಾರಕ್ಕೆ ಒಂದೊಂದು ಬ್ಲಾಗ್ ಬರೀತಿದ್ದ ನನಗೆ ಮೂರು ತಿಂಗ್ಳಿಂದ ಬರೆಯೋದು ಹೋಗ್ಲಿ, ಯೋಚ್ಸಕ್ಕೂ ಪುರುಸೊತ್ತಿಲ್ಲ! ಹಾಂ.. ಹಾಂ... ಹಾಂ.... ಒಂದು ನಿಮಿಷ. ಅಂದಹಾಗೆ ನಾನು ಇಲ್ಲಿ ನನ್ ಎಕ್ಸ್‌ಪೀರಿಯನ್ಸ್ ಬರೀತಿಲ್ಲ. ಮದ್ವೆಗಿಂತ ಮೊದ್ಲು ಮತ್ತೆ ಮದ್ವೆಗಿಂತ ನಂತರ ನನ್ನಲ್ಲಿ ಏನಾದ್ರು ಬದಲಾವಣೆ ಆಗಿದ್ಯಾ ಅಂತ ನೋಡ್ಕೊಳ್ತಾ ಇದೀನಿ ಅಷ್ಟೆ.

ಮದ್ವೆಗಿಂತ ಮುಂಚೆ ಬೆಳಿಗ್ಗೆ ಬೇಕಾದಷ್ಟು ಹೊತ್ತಿಗೆ ಏಳ್ತಾ ಇದ್ದೆ. ಈಗ ಅಲಾರಾಮ್ ಬಂದ್ ಮಾಡಿದ್ರೂ ಇವಳು ಮಲ್ಗಕ್ಕೆ ಬಿಡಲ್ಲ. ಎಬ್ಸಿ ಸ್ನಾನಕ್ಕೆ ಓಡಿಸ್ಬಿಡ್ತಾಳೆ. ತಿಂಡಿ ಆಫೀಸ್‌ಗೆ ಬಂದು ಅರಾಮಾಗಿ ತಿಂತಿದ್ದೆ. ಈಗ ತಿಂಡಿ ಮನೇಲೇ ತಿಂದು ಬರೋದ್ರಿಂದ ಹದಿನೈದು ನಿಮಿಷ ಹೆಚ್ಚು ಕೆಲಸಾ ಮಾಡ್ಬೇಕಾಗಿದೆ. ಆಫೀಸಿಂದ ಮನೆಗೆ ಹೋದಕೂಡ್ಲೆ ನನ್ನನ್ನ ಬರ್ಮಾಡ್ಕೊಳೋಕೆ ಒಂದು ಜೀವ ಕಾದಿರತ್ತೆ. ರಾತ್ರಿ ಹೋಟೆಲ್‌ಗೆ ಹೋಗಿ ಸಿಕ್ಕಿದ್ದು, ಅಪ್ರೂಪಕ್ಕೆ ಬೇಕಾದ್ದು, ತಿಂದು ಬಂದು ಮಲಗ್ತಿದ್ದೆ. ಈಗ ನನಗೇನು ಬೇಕೋ ಅದೇ ಸಿಗತ್ತೆ. ಬಟ್ಟೆ ಒಗೆಯೋ ಕೆಲ್ಸಾ ಇಲ್ಲ. ಇಸ್ತ್ರಿ ಮಾಡೋ ಕೆಲ್ಸ ಇಲ್ಲ. ಆದ್ರೆ ಕಿರಾಣಿ ಸಾಮಾನು, ವೀಕೆಂಡು ಶಾಪಿಂಗು ಎಲ್ಲಾ ಶುರು ಆಗಿದೆ. ಒಟ್ನಲ್ಲಿ ಒಂದು ಹೋಗಿದೆ... ಒಂದು ಬಂದಿದೆ... ಇಷ್ಟೇನಾ?

ಇಷ್ಟೇ ಆಗಿದ್ರೆ ಅದೇನೂ ದೊಡ್ಡ ವಿಷಯ ಅಲ್ಲ ಬಿಡಿ. ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಅಷ್ಟೆ. ಆದ್ರೆ, ಮದ್ವೆ ಆದ... ಆಮೇಲೆ ಅವನ ಜೀವ್ನಾನೇ ಬದ್ಲಾಗೋಯ್ತು ನೋಡು ಅಂತಾರಲ್ಲಾ... ಅದು ಹೇಗೆ ಅಂತ. ನನಗೆ ಅನ್ಸಿದ್ ಪ್ರಕಾರ ಅವನ ಜೀವನಾ ಏನೂ ಬದ್ಲಾಗಿಲ್ಲ. ಆದರೆ ಅವ ತನ್ನ ಜೀವನವನ್ನ ನೋಡೋ ದೃಷ್ಟಿ ಬದಲಾಯಿಸ್ಕೊಂಡ ಅಷ್ಟೆ. ಅವ ಸ್ವತಃ ತನ್ನ ಜೀವನಾನ ಬೇರೇ ರೀತೀಲಿ ನೊಡ್ತಾ ಇರೋದ್ರಿಂದ ಬೇರೆಯವ್ರಿಗೂ ಹಾಗೇ ಕಾಣ್ತಾ ಇದೆ. ಈಗ ಜೀವನದ ಬಹಳಷ್ಟು ಘಟ್ಟಗಳನ್ನ ಅರ್ಥ ಮಾಡ್ಕೊಳೋ ಪ್ರಯತ್ನಾ ಮಾಡ್ತಿದಾನೆ. ಬರೀ ತಿನ್ನೋದು ಉಣ್ಣೋದು ಮಲ್ಗೋದು ಅಂದ್ಕೊಂಡ್ ಬಂದಿದ್ದ ಜೀವನ ಈಗ ಬೇರೆ ಬೇರೆ ಅರ್ಥ ಕೊಡ್ತಾ ಇದೆ. ಕುಟುಂಬ ಬಂಧು ಬಳಗ ಅನ್ನೋದರ ಬಗ್ಗೆ ತಲೇನೇ ಕೆಡಿಸ್ಕೊಳ್ಳದೇ ಇರೋನಿಗೆ ಈಗ ಸ್ವಲ್ಪ ಸ್ವಲ್ಪ ಅವೆಲ್ಲ ಅರ್ಥ ಆಗಕ್ಕೆ ಶುರು ಆಗ್ತಾ ಇದೆ. ಒಟ್ನಲ್ಲಿ ಒಂಥರಾ ಬೇರೆ ಪ್ರಪಂಚ ಅವನ ಮುಂದೆ ತೆರೆದ್ಕೊಳ್ತಾ ಇರೋ ಹಾಗೆ ಅವನಿಗೆ ಅನ್ನಿಸ್ತಾ ಇದೆ. ಇವೆಲ್ಲಾ ಚೆನ್ನಾಗಿದ್ಯೋ ಇಲ್ವೋ ಅವರವರ ಭಾವನೆಗಳಿಗೆ ಬಿಟ್ಟಿದ್ದು.


ಎಲ್ಲದಕ್ಕಿಂತ ಮುಖ್ಯವಾಗಿ ಏನಪ್ಪಾ ಅಂದ್ರೆ, ಬದುಕಿನ ಹೋರಾಟದಲ್ಲಿ ಈಗ ಅವ ಒಂಟಿ ಅಲ್ಲ. ಪ್ರತಿಯೊಂದು ಹೆಜ್ಜೆಯನ್ನೂ ಜಂಟಿಯಾಗೇ ಇಡಬೇಕು. ಒಂದು ಹೆಜ್ಜೆ ಸೋತರೆ ಇನ್ನೊಂದು ಅದಕ್ಕೆ ಆಸರೆಯಾಗಿ ನಿಲ್ಲತ್ತೆ. ಒಂದಕ್ಕೆ ನೋವಾದರೆ ಇನ್ನೊಂದು ಸಂಕಟ ಪಡತ್ತೆ. ಸಮಾಧಾನ ಹೇಳತ್ತೆ. ಖುಷಿಯಾದಾಗ ಅದನ್ನ ಇನ್ನೊಂದರೊಟ್ಟಿಗೆ ಹಂಚಿಕೊಂಡು ಖುಷಿಯನ್ನ ಎರಡುಪಟ್ಟು ಮಾಡ್ಕೊಳತ್ತೆ. "ಧನ್ಯೋ ಗೃಹಸ್ಥಾಶ್ರಮಃ" ಅಂತ ತೀಟೆಗ್ ಹೀಳಿದಾರಾ ದೊಡ್ಡೋರು? ಅವ್ರೂ ಬದುಕಿನ ಈ ಎಲ್ಲಾ ಘಟ್ಟಗಳನ್ನ ದಾಟಿ ತಮ್ಮ ಅನುಭವದಿಂದ ಹೇಳಿರೋ ಮಾತು ಅದು. ಅದ್ಕೇ ನಿಮಗೆ ಮದ್ವೆ ಆಗಿಲ್ಲಾ ಅಂದ್ರೆ ಕೋಡ್ಲೇ ಹೋಗಿ ಮದ್ವೆ ಆಗಿ. ಮದ್ವೆ ಆಗಿರೋರಿಗ್ ಅಷ್ಟೇ ಈ ಲೇಖನ ಮತ್ತೆ ಅದರ ಒಳ ಅರ್ಥ ಎಲ್ಲಾ ಗೊತ್ತಾಗತ್ತೆ.

ಅಯ್ಯೋ ಆಗ್ಲೇ ಏಳು ಘಂಟೆ ಆಗ್‌ಬಿಟ್ಟಿದೆ! ಇವತ್ತು ಮನೆಗೆ ಹೋದ್ ಕೂಡ್ಲೆ ಆರತಿ ಎತ್ತಿಸ್ಕೊಂಡೇ ಒಳಗೆ ಹೋಗೋದು. ನನಗೆ ಆರತಿ ಎತ್ತಿಸ್ಕೊಳ್ಳಕ್ಕೆ ಮನ್ಸಿರಲ್ಲಾ. ಆದ್ರೆ ಏನ್ ಮಾಡೋದು... ಅಷ್ಟು ಪ್ರೀತಿ ತುಂಬ್ಕೊಂಡಿದ್ರೆ ಯಾರ್ ಬೇಡ ಅಂತಾರೆ ಹೇಳಿ!

6 comments:

C.A.Gundapi said...

Sidda .. Ninu Maduve aagade irorige Dari madikotto athava dairya kaledo gothagtha illa .. :) Well written ..

ದೀಪಕ said...

ನಮಸ್ಕಾರ /\:)

ಲಾಯಕ್ಕಿತ್ತು ಮಾರಾಯ ನಿನ್ನ ಲೇಖನ.

ನಿನ್ನ ಗೃಹಸ್ಥಾಶ್ರಮದ ಜೀವನವನ್ನು ವಿಡ೦ಬನಾತ್ಮಕ ಶೈಲಿಯಲ್ಲಿ ನಮ್ಮ ಮು೦ದೆ ಬಿಚ್ಚಿಟ್ಟಿದ್ದೀಯ.

ಶುಭವಾಗಲಿ.

ಇ೦ತಿ,

ದೀಪಕ

Karna Natikar said...

super article sidda...maduve aagde irorige maduve aagbeku anno bhavane matte aadorige flashback thara ittu ninna lekhana.

ವಿಜಯ್ ಶೀಲವಂತರ said...

Lekhana cholo aiti Siddhartha, cholo bardi. aadara adara ola artha nanga tilililla eno ansaakhattaiti. inna madvi aagri anta namagella huridumbisakhatti ankoteeni. :)
madvi aadmyale mattomme odi ola artha tilkollo prayatna maadteeni.
hinga tinglige ondaara lekhana ninna keyboard ninda bartirlapa...

ಸಿದ್ಧಾರ್ಥ said...

ಎಲ್ರಿಗೂ ತುಂಬಾ ಧನ್ಯವಾದಗಳು... ಹೀಗೇ ಬಂದು ಹೋಗ್ತಾ ಇರಿ.

Raju said...

sid,

eedu maduve aaguvavrigo athava aadavarigo.... nanage swalpa confuse... ottinalli eebarigu antha naanu assume maadkande...

Anyways Tumba chennagi MADUVE AADA HOSATHARALLI JEEVANA da bagge baradde...

All the best to your future articles.

ಮನದನಿ ಆಲಿಸಿದವರು