Wednesday, September 22, 2010

ಕೃಷಿಕನಾದ ಸಾಫ್ಟ್‌ವೇರ್ ಇಂಜಿನಿಯರ್...


ಅಲ್ಲಾ... ಮೂವತ್ತು ವರ್ಷದ ತರುಣರಿಗೇ ಈ ಬೆಂಗಳೂರು ಬೇಜಾರು ಬರುತ್ತಿರಬೇಕಾದರೆ, ನಮಗೆ ಅರವತ್ತು ವರ್ಷ ಆದಾಗ ನಾವು ಇಲ್ಲಿ ಬದುಕಲಿಕ್ಕಾದರೂ ಸಾಧ್ಯ ಇದೆಯೇ? ಈ ಪ್ರಶ್ನೆ ನನ್ನನ್ನು ಬಹಳಷ್ಟು ಸಾರಿ ಕಾಡಿದೆ. ಇನ್ನೂ ಕಾಡುತ್ತಲೇ ಇದೆ. ಬೇಗ ಮನೆಗೆ ಹೋಗಬೇಕು ಎಂದು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಿಂತಾಗ, ಶಾಪಿಂಗ್ ಮಾಡಿದುದಕ್ಕಿಂತ ಹಚ್ಚು ಸಮಯ ಬಿಲ್ ಕೊಡಲು ಕ್ಯೂ ನಿಂತಾಗ, ನಮ್ಮ ಮನೆಯೆದುರು ಯಾರೋ ಕಾರು ನಿಲ್ಲಿಸಿ ನಮ್ಮ ಕಾರ್ ನಿಲ್ಲಿಸಲು ಜಾಗ ಹುಡುಕಬೇಕಾದಾಗ, ಮನಸ್ಸು ಭಾರವಾಗಿ ಒಂದೆರಡು ತಾಸು ಶಾಂತ ವಾತಾವರಣ ಅರಸಿ ಹೊರಟಾಗ ಅಥವಾ ಕೊನೇ ಪಕ್ಷ ಸಂಜೆ ತಂಪಾದ ಶುದ್ಧ ಗಾಳಿಯಲ್ಲಿ ಒಂದು ರೌಂಡ್ ವಾಕಿಂಗ್ ಮಾಡಬೇಕು ಎಂದೆನಿಸಿದಾಗೆಲ್ಲ ಬೆಂಗಳೂರಿನ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಶಿರಸಿ ಮತ್ತಷ್ಟು ಕೈ ಬೀಸಿ ಕರೆಯುತ್ತದೆ. ಆದರೆ ಅಲ್ಲಿಗೆ ಹೋಗಿ ಮಾಡುವುದಾದರೂ ಏನು? ಇಲ್ಲಿ ಬರುವ ಸಂಬಳ ಬಿಟ್ಟು ಅಲ್ಲಿಗೆ ಹೋದರೆ ಯಾವ ಕೆಲಸ ಸಿಗುತ್ತದೆ? ಇದರ ಅರ್ಧದಷ್ಟು ಬಂದರೂ ಸಾಕೆಂದುಕೊಂಡರೂ ಅದೂ ಸಾಧ್ಯವಿಲ್ಲದ ಮಾತು. ಒಟ್ಟಿನಲ್ಲಿ ನಮ್ಮ ಹಣೆಯಲ್ಲಿ ಈ ಕೊಂಪೆಯಲ್ಲೇ ಬಿದ್ದು ಸಾಯಿರಿ ಎಂದು ಬರೆದಿದೆಯೇ?

ನನ್ನ ಅಜ್ಜ ಕೃಷಿಕನಾಗಿದ್ದನಂತೆ. ಜೊತೆಗೆ ವೈದ್ಯ ಕೂಡಾ. ಕುಮಟಾದಲ್ಲಿ ಮೂರ್ನಾಲ್ಕು ಎಕರೆ ಗದ್ದೆ, ತೋಟ ಎಲ್ಲಾ ಇತ್ತಂತೆ. ಅಲ್ಲಿ ಹೆಚ್ಚು ಜನ ಬರುವುದಿಲ್ಲ ಎಂದಂದುಕೊಂಡು ಶಿರಸಿಗೆ ಬಂದು ನೆಲೆಸಿದ್ದರಂತೆ. ಅದರ ವಹಿವಾಟನ್ನು ಯಾರಿಗೋ ಕೊಟ್ಟು, ’ಊಳುವವನೇ ಒಡೆಯ’ ಕಾಯಿದೆಯನ್ವಯ ಆ ಆಸಾಮಿ ಅದನ್ನು ನುಂಗಿಬಿಟ್ಟನಂತೆ! ನನ್ನ ತಂದೆಯೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಲಲಿಲ್ಲ. ನಾವು ಕೆಡಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ. ಒಟ್ಟಿನಲ್ಲಿ ಕೃಷಿಕರಾಗಿದ್ದ ಒಂದು ಕುಟುಂಬ ಈಗ ಸಂಬಳದ ಜೀವನ ಮಾಡತೊಡಗಿದೆ! ಇದನ್ನು ಯೋಚಿಸಿದಾಗಲೆಲ್ಲ ಮತ್ತೆ ಯಾಕೆ ನಾವು ಕೃಷಿಕರಾಗಬಾರದು ಎಂದೆನಿಸುತ್ತದೆ. ಈ ಗದ್ದಲದ ಯಾಂತ್ರಿಕ ಜೀವನಕ್ಕಿಂತ ಅಲ್ಲಿಯ ಪ್ರಶಾಂತ ಜೀವನ ಎಷ್ಟು ಸುಂದರ ಎನಿಸುತ್ತದೆ. ಯಾವ ಮ್ಯಾನೇಜರ್ ಇಲ್ಲ. ಯಾವ ಡೆಡ್‌ಲೈನ್ ಇಲ್ಲ. ದಿವಸಕ್ಕೆ ಒಂಭತ್ತು ಗಂಟೆ ದುಡಿಯಲೇ ಬೇಕು ಎನ್ನುವ ನಿಯಮವಿಲ್ಲ. ವರ್ಷಕ್ಕೆರಡು ಅಪ್ರೇಸಲ್‌ಗಳಿಲ್ಲ. ಅವುಗಳಲ್ಲಿ ನಮಗೆ ಏನೂ ಸಿಕ್ಕಿಲ್ಲ ಎನ್ನುವ ನೋವಿಲ್ಲ. ಸುತ್ತ ಮುತ್ತಲಿನ ನಿರ್ಜೀವ ಜನರಿಲ್ಲ. ಅವರ ಕೃತಕ ನಗುವಿಲ್ಲ. ಎಷ್ಟು ಸುಂದರ ಆ ಬದುಕು!

ಒಂದು ದಿನ ನಿರ್ಧರಿಸಿಬಿಟ್ಟೆ. ಏನೇ ಆಗಲಿ. ಹೋದರೆ ಪ್ರಾಣವಂತೂ ಹೋಗುವುದಿಲ್ಲ. ಸ್ವಲ್ಪ ದುಡ್ಡು ಹೋಗಬಹುದು. ಇದನ್ನು ಕಾರ್ಯರೂಪಕ್ಕೆ ತರಲೇಬೇಕೆಂದು. ಊರ ಹತ್ತಿರ ಒಂದು ಕೃಷಿಭೂಮಿಯನ್ನೂ ಕೊಂಡುಕೊಂಡೆ! ಮಾರನೇ ವರ್ಷವೇ ಅಲ್ಲಿ ಮಾವಿನ ಸಸಿಗಳನ್ನು ನೆಡಿಸಿದೆ. ಅಲ್ಲೇ ಒಂದು ಪುಟ್ಟ ಮನೆ ಕಟ್ಟಿಸಿದೆ. ಒಂದು ಚಿಕ್ಕ ಗೋಡೋನ್. ಮನೆಗೆ ಹೋಗಲು ಒಂದು ಚಿಕ್ಕ ಹಾದಿ. ಒಂದು ಕಾರ್ ಹೋಗುವಷ್ಟು. ಸುತ್ತಲೂ ಮಾವಿನ ಸಸಿಗಳು. ಮಧ್ಯದಲ್ಲಿ ಎತ್ತರದಲ್ಲಿ ಮನೆ. ಮನೆಯ ಮೇಲೊಂದು ಸುಂದರ ಬಾಲ್ಕನಿ. ಅಲ್ಲಿ ಆರಾಮು ಖುರ್ಚಿ ಹಾಕಿ ಕುಳಿತುಕೊಂಡರೆ ಸುತ್ತಲೂ ನಾನೇ ನೆಡಿಸಿದ ಮಾವಿನ ಗಿಡಗಳು! ಯಾರ ಗದ್ದಲವಿಲ್ಲ. ಯಾರ ತಂಟೆಯಿಲ್ಲ.

ಸಸಿಗಳು ಗಡವಾಗಿವೆ. ಮರವಾಗುತ್ತಿವೆ. ಐದೇ ಐದು ವರ್ಷಗಳಲ್ಲಿ ಫಲ ನೀಡುತ್ತಿವೆ. ಇದುವರೆಗೆ ನಾನು ತೋರಿದ ಪ್ರೀತಿಗೆ ಪ್ರತ್ಯುತ್ತರವಾಗಿ ಸಿಹಿ ಹಣ್ಣುಗಳನ್ನು ಸಾಕು ಸಾಕೆನಿಸುವಷ್ಟು ಕೊಡುತ್ತಿವೆ. ಇನ್ಯಾವ ಕೆಲಸ ಬೇಕು ನನಗೆ. ಈ ಗಿಡಗಳ ಜೊತೆಗೆ ಇಲ್ಲೇ ಇದ್ದುಬಿಡಬೇಕು ಎಂದೆನಿಸುತ್ತಿದೆ. ಗಿಡಗಳು ಚಲಿಸದೇ ಇದ್ದರೇನಾಯಿತು? ಮನದಲ್ಲಿ ಸಂಚಲನವನ್ನೇ ಉಂಟುಮಾಡುತ್ತಿವೆ. ಪ್ರೀತಿಸಲು ಮನುಷ್ಯರೇ ಆಗಬೇಕೆ? ನಿಸ್ವಾರ್ಥ ಪ್ರೀತಿಗೆ ಈ ಮರಗಳೇ ನಿದರ್ಶನ! ನನಗೂ ವಯಸ್ಸಾಗುತ್ತಾ ಬಂದಿದೆ. ಎಷ್ಟು ಎಂದು ದುಡಿಯುವುದು? ಇನ್ನು ನಾವಾಯಿತು ನಮ್ಮ ಶಾಂತ ಸುಂದರ ಪರಿಸರವಾಯಿತು ಎಂದುಕೊಂಡು ಬೆಂಗಳೂರು ಬಿಟ್ಟು ಶಿರಸಿಗೆ ಹೋಗಿ ನೆಲೆಸಿಬಿಡುವ ನಿರ್ಧಾರ ತೆಗೆದುಕೊಂಡು ಹೊರಡುವ ದಿನಾಂಕ ನಿರ್ಧರಿಸಿ ಆಯಿತು. ಶಿರಸಿಯಲ್ಲಿ ಇದು ಸುದ್ದಿಯಾಗಿ ಅಲ್ಲಿಯ ದಿನಪತ್ರಿಕೆಯೊಂದರಲ್ಲಿ ಚಿತ್ರದ ಸಹಿತ ಒಂದು ಲೇಖನ ನಮ್ಮ ಬಗ್ಗೆಯೇ ಬಂದಿದೆ! ಮನೆಯಿಂದ ಫೋನ್ ಮಾಡಿ ಹೇಳಿದ್ದಾರೆ. ಇಂಟರ್ನೆಟ್ ಅಲ್ಲಿ ಆ ಪೇಪರ್ ನೋಡುತ್ತಿದ್ದೇನೆ. ಹೌದು ನಮ್ಮದೇ ಸುದ್ದಿ! "ಕೃಷಿಕನಾದ ಸಾಫ್ಟ್‌ವೇರ್ ಇಂಜಿನಿಯರ್"!!!

"ಏಳ್ರೀ... ಎಷ್ಟು ಹೊತ್ತು ಮಲಗ್ತ್ರಿ? ಆಗ್ಲೇ ಪೇಪರ್ ಹಾಕಿಕ್ ಹೋದಾ... ಇವತ್ತು ಆಫೀಸಿಗ್ ಹೋಗ್ತ್ರಿಲ್ಯಾ???" ಹೆಂಡತಿ ಎಬ್ಬಿಸಿದಾಗಲೇ ನನಗೆ ಎಚ್ಚರವಾಗಿದ್ದು. ಥತ್... ಇಷ್ಟು ಹೊತ್ತು ಬಿದ್ದಿದ್ದು ಕನಸಾ? ಛೇ... ಎಂದುಕೊಂಡು ಬಚ್ಚಲಿನ ಕಡೆಗೆ ಹೊರಟೆ. ಹಲ್ಲು ತಿಕ್ಕುತ್ತಾ ಯೋಚಿಸಿದೆ. ಏನೇ ಆದರೂ ಬಿದ್ದ ಕನಸಂತೂ ಸುಂದರವಾಗಿತ್ತು ಎಂದು.

ಮತ್ತೆ ಗೊಂದಲ ಶುರುವಾಯಿತು. ಇದು ನನಗೆ ಬಿದ್ದ ಕನಸಾ ಅಥವಾ ನನ್ನ ಕನಸಾ !