Monday, December 26, 2011

ಯಾವನಿಗ್ ಗೊತ್ತು...


ನಮ್ಮ ಮಾಜಿ ಮುಖ್ಯಮಂತ್ರಿಗಳನ್ನ ಟಿವಿಲಿ ನೋಡದಾಗಲೆಲ್ಲ ನನಗೆ ಅಯ್ಯೋ ಅನ್ಸತ್ತೆ. ಯಾಕೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ಮನುಷ್ಯ, ಹೋರಾಟಗಾರನಾಗಿ, ರಾಜಕಾರಣಿಯಾಗಿ, ಮುಖ್ಯಮಂತ್ರಿಯಾಗಿ, ಮಾಡಬಾರದ್ದನ್ನೆಲ್ಲ ಮಾಡಿ, ಲೋಕಾಯುಕ್ತರ ಬಲೆಗೆ ಬಿದ್ದು, ಹೈ ಕಮಾಂಡ್‌ನಿಂದ ಬೈಸಿಕೊಂಡು, ಅಧಿಕಾರ ಬಿಟ್ಟು, ಜೈಲಿಗೂ ಹೋಗಿ, ಅಸ್ಪತ್ರೆಗೂ ತಿರುಗಿ, ಜಾಮೀನು ತೆಗೆದುಕೊಂಡು ಮತ್ತೆ ಅಧಿಕಾರ ಬೇಕು ಎಂದು ಹಂಬಲಿಸುತ್ತಿರುವುದನ್ನು ನೋಡಿದರೆ, ಒಬ್ಬ ಮನುಷ್ಯನ ಕಾಲಚಕ್ರ ಓಳ್ಳೆ ಸೈನ್ ವೇವ್ ಥರಾ ಆಗೋಯ್ತಲ್ಲಾ ಅಂತ ಪಾಪ ಅನ್ಸತ್ತೆ! ಮುಂದೇನಾಗ್ಬಹುದು ಅಂತೀರಿ? ಯಾವನಿಗ್ ಗೊತ್ತು ಅಲ್ವಾ? ಅವ್ರಿಗೂ ಗೊತ್ತಿಲ್ಲ. ಬಹುಷಃ ಅವ್ರು ಮನೆಲ್ ಕೂತು, ಟಿವಿ ನೋಡ್ತಾ, ಹೀಗ್ ಹಾಡ್ತಿರ್‌ಬಹುದು...

ಏನು ಮಾಡೋದು ಜುಜಬಿ ಕೇಸೊಂದು
ತಗ್ಲಾಕ್ಕೊಂಡ್ ಬಿಡ್ತು
ತಗ್ಲಾಕ್ಕೊಂಡ್ ಬಿಡ್ತು

ಮಂತ್ರಿ ಆಗ್ತೀನಾ ಚೊಂಬೇ ಗತಿನಾ
ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಖುರ್ಚಿಯ ಮೇಲೇ ಕುಂತಾಗ ಹಿಂದೆ ಮುಳ್ಳು ಒಂದು
ಚುಚ್‌ದಾಂಗ್ ಆಯ್ತು
ಮುಳ್ಳು ನನ್ನನ್ನೇ ಯಾಕೆ ಚುಚ್‌ಬಿಡ್ತೋ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮತ್ತೆ ಕೂರ್ತೀನಾ ನಿಂತೇ ಇರ್ತೀನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಅದು ಯಾವ್ದೋ ಒಂದು ಲ್ಯಾಂಡು ಪೇಪರ್‌ನಾ
ಕಣ್ ಮುಚ್ಕೊಂಡ್ ಮಾಡಿ ಬಿಟ್ಟೆ ಸೈನನ್ನಾ
ಎಣಿಸುತ್ತಾ ಕೂತೆ ಕೋಟಿ ಕೋಟಿ ನಾ
ಲೋಕಾಯುಕ್ತಾ ಮಾಡ್ತು ರೇಡನ್ನಾ
ಮತ್ತೇ ಮತ್ತೇ ಹೇಳ್ದೆ ನಾನ್ ನಿರ್ದೋಷಿ ಕಣ್ರೀ
ಆದ್ರೇ ಮೇಲಿನ್ ದಡ್ರು ನನ್ ನಂಬ್ಲಿಲ್ಲಾ ಕಣ್ರೀ
ನನ್ನನ್ನಾ ನೋಡಿ ಉರ್‌ಕೊಳ್ಳೋ ಜನರು
ಮಾಟ ಮಂತ್ರಾ ಮಾಡಿಸ್‌ಬಿಟ್ರು

ಇಂಥಾ ಟೈಮಲ್ಲಿ ಜಿದ್ದು ಬೇಕಿತ್ತಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂಜುನಾಥಾನೇ ಕೋಪಿಸ್ಕೊಂಡ್ ಬಿಟ್ಟಿದ್ನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಪರಪ್ಪನ್ ಅಗ್ರಹಾರ ಸರಿ ಇಲ್ಲಾ
ಎದೆ ನೋವು ಯಾಕೋ ಜಾಸ್ತಿ ಆಯ್ತಲ್ಲಾ
ಆಸ್ಪತ್ರೆಗೂ ಹೋಗಿ ಕುಂತ್ನಲ್ಲಾ
ನಾನೇನಂದ್ರು ಜಡ್ಜು ನಂಬ್ತಿಲ್ಲಾ
ಶೋಭಕ್ಕಂಗೆ ಹೇಳಿ ಪೂಜೇ ಮಾಡ್‌ಸ್ದೆ ಕಣ್ರೀ
ತುಂಬಾ ಒಳ್ಳೆ ರೆಸಲ್ಟ್ ಬಂದೇ ಬಿಡ್ತು ನೋಡ್ರಿ
ಜಡ್ಜು ನನ್ನನ್ನಾ ನೋಡಿದ ಕೂಡ್ಲೇ
ಜಾಮೀನು ಕೊಟ್ಟು ಕಳ್ಸೇ ಬಿಟ್ರು

ಮುಂದೆ ಬೆಂಗ್ಳೂರಾ ಇಲ್ಲಾ ದಿಲ್ಲಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂತ್ರಿ ಆಗ್ತೀನಾ ಚೊಂಬೇ ಗತಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

Thursday, May 19, 2011

ಕುಣಿದು ಕುಣಿದು ಬನ್ನಿ


ನಾನು ಮದುವೆ ಆಗಬೇಕಾದರೆ ಇವಳ ಮನೆಗೆ ಹೋಗಿದ್ದು. ಆಗ ಸಾಲ್ಕಣಿಗೆ ಹೋಗುವ ದಾರಿಯಿಂದ ಬಲಕ್ಕೆ ತಿರುಗಿ, ಅರ್ಧ ಕಿಲೋಮೀಟರ್ ಸ್ವಲ್ಪ ಡಾಂಬರ್ ಕಂಡಿರುವ ರಸ್ತೆ ಮತ್ತರ್ಧ ಮಣ್ಣುರಸ್ತೆಯಲ್ಲಿ ಹಕ್ರೆಮನೆಗೆ ಹೋಗಬೇಕಾಗಿತ್ತು. ಈ ಮಣ್ಣುರಸ್ತೆಯನ್ನು ಡಂಬರೀಕರಣ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ನಮ್ಮ ಮದುವೆ ಆಗಿ, ಮೂರು ವರ್ಷಗಳೇ ಕಳೆದು ನಮಗೆ ಪ್ರಮೋಷನ್ ಬೇರೇ ಸಿಕ್ಕು, ಇವಳ ಬಾಳಂತನಕ್ಕೆ ಊರಿಗೆ ಕಳಿಸಿಯೂ ಆಯಿತು. ಮಗರಾಯನ ಮುಖ ನೋಡಲು ಆಗಾಗ ಅಲ್ಲಿಗೆ ಹೋಗಬೇಕಾದುದರಿಂದ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಕಾಡುತ್ತಿದೆ! ಸುಮ್ಮನೇ ಮಣ್ಣುರಸ್ತೆಯನ್ನು ಹಾಗೆಯೇ ಬಿಟ್ಟುಬಿಟ್ಟಿದ್ದರೇ ಚೆನ್ನಾಗಿತ್ತೋ ಏನೋ. ಡಾಂಬರ್ ಹಾಕ್ತೀವಿ ಎಂದು ಹೇಳಿ ಊರಿನ ಜನರ ಕಿವಿಯಮೇಲೆ ದಾಸವಾಳವನ್ನು ಕೂರಿಸುವ ಕೆಲಸ ಮಾಡಿಬಿಟ್ಟಿದ್ದಾರೆ! ಈ ಡಾಂಬರ್ ಹಾಕುವ ಸಂಭ್ರಮ ಬಹುಷಃ ನಮ್ಮ ಜೀವಮಾನದಲ್ಲಿ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ.

ಕಲ್ಲು ತಂದು ಹಾಕಿ ಒಂದು ವಾರ ಮತ್ತೆ ತಲೆ ಹಾಕದೇ ಇರುವುದು. ಜನ ಕಷ್ಟಪಟ್ಟು ಸರ್ಕಸ್ ಮಾಡುತ್ತಾ ಓಡಾಡುವುದು. ಕಲ್ಲುಗಳಲ್ಲಿ ಅರ್ಧ ಗಟಾರಕ್ಕೆ ಸೇರಿ ಗಟಾರ ಯಾವುದು, ರಸ್ತೆ ಯಾವುದು ಎಂದು ಪತ್ತೆಯೇ ಆಗದಿರುವುದು. ಮತ್ತೆ ಇವರು ಬಂದು ಮತ್ತೆ ಕಲ್ಲು ಹಾಕಿ ಹೋಗುವುದು. ಇದೇ ಆಗಿಹೊಗಿದೆ! ಕಳೆದಸಲ ಅದರ ಮೇಲೆ ಒಂದಿಷ್ಟು ಮಣ್ಣನ್ನೂ ಸುರಿದು ಹೋಗಿಬಿಟ್ಟರು. ಊರಿಗೆ ಬಂದವರೆಲ್ಲಾ ಕೆಂಪು ಕೆಂಪು! ದಾರಿಯ ಪಕ್ಕದಲ್ಲಿರುವುದೆಲ್ಲಾ ಕೆಂಪು ಎಲೆಗಳ ಗಿಡಗಳು! ನಾನು ಮನೆಯಿಂದ ಕಾರು ತೆಗೆದುಕೊಂಡು ಅಲ್ಲಿಗೆ ಹೋದರೆ, ಮನೆಗೆ ಬರುವಾಗ ನನ್ನ ತಂದೆ ಒಂದು ಬಕೆಟ್ ನೀರು ಹಿಡಿದುಕೊಂಡು ಬಾಗಿಲಲ್ಲೇ ಕಾಯುತ್ತಿರುತ್ತಾರೆ!

ಒಂದು ರಸ್ತೆ ಡಾಂಬರೀಕರಣಕ್ಕೆ ನಮ್ಮ ಸರಕಾರಕ್ಕೆ ಎಷ್ಟು ಸಮಯ ಬೇಕು? ಒಂದು ವರ್ಷ? ಎರಡು ವರ್ಷ? ಮೂರು ವರ್ಷ? ಅಲ್ಲಾ ಸ್ವಾಮಿ ನೀವು ಐದು ವರ್ಷ ಬರೀ ಜಲ್ಲಿ ಕಲ್ಲು ಹಾಕಿಸಿ ಹೋದರೆ, ಮುಂದಿನ ಸರಕಾರ ಮತ್ತೆ ಇದನ್ನೇ ಮಾಡುವುದಿಲ್ಲವೆ? ಒಟ್ಟಿನಲ್ಲಿ ತಮ್ಮ ಖುರ್ಚಿ ಭದ್ರ ಮಾಡಿಕೊಳ್ಳುವುದೇ ಸರಕಾರದ ಸಾಧನೆಯಾಗುತ್ತಿರುವ ಈ ಕಾಲದಲ್ಲಿ ಎಲ್ಲಿ ಡಾಂಬರ್ ಹಾಕಬೇಕು ಎನ್ನುವುದೆಲ್ಲಾ ಯಾರಿಗೆ ಬೇಕಾಗಿದೆ? ಇಂಥಹದೇ ಸರಕಾರಗಳು ಮತ್ತೆ ಮತ್ತೆ ಬರುತ್ತಿದ್ದರೆ ಬಹುಷಃ ನನ್ನ ಮುಪ್ಪಿನಕಾಲದಲ್ಲಿ ನಾನು ನಕ್ಸಲೈಟ್ ಆದರೆ ಆಶ್ಚರ್ಯವಿಲ್ಲ.

ಈ ಹೊಂಡ ಹಾರುವಿಕೆಯಿಂದ ಬೇಸತ್ತು, ಈ ಬಾರಿ ಹೋಗುವಾಗ ಹಾಡುತ್ತಾ ಹೋಗಬೇಕು ಎಂದು ಒಂದು ರೀಮಿಕ್ಸ್ ರಚಿಸಿದ್ದೇನೆ. ಮುಂಗಾರು ಮಳೆಯ "ಕುಣಿದು ಕುಣಿದು ಬಾರೆ" ಇಂದ ಸ್ಫೂರ್ತಿಗೊಂಡು!


ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ

ಕುಣಿದು ಕುಣಿದು ಬನ್ನಿ
ಜಿಗಿದು ಜಿಗಿದು ಬನ್ನಿ
ಬರುವಾ ನಿಮ್ಮ ಜೊತೆಗೆ
ಅಮೃತಾಂಜನ್ ತನ್ನಿ
ರೋಡಲಿ ಹೊಂಡಾ ಕಂಡವರೇ
ಗಟಾರದಲ್ಲಿ ಇಳ್ಕೊಂಡ್ ಬನ್ನಿ
ರೋಡೇ ಮಾಯ
ನಮ್ಮೂರ್ ರೋಡೇ ಮಾಯ
ರೋಡಲಿ ಬೈಕು ಹೊಡೆಯಲು ಹೋಗಿ
ಮೈ ಕೈ ಗಾಯ

ಜಲ್ಲಿ ಕಲ್ಲು ಹಾಕಿ
ಮೇಲೆ ಮಣ್ಣು ಹಾಕಿ
ಡಾಂಬರ್‌ಗಾಗಿ ಕಾಯುತ ಕುಳಿತು
ಮಳೆಯಲಿ ಎಲ್ಲಾ ಕೊಚ್ಕೊಂಡ್ ಹೋಯ್ತು
ರೋಡೇ ಮಾಯ!

ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ

ಈ ಸಲ ಹಾಡಿಕೊಂಡು ಹೋಗುವಾಗ ದಾರಿ ಚಿಕ್ಕದಾಗುತ್ತದೋ ನೋಡಬೇಕು!

Friday, March 4, 2011

ಹೊಸಚೇತನ


ಭಾವನೆಗಳಿಗೆ ರೂಪ ಹೇಗೆ ನೀಡಲಿ
ಪದಗಳು ಅಡಗಿವೆ ಮರೆಯಲಿ
ಸಂತಸವ ಜನರೊಳು ಹೇಗೆ ಹಂಚಲಿ
ಮಿಂಚು ಹೊಮ್ಮಿದೆ ಮನದಲಿ

ಅರಿಯದ ಅನೇಕ ಭಾವ ಹೊಮ್ಮಿದೆ
ನಿನ್ನ ನಗೆಯ ಮಾಟದಿ
ಕಾಣದ ಲೋಕವ ಕಂಡು ಸುಖಿಸಿದೆ
ನಿನ್ನ ಕಂಗಳ ನೋಟದಿ

ಮುದ್ದು ಕೃಷ್ಣನೆ ಹಿಗ್ಗು ತಂದಿಹೆ
ನಮ್ಮ ಬಾಳನು ಬೆಳಗುತಾ
ಮೌನ ಗೀತೆಯ ಮನದಿ ತುಂಬಿದೆ
ನವ ಚೈತನ್ಯವ ಬೀರುತಾ

23-02-2011 ಬುಧವಾರ, ಮಾಘ ಬಹುಳ ಪಂಚಮಿಯಂದು ನನಗೆ ಅಪ್ಪನ ಸ್ಥಾನಕ್ಕೆ ಬಡ್ತಿ ಸಿಕ್ಕಿದೆ! ಕುಮಾರ ಕಂಠೀರವ ಧರೆಗೆ ಕಾಲಿಟ್ಟಿದ್ದಾನೆ.

Tuesday, February 8, 2011

ನಾವು ಕನ್ನdigaru - ೫

ನನಗೇ ಇಂಥವರು ಕಾಣುತ್ತಾರೋ ಅಥವಾ ನಾನೇ ಇಂಥವರನ್ನು ಹುಡುಕುತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ಘಟನೆಗಳು ಬೆಂಗಳೂರಿನಲ್ಲಂತೂ ಮಾಮೂಲು. ಹೊರಗಡೆ ಕನ್ನಡಿಗರು ಇಂಗ್ಲೀಷಿನಲ್ಲಿ ಮಾತನಾಡುವುದು ಸರ್ವೇ ಸಾಮಾನ್ಯವಾಗಿಹೋಗಿಬಿಟ್ಟಿದೆ! ಅಂತಹ ಘಟನೆಗಳಲ್ಲಿ ವಿಶೇಷತೆ ಏನೂ ಉಳಿದಿಲ್ಲ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ.

ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ! (ಎಂದು ನಾನೂ ಭಾವಿಸಿದ್ದೆ). ಅಂಗಡಿ-ಮುಂಗಟ್ಟುಗಳಲ್ಲೆಲ್ಲ ಕನ್ನಡ ಪುಸ್ತಕಗಳು, ಶುಭಾಶಯ ಪತ್ರಗಳು, ಕನ್ನಡ ಬರಹಗಳಿರುವ ಟೀ ಶರ್ಟ್‌ಗಳು ತುಂಬಿ ತುಳುಕುತ್ತಿತ್ತು. ಎಲ್ಲ ಕಡೆ ಕನ್ನಡದಲ್ಲೇ ಮಾತಾಡಿ ಎನ್ನುವ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಬೆಂಗಳೂರಿನಲ್ಲಿ ಇಷ್ಟೊಂದು ಜನ ಕನ್ನಡಾಭಿಮಾನಿಗಳು ಇದಾರಲ್ಲಾ ಎಂದು ಸಂತೋಷಪಡುತ್ತಿರುವಾಗಲೇ ನನ್ನ ಎದುರಿಗಿದ್ದ ಒಂದು ಹೆಣ್ಣು ಪಕ್ಕದಲ್ಲಿದ್ದ ತನ್ನ ಗೆಳತಿಗೆ ಹೇಳಿತು
"Hey.. I'll be just lookin at the T'shirts... ಆಯ್ತಾ..."

ಈ ಕೊನೆಯ "ಆಯ್ತಾ" ಬರದಿದ್ದರೆ, ನಾನು ಯಾರೋ ಉತ್ತರಭಾರತದವರು ಕನ್ನಡದಲ್ಲಿ ಆಸಕ್ತಿ ಹೊಂದಿ ಬಂದಿದ್ದಾರೆ ಎಂದೇ ಅಂದುಕೊಂಡುಬಿಡುತ್ತಿದ್ದೆ! ಈ ಭಾಷಾಪ್ರೇಮಿಯೂ ಕನ್ನಡದವಳೇ ಎಂದು ಗೊತ್ತಾಗಿದುದಕ್ಕೆ ಖೇದವಾಯಿತು.

ಕನ್ನಡ ರಕ್ಷಿಸಲು, ಪರಭಾಷಾ ಚಿತ್ರಗಳನ್ನು ವಿರೋಧಿಸಬೇಕಾಗಿಲ್ಲ. ತಮಿಳರಿಗೆ, ತೆಲುಗರಿಗೆ ಕನ್ನಡ ಕಲಿಸಬೇಕಾಗಿಲ್ಲ. ಅಂಗಡಿ ಮುಂಗಟ್ಟುಗಳ ಫಲಕಗಳನ್ನು ಕನ್ನಡದಲ್ಲಿ ತಿದ್ದಬೇಕಾಗಿಲ್ಲ, ಇಂಗ್ಲೀಷ್ ಕಂಡರೆ ಅಸಹ್ಯಪಡಬೇಕಾಗಿಲ್ಲ. ಎಲ್ಲ ಕನ್ನಡಿಗರು ಕೊನೆಯಪಕ್ಷ ಕನ್ನಡಿಗರೊಂದಿಗಿದ್ದಾಗ ಕನ್ನಡದಲ್ಲೇ ಮಾತಾಡಿ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರೆ ಸಾಕು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Wednesday, January 12, 2011

ಗಲಿಬಿಲಿ ಇನ್ ಅಸ್ಸೆಂಬ್ಲಿ


ಪ್ರತೀ ಬಾರಿ ವಿಧಾನಸಭೆ ಕಲಾಪ ಏರ್ಪಡಿಸಿದಾಗಲೂ ನೆಡೆಯುವುದು ಈ ಕೆಳಗಿನ ಘಟನೆಗಳು ಮಾತ್ರ!
೧. ಪ್ರತಿಪಕ್ಷಗಳು ಆಡಳಿತ ಪಕ್ಷದ ಯಾವುದೋ ಒಂದು ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುವುದು.
೨. ಆಡಳಿತ ಪಕ್ಷ ಅದನ್ನು ಮಾಡದಿರುವುದು
೩. ಪ್ರತಿಪಕ್ಷಗಳ ಗಲಾಟೆ, ಕೂಗಾಟ, ರಂಪಾಟ, ಬೈಗುಳಗಳು (ಈಗೀಗ ಸೆಡ್ಡು ಹೊಡೆಯುವುದು, ಬಟ್ಟೆ ಹರಿದುಕೊಳ್ಳುವುದು)
೪. ಯಾವುದೇ ವಿಷಯ ಚರ್ಚೆ ಆಗದೆ ಸದನದ ಮುಂದೂಡಿಕೆಯಾಗುವುದು.

ಯಾರಿಗೇ ಆಗಲಿ ಒಂದೇ ಕೆಲಸ ಮಾಡಿ ಮಾಡಿ ಬೇಜಾರಾಗುವುದು ಸಹಜ. ಇದನ್ನೇ ಪ್ರತಿಸಲವೂ ಮಾಡಿ ನಮ್ಮ ರಾಜಕಾರಣಿಗಳಿಗೂ ಒಮ್ಮೆ ಬಹಳ ಬೇಜಾರಾಗಿಹೋಯಿತು. ಕೆಲವರಿಗಂತೂ ವಿಧಾನಸೌಧ ಕಂಡರೆ ವಾಕರಿಕೆ ಬರುವಷ್ಟು ಬೇಸರವಾಗಿಬಿಟ್ಟಿತ್ತು. ಕೆಲವರಂತೂ ಬೆಂಗಳೂರಿನಲ್ಲಿ ವಿಧಾನಸೌಧದ ಅಡ್ರೆಸ್ ಕೇಳಿಕೊಂಡು ಬರುವ ಸ್ಥಿತಿಗೆ ತಲುಪಿಬಿಟ್ಟಿದ್ದರು! ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರುವಾಗ ಮತ್ತೆ ಕಲಾಪಗಳಲ್ಲಿ ಆಸಕ್ತಿ ಮೂಡಿಸಲು ಏನಾದರು ಮಾಡಬೇಕೆಂದುಕೊಂಡು ಒಂದು ಕಮಿಟಿಯನ್ನು ರಚಿಸಲಾಯಿತು. "ವಿಧಾನ ಮಂಡಲ ಕಲಾಪಾಸಕ್ತಿ ಪುನರೋದ್ಧಾರಕ ಸಮಿತಿ" ಅಲಿಯಾಸ್ "ವಿಮಕಪುಸ"!!!

’ವಿಮಕಪುಸ’ ಕಾರ್ಯೋನ್ಮತ್ತವಾಯಿತು! ಮೂರ್ನಾಲಕ್ಕು ತಿಂಗಳು ಹಗಲೂ ರಾತ್ರಿ ಯೋಚಿಸಿದ ಮೇಲೆ ಸಮಿತಿಗೆ ಒಂದು ಉಪಾಯ ಹೊಳೆಯಿತು. ಕಲಾಪ ನೆಡೆಯುವುದಕ್ಕಿಂತ ಒಂದು ದಿನ ಮೊದಲು ಶಾಸಕರ ನಡುವೆ ಸಂಬಂಧಗಳನ್ನು ತಿಳಿಯಾಗಿಸಲು ಎಲ್ಲರನ್ನೂ ವಿಧಾನಸೌಧದಲ್ಲಿ ಸೇರಿಸಿ ಅವರ ನಡುವೆ "ಪ್ರತಿಭಾ ಪ್ರದರ್ಶನ" ಏರ್ಪಡಿಸುವುದು ಎಂದು! ಈ ವರದಿ ಬರುತ್ತಿದ್ದಂತೆಯೇ ಎಲ್ಲ ಶಾಸಕರೂ ತಮ್ಮ ತಮ್ಮ ಪ್ರತಿಭೆಗಳನ್ನು ಹುಡುಕಲು ಪ್ರಾರಂಭಿಸಿದರು. ಯಡಿಯೂರಪ್ಪನವರು ನನ್ನ ಜೊತೆ ಶೋಭೆಯೇ ಇರುವಾಗ ಪ್ರತಿಭೆ ಯಾಕೆ ಬೇಕು ಎಂದು ಅಂದುಕೊಂಡರೂ ಪ್ರತಿಭೆಯೂ ಎಲ್ಲೋ ಇರಬೇಕು ಎಂದು ಅದನ್ನು ಹುಡುಕಿ ಪ್ರದರ್ಶನಕ್ಕೆ ಸಜ್ಜಾದರು. ಮಾರನೆಯ ದಿನವೇ ಕಲಾಪ. "ಇವತ್ತಿನ ದಿನ ಪ್ರತಿಭಾ ಪ್ರದರ್ಶನ!" ಎಂದು ಸ್ಪೀಕರ್ ಘೋಷಿಸಿಬಿಟ್ಟರು.

ಮೊದಲನೆಯ ಅವಕಾಶ ಮಾನ್ಯ ಮುಖ್ಯಮಂತ್ರಿಗಳದ್ದು. ಯಡಿಯೂರಪ್ಪನವರು ಹಾಡು ಹೇಳಿದರು! ಅವರಿಗೆ ಶೊಭಾ ಹಾಗು ಅವರ ಮಕ್ಕಳು ಸಾಥ್ ನೀಡಿದರು.

ಯಡ್ಡಿ:
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್


ಯಡ್ಡಿ:
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್

ಯಡ್ಡಿ:
ಡಿನೋಟಿಫೈ ಮಾಡೇಬಟ್ಟೆ ರಾಜ್ಯವನ್ನೇ ಮಾರ್‌ಕಂಡ್‌ಬುಟ್ಟೆ
ರೆಡ್ಡಿಗ್ ಸೆಡ್ಡು ಹೊಡದೇಬುಟ್ಟೆ ಸಿದ್ದುಗ್ ಗುದ್ದು ಕೊಟ್ಟೇಬುಟ್ಟೆ
ಹಂಗೋ ಹಿಂಗೋ ಖುರ್ಚಿಯನ್ನು ಉಳಸ್ಕಂಡೇಬುಟ್ಟೆ
ನಾನು ಸೂಪರೋ ಗೌಡಾ..........

==============================================

ಅಷ್ಟರಲ್ಲಿ ರೇವಣ್ಣ ಎದ್ದುನಿಂತು ಇದು ಪ್ರತಿಭಾ ಪ್ರದರ್ಶನಕ್ಕೆ ಅವಮಾನ. ಇದಕ್ಕೋಸ್ಕರ ಯಡಿಯೂರಪ್ಪನವರು ರಾಜೀನಾಮೆ ಕೊಡ್ಬೇಕು ಎಂದು ವಾದಿಸಿ ತಮ್ಮ ಹಾಡನ್ನು ಶುರುಮಾಡಿದರು.

ರೇವಣ್ಣ:
ಹಗರಣ ಪೇಪರ್ ನನ್ನ ಕೈ ಒಳಗೆ
ಬಿಡು ಕುರ್ಚಿ ನೀನು ಈ ಘಳಿಗೆ
ಅಪ್ಪ ಮಗ ನಾವು ಯಾವುದಕ್ಕು ರೆಡಿ
ಕುರ್ಚಿ ಬಿಟ್ಟು ಮನೆಗೆ ನೆಡಿ

ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ ಕತ್ತೆ ಕೂಡಾ ಗೆಲ್ಲುವುದು
ಯಾರು ಕತ್ತೆ ಯಾರು ಕುದುರೆ ತೋರಿಸ್ತೀನಿ ನಾನು ಬಿಜೆಪಿ ಸರ್ವನಾಶ ಮಾಡುತೀನಿ

ಒಂದೆ ಮಾಟ ಒಂದೆ ಮಂತ್ರ
ಒಂದೆ ಮಾಟ ಒಂದೆ ಮಂತ್ರ ಎಂದು ಮಾಟ ಮಂತ್ರ ಮಾಡಿ
ಎಷ್ಟು ದಿನ ಇರುತ್ತೀಯಾ ನೊಡುತ್ತೀನಿ ನಾನು ನಿಂಬೆ ಹಣ್ಣು ಮಂತ್ರಿಸಿ ತರುತ್ತೀನಿ

ನಾನೇ ಮುಂದಿನ ಮುಖ್ಯಮಂತ್ರಿ ನೋಡುತಿರು, ಸುಮ್ನೆ ಕುರ್ಚಿ ಬಿಟ್ಟು ಕೊಡು
==============================================

ಬಂಗಾರಪ್ಪನವರು ಗೆಸ್ಟ್ ಅಪಿಯರನ್ಸ್ ನೀಡಿ ಹಾಡಲು ಪ್ರಾರಂಭಿಸಿದರು.

ಬಂಗಾರಪ್ಪ:
ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ
ಯಾರೂ ಕಿಮ್ಮತ್ ಕೊಡ್ತಿರ್‌ಲಿಲ್ಲಾ ಲೈಫಿನಲಿ
ಟಿಕೆಟ್ ಸಿಗೋದ್ ಡೌಟಾಗೋಯ್ತು ಪಾರ್ಟಿಯಲಿ
ಜೆಡಿಸ್ ಕಂಡ್ತು ಸೈಡಿನಲಿ

ಅಷ್ಟರಲ್ಲಿ ಸ್ಪೀಕರ್ ಸಾಹೇಬರು ಅವರ ಬಾಯಿ ಮುಚ್ಚಿಬಿಟ್ಟರು!
==============================================

ಕೊನೆಯಲ್ಲಿ ಕುಳಿತಿದ್ದ ಅಸ್ಪ್ರಶ್ಯರ ಸಾಲಿಗೆ ಸೇರಿದ 13 ಬಂಡಾಯ ಶಾಸಕರು ಒಟ್ಟಿಗೇ ರಾಗ ಶುರುಮಾಡಿಬಿಟ್ಟರು

ಮಂತ್ರಿಗಿರಿ ಬೇಕು ದುಡ್ಡು ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು
ಮಂತ್ರಿಗಿರಿ ಬೇಕು ಹಗರಣ ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು ಮಾನ ಹೋದರು ಖುರ್ಚಿಯು ಬೇಕು
ಕಚ್ಚೆಯು ಸಡಿಲವಾಗಿರಬೇಕು ಒಂದು ಸ್ಟೆಪ್ನಿ ಇಟ್ಟಿರಬೇಕು
ನಮ್ಗೆ ಮಾನ ಇಲ್ಲ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಊರನು ಖರೀದಿ ಮಾಡಲೆ ಬೇಕು
ನಾವು ಕೂಡಾ ಗುಂಡಾ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ


ನಾವು ಶಾಸಕರು ತಿನ್ನುವೆವು ಎಲ್ಲ ಹಣವನ್ನು
ಪೆದ್ದು ಜನರುಗಳೆ ಕೇಳಿರಿ
ನೀವ್ ಭಾರಿ ಬೊದ್ದು ಬಿಡ್ರಿ
ತುಂಬ ಶ್ರಮಿಸುವೆವು ಪಡೆಯುವೆವು ಒಳ್ಳೆ ಖಾತೆಯನು
ಕೆಲಸಕೆಂದು ಅಲೆದು ಸಾಯಿರಿ
ನ್ಯಾಯ ನೀತಿ ನೋಡೋದಿಲ್ರಿ
ಮಂತ್ರಿಗಿರಿ ಬೇಕು ಜನರು ಉಗಿದರು ನಗುತಿರಬೇಕು
ನಮ್ಗೆ ಅದು ತಾಗೊದಿಲ್ರಿ
ಮಂತ್ರಿಗಿರಿ ಬೇಕು ಮಿತ್ರನ ಮಡದಿಯ ಪ್ರೀತಿಸಬೇಕು
ಪೋಲಿತನ ರಕ್ತದಿ ಬೆರೆತಿರಬೇಕು ಡೀಸೆಂಟ್ ಪೋಸು ನೀಡಬೇಕು
ನಾವು ತುಂಬಾ ಸಾಚಾ ಕಣ್ರಿ
ನರ್ಸ್ ಜೊತೆ ಡ್ಯಾನ್ಸ್ ಮಾಡಲೆ ಬೇಕು
ಥಕ ಧಿಮಿ ಥಕ ಝಣು ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
==============================================

ಇದನ್ನೆಲ್ಲ ನೋಡಿ ತಲೆ ಚಚ್ಚಿಕೊಳ್ಳುತ್ತಾ ಸ್ಪೀಕರ್ ಸಾಹೀಬ್ರು, ಪ್ರತಿಭಾ ಪ್ರದರ್ಶನವನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿಬಿಟ್ಟರು!

ಇದನ್ನು ನೋಡುತ್ತಾ ಕುಳಿತ ಜನಸಾಮಾನ್ಯರು ತಮ್ಮಲ್ಲೇ ತಾವು ಹಾಡಿಕೊಂಡರು.

ತುಂಬಾ ಟೆನ್ಷನ್ ಮಾಡ್ಕೋ ಬೇಡಿ
ರಾಜಕೀಯ ಹಿಂಗೇ ನೋಡ್ರಿ
ಅವರಿಗ್ ಬುದ್ಧಿ ಬರೋದಿಲ್ರಿ
ಲೈಫು ಇಷ್ಟೇನೇ...

ದುಡ್ಡೇ ಉಣ್ಣೋ ನಮ್ಮ ಮುಖಂಡ
ಇವ್ನಿಗ್ ವೋಟ್ ಹಾಕೋದ್ ದಂಡ
ನಂಬಿ ಕೆಟ್ವಿ ಇವನಜ್ಜಿ ಪಿಂಡ
ಲೈಫು ಇಷ್ಟೇನೇ...

ಹಗರಣದ್ ಮೇಲೆ ಹಗರಣ ಬಂದು
ಜನಸಾಮಾನ್ಯ ಬೆಂದು ನೊಂದು
ಕೊನೆಯಲಿ ತನ್ನನು ತಾನೆ ಕೊಂದು
ಲೈಫು ಇಷ್ಟೇನೇ...

[ಸೂಚನೆ: ಇದು ಕೇವಲ ಕಾಲ್ಪನಿಕ. ನಮ್ಮ ವಿಧಾನಸೌಧದಲ್ಲಿ ಇಷ್ಟೇ ನೆಡೆದರೆ ನಮ್ಮ ಸೌಭಾಗ್ಯ!]