Thursday, February 21, 2008

ಶ್...!!! ಅಣ್ಣಾವ್ರು ಮಲ್ಗವ್ರೆ.

ಅದೊಂದು ಕಾಲ. ಬೆಳಗಾಗಿ 9 ಗಂಟೆಗೆ ಆಫೀಸಿಗೆ ಹೋಗುವುದು. ಅಫೀಸ್ ಐಡಿ, ಜಿಮೇಲ್ ಐಡಿ, ಯಾಹೂ ಐಡಿ, ರೆಡಿಫ್ ಐಡಿ... ಅಬ್ಬಬ್ಬಾ ಎಷ್ಟೊಂದು ಮೇಲ್ ಐಡಿಗಳನ್ನು ಚೆಕ್ ಮಾಡಬೇಕು. ಆಫೀಸ್ ಐಡಿಗೆ ಬಂದ ಮೇಲ್‍ಗಳನ್ನು ನನ್ನ ಸಿಸ್ಟಮ್‌ನಲ್ಲೇ ಚೆಕ್ ಮಾಡಿಬಿಡಬಹುದು. ಆದರೆ ಈ ಪ್ರೈವೇಟ್ ಐಡಿಗಳಿಗೆ ಇಂಟರ್ನೆಟ್ ಬೇಕು. ನಮ್ಮದೋ ಪಕ್ಕಾ ಸ್ವದೇಶೀ ಕಂಪನಿಯಾಗಿತ್ತು. ವಿಶ್ವದಲ್ಲಿರುವ ಎಲ್ಲಾ ಸೈಟ್‌ಗಳನ್ನೂ ಬ್ಲಾಕ್ ಮಾಡಿಬಿಟ್ಟಿದ್ದರು. ಗೂಗಲ್ ಒಂದನ್ನು ಬಿಟ್ಟು. ಆದರೆ ಗೂಗಲ್‌ನಲ್ಲಿ ಹುಡುಕಾಟ ನೆಡೆಸಿದ ಮೇಲೆ ಬಂದ ಲಿಂಕ್‌ಗಳನ್ನು ಕ್ಲಿಕ್ಕಿಸಿದರೆ, ಯಾವುದೂ ಹತ್ತುತ್ತಿರಲಿಲ್ಲ. ಬಹುತೇಕ ಎಲ್ಲವೂ ಬ್ಲಾಕ್. ಅದಕ್ಕಾಗಿ ಇಂತಹ ಪ್ರೈವೇಟ್ ಐಡಿಗಳಿಗೆ ಬಂದ ಸಂದೇಶಗಳನ್ನು ನೋಡಲು ಲೈಬ್ರರಿಗೆ ಹೋಗಬೇಕಾಗಿತ್ತು. ಅಲ್ಲಿ ಹೋದಮೇಲೆ, ಪ್ರಜಾವಾಣಿ, ವಿಜಯಕರ್ನಾಟಕ ಬಿಡಲು ಆಗುತ್ತದೆಯೇ? ಎಲ್ಲವನ್ನೂ ಮುಗಿಸಿ ವಾಪಸ್ ನನ್ನ ಸ್ಥಳಕ್ಕೆ ಬರುವಾಗ ಆಗಲೇ 10 ಗಂಟೆ! ಗೆಳೆಯರೆಲ್ಲಾ ತುದಿಗಾಲ ಮೇಲೆ ನಿಂತಿರುತ್ತಿದ್ದರು. ಯಾಕೆಂದರೆ ಇದು ಟೀ ಟೈಮ್.

ಟೀ ಕುಡಿಯುವಾಗ ಸುಮ್ಮನೇ ಕುಡಿಯಲಾಗುತ್ತದೆಯೇ? ನಮ್ಮ ಅಫೀಸಿಂದ ಪ್ರಾರಂಭಿಸಿ ಅಕ್ಕ ಪಕ್ಕದ ಅಫೀಸುಗಳನ್ನು ಮುಗಿಸಿ ಜಗತ್ತೆಲ್ಲವನ್ನೂ ಸುತ್ತಿಕೊಂಡು ಬರುತ್ತಿತ್ತು ನಮ್ಮ ಸುದ್ದಿಗಳ ಸಂಗ್ರಹ. ಹೀಗೆ ಸಾಮಾನ್ಯಜ್ಞಾನ ಹೆಚ್ಚು ಮಾಡಿಕೊಂಡಾದ ಮೇಲೆ ವಾಪಸ್ ನಮ್ಮ ಸ್ಥಳಕ್ಕೆ ಹೋಗುವಷ್ಟರಲ್ಲಿ 10:45 ಅಥವಾ 11ಗಂಟೆ. ಅಂತೂ ದಿನದ ಕೆಲಸ ಪ್ರಾರಂಭಿಸೋಣವೆಂದರೆ, ಎಲ್ಲಿಂದ ಪ್ರಾರಂಭಿಸುವುದು ಎಂಬುದೇ ದೊಡ್ಡ ಚಿಂತೆ. ಅಷ್ಟಕ್ಕೂ ಇದನ್ನು ಇವತ್ತೇ ಮುಗಿಸಬೇಕು ಎಂಬ ಗಡಿಬಿಡಿಯಿಲ್ಲ. ಇದನ್ನು ಶುರು ಮಾಡಿದರೆ ಅರ್ಧ ಗಂಟೆಯಲ್ಲೇ ಮುಗಿಸಿ ಬಿಡಬಹುದು. ಅದಿಕ್ಕೆ ಇದನ್ನು ಆಮೇಲೆ ನೋಡಿದರಾಯಿತು. ಅದೋ... ಛೆ... ತಲೆಗೇ ಹತ್ತುತ್ತಿಲ್ಲ. ಹೇಗಾದರೂ ಮುಗಿಸಬೇಕು. ಏನು ಮಾಡುವುದಪ್ಪಾ ಎಂದು ಯೋಚಿಸುವಷ್ಟರಲ್ಲಿ 12ಗಂಟೆ. ಈಗ ಊಟದ ಸಮಯ. ಎಲ್ಲಾರು ಮಾಡುವುದು ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ... ಗೇಣು ಬಟ್ಟೆಗಾಗಿ.

12ಗಂಟೆಗೇ ಊಟಾನಾ? ಎಂದು ಕೆಲವರು ಆಶ್ಚರ್ಯ ಪಡಬಹುದು. ಆದರೆ ಇದಕ್ಕೂ ತಡವಾಗಿ ಹೋದರೆ ಊಟಕ್ಕೆ ದೊಡ್ಡ ಕ್ಯೂ ನಿಂತಿರುತ್ತದೆ. ಅಷ್ಟೇ ಅಲ್ಲದೆ ಕುಳಿತುಕೊಳ್ಳಲೂ ಜಾಗ ಹುಡುಕಬೇಕಾಗುತ್ತದೆ. ಆದ್ದರಿಂದ ಸೇಫ್ಟಿಗೆ ಎಂದು 12ಕ್ಕೆ ಕೆಫೆಟೇರಿಯಾಕ್ಕೆ ಹಾಜರ್. ಥತ್... ಇವತ್ತೂ ಅದೇ ಪಲ್ಯ. ಈ ಚಪಾತಿಯನ್ನು ಹರಿಯಲು ಮೊದಲು ಜಿಮ್‌ಗೆ ಹೋಗಿ ಬರಬೇಕಿತ್ತು. ಈ ಕಿತ್ತೋಗಿರೋ ರಸಂನಲ್ಲಿ ಏನೂ ಇಲ್ಲಾ... ನೀರಿಗೆ ಮೆಣಸಿನ ಪುಡಿ ಕಲಸಿ ಕೊಟ್ಟಿದಾರೆ! ಎನ್ನುವ ಕಮೆಂಟ್‌ಗಳ ನಡುವೆ ಊಟ. ಊಟ ಮಾಡೋದು, ಇಡೀ ದಿನ ಕಂಪ್ಯೂಟರ್ ಮುಂದೆ ಕೂಡೋದು... ಇದನ್ನೇ ಮಾಡಿದ್ರೆ ಬೊಜ್ಜು ಬರಲ್ವಾ? ಸ್ವಲ್ಪಾನೂ ಬಾಡಿಗೆ ಎಕ್ಸರ್ಸೈಜ್ ಇಲ್ದೇ ಇದ್ರೆ ಹೇಗೆ? ಎಂದು ಕೇಳಿಕೊಂಡು ಒಂದು ರೌಂಡ್ ಕ್ಯಾಂಪಸ್ ಸುತ್ತಾ ತಿರುಗಾಡಿಕೊಂಡು ಬಂದು ವಾಪಸ್ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಒಂದೂವರೆ ಅಥವಾ ಎರಡು ಗಂಟೆ!

ಮತ್ತೆ ಕನ್‌ಫ್ಯೂಜನ್ ಶುರು. ಯಾವ್ ಕೆಲಸ ಕೈಗೆತ್ತಿಕೊಳ್ಳಲಿ ಅಂತ. ಯಾವುದೋ ಒಂದನ್ನು ಎತ್ತಿಕೊಂಡರಾಯಿತು ಎಂದುಕೊಂಡು ಕವಡೆ ಹಾಕಿ ಒಂದು ಕೆಲಸ ಶುರು ಮಾಡುವುದು. ಒಂದರ್ಧ ಗಂಟೆ ಕಳೆದಿರುವುದಿಲ್ಲ. ಆಗಲೇ ಕಣ್ಣು ಕೂರುತ್ತಿದೆ! ಬೆಳಗ್ಗೆಯಿಂದ ದುಡಿದು ದುಡಿದು ಸುಸ್ತಾದುದಕ್ಕಿರಬೇಕು! ಹಾಗೆಯೇ ಕೊಂಚ ಕುರ್ಚಿಗೆ ಒರಗಿಕೊಂಡು ನಿದ್ರೆ ಮಾಡಿದರಾಯಿತು ಎಂದಂದುಕೊಂಡು ಒರಗಿದರೆ, ಗಡದ್ದಾದ ನಿದ್ರೆಯೇ ಬಂದುಬಿಡಬೇಕೆ? ಎಚ್ಚರವಾದಾಗ ಮೂರು ಗಂಟೆ! ಒಂದು ದಿನ ಹೀಗೇ ಮಲಗಿ ಎಚ್ಚರವಾದಮೇಲೆಯೇ ಗೊತ್ತಾಗಿದ್ದು. ಕೆಲಸವಿಲ್ಲದೇ ಆಕಡೆ ಈಕಡೆ ಸುತ್ತುತ್ತಿದ್ದ ಮಹೇಶ ನಾನು ಮಲಗಿದ್ದನ್ನು ನೋಡಿ ತನ್ನ ಮೊಬೈಲ್‌ನಿಂದ ಫೋಟೋ ತೆಗೆದಿದ್ದ! ಎಚ್ಚರವಾದ ತಕ್ಷಣ ಮತ್ತೆ ನಿದ್ದೆ ಬರಬಾರದಲ್ಲ, ಅದಕ್ಕಾಗಿ ಒಂದು ಕಪ್ ಟೀ. ಟೀ ಮುಗಿಸಿ ಬರುವಷ್ಟರಲ್ಲಿ ಯಥಾಪ್ರಕಾರ ಇನ್ನೊಂದು ಗಂಟೆ ಕಳೆದಿರುತ್ತಿತ್ತು. 5 ಗಂಟೆಗೆ ಎಲ್ಲರೂ ಹೊರಡುವ ಸಮಯ. ಆದ್ದರಿಂದ 4:30ರಿಂದಲೇ ತಯಾರಿ ಪ್ರಾರಂಭ. ಎಷ್ಟೋ ಜನರನ್ನು ಇವತ್ತು ಮಾತಾಡಿಸಿಯೇ ಇಲ್ಲ! ಎಲ್ಲರನ್ನೂ ಭೇಟಿಯಾಗಿ, ನಾಳೆ ಮತ್ತೆ ಭೇಟಿಯಾಗೋಣವೆಂದು ಹೇಳಿ ಬರುವಷ್ಟರಲ್ಲಿ ಹೊರಡುವ ಸಮಯ! ಆಲ್ಲಿಗೆ ಅವತ್ತಿನ ಕೆಲಸ ಮುಗಿಯಿತು.

ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಉಳಿದೆಲ್ಲ ದಿನಚರಿ ಬಹುತೇಕ ಹಾಗೇ ಉಳಿದಿದ್ದರೂ, ಟೀ ಕುಡಿಯಲು, ಊಟ ಮಾಡಲು ಬರುವ ಗೆಳೆಯರು ಮಾತ್ರ ಬೇರೆ. ಮಲಗಿದ್ದಾಗ ಫೋಟೋ ತೆಗೆದು ಊರಿಗೆಲ್ಲ ತೋರಿಸಿ, ನಕ್ಕು, ಮತ್ತೆ ನನಗೆ ಮೇಲ್ ಮಾಡುವಷ್ಟು ಸಲುಗೆಯವರು ಇಲ್ಲ. ಮನುಷ್ಯನ ಸ್ವಭಾವವೇ ಹೀಗೋ ಏನೊ. ಕಳೆದು ಹೋದ ದಿನಗಳೇ ಚೆಂದ ಎನಿಸುತ್ತದೆ. ಆದರೆ... ಛೆ, ಕಾಲಚಕ್ರಕ್ಕೆ ದೇವರು ರೆವರ್ಸ್ ಗೇರ್ ಕೊಟ್ಟೇ ಇಲ್ಲವಲ್ಲಾ!

Wednesday, February 6, 2008

ಒಂದು ನೋಟ, ನಗೆಯ ಮಾಟ, ಪ್ರೇಮದೂಟ... ಆಮೇಲೆ ಕೈಯಲ್ಲಿ ಬಿಯರ್ ಲೋಟ


ನಾನಂತೂ ಶಿವಸೇನೆಯವನೂ ಅಲ್ಲ. ವಿಶ್ವ ಹಿಂದೂ ಪರಿಷತ್ತಿನ ಸದಸ್ಯನೂ ಅಲ್ಲ. ಆದರೆ ಒಬ್ಬ ಹಿಂದು ಮಾತ್ರ ಖಂಡಿತ ಹೌದು. ಪ್ರೇಮಿಗಳ ದಿನದಂದು ಕೆಲವು ಚಿತ್ರಮಂದಿರಗಳನ್ನು, ಕೆಲವು ಗಿಫ್ಟ್ ಸೆಂಟರ್‌ಗಳನ್ನು ಹೋಗಿ ಒಡೆದು ಬರಲು ಮನಸ್ಸು ಬರುವುದಿಲ್ಲವಾದರೂ ಆಚರಿಸಲೂ ಮನಸ್ಸು ಬರುವುದಿಲ್ಲ. ಆದರೆ ಆಚರಿಸುವವರನ್ನು ಕಂಡು ಅಸಹ್ಯವಂತೂ ಆಗುತ್ತದೆ. ನನಗೇಕೆ ಅಸಹ್ಯವಾಗಬೇಕು ಎಂದು ಬಹಳಸಲ ನನಗೆ ನಾನೇ ಕೇಳಿಕೊಂಡಿದ್ದೇನೆ. ಉತ್ತರವಂತೂ ಸಿಕ್ಕಿಲ್ಲ. ಆದರೆ ಆ ಅಸಹನೆ ನಿಂತಿಲ್ಲ. ಯಾಕೋ ಗೊತ್ತಿಲ್ಲ. ನಾನು ಬೆಳೆದ ಪರಿಸರದ ಪ್ರಭಾವವೋ ಅಥವಾ ಅಜ್ಞಾನವೋ ಏನೊ ಈ ಪ್ರೀತಿ ಪ್ರೇಮ ಅರ್ಥವೇ ಆಗುತ್ತಿಲ್ಲ. ಬಹುಶಃ ಪ್ರೇಮಿಗಳಿಗೂ ಅರ್ಥವಾಗಿಲ್ಲ.

ಫೆಬ್ರವರಿ ೧೪, ’ಪ್ರೇಮಿಗಳ ದಿನ’. ಹಾಗಿದ್ದರೆ ವರ್ಷದ ಉಳಿದ ೩೬೪ ದಿನಗಳು ವಿರಹಿಗಳ ದಿನಗಳೋ? ಅಥವಾ ಈ ದಿನ ಮಾಡಿದ ತಪ್ಪಿಗಾಗಿ ಪ್ರೇಮಿಗಳು ಪಶ್ಚಾತ್ತಾಪ ಪಡುವ ದಿನಗಳೋ? ಏನೊ ಒಂದು. ಒಟ್ಟಿನಲ್ಲಿ ಹೂ ಮಾರುವವರಿಗೆ, ಗ್ರೀಟಿಂಗ್ಸ್ ಹಾಗು ಗಿಫ್ಟ್ ಮಾರುವವರಿಗೆ ಶುಭದಿನ. ಪ್ರೇಮಿಗಳಲ್ಲದವರಿಗೆ ಹುಡುಕಾಟದ ಅಥವಾ ಹೊಟ್ಟೆಯುರಿಯ ದಿನ. ಈಗಂತೂ ಫಾದರ್ಸ್ ಡೇ, ಮದರ್ಸ್ ಡೇ ಬಂದು ಕುಳಿತಿರುವುದರಿಂದ, ತಂದೆ ತಾಯಿಯನ್ನು ಒಂದು ದಿವಸ ನೆನೆಸಿಕೊಂಡು ಒಂದು ಗ್ರೀಟಿಂಗ್ ಕೊಟ್ಟರೆ ಮಕ್ಕಳಾದ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಕಾಲ ಬಂದೊದಗಿದೆ. ಮುಂದೊಂದು ದಿನ ಇದೇ ಪರಿಸ್ಥಿತಿ ಈಗಿನ so called valentineಗೂ ಬಂದರೆ ಅಚ್ಚರಿಯೇನಿಲ್ಲ. ಒಂದು ದಿನ ಅವನನ್ನು/ಳನ್ನು ನೆನೆಸಿಕೊಂಡು ಒಂದು ಗ್ರೀಟಿಂಗ್ ಕಳಿಸಿಕೊಟ್ಟು ಉಳಿದಷ್ಟು ದಿನ ಬೇರೆಯವನ/ಳ ಜೊತೆ ಡೇಟಿಂಗ್ ಮುಂದುವರಿಸುವುದು. ಆಹಾ ಏನು ಸಂಸ್ಕಾರವಂತರು ಕಣ್ರೀ ಈ ವಿದೇಶೀಯರು ಎಂಥೆಂಥ ಪದ್ಧತಿಗಳನ್ನು ಹುಟ್ಟುಹಾಕಿದ್ದಾರೆ! ಏನು ಬುದ್ಧಿವಂತರು ಕಣ್ರೀ ನಮ್ಮವರು. ಅವನ್ನೆಲ್ಲಾ ಕಣ್ಣು ಮುಚ್ಚಿ ಅನುಸರಿಸುತ್ತಿದ್ದಾರೆ. ಮುಂದುವರಿಯುತ್ತಿದ್ದೇವೆ ಎನ್ನುವುದರ ಲಕ್ಷಣವಿರಬೇಕು. ಆದರೆ ನಾವು ಮುಂದುವರಿಯುತ್ತಿರುವುದು ಎತ್ತಕಡೆ ಎಂಬುದು ಪ್ರಶ್ನಾರ್ಹ.

Love at first sight. ಅಬ್ಬಾ... ಒಂದೇ ಒಂದು ನೋಟ. ನಮ್ಮಿಬ್ಬರಲ್ಲೂ ಜನ್ಮ ಜನ್ಮದ ಅನುಬಂಧ ಇದೆ ಎಂದು ಇಬ್ಬರಿಗೂ ಅನಿಸಿಬಿಡುತ್ತದೆ. ಒಬ್ಬರಿಗೇ ಅನ್ನಿಸಿದ್ದರೆ, ಲವಿಂಗ್ ಬದಲು ಬೆಗ್ಗಿಂಗ್ ಶುರು ಆಗಿರುತ್ತದೆ. ಆ ವಿಷಯ ಬೇರೆ. ಆದರೂ ಒಂದೇ ಒಂದು ನೋಟದಲ್ಲಿ ಜೀವನ ಸಂಗಾತಿಯನ್ನು ಕಂಡುಹಿಡಿಯುವ ಈ ಬಿದ್ಧಿವಂತಿಕೆ ಬರೀ ಎಡವಟ್ಟುಗಳನ್ನೇ ತಂದು ಕೂರಿಸುವುದು ಯಾಕೋ ಕಾಣೆ. ವಯಸ್ಸಿಗೆ ಬಂದಾಗ ಕತ್ತೆಯೂ ಮುದ್ದಾಗಿ ಕಾಣುತ್ತದಂತೆ. ಈ ದೈಹಿಕ ಆಕರ್ಷಣೆಯನ್ನೇ ಪ್ರೀತಿ ಪ್ರೇಮ ಎಂದುಕೊಂಡು ಹಳ್ಳಕ್ಕೆ ಬೀಳುತ್ತಿದೆ ಯುವಜನತೆ. ಅರೇಂಜ್ಡ್ ಮ್ಯಾರೇಜ್‌ನಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳುವ ಜನ, ಈ ’love at first sight’ ಹೇಳುವುದು ಎಷ್ಟು ಹಾಸ್ಯಾಸ್ಪದ! ಇತರರೆಲ್ಲಾ ಲವ್ ಮಾಡುತ್ತಿದ್ದಾರೆ! ನಾನೊಬ್ಬನೇ ಮಾಡದಿದ್ದರೆ ನನ್ನ ಪ್ರೆಸ್ಟೀಜ್ ಏನಾಗಬೇಡ. ಎಂದಂದುಕೊಂಡು ಲವ್ ಮಾಡುವವರು ಎಸ್ಟು ಜನವೋ. ಲವ್ ಮಾಡದೆ ಮದುವೆಯಾಗುವುದೊಂದು ಮಹಾಪರಾಧವೆಂದು ತಿಳಿದುಕೊಂಡವರೆಸ್ಟು ಜನವೊ. ಅದು ಹೇಗಪ್ಪಾ ಗೊತ್ತಿಲದೇ ಇರುವ ವ್ಯಕ್ತಿಯ ಜೊತೆ ಜೀವನವಿಡೀ ಸಂಸಾರ ನೆಡೆಸುತ್ತೀರಿ ಎಂದು ಕೇಳುವ ಜನ ಬಹುತೇಕ ಅಂಕಿ ಅಂಶಗಳನ್ನು ಗಮನಿಸಿಲ್ಲ. ೧೦೦ಕ್ಕೆ ೭೦ರಿಂದ ೮೦ ಪ್ರೇಮವಿವಾಹಗಳು ದುಃಖಾಂತ ಕಾಣುತ್ತವೆ. ಸುಖಾಂತ ಕಾಣುವುದು ಸಿನೆಮಾ ಧಾರಾವಾಹಿಗಳಲ್ಲಿ ಮಾತ್ರವೇನೊ. ಹಾಗಾದರೆ ಈ ಅರೆಂಜ್ಡ್ ಮದುವೆಗಳೆಲ್ಲಾ ಸುಖಮಯವಾಗಿ ಸಾಗಿದೆ ಎಂಬರ್ಥವಲ್ಲ. ಮದುವೆ ಮುರಿದುಹೋಗುವ ಸಾಧ್ಯತೆಗಳು ಬಹಳ ಕಡಿಮೆ.

ಮನುಷ್ಯನ ಸ್ವಭಾವವೇ ಹಾಗೆ. ತಾನಾಗಿಯೇ ಆಯ್ಕೆಮಾಡಿಕೊಂಡ ವಸ್ತುಗಳಲ್ಲಿನ ಚಿಕ್ಕ ಚಿಕ್ಕ ದೋಷಗಳೂ ದೊಡ್ಡದಾಗಿ ಕಾಣುತ್ತವೆ. ಅದೇ ತಾನಾಗಿಯೇ ದೊರೆತ ವಸ್ತುಗಳಲ್ಲಿ ದೊಷಗಳು ಕಂಡರೂ ಅನುಸರಿಸಿಕೊಂಡು ಹೋಗುವ ಧಾರಾಳತನ ಬಂದುಬಿಡುತ್ತದೆ. ಮನುಷ್ಯನ ಈ ಸ್ವಭಾವ ಕೇವಲ ನಿರ್ಜೀವ ವಸ್ತುಗಳಲ್ಲಷ್ಟೇ ಅಲ್ಲ. ಸಜೀವ ವಸ್ತುಗಳಲ್ಲಿಯೂ ಕೂಡಾ ಇದೇ ಸ್ವಭಾವವನ್ನು ಮುಂದುವರಿಸುತ್ತಾನೆ. ಅಷ್ಟಕ್ಕೂ ನಾವು ನಮ್ಮ ತಂದೆ ತಾಯಿಯನ್ನು ಆಯ್ಕೆಮಾಡಿಕೊಂಡು ಹುಟ್ಟಿದ್ದೇವೆಯೆ? ದೇಶವನ್ನು ರಾಜ್ಯವನ್ನು ಸಮಾಜವನ್ನು ಆಯ್ಕೆಮಾಡಿಕೊಂಡು ಜನಿಸಿದ್ದೇವೆಯೆ? ಹಾಗೆಂದುಕೊಂಡು ಈ ಆಯ್ಕೆಯ ಸ್ವಾತಂತ್ರ್ಯವೇ ಇರಬಾರದೆಂದಲ್ಲ. ಈ ಸ್ವಾತಂತ್ರ್ಯ ಸದ್ವಿನಿಯೋಗವಾಗಬೇಕೇ ಹೊರತು ದುಡುಕುತನದಿಂದಾಗುವ ಸ್ವೇಚ್ಛೆಯಾಗಬಾರದು. ಪ್ರೀತಿ ಪ್ರೇಮಗಳು ನಮ್ಮ ಸಂಸ್ಕೃತಿಯಲ್ಲಿ ನಿಶಿದ್ಧ ಎಂಬ ತಪ್ಪು ಕಲ್ಪನೆ ಬಹಳ ಜನರಿಗಿದೆ. ಆದರೆ ವೇದಗಳೇ ಇವನ್ನು ನಿಶಿದ್ಧವೆಂದು ಹೇಳಿಲ್ಲ. ಅದರ ಬದಲು ವೇದಾಧ್ಯಯನದ ನಂತರ ವಿವಾಹ ಸಂಸ್ಕಾರದ ಮೊದಲು ವರನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಹೆಣ್ಣಿಗೆ ನೀಡಲಾಗಿದೆ! ಆದರೆ ಇಲ್ಲಿ ಗುರುತಿಸಬೇಕಾದ ಅಂಶವೆಂದರೆ ಇದು ನೆಡೆಯಬೇಕಾದುದು ವೇದಾಧ್ಯಯನದ ನಂತರ. ಅಂದರೆ ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದು, ಸಮಾಜದ ಬಗ್ಗೆ ಇಹದ ಬಗ್ಗೆ ಪರದ ಬಗ್ಗೆ ಜ್ಞಾನವನ್ನು ಪಡೆದು ಬದುಕುವ ರೀತಿಯನ್ನು ಅರಿತಾದ ಮೇಲೆ ಈ ಸ್ವಾತಂತ್ರ್ಯದ ಉಪಯೋಗ. ಆದರೆ ಈಗ ವೇದಾಧ್ಯಯನ ಕನಸಿನ ಮಾತು ಬಿಡಿ. ಕೊನೆಯಪಕ್ಷ ಹೈ ಸ್ಕೂಲ್ ಆದರೂ ಮುಗಿಯಬೇಡವೇ? ’ಚೆಲುವಿನ ಚಿತ್ತಾರ’ ನೋಡಿಕೊಂಡು ನಮ್ಮ ಬದುಕೂ ಚಿತ್ತಾರವಾಗುತ್ತದೆ ಎಂದುಕೊಂಡ ಅಪ್ರಾಪ್ತರು ಈ ಪ್ರೇಮದ ಬಲೆಗೆ ಬಿದ್ದು ಬದುಕನ್ನು ಚಿತ್ತಾರದ ಬದಲು ಚಿತ್ರಾನ್ನ ಮಾಡಿಕೊಳ್ಳುವರಷ್ಟೆ.

ವಿದ್ಯಾಲಯಗಳು ಜ್ಞಾನದ ದೇವಾಲಯಗಳಾಗದೆ ಪ್ರೇಮಾಲಯಗಳಾಗಿವೆ. ಜ್ಞಾನದ ಬದಲು ಪ್ರೇಮವನ್ನು ತಲೆಯಲ್ಲಿ ತುಂಬಿಕೊಂಡ ಈ ಪ್ರೇಮಾರ್ಥಿಗಳು ಮುಂದೆ ಜೀವನದಲ್ಲಿ ಸಾಧಿಸುವುದಾದರೂ ಏನು? ಭಾರತೀಯ ಜನಸಂಖ್ಯೆಗೆ ತಮ್ಮ ಕೊಡುಗೆಯನ್ನು ಕೊಡಬಲ್ಲರಷ್ಟೆ. ಕಲಿಕೆಯಲ್ಲಿನ ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಕಾಲ ಮೀರಿದ ಮೇಲೆ ಬುದ್ಧಿಬಂದರೂ ಪ್ರಯೋಜನವಿಲ್ಲ. ಕಲಿಕೆಯೂ ಹತ್ತದೆ ಇತ್ತ ಪ್ರೇಮವೂ ಕೈಗೂಡದೆ ಎಡಬಿಡಂಗಿಯಾಗುವವರೇ ಬಹಳ ಜನ. ಹೀಗೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನೇ ತ್ಯಾಗ, ಪ್ರೇಮಕ್ಕಾಗಿ ನೀಡಿದ ಮಹಾನ್ ಬಲಿದಾನ ಎಂದು ಬಿಂಬಿಸುತ್ತಿರುವ ಇಂದಿನ ಸಿನೆಮಾಗಳು, ಧಾರಾವಾಹಿಗಳು, ಕಥೆ ಕಾದಂಬರಿಗಳು ನಿಜಕ್ಕೂ ಸಮಾಜಕ್ಕೆ ತಪ್ಪು ದಾರಿಯನ್ನು ತೋರಿಸುತ್ತಿದೆ. ಅಷ್ಟಕ್ಕೂ ತಮ್ಮ ಜೀವನವನ್ನು ಸ್ವೇಚ್ಛೆಯಂತೆ ಬದುಕುವ ಹಕ್ಕು ತಮಗಿದೆಯೇ ಎಂದು ಯಾರಾದರೂ ಯೋಚಿಸಿದ್ದಾರೆಯೇ? ಹೆತ್ತು ಬೆಳೆಸಿದ ತಾಯಿ ತಂದೆ, ವಿದ್ಯೆ ನೀಡಿ ಮನುಷ್ಯನನ್ನಾಗಿಸಿದ ಈ ಸಮಾಜ ಇವೆಲ್ಲದರ ಋಣ ನಮ್ಮ ಮೇಲಿಲ್ಲವೆ? ಅವನ್ನು ತೀರಿಸದೆಯೇ ರೆಕ್ಕೆ ಬಂದಾಗ ಹಕ್ಕಿ ಹಾರಿಹೋಗುವಂತೆ ನಿಮಗೂ ನಮಗೂ ಸಂಬಂಧವಿಲ್ಲ. ನನಗೆ ಪ್ರೇಮವೇ ದೇವರು. ಅದೇ ತಾಯಿ ತಂದೆ ಎಂದು ಹೇಳಿ ಹೊರನಡೆಯುವುದು ಸ್ವಾರ್ಥವೆನಿಸುತ್ತದೆ.

ಅಯ್ಯೋ ಬಿಡಿ. ಈ ವಿಷಯದಲ್ಲಿ ಬರೆದಷ್ಟೂ ಕಮ್ಮಿಯೇ ತಿಳಿದಷ್ಟೂ ಕಮ್ಮಿಯೇ. ಅಷ್ಟಕ್ಕೂ ನನಗಿನ್ನೂ ಈಗಿನ valentine ಪ್ರೇಮ ಅರ್ಥವೇ ಆಗಿಲ್ಲ. ಈ valentine ಪದದ ಅರ್ಥ ಹುಡುಕುತ್ತಿದ್ದೆ. ಅದರ ಅರ್ಥ ಹೀಗಿದೆ: "A sweetheart chosen to receive a greeting on Saint Valentine's Day" ! ಇಲ್ಲಿ ’A' ಎಂದು ಕರೆಯಲಾಗಿದೆ ಹೊರತು ’The' ಎಂದು ಹೇಳಿಲ್ಲ. ಅಂದರೆ ನಿಮಗೆ ಸಾವಿರ sweetheartಗಳು ಇದ್ದರೂ ತೊಂದರೆಯಿಲ್ಲ. ಇದು ಪಾಶ್ಚಾತ್ಯರ ತಪ್ಪಲ್ಲ ಬಿಡಿ. ಅವರಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಆದರ್ಶಪುರುಷನಾಗಿರಲಿಲ್ಲ ಅಥವಾ ಲೋಕಮಾತೆ ಸೀತೆ ಆದರ್ಶವಾಗಿರಲಿಲ್ಲವಲ್ಲ. ಆದರೆ ಇಂಥ ಮಹಾನ್ ಸಂಸ್ಕೃತಿಯನ್ನು ಹೊಂದಿಯೂ Saint Valentine ನಮಗೆ ಆದರ್ಶವಾಗುತ್ತಿರುವುದು ಮಾತ್ರ ವಿಪರ್ಯಾಸ.

Tuesday, February 5, 2008

ಪ್ಯಾಂಟಿನ ಬಣ್ಣ

ಬ್ಯಾಚಲರ್ ಲೈಫ್ ಅಂದ್ರೇ ಹೀಗೆ ನೋಡಿ. ಒಂದು ವಾರದ ಮೇಲೆ ಆಗಿತ್ತು. ಬಟ್ಟೆ ಒಗೆಯುವ ಪ್ರೋಗ್ರಾಮ್ ಹಾಕಿ. ಆದರೆ ಮುಹೂರ್ತ ಮಾತ್ರ ಬಂದಿರಲಿಲ್ಲ. ಒಗೆಯದೆ ಇದ್ದ ಬಟ್ಟೆಗಳ ರಾಶಿ ಮಾತ್ರ ದೊಡ್ಡದಾಗುತ್ತಲೇ ಇತ್ತು. ಅಂತೂ ಇಂತೂ ಮೊನ್ನೆ ಶನಿವಾರ ಮುಹೂರ್ತ ಬಂತು. ಆದರೆ ಬಟ್ಟೆಗಳ ಸಂಖ್ಯೆ ಭಾರತೀಯರ ಜನಸಂಖ್ಯೆಯಂತೆ ಬೆಳೆದು ಹೋಗಿದ್ದರಿಂದ, ಪ್ಯಾಂಟು ಬೇರೆ ಶರ್ಟು ಬೇರೆ ನೆನೆಸಲು ಸಾಧ್ಯವಾಗಲಿಲ್ಲ. ಎಲ್ಲಾ ಒಟ್ಟಿಗೇ ಒಂದೇ ಬಕೆಟ್ಟಿನಲ್ಲಿ ಸ್ನಾನಕ್ಕೆ ಇಳಿದವು. ಒಂದರ ಮೇಲೆ ಇನ್ನೊಂದಕ್ಕೆ ಪ್ರೀತಿ ಉಕ್ಕಿತೋ ಏನೊ, ಪ್ಯಾಂಟು ತನ್ನ ಬಣ್ಣವನ್ನು ಬನಿಯನ್ನಿಗೆ, ಬನಿಯನ್ನು ತನ್ನ ಬಣ್ಣವನ್ನು ಪ್ಯಾಂಟಿಗೆ ವರ್ಗಾಯಿಸಿಬಿಟ್ಟಿದ್ದವು. ಪ್ರೇಮವೇ ಕವನಕ್ಕೆ ಸ್ಫೂರ್ತಿಯಲ್ಲವೆ. ಆ ಪ್ರೇಮ ನಮ್ಮದಾಗಲಿ ಬೇರೆಯವರದಾಗಲಿ ಅಥವಾ ನಾನು ಕಂಡ ಇಂಥ ನಿರ್ಜೀವ ವಸ್ತುಗಳದ್ದಾಗಲಿ. ಆ ಪ್ರೇಮದ ಸ್ಫೂರ್ತಿಯಲ್ಲಿ ಈ ರೀಮಿಕ್ಸ್ ಕವನ...

ಬಣ್ಣ
ನನ್ನ ಪ್ಯಾಂಟಿನ ಬಣ್ಣ
ನೀಲಿ ಜೀನ್ಸಿನ ಬಣ್ಣ
ನೀಲಿ ಜೀನ್ಸಿನ ಬಣ್ಣ

ನಾನು ಬಿಡಿಸಲು ಕೆಸರು
ಬಿಡುತಲೇದುಸಿರು
ತಿಕ್ಕಿದರೆ ಬಿಟ್ಟಿತು ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ

ಈ ನೀಲಿ ಪ್ಯಾಂಟಿನ ಬಣ್ಣ ಒಗೆಯುವುದಕಿಂತ ಮುನ್ನ
ಅಣಕಿಸಿ ನಗುವ ಹಾಗೆ ಆ ನೀಲಿ ಆಗಸವನ್ನ
ನಾ ತಂದು ರಿನ್ ಪುಡಿಯನ್ನ ನೀರಲ್ಲಿ ಬೆರೆಸಿ ಅದನ
ಪ್ಯಾಂಟನ್ನು ಮುಳುಗಿಸಿದಾಗ ಬಕೆಟೆಲ್ಲ ಅದರದೆ ಬಣ್ಣ

ಬಾನಿನಿಂದ ಇಳಿದುಬಂದ ನೀಲಿ ತಾರೆಯು
ಮೈಯ ತೊಳೆದು ಬಣ್ಣವನ್ನು ಬಿಟ್ಟು ಹೋಯಿತು
ಮೇಲೆ ಕುಳಿತು ನೋಡುತಲಿ ಮಿಟುಕಿಸಿ ಕಣ್ಣ
ನಸು ನಗೆ ಬೀರುತಿದೆ ಎಲ್ಲಿಯದೀ ಬಣ್ಣ

ಹೋಗುವುದು ಎಂದರೆ ಹೊಲಸು ಹೋಗಿದ್ದು ಪ್ಯಾಂಟಿನ ಬಣ್ಣ
ಬಿಟ್ಟ ಮೇಲೆ ಆ ಪ್ಯಾಂಟನ್ನ ಮುತ್ತಿತ್ತು ಈ ಬನಿಯನ್ನ
ಬನಿಯನ್ನಿಗಿಂತ ಬಿಳುಪು ಈ ನನ್ನ ಪ್ಯಾಂಟಿನ ಬಣ್ಣ
ಬಿಳುಪಿದ್ದ ಬನಿಯನ್ ಎಲ್ಲಾ ಈಗಂತು ನೀಲಿ ಬಣ್ಣ

ಬನಿಯನ್ನಿನ ನೀಲಿ ಬಣ್ಣ ಬಿಡಿಸಲಾಗದು
ಪ್ಯಾಂಟಿನ ಬಿಳುಪು ಬನಿಯನ್ನನ್ನು ಹೋಲುತಿಹುದು
ಪ್ಯಾಂಟು ಮತ್ತು ಬನಿಯನ್ನಿನ ಪ್ರೇಮಗೀತವು
ಬಿಡಿಸಲಾರದ ಬಣ್ಣದಂತೆ ಅಮರವಾದವು