Tuesday, December 29, 2009

ಗಾನ ಗಾರುಡಿಗನಿಗೊಂದು ನುಡಿ ನಮನ


ಹೈ ಸ್ಕೂಲ್ ಓದುತ್ತಿದ್ದಾಗ ಮೊದಲಬಾರಿ ಕೇಳಿದ್ದು. ಒಂದನೇ ಬಾರಿ ಕೇಳಿದಾಗಲೇ ಎಂದೂ ಮರೆಯಲಾಗದಷ್ಟು ಸಂತಸ ನೀಡಿದ ಹಾಡಾಗಿತ್ತು ಅದು. "ಕೋಡಗನ ಕೋಳಿ ನುಂಗಿತ್ತಾ...". ಆ ವಯಸ್ಸಿಗೆ ಸಾಹಿತ್ಯ ನಿಲುಕದಾಗಿತ್ತು. ಕೇವಲ ಹಾಡುಗಾರಿಕೆಯಿಂದಲೇ ಆ ಪದ್ಯ ಮನಸ್ಸಿಗೆ ಅಷ್ಟೊಂದು ಹತ್ತಿರವಾಗಿಬಿಟ್ಟಿತ್ತು. ನಂತರದ ದಿನಗಳಲ್ಲಿ ನನ್ನ ಜೀವನದಲ್ಲಿ ಆ ಗಾರುಡಿಗನ ಮೋಡಿ ನಿಲ್ಲದೇ ಸಾಗತೊಡಗಿತ್ತು. ಸುಗಮ ಸಂಗೀತದ ಬಹುದೊಡ್ಡ ಪ್ರಪಂಚಕ್ಕೆ ನನ್ನ ಕೈ ಹಿಡಿದು ಕೊಂಡೊಯ್ದಿತ್ತು. ಶಿಶುನಾಳರ ಬೇಂದ್ರೆಯವರ ಗೀತೆಗಳ ಅಧ್ಯಾತ್ಮವಾದ, ಕುವೆಂಪುರವರ ಕಾವ್ಯಸೊಗಡು, ಕೆ. ಎಸ್. ಎನ್. ರ ಪ್ರೇಮಮಯಿ ಸಂವೇದನೆ, ಲಕ್ಷ್ಮಣ್ ರಾವ್ ಅವರ ಹಾಸ್ಯಭರಿತ ಗೀತೆಗಳು ಎಲ್ಲವುದರ ಹಿಂದೆ ಆ ಮೋಡಿಗಾರನೇ ಕುಳಿತಿದ್ದ. ಇನ್ನೂ ಎಷ್ಟೋ. ಲೆಕ್ಕಕ್ಕೆ ಸಿಗದಷ್ಟು ಕೊಡುಗೆಗಳು, ಕನ್ನಡಕ್ಕೆ, ಆ ಗಂಧರ್ವ ಕಂಠದಿಂದ ಹೊರಹೊಮ್ಮಿತ್ತು. ಆದರೆ ಈ ಪಯಣದಲ್ಲಿ ಇನ್ನು ನಮ್ಮ ಕೈ ಹಿಡಿದು ಮುನ್ನೆಡೆಸುವವರಾರು? ಎಲ್ಲವೂ ಒಮ್ಮೆಯೇ ಇಲ್ಲವಾಯಿತೇ? ಈ ಪಯಣ ನಿಂತುಹೋಯಿತೇ? ನಮ್ಮ ಕಿವಿಗಳಿಗೆ ಆ ಮಧುರ ದನಿಯ ಆಸ್ವಾದನೆಯ ಯೋಗ ತೀರಿಹೋಯಿತೇ?

ಅಶ್ವಥ್‌ರನ್ನು ನೋಡುವ ಭಾಗ್ಯ ನನಗೆ ಒಮ್ಮೆಯೇ ಸಿಕ್ಕಿತ್ತು. ಅದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಯಾವುದೋ ಸಿನೆಮಾದ ಆಡಿಯೋ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಇವರೂ ಬಂದಿದ್ದರು. ನಾವು ನಮ್ಮ ನಾಟಕದ ರಿಹರ್ಸಲ್ ಎಲ್ಲಾ ಮುಗಿಸಿ ಹಾಗೆಯೇ ಕುತೂಹಲಕ್ಕೆ ಕಾರ್ಯಕ್ರಮಕ್ಕೆ ಇಣುಕಿದೆವು. ಕರ್ಯಕ್ರಮ ಕೊನೆಯ ಹಂತದಲ್ಲಿತ್ತು. ಬಂದವರೆಲ್ಲರದೂ ಒಂದೇ ಕೋರಿಕೆ. ಆಶ್ವಥ್ ಹಾಡಬೇಕು. ಎಲ್ಲರ ಕೋರಿಕೆಯನ್ನು ಆಶ್ವಥ್ ಈಡೇರಿಸದೆ ಇರಲಿಲ್ಲ. ಸಭೆಯಲ್ಲಿ ನಿಶ್ಶಬ್ಧ. ಕೇವಲ ಅಶ್ವಥ್‌ರವರ ಧ್ವನಿ ಕಾಲೇಜಿನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಪ್ರೇಕ್ಷಕರೆಲ್ಲರಿಗೂ ರೋಮಾಂಚನಗೊಳಿಸುವ ಸಂಗೀತದ ರಸದೌತಣ. ನಾನವರನ್ನು ಮುಖತಃ ಕಂಡಿದ್ದು ಅದೇ ಮೊದಲು ಅದೇ ಕೊನೆ. ಆದರೆ ಅವರನ್ನು ನೆನೆಯದ ದಿನ ಬಹುಷಃ ಒಂದೂ ಇಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು.

ಭಾವನೆಗಳೇ ಇಲ್ಲದ ದಿನವೊಂದನ್ನು ಊಹಿಸಲಾದರೂ ಸಾಧ್ಯವೆ? ಅದು ಇಲ್ಲವೆಂದಮೇಲೆ ಅಶ್ವಥ್‌ರನ್ನು ನೆನೆಯದ ದಿನವೂ ಒಂದೂ ಇಲ್ಲವೆನ್ನಬೇಕು. ಬೇಸರವಾದರೆ ಅವರ ಭಾವಗೀತೆ, ಸಂತಸವಾದರೂ ಅವರದೇ ಭಾವಗೀತೆ. ಉತ್ಸಾಹಗೊಂಡರೂ ಆಲಸ್ಯಗೊಂಡರೂ ಎಲ್ಲ ಭಾವಗಳಿಗೂ ಅವರದೇ ಭಾವಗೀತೆಗಳನ್ನು ಕೇಳುವ ಹವ್ಯಾಸ ನನ್ನದಾಗಿಬಿಟ್ಟಿದೆ. ಅವರು ನಮ್ಮನ್ನಗಲಿದ ಸುದ್ದಿ ಕೇಳಿದಾಗಲೂ ನಾನು ಕೇಳುತ್ತಲಿದ್ದುದು ಅವರದೇ ಗೀತೆ "ಮೌನ ತಬ್ಬಿತು ನೆಲವ ಚುಂಬಿನಿ ಪುಳಕಗೊಂಡಿತು ಧಾಮಿನಿ". ದೈಹಿಕವಾಗಿ ನಮ್ಮನ್ನಗಲಿದರೂ ನಮ್ಮೆಲ್ಲರ ಮನಗಳಲ್ಲಿ ನಿಮ್ಮ ಪ್ರತಿಷ್ಠಾಪನೆ ಎಂದೋ ಆಗಿಹೋಗದೆ. ನಿಮ್ಮ ಧ್ವನಿ ನಿಮ್ಮ ಗೀತೆಗಳು ಅಜರಾಮರ. ಶಿಶುನಾಳರ ಗೀತೆಗಳನ್ನು ಜನರಿಗೆ ತಲುಪಿಸಲೆಂದೇ ಅವರತಿರಿಸಿದ್ದಿರೆಂದೆನಿಸುವ ನಿಮಗೆ ನಾವು ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ನಮ್ಮ ಇನ್ನೊಂದೇ ಒಂದು ಕೋರಿಕೆಯನ್ನು ಈಡೇರಿಸಿಕೊಡಿ. ಮತ್ತೆ ಹುಟ್ಟಿ ಬನ್ನಿ.

Monday, December 21, 2009

ಪುರಷ್ - ಒಂದು ಸ್ತ್ರೀ ಕಥೆ!


ಬಹಳ ದಿನಗಳಿಂದ ನಮ್ಮ ಡೈರೆಕ್ಟರ್ ಸಿಕ್ಕಾಪಟ್ಟೆ ಬ್ಯುಸಿ ಆಗ್ಬಿಟಿದ್ರು. ಅಂತೂ ಇಂತೂ ಪುರುಸೊತ್ತು ಮಾಡ್ಕೊಂಡು ಮತ್ತೆ ನಾಟಕ ಶುರು ಮಾಡಿದಾರೆ!
ನಾಟಕ: ’ಪುರುಷ್’
ಮೂಲ: ಜಯವಂತ ದಳ್ವಿ
ಕನ್ನಡಕ್ಕೆ: ಎಚ್ ಕೆ ಕರ್ಕೇರ
ನಿರ್ದೇಶನ: ಪ್ರದೀಪ್

ಮರಾಠಿ ರಂಗಭೂಮಿಯಲ್ಲಿ "ಪುರುಷ್" ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿದೆ. ಜಯವಂತ ದಳ್ವಿಯವ ಬರಹ ಮೊದಲಿಗೆ ನಗಿಸುತ್ತದೆ. ನಗಿಸುತ್ತಲೇ ಕಟು ವಾಸ್ತವವನ್ನು ನಮ್ಮ ಮುಂದಿಡುತ್ತದೆ. "ಪುರುಷ್" ಅಂತಹುದೇ ಒಂದು ಪ್ರಯತ್ನ. ಹೆಣ್ಣಿನ ಮೇಲಿನ ದೌರ್ಜನ್ಯ, ಅವಳ ಮೇಲೆ ಪುರುಷ ಸಮಾಜ ಎಸಗುವ ಅತ್ಯಾಚಾರಗಳನ್ನು ಬಹಳಷ್ಟು ನಾಟಕಗಳು ಚಿತ್ರಿಸಲು ಪ್ರಯತ್ನ ಪಟ್ಟಿವೆ. ಆದರೆ "ಪುರುಷ್" ಅದನ್ನು ತೋರಿಸುವ ರೀತಿ ಅದ್ವಿತೀಯ. ಇದು ಕೇವಲ ದೌರ್ಜನ್ಯಕ್ಕೊಳಗಾಗುವ ಅಸಹಾಯಕ ದುರ್ಬಲ ಹೆಣ್ಣಿನ ಕಥೆಯಲ್ಲ. ಪ್ರವಾಹದ ವಿರುದ್ಧ ಸಾಗಿ ಗುರಿಮುಟ್ಟುವ ಕಥೆ.

ಜಯವಂತ ದಳ್ವಿಯವರು ಘಾಸಿಗೊಳಗಾದ ಸ್ತ್ರೀ ಹೃದಯದ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪುರುಷ ವಿಕೃತ ಮತ್ತು ಅಧಿಕಾರದ ವಿಡಂಬನೆಗಳನ್ನು ನ್ಯಾಯಯುತವಾಗಿ ಚಿತ್ರಿಸಿದ್ದಾರೆ. ಶೋಷಿತರ ಜೊತೆಗಿರುವುದು ಅವರ ಆತ್ಮಸ್ಠೈರ್ಯ ಅಷ್ಟೇ. ಸ್ವಂತಕ್ಕಾದ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸಂಗಾತಿ ಕೇವಲ ತಮ್ಮದೇ ಆತ್ಮಬಲ ಎನ್ನುವುದು ಸುಂದರವಾಗಿ ಬಿಂಬಿತವಾಗಿದೆ. ಎಚ್. ಕೆ. ಕರ್ಕೇರ ಅವರು ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ. ಹಾಸ್ಯ ಸರಸಗಳಿಂದ ಪ್ರಾರಂಭವಾಗುವ ನಾಟಕ ಬದುಕಿನ ಕರಾಳ ಸತ್ಯಗಳನ್ನು ಪ್ರೇಕ್ಷಕನ ಎದುರು ತಂದು ನಿಲ್ಲಿಸುತ್ತದೆ.

ಪ್ರದರ್ಶನ:
ಸ್ಥಳ: ಎಚ್ ಎನ್ ಕಲಾಕ್ಷೇತ್ರ
ದಿನಾಂಕ: 26-12-2009
ಸಮಯ: ಸಂಜೆ 7 ಕ್ಕೆ

ಬಿಡುವು ಮಾಡಿಕೊಂಡು, ದಂಪತಿ/ಸ್ನೇಹಿತ/ಸ್ನೇಹಿತೆಯರ ಜೊತೆಗೂಡಿ ಬಂದು ನಾಟಕ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.

Monday, November 2, 2009

ಬೊಂಬೆಯಾಟವಯ್ಯಾ...


"ಈ ಯಪ್ಪನಿಗೆ ಬೇರೆ ಕೆಲ್ಸಾ ಇಲ್ವಾ? ಒಂದಾದ್ರು ಕಂಪನಿ ಸರಿಯಾಗಿ ನೆಡಸ್ಕೊಂಡ್ ಹೋಗೋದ್ ಬ್ಯಾಡ್ವಾ... ಬರೀ ಇದೇ ಆಯ್ತು. ಕಂಪನಿ ಮಾಡೋದು... ಮಾರೋದು"
ಮನೆಯಲ್ಲಿ ನನ್ನ ಈಗಿನ ಕಂಪನಿಯ CEO ಬಗ್ಗೆ ಮಾತಾಡ್ತಾ ಇದ್ರು. ಈತ ಮಾಡೋದೂ ಹೀಗೇ. Starent Networks ಇವನ ಐದನೇ ಕಂಪನಿಯಂತೆ! ಒಟ್ನಲ್ಲಿ ಈ ಕಂಪನಿಯನ್ನ ಟೆಲಿಕಾಮ್ ದಿಗ್ಗಜ cisco ತಗೊಂಡ್ ಬಿಟ್ಟಿದೆ. ಈಗ ನಮ್ಮ ಪರಿಸ್ಥಿತಿ ಹಾಗೆ ನೋಡಿದ್ರೆ ಏನೂ ಚಿಂತಾಜನಕ ಪರಿಸ್ಥಿತಿ ಏನೂ ಅಲ್ಲ. ಎಲ್ಲರಿಗೂ ಕೆಲಸ ಇರುತ್ತೆ ಅಂತೆಲ್ಲ ಭಾಷಣ ಮಾಡಿ ಆಗಿದೆ. ಆದರೂ ಮನಸ್ಸಿನಲ್ಲಿ ತನ್ನಿಂತಾನೇ ಹುಟ್ಟಿಕೊಂಡ್ಬಿಡೋ ಈ ಅಸುರಕ್ಷಿತ ಭಾವನೆ ಯಾರು ಹೇಗೆ ತಡೆಯೋಕೆ ಪ್ರಯತ್ನ ಪಟ್ರೂ ತಡೆಯೋದು ಸಾಧ್ಯ ಇಲ್ಲ ಅನ್ಸತ್ತೆ. ಏನೇ ಹೇಳಿ, ಯಾರೇ ಸಮಾಧಾನ ಮಾಡಿದ್ರೂ, ಸಮಾಧಾನಾನೇ ಮಾಡ್ಕೋಬಾರ್ದು ಅಂತಿರೋರಿಗೆ ಹೇಗೆ ಸಮಾಧಾನ ಆಗ್ಬೇಕು!

ಈ ಸಂದರ್ಭದಲ್ಲಿ "ಬೊಂಬೆಯಾಟವಯ್ಯಾ" ರೀಮಿಕ್ಸ್ ನಿಮ್ಮೆಲ್ಲರಿಗಾಗಿ.

ಬೊಂಬೆಯಾಟವಯ್ಯಾ... ಇದು ಬೊಂಬೆಯಾಟವಯ್ಯಾ
ಅವನೋ ಪರಾರಿ ನೋಡೋ ಮುರಾರಿ ಕೆಲಸವನುಳಿಸಯ್ಯಾ

ಯೇನು ಕಾರಣ ಯಾವ ತೊಂದರೆ ಏಕೆ ಮಾರಿದನೊ ನಾ ಅರಿಯೆ
ಯಾರ ಟೀಮಿಗೆ ಯಾವ ಕೆಲಸಕೆ ಎಲ್ಲಿ ನೂಕುವರೊ ನಾ ಅರಿಯೆ
ಕುಣಿಸಿದಂತೆ ಕುಣಿವೆ ಒದ್ದೋಡಿಸಿದರೋಡುವೆ
ಈ ಕಂಪನಿ ಆ ಕಂಪನಿ ಜಿಗಿದು ಜಿಗಿದು ದಣಿವೆ

3G ಹೋದರೂ 4G ಬಂದರೂ ಬದಲಾದುದೇನು ನಾ ತಿಳಿಯೆ
ಯಾವ ತಂತ್ರಕು ಯಾವ ಮಂತ್ರಕು ನನ್ನ ಕೊಡುಗೆಯೇನು ನಾ ತಿಳಿಯೆ
ಕಾಪಿ ಪೇಸ್ಟ್ ಮಾಡುವೆ ನಾನೆ ಬರೆದೆ ಎನುವೆ
ಅಕಾಶವೆ ಮೇಲ್ಬೀಳಲಿ ಸಂಬಳಕ್ಕಾಗಿಯೇ ದುಡಿವೆ

Tuesday, October 6, 2009

ಲಂಚಾಸುರನನು ನೋಡಲ್ಲಿ...


ರಾಷ್ಟ್ರಕವಿ ಕುವೆಂಪುರವರ ಕ್ಷಮೆ ಕೋರಿ, ಅವರ "ಉಳುವಾ ಯೋಗಿಯ ನೋಡಲ್ಲಿ" ಗೀತೆಯ ರೀಮಿಕ್ಸ್ ಮಾಡಿದ್ದೇನೆ. ಈಗ ಉಳುವಾ ಯೋಗಿಗಳು ಬಹಳ ಅಪರೂಪ ಆಗ್ಬಿಟ್ಟಿದಾರೆ ಬಿಡಿ. ಒಂದೇ ದುಡ್ಡಿನ ಆಸೆಗೋಸ್ಕರ ಭೂಮಿಯನ್ನ ಮಾರಿಬಿಡ್ತಾರೆ! ಇಲ್ಲಾ ಅಂದ್ರೆ ಆಲಸ್ಯ ಬಂದು ದುಡಿಯದೆ ಭೂಮಿಯನ್ನು ಬಂಜರು ಮಾಡ್ಬಿಡ್ತಾರೆ. ಇನ್ನು ನಿಜವಾಗ್ಲೂ ಬೆಳೆ ಬೆಳೀಬೇಕು ಅನ್ನೋರಿಗೆ ಸಾವಿರಾರು ತೊಂದರೆಗಳು. ನೀರಿಲ್ಲ... ಮಳೆ ಸರಿಯಾಗಿ ಬರುವುದಿಲ್ಲ. ಬಂದರೆ ಎಲ್ಲವನ್ನೂ ಮುಳುಗಿಸಿಬಿಡುವಂಥಾ ಪ್ರಳಯ! ಎಲ್ಲಾ ಇದ್ದರೂ ಆರ್ಥಿಕ ತೊಂದರೆ, ಗೊಬ್ಬರ ಇಲ್ಲ. ಒಟ್ಟಿನಲ್ಲಿ ರೈತರೇ ಕಮ್ಮಿ ಆಗ್ತಿರೋ ಈ ಕಾಲದಲ್ಲಿ ಒಬ್ಬರ ಸಂಖ್ಯೆ ಮಾತ್ರ ದಿನೇ ದಿನೇ ಏರುತ್ತಾ ಇದೆ. ಅವರೇ ಲಂಚಾಸುರರು. ನಾನು ಬರೀ ಸರ್ಕಾರೀ ಕ್ಷೇತ್ರವೊಂದನ್ನೇ ಉದ್ದೇಶಿಸಿ ಹೇಳುತ್ತಾ ಇಲ್ಲ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ತಾವು ಮಾಡುತ್ತಾ ಇರುವ ಕರ್ತವ್ಯಕ್ಕೇ ಸಂಬಳಕ್ಕಿಂತ ಹೆಚ್ಚು ಆಸೆ ಪಡುತ್ತಿರುವವರ ಸಂಖ್ಯೆಯೇ ಜಾಸ್ತಿ. ಮನುಕುಲದ ದುರಾಸೆಯೆಂಬ ಆಸುರೀ ಪ್ರವೃತ್ತಿಗೆ ಬಹುಷಃ ಕಡಿವಾಣವಿಲ್ಲ.


ವಂಚಿಸಿ ದುಡಿದಾ ಹಣದೊಳು ಮುಳುಗಿದ ಲಂಚಾಸುರನನು ನೋಡಲ್ಲಿ
ಲಂಚವ ತಿನ್ನದೆ ಸೇವೆಯ ಮಾಡುವ ಮನುಜರು ಜಗದೊಳು ದುರ್ಲಭವೋ
ಪರರಾ ಕಷ್ಟಕೆ ಗಮನವ ಕೊಡದೆಲೆ ಸ್ವಾರ್ಥವೆ ಜೀವನ ಸಾಧನೆಯೋ
ಲಂಚಾಸುರನನು ನೋಡಲ್ಲಿ ಲಂಚಾಸುರನನು ನೋಡಲ್ಲಿ

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ಕಾಂಗ್ರೆಸ್ ಇರಲಿ ಬಿಜೇಪಿ ಬರಲಿ ನಡೆಯಲಿ ಗೌಡರ ಗದ್ದಲವೋ
ಮುತ್ತಿಗೆ ಹಾಕಲಿ ಲೋಕಾಯುಕ್ತ ಲಂಚವ ಪಡೆವುದ ಬಿಡುವುದೆ ಇಲ್ಲ

ಯಾರಿಗು ಹೇಳದೆ ಮೂರಂತಸ್ಥಿನ ಮನೆಯನು ಕಟ್ಟಿಸಿ ಸುಖಿಸುವನೊ
ಮಡದಿ ಮಕ್ಕಳ ಸುಖವಾಗಿರಿಸಲು ಪರರಿಗೆ ಕಷ್ಟವ ನೀಡುವನೊ
ಇವನಿಗೆ ದಾಹವೆ ಪ್ರಕೃತಿಯ ಧರ್ಮ ದಾಹವ ನೀಗುವುದೆಲ್ಲರ ಕರ್ಮ

Tuesday, March 31, 2009

ನಾಡಿ ಭವಿಷ್ಯ... ಒಂದು ಅನುಭವ.


ಮೊನ್ನೆ ನಮ್ಮ ಡೈರೆಕ್ಟರ್ ಮಗನ ನಾಮಕರಣದ ಕಾರ್ಯಕ್ರಮದಲ್ಲಿ ಕುಳಿತು ಹರಟುತ್ತಿದ್ದೆವು. ಜಾತಕ ಭವಿಷ್ಯ ಅದು ಇದು ಸುದ್ದಿಗಳು ಬರತೊಡಗಿದ್ದವು. ನಾನೂ ಕೆಲವು ಕೇಳಿದ ಅಂತೆ ಕಂತೆಗಳನ್ನು ಅಲ್ಲಿ ಹೇಳತೊಡಗಿದೆ. ನಾಡಿ ಭವಿಷ್ಯದ ಬಗ್ಗೆ! ನಮ್ಮ ಹೆಸರು, ಮನೆಮಂದಿಯ ಹೆಸರು, ನಾವು ಇದುವರೆಗೆ ಮಾಡಿದ ಪ್ರತಿಯೊಂದೂ ಕೆಲಸಗಳು ಆ ಗ್ರಂಥದಲ್ಲಿ ಎಷ್ಟೋ ವರ್ಷಗಳ ಮೊದಲು ಋಷಿಮುನಿಗಳು ಬರೆದಿಟ್ಟಿದ್ದಾರಂತೆ! ನಮ್ಮ ಹೆಬ್ಬೆಟ್ಟಿನ ಗುರುತು ಮತ್ತು ಹುಟ್ಟಿದ ದಿನಾಂಕ ಕೊಟ್ಟರೆ ಅದನ್ನು ಹುಡುಕಿ ನಮ್ಮ ಮುಂದೆ ಓದುತ್ತಾರಂತೆ... ಹಾಗೆ... ಹೀಗೆ... ಎಂದು. ಎಲ್ಲರೂ ಇದೇನೂ ಹೊಸತಲ್ಲ ಎನ್ನುವಂತೆ ಕೇಳುತ್ತಿದ್ದರು. ಹೇಮಂತ ಮಾತ್ರ ಸ್ವಲ್ಪ ಆಸಕ್ತಿ ತೋರಿ, ಅಂಥದ್ದು ಬೆಂಗಳೂರಿನಲ್ಲಿ ಎಲ್ಲಿದೆ ಎಂದು ವಿಚಾರಿಸಿದ. ಯಾವುದೋ ಕಾಲದಲ್ಲಿ ಆಸಕ್ತಿ ಹುಟ್ಟಿ ನಾನು ಇಂಟರ್ನೆಟ್‌ನಲ್ಲಿ ಹುಡುಕಿ ಇಟ್ಟಿದ್ದೆ. ಅದನ್ನೇ ನಾಳೆ ಕಳಿಸುತ್ತೇನೆ. ನಾನು ವಿಚಾರಿಸಿಲ್ಲ. ನೀನೇ ಹೋಗಿ ವಿಚಾರಿಸು ಎಂದು ಅವನಿಗೇ ಬಕ್ರಾ ಮಾಡುವ ಕಾರ್ಯಕ್ರಮ ಮುಂದಿಟ್ಟೆ.

ಮನುಷ್ಯನಿಗೆ ತನ್ನ ಜೀವನದಲ್ಲಿ ಮುಂದಾಗುವ ಘಟನೆಗಳನ್ನು ತಿಳಿದುಕೊಳ್ಳುವ ಕುತೂಹಲ ನಿನ್ನೆ ಮೊನ್ನೆಯದಲ್ಲ. ಬಹುಷಃ ಅವನು ಹುಟ್ಟಿದಾಗಿನಿಂದಲೇ ಈ ಕುತೂಹಲವೂ ಹುಟ್ಟಿಕೊಂಡು ಬಂದಿದೆ. ಹಾಗೆ ತಿಳಿದುಕೊಳ್ಳುವುದು ಸಾಧ್ಯವೋ ಅಸಾಧ್ಯವೋ ಗೊತ್ತಿಲ್ಲ. ತಿಳಿದುಕೊಳ್ಳುವುದು ಎಷ್ಟು ಸರಿ ಎನ್ನುವುದು ಮಾತ್ರ ಬಗೆಹರಿಯದ ಪ್ರಶ್ನೆ. ಅಕಸ್ಮಾತ್ ಹಾಗೆ ತಿಳಿದುಕೊಳ್ಳುವುದಾದರೆ ಮುಂದೆ ಬರುವ ಗಂಡಾಂತರಗಳನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಕೆಲವರ ವಾದವಾದರೆ, ಹಾಗೆ ತಿಳಿದುಕೊಂಡಾಕ್ಷಣ ನಮ್ಮ ಬುದ್ಧಿ ಅದೇ ದಾರಿಯಲ್ಲಿ set ಆಗಿಬಿಡುತ್ತದೆ. ಬೇರೆಯ ರೀತಿಯಲ್ಲಿ ವಿಚಾರಿಸುವ ವಿವೇಚನೆಯೇ ನಮ್ಮಿಂದ ಹೊರಟುಹೋಗುತ್ತದೆ ಎನ್ನುವುದು ಇನ್ನು ಕೆಲವರ ಹೇಳಿಕೆ. ಒಟ್ಟಿನಲ್ಲಿ ಇದು ಸರಿಯೋ ತಪ್ಪೋ ಗೊತ್ತಿಲ್ಲ. ನನಗಂತೂ ಅಕಸ್ಮಾತ್ ಹೀಗೆ ಕೆಲವು ಗ್ರಂಥಗಳು ಇರುವುದಾದರೆ, ಅದೂ ಅಲ್ಲದೆ ಅದರಲ್ಲಿ ನಮ್ಮ ಬಗ್ಗೆ ಸವಿವರವಾಗಿ ಬರೆದುಕೊಂಡಿದೆಯಾದರೆ ಯಾಕೆ ಒಮ್ಮೆ ನೋಡಿಬರಬಾರದು ಎನ್ನುವ ಕುತೂಹಲ. ನಮ್ಮ ಬುದ್ಧಿ ನಮ್ಮ ಕೈಲಿದ್ದರೆ ಯಾವ ಭವಿಷ್ಯತಾನೆ ಏನು ಮಾಡೀತು ಎನ್ನುವುದು ನನ್ನ ಧೋರಣೆ.

ಹೇಮಂತ ಹೀಗೆ ಕೇಳಿ ಹಾಗೆ ಬಿಟ್ಟುಬಿಡುತ್ತಾನೆ ಎಂದುಕೊಂಡಿದ್ದೆ. ಆದರೆ ಮಹಾನುಭಾವ ಹೋಗಿ ಅವನ ಮತ್ತು ಅವನ ತಾಯಿಯ ಬಗ್ಗೆ ನಾಡಿ ಶಾಸ್ತ್ರ ಕೇಳಿಕೊಂಡು ಬಂದೇಬಿಟ್ಟಿದ್ದ. ನನಗೆ ಫೋನ್ ಮಾಡಿ ನನ್ನ ಜೀವನದಲ್ಲಿ ಆಗಿರುವ ಈವರೆಗಿನ ಘಟನೆಗಳನ್ನು ಖಡಾಖಂಡಿತವಾಗಿ ಹೇಳಿದ್ದಾರೆ. ನೂರಕ್ಕೆ ತೊಂಬತ್ತೈದರಷ್ಟು ಸತ್ಯ ಎಂದಾಗ ನನಗಂತೂ ಕುತೂಹಲ ಎರಡುಪಟ್ಟಾಯಿತು. ಹೋದರೆ ಮುನ್ನೂರು ರೂಪಾಯಿ. ಬಂದರೆ ನನ್ನ ಭವಿಷ್ಯ ಮತ್ತು ಇಂಥಹ ಒಂದು ವಿಜ್ನಾನಕ್ಕೇ ಸವಾಲೆಸಗುವುದರ ಬಗ್ಗೆ ತಿಳಿದುಕೊಂಡಂತಾಗುತ್ತದೆ ಎಂದು ಹೋಗಲೇಬೇಕು ಎಂದು ನಿರ್ಧರಿಸಿದೆ. ಮೊನ್ನೆ ಭಾನುವಾರ ಹೋಗಿ ಹೆಬ್ಬೆರಳಿನ ಗುರುತು ಮತ್ತು ಹುಟ್ಟಿದ ದಿನಾಂಕ ಕೊಟ್ಟು ಬಂದೆ. ಅದೇ ದಿನ ಸಂಜೆ ಕರೆಮಾಡಿ, ನಿಮ್ಮ ತಾಳೆಗರಿ ಸಿಕ್ಕರೆ ತಿಳಿಸುತ್ತೇವೆ ಎಂದರು. ಅವರಿಗೆ ಫೋನ್ ಯಾವಾಗ ಮಾಡುತ್ತೇನೋ ಅನಿಸುತ್ತಿತ್ತು. ಫೋನ್ ಮಾಡಿದಾಗ ಇವತ್ತು ಸಂಜೆ ಬಂದವರಲ್ಲವೋ? ಹುಟ್ಟಿದ ವರ್ಷ 1980 ಎಂದಾಗ ನಾನು ಸರಿಪಡಿಸಿದೆ. ಅಲ್ಲ ಅದು 1983 ಎಂದು. ಮತ್ತೆ ಈ ವರ್ಷದ ತಾಳೆಗರಿ ಹುಡುಕಬೇಕು ಮತ್ತೆ ಹೆಬ್ಬೆರಳಿನ ಗುರುತಿಗೆ ಹೊಂದಿಸಬೇಕು ಎಂದುಕೊಳ್ಳುತ್ತಿರುವಾಗಲೇ, ಓ ಹೌದಾ... ಪರವಾಗಿಲ್ಲ ಅದೂ ಸಿಕ್ಕಿದೆ, ನಾಳೆ ಐದು ಘಂಟೆಗೆ ಬಂದುಬಿಡಿ ಎಂದರು. ಆಗಲೇ ನನ್ನ ಅನುಮಾನ ಶುರುವಾಗಿಹೋಯ್ತು. ಅಷ್ಟು ಬೇಗ ಹೇಗೆ ಹುಡುಕಿದರು? ಹಾಗಿ ಹುಡುಕುವುದಾಗಿದ್ದರೆ ಮೊದಲು ಸಂಜೆ ಕರೆಮಾಡಿ ಎಂದು ಯಾಕೆ ಹೇಳಿದ್ದರು? ಏನೋ ಇರಬೇಕು. ನನಗೆ ನಾನೇ ಸಮಾಧಾನ ತಂದುಕೊಂಡೆ.

ಅಫೀಸಿನಲ್ಲಿ ಏನೋ ನೆಪ ಹೇಳಿ ಸರಿಯಾಗಿ ಐದು ಘಂಟೆಗೆ ಅಲ್ಲಿ ಹಾಜರಾದೆ. ಒಂದು ಹತ್ತು ನಿಮಿಷ ಕಾದಬಳಿಕ ನನ್ನನ್ನು ಒಂದು ರೂಮಿನಲ್ಲಿ ಕರೆದುಕೊಂಡು ಹೋದರು. ಅಲ್ಲಿ ಒಂದು ಮೇಜು ನಾಲ್ಕಾರು ಕುರ್ಚಿಗಳು ಒಂದು ಟೇಪ್ ರೆಕಾರ್ಡರ್ ಇತ್ತು. ಅಲ್ಲೇ ಒಂದು ಹತ್ತು ನಿಮಿಷ ಕಾದಬಳಿಕ ಒಬ್ಬಾತ ತನ್ನ ಕೈಯಲ್ಲಿ ತಾಳೆಗರಿಯ ಒಂದು ಕಟ್ಟನ್ನು ಹಿಡಿದುಕೊಂಡು ಬಂದು ನನ್ನ ಎದುರು ಮೇಜಿನ ಅತ್ತಕಡೆಯ ಕುರ್ಚಿಯಲ್ಲಿ ಕುಳಿತುಕೊಂಡ. ಅವನ ಜೊತೆ ಒಬ್ಬ ಹೆಂಗಸು ಅವನು ತಮಿಳಿನಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಅನುವಾದಿಸಲು. ಮತ್ತೊಬ್ಬ ಮೂಕ ಪ್ರೇಕ್ಷಕ. "ಈಗ ತಾಳೆಗರಿ ಯಾವುದು ಎನ್ನುವುದನ್ನು ಹುಡುಕುತ್ತೇವೆ" ಎಂದು ಅವಳು ನನಗೆ ಹೇಳಿದ ಕೂಡಲೆ ಆತ ತಾಳೆಗರಿಗಳನ್ನು ಓದಲು ಶುರುಮಾಡಿಕೊಂಡ. ’ಮಣ ಮಣ ಮಣ ನಾಡಿ... ಮಣ ಮಣ#$% %$#@$% @#$%@ ಕಳಂಬು ಕಳಂಬು ನಿಮ್ಮ ಹೆಸರು ’ಪ’ ದಿಂದ ಶುರು ಆಗುತ್ತದೆಯೇ?"
"ಇಲ್ಲ"
’ಮಣ ಮಣ ಮಣ ನಾಡಿ... ಮಣ ಮಣ#$% %$#@$% @#$%@ ಕಳಂಬು ಕಳಂಬು ನಿಮಗೆ ಮದುವೆ ಆಗಿದೆಯೇ?"
"ಹೌದು"
’ಮಣ ಮಣ ಮಣ ನಾಡಿ... ಮಣ ಮಣ#$% %$#@$% @#$%@ ಕಳಂಬು ಕಳಂಬು ನಿಮ್ಮ ತಮ್ಮನಿಗೂ ಮದುವೆಯಾಗಿದೆಯೇ?"
"ತಮ್ಮನಿಗೆ ಮದುವೆ ಆಗಿಲ್ಲ"
"ನಿಮ್ಮ ಅಣ್ಣನ ಹೆಸರು ’ಸ’ ದಿಂದ ಶುರುವಾಗುತ್ತದೆಯೇ?"
"ನನಗೆ ಅಣ್ಣ ಇಲ್ಲ"
ಹೀಗೆ ಪ್ರತಿಯೊಂದೂ ಪ್ರಶ್ನೆಗೆ ನನ್ನ ಉತ್ತರ "ಅಲ್ಲ" ಎಂದಾದಾಗ ಆ ತಾಳೆಗರಿಯನ್ನು ತೆಗೆದು ಪಕ್ಕದಲ್ಲಿಡುತ್ತಿದ್ದ. ಅದು ನನ್ನದಲ್ಲ ಎಂದು. ಅವನ ಪ್ರಶ್ನೆಗಳು ಮುಂದುವರಿದವು. ಬಹುಷಃ ಆತ ಕಮ್ಮಿಯೆಂದರೂ ನೂರೈವತ್ತು ಇನ್ನೂರು ಪ್ರಶ್ನೆಗಳನ್ನು ಕೇಳಿರಬಹುದು. ನನ್ನ ಹೆಸರು ಮೂರು ಅಕ್ಷರದ್ದೇ? ಅದರಲ್ಲಿ ದ ಬರುತ್ತದೆಯೇ? ರ ಬರುತ್ತದೆಯೇ? ಮೊದಲನೆಯದು ಸ ಕೊನೆಯದು ಥ? ಹೀಗೇ ನನ್ನ ಹೆಂಡತಿಯ ಹೆಸರು ಅಪ್ಪನ ಹೆಸರು ತಾಯಿಯ ಹೆಸರು ಎಲ್ಲವನ್ನೂ ಕೇಳಿಯೇ ತಿಳಿದುಕೊಂಡ. ಆದರೆ ಪೂರ್ತಿಯಾಗಿ ಅಲ್ಲ. ಎಷ್ಟನೇ ಅಕ್ಷರ ಯಾವುದು ಎಂದು. ಒಂದು ಪ್ರಶ್ನೆ ನನ್ನ ಬಗ್ಗಾದರೆ ಇನ್ನೊಂದು ನನ್ನಪ್ಪನ ಬಗ್ಗೆ. ಇನ್ನೊಂದು ಹೆಂಡತಿಯ ಬಗ್ಗೆ. ಒಟ್ಟಿನಲ್ಲಿ ಉತ್ತರಿಸುವವರಿಗೆ ತಾನು ಎಲ್ಲವನ್ನೂ ಹೇಳುತ್ತಿದ್ದೇನೆ ಎಂದೇ ಎನಿಸಿರಬಾರದು. ಹಾಗಿರುತ್ತಿದ್ದವು ಅವನ ಪ್ರಶ್ನೆಗಳು. ಕೊನೆಯದಾಗಿ ಅವನಿಗೆ ಎಲ್ಲವೂ ತಿಳಿಯಿತು ಎಂದಾದಕೂಡಲೇ ನಿಮ್ಮ ಹೆಸರು ಸಿದ್ಧಾರ್ಥ ನಿಮ್ಮ ತಂದೆ ಕಮಲಾಕರ ತಾಯಿ ಸುನಂದಾ ಹೆಂಡತಿ ಪೂರ್ಣಿಮಾ ಹೌದಾ? ಹೌದು ಎಂದಾದಕೂಡಲೇ ನನ್ನ ತಾಳೆಗರಿ ಸಿಕ್ಕಿಯೇಬಿಟ್ಟಿತು ಎನ್ನುವ ತರಹ ಅದನ್ನು ತೆಗೆದುಕೊಂಡು ಮತ್ತೆ ಇನ್ನೊಂದು ಕೋಣೆಗೆ ತೆರಳಿದ.

ನನಗೆ ಆಗಲೇ ಅರ್ಥವಾಗಿಹೋಗಿತ್ತು. ಇವರು ಯಾವ ನಾಡಿಗ್ರಂಥವನ್ನೂ ಓದುತ್ತಿಲ್ಲ. ಕೇವಲ ಪ್ರಶ್ನೆಗಳನ್ನು ಕೇಳಿ ನನ್ನನ್ನೇ ಮೂರ್ಖನನ್ನಾಗಿಸುತ್ತಿದ್ದಅರೆ ಎಂದು. ಕಳಂಬು ಕಳಂಬು ಎನ್ನುವುದು, ಒಂದು ಕಲ್ಲು ಒಗೆಯುವುದು. ಬಿದ್ದರೆ ಮಾವಿನಕಾಯಿ ಹೋದರೆ ಕಲ್ಲು. ಈ ಕಳಂಬುಗಳನ್ನು ಕೇಳಲಿಕ್ಕೆ ಮುನ್ನೂರು ರೂಪಾಯಿ ತೆತ್ತುದಕ್ಕೆ ಹೇಮಂತನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತಲಿತ್ತು. ಆದರೂ ಈಗ ಯಾವುದೋ ಗರಿ ತರುತ್ತಾನಂತಲ್ಲಾ... ಅದರಲ್ಲಾದರೂ ಸರಿಯಾಗಿರಬಹುದು. ಇವೆಲ್ಲಾ ಒಂದು ಬಿಲ್ಡ್‌ಅಪ್ ಕೊಡಲಿಕ್ಕಿರಬಹುದು ಎಂದೂ ಅನಿಸುತ್ತಿತ್ತು. ಮತ್ತೆ ಅದೇ ಮೂರು ಜನ ಮತ್ತೊಂದು ತಾಳೆಗರಿ ಕಟ್ಟನ್ನು ಹಿಡಿದುಕೊಂಡು ಬಂದು ನನ್ನ ಮುಂದೆ ಕುಳಿತರು. ಆದರೆ ಈಸಲ ವಿಶೇಷ ಎಂದರೆ ನನ್ನ ಕುಂಡಲಿಯನ್ನು ಅವನು ಒಂದು ಪಟ್ಟಿಯಲ್ಲಿ ಬರೆದುಕೊಂಡು ಬಂದಿದ್ದ. ಅದರ ಜೊತೆಗೆ ಒಂದಿಷ್ಟು ಟಿಪ್ಪಣಿಗಳನ್ನೂ ಬರೆದುಕೊಂಡಿದ್ದ. ಅದರ ಮೇಲೆಯೇ ಅವನ ತಾಳೆಗರಿ ಕಟ್ಟನ್ನು ಇಟ್ಟುಕೊಂಡು ಓದಲು ಸಿದ್ಧನಾದ. ಅವನ ಪಕ್ಕದಲ್ಲಿದ್ದ ಅನುವಾದಕಿ ಟೇಪ್ ರೆಕಾರ್ಡರ್‌ಗೆ ಹೊಸ ಕೆಸೆಟ್ ಹಾಕಿ ರೆಡಿ ಮಾಡಿದಳು. ಶುರುವಾಯಿತು ನನ್ನ ಭವಿಷ್ಯವಾಚನ.

ಅದೇ ಹಳೆಯ ಪುರಾಣ ಮತ್ತೆ ಹೇಳಲ್ಪಟ್ಟಿತು. ನಿನ್ನ ಹೆಸರು ಇದು. ನಿನ್ನಪ್ಪನ ಹೆಸರು ಇದು. ತಾಯಿ, ಹೆಂಡತಿ ಎಲ್ಲಾ ಬಂದು ಹೋದರು. ಆಮೇಲೆ ಆಗಲೇ ನಾನೇ ಹೇಳಿದ್ದ ಕೆಲವು ಉತ್ತರಗಳ ಪುನರಾವಲೋಕನ. ಸ್ವಲ್ಪ ಬೇರೆ ರೀತಿಯಲ್ಲಿ. ಆಗ ನಾನು ನನ್ನ ತಂದೆಗೆ ಸ್ವಲ್ಪ ಪೊಲಿಟಿಕಲ್ ಕಾಂಟ್ಯಾಕ್ಟ್ಸ್ ಇದೆ ಎಂದು ಹೇಳಿದ್ದರೆ, ಈಗ ಅವರಿಂದ ಬಂದ ಭವಿಷ್ಯವೇನೆಂದರೆ, ನಿಮಗೆ ಆಗದೇ ಇರುವವರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಸಹಿಸದ ಕೆಲವರು ಕುತಂತ್ರ ಮಾಡುತ್ತಾರೆ ಇತ್ಯಾದಿ ಇತ್ಯಾದಿ. ಅಲ್ಲಿ ಯಾವುದೇ ಗ್ರಂಥವಿಲ್ಲ ಎಂಬುದಂತೂ ನನಗೆ ಗೊತ್ತಾಗಿಹೋಗಿತ್ತು. ಆದರೆ ಈ ಮನುಷ್ಯನಿಗೆ ಕುಂಡಲಿ ಹಾಕಿಕೊಟ್ಟರೂ ಜಾತಕ ಹೇಳಲು ಬರುತ್ತಿಲ್ಲ ಎನ್ನುವುದು ಗೊತ್ತಾಯಿತು. ಒಟ್ಟಿನಲ್ಲಿ ನನಗೆ ಈಗ ಸಿಕ್ಕಾಪಟ್ಟೆ ಗಂಡಾಂತರಗಳಿವೆ. ಬೋನಸ್ ಸಿಗುವುದಿಲ್ಲ. ಪ್ರಮೋಷನ್ ಸಿಗುವುದಿಲ್ಲ. ಬಹುಷಃ ಅವನಿಗೆ ರೆಸೆಷನ್ ಬಗ್ಗೆ ತಿಳಿದಿರಬೇಕು! ಈ ಎಲ್ಲ ತೊಂದರೆಗಳ ನಿವಾರಣೆಗೆ ನಮ್ಮ ಗುರುಗಳು ನಲವತ್ತೆಂಟು ದಿನಗಳ ಕಾಲ ಗಣಪತಿಯ ಉಪಾಸನೆ ಮಾಡುತ್ತಾರೆ. ಅದಕ್ಕೆ ದಿವಸಕ್ಕೆ 50ರುಪಾಯಿ ಆಗುತ್ತದೆ. ಒಟ್ಟೂ 2400ರೂ. ನಾನು ’ನಮಸ್ಕಾರ’ ಹೇಳಿ ಎದ್ದುಬಂದೆ.

ನ್ಯಾಯವಾಗಿ ಬದುಕಲಿಕ್ಕೆ ಸಾವಿರ ಮಾರ್ಗಗಳಿವೆ. ಸುಳ್ಳುಹೇಳಿ ಜನರಿಗೆ ಮೋಸಮಾಡಿಯೇ ಬದುಕಬೇಕೆ? ಒಟ್ಟಿನಲ್ಲಿ ನನಗಂತೂ ನಾಡಿ ಬಗ್ಗೆ ಇದ್ದ ಕುತೂಹಲ ಕರಗಿತು. ಅಂದಹಾಗೆ ಅದರ ವಿಳಾಸವನ್ನೇ ಹೇಳಲಿಲ್ಲ. ಅದು "ಶ್ರೀ ಕೌಶಿಕ ಅಗಸ್ತ್ಯನಾಡಿ ವಾಕ್ಯ ಜ್ಯೋತಿಷ್ಯಾಲಯ", ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು. ಶಾಖೆಗಳು: ಲಂಡನ್, ಶ್ರೀಲಂಕಾ, ಮಲೇಷಿಯಾ ಹಾಗು ತಿರುಚಿ! ನೀವು ಹೋಗುವುದಾದರೆ ಇದಕ್ಕಂತೂ ಹೋಗಬೇಡಿ. ಅಲ್ಲೆ ಇನ್ನೊಂದು ನಾಡಿಭವಿಷ್ಯ ಹೇಳುವವರಿದ್ದಾರಂತೆ. ಅದು ಶುಕನಾಡಿ. ಇನ್ನು ಅಲ್ಲಿ ಬೇಕಾದರೆ ಪ್ರಯತ್ನಿಸಿ. ನಾಡಿಗ್ರಂಥಗಳೇ ಸುಳ್ಳು ಎಂದು ಹೇಳುವಷ್ಟು ಧೈರ್ಯ ನನ್ನಲ್ಲಿಲ್ಲ. ಆದರೆ ನಾನು ಹೋಗಿದ್ದ ಕಡೆಯಂತೂ ನಾಡಿಯೂ ಇಲ್ಲಾ ಗ್ರಂಥವೂ ಇಲ್ಲಾ. ಬರೀ ಮೈಂಡ್ ಗೇಮ್ ಅಷ್ಟೆ.

Tuesday, March 3, 2009

ಶಿವಪ್ಪ ಕಾಯೋ ತಂದೆ

ಎಂಥಾ ಪರಿಸ್ಥಿತಿ ಬಂದುಬಿಟ್ಟಿದೆ! ಮೊದಲು ಶಿರಸಿಯ ಸುತ್ತಮುತ್ತ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲಾ ಎಂದು ಗೋಳಾಡುತ್ತಿದ್ದರು. ಯಾಕೆಂದರೆ ಐಟಿ ಪ್ರಭಾವ. ಎಲ್ಲರಿಗೂ ಐಟಿ ಹುಡುಗರೇ ಬೇಕು. ಬೆಂಗಳೂರಲ್ಲೇ ಇರಬೇಕು. ತಿಂಗಳಿಗೆ ಮೂವತ್ತು ನಲವತ್ತು ಸಾವಿರ ಸಂಬಳ ತೆಗೆದುಕೊಳ್ಳುತ್ತಿರಬೇಕು. ಒಟ್ಟಿನಲ್ಲಿ ಎಲ್ಲರಿಗೂ ಐಟಿ ಹುಚ್ಚು ಹಿಡಿದಿತ್ತು. ಧಿಡೀರನೆ ರೆಸೆಷನ್ನು ಶುರು ಆಯ್ತು ನೋಡಿ, ಈಗ ಐಟಿ ಹುಡುಗರಿಗೇ ಮದುವೆಗೆ ಹೆಣ್ಣು ಸಿಗುವುದು ಕಷ್ಟವಾಗಿಬಿಟ್ಟಿದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ! ಹಾಗಂತ ಊರಿನಕಡೆಯ ಹುಡುಗರಿಗೆ ಹೆಣ್ಣು ಸಿಗುತ್ತಿವೆ ಎಂದಲ್ಲ. ಈಗಿನ ಹೆಣ್ಣುಮಕ್ಕಳ ಡಿಮ್ಯಾಂಡ್ ಏನಪ್ಪಾ ಅಂದ್ರೆ, ಹುಡುಗ ಐಟಿಯಲ್ಲಿ ಇದ್ದರೂ ಊರಿನಲ್ಲಿ 2-3ಎಕರೆ ಜಮೀನಿರಬೇಕು! ಕಂಪನಿಯಿಂದ ಹೊರಕ್ಕೆ ಹಾಕಿದರೂ ಊರಿಗೆ ಹೋಗಿ ಮಣ್ಣು ಹೊರಬಹುದು ಎಂಬುದು ಅವರ ಯೋಚನೆ. ಆದರೆ ಒಂದು ಸಲ ಕೀಬೋರ್ಡ್ ಒತ್ತಿದವರಿಗೆ ಮಣ್ಣು ಹೊರುವುದು ಸುಲಭದ ಮಾತಲ್ಲ ಎನ್ನುವುದು ಅವರಿಗಿನ್ನೂ ಹೊಳೆದಿಲ್ಲ. ಅದೇನೇ ಇರಲಿ...

ಈ ಐಟಿ ಇಂಡಸ್ಟ್ರಿ ತನ್ನ ಶ್ರೇಯಸ್ಸಿನ ತುತ್ತತುದಿಯಲ್ಲಿದ್ದಾಗ ಮದುವೆ ಫಿಕ್ಸ್ ಆಗಿ ಮುಹೂರ್ತಕ್ಕೆ ಸ್ವಲ್ಪ ವಿಳಂಬವಾಗಿ ಈಗ ಮದುವೆಯಾಗುತ್ತಿರುವ ಹೆಣ್ಣುಮಕ್ಕಳ ಪರಿಸ್ಥಿತಿ ನೋಡಿದರೆ ನನಗೆ ಯಾಕೋ ಅಯ್ಯೋ ಪಾಪ ಅನ್ನಿಸುತ್ತಿದೆ. ಅದರಲ್ಲೂ ಮದುವೆ ಆಗುವ ಗಂಡು ಸತ್ಯಂನಲ್ಲಿ ಕೆಲಸಮಾಡುತ್ತಿದ್ದರೆ ಅವಳ ದುಃಖಕ್ಕೆ ಎಣೆಯಿದೆಯೆ? ಬಹಶಃ ಅಂಥಾ ಹೆಣ್ಣುಮಕ್ಕಳೆಲ್ಲ ಕುಳಿತು ಹೀಗೆ ಶಿವನ ಹತ್ತಿರ ಮೊರೆಯಿಡುತ್ತಿರಬಹುದು...


ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ
ಐಟಿಯವನ ವರಿಸಲಾರೆ ಕಾಪಾಡಯಾ ಹರನೇ

ಐಟಿಯವನು ಎಂದು ಮೊದಲು ಭ್ರಮಿತಗೊಂಡೆ ನಾ
ಕೈ ತುಂಬಾ ಸಂಬಳ ತರುವ ಎಂದುಕೊಂಡೆ ನಾ

ಕಾಫಿಡೇಗೆ ಬಾ ಎನ್ನಲು ಮುಗಿಲ ನೋಡಿದಾ
ರಿಸೆಷನ್ನು ಸಂಬಳ ಕಡಿತಾ ಏನೊ ಹೇಳಿದಾ
ಕೊನೆಗೆ ವರ್ಷದ ಬೋನಸ್ ಕೂಡಾ ಇಲ್ಲವೆನ್ನುತಾ
ಕೆಲಸ ಹೋಗಿಲ್ಲ ಸಧ್ಯ ಎಂದು ಅರುಹಿದಾ

ಸಿನೆಮಾಗೆ ಕರೆದರೆ ಏನೊ ನೆಪವ ಹೇಳಿದಾ
ಟೆಕೆಟನ್ನು ತೆಗೆದಾಗಿದೆ ಎನ್ನಲು ಬರಲು ಒಪ್ಪಿದಾ
ಪಾಪ್‌ ಕಾರ್ನು ನಿನ್ನಯ ದೇಹಕೆ ಒಗ್ಗದೆನ್ನುತಾ
ಎರಡು ರೂಪಾಯಿಯ ಲಾಲಿ ಪಪ್ಪು ಕೊಡಿಸಿದಾ

ರಾತ್ರಿ ಕಾಲ್ ಮಾಡು ಎಂದರೆ ಮಿಸ್ಕಾಲ್ ನೀಡಿದಾ
ನಾನೇ ಕಾಲ್ ಮಾಡಿದ ಮೇಲೆ ಬ್ಲೇಡು ಹಾಕಿದಾ
ಮದುವೆಯಾದ ಮೇಲೆ ಹನಿಮೂನ್ ಬಗ್ಗೆ ಹೇಳುತಾ
ನಂದಿಬೆಟ್ಟವೆ ಸುಂದರ ತಾಣ ಎನ್ನತೊಡಗಿದಾ

ಅಪಾರ್ಟ್‌ಮೆಂಟು ಸೈಟು ಎಲ್ಲಾ ಮರೆತು ಹೋಗಿದೆ
ಚಿಕ್ಕದಾದ ಬಾಡಿಗೆ ಮನೆಯೇ ಸಾಕು ಎನಿಸಿದೆ
ಇಲ್ಲಿರುವುದು ಸುಮ್ಮನೆ ಅಲ್ಲಿ ನಮ್ಮನೆಯೊಂದಿದೆ
ಎನ್ನುವ ವೇದಾಂತದ ಮಾತೇ ಆಸ್ತಿಯಾಗಿದೆ

ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ
ಐಟಿಯವನ ವರಿಸಲಾರೆ ಕಾಪಾಡಯಾ ಹರನೇ