Tuesday, February 8, 2011

ನಾವು ಕನ್ನdigaru - ೫

ನನಗೇ ಇಂಥವರು ಕಾಣುತ್ತಾರೋ ಅಥವಾ ನಾನೇ ಇಂಥವರನ್ನು ಹುಡುಕುತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ಘಟನೆಗಳು ಬೆಂಗಳೂರಿನಲ್ಲಂತೂ ಮಾಮೂಲು. ಹೊರಗಡೆ ಕನ್ನಡಿಗರು ಇಂಗ್ಲೀಷಿನಲ್ಲಿ ಮಾತನಾಡುವುದು ಸರ್ವೇ ಸಾಮಾನ್ಯವಾಗಿಹೋಗಿಬಿಟ್ಟಿದೆ! ಅಂತಹ ಘಟನೆಗಳಲ್ಲಿ ವಿಶೇಷತೆ ಏನೂ ಉಳಿದಿಲ್ಲ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ.

ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ! (ಎಂದು ನಾನೂ ಭಾವಿಸಿದ್ದೆ). ಅಂಗಡಿ-ಮುಂಗಟ್ಟುಗಳಲ್ಲೆಲ್ಲ ಕನ್ನಡ ಪುಸ್ತಕಗಳು, ಶುಭಾಶಯ ಪತ್ರಗಳು, ಕನ್ನಡ ಬರಹಗಳಿರುವ ಟೀ ಶರ್ಟ್‌ಗಳು ತುಂಬಿ ತುಳುಕುತ್ತಿತ್ತು. ಎಲ್ಲ ಕಡೆ ಕನ್ನಡದಲ್ಲೇ ಮಾತಾಡಿ ಎನ್ನುವ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಬೆಂಗಳೂರಿನಲ್ಲಿ ಇಷ್ಟೊಂದು ಜನ ಕನ್ನಡಾಭಿಮಾನಿಗಳು ಇದಾರಲ್ಲಾ ಎಂದು ಸಂತೋಷಪಡುತ್ತಿರುವಾಗಲೇ ನನ್ನ ಎದುರಿಗಿದ್ದ ಒಂದು ಹೆಣ್ಣು ಪಕ್ಕದಲ್ಲಿದ್ದ ತನ್ನ ಗೆಳತಿಗೆ ಹೇಳಿತು
"Hey.. I'll be just lookin at the T'shirts... ಆಯ್ತಾ..."

ಈ ಕೊನೆಯ "ಆಯ್ತಾ" ಬರದಿದ್ದರೆ, ನಾನು ಯಾರೋ ಉತ್ತರಭಾರತದವರು ಕನ್ನಡದಲ್ಲಿ ಆಸಕ್ತಿ ಹೊಂದಿ ಬಂದಿದ್ದಾರೆ ಎಂದೇ ಅಂದುಕೊಂಡುಬಿಡುತ್ತಿದ್ದೆ! ಈ ಭಾಷಾಪ್ರೇಮಿಯೂ ಕನ್ನಡದವಳೇ ಎಂದು ಗೊತ್ತಾಗಿದುದಕ್ಕೆ ಖೇದವಾಯಿತು.

ಕನ್ನಡ ರಕ್ಷಿಸಲು, ಪರಭಾಷಾ ಚಿತ್ರಗಳನ್ನು ವಿರೋಧಿಸಬೇಕಾಗಿಲ್ಲ. ತಮಿಳರಿಗೆ, ತೆಲುಗರಿಗೆ ಕನ್ನಡ ಕಲಿಸಬೇಕಾಗಿಲ್ಲ. ಅಂಗಡಿ ಮುಂಗಟ್ಟುಗಳ ಫಲಕಗಳನ್ನು ಕನ್ನಡದಲ್ಲಿ ತಿದ್ದಬೇಕಾಗಿಲ್ಲ, ಇಂಗ್ಲೀಷ್ ಕಂಡರೆ ಅಸಹ್ಯಪಡಬೇಕಾಗಿಲ್ಲ. ಎಲ್ಲ ಕನ್ನಡಿಗರು ಕೊನೆಯಪಕ್ಷ ಕನ್ನಡಿಗರೊಂದಿಗಿದ್ದಾಗ ಕನ್ನಡದಲ್ಲೇ ಮಾತಾಡಿ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರೆ ಸಾಕು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.