ಅದೊಂದು ಕಾಲ. ಬೆಳಗಾಗಿ 9 ಗಂಟೆಗೆ ಆಫೀಸಿಗೆ ಹೋಗುವುದು. ಅಫೀಸ್ ಐಡಿ, ಜಿಮೇಲ್ ಐಡಿ, ಯಾಹೂ ಐಡಿ, ರೆಡಿಫ್ ಐಡಿ... ಅಬ್ಬಬ್ಬಾ ಎಷ್ಟೊಂದು ಮೇಲ್ ಐಡಿಗಳನ್ನು ಚೆಕ್ ಮಾಡಬೇಕು. ಆಫೀಸ್ ಐಡಿಗೆ ಬಂದ ಮೇಲ್ಗಳನ್ನು ನನ್ನ ಸಿಸ್ಟಮ್ನಲ್ಲೇ ಚೆಕ್ ಮಾಡಿಬಿಡಬಹುದು. ಆದರೆ ಈ ಪ್ರೈವೇಟ್ ಐಡಿಗಳಿಗೆ ಇಂಟರ್ನೆಟ್ ಬೇಕು. ನಮ್ಮದೋ ಪಕ್ಕಾ ಸ್ವದೇಶೀ ಕಂಪನಿಯಾಗಿತ್ತು. ವಿಶ್ವದಲ್ಲಿರುವ ಎಲ್ಲಾ ಸೈಟ್ಗಳನ್ನೂ ಬ್ಲಾಕ್ ಮಾಡಿಬಿಟ್ಟಿದ್ದರು. ಗೂಗಲ್ ಒಂದನ್ನು ಬಿಟ್ಟು. ಆದರೆ ಗೂಗಲ್ನಲ್ಲಿ ಹುಡುಕಾಟ ನೆಡೆಸಿದ ಮೇಲೆ ಬಂದ ಲಿಂಕ್ಗಳನ್ನು ಕ್ಲಿಕ್ಕಿಸಿದರೆ, ಯಾವುದೂ ಹತ್ತುತ್ತಿರಲಿಲ್ಲ. ಬಹುತೇಕ ಎಲ್ಲವೂ ಬ್ಲಾಕ್. ಅದಕ್ಕಾಗಿ ಇಂತಹ ಪ್ರೈವೇಟ್ ಐಡಿಗಳಿಗೆ ಬಂದ ಸಂದೇಶಗಳನ್ನು ನೋಡಲು ಲೈಬ್ರರಿಗೆ ಹೋಗಬೇಕಾಗಿತ್ತು. ಅಲ್ಲಿ ಹೋದಮೇಲೆ, ಪ್ರಜಾವಾಣಿ, ವಿಜಯಕರ್ನಾಟಕ ಬಿಡಲು ಆಗುತ್ತದೆಯೇ? ಎಲ್ಲವನ್ನೂ ಮುಗಿಸಿ ವಾಪಸ್ ನನ್ನ ಸ್ಥಳಕ್ಕೆ ಬರುವಾಗ ಆಗಲೇ 10 ಗಂಟೆ! ಗೆಳೆಯರೆಲ್ಲಾ ತುದಿಗಾಲ ಮೇಲೆ ನಿಂತಿರುತ್ತಿದ್ದರು. ಯಾಕೆಂದರೆ ಇದು ಟೀ ಟೈಮ್.ಟೀ ಕುಡಿಯುವಾಗ ಸುಮ್ಮನೇ ಕುಡಿಯಲಾಗುತ್ತದೆಯೇ? ನಮ್ಮ ಅಫೀಸಿಂದ ಪ್ರಾರಂಭಿಸಿ ಅಕ್ಕ ಪಕ್ಕದ ಅಫೀಸುಗಳನ್ನು ಮುಗಿಸಿ ಜಗತ್ತೆಲ್ಲವನ್ನೂ ಸುತ್ತಿಕೊಂಡು ಬರುತ್ತಿತ್ತು ನಮ್ಮ ಸುದ್ದಿಗಳ ಸಂಗ್ರಹ. ಹೀಗೆ ಸಾಮಾನ್ಯಜ್ಞಾನ ಹೆಚ್ಚು ಮಾಡಿಕೊಂಡಾದ ಮೇಲೆ ವಾಪಸ್ ನಮ್ಮ ಸ್ಥಳಕ್ಕೆ ಹೋಗುವಷ್ಟರಲ್ಲಿ 10:45 ಅಥವಾ 11ಗಂಟೆ. ಅಂತೂ ದಿನದ ಕೆಲಸ ಪ್ರಾರಂಭಿಸೋಣವೆಂದರೆ, ಎಲ್ಲಿಂದ ಪ್ರಾರಂಭಿಸುವುದು ಎಂಬುದೇ ದೊಡ್ಡ ಚಿಂತೆ. ಅಷ್ಟಕ್ಕೂ ಇದನ್ನು ಇವತ್ತೇ ಮುಗಿಸಬೇಕು ಎಂಬ ಗಡಿಬಿಡಿಯಿಲ್ಲ. ಇದನ್ನು ಶುರು ಮಾಡಿದರೆ ಅರ್ಧ ಗಂಟೆಯಲ್ಲೇ ಮುಗಿಸಿ ಬಿಡಬಹುದು. ಅದಿಕ್ಕೆ ಇದನ್ನು ಆಮೇಲೆ ನೋಡಿದರಾಯಿತು. ಅದೋ... ಛೆ... ತಲೆಗೇ ಹತ್ತುತ್ತಿಲ್ಲ. ಹೇಗಾದರೂ ಮುಗಿಸಬೇಕು. ಏನು ಮಾಡುವುದಪ್ಪಾ ಎಂದು ಯೋಚಿಸುವಷ್ಟರಲ್ಲಿ 12ಗಂಟೆ. ಈಗ ಊಟದ ಸಮಯ. ಎಲ್ಲಾರು ಮಾಡುವುದು ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ... ಗೇಣು ಬಟ್ಟೆಗಾಗಿ.
12ಗಂಟೆಗೇ ಊಟಾನಾ? ಎಂದು ಕೆಲವರು ಆಶ್ಚರ್ಯ ಪಡಬಹುದು. ಆದರೆ ಇದಕ್ಕೂ ತಡವಾಗಿ ಹೋದರೆ ಊಟಕ್ಕೆ ದೊಡ್ಡ ಕ್ಯೂ ನಿಂತಿರುತ್ತದೆ. ಅಷ್ಟೇ ಅಲ್ಲದೆ ಕುಳಿತುಕೊಳ್ಳಲೂ ಜಾಗ ಹುಡುಕಬೇಕಾಗುತ್ತದೆ. ಆದ್ದರಿಂದ ಸೇಫ್ಟಿಗೆ ಎಂದು 12ಕ್ಕೆ ಕೆಫೆಟೇರಿಯಾಕ್ಕೆ ಹಾಜರ್. ಥತ್... ಇವತ್ತೂ ಅದೇ ಪಲ್ಯ. ಈ ಚಪಾತಿಯನ್ನು ಹರಿಯಲು ಮೊದಲು ಜಿಮ್ಗೆ ಹೋಗಿ ಬರಬೇಕಿತ್ತು. ಈ ಕಿತ್ತೋಗಿರೋ ರಸಂನಲ್ಲಿ ಏನೂ ಇಲ್ಲಾ... ನೀರಿಗೆ ಮೆಣಸಿನ ಪುಡಿ ಕಲಸಿ ಕೊಟ್ಟಿದಾರೆ! ಎನ್ನುವ ಕಮೆಂಟ್ಗಳ ನಡುವೆ ಊಟ. ಊಟ ಮಾಡೋದು, ಇಡೀ ದಿನ ಕಂಪ್ಯೂಟರ್ ಮುಂದೆ ಕೂಡೋದು... ಇದನ್ನೇ ಮಾಡಿದ್ರೆ ಬೊಜ್ಜು ಬರಲ್ವಾ? ಸ್ವಲ್ಪಾನೂ ಬಾಡಿಗೆ ಎಕ್ಸರ್ಸೈಜ್ ಇಲ್ದೇ ಇದ್ರೆ ಹೇಗೆ? ಎಂದು ಕೇಳಿಕೊಂಡು ಒಂದು ರೌಂಡ್ ಕ್ಯಾಂಪಸ್ ಸುತ್ತಾ ತಿರುಗಾಡಿಕೊಂಡು ಬಂದು ವಾಪಸ್ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಒಂದೂವರೆ ಅಥವಾ ಎರಡು ಗಂಟೆ!
ಮತ್ತೆ ಕನ್ಫ್ಯೂಜನ್ ಶುರು. ಯಾವ್ ಕೆಲಸ ಕೈಗೆತ್ತಿಕೊಳ್ಳಲಿ ಅಂತ. ಯಾವುದೋ ಒಂದನ್ನು ಎತ್ತಿಕೊಂಡರಾಯಿತು ಎಂದುಕೊಂಡು ಕವಡೆ ಹಾಕಿ ಒಂದು ಕೆಲಸ ಶುರು ಮಾಡುವುದು. ಒಂದರ್ಧ ಗಂಟೆ ಕಳೆದಿರುವುದಿಲ್ಲ. ಆಗಲೇ ಕಣ್ಣು ಕೂರುತ್ತಿದೆ! ಬೆಳಗ್ಗೆಯಿಂದ ದುಡಿದು ದುಡಿದು ಸುಸ್ತಾದುದಕ್ಕಿರಬೇಕು! ಹಾಗೆಯೇ ಕೊಂಚ ಕುರ್ಚಿಗೆ ಒರಗಿಕೊಂಡು ನಿದ್ರೆ ಮಾಡಿದರಾಯಿತು ಎಂದಂದುಕೊಂಡು ಒರಗಿದರೆ, ಗಡದ್ದಾದ ನಿದ್ರೆಯೇ ಬಂದುಬಿಡಬೇಕೆ? ಎಚ್ಚರವಾದಾಗ ಮೂರು ಗಂಟೆ! ಒಂದು ದಿನ ಹೀಗೇ ಮಲಗಿ ಎಚ್ಚರವಾದಮೇಲೆಯೇ ಗೊತ್ತಾಗಿದ್ದು. ಕೆಲಸವಿಲ್ಲದೇ ಆಕಡೆ ಈಕಡೆ ಸುತ್ತುತ್ತಿದ್ದ ಮಹೇಶ ನಾನು ಮಲಗಿದ್ದನ್ನು ನೋಡಿ ತನ್ನ ಮೊಬೈಲ್ನಿಂದ ಫೋಟೋ ತೆಗೆದಿದ್ದ! ಎಚ್ಚರವಾದ ತಕ್ಷಣ ಮತ್ತೆ ನಿದ್ದೆ ಬರಬಾರದಲ್ಲ, ಅದಕ್ಕಾಗಿ ಒಂದು ಕಪ್ ಟೀ. ಟೀ ಮುಗಿಸಿ ಬರುವಷ್ಟರಲ್ಲಿ ಯಥಾಪ್ರಕಾರ ಇನ್ನೊಂದು ಗಂಟೆ ಕಳೆದಿರುತ್ತಿತ್ತು. 5 ಗಂಟೆಗೆ ಎಲ್ಲರೂ ಹೊರಡುವ ಸಮಯ. ಆದ್ದರಿಂದ 4:30ರಿಂದಲೇ ತಯಾರಿ ಪ್ರಾರಂಭ. ಎಷ್ಟೋ ಜನರನ್ನು ಇವತ್ತು ಮಾತಾಡಿಸಿಯೇ ಇಲ್ಲ! ಎಲ್ಲರನ್ನೂ ಭೇಟಿಯಾಗಿ, ನಾಳೆ ಮತ್ತೆ ಭೇಟಿಯಾಗೋಣವೆಂದು ಹೇಳಿ ಬರುವಷ್ಟರಲ್ಲಿ ಹೊರಡುವ ಸಮಯ! ಆಲ್ಲಿಗೆ ಅವತ್ತಿನ ಕೆಲಸ ಮುಗಿಯಿತು.
ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಉಳಿದೆಲ್ಲ ದಿನಚರಿ ಬಹುತೇಕ ಹಾಗೇ ಉಳಿದಿದ್ದರೂ, ಟೀ ಕುಡಿಯಲು, ಊಟ ಮಾಡಲು ಬರುವ ಗೆಳೆಯರು ಮಾತ್ರ ಬೇರೆ. ಮಲಗಿದ್ದಾಗ ಫೋಟೋ ತೆಗೆದು ಊರಿಗೆಲ್ಲ ತೋರಿಸಿ, ನಕ್ಕು, ಮತ್ತೆ ನನಗೆ ಮೇಲ್ ಮಾಡುವಷ್ಟು ಸಲುಗೆಯವರು ಇಲ್ಲ. ಮನುಷ್ಯನ ಸ್ವಭಾವವೇ ಹೀಗೋ ಏನೊ. ಕಳೆದು ಹೋದ ದಿನಗಳೇ ಚೆಂದ ಎನಿಸುತ್ತದೆ. ಆದರೆ... ಛೆ, ಕಾಲಚಕ್ರಕ್ಕೆ ದೇವರು ರೆವರ್ಸ್ ಗೇರ್ ಕೊಟ್ಟೇ ಇಲ್ಲವಲ್ಲಾ!
