
ಹೈ ಸ್ಕೂಲ್ ಓದುತ್ತಿದ್ದಾಗ ಮೊದಲಬಾರಿ ಕೇಳಿದ್ದು. ಒಂದನೇ ಬಾರಿ ಕೇಳಿದಾಗಲೇ ಎಂದೂ ಮರೆಯಲಾಗದಷ್ಟು ಸಂತಸ ನೀಡಿದ ಹಾಡಾಗಿತ್ತು ಅದು. "ಕೋಡಗನ ಕೋಳಿ ನುಂಗಿತ್ತಾ...". ಆ ವಯಸ್ಸಿಗೆ ಸಾಹಿತ್ಯ ನಿಲುಕದಾಗಿತ್ತು. ಕೇವಲ ಹಾಡುಗಾರಿಕೆಯಿಂದಲೇ ಆ ಪದ್ಯ ಮನಸ್ಸಿಗೆ ಅಷ್ಟೊಂದು ಹತ್ತಿರವಾಗಿಬಿಟ್ಟಿತ್ತು. ನಂತರದ ದಿನಗಳಲ್ಲಿ ನನ್ನ ಜೀವನದಲ್ಲಿ ಆ ಗಾರುಡಿಗನ ಮೋಡಿ ನಿಲ್ಲದೇ ಸಾಗತೊಡಗಿತ್ತು. ಸುಗಮ ಸಂಗೀತದ ಬಹುದೊಡ್ಡ ಪ್ರಪಂಚಕ್ಕೆ ನನ್ನ ಕೈ ಹಿಡಿದು ಕೊಂಡೊಯ್ದಿತ್ತು. ಶಿಶುನಾಳರ ಬೇಂದ್ರೆಯವರ ಗೀತೆಗಳ ಅಧ್ಯಾತ್ಮವಾದ, ಕುವೆಂಪುರವರ ಕಾವ್ಯಸೊಗಡು, ಕೆ. ಎಸ್. ಎನ್. ರ ಪ್ರೇಮಮಯಿ ಸಂವೇದನೆ, ಲಕ್ಷ್ಮಣ್ ರಾವ್ ಅವರ ಹಾಸ್ಯಭರಿತ ಗೀತೆಗಳು ಎಲ್ಲವುದರ ಹಿಂದೆ ಆ ಮೋಡಿಗಾರನೇ ಕುಳಿತಿದ್ದ. ಇನ್ನೂ ಎಷ್ಟೋ. ಲೆಕ್ಕಕ್ಕೆ ಸಿಗದಷ್ಟು ಕೊಡುಗೆಗಳು, ಕನ್ನಡಕ್ಕೆ, ಆ ಗಂಧರ್ವ ಕಂಠದಿಂದ ಹೊರಹೊಮ್ಮಿತ್ತು. ಆದರೆ ಈ ಪಯಣದಲ್ಲಿ ಇನ್ನು ನಮ್ಮ ಕೈ ಹಿಡಿದು ಮುನ್ನೆಡೆಸುವವರಾರು? ಎಲ್ಲವೂ ಒಮ್ಮೆಯೇ ಇಲ್ಲವಾಯಿತೇ? ಈ ಪಯಣ ನಿಂತುಹೋಯಿತೇ? ನಮ್ಮ ಕಿವಿಗಳಿಗೆ ಆ ಮಧುರ ದನಿಯ ಆಸ್ವಾದನೆಯ ಯೋಗ ತೀರಿಹೋಯಿತೇ?
ಅಶ್ವಥ್ರನ್ನು ನೋಡುವ ಭಾಗ್ಯ ನನಗೆ ಒಮ್ಮೆಯೇ ಸಿಕ್ಕಿತ್ತು. ಅದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಯಾವುದೋ ಸಿನೆಮಾದ ಆಡಿಯೋ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಇವರೂ ಬಂದಿದ್ದರು. ನಾವು ನಮ್ಮ ನಾಟಕದ ರಿಹರ್ಸಲ್ ಎಲ್ಲಾ ಮುಗಿಸಿ ಹಾಗೆಯೇ ಕುತೂಹಲಕ್ಕೆ ಕಾರ್ಯಕ್ರಮಕ್ಕೆ ಇಣುಕಿದೆವು. ಕರ್ಯಕ್ರಮ ಕೊನೆಯ ಹಂತದಲ್ಲಿತ್ತು. ಬಂದವರೆಲ್ಲರದೂ ಒಂದೇ ಕೋರಿಕೆ. ಆಶ್ವಥ್ ಹಾಡಬೇಕು. ಎಲ್ಲರ ಕೋರಿಕೆಯನ್ನು ಆಶ್ವಥ್ ಈಡೇರಿಸದೆ ಇರಲಿಲ್ಲ. ಸಭೆಯಲ್ಲಿ ನಿಶ್ಶಬ್ಧ. ಕೇವಲ ಅಶ್ವಥ್ರವರ ಧ್ವನಿ ಕಾಲೇಜಿನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಪ್ರೇಕ್ಷಕರೆಲ್ಲರಿಗೂ ರೋಮಾಂಚನಗೊಳಿಸುವ ಸಂಗೀತದ ರಸದೌತಣ. ನಾನವರನ್ನು ಮುಖತಃ ಕಂಡಿದ್ದು ಅದೇ ಮೊದಲು ಅದೇ ಕೊನೆ. ಆದರೆ ಅವರನ್ನು ನೆನೆಯದ ದಿನ ಬಹುಷಃ ಒಂದೂ ಇಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು.
ಭಾವನೆಗಳೇ ಇಲ್ಲದ ದಿನವೊಂದನ್ನು ಊಹಿಸಲಾದರೂ ಸಾಧ್ಯವೆ? ಅದು ಇಲ್ಲವೆಂದಮೇಲೆ ಅಶ್ವಥ್ರನ್ನು ನೆನೆಯದ ದಿನವೂ ಒಂದೂ ಇಲ್ಲವೆನ್ನಬೇಕು. ಬೇಸರವಾದರೆ ಅವರ ಭಾವಗೀತೆ, ಸಂತಸವಾದರೂ ಅವರದೇ ಭಾವಗೀತೆ. ಉತ್ಸಾಹಗೊಂಡರೂ ಆಲಸ್ಯಗೊಂಡರೂ ಎಲ್ಲ ಭಾವಗಳಿಗೂ ಅವರದೇ ಭಾವಗೀತೆಗಳನ್ನು ಕೇಳುವ ಹವ್ಯಾಸ ನನ್ನದಾಗಿಬಿಟ್ಟಿದೆ. ಅವರು ನಮ್ಮನ್ನಗಲಿದ ಸುದ್ದಿ ಕೇಳಿದಾಗಲೂ ನಾನು ಕೇಳುತ್ತಲಿದ್ದುದು ಅವರದೇ ಗೀತೆ "ಮೌನ ತಬ್ಬಿತು ನೆಲವ ಚುಂಬಿನಿ ಪುಳಕಗೊಂಡಿತು ಧಾಮಿನಿ". ದೈಹಿಕವಾಗಿ ನಮ್ಮನ್ನಗಲಿದರೂ ನಮ್ಮೆಲ್ಲರ ಮನಗಳಲ್ಲಿ ನಿಮ್ಮ ಪ್ರತಿಷ್ಠಾಪನೆ ಎಂದೋ ಆಗಿಹೋಗದೆ. ನಿಮ್ಮ ಧ್ವನಿ ನಿಮ್ಮ ಗೀತೆಗಳು ಅಜರಾಮರ. ಶಿಶುನಾಳರ ಗೀತೆಗಳನ್ನು ಜನರಿಗೆ ತಲುಪಿಸಲೆಂದೇ ಅವರತಿರಿಸಿದ್ದಿರೆಂದೆನಿಸುವ ನಿಮಗೆ ನಾವು ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ನಮ್ಮ ಇನ್ನೊಂದೇ ಒಂದು ಕೋರಿಕೆಯನ್ನು ಈಡೇರಿಸಿಕೊಡಿ. ಮತ್ತೆ ಹುಟ್ಟಿ ಬನ್ನಿ.