
[ವಿ.ಸೂ.: ಇದು ಒಬ್ಬ ನಾಡಾಡಿಯ ವಿಮರ್ಶೆಯಾಗಿದ್ದು ಕೇವಲ ನನ್ನ ವಯಕ್ತಿಕ ಅಭಿಪ್ರಾಯವಾಗಿರುತ್ತದೆ. ಬೇರೆಯವರ ವಿಚಾರಗಳು ಇದಕ್ಕೆ ತದ್ವಿರುದ್ಧವೂ ಆಗಿರಬಹುದು. ಇದನ್ನು ಇಲ್ಲಿ ಪ್ರಕಟಿಸುತ್ತಿರುವ ಉದ್ದೇಶ ಯಾರನ್ನೂ ನಿಂದಿಸುವುದಕ್ಕಾಗಿಯೋ ಬೇಸರಪಡಿಸುವುದಕ್ಕಾಗಿಯೋ ಸರ್ವಥಾ ಅಲ್ಲ.]
ಒಂದು ಮನೆ. ಗಂಡಸರಿದ್ದೂ ಇಲ್ಲದಂತಿರುವ ಮನೆ. ಮನೆಯ ಯಜಮಾನನಿಗೆ ತಿಕ್ಕಲು. ದುಡಿಮೆಯಿಲ್ಲ. ಹಿರಿಯ ಮಗಳಿಗೆ ಡೇಟ್ ಬಾರ್ ಆದಮೇಲೆ ಮದುವೆ. ಆದರೂ ಅವಳೇ ಈ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. ಮನೆಯಲ್ಲಿ ಉಳಿದವರೆಲ್ಲಾ ಕೆಲಸಕ್ಕೆ ಬಾರದವರು. ಒಬ್ಬ ತಮ್ಮನಿಗೆ ಯಾವಾಗಲೂ ಕೆಲಸ ಹೋಗಿರುತ್ತದೆ. ಇನ್ನೊಬ್ಬ ತಮ್ಮ ಉಣ್ಣುವುದನ್ನಷ್ಟೇ ಕಲಿತಿದ್ದಾನೆ. ಅದಷ್ಟೇ ಅಲ್ಲದೆ ಇನ್ನೊಂದಿಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತಾನೆ.
ಇನ್ನೊಂದು ಮನೆ. ಇಲ್ಲೂ ಯಜಮಾನನಿಗೆ ತಿಕ್ಕಲು. ಹೆಂಡತಿ ದುಡಿಯುತ್ತಾಳೆ. ಮಗಳು ಸಮಾಜ ಸೇವಕಿ. ಮಗನಿಗೆ ಸ್ವಂತ ಬುದ್ಧಿ ಇಲ್ಲ. ಅಮ್ಮ, ತಂಗಿ ಹೇಳುವುದನ್ನು ಕೇಳುತ್ತಾನೆ.
ಇನ್ನೊಂದು ರಾಜಕೀಯ ಕುಟುಂಬ. ಮುಖ್ಯಮಂತ್ರಿಯ ಮನೆ. ಒಬ್ಬ ಹೆಂಗಸು. ಮುಖ್ಯಮಂತ್ರಿಯ ಹೆಂಡತಿ. ಒಬ್ಬ ಮಗ ಆದರ್ಶವಾದಿ ಆದರೆ ಪುಕ್ಕಲ. ಸ್ವಂತಬುದ್ಧಿ ಇಲ್ಲ. ಸ್ನೇಹಿತೆ (ಈಗಿನ ಹೆಂಡತಿ)ಯ ಮಾತೇ ಆತನಿಗೆ ಸರ್ವಸ್ವ. ಮುಖ್ಯಮಂತ್ರಿ ಮತ್ತು ಇನ್ನೊಬ್ಬ ಮಗ ಕಟುಕರು.
ಮತ್ತೆ ಕೆಲವು ಪಾತ್ರಗಳು. ಗಂಡು ಪಾತ್ರಗಳು ಎಲ್ಲಾ ಕಟುಕರು ಇಲ್ಲಾ ಬುದ್ಧಿ ಒಂದು ಸುತ್ತು ಕಮ್ಮಿ ಇರುವವರು. ಹೆಣ್ಣು ಪಾತ್ರಗಳು ಎಲ್ಲಾ ಸಮಾಜೋದ್ಧಾರಕರು.
ಇವೆಲ್ಲವುಗಳ ನಡುವೆ ಒಬ್ಬನೇ ಒಬ್ಬ ಬುದ್ಧಿವಂತ ಆದರ್ಶವಾದಿ ಗಂಡಸು. ಅನ್ಯಾಯ ಮಾಡುವವರಿಗೆ ಸಿಂಹಸ್ವಪ್ನ! ಬಡವರ ಬಂಧು. ದೊಡ್ಡ ದೊಡ್ಡ ಲಾಯರ್ಗಳನ್ನು ಮಣ್ಣುಮುಕ್ಕಿಸುವ ಮೇಧಾವಿ. ಕ್ಲೈಂಟ್ಗಳ ಹತ್ತಿರ ಫೀಸನ್ನೇ ಕೇಳದ ಕರುಣಾಮಯಿ. ಅವರೇ ಸಿ.ಎಸ್.ಪಿ. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರೂ ಕೂಡಾ!
ಹೌದು. ನಾನು ಹೇಳುತ್ತಿರುವುದು "ಮುಕ್ತ ಮುಕ್ತ" ಎಂಬ ಮುಗಿಯದ ಧಾರಾವಾಹಿಯ ಬಗ್ಗೆ. ಬಹುಷಃ ಇದು ಮುಗಿದರೂ "ಮುಕ್ತ ಮುಕ್ತ ಮುಕ್ತ" ಬರಬಹುದೇನೊ. ಅವರ ಹಿಂದಿನ ಧಾರಾವಾಹಿಗಳು ಹೇಗಿದ್ದವು ಎಂಬುದು ನನಗೆ ನೆನಪಿನಲ್ಲಿ ಉಳಿದಿಲ್ಲ. ಆದರೆ ಸಧ್ಯದ ಧಾರಾವಾಹಿಯಂತೂ ಸ್ತ್ರೀ ಸಾಮ್ರಾಜ್ಯದಲ್ಲಿ ಪುರುಷ ಶೋಷಣೆ! ನೋಡುಗರ ತಾಳ್ಮೆ ಪರೀಕ್ಷೆ. ಹಾಸಿಗೆ ಹಿಡಿದವರಿಗೆ ತೋರಿಸಿಬಿಟ್ಟರೆ ಬೇಗನೆ ಶಿವನ ಪಾದ ಸೇರಿಬಿಡುತ್ತಾರೆ. ಖೈದಿಗಳಿಗೆ ಇದನ್ನು ತೋರಿಸುವುದು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಎನಿಸಿಕೊಂಡಿದೆ. ಗರ್ಭಿಣಿಯರು ಇದನ್ನು ನೋಡಿದರೆ ನೂರಕ್ಕೆ ನೂರರಷ್ಟು ಹೆಣ್ಣಾಗುತ್ತದೆ. ಗಂಡಾದರೂ ಅದು ಹೆಣ್ಣಿನಂತೆಯೇ ಇರುತ್ತದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬುದ್ಧಿ ಭ್ರಮಣೆಯಾದವರು ಹೆಚ್ಚು ಗಲಾಟೆ ಮಾಡಿದರೆ, "ಮುಕ್ತ ಮುಕ್ತ" ತೋರಿಸುತ್ತೇನೆ ಎಂದು ಹೆದರಿಸುತ್ತಾರಂತೆ!
ನಮ್ಮನೆಯಲ್ಲಿ ಒಂದು ವರ್ಷದಿಂದ ಈ ಧಾರಾವಾಹಿಯನ್ನು ನೋಡುತ್ತಾ ಬಂದಿದ್ದಾರೆ. ಮೊನ್ನೆ ಊರಿಗೆ ಹೋದಾಗ ನಮ್ಮಪ್ಪನನ್ನು ಕೇಳಿದೆ.
"ಅಲ್ಲಾ ಅಪ್ಪಾ... ನೀವು ಒಂದು ವರ್ಷದಿಂದ ನೋಡ್ತಾ ಇದೀರಲ್ಲಾ... ಏನಾಯ್ತು"
"ಎಲ್ಲಾ ಪಾತ್ರಧಾರಿಗಳ ತೂಕ ಎರಡು ಕಿಲೋ ಜಾಸ್ತಿ ಆಯ್ತು! ಅಷ್ಟು ಬಿಟ್ಟರೆ no other development!"
"ಹೋಗ್ಲಿ ಬಿಡು... ಏನೋ ಒಂದು develop ಆಯ್ತಲ್ಲಾ..."
ಧಾರಾವಾಹಿಯಲ್ಲಿ ಒಬ್ಬನ ಜೊತೆ ಏನೋ ಒಂದು ಚಿಕ್ಕ ಘಟನೆ ನಡೆಯುತ್ತದೆ. ಅದನ್ನು ತೋರಿಸುತ್ತಾರೆ. ಇನ್ನೊಬ್ಬ ಬಂದು ಏನಾಯ್ತು ಎನ್ನುತ್ತಾನೆ. ಅವನು ಹೇಳುತ್ತಾನೆ. ಇನ್ನೊಬ್ಬಳು ಬಂದು ಏನಾಯ್ತೋ ಎನ್ನುತ್ತಾಳೆ. ಅವನು ಮತ್ತೆ ಹೇಳುತ್ತಾನೆ. ಅವಳು ಅದನ್ನೇ ಮತ್ತೆ ಹೇಳಿ, ಹೀಗಾಯ್ತಾ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಇನ್ನೊಬ್ಬ ಬರುತ್ತಾನೆ ಅವನಿಗೂ ಮತ್ತೆ ಹೇಳುತ್ತಾರೆ! ಇವೆಲ್ಲವನ್ನು ನೋಡಿ ಪ್ರೇಕ್ಷಕ ಮೂರ್ಛೆ ಹೋಗುತ್ತಾನೆ. ಇದು ದಿನನಿತ್ಯದ ಕಥೆ.
ಶಾಂಭವಿ ಟೀಚರ್ ಮನೆ ಒಂದು ರೀತಿಯ ವಿಶಿಷ್ಟ ಜಾತಿಯ ದೈಹಿಕವಾಗಿ ಕೊಬ್ಬಿದ ಮಂಗಗಳನ್ನು ಸಾಕಿದ zoo ಇದ್ದಂತೆ. ಯಾರಾದರು ಮನೆಗೆ ಬಂದರೆ ಒಂದು ಮಂಗ ಇನ್ನೊಂದಕ್ಕೆ ನೋಡಲು ಹೇಳುತ್ತದೆ. ಅದು ಹೋಗಿ ನೋಡುತ್ತದೆ. ವಾಪಸ್ ಬಂದು ಯಾರು ಎಂದು ಹೇಳುತ್ತದೆ. ಈಗ ಎಲ್ಲ ಮಂಗಗಳೂ ಒಂದರ ಹಿಂದೆ ಒಂದರಂತೆ ಹೊರಗೆ ಓಡುತ್ತವೆ. ಮಿಕ ಮಿಕ ನಡುತ್ತಾ ನಿಲ್ಲುತ್ತವೆ. ಸಂಬಂಧವಿಲ್ಲದಿದ್ದರೂ ಮಧ್ಯ ಬಾಯಿ ಹಾಕುತ್ತವೆ. ಯಾರೇ ಬರಲಿ ಗೂಂಡಾಗಳು, ರಾಜಕಾರಣಿಗಳು, ಪೋಲೀಸರು, ಪರಿಚಯದವರು, ಟೈಮ್ ಪಾಸ್ಗೆ ಬಂದವರು, ಯಾರೇ ಬಂದರೂ ಹೆಣ್ಣು ಮಂಗಗಳು ಮುಂದೆ ಬಂದು ಮಾತಾಡುತ್ತವೆ. ಗಂಡು ಮಂಗಗಳು ಹೌದು ಹೌದು ಎನ್ನುತ್ತವೆ!
ಪಾತ್ರಗಳಲ್ಲಿ ಹಿಡಿತ ಇಲ್ಲ. ಇವತ್ತು ಒಂದು ರೀತಿ ಇದ್ದ ಪಾತ್ರ ನಾಳೆ ಇನ್ನೊಂದು ರೀತಿ ವರ್ತಿಸುತ್ತದೆ. ಒಬ್ಬ ಸಾಫ್ಟ್ವೇರ್ ಇಂಜಿನೀಯರ್ ನಾಡಿದ್ದು ಸೈಂಟಿಸ್ಟ್ ಆಗಿಬಿಟ್ಟಿರುತ್ತಾನೆ. ಕೆಲವರ ಅತೀ ಮೃದು ಧೋರಣೆ, ಕೆಲವರ ಹುಂಬತನ, ಕೆಲವರ ಮಕ್ಕಳ ಬುದ್ಧಿ ನೋಡುಗರ ತಾಳ್ಮೆ ಪರೀಕ್ಷಿಸುತ್ತದೆ. ಶೀರ್ಷಿಕೆ ಹಾಡೊಂದನ್ನು ಬಿಟ್ಟರೆ ಹೇಳಿಕೊಳ್ಳುವಂತ ಯಾವ ವಿಷಯಗಳೂ ಇಲ್ಲಲ್ಲ. ಬಹುಷ: ಇವತ್ತು ಶೂಟಿಂಗಿಗೆ ಯಾರು ಬಂದಿದ್ದಾರೋ ಅವರನ್ನು ಬಳಸಿಕೊಂಡು ಕಥೆ ಬೆಳೆಸಿದಂತಿದೆ. ಗಟ್ಟಿಯಿಲ್ಲದ ಪಾತ್ರಗಳು, ಬಾಲಿಶ ಸಂಭಾಷಣೆ, ದುರ್ಬಲ ಕಥಾಹಂದರ, ಅನವಷ್ಯಕವಾಗಿ ಆದರ್ಶಗಳ ತುರುಕುವಿಕೆ ಈ ಧಾರಾವಾಹಿಯನ್ನು ಅಸಹಜ ಹಾಗೂ ಅಪ್ರಸ್ತುತವಾಗಿಸಿವೆ. ಈ ಧಾರಾವಾಹಿ ರಾತ್ರಿ ಮರುಪ್ರಸಾರಗೊಳ್ಳುವುದು ಮತ್ತು ಇದರ ಸಂವಾದ ಏರ್ಪಡಿಸುತ್ತಿರುವುದು ಹಾಸ್ಯಾಸ್ಪದ.
ಕೆಲವು ಅನಿವಾರ್ಯ ಕಾರಣಗಳಿಂದ ಅಪರೂಪಕ್ಕಾದರೂ ಇದನ್ನು ನೋಡಲೇಬೇಕಾದಾಗ ಆದ ಯಾತನೆಯ ಹಾಗೂ ತಡೆದುಕೊಂಡ ಕೋಪದ ಪ್ರತಿಫಲ ಈ ವಿಮರ್ಶೆ. ಸೀತಾರಾಮ್ ಅವರೇ ದಯವಿಟ್ಟು "ಮುಕ್ತ ಮುಕ್ತ ಮುಕ್ತ" ದಲ್ಲಾದರೂ ಈ ರೀತಿಯ ನಿರ್ಲಕ್ಷ ತೋರಬೇಡಿ. ಅಲ್ಲಾದರೂ ಒಳ್ಳೆಯ ಗಂಡಸರಿಗೆ 33% ಮೀಸಲಾತಿ ಕೊಡಿ.