
Wednesday, January 23, 2008
ಬದುಕೆಂಬ ಗಣಿತವನ್ನು ಬಿಡಿಸಿದವರು

Wednesday, January 16, 2008
ನಾವು ಕನ್ನdigaru - ೪
ಆತ: ಸಾರ್... ಅಕೌಂಟ್ ಇದನಾಲದಾನ್ ಓಪನ್ ಪಣ್ಣಿಟ್ಟೆ. operate ಪಣ್ಣುಂ ವಾರಾದ್...
ನಾನು: ಇವತ್ತೇ access ಮಾಡಕೆ ಬರಲ್ಲ ಅನ್ಸತ್ತೆ ಸಾರ್... ನಾಳೆ try ಮಾಡಿ.
ಆತ: ಆಮಾ ಸಾರ್... ಅಕೌಂಟ್ ಒಪನ್ ಪಣ್ಣಿಟ್ಟೆ.
ನಾನು: Thats what sir... you try tomorrow.
ಆತ: ಸಾರ್... language ತಮಿಳ್ ಸಾರ್.
ನಾನು: But I dont know tamil!
ಅಷ್ಟರಲ್ಲಿ, ನನ್ನ ಸುತ್ತ ಮುತ್ತ ನಿಂತಿದ್ದ ನಾಲ್ಕಾರು ಮಂದಿ ಅವನನ್ನು ಮಾತನಾಡಿಸತೊಡಗಿದರು.
"ಸಾರ್... ಇಪ್ಪ ವಾಂಗ ಸಾರ್... ಎನ್ನ ಪ್ರಾಬ್ಲಮ್?"
ನನ್ನ ಸುತ್ತಮುತ್ತಲಿದ್ದ ಎಲ್ಲರೂ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು! ನಾನೊಬ್ಬನೇ ಪರಕೀಯನಂತೆ ನಿಂತಿದ್ದೆ!
ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.
Thursday, January 10, 2008
ಕತ್ತಲೆಯ ಬೆಳಕು

"ಅಯ್ಯೋ... ಕರೆಂಟ್ ಹೋಯ್ತು!!!" ಈ ವಾಕ್ಯವನ್ನು ದಿನಕ್ಕೊಂದುಬಾರಿಯಾದರೂ ಕೇಳಿಯೇ ಇರುತ್ತೇವೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಕಡಿಮೆಯಿದ್ದರೂ ನಮ್ಮೂರಿನಲ್ಲಂತೂ ಸಧ್ಯದಲ್ಲೇ ಲೋಡ್ ಶೆಡ್ಡಿಂಗ್ ಶುರು ಆಗುತ್ತದಂತೆ. ಮಳೆಗಾಲ ಮುಗಿದು ಇನ್ನೂ ನಾಲ್ಕು ತಿಂಗಳು ಕಳೆದಿಲ್ಲ. ನಮ್ಮ KEBಯವರಿಗೆ ಎಷ್ಟು ದುಡ್ಡುಕೊಡುತ್ತೇವೆಂದರೂ, ಕೆಲಸವಿಲ್ಲದ ಕಾರಣಕ್ಕೋ ಏನೊ, ಅಂತೂ ಕರೆಂಟನ್ನು ದಿನಕ್ಕೆ ಎರಡು ಗಂಟೆಯಾದರೂ ತೆಗೆಯದಿದ್ದರೆ ಅವರಿಗೆ ಸಮಾಧಾನವಿಲ್ಲ. ರಾಜ್ಯದ ಕೋಟಿಗಟ್ಟಲೆ ಮುತ್ತೈದೆಯರ ಶಾಪ ತಗುಲಿಯೂ KEBಯವರು ಇಂದಿಗೂ ಬದುಕುಳಿದು ಕೆಲಸ ಮಾಡುತ್ತಿರುವುದು ಅಚ್ಚರಿಯ ಸಂಗತಿ! ಬಹುಶಃ ಈಗಿನ ಮುತ್ತೈದೆಯರ power ಮೊದಲಿನವರ ಹಾಗೆ ಉಳಿದಿಲ್ಲ ಎನಿಸುತ್ತದೆ. ಎಲ್ಲರೂ ಕರೆಂಟು ಹೋದ ಕೂಡಲೇ KEBಯವರ ವಿರುದ್ಧ ವಾಗ್ಸಮರಕ್ಕೆ ಸಿದ್ಧವಾಗಿಬಿಡುತ್ತಾರೆ. ಅದರಲ್ಲೂ ಕ್ರಿಕೆಟ್ ಮ್ಯಾಚ್ ಬರುತ್ತಿದ್ದಾಗ ಹೋದರಂತೂ ಎಲ್ಲ ಗಂಡಸರಿಂದಲೂ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಅಡಿಗೆ ಮಾಡಲು ಮಿಕ್ಸರ್ ಹಾಕಿದಾಗ ಅಥವಾ ರಾತ್ರಿ ವರ್ಷಗಟ್ಟಲೆ ನೆಡೆಯುವ ಕಥೆಯೇ ಮುಂದುವರಿಯದ ಮೆಗಾ ಧಾರಾವಾಹಿಗಳ ಸಮಯದಲ್ಲಿ ಕರೆಂಟು ಹೋಗಿಬಿಟ್ಟರಂತೂ ಮುಗಿಯಿತು. ಗಂಡಂದಿರ ಮೇಲಿನ ಸಿಟ್ಟೂ ಸೇರಿ KEBಯವರಿಗೆ ಸಹಸ್ರನಾಮಾವಳಿ ಪೂಜೆಯೇ ನೆರವೇರಿಬಿಡುತ್ತದೆ. ಇಷ್ಟಕ್ಕೂ KEBಯವರು ಕರೆಂಟನ್ನು ಯಾಕೆ ತೆಗೆಯುತ್ತಾರೆ ಎಂದು ಯೋಚಿಸಿದ್ದೇವೆಯೆ ?
ಈ ಕರೆಂಟು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕರೆಂಟಿಲ್ಲ ಎಂದರೆ ಟಿವಿ ಇಲ್ಲ, ಫ್ರಿಡ್ಜ್ ಇಲ್ಲ, ಲೈಟ್ ಇಲ್ಲ, ಮಿಕ್ಸರ್ ಇಲ್ಲ, ವಾಷಿಂಗ್ ಮಷಿನ್ ಇಲ್ಲ, ಫ್ಯಾನ್ ಇಲ್ಲ, ಎಸಿ ಇಲ್ಲ ಒಟ್ಟಿನಲ್ಲಿ ಏನೂ ಇಲ್ಲ. ಆದರೂ ನಾವಿದ್ದೇವೆ. ನಮ್ಮ ಜೊತೆ ಅಗಾಧವಾದ ಕತ್ತಲೆಯಿದೆ. ಮನುಷ್ಯ ವಿದ್ಯುಚ್ಛಕ್ತಿಯ ಮೇಲೆ ಹೆಚ್ಚಾಗಿಯೇ ಅವಲಂಬಿಸಿಬಿಟ್ಟಿದ್ದಾನೆ. ಅದಿಲ್ಲದಿದ್ದರೆ ಎನೂ ಇಲ್ಲವೆಂಬ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣಗಳೂ ಕರೆಂಟಿಲ್ಲದಿದ್ದರೆ ಉಪಯೋಗಕ್ಕೆ ಬರುವುದಿಲ್ಲ. ಈಗಂತೂ ಕಾರು ಬೈಕುಗಳೂ ಕೂಡಾ ವಿದ್ಯುಚ್ಛಕ್ತಿ ಚಾಲಿತವಾಗಿವೆ. ಕರೆಂಟಿಲ್ಲದೆ ಮೊದಲು ಜನ ಹೇಗೆ ಬದುಕುತ್ತಿದ್ದರಪ್ಪಾ ಎಂದು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿದೆ. ಹಿಂದೊಂದು ಕಾಲವಿತ್ತು, ನಿನ್ನೆ ಮಾಡಿದ ಅಡಿಗೆಯನ್ನು ಇವತ್ತು ತಿನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈಗ ದಿನನಿತ್ಯ ಅಡಿಗೆ ಮಾಡುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಹ್ಯಾಗಿದ್ದರೂ ಹಳಸಲು ಪೆಟ್ಟಿಗೆ (ಫ್ರಿಡ್ಜ್) ಇದೆಯಲ್ಲಾ. ಆದರೆ ಕರೆಂಟು ಹೋದರೆ ಮಾತ್ರ ಕೆಲಸ ಕೆಟ್ಟಿತು. ಅಡಿಗೆಯನ್ನಂತೂ ಹೊಸತಾಗಿ ಮಾಡಲೇಬೇಕು. ಅದೂ ಅಲ್ಲದೆ ಆ ಹಳಸಲು ಪೆಟ್ಟಿಗೆಯಲ್ಲಿ ಹಳಸಿಹೋದ ಪದಾರ್ಥಗಳ ದುರ್ಗಂಧ ಹೊರಹಾಕಲೂ ಒದ್ದಾಡಬೇಕು. ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕಪ್ಪಾ ಅವ್ರು ಕರೆಂಟ್ ತೆಗೀತಾರೆ?
ಹಿಂದೆ ಯಾವುದೋ personality development ಬಗ್ಗೆ ಪುಸ್ತಕ ಓದುತ್ತಿದ್ದ ನೆನಪು. ಶಿವ್ ಖೆರಾ ಅವರದ್ದು. ಬಹುತೇಕ ಕಡೆ be positive, be positive ಎಂದು ಹೀಳಿದ್ದರು. ನಾನೂ ಆಗ ಬಹಳಸ್ಟು ತಲೆ ಕೆಡಿಸಿಕೊಂಡಿದ್ದೆ. ಪೊಸಿಟಿವ್ ಆಗುವುದು ಎಂದರೇನು ಎಂದು. ಅಲ್ಲಿ ಕೆಲವು ಉದಾಹರಣೆಗಳೂ ಇದ್ದವು. ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರಿದ್ದರೆ, ಗ್ಲಾಸು ಅರ್ಧ ಖಾಲಿ ಇದೆ ಎನ್ನುವುದು ನೆಗೆಟಿವ್ ಥಿಂಕಿಂಗ್. ಗ್ಲಾಸು ಅರ್ಧ ತುಂಬಿದೆ ಎನ್ನುವುದು ಪೊಸಿಟಿವ್ ಥಿಂಕಿಂಗ್ ಎಂದು. ಆಗೆಲ್ಲಾ ನನಗನಿಸುತ್ತಿತ್ತು, ಎಲ್ಲದನ್ನೂ ಪೊಸಿಟಿವ್ ಆಗಿ ತಗೋಬೇಕು ಅಂತ ಹೇಳ್ತಿದಾರಲ್ಲಾ, ನೆಗೆಟಿವ್ ಥಿಂಕಿಂಗ್‌ಅನ್ನೂ ಪೊಸಿಟಿವ್ ಆಗಿ ಯಾಕೆ ತಗೊಳಲ್ಲಾ ಅಂತ. ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಅದು ಬೇರೆ ವಿಷಯ. ಆದರೆ ಈ ಕರೆಂಟು ಹೋಗುವುದನ್ನೂ ನಾವು ಪೊಸಿಟಿವ್ ಮಾರ್ಗದಲ್ಲಿ ವಿಚಾರ ಮಾಡಿದರೆ ನಮಗೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದೇನೊ. "ಯಾಕಾದ್ರೂ ಕರೆಂಟು ತೆಗೀತಾರೇನೊ?", "ಇದರಿಂದ ಇವರಿಗೇನು ಲಾಭ?" ಎಂದು ಯೋಚಿಸುವುದನ್ನು ಬಿಟ್ಟು "ಯಾಕೆ ಕರೆಂಟು ತೆಗೀತಾರೆ?" "ಇದರಿಂದ ನಮಗೇನು ಲಾಭ?" ಎಂದು ಯೋಚಿಸಬೇಕಾಗಿದೆ. ನಾನಂತೂ ಇದೇ ಮಾರ್ಗದಲ್ಲಿ ಯೋಚಿಸಲು ಪ್ರಾರಂಭಿಸಿದೆ. ಯಾಕೆಂದರೆ ನನ್ನ ಬ್ಲಡ್ ಗ್ರುಪ್ಪೇ ಹೇಳತ್ತೆ. B positive ! ಕೆಲವು ಪೊಸಿಟಿವ್ ಅಂಶಗಳು ಗಮನಕ್ಕೂ ಬಂದವು.
ಕರೆಂಟ್ ಹೋಗುವುದರಿಂದ ಏನಾಗುತ್ತದೆ? ಲೈಟ್ ಹತ್ತುವುದಿಲ್ಲ. ಎಲ್ಲ ಕಡೆ ಮೇಣದ ಬತ್ತಿಗಳನ್ನೋ ಚಿಮಣಿ ದೀಪಗಳನ್ನೋ ಹೊತ್ತಿಸುತ್ತೇವೆ. ಮನುಷ್ಯ ಬೆಂಕಿಯನ್ನು ಕಂಡು ಹಿಡಿಯುವ ಮೊದಲು ರಾತ್ರಿ ಪೂರ್ತಿ ಕತ್ತಲೆಯಲ್ಲೇ ಬದುಕುತ್ತಿದ್ದ. ಬೆಂಕಿಯನ್ನು ಕಂಡುಹಿಡಿದು ಕ್ರಂತಿಯನ್ನೇ ಮಾಡಿದ. ಆಗ ಆತನಿಗೆ ರಾತ್ರಿಯೂ ಬೆಳಕಾಯಿತು. ಅದೊಂದು ಕತ್ತಲೆಯಿಂದ ಬೆಳಕಿನೆಡೆಗೆ ಮನುಕುಲ ನೆಡೆದ ಕಾಲ. ಅಂಥ ಕಾಲವನ್ನು ನಮಗೆ ಈಗ ನಾವು ಹೊತ್ತಿಸಿದ ಮೇಣದಬತ್ತಿಗಳು, ಚಿಮಣಿ ದೀಪಗಳು ನೆನಪಿಸಿ ಕೊಡುತ್ತವೆ. ಮನುಷ್ಯ ಎಷ್ಟೇ ದೊಡ್ಡವನಾದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದಂತೆ. ಆದ್ದರಿಂದ KEBಯವರಿಂದ ಮನುಷ್ಯ ನೆಡೆದು ಬಂದ ಹಾದಿಯನ್ನು ಪ್ರತಿಯೊಬ್ಬ ನಾಗರಿಕನಿಗೂ ನೆನಪು ಮಾಡಿಸುವ ಕಾರ್ಯ ಪ್ರತಿದಿನವೂ ನಡೆಯುತ್ತದೆ. ಎಂತಹ ಮಹಾನ್ ಧ್ಯೇಯ. ಕರೆಂಟು ಹೋದಾಗ A/C ಕೂಡಾ ಕೆಲಸ ಮಾಡುವುದಿಲ್ಲ. ಮನೆಯಲ್ಲೇ ಕುಳಿತುಕೊಂಡು A/C ಹಚ್ಚಿಕೊಂಡು ಮನೆಯ ತುಂಬಾ ಇಂಗಾಲದ ಡೈ ಆಕ್ಸೈಡ್ ತುಂಬಿದ್ದರೂ ಅದನ್ನೇ ಮತ್ತೆ ಮತ್ತೆ ಉಸಿರಾಡುತ್ತಿರುವ ಜನ A/C ಕೆಲಸ ಮಾಡದೇ ಇದ್ದಾಗ ಮನೆಯಿಂದ ಹೊರಬರುತ್ತಾರೆ. ಹಿತವಾದ ಆಮ್ಲಜನಕಭರಿತ ತಣ್ಣನೆಯ ಗಾಳಿಯನ್ನು ಸೇವಿಸುತ್ತಾರೆ. ದೇಹದ ಎಲ್ಲ ಭಾಗಗಳಿಗೆ, ವಿಶೇಷವಾಗಿ ಮೆದುಳಿಗೆ ನವಚೈತನ್ಯ ಬಂದಂತಾಗುತ್ತದೆ. ಮನುಷ್ಯ ಆರೋಗ್ಯವಂತನಾಗುತ್ತಾನೆ. ದಿನನಿತ್ಯವೂ ಒಂದೆರಡು ಗಂಟೆ ಹಿತಕರವಾದ ಹವಾಸೇವನೆಯಿಂದ ಮನುಷ್ಯರನ್ನು ಆರೋಗ್ಯವಂತರನ್ನಾಗಿಸುವ KEBಯವರ ಧ್ಯೇಯ ನಿಜಕ್ಕೂ ಮೆಚ್ಚುವಂಥದ್ದೆ.
ಬೆಳೆಯುವ ಮಕ್ಕಳಲ್ಲಿ ಎಷ್ಟೊಂದು ಕಾಂಪಿಟಿಷನ್! ತಮ್ಮ ಮಕ್ಕಳು ಪಕ್ಕದ ಮನೆಯವರಿಗಿಂತ ಹೆಚ್ಚು ಸ್ಕೋರ್ ಮಾಡಬೇಕು. ಸಂಬಂಧಿಕರ ಮಗುವಿಗಿಂತ ಹೆಚ್ಚು ಓದಬೇಕು ಎಂದು ಮಕ್ಕಳ ಮೇಲೆ ಹೇರುವ ತಂದೆ ತಾಯಿಗಳೆಷ್ಟು. ಇಂತಹ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಂದೆ ತಾಯಿ ಹೆಚ್ಚು ಗಮನ ಹರಿಸುತ್ತಿಲ್ಲ. ಆದರೆ ಕರೆಂಟು ಹೋದರೆ ಅಭ್ಯಾಸಕ್ಕಂತೂ ಆಗುವುದಿಲ್ಲವಲ್ಲ. ಹೊರಗಡೆ ಎಲ್ಲಾ ಗೆಳೆಯರು ಸೇರಿ ಕತ್ತಲೆಯಲ್ಲೇ ಹರಟುತ್ತಾ ಕೂಡಬಹುದು. ಅಥವಾ ಬೇರೆ ಏನಾದರೂ ಆಟಗಳನ್ನು ಆಡಬಹುದು. ಒಟ್ಟಿನಲ್ಲಿ ಅಭ್ಯಾಸ, ಓದು ಎನ್ನುವ ದಿನನಿತ್ಯದ ಶೋಷಣೆಯಿಂದ ಮುಕ್ತಿ. ಮಕ್ಕಳಿಗೆ ತಮ್ಮ ಬಾಲ್ಯವನ್ನು ಹಿಂದಿರುಗಿಸುವ ಈ ಕತ್ತಲೆ ನಿಜಕ್ಕೂ KEBಯವರ ಕೊಡುಗೆಯಲ್ಲವೆ? ದಿನ ಪೂರ್ತಿ ಧಾರವಾಹಿಗಳನ್ನು ನೋಡುತ್ತಿದ್ದ ಅಥವಾ ಕಂಪ್ಯೂಟರನ್ನೇ ದಿಟ್ಟಿಸಿ ಆಯಾಸಗೊಂಡಿದ್ದ ಕಣ್ಣಿಗಂತೂ ಈ ಎರಡು ಗಂಟೆಗಳ ಕಾಲ ಸ್ವರ್ಗ ಸುಖವಿದ್ದಂತೆ. ಪ್ರತಿಯೊಬ್ಬರ ದೃಷ್ಟಿಯ ಬಗ್ಗೂ ಕಾಳಜಿವಹಿಸುವ ಈ ಕರೆಂಟು ತೆಗೆಯುವ ಕಾರ್ಯಕ್ರಮ ನಿಜಕ್ಕೂ ನೇತ್ರದಾನದಷ್ಟೇ ಶ್ರೇಷ್ಠವಾದುದಲ್ಲವೆ. ಕರೆಂಟು ಹೋದಾಗ ಮಾಡಲು ಕೆಲಸವಿಲ್ಲದೆ ಮನೆಯ ಹೆಂಗಸರು ಪಕ್ಕದ ಮನೆಯ ಸುಬ್ಬಮ್ಮನನ್ನೋ ಮುನಿಯಮ್ಮನನ್ನೋ ಕರೆದು ಹರಟುತ್ತಾ ಕೂತರೆ ಮಾತೆಯರಿಗೆ ಮಾತೆಯರೆಂಬ ಹೆಸರು ಸಾರ್ಥಕವಾದಂತಲ್ಲವೆ? ಹೆಂಗಸರಿಗೆ ಮರೆತುಹೋದ ತಮ್ಮ ಹುಟ್ಟುಗುಣವನ್ನು ಪುನಃ ನೆನಪಿಸುವ ಕಾರ್ಯ ನಿಜಕ್ಕೂ ಧರ್ಮಸ್ಥಾಪನೆಯ ಕಾರ್ಯವಲ್ಲವೆ?
"ಅಯ್ಯೋ..." ಕ್ಷಮಿಸಿ, "ಅರೆ ವ್ಹಾ... ಈ ಲೇಖನ ಬರೆಯುತ್ತಿರುವಾಗಲೇ ಮತ್ತೆ ಕರೆಂಟ್ ಹೋಯ್ತು". KEBಯವರು ನೂರು ವರ್ಷ ಸುಖವಾಗಿ ಬಾಳಲಿ. ನಾನು ಹೊರಗಡೆ ತಣ್ಣನೆಯ ಗಾಳಿ ಸೇವಿಸಿ ಆರೋಗ್ಯ ವರ್ಧಿಸಿಕೊಂಡು ಬರುತ್ತೇನೆ.
Thursday, January 3, 2008
"ಮತಾಂತರ" - ಒಂದು ಮಂಥನ

ನವೆಂಬರ್ 12 2004 ಒಂಗೋಲ್, 15018 ಜನರನ್ನು ಒಂದೇ ದಿನದಲ್ಲಿ ಬ್ಯಾಪ್ಟೈಸ್ ಮಾಡಲಾಯಿತು. ಒಂದೇ ಒಂದು ವರ್ಷದೊಳಗೆ 10,000 ಚರ್ಚ್‌ಗಳ ಸ್ಥಾಪನೆಯ ಉದ್ದೇಶವನ್ನೂ ತಿಳಿಸಲಾಯಿತು. ಇಷ್ಟೆಲ್ಲ ನೆಡೆದಿದ್ದು ಕೇವಲ ಒಂದು ಕ್ರಿಶ್ಚಿಯನ್ ತಂಡದಿಂದ. ಸೆವೆಂತ್ ಡೇ ಅಡ್ವೆಂಟಿಸ್ಟ್. 1998ರಲ್ಲಿ 225,000 ಜನರನ್ನು ಹೊಂದಿದ್ದ ಸೆವೆಂತ್ ಅಡ್ವೆಂಟಿಸ್ಟ್ ಚರ್ಚ್ 2005ರ ಒಳಗೆ 825,000 ಜನರನ್ನು ಹೊಂದಿತ್ತು. ಇಂತಹಾ ನೂರಾರು ತಂಡಗಳು, ಸಂಸ್ಥೆಗಳು ಭಾರತದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿವೆ. ಇದು ಕೇವಲ ಒಂದು ಉದಾಹರಣೆಯಷ್ಟೆ. 2001ರಲ್ಲಿ ಅಂಧ್ರಪ್ರದೇಶದ ಕ್ರೈಸ್ತರ ಜನಸಂಖ್ಯೆ 6.96%. 2005ರಲ್ಲಿ ಅದು 17% ಆಗಿದೆ. ಇದೇ ದರದಲ್ಲಿ ಮುಂದುವರಿದರೆ ಇನ್ನೊಂದು ದಶಕ ಕಳೆಯುವಷ್ಟರಲ್ಲಿ ಆಂಧ್ರಪ್ರದೇಶ ಕಿರಿಸ್ತಾನವಾಗುತ್ತದೆ. ತಮಿಳು ನಾಡಿನ ಪರಿಸ್ಥಿತಿ ಇದಕ್ಕೆ ಹೊರತಾಗೇನಿಲ್ಲ. ಅಲ್ಲಿ ಈಗಲೇ ಜನಸಂಖ್ಯೆ 28%ಕ್ಕೆ ಮುಟ್ಟಿದೆ. ಆದರೆ ಈ ಅಂಕಿಅಂಶಗಳು ಹೊರಬರುತ್ತಿಲ್ಲ. ಏಕೆಂದರೆ ಇದರಿಂದ ಅಲ್ಪಮತೀಯರಿಗೆ ಸುಗುವ ರೆಸರ್ವೇಶನ್ ಮತ್ತಿತರೆ ಸವಲತ್ತುಗಳು ಸಿಗುವುದಿಲ್ಲವಾದ್ದರಿಂದ. ಇದರಿಂದಾದದುಶ್ಪರಿಣಾಮ ನಮ್ಮ ಕಣ್ಣಮುಂದೇ ಇದೆ. 1947ರಲ್ಲಿ ಸಂಪೂರ್ಣ ಹಿಂದೂರಾಜ್ಯಗಳಾಗಿದ್ದ ಈಶಾನ್ಯದ ನಾಲ್ಕು ರಾಜ್ಯಗಳಲ್ಲಿ ಈಗಿನ ಕ್ರೈಸ್ತರ ಜನಸಂಖ್ಯೆ 75% ದಿಂದ 95%ದ ವರೆಗೆ ಬೆಳೆದಿದೆ. ಕೇವಲ ಹಿಂದುಗಳ ಸಂಖ್ಯೆ ಇಳಿಮುಖವಾಗಿರುವುದು ಸಮಸ್ಯೆಯಲ್ಲ. ಈಗ ಆ ರಾಜ್ಯಗಳು ಭಾರತದಿಂದ ಬೇರ್ಪಡಲು ಹವಣಿಸುತ್ತಿವೆ!
ಮನುಷ್ಯ ಸಂಘಜೀವಿ. ಅವನು ಬಾಳಿ ಬದುಕಲು ಒಂದು ಸಮಾಜ ಬೇಕೇ ಬೇಕು. ಆ ಸಮಾಜವಿದ್ದಂತೆ ಅಲ್ಲಿಯ ಜನರ ಜೀವನ, ಭಾವನೆಗಳು, ಬೌದ್ಧಿಕ ವಿಕಸನಗಳು ಇರುತ್ತವೆ. ಒಂದು ಸಮಾಜಕ್ಕೆ ಸಂಸ್ಕೃತಿಯೆಂಬ ಗಟ್ಟಿಯಾದ ಹಿನ್ನೆಲೆ ದೊರೆತಾಗ ಮಾತ್ರ ಆ ಸಮಾಜದಿಂದ ವಿಶ್ವಕ್ಕೇ ಉತ್ತಮ ಕೊಡುಗೆಗಳನ್ನು ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಈಗಾಗಲೇ ನಶಿಸಿಹೋದ ಸಾವಿರಾರು ಜನಜೀವನಗಳಲ್ಲಿ ಅದೂ ಒಂದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. "ಹಿಂದೂ" ಎಂಬುದು ಒಂದು ಧರ್ಮವಷ್ಟೇ ಅಲ್ಲ. ಅದೊಂದು ಜೀವನ ಪದ್ಧತಿ. ಈ ಜೀವನ ಪದ್ಧತಿ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಲದ ಪ್ರವಾಹಕ್ಕೆ ಸಿಕ್ಕು ತರಗಲೆಗಳಂತೆ ಉದುರಿಹೋದ ಇತರೇ ಸಂಸ್ಕೃತಿಗಳಂತಲ್ಲದೆ, ಸಾವಿರಾರು ಆಕ್ರಮಣಗಳಿಗೊಳಗಾದರೂ ಮರ್ಮಾಘಾತಸಮ ಕೊಡಲಿ ಏಟುಗಳನ್ನು ತಿಂದರೂ ಹಿಂದೂ ಸಂಸ್ಕೃತಿ ಅಲುಗಾಡದೇ ಬೃಹದ್ ವಟವೃಕ್ಷದಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣವಿಷ್ಟೆ. ಇದರ ಮೂಲದಲ್ಲಿ ದೋಷವಿರಲಿಲ್ಲ. ಕಲ್ಮಶ ಕಪಟಗಳು ಇದರೆಡೆಗೆ ಸುಳಿಯಲಿಲ್ಲ. ಇತರರನ್ನು ಬಲಾತ್ಕಾರವಾಗಿ ತನ್ನೆಡೆಗೆ ಸೆಳೆಯುವ ಕ್ರೂರತ್ವ ಇದರಲ್ಲಿರಲಿಲ್ಲ. "ವಸುಧೈವ ಕುಟುಂಬಕಂ", ಇಡೀ ವಿಶ್ವವೇ ಒಂದು ಕುಟುಂಬ ಎಂಬಂತಹ ಮಹತ್ತರವಾದ ಧೋರಣೆ ಈ ಧರ್ಮದ್ದಾಗಿದೆ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ" ಎಂದು ಹೀಳಿದ ಈ ಧರ್ಮದ ಉದಾತ್ತ ಮನೋಭಾವವೆಲ್ಲಿ; ಕೇವಲ ನಾನು ನಂಬಿರುವವನಷ್ಟೇ ದೇವರು, ಬೇರೆಯವರನ್ನು ನಂಬಿರುವವರೆಲ್ಲರೂ ಮಹಾನ್ ಪಾಪಿಗಳು ಎಂದು ಸಾರುವ ಮತಗಳೆಲ್ಲಿ?
ಮತಾಂತರದ ಪರಿಣಾಮದ ವ್ಯಾಪ್ತಿ ಕೇವಲ ಮನುಷ್ಯನ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲ. ಮತಾಂತರದಿಂದ ರಾಷ್ಟ್ರಾಂತರವಾಗುತ್ತದೆ. ಅಯೋಧ್ಯೆ ದ್ವಾರಕೆಗಳು ಪವಿತ್ರಭೂಮಿಗಳಾಗಿದ್ದ ವ್ಯಕ್ತಿಗೆ ಇನ್ನು ಮುಂದೆ ಅವು ಕೇವಲ ಇತರ ನಗರಗಳಂತಾಗಿ, ರೋಮ್ ಬೆತ್ಲಹೇಮ್‌ಗಳು ಪವಿತ್ರಭೂಮಿಗಳಾಗುತ್ತವೆ. ತುಳಿಯುತ್ತಿರುವ ನೆಲ ಕೇವಲ ಮಣ್ಣಾಗಿ ಉಳಿಯುತ್ತದೆಯೇ ಹೊರತು ಯೋಗಭೂಮಿಯಾಗಿ, ಭಾರತಮಾತೆಯಾಗಿ ಕಾಣಿಸುವುದಿಲ್ಲ. ಇನ್ನು ಅವಳಬಗ್ಗೆ ಪ್ರೀತಿ ಎಲ್ಲಿಂದ ಹುಟ್ಟಬೇಕು? ಗಂಗೆ ಪತಿತಪಾವನೆಯಾಗದೆ ಕೇವಲ ನೀರಾಗುತ್ತಾಳೆ. ಹಿಮಾಲಯ ಸಾಧು ಸಂತರ ಆಧ್ಯಾತ್ಮ ತಾಣವಾಗದೆ ಕೇವಲ ಕೆಲಸಕ್ಕೆ ಬಾರದ ಹಿಮಾವ್ರತ ಬಂಜರು ಭೂಮಿಯಾಗುತ್ತದೆ. ದೇಶದ ಆದರ್ಶಪುರುಷರುಗಳಾದ ರಾಮ, ಕೃಷ್ಣ, ವೇದವ್ಯಾಸ, ಅಗಸ್ತ್ಯ, ವಾಲ್ಮೀಕಿ, ಚಾಣಕ್ಯರುಗಳೆಲ್ಲ ಕಾಲ್ಪನಿಕ ಪಾತ್ರಗಳಾಗುತ್ತಾರೆ. ಧರ್ಮೋಧ್ಧಾರಕರಾದ ಶಂಕರ, ಮಾಧ್ವ, ರಾಮಾನುಜ, ಸಮರ್ಥ ರಾಮದಾಸ, ವಿದ್ಯಾರಣ್ಯ, ರಾಮಕೃಷ್ಣ, ವಿವೇಕಾನಂದರು ಪಾಪಿಗಳಾಗುತ್ತಾರೆ. ದೇಶದ ಒಳಿತಿಗೆ ಜೀವನವನ್ನೇ ಮುಡಿಪಾಗಿಟ್ಟ ಶಿವಾಜಿ, ರಣಾ ಪ್ರತಾಪ್, ಪ್ರಥ್ವಿರಾಜ, ಝಾನ್ಸಿ ರಾಣಿ, ಚಂದ್ರಗುಪ್ತ, ವಿಕ್ರಮಾದಿತ್ಯರು ನಗೆಪಾಟಲಾಗುತ್ತಾರೆ. ಒಟ್ಟಿನಲ್ಲಿ ದೇಶದಮೇಲಿನ ಶ್ರದ್ಧೆ ಭಕ್ತಿ ಗೌರವಗಳು ಮಾಯವಾಗಿ ಇದೇ ಭಕ್ತಿ ಶ್ರದ್ಧೆಗಳು ಇನ್ನೊಂದು ದೇಶದ ಪಾಲಾಗುತ್ತದೆ.
ಇಷ್ಟಕ್ಕೂ ಪರಮತಸಹಿಷ್ಣುತೆ ಕೇವಲ ಹಿಂದುಗಳೇಕೆ ಅನುಸರಿಸಬೇಕು? ಒಂದು ಕಾನೂನು ಅಥವಾ ನಿಯಮ ಫಲಕಾರಿಯಾಗುವುದು ಪ್ರತಿಯೊಬ್ಬನೂ ಅದನ್ನು ಪಾಲಿಸಿದಾಗ ಮಾತ್ರ. ಅಲ್ಪಸಂಖ್ಯಾತರು ಧರ್ಮಪ್ರಚಾರ ಪರಧರ್ಮನಿಂದನೆ ಮಾಡಿದರೆ ಅದು ಜಾತ್ಯಾತೀತತೆ, ಬಹುಸಂಖ್ಯಾತರು ಇದನ್ನು ಪ್ರತಿಭಟಿಸಿದರೇ ಅದು ಕೋಮುವಾದ ಎಂದು ಅರ್ಥೈಸುತ್ತಿರುವ ಇಂದಿನ ರಾಜಕಾರಣಿಗಳು ಮತ್ತು ತಥಾಕಥಿತ ಬುದ್ಧಿಜೀವಿಗಳಿಗೆ ಬುದ್ಧಿಬ್ರಮಣೆಯಾಗಿದೆಯೆನ್ನಬೇಕಲ್ಲವೆ. ಧರ್ಮನಾಶವಾಗುತ್ತಿರಬೇಕಾದರೆ ಕೈ ಕಟ್ಟಿ ಕುಳಿತುಕೊಳ್ಳುವುದು ಹಿಂದುವಿನ ಸ್ವಭಾವವಲ್ಲ. ಅಂದು ಮಹಾಭಾರತದಲ್ಲಿ ಕುರುವಂಶದರಿಂದ ಧರ್ಮನಾಶವಾದಾಗ ಕೃಷ್ಣ ಪಾಂಡವರಿಗೆ ಕೈ ಕಟ್ಟಿ ಕೂತಿರಿ ಎಂದು ಹೇಳಲಿಲ್ಲ. ಸ್ವಜನರ ಹತ್ಯೆ ನನ್ನಿಂದಾಗದು ಎಂದು ಅರ್ಜುನ ಬಿಲ್ಲು ಬಿಸುಟಿ ಕುಳಿತಿದ್ದಾಗ ಗೀತೋಪದೇಶ ನೀಡಿ "ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದುಚ್ಛರಿಸಿದಾಗಲೇ ಧರ್ಮ ಕೇವಲ ಶಾಸ್ತ್ರವಿಚಾರಗಳಿಂದ ಕೂಡಿರುವುದಷ್ಟೇ ಅಲ್ಲ, ಶಸ್ತ್ರವನ್ನೂ ಹಿಡಿದು ಯುದ್ಧಮಾಡುವುದೂ ಇದಕ್ಕೆ ಗೊತ್ತಿರಬೇಕು ಎಂದು ಆ ಜಗದ್ಗುರುವು ಸಾರಿದ. ಇಂತಹ ಮತಾಂತರಗಳ ಮೂಲವನ್ನರಿತುದಕ್ಕೇ ಇರಬೇಕು ಸ್ವಾಮಿ ವಿವೇಕಾನಂದರು "ಒಬ್ಬ ಹಿಂದು ಮತಾಂತರಗೊಂಡರೆ, ಒಬ್ಬ ಹಿಂದು ಕಡಿಮೆಯಾದುದಷ್ಟೇ ಅಲ್ಲ ಒಬ್ಬ ವೈರಿ ಹೆಚ್ಚಾದಂತೆ" ಎಂದು ಹೇಳಿದುದು. ಆದರೆ ಕೇವಲ ಅವರ ಮಾತುಗಳನ್ನು ಕೇಳಿ ಈಗಿನ ಜನತೆಗೆ ಬುದ್ಧಿಬರುವುದು ಕಷ್ಟವೇ ಇದೆ. ಬಹುಶಃ ಭಾರತವನ್ನು ಭಾರತವಾಗೇ ಇರಿಸಲು ವಿವೇಕಾನಂದರು ಮತ್ತೊಮ್ಮೆ ಹುಟ್ಟಿ ಬರಬೇಕೋ ಏನೊ?