
"ಇನ್ಮುಂದೆ ಶಾಲೆ ಗ್ರೌಂಡ್ನಲ್ಲಿ ಕ್ರಿಕೆಟ್ ಆಡಿದ್ರೆ ನೋಡಿ. ಕ್ರಿಕೆಟ್ ಅಂತೆ ಕ್ರಿಕೆಟ್ಟು... ಅದರ ಬದ್ಲು ಖೋಖೋ ಆಡಿ. ಕಬಡ್ಡಿ ಆಡಿ" ಎಂದು ಒಂದು ವಾರದ ಹಿಂದಷ್ಟೇ ಗುಡುಗಿದ್ದರು ನಮ್ಮ ಪಿಇ ಮೇಸ್ಟ್ರು. ಬಹುತೇಕ ಎಲ್ಲ ಹೈಸ್ಕೂಲ್ಗಳಲ್ಲೂ ಪರಿಸ್ಥಿತಿ ಹೀಗೇ ಇರಬೇಕು. ಹುಡುಗರಿಗೆ ಕ್ರಿಕೆಟ್ ಬಿಟ್ಟರೆ ಬೇರೆ ಆಟಗಳೇ ಗೊತ್ತಿಲ್ಲ. ಮನೆಯೊಳಗಾಡುವ ಆಟಗಳನ್ನು ಕಂಪ್ಯೂಟರ್ ಗೇಮ್ಗಳು ಮರೆಸಿಬಿಟ್ಟಿದ್ದರೆ, ಹೊರಗಾಡುವ ಆಟಗಳನ್ನು ಈ ಕ್ರಿಕೆಟ್ಟು ನುಂಗಿಹಾಕಿಬಿಟ್ಟಿದೆ. ಕುಂಟೆಬಿಲ್ಲೆ, ಗಿಲ್ಲಿ ದಾಂಡು, ಲಗೋರಿಗಳನ್ನು ಜನ ಮರೆತೇ ಬಿಟ್ಟಿದ್ದಾರೆ. ಕಬ್ಬಡ್ಡಿ ಎಂದರಂತೂ ಕೆಲವರು ನಗಲು ಶುರುಮಾಡಿಬಿಡುತ್ತಾರೆ! ನಗುವಿಗೆ ನಮ್ಮ ನವರಸ ನಾಯಕ ಜಗ್ಗೇಶ್ ಪ್ರಭಾವವಿರಬೇಕು. ಅದೇನೇ ಇರಲಿ. ಕ್ರಿಕೆಟ್ಟು ಆಡುವುದನ್ನು ನಿಷೇಧಿಸಿದ ನಮ್ಮ ಮೇಸ್ಟ್ರು ಬ್ಯಾಟು ಬಾಲುಗಳನ್ನೂ ಕಿತ್ತುಕೊಂಡು ಹೋಗಿ ತಮ್ಮ ಟೇಬಲ್ ಕೆಳಗಿಟ್ಟುಕೊಂಡುಬಿಟ್ಟರು. ಸಿಟ್ಟು ತಡೆಯಲಾಗದ ನಾವು, "ನೋಡ್ರೋ... ಆಟ ಆಡ್ಬೇಡಿ ಅಂತ ಹೇಳಿದ್ರೆ ಆಗಿತ್ತಪ್ಪ... ಬ್ಯಾಟು ಬಾಲು ಯಾಕೆ ತಗೊಂಡು ಹೋಗ್ಬೇಕಿತ್ತು? ಇವತ್ತು ಸಂಜೆ ಅವರ ಮನೆಗೆ ಹೋಗಿ ನೋಡಿ ಬೇಕಿದ್ರೆ, ಅವರ ಮಗ ಅದೇ ಬ್ಯಾಟು ಬಾಲಲ್ಲಿ ಕ್ರಿಕೆಟ್ ಆಡ್ತಿರ್ತಾನೆ..." ಅಂತೆಲ್ಲ ಮಾತಾಡಿಕೊಂಡು ಸಿಟ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆವು. ನಮ್ಮ ಪಿಇ ಮೇಸ್ಟ್ರು ಕೂಡಾ ಬಹಳ ನೊಂದುಕೊಂಡುಬಿಟ್ಟಿದ್ದರು. ನಮ್ಮ ಹೈಸ್ಕೂಲ್ ಕಳೆದ ಮೂರು ವರ್ಷಗಳಿಂದ ಖೋಖೋ ಆಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಈ ವರ್ಷವಾದರೋ ನಾವು ಖೋಖೋ ಎಂದು ಕೇಳಿದಾಕ್ಷಣ ಖೋ ಕೊಟ್ಟವರಂತೆ ಓಡಿಹೋಗಿಬಿಡುತ್ತಿದ್ದೆವು. ಇವೆಲ್ಲ ವಿಷಯಗಳು ಸೇರಿಕೊಂಡು ನಮ್ಮ ಬ್ಯಾಟು ಬಾಲುಗಳಿಗೆ ಪಂಗನಾಮ ಹಾಕಿದ್ದವು.
ಮಾರನೇ ದಿನ ಶಾಲಾ ಮಟ್ಟದ ಸ್ಪೋರ್ಟ್ಸ್ ನಡೆಯುತ್ತಿತ್ತು. ನಮ್ಮ ಪಿಇ ಮೇಸ್ಟ್ರು ಎಲ್ಲಿಂದಲೋ ಒಟ್ಟು ಹಾಕಿ ಮೂರ್ನಾಲಕು ಖೋಖೋ ತಂಡಗಳನ್ನು ತಯಾರಿ ಮಾಡಿಸಿಯೇ ಬಿಟ್ಟಿದ್ದರು. ’ಯುಕ್ತಿ’ ’ಶಕ್ತಿ’ ’ಕೀರ್ತಿ’ ಮತ್ತು ’ಸ್ಪೂರ್ತಿ’ ಬಣಗಳು ಪ್ರತಿಯೊಂದು ಆಟದಲ್ಲೂ ತಾವೇ ಗೆಲ್ಲಬೇಕೆಂದು ಸೆಣಸತೊಡಗಿದ್ದವು. ಆದರೆ ಇವು ಯಾವುದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ನಾವು ಒಂದಿಷ್ಟು ಜನ ಮಾತ್ರ ಅತ್ತ ಇತ್ತ ಸುತ್ತಾಡುತ್ತ, ಹುಡುಗಿಯರು ಹೆಚ್ಚಿದ್ದ ಕಡೆ "ಥೂ... ಅವನಿಗೆ ಆಡ್ಲಿಕ್ಕೇ ಬರುದಿಲ್ಲಾ... ಅವನ್ನೆಂತಕ್ಕೆ ಸಿಲೆಕ್ಟ್ ಮಾಡಿದ್ರೋ ಮಾರಾಯ..." ಎಂದು ಕಮೆಂಟ್ ಕೊಡುತ್ತಾ ಹೀರೋಗಳಾಗಲು ಪ್ರಯತ್ನಿಸುತ್ತಿದ್ದೆವು. ಕೊನೆಗೆ ಯಾವ ಹುಡುಗಿಯೂ ಇತ್ತ ಕಣ್ಣು ಹಾಯಿಸದಿದ್ದಾಗ ನಾವೂ ಬೇಸತ್ತು ಒಂದುಕಡೆ ಸುಮ್ಮನೆ ಕುಳಿತು ಖೋಖೋ ನೋಡತೊಡಗಿದೆವು. ಆಗ ನಮ್ಮಲ್ಲೊಬ್ಬ "ಲೋ... ಕ್ರಿಕೆಟ್ ಆಡೋಣ್ವಾ?" ಅಂದ. ಎಲ್ಲರೂ ಅವನಿಗೆ ಬೈಯ್ಯತೊಡಗಿದರು. ನಿನ್ನೆ ಮಾತ್ರ ಮಂಗಳಾರತಿ ಮಾಡಿಸಿಕೊಂಡಿದ್ದು ಸಾಕಾಗ್ಲಿಲ್ವಾ... ಹಾಗೆ... ಹೀಗೆ ಎಂದು. "ಇವತ್ತು ನಮ್ಮನ್ನ ಯಾರೋ ನೋಡ್ತಾರೆ? ಪಿಇ ಮೇಸ್ಟ್ರು ಆಟ ಆಡ್ಸೋದ್ರಲ್ಲಿ ಬ್ಯುಸಿ ಇದಾರೆ. ನಾವು ಅತ್ಲಾಗೆ, ಕಾಲೇಜ್ ಹತ್ರ ಹೋಗಿ ಆಡಿದ್ರಾಯ್ತಪ್ಪಾ... ಯಾರಿಗೂ ಕಾಣೂದೂ ಇಲ್ಲಾ" ಎಂದ. ಎಲ್ಲರಿಗೂ ಅವನ ಮಾತು ಸರಿಯೆನಿಸಿತು. ಆದ್ರೆ ಬ್ಯಾಟು ಬಾಲು ಇಲ್ವಲ್ಲಾ! ಬಾಲು ಒಬ್ಬನ ಹತ್ತಿರ ಇತ್ತು. ಬ್ಯಾಟಿಗೆ, ಬ್ಯಾಟೇ ಆಗಬೇಕು ಎಂದೇನಿಲ್ಲವಲ್ಲ. ಅಲ್ಲೇ ಒಂದು ಮುರುಕು ಮನೆಗೆ ಹೋಗಿ ಒಂದು ರೀಪಿನ ಪೀಸನ್ನು ಸಂದೀಪ ಹುಡುಕಿಕೊಂಡು ಬಂದ. ಮತ್ತೆ ಶುರುವಾಯಿತು ನಮ್ಮ ಕ್ರಿಕೆಟಾಯಣ.
ಎಮ್. ಎಮ್. ಕಾಮರ್ಸ್ ಕಾಲೇಜಿನ ಹತ್ತಿರವೇ ನಮ್ಮ ಹೈಸ್ಕೂಲು. ಕಾಲೇಜು ಮತ್ತು ನಮ್ಮ ಹೈಸ್ಕೂಲಿನ ನಡುವೆ ಒಂದಿಷ್ಟು ಖಾಲಿ ಜಾಗ ಮತ್ತು ಒಂದು ಚಿಕ್ಕ ಬಿಲ್ಡಿಂಗ್ ಕೂಡಾ ಇತ್ತು. ಆ ಬಿಲ್ಡಿಂಗಿನ ಕದ ತೆರೆದದ್ದನ್ನು ನಾವಂತೂ ಯಾರೂ ನೋಡಿರಲಿಲ್ಲ. ಅದರ ಒಳಗೆ ಏನೇನೋ ನೆಡೆಯುತ್ತದೆ ಎಂಬ ಕುತೂಹಲಕಾರಿ ಕಥೆಗಳು ಮಾತ್ರ ಎಲ್ಲರಿಗೂ ತಿಳಿದಿತ್ತು. ಅದಲ್ಲದೆ ಆ ಬಿಲ್ಡಿಂಗಿನ ಗೋಡೆಯ ಸುತ್ತೆಲ್ಲಾ "ನಾಳೆ ಬಾ" ಎಂದು ಬೇರೆ ಬರೆದಿದ್ದರು. ನಮ್ಮಲ್ಲಿ ಕೆಲವರು ಇಲ್ಲಿ ಕ್ರಿಕೆಟ್ ಆಡುವುದಾ? ಎಂದು ಸ್ವಲ್ಪ ಹೆದರಿದರೂ ಕ್ರಿಕೆಟ್ಟಿನ ಆಕರ್ಷಣೆಯಲ್ಲಿ ಅದನ್ನೆಲ್ಲ ಮರೆತುಬಿಟ್ಟರು. ಸ್ಟಂಪ್ಸ್ಗೆ ಏನು ಮಾಡುವುದು ಎಂದು ಹುಡುಕುತ್ತಿರುವಾಗ ಚೇತನ ಒಂದು ಚಾಕ್ ಪೀಸ್ ಹಿಡಿದುಕೊಂಡು ಬಂದ. ಆ ಬಿಲ್ಡಿಂಗಿನ ಒಂದು ಕಂಬದ ಮೇಲೆ ಸ್ಟಂಪಿನ ಚಿತ್ರ ಬಿಡಿಸಿ ಇದೇ ಸ್ಟಂಪು ಎಂದ. ಎಲ್ಲರಿಗೂ ಅದೊಂದೇ ದಾರಿಯೆನಿಸಿ ಒಪ್ಪಿದರು. ಎರಡು ಟೀಮ್ಗಳನ್ನು ಮಾಡಿ, ಒಬ್ಬ ಹೆಚ್ಚಾದುದರಿಂದ ಅವನನ್ನು ಜೋಕರ್ ಮಾಡಿ ಆಟ ಪ್ರಾರಂಭವಾಯಿತು. ಲೆಗ್ಸೈಡ್ ಕಾಲೇಜಿನ ಲೈಬ್ರರಿ ಇರುವುದರಿಂದ ಲೆಗ್ಸೈಡ್ ರನ್ ನಿಷೇಧಿಸಲಾಯಿತು. ಕೇವಲ ಆಫ್ಸೈಡ್ ಅಷ್ಟೇ ರನ್ ಗಳಿಸಬೇಕಾದ್ದುದರಿಂದ ಬಾಲರ್ಗಳೆಲ್ಲಾ ಕೇವಲ ಲೆಗ್ಸೈಡ್ ಅಷ್ಟೇ ಬಾಲ್ ಹಾಕಲು ಪ್ರಾರಂಭಿಸಿದರು. ಬ್ಯಾಟ್ಸ್ಮನ್ಗಳಿಗೆ ಒಳ್ಳೇ ಕಿರಿಕಿರಿ ಪ್ರಾರಂಭವಾಗಿಬಿಟ್ಟಿತು. ಅದರಲ್ಲೂ ರಾಘು ಸಿಕ್ಕಾಪಟ್ಟೆ ಸಿಟ್ಟುಮಾಡಿಕೊಂಡಿದ್ದ. ಅವನಿಗೋ ಪಾಪ, ಲೆಗ್ಸೈಡ್ ಅಷ್ಟೇ ರನ್ ತೆಗೆಯಲು ಬರುತ್ತಿತ್ತು.
ಆಟ ಸುರಳೀತವಾಗಿ ಸಾಗುತ್ತಿತ್ತು. ಅತ್ತ ನಮ್ಮ ಪಿಇ ಮೇಸ್ಟ್ರು ಖೋಖೋ ಆಡಿಸುವುದರಲ್ಲಿ ಮುಳುಗಿಹೋಗಿದ್ದರು. ಖೋಖೋ ನೋಡಿ ನೋಡಿ ಬೆಸತ್ತುದಕ್ಕೋ ಏನೊ, ನಮ್ಮ ತರಗತಿಯ ಕೆಲವು ಹುಡುಗಿಯರು ಹಾಗೇ ಸುತ್ತುಹಾಕುತ್ತಾ ಕಾಲೇಜ್ ಕಡೆ ಬಂದುಬಿಟ್ಟರು. ನಾವು ಅಲ್ಲಿ ಕ್ರಿಕೆಟ್ ಆಡುತ್ತಿರುವುದನ್ನು ನೋಡಿ ತಮ್ಮ ತಮ್ಮೊಳಗೇ ಏನೇನೋ ಮಾತನಾಡಿಕೊಳ್ಳುತ್ತಾ ಮುಸಿ ಮುಸಿ ನಗತೊಡಗಿದರು. ಇದನ್ನೆಲ್ಲಾ ವೀಕ್ಷಿಸುತ್ತಾ, ಅದರಲ್ಲೂ ಬ್ಯಾಟಿಂಗ್ ಮಾಡುತ್ತಿದ್ದ ರಾಘುವಿಗೆ ಒಂದು ರೀತಿಯ ಉತ್ಸಾಹ ಉಕ್ಕಿಬಂದುಬಿಟ್ಟಿತು. ಲೆಗ್ಸೈಡ್ ಯಾರೂ ಫೀಲ್ಡರ್ಗಳು ಇಲ್ಲದ ಕಾರಣ, ಅಲ್ಲಿ ಬಾಲನ್ನು ಹೊಡೆದರೆ ಬ್ಯಾಟ್ಸ್ಮನ್ನೇ ಹೋಗಿ ತರಬೇಕು ಎನ್ನುವ ರೂಲ್ಸ್ ಇತ್ತು. ಈಗ ಹುಡುಗಿಯರೂ ಕಾಲೇಜಿನ ಹತ್ತಿರವೇ ಬಂದು ನಿಂತಿದ್ದರು. ಬಾಲರ್ ಕೂಡಾ ಲೆಗ್ಸೈಡ್ ಬಾಲ್ ಒಗೆಯುತ್ತಿದ್ದ. ರಾಘುವಿಗೆ ಹುಡುಗಿಯರ ಮುಂದೆ ಬೀಟ್ ಆಗುವುದು ಇಷ್ಟವಿರಲಿಲ್ಲ. ಈಸಲ ಲೆಗ್ಸೈಡಿಗೆ ಬಂದ ಬಾಲನ್ನು ಜೋರಾಗಿ ಕಾಲೇಜಿನ ಕಡೆಯೇ ಬಾರಿಸಿಬಿಟ್ಟ. ಬಾಲು ನೇರವಾಗಿ ಹೋಗಿ ಕಾಲೇಜ್ ಲೈಬ್ರರಿಯ ಕಿಟಕಿಯ ಗಾಜಿನ ಮೇಲೆ ಬಿತ್ತು. ಗಾಜು ಫಟಾರ್ ಎಂದು ಶಬ್ದ ಮಾಡುತ್ತಾ ಪುಡಿಪುಡಿಯಾಗಿ ಒಡೆದುಹೋಯಿತು. ಹುಡುಗಿಯರು ಕಿಟಾರ್ ಎಂದು ಚೀರುತ್ತಾ ಅಲ್ಲಿಂದ ದೂರಸರಿದರು. ಕಾಲೇಜ್ ಲೈಬ್ರರಿಯ ಒಳಗಿದ್ದ ಜನ ಏನಾಯಿತೆಂದು ಹೊರಗೆ ಬಂದು ನೋಡುವಷ್ಟರಲ್ಲಿ ನಮ್ಮಲ್ಲಿ ಒಬ್ಬನೂ ಅಲ್ಲಿರಲಿಲ್ಲ. ಒಂದಿಬ್ಬರು ಹೈಸ್ಕೂಲಿಗೆ ವಾಪಸ್ ಓಡಿಬಂದು ಏನೂ ಆಗಿಲ್ಲವೇನೋ ಎಂಬಂತೆ ಖೋಖೋ ನೋಡಲು ಶುರುಮಾಡಿದ್ದರು. ಒಂದಿಬ್ಬರು ಕಾಲೇಜ್ ಹಿಂದುಗಡೆಗೆ ಓಡಿಹೋಗಿ ಕಾಂಪೌಂಡ್ ಜಿಗಿದು ಮನೆಗೇ ಓಡಿದ್ದರು. ಉಳಿದವರು ಎತ್ತೆಂದರತ್ತ ಚಲ್ಲಾಪಿಲ್ಲಿಯಾಗಿ ಹೋಗಿದ್ದರು.
ಮಾರನೇ ದಿನ ಶಾಲೆಯಲ್ಲಿ ಎಲ್ಲರೂ ಭೇಟಿಯಾದಾಗ, ನಿನ್ನೆ ಏನೂ ನೆಡೆದೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದೆವು. ಆದರೆ ಒಬ್ಬರ ಮುಖವನ್ನು ಇನ್ನೊಬ್ಬ ನೋಡಿದಾಗ ತನಗೇ ಅರಿಯದ ಒಂದು ಕಳ್ಳ ನಗು ಮುಖದಲ್ಲಿ ಬಂದುಹೋಗುತ್ತಿತ್ತು. ಒಟ್ಟಿನಲ್ಲಿ ಯಾವುದೋ ಒಂದು ದೊಡ್ಡ ತಪ್ಪನ್ನು ಮಾಡಿದರೂ ಯಾರಿಗೂ ತಿಳಿಯಲೇ ಇಲ್ಲ ಎನ್ನುವ ಸಂತೋಷದಲ್ಲಿ ಎಲ್ಲರೂ ಬೀಗುತ್ತಿದ್ದೆವು. ಮಧ್ಯಾಹ್ನ ಯಾಕೋ ನಾಮ್ಮ ಮನೆಯಲ್ಲಿ ಊಟಕ್ಕೆ ತಡವಾಗಿ ನಾನು ವಾಪಸ್ ಶಾಲೆಗೆ ಹೋಗುವಾಗ ಮಧ್ಯಾಹ್ನದ ಮೊದಲನೇ ಅವಧಿ ಆಗಲೇ ಶುರುವಾಗಿಬಿಟ್ಟಿತ್ತು. ಸಂಸ್ಕೃತ ಹೇಳುತ್ತಿದ್ದ ಮೇಡಮ್ ಆಗಲೇ ಕ್ಲಾಸಿಗೆ ಬಂದಾಗಿತ್ತು. ನಾನು ಹೋಗಿ ಬಾಗಿಲಲ್ಲಿ ನಿಂತು ಮೇಡಮ್ ಅನ್ನುವಷ್ಟರಲ್ಲಿ, "ಓ... ಬಂದ್ಯೇನಪ್ಪಾ... ಬಾ. ನೋಡು... ನಿನ್ನ ಫ್ರೆಂಡ್ಸ್ ಎಲ್ಲಾ ಆ ಮೂಲೇಲಿ ನಿತ್ಕೊಂಡಿದಾರೆ. ನೀನೂ ಹೋಗಿ ಅವರ ಜೊತೆ ನಿಂತ್ಕೊ ಹೋಗು" ಎಂದರು. ನನಗೆ ಒಮ್ಮೆಲೇ ದಿಗಿಲಾಗಿ ಅತ್ತಕಡೆ ನೋಡಿದರೆ, ನಿನ್ನೆ ಕ್ರಿಕೆಟ್ ಆಡಲು ಹೋಗಿದ್ದ ಆರೂ ಜನ ತಲೆ ತಗ್ಗಿಸಿ ಒಂದುಕಡೆ ನಿಂತಿದ್ದರು. ನಾನೇ ಏಳನೆಯವನು. ನನ್ನ ಬರುವಿಗಾಗೇ ಕಾಯುತ್ತಿದ್ದರು. ಈ ವಿಷಯ ಇವರಿಗೆ ಹೇಗೆ ಗೊತ್ತಾಯ್ತಪ್ಪಾ ಎಂದುಕೊಳ್ಳುತ್ತಾ ಸಹೋದ್ಯೋಗಿಗಳ ಜೊತೆ ನಿಂತೆ. ಅಷ್ಟು ಹೊತ್ತಿಗೆ ನಮ್ಮ ಹೆಡ್ ಮಾಸ್ಟರ್ ಕ್ಲಾಸಿಗೆ ಬಂದರು. ಮೇಡಮ್ ಅವರಿಗೆ ಈ ಪ್ರಸಂಗದ ಬಗ್ಗೆ ವಿವರಿಸುತ್ತಾ "ನೋಡ್ರೀ ಈ ಸಪ್ತರ್ಷಿಗಳೇ ಹೋಗಿ ಗ್ಲಾಸ್ ಒಡದು ಬಂದದ್ದು." ಎಂದು ನಮ್ಮ ಪರಿಚಯ ಮಾಡಿಕೊಟ್ಟರು.
ಗಾಜು ಒಡೆದಾಗ ಹೆದರಿ ಓಡುವ ಭರಾಟೆಯಲ್ಲಿ ನಮ್ಮಲ್ಲೇ ಒಬ್ಬ ಕಾಲೇಜ್ ಕಾರಿಡಾರ್ನಲ್ಲೇ ಓಡತೊಡಗಿದ್ದ. ಕಾಲೇಜು ಪ್ಯೂನ್ ಅವನನ್ನು ಹಿಡಿದು ಯಾಕೆ ಓಡುತ್ತಿದ್ದೀಯಾ ಎಂದು ಗದರಿದಾಗ ಗಾಜು ಒಡೆದ ಸುದ್ದಿಯಿಂದ ಹಿಡಿದು ಆಟದಲ್ಲಿ ಯಾರು ಯಾರು ಇದ್ದರು ಎಂಬುದನ್ನೂ ಒಂದೂ ಬಿಡದಂತೆ ಅವನಿಗೊಪ್ಪಿಸಿಬಂದುಬಿಟ್ಟಿದ್ದ ನಮ್ಮೊಳಗಿದ್ದ ಹರಿಶ್ಚಂದ್ರ. ಆದರೂ ಯಾರಿಗೂ ಹೀಗಾಯಿತು ಎಂದು ಬಾಯಿಬಿಟ್ಟಿರಲಿಲ್ಲ. ನಮಗೆ ನಮ್ಮ ನಮ್ಮೊಳಗೇ ಸಂಶಯ ಶುರುವಾಗತೊಡಗಿತು. ಹೆಸರು ಕೊಟ್ಟಿದ್ದು ಯಾರು? ಅವನಿರಬೇಕು ಇವನಿರಬೇಕು ಎಂದು ಯೋಚಿಸುತ್ತಿರುವ ನಡುವೆಯೇ ಚೇತನ ಬಹುಶಃ ಹುಡುಗೀರು ಹೇಳಿರ್ಬೇಕು ಎನ್ನುತ್ತಿದ್ದ. ಕೊನೆಗೂ ಹೆಡ್ ಮಾಸ್ಟ್ರು ನಮ್ಮ ಹೆಸರುಗಳನ್ನು ಓದತೊಡಗಿದರು. ಎಲ್ಲರಿಗೂ ಆಶ್ಚರ್ಯ. ಯಾಕೆಂದರೆ ಅಲ್ಲಿದ್ದ ಹೆಸರುಗಳೆಲ್ಲಾ ನಮ್ಮ ನಿಕ್ ನೇಮ್ಸ್. ಅವೆಲ್ಲಾ ನಮ್ಮ ನಮ್ಮಲೇ ಇನ್ನೊಬ್ಬರನ್ನು ಕಿಚಾಯಿಸಲು ಇಟ್ಟ ಹೆಸರುಗಳು .ಡುಮ್ಮ, ಸೊಣಕ, ಕೋಳಿ, ಗಾಂಧಿ, ಮಾಣಿ, ಚುರ್ಮುರಿ... ಆದರೆ ಒಬ್ಬನ ಹೆಸರು ಮಾತ್ರ ಒರಿಜಿನಲ್. ಚೇತನ್ ಶೆಟ್ಟಿ! ಈ ಹೆಸರುಗಳನ್ನು ಚೇತನನೇ ಕೊಟ್ಟಿದ್ದು ಎನ್ನುವುದರಲ್ಲಿ ಯಾರಿಗೂ ಸಂಶಯ ಉಳಿಯಲಿಲ್ಲ. ಕ್ಲಾಸು ಮುಗಿದಾಗ ಎಲ್ಲರೂ ಹೋಗಿ ಚೇತನನನ್ನು ಹುರಿದು ಮುಕ್ಕುವುದೊಂದು ಬಾಕಿ ಇತ್ತು. ಎಲ್ಲರ ಮುಖದ ಮೇಲೂ ಸಿಟ್ಟು ತಾಂಡವವಾಡುತ್ತಿತ್ತು. ಗಾಜು ಒಡೆದುಬಂದ ವಿಷಯ ನಮ್ಮ ಮೇಸ್ಟ್ರುಗಳಿಗೆ ಗೊತ್ತಾಯಿತಲ್ಲಾ ಎಂಬುದಕ್ಕಲ್ಲ. ತಮ್ಮ ನಿಕ್ ನೇಮ್ ಹುಡುಗಿಯರಿಗೆ ಗೊತ್ತಾಗಿ ಅವರೆಲ್ಲಾ ನಮ್ಮನ್ನು ನೋಡಿ ನೋಡಿ ನಗತೊಡಗಿದುದಕ್ಕೆ.