Monday, July 14, 2008

ಕ್ರಿಕೆಟ್ ವರ್ಸಸ್ ತಬಲಾ

"ಇವತ್ತು ಸಂಜೆ ಕ್ರಿಕೆಟ್ ಆಡ್ಲಿಕ್ಕೆ ಬರ್ತೀಯೇನೊ?"
"ಇಲ್ಲಪ್ಪಾ... ನಂಗೆ ತಬ್ಲಾ ಕ್ಲಾಸ್ ಇದೆ"
"ಯೆಲ್ಲೀ ತಬ್ಲಾ ಕ್ಲಾಸು ತೆಗ್ಯೋ... ಸುಮ್ನೆ ಆಡ್ಲಿಕ್ ಬಾ. ಮಜಾ ಬರ್ತದೆ".

ಅಂತೂ ಗೆಳೆಯರೆಲ್ಲಾ ಸೇರಿ ನನ್ನ ತಲೆ ಕೆಡಿಸೇ ಬಿಟ್ಟಿದ್ದರು. ಆಗ ತಬಲಾ ಕಲಿಯಲು ನನಗೇನೂ ಇಂಟರೆಸ್ಟ್ ಇರಲಿಲ್ಲ. ಆದರೆ ನನ್ನ ತಂದೆಗಿತ್ತಲ್ಲಾ! ಅವರಿಗೆ ಕಲಿಯಲಿಕ್ಕೆ ಆಗಲಿಲ್ಲವಂತೆ. ಅದಕ್ಕೇ ನನ್ನನ್ನು ಕಲಿಯಲಿಕ್ಕೆ ಹಚ್ಚಿಬಿಟ್ಟಿದ್ದರು. ನಾನೋ ಇಲ್ಲದ ಮನಸ್ಸಿನಿಂದ ತಬಲಾ ಕಲಿಯಲು ಹೋಗುತ್ತಿದ್ದೆ. ಯಾವುದೇ ವಿದ್ಯೆಯಾದರೂ ಹಾಗೆಯೇ. ಕಲಿಯುವುದಕ್ಕೆ ಕಷ್ಟವೆನಿಸತೊಡಗಿದರೆ ಅದರ ಮೇಲೆ ಆಸಕ್ತಿಯೇ ಹೊರಟುಹೋಗುತ್ತದೆ. ನಾನು ಐದನೇ ತರಗತಿಯಲ್ಲಿರಬೇಕಾದರೇ ನನ್ನ ತಂದೆ ನನ್ನನ್ನು ತಬಲಾ ಕ್ಲಾಸಿಗೆ ಹಚ್ಚಿಬಿಟ್ಟಿದ್ದರು. ಅದರಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಪಾಸಾದ ನಂತರ ನನ್ನನ್ನು ಬೇರೊಬ್ಬರಲ್ಲಿ ತಬಲಾ ಕಲಿಯಲು ಕಳಿಸಿದರು. ಇವರು ಬಹಳ ಚೆನ್ನಾಗೇನೋ ಹೇಳಿಕೊಡುತ್ತಿದ್ದರು. ಆದರೆ ಅಲ್ಲಿ ಬರುವ ಹುಡುಗರೆಲ್ಲಾ ನನಗಿಂತ ಹೆಚ್ಚು ಚೆನ್ನಾಗಿ ನುಡಿಸುವವರು. ನಾನು ಇನ್ನೂ ಬಚ್ಚಾ. ಅದೇ ಕಾರಣಕ್ಕೋ ಏನೊ. ಬರಬರುತ್ತ ನನಗೆ ಕ್ರಿಕೆಟ್‌ನಲ್ಲೇ ಆಸಕ್ತಿ ಹೆಚ್ಚತೊಡಗಿತ್ತು. ಪ್ರತೀ ಶನಿವಾರ ಮತ್ತು ಭಾನುವಾರ ತಬಲಾ ಕ್ಲಾಸ್‌ಗಳು. ಹುಡುಗರ ಕ್ರಿಕೆಟ್ ಅಂತೂ ದಿನವೂ ನೆಡೆದೇ ಇರುತಿತ್ತು. ಆದರೂ ಶನಿವಾರ ಭಾನುವಾರ ಹೋಗಲು ತಪ್ಪಿಸಿಕೊಂಡರೆ ಏನೋ ಒಂದು ಕಳೆದುಕೊಂಡಂತೆ. ಸೋಮವಾರ ಶಾಲೆಗೆ ಹೋದ ತಕ್ಷಣ ನಿನ್ನೆ ಆಡಿದ ಕ್ರಿಕೆಟ್ಟಿನ ಸುದ್ದಿ. ನನಗಂತೂ ಜಗತ್ತಿನ ಅತಿ ದೊಡ್ಡ ಸುಖವನ್ನು ಕಳೆದುಕೊಳ್ಳುತ್ತಿದ್ದೇನೋ ಎನಿಸತೊಡಗಿತ್ತು.

ಜಗತ್ತಿನಲ್ಲಿ ಅತ್ಯಂತ ಸುಲಭವಾಗಿ ಯಾವುದೇ ಗುರುವಿನ ಸಹಾಯವಿಲ್ಲದೆ ಕಲಿಯಬಹುದಾದ ಒಂದೇ ಒಂದು ವಿದ್ಯೆ ಅಂದರೆ ಸುಳ್ಳು ಹೇಳುವುದು. ನಾನೂ ಯಾವುದೇ ಗುರುವಿನ ಸಹಾಯವಿಲ್ಲದೆ ಕಲಿತುಬಿಟ್ಟಿದ್ದೆ. ತಬಲಾ ಕ್ಲಾಸಿಗೆಂದು ಮನೆಯಲ್ಲಿ ಹೇಳಿ ಶಾಲೆಯ ಗ್ರೌಂಡಿಗೆ ಹಾಜರ್ ಆಗಿಬಿಡುತ್ತಿದ್ದೆ. ಸತತವಾಗಿ ಮೂರ್ನಾಲಕು ವಾರ ಹೀಗೇ ಕಳೆಯಿತು. ಪ್ರತಿಸಲವೂ ತಬಲಾ ಕ್ಲಾಸಿಗೆ ಹೋಗಿಬಂದರೆ ಹುಡುಗನ ಬಟ್ಟೆ ಯಾಕಿಷ್ಟು ಕೊಳೆಯಾಗಿರುತ್ತದೆ ಎಂದು ನನ್ನ ತಾಯಿ ಸಂಶಯಪಟ್ಟಿರಲೂಬಹುದು. ಆದರೆ ಆ ಸ್ವರ್ಗಸುಖದ ಮುಂದೆ ಈ ಸಣ್ಣ ಪುಟ್ಟ ವಿಷಯಗಳೆಲ್ಲ ನನಗೆಲ್ಲಿ ತಲೆಗೆ ಹತ್ತಿರಬೇಕು? ಒಂದು ತಿಂಗಳು ಹೀಗೇ ನಡೆದವು ನನ್ನ ತಬಲಾ ಮ್ಯಾಚ್‌ಗಳು. ಪ್ರತೀ ತಿಂಗಳೂ ನನ್ನ ತಬಲಾ ಮೇಸ್ಟ್ರಿಗೆ ಫೀಸ್ ಕೊಡುವುದು ನಾನೇ. ಆದ್ದರಿಂದ ಮುಂದಿನ ತಿಂಗಳ ಮೊದಲನೇ ವಾರ ಅಲ್ಲಿಗೆ ಹೋಗಿ ಮುಖ ತೋರಿಸಿ ಫೀಸ್ ಕೊಟ್ಟು. ಏನೋ ಮೈ ಹುಶಾರಿರಲಿಲ್ಲ ಎಂದು ರೈಲು ಬಿಡುವುದು ಎಂದು ನಿರ್ಧರಿಸಿಕೊಂಡಿದ್ದೆ. ಆದರೆ ಎಲ್ಲವೂ ನಾವೆಂದುಕೊಂಡಂತೆ ಆದರೆ ಈ ಜಗತ್ತೇ ಬೇರೆ ರೀತಿ ಇರುತ್ತಿತ್ತು. ನಾವೊಂದು ಬಗೆದರೆ ದೈವವಿನ್ನೊಂದು ಬಗೆಯುತ್ತದೆ ಎನ್ನುತ್ತಾರಲ್ಲಾ ಹಾಗೆ.

ಅವತ್ತಿಗೆ ತಬಲಾ ಕ್ಲಾಸ್ ತಪ್ಪಿಸಲು ಪ್ರಾರಂಭಿಸಿ ಸರಿಯಾಗಿ ಒಂದು ತಿಂಗಳಾಗಿತ್ತು. ಅವತ್ತಂತೂ ಸ್ವಲ್ಪ ಜಾಸ್ತಿ ಹೊತ್ತೇ ಕ್ರಿಕೆಟ್ ಆಡುತ್ತಾ ಉಳಿದುಬಿಟ್ಟಿದ್ದೆ. ನಂತರ ಮನೆಗೆ ಬಂದಾಗ ನನ್ನ ದುರಾದೃಷ್ಟವಶಾತ್ ಆಗಲೇ ನನ್ನ ತಂದೆ ಮನೆಗೆ ಬಂದಾಗಿತ್ತು. "ಬಾರೋ.. ಜಾಕಿರ್ ಹುಸೇನ್..." ಎಂದು ಬರಮಾಡಿಕೊಂಡರು. ಅವರು ಅದನ್ನು ತಮಾಷೆಗಾಗಿ ಹೇಳಿದರೆಂದು ನಾನು ಭಾವಿಸಿದ್ದೆ. ಆದರೆ ಅವರ ಮುಖದಮೇಲಿನ ಸಿಟ್ಟು ನನ್ನ ಗಮನಕ್ಕೇ ಬಂದಿರಲಿಲ್ಲವೇನೊ.
"ಎಲ್ಲೋಗಿದ್ದೆ ಇಷ್ಟೊತ್ತು?"
"ತಬ್ಲಾ ಕ್ಲಾಸಿಗೆ"
"ಓ ತಬ್ಲಾ ಕ್ಲಾಸು... ನೋಡೇ... ನಿನ್ ಮಗ ತಬ್ಲಾ ಕ್ಲಾಸಿಗೆ ಹೋಗಿದ್ನಡಾ...!"
ನಾನು ಒಳಗೊಳಗೇ ಬೆವರತೊಡಗಿದೆ. ಇದ್ಯಾಕಪ್ಪಾ ಇವ್ರಿಗೆ ಸಂಶಯ ಬಂತು ಎಂದು ನನಗೆ ಅರ್ಥವೇ ಆಗಲಿಲ್ಲ.
"ನೀವು ಸುಮ್ನಿರ್ತಾ... ಅವ್ರು ಮಾತಾಡ್ತೆ ಹೇಳಿ ಹೇಳಿದ್ರಲಿ..." ನನ್ನ ತಾಯಿಯ ಉತ್ತರ. ನನಗಂತೂ ಇವೆಲ್ಲ ಬಿಡಿಸಲಾಗದ ಒಗಟುಗಳಂತೆ ಕಾಣತೊಡಗಿದವು. ಅವರಿಬ್ಬರು ಅಷ್ಟಕ್ಕೇ ಸುಮ್ಮನಾದರಲ್ಲಾ ಎಂದು ಸಂತೋಷಗೊಂಡೆ.

ಮುಂದಿನ ವಾರ ತಬಲಾ ಕ್ಲಾಸಿಗೆ ಹೋಗೇ ಬಿಡೋಣ. ಇಲ್ಲವಾದರೆ ಇದು ವಿಪರೀತಕ್ಕೆ ತಿರುಗುತ್ತದೆ ಎಂದು ನಿರ್ಧರಿಸಿ ಹೋದೆ. ಆದರೆ ಫೀಸ್ ವಿಚಾರ ನನ್ನ ತಂದೆ ಹತ್ತಿರ ಕೇಳಲು ನನಗೂ ಭಯ. ಅವರೂ ಅದರ ವಿಚಾರ ಹೇಳಲೇ ಇಲ್ಲ. ತಬಲಾ ಕ್ಲಾಸ್‌ನಲ್ಲಿ ಆಗಲೇ ನಾಲ್ಕೈದು ಹುಡುಗರು ತಾಲೀಮು ನೆಡೆಸುತ್ತಾ ಕುಳಿತಿದ್ದರು. ನನ್ನ ನೋಡಿದ ಕೂಡಲೆ ಮೇಸ್ಟ್ರು "ಬಹಳ ದಿವ್ಸಾ ಆಯ್ತಲ್ಲಪ್ಪಾ.. ಬಂದೇ ಇರ್ಲಿಲ್ಲಾ... ಯಾಕೆ ಹುಶಾರಿರ್ಲಿಲ್ವಾ?" ಎಂದು ಕೇಳಿ ನನ್ನ ಹಾದಿ ಸುಗಮವಾಗಿಸಿಕೊಟ್ಟುಬಿಟ್ಟರು. ನಾನು ಹೌದು ಜ್ವರ ಮತ್ತೆ ವೀಕ್ನೆಸ್ ಇತ್ತು ಎಂದು ಅದಕ್ಕೆ ಮಸಾಲೆ ಹಾಕಿದೆ. ಹುಂ... ಎಂದು ಒಮ್ಮೆ ಮುಗುಳ್ನಕ್ಕು ಅವರೇ ನುಡಿಸುತ್ತಿದ್ದ ತಬಲಾವನ್ನು ನನ್ನ ಕೈಗೆ ಕೊಟ್ಟು ನುಡಿಸು ಎಂದರು. ನಾನು ನನಗೆ ಹೋದತಿಂಗಳು ಹೇಳಿಕೊಟ್ಟಿದ್ದನ್ನು ನುಡಿಸತೊಡಗಿದೆ. ಒಂದು ಇಪ್ಪತ್ತು ನಿಮಿಷ ಹೀಗೇ ನುಡಿಸಿದ ನಂತರ ಮೇಸ್ಟ್ರು ಉಳಿದವರೆಲ್ಲರಿಗೆ ನಿಲ್ಲಿಸಿ ಎಂದರು. ನಾನು ಮಾತ್ರ ನುಡಿಸುತ್ತಾ ಇದ್ದೆ. ಉಳಿದವರಿಗೆ ನನ್ನನ್ನು ತೋರಿಸುತ್ತಾ...
"ನೋಡಿದ್ರಾ... ಇವ್ನು ಒಂದು ತಿಂಗ್ಳು ಪ್ರಾಕ್ಟಿಸ್ ಮಾಡಿರಲಿಲ್ಲ. ಆದ್ರೂ ಒಂಚೂರೂ ಮರೀದೇ ಎಲ್ಲಾ ಸರಿಯಾಗಿ ನುಡಿಸ್ತಾ ಇದಾನೆ. ಬೆರಳಿನ ಮೂವ್‌ಮೆಂಟ್ ನೋಡಿ ಎಷ್ಟು ನೀಟಾಗಿದೆ. ಮೊದ್ಲು ಬಹಳ ಕಷ್ಟಪಟ್ಟಿದಾನೆ. ಅಷ್ಟೇ ಇಂಟರೆಸ್ಟ್ ಇದೆ. ಅದಕ್ಕೇ ಕಲ್ತಿದ್ದನ್ನ ಮರೀಲಿಲ್ಲ. ನೀವೂ ಹೀಗೇ ಆಗ್ಬೇಕು." ಎಂದರು. ನಾನಂತೂ ಹಿಗ್ಗಿನಿಂದ ಬೀಗಿಹೋದೆ.

ಸಂಜೆ ಮನೆಗೆ ಬಂದಾಗ ತಂದೆಯದು ಮತ್ತದೇ ಪ್ರಶ್ನೆ. ಎಲ್ಲೋಗಿದ್ದೆ? ನನ್ನದು ಮತ್ತದೇ ಉತ್ತರ. ತಬ್ಲಾ ಕ್ಲಾಸಿಗೆ. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿಬಿಟ್ಟರು. ಯಾಕೋ ಗೊತ್ತಿಲ್ಲ. ನನಗೆ ತಬಲಾ ಕ್ಲಾಸಿಗೇ ಹೋಗೋಣ ಎನಿಸತೊಡಗಿತು. ಆಗಿನಿಂದ ಒಂದು ವಾರವೂ ತಪ್ಪಿಸದೆ ಹೋಗತೊಡಗಿದೆ. ಕೆಲವು ದಿನಗಳ ನಂತರ ನನ್ನ ತಾಯಿಯಿಂದ ನನಗೆ ಗೊತ್ತಾಯಿತು. ಆ ವಾರ ನಾನು ಕ್ರಿಕೆಟ್ ಆಡುತ್ತಿದ್ದಾಗ ಅವರು ಅಕಸ್ಮಾತ್ ನನ್ನ ತಬಲಾ ಕ್ಲಾಸ್‌ಗೆ ಹೋಗಿಬಿಟ್ಟಿದ್ದರಂತೆ. ಅಲ್ಲಿ ನಾನಿಲ್ಲದಿರುವುದನ್ನು ಕಂಡು ಮೇಸ್ಟ್ರನ್ನು ಕೇಳಿದರೆ ಅವರು ನಾನು ಒಂದು ತಿಂಗಳಿನಿಂದ ಬಾರದುದನ್ನು ತಿಳಿಸಿದರಂತೆ. ನನ್ನ ತಂದೆ ಅಷ್ಟಕ್ಕೇ ಕೋಪಿಸಿಕೊಂಡು ಅವನಿಗೆ ಇವತ್ತು ರಾತ್ರಿ ಮಾಡ್ತೀನಿ ಎಂದು ಕೂಗಾಡಿದಾಗ ನನ್ನ ಮೇಸ್ಟ್ರೇ ನೀವೇನೂ ಹೇಳಬಾರದು. ನಾನು ಪರಿಸ್ಥಿತಿನ ಹ್ಯಾಂಡಲ್ ಮಾಡ್ತೀನಿ ಎಂದಿದ್ದರಂತೆ. ಇವೆಲ್ಲದರ ವಿಚಾರವನ್ನೂ ಎತ್ತದೆ ನನ್ನ ಮನಸ್ಸನ್ನು ತಿದ್ದಿಬಿಟ್ಟಿದ್ದರು.

ಇವತ್ತು ನಾನು ದೊಡ್ಡ ಕ್ರಿಕೆಟರ್ ಆಗಿಲ್ಲ. ಅಥವಾ ದೊಡ್ಡ ತಬಲ್‌ಜಿ ಕೂಡಾ ಆಗಿಲ್ಲ. ತಬಲಾದಲ್ಲಿ ಸೀನಿಯರ್ ಮುಗಿಸಿದ್ದೇನಷ್ಟೆ. ಆದರೆ ಕೊನೆಪಕ್ಷ ನನಗೆ ಭಾರತೀಯ ಸಂಗೀತದಲ್ಲಿ ಆಸಕ್ತಿ ಮೂಡಿದೆ. ಯಾಕಾದರು ಬೇಸರವಾದಾಗ ಹಿಂದುಸ್ತಾನಿ ಸಂಗೀತ ಕೇಳಿದರೆ ಮನಸ್ಸು ಮುದಗೊಳ್ಳುತ್ತದೆ. ಭಾವಗೀತೆಗಳ ಪ್ರಪಂಚದಲ್ಲಿ ಸುಖಿಸುವ ಅದೃಷ್ಟ ದೊರಕಿದೆ. ಇವನ್ನೆಲ್ಲಾ ನನ್ನದಾಗಿಸಿದ ಆ ಅದ್ಭುತ ಗುರುವಿಗೆ ಕೇವಲ ದುಡ್ಡಿನ ರೂಪದಲ್ಲಿ ಗುರುದಕ್ಷಿಣೆ ನೀಡಿ ನಾನು ಋಣಮುಕ್ತಾನಾಗಿದ್ದೇನೆಯೆ? ಅವರಿಗೇ ಗೊತ್ತು.

8 comments:

Karna Natikar said...

ninna arivilladeye ninannu tiddida (ide taraha iruva itara gurugalige) nannadodnu jai. ninna lekhnagalu yavaglu nange nanna hale dinagalanan nenapu tarsutte sidda.... hige barita iru

ದೀಪಕ said...

ನಮಸ್ಕಾರ /\:)

ತಬಲ ಮತ್ತು ಕ್ರಿಕೆಟ್ ಜುಗಲ್ಬ೦ದಿ ಚೆನ್ನಾಗಿದೆ. ನನ್ನ ಮತ್ತು ನನ್ನ ಸ್ನೇಹಿತನ ಮನೆಯಲ್ಲಿ ಪಾಠ ನಡೆಯುತ್ತಿದ್ದರಿ೦ದ ನನಗೆ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಆಗ ತಬಲ ಕಲಿಕೆಯಿ೦ದ ಓದಿಗೆ ತೊ೦ದರೆಯಾಗಬಹುದು ಎ೦ಬ ಭ್ರಮೆಯಿ೦ದ ಮು೦ದುವರಿಸದೆ ಅರ್ಧಕ್ಕೆ ಬಿಟ್ಟೆ. ಆದರೆ ಆಗ ಇನ್ನು ಹೆಚ್ಚಿನ ಮನಸ್ಸು ಕೊಟ್ಟು ಅಭ್ಯಸಿಸಿದ್ದರೆ ಚೆನ್ನಾಗಿರ್ತಿತ್ತೇನೋ ಅ೦ತ ಈಗ ನನಗೆ ಅನ್ನಿಸ್ತಾ ಇದೆ. ಆಗ ಓದು ಮುಖ್ಯ ಅ೦ತ ಅದಕ್ಕೆ ಹೆಚ್ಚು ಗಮನ ಕೊಟ್ಟಿದ್ದು ಈಗ ವ್ಯರ್ಥ ಆಗಿಲ್ಲ ಆದರೆ ಅದರಿ೦ದ ಆತ್ಮ ತೃಪ್ತಿ ಸಿಗುತ್ತಿಲ್ಲವೇನೋ, ತಬಲದಿ೦ದ ಸಿಗುತಿತ್ತೇನೋ ಎ೦ಬ ಭಾವನೆ ಒಮ್ಮೊಮ್ಮೆ ಮೂಡುತ್ತಿರತ್ತೆ.

ನಿನ್ನ ಅರಿವಿಲ್ಲದೇ ನಿನ್ನನ್ನು ತಿದ್ದಿದ ನಿನ್ನ ಗುರುಗಳಿಗೆ ನನ್ನ ನಮನಗಳು. ಇದೇ ಸ೦ದರ್ಭದಲ್ಲಿ ನನ್ನ ಗುರುಗಳನ್ನು ನೆನೆಯಲು ನಾನು ಇಚ್ಚಿಸುತ್ತೇನೆ.

ಈ ಲೇಖನ ನನ್ನ ತಬಲಾಭ್ಯಾಸಕ್ಕೆ ಮತ್ತಷ್ಟು ಸ್ಪೂರ್ತಿ ತು೦ಬುವುದರಲ್ಲಿ ಸ೦ದೇಹವಿಲ್ಲ.

ಹೀಗೆ ನಿನ್ನ ನೆನಪಿನ ಗಣಿಗಾರಿಗೆ ಮು೦ದುವರೆಯಲಿ :)

ಇ೦ತಿ,

ದೀಪಕ

ಸಿದ್ಧಾರ್ಥ said...

@ಕರ್ಣ
ಅನಿಸಿಕೆಗಳಿಗೆ ತುಂಬಾ ಧನ್ಯವಾದಗಳು. ಹೀಗೇ ಬಂದು ಹೋಗ್ತಾ ಇರಿ...

@ದೀಪಕ
ನಿಜ. ನಾವು ಮಾಡ್ತಿರೋ ಕೆಲಸದಿಂದ ನಮ್ಗಂತೂ ತೃಪ್ತಿ ಇಲ್ಲ. ತಮ್ಮ ಇಷ್ಟದ ಕೆಲಸವನ್ನೇ ಜೀವನೋಪಾಯ ಮಾಡ್ಕೊಂಡಿರೋ ಜನ ನಿಜಕ್ಕೂ ಅದೃಷ್ಟವಂತ್ರು. ಅನಿಸಿಕೆಗಳಿಗೆ ಧನ್ಯವಾದಗಳು.

ವಿಜಯ್ ಶೀಲವಂತರ said...

punyawanta appa neenu...olle guru hatra abhyasa maado bhaagya sikkide ninge. bhaala cholo ninna tiddyara avaru.

C.A.Gundapi said...

ಜಾಕೀರ ಹುಸೇನ ಸಿದ್ದ ... ನಿಮ್ಮ ತಂದೆ ಹೇಳಿದ ಮಾತು :) ಚೆನ್ನಾಗಿದೆ
ಚೆನ್ನಾಗಿ ಬರೆದಿದಿಯ ಮಗಾ.. ನಾನು ಸಂಗೀತಾನ ಕಲಿಬೇಕು ಅಂತ ತುಂಬಾ ಆಶೆ ಇತ್ತು ... ಆದರೆ ಅವರಪ್ಪ ತುಂಬಾ ಸ್ಟ್ರಿಕ್ಟ್ ಇದ್ದ Adakke Sangeetha nange valile illa maga :)

ಸಿದ್ಧಾರ್ಥ said...

@ವಿಜಯ
ಹೂಂ ಕಣ್ರಿ. ಆದ್ರೆ ಇಂಜಿನಿಯರಿಂಗ್‌ಗೆ ಹೋದ್ಮೇಲೆ ಭೇಟೀನೇ ಆಗಿಲ್ಲ. ಅವ್ರೂ ಧಾರವಾಡಕ್ಕೆ ಹೋಗ್ಬಿಟ್ರು.

@ಗುಂಡಪಿ
ಛೆ... ಅಂಥವರ ಅಪ್ಪಂದ್ರಾದ್ರೂ ಯಾಕಿರ್ತಾರೆ ಅಂತ ತಿಳಿಯಲ್ಲ. ಹೋಗ್ಲಿ ಬಿಡು... ಮರ್ತುಬಿಡು. ಇನ್ನು ಟ್ರೈ ಮಾಡಕ್ಕೂ ಆಗಲ್ವಲ್ಲ :)

Durga Das said...
This comment has been removed by the author.
Durga Das said...

nivu yaava janumadalli punya maadiro naa kaane, alla nim tande awara kopana hidithadalli itikondrinda neevu bachaav aadri... nimma gurugalu kuuda bari feesina aasae goskara paata maadade, jawabdaari inda sariyaagi paata helikottidaare, protshahisidaare, inthaha gurugalu siguvudu bhala virala.. :)

- naanu E cricket hinde hogi 2nd puc li paasaagodu doubt iro paristhige band bittidde. yeno devara daye paas aade.. :)

-nimma tabalada dingalondige nanna bhayada PUC dinagalannu nenapisidakke danyawaadagalu. :)