
Thursday, August 14, 2008
ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು

ಜನನಿ ಜನ್ಮಭೂಮಿ

ಜನನಿ ಜನ್ಮಭೂಮಿ ಸ್ವರ್ಗಸೇ ಮಹಾನ್ ಹೇ
ಇಸಕೆ ವಾಸತೇ ಯೇ ತನ ಹೇ ಮನ ಹೇ ಓರ್ ಪ್ರಾಣ ಹೇ
ಇಸ್ಕೆ ಕಣ ಕಣಪೆ ಲಿಖಾ ರಾಮ ಕೃಷ್ಣ ನಾಮ ಹೇ
ಹುತಾತ್ಮವೋಂ ಕಿ ರುಧಿರಸೇ ಭೂಮಿ ಸಸ್ಯ ಶ್ಯಾಮ ಹೇ
ಧರ್ಮಕಾ ಯೆ ಧಾಮ ಹೇ ಸದಾ ಇಸೇ ಪ್ರಣಾಮ ಹೇ
ಸ್ವತಂತ್ರ ಹೇ ಯಹ ಧರಾ ಸ್ವತಂತ್ರ ಆಸಮಾನ ಹೇ
ಇಸ್ಕೆ ಆನಪೇ ಅಗರ್ ಜೋ ಬಾತ ಕೋಯಿ ಆಪಡೇ
ಇಸ್ಕೆ ಸಾಮನೇ ಜೋ ಜುಲ್ಮಕೇ ಪಹಾಡ ಹೋ ಖಡೇ
ಶತ್ರು ಸಬ್ ಜಹಾನ್ ಹೋ ವಿರುದ್ಧ ಆಸಮಾನ ಹೋ
ಮುಕಾಬಲಾ ಕರೇಂಗೆ ಜಬ್ ತಕ್ ಜಾನ ಮೇ ಯೇ ಜಾನ ಹೇ
ಇಸ್ಕೆ ಗೋದಮೇ ಹಸಾರೊ ಗಂಗಾ ಯಮುನಾ ಝೂಮತೀ
ಇಸ್ಕೆ ಪರ್ವತೋಂಕಿ ಚೋಟಿಯಾ ಗಗನಕೊ ಚೂಮತೀ
ಭೂಮಿಯೇ ಮಹಾನ ಹೇ ನಿರಾಲಿ ಇಸಕಿ ಶಾನ ಹೇ
ಇಸ್ಕೆ ಜಯ ಪತಾಕಪೇ ಲಿಖಾ ವಿಜಯ ನಿಶಾನ ಹೇ
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ
ಭಾರತ್ ಮಾತಾ ಕೀ... ಜೈ.
Wednesday, August 13, 2008
ವಂದೇ ಮಾತರಂ

ಬಂಕಿಮಚಂದ್ರರ "ಆನಂದ ಮಠ"ದಿಂದ -
ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದುಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ,
ಸುಖದಾಂ ವರದಾಂ ಮಾತರಂ
ವಂದೇ ಮಾತರಂ
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ,
ಕೋಟಿ ಕೋಟಿ ಭುಜೈರ್ಧೃತಖರಕರವಾಲೇ
ಕೇ ಬೋಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ!
ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ
ತ್ವಂ ಹೀ ಪ್ರಾಣಹ ಶರೀರೇ
ಬಾಹುತೇ ತುಮೀ ಮಾ ಶಕ್ತಿ, ಹೃದಯೇ ತುಮೀ ಮಾ ಭಕ್ತಿ
ತೊಮಾರಿ ಪ್ರತಿಮಾ ಗಡಿ ಮಂದಿರೇ ಮಂದಿರೇ
ತ್ವಂ ಹೀ ದುರ್ಗಾ ದಶ ಪ್ರಹರಣ ಧಾರಿಣೀ
ಕಮಲಾ ಕಮಲದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!
ಶ್ಯಾಮಲಾಂ ಸರಳಾಂ ಸುಶ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ!
ವಂದೇ ಮಾತರಂ!
Friday, July 25, 2008
ಢಮಾರ್......

ಬೆಂಗಳೂರಿನ ಜನರಿಗೆ ಬಾಂಬ್ ಬ್ಲಾಸ್ಟ್ ಹೊಸತು. ಆದರೂ ಥಿಯರೊಟಿಕಲ್ ನಾಲೆಡ್ಜ್ ಪ್ರತಿಯೊಬ್ಬ ಭಾರತೀಯನಿಗೂ ಬಹಳವಾಗಿಯೇ ಆಗಿಬಿಟ್ಟಿದೆ. ಸ್ವಲ್ಪ ಜನ ಹೆದರಿದರೆ ಇದನ್ನು ಎಂಜಾಯ್ ಮಾಡಿದವರೇ ಬಹಳಷ್ಟು ಜನ ಎನಿಸುತ್ತದೆ. ಮೂರು ಘಂಟೆಯ ಸುಮಾರಿಗೆ ಒಬ್ಬನಿಂದ ಸುದ್ದಿ ಬಂತು. ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಎಂದು. ಹೋದಸಲವೂ ಹೀಗೇ ಆಗಿತ್ತು. ಕೆಂಪೇಗೌಡ ಬಸ್ ನಿಲ್ದಾಣದಲ್ಲೇ ಬಾಂಬ್ ಸ್ಪೋಟ ಎಂದು ಸುದ್ದಿ ಹಬ್ಬಿತ್ತು. ಮಾರನೇ ದಿನವೇ ಗೊತ್ತಾಗಿದ್ದು. ಅದು ಅಗ್ನಿಶಾಮಕ ದಳದ ಅಣಕು ಪ್ರದರ್ಶನ ಎಂದು. ಇದೂ ಹೀಗೇ ಏನೊ ಇರಬೇಕು ಎಂದು ಸುಮ್ಮನಾಗಿಬಿಟ್ಟೆ. ಅವನು ಅಷ್ಟಕ್ಕೇ ಸುಮ್ಮನಾಗದೆ NDTV ಸೈಟಿನ ಲಿಂಕನ್ನೂ ಕಳಿಸಿದ. ಅದರಲ್ಲಿ ಬಾಂಬ್ ಸ್ಪೋಟದ ಬಗ್ಗೆ ಬರೆದಿದ್ದ ಒಂದೇ ಒಂದು ವಾಕ್ಯ ಓದಿದಾಗ ನನಗೆ ನಿಜಕ್ಕೂ ಆಶ್ಚರ್ಯ ದುಃಖ ಭಯ ಎಲ್ಲಾ ಒಟ್ಟಿಗೇ ಆಗಿಬಿಟ್ಟಿತು. ಈ ಟೆರರಿಸ್ಟ್ಗಳಿಗೆ ಬೇರೆ ಕೆಲ್ಸಾ ಇಲ್ವೇನಪ್ಪಾ... ಥತ್.. ರಾಕ್ಷಸ ಜಾತಿಯವ್ರು ಎಂದುಕೊಳ್ಳುವಷ್ಟರಲ್ಲೆ ಶಾಂತವಾಗಿದ್ದ ಆಫೀಸ್ ತುಂಬೆಲ್ಲ ಗದ್ದಲ. ಬಾಂಬು... ಬ್ಲಾಸ್ಟು... ಮೂರು... ಐದು... ಏಳು... ಒಟ್ನಲ್ಲಿ ಬಾಂಬ್ ಹಾರಿಸಿದವನ ಧ್ಯೇಯ ಈಡೇರಿತು ಅನಿಸುತ್ತದೆ.
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಮಾಮಾ ಮಾಮಾ ಬಾಂಬ್ ಬ್ಲಾಸ್ಟ್
ಮಾಮಾ ಮಾಮಾ ಬಾಂಬ್ ಬ್ಲಾಸ್ಟ್
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಎಂಥಾ ಜನ ನೋಡಿ ಅವರೆಂಥಾ ಜನ ನೋಡಿ
ಢಂ ಢಂ ಢಮಾರ್ ಢಮಾರ್
ಇಪ್ಪತ್ತೊಂದನೆ ಶತಮಾನ ಟೆರರಿಸಮ್ಮಿನ ಜಮಾನ
ಸ್ನೇಹಕೆ ಬಾಂಬೆ ಬಹುಮಾನ ಕ್ರೌರ್ಯವೆ ಎಲ್ಲಕೆ ಯಜಮಾನ
ಯಾಕೆ ಇವರು ಹೀಗೆ ಆದರೋ
ಜನರ ಸಾವಲಿ ಸುಖವ ಕಾಣ್ವರೋ
ಹಾಕ್ಬೇಕು ಇವ್ರ ಜೈಲಿಗೆ ತಳ್ಬೇಕು ಇವ್ರ ನೇಣಿಗೆ
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಬಿಕನಾಸಿ ಓ ದರ್ಬೇಸಿ ಅಡಕಾಸಿ ಓ ಪರದೇಸಿ
ತಲೆಕೆಟ್ಟಿರುವ ಜಿಹಾದಿ ಬೈದರು ಇಲ್ಲ ಮರ್ಯಾದಿ
ಮಾನಗೆಟ್ಟ ಮಂದಿ ಅವರೆಲ್ಲ
ಮಾನವೀಯತೆ ಎಂಬುದೆ ಗೊತ್ತಿಲ್ಲ
ಹಿಡಿದ್ಹಾಕಿ ಅವ್ರ ಬಡಿದ್ಹಾಕಿ ಕರುಣೆ ಇಲ್ದೆ ಕೊಂದ್ಹಾಕಿ
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಎಂಥಾ ಜನ ನೋಡಿ ಅವರೆಂಥಾ ಜನ ನೋಡಿ
ಢಂ ಢಂ ಢಮಾರ್ ಢಮಾರ್
ಢಂ ಢಂ ಢಮಾರ್ ಢಮಾರ್
Monday, July 14, 2008
ಕ್ರಿಕೆಟ್ ವರ್ಸಸ್ ತಬಲಾ

"ಇಲ್ಲಪ್ಪಾ... ನಂಗೆ ತಬ್ಲಾ ಕ್ಲಾಸ್ ಇದೆ"
"ಯೆಲ್ಲೀ ತಬ್ಲಾ ಕ್ಲಾಸು ತೆಗ್ಯೋ... ಸುಮ್ನೆ ಆಡ್ಲಿಕ್ ಬಾ. ಮಜಾ ಬರ್ತದೆ".
ಅಂತೂ ಗೆಳೆಯರೆಲ್ಲಾ ಸೇರಿ ನನ್ನ ತಲೆ ಕೆಡಿಸೇ ಬಿಟ್ಟಿದ್ದರು. ಆಗ ತಬಲಾ ಕಲಿಯಲು ನನಗೇನೂ ಇಂಟರೆಸ್ಟ್ ಇರಲಿಲ್ಲ. ಆದರೆ ನನ್ನ ತಂದೆಗಿತ್ತಲ್ಲಾ! ಅವರಿಗೆ ಕಲಿಯಲಿಕ್ಕೆ ಆಗಲಿಲ್ಲವಂತೆ. ಅದಕ್ಕೇ ನನ್ನನ್ನು ಕಲಿಯಲಿಕ್ಕೆ ಹಚ್ಚಿಬಿಟ್ಟಿದ್ದರು. ನಾನೋ ಇಲ್ಲದ ಮನಸ್ಸಿನಿಂದ ತಬಲಾ ಕಲಿಯಲು ಹೋಗುತ್ತಿದ್ದೆ. ಯಾವುದೇ ವಿದ್ಯೆಯಾದರೂ ಹಾಗೆಯೇ. ಕಲಿಯುವುದಕ್ಕೆ ಕಷ್ಟವೆನಿಸತೊಡಗಿದರೆ ಅದರ ಮೇಲೆ ಆಸಕ್ತಿಯೇ ಹೊರಟುಹೋಗುತ್ತದೆ. ನಾನು ಐದನೇ ತರಗತಿಯಲ್ಲಿರಬೇಕಾದರೇ ನನ್ನ ತಂದೆ ನನ್ನನ್ನು ತಬಲಾ ಕ್ಲಾಸಿಗೆ ಹಚ್ಚಿಬಿಟ್ಟಿದ್ದರು. ಅದರಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಪಾಸಾದ ನಂತರ ನನ್ನನ್ನು ಬೇರೊಬ್ಬರಲ್ಲಿ ತಬಲಾ ಕಲಿಯಲು ಕಳಿಸಿದರು. ಇವರು ಬಹಳ ಚೆನ್ನಾಗೇನೋ ಹೇಳಿಕೊಡುತ್ತಿದ್ದರು. ಆದರೆ ಅಲ್ಲಿ ಬರುವ ಹುಡುಗರೆಲ್ಲಾ ನನಗಿಂತ ಹೆಚ್ಚು ಚೆನ್ನಾಗಿ ನುಡಿಸುವವರು. ನಾನು ಇನ್ನೂ ಬಚ್ಚಾ. ಅದೇ ಕಾರಣಕ್ಕೋ ಏನೊ. ಬರಬರುತ್ತ ನನಗೆ ಕ್ರಿಕೆಟ್ನಲ್ಲೇ ಆಸಕ್ತಿ ಹೆಚ್ಚತೊಡಗಿತ್ತು. ಪ್ರತೀ ಶನಿವಾರ ಮತ್ತು ಭಾನುವಾರ ತಬಲಾ ಕ್ಲಾಸ್ಗಳು. ಹುಡುಗರ ಕ್ರಿಕೆಟ್ ಅಂತೂ ದಿನವೂ ನೆಡೆದೇ ಇರುತಿತ್ತು. ಆದರೂ ಶನಿವಾರ ಭಾನುವಾರ ಹೋಗಲು ತಪ್ಪಿಸಿಕೊಂಡರೆ ಏನೋ ಒಂದು ಕಳೆದುಕೊಂಡಂತೆ. ಸೋಮವಾರ ಶಾಲೆಗೆ ಹೋದ ತಕ್ಷಣ ನಿನ್ನೆ ಆಡಿದ ಕ್ರಿಕೆಟ್ಟಿನ ಸುದ್ದಿ. ನನಗಂತೂ ಜಗತ್ತಿನ ಅತಿ ದೊಡ್ಡ ಸುಖವನ್ನು ಕಳೆದುಕೊಳ್ಳುತ್ತಿದ್ದೇನೋ ಎನಿಸತೊಡಗಿತ್ತು.
ಜಗತ್ತಿನಲ್ಲಿ ಅತ್ಯಂತ ಸುಲಭವಾಗಿ ಯಾವುದೇ ಗುರುವಿನ ಸಹಾಯವಿಲ್ಲದೆ ಕಲಿಯಬಹುದಾದ ಒಂದೇ ಒಂದು ವಿದ್ಯೆ ಅಂದರೆ ಸುಳ್ಳು ಹೇಳುವುದು. ನಾನೂ ಯಾವುದೇ ಗುರುವಿನ ಸಹಾಯವಿಲ್ಲದೆ ಕಲಿತುಬಿಟ್ಟಿದ್ದೆ. ತಬಲಾ ಕ್ಲಾಸಿಗೆಂದು ಮನೆಯಲ್ಲಿ ಹೇಳಿ ಶಾಲೆಯ ಗ್ರೌಂಡಿಗೆ ಹಾಜರ್ ಆಗಿಬಿಡುತ್ತಿದ್ದೆ. ಸತತವಾಗಿ ಮೂರ್ನಾಲಕು ವಾರ ಹೀಗೇ ಕಳೆಯಿತು. ಪ್ರತಿಸಲವೂ ತಬಲಾ ಕ್ಲಾಸಿಗೆ ಹೋಗಿಬಂದರೆ ಹುಡುಗನ ಬಟ್ಟೆ ಯಾಕಿಷ್ಟು ಕೊಳೆಯಾಗಿರುತ್ತದೆ ಎಂದು ನನ್ನ ತಾಯಿ ಸಂಶಯಪಟ್ಟಿರಲೂಬಹುದು. ಆದರೆ ಆ ಸ್ವರ್ಗಸುಖದ ಮುಂದೆ ಈ ಸಣ್ಣ ಪುಟ್ಟ ವಿಷಯಗಳೆಲ್ಲ ನನಗೆಲ್ಲಿ ತಲೆಗೆ ಹತ್ತಿರಬೇಕು? ಒಂದು ತಿಂಗಳು ಹೀಗೇ ನಡೆದವು ನನ್ನ ತಬಲಾ ಮ್ಯಾಚ್ಗಳು. ಪ್ರತೀ ತಿಂಗಳೂ ನನ್ನ ತಬಲಾ ಮೇಸ್ಟ್ರಿಗೆ ಫೀಸ್ ಕೊಡುವುದು ನಾನೇ. ಆದ್ದರಿಂದ ಮುಂದಿನ ತಿಂಗಳ ಮೊದಲನೇ ವಾರ ಅಲ್ಲಿಗೆ ಹೋಗಿ ಮುಖ ತೋರಿಸಿ ಫೀಸ್ ಕೊಟ್ಟು. ಏನೋ ಮೈ ಹುಶಾರಿರಲಿಲ್ಲ ಎಂದು ರೈಲು ಬಿಡುವುದು ಎಂದು ನಿರ್ಧರಿಸಿಕೊಂಡಿದ್ದೆ. ಆದರೆ ಎಲ್ಲವೂ ನಾವೆಂದುಕೊಂಡಂತೆ ಆದರೆ ಈ ಜಗತ್ತೇ ಬೇರೆ ರೀತಿ ಇರುತ್ತಿತ್ತು. ನಾವೊಂದು ಬಗೆದರೆ ದೈವವಿನ್ನೊಂದು ಬಗೆಯುತ್ತದೆ ಎನ್ನುತ್ತಾರಲ್ಲಾ ಹಾಗೆ.
ಅವತ್ತಿಗೆ ತಬಲಾ ಕ್ಲಾಸ್ ತಪ್ಪಿಸಲು ಪ್ರಾರಂಭಿಸಿ ಸರಿಯಾಗಿ ಒಂದು ತಿಂಗಳಾಗಿತ್ತು. ಅವತ್ತಂತೂ ಸ್ವಲ್ಪ ಜಾಸ್ತಿ ಹೊತ್ತೇ ಕ್ರಿಕೆಟ್ ಆಡುತ್ತಾ ಉಳಿದುಬಿಟ್ಟಿದ್ದೆ. ನಂತರ ಮನೆಗೆ ಬಂದಾಗ ನನ್ನ ದುರಾದೃಷ್ಟವಶಾತ್ ಆಗಲೇ ನನ್ನ ತಂದೆ ಮನೆಗೆ ಬಂದಾಗಿತ್ತು. "ಬಾರೋ.. ಜಾಕಿರ್ ಹುಸೇನ್..." ಎಂದು ಬರಮಾಡಿಕೊಂಡರು. ಅವರು ಅದನ್ನು ತಮಾಷೆಗಾಗಿ ಹೇಳಿದರೆಂದು ನಾನು ಭಾವಿಸಿದ್ದೆ. ಆದರೆ ಅವರ ಮುಖದಮೇಲಿನ ಸಿಟ್ಟು ನನ್ನ ಗಮನಕ್ಕೇ ಬಂದಿರಲಿಲ್ಲವೇನೊ.
"ಎಲ್ಲೋಗಿದ್ದೆ ಇಷ್ಟೊತ್ತು?"
"ತಬ್ಲಾ ಕ್ಲಾಸಿಗೆ"
"ಓ ತಬ್ಲಾ ಕ್ಲಾಸು... ನೋಡೇ... ನಿನ್ ಮಗ ತಬ್ಲಾ ಕ್ಲಾಸಿಗೆ ಹೋಗಿದ್ನಡಾ...!"
ನಾನು ಒಳಗೊಳಗೇ ಬೆವರತೊಡಗಿದೆ. ಇದ್ಯಾಕಪ್ಪಾ ಇವ್ರಿಗೆ ಸಂಶಯ ಬಂತು ಎಂದು ನನಗೆ ಅರ್ಥವೇ ಆಗಲಿಲ್ಲ.
"ನೀವು ಸುಮ್ನಿರ್ತಾ... ಅವ್ರು ಮಾತಾಡ್ತೆ ಹೇಳಿ ಹೇಳಿದ್ರಲಿ..." ನನ್ನ ತಾಯಿಯ ಉತ್ತರ. ನನಗಂತೂ ಇವೆಲ್ಲ ಬಿಡಿಸಲಾಗದ ಒಗಟುಗಳಂತೆ ಕಾಣತೊಡಗಿದವು. ಅವರಿಬ್ಬರು ಅಷ್ಟಕ್ಕೇ ಸುಮ್ಮನಾದರಲ್ಲಾ ಎಂದು ಸಂತೋಷಗೊಂಡೆ.
ಮುಂದಿನ ವಾರ ತಬಲಾ ಕ್ಲಾಸಿಗೆ ಹೋಗೇ ಬಿಡೋಣ. ಇಲ್ಲವಾದರೆ ಇದು ವಿಪರೀತಕ್ಕೆ ತಿರುಗುತ್ತದೆ ಎಂದು ನಿರ್ಧರಿಸಿ ಹೋದೆ. ಆದರೆ ಫೀಸ್ ವಿಚಾರ ನನ್ನ ತಂದೆ ಹತ್ತಿರ ಕೇಳಲು ನನಗೂ ಭಯ. ಅವರೂ ಅದರ ವಿಚಾರ ಹೇಳಲೇ ಇಲ್ಲ. ತಬಲಾ ಕ್ಲಾಸ್ನಲ್ಲಿ ಆಗಲೇ ನಾಲ್ಕೈದು ಹುಡುಗರು ತಾಲೀಮು ನೆಡೆಸುತ್ತಾ ಕುಳಿತಿದ್ದರು. ನನ್ನ ನೋಡಿದ ಕೂಡಲೆ ಮೇಸ್ಟ್ರು "ಬಹಳ ದಿವ್ಸಾ ಆಯ್ತಲ್ಲಪ್ಪಾ.. ಬಂದೇ ಇರ್ಲಿಲ್ಲಾ... ಯಾಕೆ ಹುಶಾರಿರ್ಲಿಲ್ವಾ?" ಎಂದು ಕೇಳಿ ನನ್ನ ಹಾದಿ ಸುಗಮವಾಗಿಸಿಕೊಟ್ಟುಬಿಟ್ಟರು. ನಾನು ಹೌದು ಜ್ವರ ಮತ್ತೆ ವೀಕ್ನೆಸ್ ಇತ್ತು ಎಂದು ಅದಕ್ಕೆ ಮಸಾಲೆ ಹಾಕಿದೆ. ಹುಂ... ಎಂದು ಒಮ್ಮೆ ಮುಗುಳ್ನಕ್ಕು ಅವರೇ ನುಡಿಸುತ್ತಿದ್ದ ತಬಲಾವನ್ನು ನನ್ನ ಕೈಗೆ ಕೊಟ್ಟು ನುಡಿಸು ಎಂದರು. ನಾನು ನನಗೆ ಹೋದತಿಂಗಳು ಹೇಳಿಕೊಟ್ಟಿದ್ದನ್ನು ನುಡಿಸತೊಡಗಿದೆ. ಒಂದು ಇಪ್ಪತ್ತು ನಿಮಿಷ ಹೀಗೇ ನುಡಿಸಿದ ನಂತರ ಮೇಸ್ಟ್ರು ಉಳಿದವರೆಲ್ಲರಿಗೆ ನಿಲ್ಲಿಸಿ ಎಂದರು. ನಾನು ಮಾತ್ರ ನುಡಿಸುತ್ತಾ ಇದ್ದೆ. ಉಳಿದವರಿಗೆ ನನ್ನನ್ನು ತೋರಿಸುತ್ತಾ...
"ನೋಡಿದ್ರಾ... ಇವ್ನು ಒಂದು ತಿಂಗ್ಳು ಪ್ರಾಕ್ಟಿಸ್ ಮಾಡಿರಲಿಲ್ಲ. ಆದ್ರೂ ಒಂಚೂರೂ ಮರೀದೇ ಎಲ್ಲಾ ಸರಿಯಾಗಿ ನುಡಿಸ್ತಾ ಇದಾನೆ. ಬೆರಳಿನ ಮೂವ್ಮೆಂಟ್ ನೋಡಿ ಎಷ್ಟು ನೀಟಾಗಿದೆ. ಮೊದ್ಲು ಬಹಳ ಕಷ್ಟಪಟ್ಟಿದಾನೆ. ಅಷ್ಟೇ ಇಂಟರೆಸ್ಟ್ ಇದೆ. ಅದಕ್ಕೇ ಕಲ್ತಿದ್ದನ್ನ ಮರೀಲಿಲ್ಲ. ನೀವೂ ಹೀಗೇ ಆಗ್ಬೇಕು." ಎಂದರು. ನಾನಂತೂ ಹಿಗ್ಗಿನಿಂದ ಬೀಗಿಹೋದೆ.
ಸಂಜೆ ಮನೆಗೆ ಬಂದಾಗ ತಂದೆಯದು ಮತ್ತದೇ ಪ್ರಶ್ನೆ. ಎಲ್ಲೋಗಿದ್ದೆ? ನನ್ನದು ಮತ್ತದೇ ಉತ್ತರ. ತಬ್ಲಾ ಕ್ಲಾಸಿಗೆ. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿಬಿಟ್ಟರು. ಯಾಕೋ ಗೊತ್ತಿಲ್ಲ. ನನಗೆ ತಬಲಾ ಕ್ಲಾಸಿಗೇ ಹೋಗೋಣ ಎನಿಸತೊಡಗಿತು. ಆಗಿನಿಂದ ಒಂದು ವಾರವೂ ತಪ್ಪಿಸದೆ ಹೋಗತೊಡಗಿದೆ. ಕೆಲವು ದಿನಗಳ ನಂತರ ನನ್ನ ತಾಯಿಯಿಂದ ನನಗೆ ಗೊತ್ತಾಯಿತು. ಆ ವಾರ ನಾನು ಕ್ರಿಕೆಟ್ ಆಡುತ್ತಿದ್ದಾಗ ಅವರು ಅಕಸ್ಮಾತ್ ನನ್ನ ತಬಲಾ ಕ್ಲಾಸ್ಗೆ ಹೋಗಿಬಿಟ್ಟಿದ್ದರಂತೆ. ಅಲ್ಲಿ ನಾನಿಲ್ಲದಿರುವುದನ್ನು ಕಂಡು ಮೇಸ್ಟ್ರನ್ನು ಕೇಳಿದರೆ ಅವರು ನಾನು ಒಂದು ತಿಂಗಳಿನಿಂದ ಬಾರದುದನ್ನು ತಿಳಿಸಿದರಂತೆ. ನನ್ನ ತಂದೆ ಅಷ್ಟಕ್ಕೇ ಕೋಪಿಸಿಕೊಂಡು ಅವನಿಗೆ ಇವತ್ತು ರಾತ್ರಿ ಮಾಡ್ತೀನಿ ಎಂದು ಕೂಗಾಡಿದಾಗ ನನ್ನ ಮೇಸ್ಟ್ರೇ ನೀವೇನೂ ಹೇಳಬಾರದು. ನಾನು ಪರಿಸ್ಥಿತಿನ ಹ್ಯಾಂಡಲ್ ಮಾಡ್ತೀನಿ ಎಂದಿದ್ದರಂತೆ. ಇವೆಲ್ಲದರ ವಿಚಾರವನ್ನೂ ಎತ್ತದೆ ನನ್ನ ಮನಸ್ಸನ್ನು ತಿದ್ದಿಬಿಟ್ಟಿದ್ದರು.
ಇವತ್ತು ನಾನು ದೊಡ್ಡ ಕ್ರಿಕೆಟರ್ ಆಗಿಲ್ಲ. ಅಥವಾ ದೊಡ್ಡ ತಬಲ್ಜಿ ಕೂಡಾ ಆಗಿಲ್ಲ. ತಬಲಾದಲ್ಲಿ ಸೀನಿಯರ್ ಮುಗಿಸಿದ್ದೇನಷ್ಟೆ. ಆದರೆ ಕೊನೆಪಕ್ಷ ನನಗೆ ಭಾರತೀಯ ಸಂಗೀತದಲ್ಲಿ ಆಸಕ್ತಿ ಮೂಡಿದೆ. ಯಾಕಾದರು ಬೇಸರವಾದಾಗ ಹಿಂದುಸ್ತಾನಿ ಸಂಗೀತ ಕೇಳಿದರೆ ಮನಸ್ಸು ಮುದಗೊಳ್ಳುತ್ತದೆ. ಭಾವಗೀತೆಗಳ ಪ್ರಪಂಚದಲ್ಲಿ ಸುಖಿಸುವ ಅದೃಷ್ಟ ದೊರಕಿದೆ. ಇವನ್ನೆಲ್ಲಾ ನನ್ನದಾಗಿಸಿದ ಆ ಅದ್ಭುತ ಗುರುವಿಗೆ ಕೇವಲ ದುಡ್ಡಿನ ರೂಪದಲ್ಲಿ ಗುರುದಕ್ಷಿಣೆ ನೀಡಿ ನಾನು ಋಣಮುಕ್ತಾನಾಗಿದ್ದೇನೆಯೆ? ಅವರಿಗೇ ಗೊತ್ತು.
Saturday, June 28, 2008
ಅಂತ್ಯಾಕ್ಷರಿ ತಂದ ಅವಾಂತರ
ಎಲ್ಲರೂ ಒಟ್ಟಿಗೆ ತಿಂಡಿತಿನ್ನುವುದು ಒಂದು ಸಂಪ್ರದಾಯವೇ ಆಗಿಹೋಗಿತ್ತು. ಆದರೆ ಯಾರಾದರೊಬ್ಬ ಬುತ್ತಿಯನ್ನು ತೆರೆದರೆ ಎಲ್ಲರನ್ನೂ ಹೋಗಿ ಕರೆದು ಬರುವ ವ್ಯವಧಾನ ಯಾರಿಗಿರುತ್ತಿತ್ತು? ಇದಕ್ಕಾಗಿ ಒಂದು ವ್ಯವಸ್ಥೆಯನ್ನು ಮಾಡಿಕೊಂಡುಬಿಟ್ಟಿದ್ದೆವು. ಒಂದು ರೂಮಿನಲ್ಲಿ ಬುತ್ತಿ ಓಪನ್ ಆದರೆ ಪಕ್ಕದ ರೂಮಿನವರನ್ನು ಕರೆಯಬೇಕಾದರೆ ಮೂರು ಸಲ ಜೋರಾಗಿ ಗೋಡೆ ಗುದ್ದುವುದು. ರೂಮ್ ನಂ 61 ಮತ್ತು 62ರ ನಡುವೆ ಇದ್ದಿದ್ದು ಒಂದೇ ಗೋಡೆ. ಅದನ್ನೇ ಮೂರುಸಲ ಗುದ್ದಿಬಿಟ್ಟರಾಯಿತು. ಪಕ್ಕದ ರೂಮಿನವರಿಗೆ ಸಿಗ್ನಲ್ ಹೋದಂತೆ. ಇನ್ನು ಬರುವುದು ಬಿಡುವುದು ಅವರ ಕರ್ಮ. ಕೆಲವುಸಲವಂತೂ ಎಲ್ಲೋ ತಿರುಗಾಡಲು ಹೋಗಿದ್ದವರು ವಾಪಸ್ ಬರುವಷ್ಟರಲ್ಲಿ ತಾವೇ ಮನೆಯಿಂದ ತಂದ ತಿಂಡಿ ಖಾಲಿಯಾಗಿಬಿಟ್ಟಿರುತ್ತಿತ್ತು. ಅಕ್ಕ ಪಕ್ಕ ಯಾರನ್ನು ನೋಡಿದರೂ ಈ ಘಟನೆಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಸನ್ಯಾಸಿ ಬೆಕ್ಕಣ್ಣಗಳಂತೆ ಪುಸ್ತಕ ಹಿಡಿದು ಕುಳಿತುಬಿಟ್ಟಿರುತ್ತಿದ್ದರು. ಕೆಲವುಸಲವಂತೂ ತಾವೇ ತಂದ ತಿನಿಸುಗಳು ಖಾಲಿಯಾದದ್ದು ತಿಳಿದುಬರುವುದು ಮತ್ತೊಮ್ಮೆ ತಾವೇ ಬುತ್ತಿ ಬಿಚ್ಚಿದಾಗ ಮಾತ್ರ. ಇದಕ್ಕೋಸ್ಕರ ಯಾರೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಬದಲಾಗಿ ಸೇಡುತೀರಿಸಿಕೊಳ್ಳುವುದಕ್ಕಾಗಿ ಸಮಯಕಾಯುತ್ತಿದ್ದರು.
ಒಂದು ಸಂಜೆ ವಿದ್ಯಾಗಿರಿ ಪೂರ್ತಿ ಕರೆಂಟ್ ಹೋಗಿಬಿಟ್ಟಿತ್ತು. ನಮ್ಮ ಹಾಸ್ಟೆಲ್ ಜನರೇಟರ್ ಉರಿದು ಉರಿದು ಸುಸ್ತಾಗಿ ಮಲಗಿಬಿಟ್ಟಿತ್ತು. ಹಾಸ್ಟೆಲ್ ಪೂರ್ತಿ ಕತ್ತಲಿನ ತೆಕ್ಕೆಗೆ ಜಾರುತ್ತಿತ್ತು. ನಾನು ಮತ್ತು ನನ್ನ ರೂಮ್ಮೇಟ್ಸ್ ಹರಟೆ ಕೊಚ್ಚಲು 61ಗೆ ಹೋಗಿದ್ದೆವು. ಸಿಕ್ಕಾಪಟ್ಟೆ ಸೆಕೆ, ಅದರಲ್ಲೂ ಕರೆಂಟಿಲ್ಲ. ಅದಕ್ಕಾಗಿ ರೂಮಿನ ಬಾಗಿಲನ್ನು ಪೂರ್ತಿ ತೆರೆದಿಟ್ಟುಬಿಟ್ಟಿದ್ದೆವು. ನನ್ನ ರೂಮ್ಮೇಟ್ಗಳಲ್ಲಿ ಸಂತ್ಯಾ ಒಬ್ಬನೇ ಅಲ್ಲೇ ಕೂತು ಕತ್ತಲಲ್ಲಿ ಎನೋ ಓದಲು ಪ್ರಯತ್ನಿಸುತ್ತಿದ್ದ. ಮೊದಲೇ ಓದುವುದು ಅಂದರೆ ಆಗದ ನಮಗೆ ಪರಿಸ್ಥಿತಿಯೂ ಜೊತೆಗೂಡಿದರೆ ಕೇಳಬೇಕೆ? ನಾವು ಇಂಜಿನಿಯರಿಂಗ್ ಮಾಡುತ್ತಿದ್ದೇವೆ ಎನ್ನುವುದನ್ನೇ ಮರೆತುಬಿಡುತ್ತಿದ್ದೆವು. ಸೂರ್ಯ ಮುಳುಗಿ ಪೂರ್ತಿ ಕತ್ತಲಾದಮೇಲೆ ನಮ್ಮವರಲ್ಲೇ ಒಬ್ಬ "ಲೇ... ಸುಮ್ನ ಟೈಮ್ ವೇಸ್ಟ್ ಮಾಡುದು ಬ್ಯಾಡಾ. ಹ್ಯಾಂಗೂ ಇವತ್ತು ರಾತ್ರಿ ಕರೆಂಟು ಬರಾಂಗಿಲ್ಲ. ಎಲ್ಲರೂ ಇಲ್ಲೇ ಕುಂತ್ ಅಂತ್ಯಾಕ್ಷರಿ ಆಡೂಣು." ಎಂದ. "ಮೊದ್ಲು ಹೊಟ್ಟಿ ವಿಚಾರ ಮಾಡ್ಪಾ ದೋಸ್ತಾ..." ಎಂದು ಇನ್ನೊಬ್ಬ ಊಟದ ಸಮಯವಾದುದನ್ನು ಎಚ್ಚರಿಸಿದ.
ಅವತ್ತಿನ ಊಟ ಫುಲ್ ರೊಮ್ಯಾಂಟಿಕ್ ಕ್ಯಾಂಡಲ್ ಲೈಟ್ ಡಿನ್ನರ್. ಊಟಕ್ಕೆ ಹೋದಾಗ ನಮ್ಮ ಪ್ಲಾನನ್ನು ಇನ್ನೂ ನಾಲ್ಕು ಜನರಿಗೆ ಹೇಳಿ ನಮ್ಮ ಸಂಖ್ಯೆ ಹೆಚ್ಚಿಸಿಕೊಂಡೆವು. ಶುರುವಾಯಿತು ಕತ್ತಲಿನಲ್ಲಿ ಅಂತ್ಯಾಕ್ಷರಿ. ಯಾರಿಗೂ ಯಾರ ಮುಖವೂ ಕಾಣುತ್ತಿಲ್ಲ. ಪೂರ್ತಿ ಕತ್ತಲು. ರೂಮಿನಲ್ಲಿದ್ದ ಒಟ್ಟೂ ನಾಲ್ಕು ಮಂಚಗಳ ಮೇಲೆ ಹದಿನೈದಿಪ್ಪತ್ತು ಜನ ಕುಳಿತೆವು. ಯಾರ್ಯಾರು ಎಲ್ಲೆಲ್ಲಿ ಕುಳಿತಿದ್ದರೋ ಒಬ್ಬರಿಗೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಎರಡು ಮಂಚದ ಜನ ಓಂದುಕಡೆ ಇನ್ನುಳಿದವರು ಇನ್ನೊಂದುಕಡೆ ಎಂದು ನಿರ್ಧರಿಸಿಯಾಗಿತ್ತು. ಹಾಡುಗಳೇನೋ ಪ್ರಾರಂಭವಾದವು. ಆದರೆ ಅದನ್ನು ಹಾಡುತ್ತಿರುವವರು ಯಾವ ಪಕ್ಷದವರು ಎಂದೇ ತಿಳಿಯುತ್ತಿರಲಿಲ್ಲ. ಒಂದುಕಡೆಯಿಂದ ಶಬ್ದ ಶುರುವಾಗುತ್ತಿತ್ತು. ಅದಕ್ಕೆ ಎಲ್ಲರೂ ಧ್ವನಿಗೂಡಿಸುತ್ತಿದ್ದರು. ಯಾವ ತಂಡದವನೇ ಹಾಡಲಿ ಎಲ್ಲರೂ ಒಟ್ಟಾಗಿ ಘಟ್ಟಿಧ್ವನಿಯಲ್ಲಿ ಒದರಲು ಶುರುಮಾಡಿಬಿಟ್ಟರು. ಈ ಒದರಾಟ ಹಾಸ್ಟೆಲ್ ಪೂರ್ತಿ ಕೇಳಿ ಅಕ್ಕಪಕ್ಕದ ರೂಮಿನವರು ಪಕ್ಕದ ವಿಂಗಿನವರು ಎಲ್ಲರೂ ಬಂದು ಸೇರಿಬಿಟ್ಟಿದ್ದರು. ಎಷ್ಟು ಜನಬಂದು ಸೇರುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಧ್ವನಿಗಳು ಬಹಳವಾಗುತ್ತಿದ್ದುದು ಮಾತ್ರ ಎಲ್ಲರ ಗಮನಕ್ಕೆ ಬರುತ್ತಲಿತ್ತು.
ಬರುಬರುತ್ತ ಕೇವಲ ಹಾಡಷ್ಟೇ ಅಲ್ಲದೆ ಯಾರೋ ಯಾರಿಗೋ ಹೊಡೆದು ಅವರು ಒದರಿಕೊಳ್ಳುವ ಶಬ್ದ. ಸಖಾಸುಮ್ಮನೆ ಚೀರಾಟಗಳು ಬೈಗುಳಗಳು ಎಲ್ಲವೂ ಶುರುವಾಗಿಬಿಟ್ಟವು. ಹೇಗೂ ಯಾರಿಗೂ ಮುಖ ಕಾಣುತ್ತಿಲ್ಲ. ಎಲ್ಲರೂ ತಮ್ಮ ಬಯ್ಯುವ ಚಟವನ್ನು ತೀರಿಸಿಕೊಳ್ಳಲು ಶುರುಮಾಡಿಬಿಟ್ಟರು. ಈಗ ಅವರ ಧ್ವನಿಯಲ್ಲದೆ ಬೇರೆಯವರ ರೀತಿ ಅಥವಾ ವಿಚಿತ್ರವಾದ ಸ್ವರದಲ್ಲಿ ಕೂಗತೊಡಗಿದರು. ಅಲ್ಲಿ ಏನು ನೆಡೆಯುತ್ತಿದೆ ಎಂದೇ ಯಾರಿಗೂ ಗೊತ್ತಾಗುತ್ತಿಲ್ಲ. ಇದು ಹೀಗೇ ಮುಂದುವರಿದರೆ ವಾರ್ಡನ್ ಬಂದೇ ಬರುತ್ತಾರೆ ಎಂದು ಊಹಿಸಿ ಒಬ್ಬೊಬ್ಬರೇ ಜಾಗ ಖಾಲಿಮಾಡಲು ನಿಶ್ಚಯಿಸಿದೆವು. ಅಷ್ಟರಲ್ಲಿ ಒಬ್ಬನ ಚೀರಾಟ ತಾರಕಕ್ಕೇರಿತು. ಎಲ್ಲರೂ ಸ್ವಲ್ಪ ಹೆದರಿದರೋ ಏನೊ... ರೂಮು ಸ್ವಲ್ಪ ಶಾಂತವಾಯಿತು. "ಥೂ ನನ್ ಮಕ್ಳಾ... ಹಿಂಗಾ ಒದ್ರೂದು... ಯಾರೋ ಹೊರ್ಗಿಂದ ಬಾಗ್ಲಾ ಹಾಕ್ ಹೋಗ್ಯಾರ... ಮೊದ್ಲು ಬಾಗ್ಲು ತೆಗಸ್ರಪ್ಪ... ಸೆಕಿ ತಡ್ಕೊಲಾಕಾಗ್ವಲ್ದು" ಎಂದಿತು ಯಾವುದೋ ಒಂದು ಧ್ವನಿ. ಹೋಗಿ ನೋಡಿದರೆ ನಿಜವಾಗಿಯೂ ಬಾಗಿಲು ಹಾಕಿತ್ತು. ಎಷ್ಟು ಜಗ್ಗಿದರೂ ಬರುತ್ತಿರಲಿಲ್ಲ. ಕತ್ತಲಲ್ಲಿ ಒಳಗಿಂದಲೇ ಬೋಲ್ಟ್ ಹಾಕಿಲ್ಲವಲ್ಲಾ ಎಂದೂ ಚೆಕ್ ಮಾಡಿ ಆಯಿತು. ಹೊರಗಡೆಯಿಂದ ಬಾಗಿಲು ಹಾಕಿರುವುದು ಕನ್ಫರ್ಮ್ ಆಯಿತು.
"ಯಾವ್ ಹಲ್ಕಟ್ ಸೂಳಾಮಗಾಲೇ ಅವ..." ಶುರುವಾಯಿತು ಸಂಸ್ಕೃತದ ಸುರಿಮಳೆ. ಆ ಮಗ. ಈ ಮಗ. ಎಲ್ಲರ ಕಿವಿ ಪಾವನವಾಗುವವರೆಗೆ ಹೊರಗಡೆಯಿಂದ ಚಿಲಕ ಹಾಕಿದವನಿಗೆ ಸಹಸ್ರನಾಮ ಪೂಜೆಯಾಯಿತು. "ಲೇ ಸುಮ್ನ ಬೈತಾ ಕುಂತ್ರ ಏನೂ ಆಗಾಂಗಿಲ್ಲ. ಈಗ ಬಾಗ್ಲು ಹ್ಯಾಂಗ್ ತೆಗ್ಯೂದು ಅಂತ್ ಯೋಚ್ನಿ ಮಾಡ್ರಿ" ಎಂದಿತು ಒಂದು ಬುದ್ಧಿವಂತ ಧ್ವನಿ. ಆಗ ನನ್ನ ರೂಂಮೇಟ್ ಒಂದು ಉಪಾಯ ಸೂಚಿಸಿದ. ನಮ್ಮ ರೂಮಿನಲ್ಲಿ ಸಂತ್ಯಾ ಓದುತ್ತ ಕುಳಿತಿದ್ದ. ಅವನಂತೂ ಇಲ್ಲಿ ಬಂದಿರಲಿಲ್ಲ. ಅವನನ್ನು ಕರೆಯುವುದು ಎಂದು. ಸರಿ... ನಮ್ಮ ಮಾಮೂಲಿ ಕೋಡ್ ಸಿಗ್ನಲ್ ಬಳಸಿದೆವು. ಗೋಡೆಯನ್ನು ಬಡಿಯತೊಡಗಿದರು. ಸಂತ್ಯಾ ಮಲಗಿದ್ದವ ಎದ್ದು ಓಡೋಡಿ ಬಂದ. ಹೊರಗಿನಿಂದಲೇ ಅವನ ಧ್ವನಿ ಕೇಳಿಸುತ್ತಿತ್ತು.
"ಲೇ... ಎಲ್ಲಾ ಖಾಲಿ ಮಾಡ್ಬೇಡ್ರಲೇ.. ಮಕ್ಳಾ ಬಾಗ್ಲಾ ಹಾಕ್ಕೊಂಡ್ ಕೂತೀರೀ... ತೆಗೀರಲೇ..."
ಅವನಿಗೆ ತಿಳಿಸಿ ಹೇಳಲಾಯಿತು. ಆದರೆ ಪರಿಸ್ಥಿತಿ ಅಷ್ಟು ಸರಳವಾಗಿರಲಿಲ್ಲ. ನಮ್ಮ ಚೀರಾಟ ಕೂಗಾಟಗಳನ್ನು ಕೇಳಿ ಹಾಸ್ಟೆಲ್ ಮ್ಯಾನೇಜರ್ ಬಂದು ನೋಡಿ, ಬಾಗಿಲನ್ನು ಹೊರಗಿನಿಂದ ಹಾಕಿ ಅದಕ್ಕೆ ದೊಡ್ಡದೊಂದು ಬೀಗವನ್ನು ಹಾಕಿ ಹೋಗಿದ್ದ. ಸಂತ್ಯಾನಿಗೆ ಒಳಗಿಂದಲೇ ಆರ್ಡರ್ ಹೋಗಿತ್ತು. ಹೇಗಾದರೂ ಮಾಡಿ ಅದನ್ನು ಮುರಿ ಎಂದು. ಅವನು ಅದಕ್ಕೇ ಜೋತುಬಿದ್ದರೂ ಅವನಿಂದ ಏನೂ ಮಾಡಲಾಗಲಿಲ್ಲ.
ಹತ್ತು ನಿಮಿಷದಲ್ಲಿ ಮ್ಯಾನೇಜರ್ ವರ್ಡನ್ ಜೊತೆ ಬಂದು ರೂಮಿನ ಬಾಗಿಲು ತೆಗೆದ. ಎಲ್ಲರಿಗೂ ಮಧ್ಯರಾತ್ರಿ ಮಂಗಳಾರತಿಯಾಯಿತು. ಮ್ಯಾನೇಜರ್ ತಂದಿದ್ದ ಒಂದು ಪೆನ್ ಟಾರ್ಚ್ನಿಂದ ಎಲ್ಲರ ಮುಖಕ್ಕೆ ಬೆಳಕು ಬಿಟ್ಟು ವಾರ್ಡನ್ಗೆ ಎಲ್ಲರನ್ನೂ ಪರಿಚಯಿಸಿದ. ಎಲ್ಲರೂ ಸೇರಿ ಒಂದು ಕ್ಷಮಾಪಣಾ ಪತ್ರ ಬರೆದುಕೊಡಬೇಕೆಂದು ವಾರ್ಡನ್ ಆಜ್ಞೆ ಹೊರಡಿಸಿ ಹೋದರು. ಒಂದು ಮೇಣದಬತ್ತಿ ಬೆಳಕಿನಲ್ಲಿ ಪತ್ರವೂ ತಯಾರಾಯಿತು. ಅದರ ಮೇಲೆ ಎಲ್ಲರೂ ಸಹಿಮಾಡಿಕೊಟ್ಟರು. ಆ ಪತ್ರವನ್ನು ತೆಗೆದುಕೊಂಡು ಮ್ಯಾನೇಜರ್ ಹೊರಟುಹೋದ. 61, 62ರೂಮುಗಳು ಮತ್ತೊಮ್ಮೆ ಪ್ರಸಿದ್ಧಿ ಪಡೆದಿದ್ದವು. ಆದರೆ ಆಗತಾನೇ ನಿದ್ದೆಗಣ್ಣಿನಿಂದ ಎದ್ದು ಬಂದಿದ್ದ ಸಂತ್ಯಾ ಮಾತ್ರ ಕೇಳುತ್ತಿದ್ದ... "ಇಷ್ಟೊಂದ್ ಮಂದಿ ಇಲ್ಯಾಕ್ ಬಂದ್ ಕಿರ್ಚಾಡಾಕತ್ತಿದ್ರಿ?". ನಾವು ಅಂತ್ಯಾಕ್ಷರಿ ಆಡುತ್ತಿದ್ದೆವು ಎಂದು ಯಾರಿಗೂ ಅನ್ನಿಸಿರಲೇ ಇಲ್ಲ.
Thursday, May 22, 2008
ಧೂಮವೆ ನನ್ನುಸಿರು!

ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂಥೆಯೇ ಅದು ಥೇಟು
ಬಿಡಬಲ್ಲೆನೇನೆ ನಿನ್ನಾ
ಚಿನ್ನಾ ಹಾಗೆಯೇ ಸಿಗರೇಟನ್ನ
ಎನ್ನುವ ಕಾಲ. ಆದ್ದರಿಂದ ಖಂಡಿತ ಜನರಿಗೀಗ ಧೂಮವೇ ಉಸಿರಾಗಿಬಿಟ್ಟಿದೆ! ಸಿಗರೇಟ್ ಧೂಮದ ಉಂಗುರಗಳ ಗುಂಗಿನಲ್ಲಿ ಈ ರೀಮಿಕ್ಸಿನ ರೀಮಿಕ್ಸ್.
ಧೂಮವೆ ನನ್ನುಸಿರು
ಧೂಮವೆ ನನ್ನುಸಿರು
ದಿನವೂ ಹಗಲು ಸಂಜೆ ರಾತ್ರಿ ಎಲ್ಲೆಂದರೆಲ್ಲಿ
ಹೊಗೆ ಕುಡಿಯುವುದೇ
ಸಿಗರೇಟ್ ಹೊಗೆಯನು ಕುಡಿಯುವುದು
ಕುಡಿಯುತ ಹರುಷವ ಪಡೆಯುವುದು
ಬಾನಲಿ ಉಂಗುರ ಬಿಡಿಸುವುದು
ಸ್ವರ್ಗವು ಇದುವೇಎನ್ನುವುದು
ಹರುಷದಿ ಪರಿಸರ ಕೆಡಿಸುವುದು
ಧೂಮದ ಕಾಟಕೆ ಜಗವೆಲ್ಲ
ಸೊರಗಿ ಹೋಗಿದೆ ಸುಳ್ಳಲ್ಲ
ಸಿಗರೇಟ್ ಸೇವನೆ ನಿಲ್ಲಲ್ಲ
ಹೊಗೆಕುಡಿದವಗೆ ಮುಪ್ಪಿಲ್ಲ
ಯೌವನ ಮುಗಿಯುತೆ ನಾನಿಲ್ಲ
ಒರಿಜಿನಲ್ ಸೌಂಡ್ಟ್ರಾಕ್ ಕೇಳಬಯಸುವವರು ಇಲ್ಲಿ ಕ್ಲಿಕ್ಕಿಸಿ.
Wednesday, May 14, 2008
ಬದುಕಿನ ಓಟದಲ್ಲಿ...

Thursday, April 17, 2008
ಘಟ್ಟಿ ಕೂತ್ಗೋರಿ....
"ನೂರು ರುಪಾಯಿ ಆಕ್ಕೇತಿ ನೋಡ್ರಿ"
ನೂರು ರೂಪಾಯಾ? ನಮ್ಮ ಹತ್ತಿರ ಇಪ್ಪತ್ತು ರೂಪಾಯಿಗೆ ಒಂದು ಪೈಸೆಯೂ ಹೆಚ್ಚು ಇರಲಿಲ್ಲ. ರಾತ್ರಿ ಹನ್ನೊಂದುವರೆ ಆಗಿಬಿಟ್ಟಿತ್ತು. ಬಾಗಲ್ಕೋಟ್ ಸಿಟಿಯಿಂದ ವಿದ್ಯಾಗಿರಿಗೆ ಹೋಗುವ ಕೊನೆಯ ಬಸ್ಸು ರಾತ್ರಿ ಹತ್ತು ಗಂಟೆಗಾಗಲೇ ಹೊರಟುಹೋಗಿತ್ತು. ರಾತ್ರಿ ಹೇಗಪ್ಪಾ ಮನೆಮುಟ್ಟುವುದು ಎಂದು ನಮ್ಮ ತಲೆಬಿಸಿ ನಮಗಾದರೆ, "ಅಪ್ಪನ ರೊಕ್ಕ ಕುಡ್ಯಾಕ್ ಖರ್ಚು ಮಾಡಾಕ್ ಬರ್ತೈತಿ... ಆಟೋಕ್ಕೆ ಕೊಡಾಕ್ ಬರಾಂಗಿಲ್ಲಾ?" ಎಂದು ಆ ಆಟೋ ಡ್ರೈವರ್ ಬೇರೆ ರೇಗಿಸುತ್ತಿದ್ದ. ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿ. ಅಲ್ಲಿದ್ದವರು ನಾವಿಬ್ಬರು ಮತ್ತೆ ಆ ಆಟೋಡ್ರೈವರ್ ಅಷ್ಟೇ. ಸುತ್ತಮುತ್ತಲೂ ಒಂದು ನರಪಿಳ್ಳೆಯೂ ಓಡಾಡುತ್ತಿರಲಿಲ್ಲ. ಗುರುಸಿದ್ದೇಶ್ವರ ಚಿತ್ರಮಂದಿರದ ಎದುರಿದ್ದ ಸೋಡಿಯಂ ಲ್ಯಾಂಪೊಂದು ಆವರಿಸಿದ್ದ ಕತ್ತಲನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿತ್ತು. ಅಪರೂಪಕ್ಕೆ ಒಂದೊಂದು ಟ್ರಕ್ಕು ಆ ಮಾರ್ಗವಾಗಿ ಹೋಗುತ್ತಿದ್ದವು. ಎಲ್ಲ ಟ್ರಕ್ಕುಗಳಿಗೂ ಕೈ ಮಾಡಿ ಮಾಡಿ ಕೈಸೋತವೇ ಹೊರತೂ ಯಾವ ಟ್ರಕ್ಕೂ ನಿಲ್ಲಲಿಲ್ಲ.
ಆದಿನ ಸಂಜೆ ನಾಳೆಯ ನಾಟಕದ ಪ್ರದರ್ಶನಕ್ಕಾಗಿ ತಯಾರಿ ನೆಡೆದಿತ್ತು. ನಾಳೆ ಬೆಳಿಗ್ಗೆ ಆರು ಗಂಟೆಗೆ ಬೆಳಗಾವಿಗೆ ನಾಟಕದ ಕಾಂಪಿಟೇಷನ್ಗೆ ಹೋಗಬೇಕಿತ್ತು. ಸ್ಟೇಜ್ ಹಿಂದೆ ಹಾಕಲು ನೀಲಿ ಪರದೆ ಅಲ್ಲಿ ಬಹುಶಃ ಸಿಗಲಿಕ್ಕಿಲ್ಲ ಎಂದು ಊಹಿಸಿದ್ದ ನಮ್ಮ ಡೈರೆಕ್ಟರ್ ನನ್ನ ಮತ್ತು ಪವನನನ್ನ ನೀಲಿ ಪರದೆ ಕೇಳಿಕೊಂಡು ತರಲು ಬಾಗಲ್ಕೋಟ್ ಸಿಟಿಯಲ್ಲಿದ್ದ ಅರ್.ಎಸ್.ಎಸ್ ಕಾರ್ಯಾಲಯಕ್ಕೆ ಕಳಿಸಿದ್ದರು. ನೀಲಿ ಪರದೆಯೇನೋ ಸಿಕ್ಕಿತು. ಆದರೆ ಅಲ್ಲಿಯ ಪರಿಚಿತರೊಂದಿಗೆ ಮಾತನಾಡುತ್ತಾ ಹೊತ್ತು ಹೋಗಿದ್ದೇ ಗೊತ್ತಾಗದೆ ನಮ್ಮ ಪವನ ಸಾಹೇಬ್ರು ವಾಪಸ್ ಹೊರಡುವುದನ್ನು ತುಂಬ ತಡಮಾಡಿಬಿಟ್ಟಿದ್ದರು. ವಿದ್ಯಾಗಿರಿಯಿಂದ ಬಾಗಲ್ಕೋಟೆ ಸಿಟಿಯಿರುವುದು ಕನಿಷ್ಟಪಕ್ಷ ಐದಾರು ಕಿಲೋಮೀಟರ್ ದೂರದಲ್ಲಿ. ದಾರಿಮಧ್ಯ ಸಿಮೆಂಟ್ ಫ್ಯಾಕ್ಟರಿ ಬಿಟ್ಟರೆ ಬೇರೆ ಏನೂ ಇಲ್ಲ. ನೆಡೆದುಕೊಂಡು ಹೋಗುವುದಕ್ಕೆ ಅದರಲ್ಲೂ ಮಧ್ಯರಾತ್ರಿಯಲ್ಲಿ, ನಮಗಂತೂ ಧೈರ್ಯವೇ ಇರಲಿಲ್ಲ. ಬಸ್ಟ್ಯಾಂಡಿಗೆ ಬರುವಷ್ಟರಲ್ಲೇ 10:45 ಆಗಿಬಿಟ್ಟಿತ್ತು. ಯಾವುದಾದರೂ ಗಾಡಿ ಸಿಗಬಹುದೇನೋ ಎಂದು ಕಾಯುತ್ತಾ ಒಂದು ಗಂಟೆಯಾದರೂ ಯಾವ ಗಾಡಿಯೂ ನಮ್ಮ ಕೈಹತ್ತಲಿಲ್ಲ. ಉಳಿದಿದ್ದ ಒಂದೇ ಒಂದು ಮಾರ್ಗವೆಂದರೆ ಆ ಆಟೋ ಹತ್ತಿ ಹೋಗುವುದು. ಅವನನ್ನು ಕೇಳಿದರೆ ನೂರು ರೂಪಾಯಿ ಹಾಗೆ ಹೀಗೆ ಅಂದುಬಿಟ್ಟ. ನಾವು ಅಷ್ಟೆಲ್ಲ ಆಗಲ್ಲಪ್ಪಾ ಎಂದಿದ್ದಕ್ಕೆ ಕುಡುಕರು ಗಿಡುಕರು ಎಂದು ನಮ್ಮ ಸ್ವಾಭಿಮಾನ ಬೇರೆ ಕೆರಳಿಸಿಬಿಟ್ಟ. ಏನೇ ಆಗಲಿ ಮತ್ತೆ ಅವನ ಹತ್ತಿರ ಮಾತ್ರ ಹೋಗುವುದು ಬೇಡ ಎಂದು ನಿರ್ಧರಿಸಿಬಿಟ್ಟೆವು.
"ಎಲ್ಲಾ ನಿಮ್ಮಿಂದಾನೇ..." ರಾಗ ಎಳೆದೆ.
"ಲೇ... ಅಪ್ರೂಪಕ್ಕೆ ಸಿಕ್ಯಾರ... ಬಿಟ್ ಬರಾಕ್ ಆಕ್ಕೇತೇನ್ಲೆ?" ಅವರ ಉತ್ತರ. ಮತ್ತೆ ಇಬ್ಬರೂ ಆಕಡೆಯ ರೋಡಿನ ತುದಿಗೆ ನೋಡಲು ಪ್ರಾರಂಭಿಸಿದೆವು. ಯಾವ ಗಾಡಿಯ ಸುಳಿವೂ ಇಲ್ಲ. ರಾತ್ರಿ ಹೋಗಿ ಇನ್ನೊಂದಿಷ್ಟು ಸ್ಟೇಜ್ ತಯಾರಿ ಬೇರೆ ಮಾಡಬೇಕಿತ್ತು. ಅದು ಹಾಳಾಗಿ ಹೋಗಲಿ, ಹೇಗೋ ಓಟ್ಟಿನಲ್ಲಿ ರೂಮು ತಲುಪಿದರೆ ಸಾಕಾಗಿತ್ತು. ಈ ಸ್ಮಶಾನ ಮೌನದ ನಡುವೆ ಒಂದು ಬೈಕಿನ ಶಬ್ದ ಕೇಳಿಸಿತು. ನಾವಿಬ್ಬರಿದ್ದುದರಿಂದ ಆ ಬೈಕ್ಮೇಲಂತೂ ಹೋಗಲಿಕ್ಕಾಗುವುದಿಲ್ಲ ಎಂದು ಸುಮ್ಮನೆ ನಿಂತೆವು. ಆ ಬೈಕ್ ಸವಾರನೋ ಅಂಗಿಯ ಗುಂಡಿಗಳನ್ನು ಅರ್ಧಕ್ಕರ್ಧ ಬಿಚ್ಚಿಕೊಂಡು ಆಕಡೆ ಈಕಡೆ ಒಂದು ಚೂರೂ ನೋಡದೆ ಸಿಕ್ಕಪಟ್ಟೆ ಸ್ಪೀಡಾಗಿ ಓಡಿಸುತ್ತಾ ನಮ್ಮ ಮುಂದೆಯೇ ಹಾದು ಹೋದ. ಮತ್ತೆ ಹತ್ತು ನಿಮಿಷಗಳ ಮೌನ. ಪುನಃ ಮತ್ತೊಂದು ಬೈಕಿನ ಶಬ್ದ ಕೇಳಿಸತೊಡಗಿತು. ಬೈಕ್ ಹತ್ತಿರ ಬಂದಾಗ ನೋಡಿದರೆ, ಹತ್ತು ನಿಮಿಷದ ಹಿಂದೆ ಯಾವ ಬೈಕ್ ನಮ್ಮೆದುರಿಗೆ ಹಾದು ಹೋಗಿತ್ತೋ ಅದೇ ಬೈಕ್. ಆ ಬೈಕ್ ಓಡಿಸುವವ ಮತ್ತದೇ ಪೊಸಿಶನ್ನಲ್ಲಿ ಅಂಗಿ ಗುಂಡಿಗಳನ್ನು ಬಿಚ್ಚಿಕೊಂಡು ಮತ್ತದೇ ವೇಗದಲ್ಲಿ ನಮ್ಮೆದುರಿಂದಲೇ ಹಾದುಹೋದ. ನಾವಿಬ್ಬರು ಮುಖ ಮುಖ ನೋಡಿಕೊಂಡೆವು.
ಇನ್ನೇನೂ ಮಾಡಲು ತೋಚದೆ ನಾವಿಬ್ಬರೂ ಗರುಡಗಂಬಗಳಂತೆ ರಸ್ತೆ ಬದಿಯಲ್ಲಿ ನಿಂತಿರುವಾಗ ಪರಿಚಯದವರೊಬ್ಬರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಅವರ ಕೆಲಸ ಅಲ್ಲಿನ ಪ್ರಾದೇಶಿಕ ಪತ್ರಿಕೆಯಲ್ಲಾದುದರಿಂದ ಬಹಳ ಹೊತ್ತು ಇರಬೇಕಾದ ಪರಿಸ್ಥಿತಿಯಿತ್ತು. ಅಂತೂ ಒಬ್ಬರಾದ್ರೂ ಸಿಕ್ರಲ್ಲ ಎಂದುಕೊಂಡು ಹೀಗಾಗಿಬಿಟ್ಟಿದೆ ನಮ್ಮ ಪರಿಸ್ಥಿತಿ ಎಂದು ಹೇಳಿಕೊಂಡೆವು. ಅವರಿಗೆ ಬೆಳಿಗ್ಗೆಯೇ ಅವರ ಗಾಡಿ ಬೇಕಿತ್ತಂತೆ. ಇಲ್ಲದಿದ್ದರೆ ನಿಮ್ಮಿಬ್ಬರಿಗೆ ಕೊಟ್ಟುಬಿಡುತ್ತಿದ್ದೆ. ನೀವು ನಾಳೆ ವಾಪಸ್ ತಂದು ಮುಟ್ಟಿಸಬಹುದಿತ್ತು ಎಂದರು. ಇನ್ನು ಬೇರೆ ಉಪಾಯ ಏನಿದೆ ಎಂದು ಯೋಚಿಸುತ್ತಿರುವಾಗಲೇ ಮತ್ತೆ ಬೈಕಿನ ಶಬ್ದವಾಯಿತು. ಮತ್ತೆ ಅದೇ ಬೈಕ್ ಅದೇ ಸ್ಪೀಡ್ನಲ್ಲಿ ಹತ್ತಿರ ಬರುತ್ತಿತ್ತು. ಇವರು "ತಡೀರಿ... ಒಂದ್ ಕೆಲ್ಸಾ ಮಾಡೂನು" ಎಂದನ್ನುತ್ತಾ ಆ ಬೈಕ್ನವನಿಗೆ ಕೈ ಮಾಡಿದರು. ಅವನಿದ್ದ ಸ್ಪೀಡಿಗೆ ಅವನು ನಮ್ಮಿಂದ ಅರ್ಧ ಕಿಲೋಮೀಟರ್ ದೂರ ಹೋಗಿ ನಿಂತ. ವಾಪಸ್ಸು ಬಂದು ಅವರಿಗೆ ನಮಸ್ಕಾರಾ ಸಾರ್ ಎಂದ. ಇವರಿಬ್ಬರನ್ನೂ ವಿದ್ಯಾಗಿರಿಗೆ ಬಿಟ್ಟುಕೊಡ್ತೀಯೇನಪ್ಪಾ ಎಂದು ಅವರು ಕೇಳಿದೊಡನೆಯೇ ಈತ ಅದಕ್ಕೇನು ಸಾರ್ ಎಂದು ಒಪ್ಪಿಗೆ ಸೂಚಿಸಿಬಿಟ್ಟ. ತಮ್ಮ ಕೆಲಸ ಮುಗಿಸಿದ್ದಕ್ಕೆ ಅವರು ನಮಗೆ ವಿದಾಯ ಹೇಳಿ ಹೊರಟುಬಿಟ್ಟರು.
ಬೈಕನ್ನೊಮ್ಮೆ ಜೋರಾಗಿ ಅಲ್ಲಾಡಿಸಿ ಟ್ಯಾಂಕಿನ ಹತ್ತಿರ ಕಿವಿ ಹಿಡಿದ. ಆಮೇಲೆ ತನ್ನಷ್ಟಕ್ಕೆ ತಾನೇ ತಲೆ ಅಲ್ಲಾಡಿಸಿ ನಮ್ಮ ಕಡೆ ನೋಡಿದ. "ವಿದ್ಯಾಗಿರೀಗೆ ಹೊಂಟೀರೇನ್ರಿ? ಬರ್ರಿ...". ನಾನು ಮಧ್ಯದಲ್ಲಿ ಕೂತೆ. ನನ್ನ ಹಿಂದೆ ಪವನ. ಅವನ ಕಟಾರಾ ಸುಜುಕಿ ಸಮುರೈನಲ್ಲಿ ನಮ್ಮ ತ್ರಿಬಲ್ ರೈಡಿಂಗ್ ಶುರುವಾಯಿತು. "ನೋಡ್ರೀ... ನಾನು ಈಗss ಹೇಳಾಕತ್ತೀನಿ. ಘಟ್ಟಿ ಕೂತ್ಗೋರಿ. ನಾನು ನಶಾದಾಗದೀನಿ" ಎಂದುಬಿಟ್ಟ. ನನ್ನ ಜಂಘಾಬಲವೇ ಉಡುಗಿಹೋಯಿತು. ಕಣ್ಣು ಮುಚ್ಚಿ ರಾಮ ಕೃಷ್ಣ ಹೇಳಲು ಪ್ರಾರಂಭಿಸಿದೆ. ಕೆಲವೇ ಸೆಕಂಡುಗಳಲ್ಲಿ ಬೈಕು 60km/h ಸ್ಪೀಡಿಗೆ ಹೋಗಿ ಮುಟ್ಟುಬಿಟ್ಟಿತ್ತು. ಅಲ್ಲಿಯ ರೋಡಿನ ಪರಿಸ್ಥಿತಿಯೋ ಕೇಳುವುದು ಬೇಡ. ಆ ರೋಡಿನಲ್ಲಿ ಇವನ ಕಟಾರಾ ಬೈಕು ಆ ಸ್ಪೀಡಿನಲ್ಲಿ ತ್ರಿಬಲ್ ರೈಡಿಂಗ್ ಬೇರೆ. ಬೈಕಿನ ಶಾಕ್ ಅಬ್ಸಾರ್ಬರ್ಸ್ ಪೂರ್ತಿ ಅಕ್ಕಿಹೋಗಿತ್ತು. ಎಲ್ಲಾದರೂ ಹೊಂಡ ಹಾರಿಸಿದರೆ ಕಟಾರ್ ಎಂದು ಶಬ್ದ ಬೇರೆ ಬರುತ್ತಿತ್ತು. ಅವನಿಗಂತೂ ಇದೆಲ್ಲದರ ಪರಿವೆಯೇ ಇಲ್ಲವೇನೊ ಎಂಬಂತೆ ಓಡಿಸುತ್ತಿದ್ದ. ಅರ್ಧ ದಾರಿ ಸಾಗಿದ ಮೇಲೆ ಪ್ರಶ್ನೋತ್ತರಗಳನ್ನು ಶುರುಮಾಡಿದ.
"ಏನ್ ಮಾಡ್ಕೊಂಡದೀರಿ?"
"ಇಂಜಿನಿಯರಿಂಗ್ ಕಲ್ಯಾಕತ್ತೀವ್ರಿ"
"ಯಾವ ಬ್ರಾಂಚು?"
"ಕಂಪ್ಯೂಟರ್ ಸೈನ್ಸ್ರಿ"
"ಓಹ್... ಹಂಗಾರss ಅನಾಮಿ ಗೊತ್ತೇನ್ ನಿಮ್ಗ?"
ಯಲಾ ಇವ್ನಾ, ಹೋಗಿ ಹೋಗಿ ನಮ್ಮ HODಸುದ್ದೀಗೆ ಕೈ ಹಾಕಿದ್ನಲ್ಲಪ್ಪಾ ಎಂದುಕೊಳ್ಳುವಷ್ಟರಲ್ಲಿ ಅವನೇ ಮುಂದುವರಿಸಿದ.
"ಅವ ಮತ್ತ ನಾನು ಭಾರೀ ದೋಸ್ತ್... ನಿಮ್ಗೇನಾರ ಪ್ರಾಬ್ಲಮ್ ಆದ್ರ ನಂಗ್ ಹೇಳ್ರಿ. ನಾನು ಅನಾಮಿಗೆ ಹೇಳ್ತೀನಿ"
ಕೃತಾರ್ಥರಾದೆವು ತಂದೆ. ಮೊದಲು ದಯವಿಟ್ಟು ಮನೆಗೆ ತಲುಪಿಸಿಬಿಡು ಎಂದು ಬಾಯಿ ಬಿಟ್ಟು ಹೇಳುವುದೊಂದು ಬಾಕಿ ಇತ್ತು.
"ಅಂದಾಂಗ... ಈಗೀಗ ಬಾಗಲ್ಕೋಟ್ನಾಗ ಭಾಳ್ ಸೆಕಿ ಶುರು ಆಗ್ಬಿಟೈತಿ ನೋಡ್ರಿ. ಮನ್ಯಾಗ ಕುಂದ್ರಾಕಾಗಾಂಗಿಲ್ಲ. ಅದ್ಕss ಸೊಲ್ಪ ಹವಾ ಸೇವ್ಸೂನೂ ಅಂತ ಗಾಡಿ ಓಡ್ಸಾಕತ್ತೀನಿ" ಎಂದು ತನ್ನ ಸಮಸ್ಯೆಯನ್ನು ವಿವರಿಸಿದ. ನಾವು ಹುಂ ಹುಂ ಎಂದು ತಲೆ ಹಾಕಿದೆವು.
ಅಂತೂ ಕಾಲೇಜು ತಲುಪಿದಾಗ ಹೋದ ಜೀವ ಮತ್ತೆ ಬಂದಂತಾಗಿತ್ತು. ಇಲ್ಲೇ ಬಿಡಿ ಸಾಕು ಎಂದು ಎಷ್ಟು ಹೇಳಿದರೂ ಕೇಳದೆ ರೋಮಿಗೇ ತಂದು ಮುಟ್ಟಿಸಿದ. "ಏನಾರ ಹೆಲ್ಪ್ ಬೇಕಿದ್ರೆ ಕೇಳ್ರಿ... ನಾನು ನಿಮ್ಮ HODಗೆ ಹೇಳ್ತೀನಿ... ಗುಡ್ ನೈಟ್" ಎಂದು ಹೇಳಿ ಬೀಳ್ಕೊಟ್ಟ. ಎಚ್ಚರವಾಗಿದ್ದವ ದುಡ್ಡು ತೆಗೆದುಕೊಂಡೂ ಮಾಡದೇ ಇದ್ದ ಸಹಾಯವನ್ನ ನಿಶೆಯಲ್ಲಿದ್ದವ ಪ್ರತಿಫಲವನ್ನೇ ನಿರೀಕ್ಷಿಸದೆ ಮನಃಪೂರಕವಾಗಿ ಮಾಡಿಮುಗಿಸಿದ್ದ.
Tuesday, April 15, 2008
ಮಾಡರ್ನ್ ನಿಂಗಿ

ತಂಗಿ ತಂಗಿ ತಂಗಿ ತಂಗಿ
ಪ್ಯಾಟೀಗ್ ಹೊಂಟೀಯೇನ ತಂಗಿ
ತಂಗಿ ತಂಗಿ ತಂಗಿ ತಂಗಿ
ಟಸ್ ಪುಸ್ ಅಂತೀಯಲ್ಲೆ ತಂಗಿ
ನಿನ್ನ ನೋಡುತ್ತಾ
ಜನ್ರೆಲ್ಲ ಬೆಪ್ಪ
ಆಗ್ಯಾರ ನೋಡಲ್ಲಿ
ಟೈಟು ಜೀನ್ಸು ಶಾರ್ಟು ಟಾಪು
ಹಾಕಿಕೊಂಡ ನೀ ನಿಂತಿ
ಬಳಿ ಇಲ್ಲದೇ ಟಿಕಳಿ ಇಲ್ಲದೇ
ಬೆದರುಬೊಂಬೆ ಹಾಂಗ ಕಾಣತಿ
ಮುಖಕ್ಕೆ ಸುಣ್ಣ ಮೆತ್ತತಿ
ತುಟಿಗೆ ಬಣ್ಣ ಹಚ್ಚತಿ
ಜಡಿನ ಕತ್ತರಿಸುತಿ
ನಿನ್ನ ನೀನು ಮರೆಸುತಿ
ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ
ಕರೀಗ್ಲಾಸ ಹಾಕಿಕೊಂಡು
ಹುಡುಗರ್ ಮುಂದ ಪೋಸ್ ಕೊಡ್ತಿ
ಸುಮ್ ಸುಮ್ನೆ ನಗನಗತಾ
ಅವರ್ನ ಬುಟ್ಟಿಗ್ ಬೀಳಿಸ್ಕೊಳತಿ
ಅವಗ ಕೈ ನೀಡತಿ
ಇವನ ನೀ ನೋಡತಿ
ನಿನ್ನ ನೀನು ಮಾರತಿ
ಒಳ್ಳೆ ಬೆಲೆ ಬೇಡತಿ
ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ
Monday, April 7, 2008
ನಿಜಕ್ಕೂ ನಾವು ಮುಂದುವರಿಯುತ್ತಿದ್ದೇವೆಯೆ?
Wednesday, March 26, 2008
ಸಪ್ತರ್ಷಿಗಳು ಗ್ಲಾಸು ಒಡೆದರು...

Monday, March 17, 2008
ಬಿಡಿಸೋ ಸಿಗ್ನಲನು... ಮಾಮ.

ತೂರಿಸಲೆಂದೇ ಬೈಕಲಿ ಬಂದೆ
ಟ್ರಾಫಿಕ್ ಜಾಮಲಿ ನಾನೊಂದೆ
ಬಿಡಿಸೋ ಸಿಗ್ನಲನು ಮಾಮ
ಬಿಡಿಸೋ ಸಿಗ್ನಲನು ಮಾಮ
ಬೆಂಗ್ಳೂರ್ ನಗರದಿ ಜಾಮಿನ ಜೋರು
ರೋಡಿನ ಮೇಲ್ಗಡೆ ಕಾರ್ಗಳ ತೇರು
ಜಾಗವು ಸಿಕ್ಕೆಡೆ ಬೈಕನು ತೂರು
ಶುರುವಾಗಿದೆ ವಾರು ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ
ನಗರದಿ ಫುಡಾರಿ ಬಂದಿಳಿದಿಹನು
ಜನರಿಗೆ ಟ್ರಾಫಿಕ್ ಜಾಮ್ ತಂದಿಹನು
ಜಾಮನು ನೆಕ್ಕುತ ಆಗಿದೆ ಬೋರು
ಕರುಣೆಯ ತೋರಿನ್ನು ಚೂರು
ಬಿಡಿಸೋ ಸಿಗ್ನಲನು ಮಾಮ
ಬೇಗನೆ ಸಾಗುವ ಭರದಲಿ ಕಾರು
ಪಕ್ಕದ ಕಾರಿಗೆ ಉಜ್ಜಿತು ನೋಡು
ಜಗಳವ ಆಡುತ ಮೈ ಮರೆತಿಹರು
ದಯಮಾಡಿಸೊ ಇಲ್ಲಿ ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ
ಎದುರಲಿ ಆಟೋ ಸಾಗುತಲಿಹುದು
ಒಮ್ಮೆಲೆ ಗಿರಕಿಯ ಹೊಡೆಯುತಲಿಹುದು
ಶಿವ ಶಿವ ಎನ್ನುತ ಜನ ಹೆದರಿಹರು
ಓಡಿಸೋ ಭೂತವನು ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ
ಬೇಸಿಗೆ ಬಿಸಿಲನು ತಾಳದೆ ನಾನು
ಹೆಲ್ಮೆಟ್ ತೊಡದಿರೆ ಹಾಕಿದೆ ಫೈನು
ಆದರೆ ರಿಸಿಟನು ಕೊಡದೆಯೆ ನೀನು
ಕಳಿಸುವೆಯೇಕೆನ್ನ ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ
ಸಿಗ್ನಲ್ ಜಂಪನು ಮಾಡಿದ ಪೆದ್ದನು
ನಿನ್ನಯ ಜಾಲಕೆ ಸಿಕ್ಕಿಬಿದ್ದಹನು
ಬೇಗನೆ ಮುಗಿಸಿ ನೆಗೋಸಿಯೇಷನ್
ಪಡೆದುಕೊಳೋ ನಿನ್ನ ಕಮೀಷನ್
ಬಿಡಿಸೋ ಸಿಗ್ನಲನು ಮಾಮ
Wednesday, March 12, 2008
ಆಪರೇಷನ್ ಮಾವಿನಕಾಯಿ !

ಹೈಸ್ಕೂಲಿನಲ್ಲೆಲ್ಲಾ ನಾನು, ಸಂತೋಷ ಮತ್ತೆ ಕಿರಣ, ತ್ರಿಮೂರ್ತಿಗಳು ಎಂದೇ ಪ್ರಸಿದ್ಧ. ಈ ಮೂವರು ಸೇರಿಬಿಟ್ಟೆವು ಅಂದರೆ ಸಧ್ಯದಲ್ಲೇ ಏನೋ ಒಂದು ಕಿತಾಪತಿ ನೆಡೆಯಲೇ ಬೇಕು. ಕಿರಣ ಬಯಲುಸೀಮೆಯ ಹುಡುಗ. ಎಲ್ಲದರಲ್ಲೂ ಹುರುಪು ಜಾಸ್ತಿ. ಸಂತೋಷ ಎಲ್ಲದನ್ನೂ ವಿಚಾರಿಸಿ ಜಾಗರೂಕತೆಯಿಂದ ಹೆಜ್ಜೆಯಿಡುವವ. ನಾನು ಅವರು ಏನೇ ಹೇಳಿದರೂ ಜೈ ಎನ್ನುವ ಹಿಂಬಾಲಕ. ಮೂರೂ ಜನರ ಮನೆ ಹತ್ತಿರವೇ ಇದ್ದುದರಿಂದ ಶಾಲೆ ಮುಗಿದ ಮೇಲೆ ಅಥವಾ ರಜಾ ದಿನಗಳಲ್ಲಿ ಬರೀ ಕಂಡವರ ಮನೆಗೆ ಕಲ್ಲೊಗೆಯುವುದೇ ವಿಚಾರಗಳು. ಸಂತೋಷನ ಮನೆಯಿರುವುದು ಶಿರಸಿ ಯಲ್ಲಾಪುರ ಮೇನ್ ರೋಡ್ನಲ್ಲಿ. ಆ ದಾರಿಯಲ್ಲಿ ಯಾವಾಗಲೂ ಜನಸಂಚಾರ ವಾಹನಸಂಚಾರ. ಸಂತೋಷನ ಮನೆಯ ಎದುರುಗಡೆಯೇ ಇನ್ನೊಂದು ಮನೆಯಲ್ಲಿ ರೋಡಿಗೆ ತಾಗಿದಂತೆಯೇ ಬೆಳೆದ ಒಂದು ತೋತಾಪುರಿ ಮವಿನಮರ (ಗೋವೆ ಮಾವಿನಕಾಯಿ). ಆ ವರ್ಷ ಎಷ್ಟೊಂದು ಕಾಯಿ ಬಿಟ್ಟಿತ್ತೆಂದರೆ ಮರದಲ್ಲಿ ಎಲೆಗಳೇ ಕಾಯಿಗಳಿಗಿಂತ ಕಡಿಮೆಯೇನೋ ಎನಿಸುತ್ತಿತ್ತು. ಅದೂ ಅಲ್ಲದೆ ಎಲ್ಲಾ ಮಿಡಿಗಳು ಬೆಳೆದು ನಿಂತಾಗ ಮರದ ತುಂಬೆಲ್ಲಾ ಬಾಂಗಡೆ ಮೀನು ಜೋತು ಬಿಟ್ಟಿದ್ದಂತೆ ಕಾಣುತ್ತಿತ್ತು.
ಪ್ರತೀ ದಿನ ಅದೇ ದಾರಿಯಲ್ಲಿ ಶಾಲೆಗೆ ಹೋಗಿ ಹಿಂತಿರುಗುವಾಗ ನಮ್ಮ ಮೂವರ ಕಣ್ಣೂ ಅದೇ ಮರದ ಮೇಲೆ ನೆಟ್ಟಿರುತ್ತಿತ್ತು. ಹೇಗಾದರೂ ಮಾಡಿ ಆ ಮರದ ಮಾವಿನಕಾಯಿಗಳನ್ನು ಹುಡಿಮಾಡಲೇ ಬೇಕು ಎಂಬ ಸರ್ವಾನುಮತದ ನಿರ್ಣಯವನ್ನು ತೆಗೆದುಕೊಂಡುಬಿಟ್ಟೆವು. ಸರಿ, ಈಗ ಆ ದೊಡ್ಡ ಪ್ರಾಜೆಕ್ಟ್ಗೆ ಪ್ಲಾನಿಂಗ್ ಬೇಕಲ್ಲ! ಸಂತೋಷ ಮಾರನೇ ದಿವಸವೇ ಪ್ಲಾನ್ ಸಿದ್ಧಪಡಿಸಿಕೊಂಡು ಬಂದ. ಆ ಮರಕ್ಕೇ ತಾಗಿ ಅವರ ಕಂಪೌಂಡ್ ಪಕ್ಕದಲ್ಲಿ ಒಂದು ಹೇರ್ ಕಟಿಂಗ್ ಸಲೂನ್. ಪ್ಲಾನ್ ಏನಪ್ಪಾ ಅಂದ್ರೆ, ಯಾರೂ ಇಲ್ಲದ ಸಮಯದಲ್ಲಿ, ಹೇರ್ ಕಟಿಂಗ್ ಸಲೂನ್ನ ಹಂಚಿನ ಮೇಲೆ ಹತ್ತಿ, ಮಾವಿನಕಾಯಿ ಕದಿಯುವುದು ಎಂದು. ಆದರೆ ಯಾರೂ ಇಲ್ಲದ ಸಮಯ ಅಂದರೆ ಒಂದೋ ರಾತ್ರಿ ಹನ್ನೊಂದು ಘಂಟೆ ಮೇಲೆ. ಇಲ್ಲವೋ ಬೆಳಿಗ್ಗೆ ಆರು ಘಂಟೆ ಒಳಗೆ. ರಾತ್ರಿ ಮನೆಯಿಂದ ಹೊರಬರುವ ಪರವಾನಿಗೆ ನಮಗಂತೂ ಖಂಡಿತ ಸಿಗುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮುಹೂರ್ತವಿಟ್ಟಿಕೊಳ್ಳಬೇಕು. ಆದರೆ ಆಗಲೂ ಅಷ್ಟು ಬೆಳಿಗ್ಗೆ ಮನೆಯಿಂದ ಹೊರಬರುವುದು ಹೇಗೆ? ಅದಕ್ಕೂ ಸಂತೋಷನಲ್ಲಿ ಒಂದು ಪ್ಲಾನ್ ಇತ್ತು. ಬೆಳಿಗ್ಗೆ ಕಾಲೇಜ್ ರೋಡಿನಲ್ಲಿ ಸೈಕ್ಲಿಂಗ್ಗೆ ಹೋಗುವುದು ಎಂದು. ಸರಿ ಶುರುವಾಯಿತು ನಮ್ಮ ಬೆಳಗಿನ ಸೈಕ್ಲಿಂಗ್ ಎಕ್ಸರ್ಸೈಜ್.
ಮೊದಲನೇ ದಿನ ಏಳುವುದೇ ತಡವಾಗಿ, ನಾನು ಮತ್ತು ಕಿರಣ ಸಂತೋಷನ ಮನೆ ಮುಟ್ಟಿದಾಗ ಆಗಲೇ 6:30 ಆಗಿಹೋಗಿತ್ತು. ರೋಡ್ ತುಂಬಾ ವಾಕಿಂಗ್ ಮಾಡುವವರು ಜಾಗಿಂಗ್ ಮಾಡುವವರು ತುಂಬಿಹೋಗಿದ್ದರು. ನಾವು ಸುಮ್ಮನೇ ಕಾಲೇಜ್ ವರೆಗೆ ಸೈಕಲ್ ಹೊಡೆದುಕೊಂಡು ವಾಪಸ್ ಬರಬೇಕಾಯಿತು. ಮಾರನೇ ದಿನ ಆರು ಘಂಟೆಗೇ ಆಪರೇಷನ್ ಸ್ಪಾಟ್ ತಲುಪಿದರೂ ಪ್ರಯೋಜನವಾಗಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ವಾಕಿಂಗ್ಗೆ ಆಗಲೇ ಹೊರಟಾಗಿತ್ತು. ಮೂರನೇ ದಿನ, ಅಂತೂ ಬಹಳ ಬೇಗನೆ ಅಲ್ಲಿಗೆ ತಲುಪಿದೆವು. ಸಂತೋಷನನ್ನು ಎಬ್ಬಿಸಿ ಮಾವಿನಮರದ ಮನೆಗೆ ಬಂದು ಮುಟ್ಟಿದೆವು. ಆದರೆ ಯಾರೂ ಸೈಕಲ್ ಬಿಟ್ಟು ಕೆಳಗಿಳಿಯುತ್ತಲೇ ಇಲ್ಲ. ಒಬ್ಬರ ಮುಖ ಇನ್ನೊಬ್ಬರು ಮಿಕಿ ಮಿಕಿ ನೋಡುತ್ತಾ ಅಪರಿಚಿತರಂತೆ ವರ್ತಿಸತೊಡಗಿದೆವು. ಹೀಗೇ ಒಂದೈದು ನಿಮಿಷ ಕಳೆದ ಮೇಲೆ ಸಂತೋಷ ಕಿರಣನಿಗೆ, "ಯಾಕೋ ಕಾಯ್ತಿದೀಯಾ? ಮಾವಿನ್ ಕಾಯಿ ನಿನ್ನ ಕಿಸೆಗೆ ಬಂದ್ ಬೀಳ್ತದಾ? ಹೋಗಿ ಕಿತ್ಕೊಂಡ್ ಬಾರೋ" ಎಂದ. ಕೂಡಲೇ ಕಿರಣ "ನಾನೇ ಯಾಕ್ ಹೋಗ್ಬೇಕು? ನೀನು ಹೋದ್ರೆ ಮಾವಿನ್ಕಾಯಿ ಬರಲ್ಲಾ ಅಂತದಾ?" ಎಂದು ಅವನಿಗೇ ತಿರುಗಿಸಿದ. ಸಂತೋಷ ಅಷ್ಟರಲ್ಲೇ ಜಾಗರೂಕನಾಗಿ "ಹೋಗ್ಲಿ ಬಿಡು ಸಿದ್ದು ತರ್ತಾನೆ" ಎಂದು ನನ್ನ ಮೇಲೆ ಹಾಕಿಬಿಟ್ಟ. ನನಗೆ ಒಮ್ಮೆಲೇ ಕೈ ಕಾಲು ನಡುಗಲು ಶುರುವಾಯಿತು. ನಾನು ಹೋಗಲ್ಲಪ್ಪಾ ಎಂದೆ. ಯಾಕೆ ಎಂದು ಕೇಳಿದಾಗ ಉತ್ತರವೇ ಇಲ್ಲ. ಒಟ್ಟಿನಲ್ಲಿ ಅಂಗಡಿ ಹತ್ತುವುದು ಯಾರು ಎಂದು ನಿಶ್ಚಯಿಸುವುದರಲ್ಲಿ ಆಗಲೇ ಬೆಳಕಾಗಿತ್ತು. ವಾಕಿಂಗ್ ಮಾಡುವವರು ರೋಡನ್ನೇ ದಿಟ್ಟಿಸುತ್ತಾ ಸಿಟ್ಟುಮಾಡಿಕೊಂಡವರಂತೆ ಬೇಗನೆ ಹೆಜ್ಜೆಹಾಕುತ್ತಿದ್ದರು.
ಮಾರನೇ ದಿನ ಹೊರಡುವ ಮುಂಚೆಯೇ ಕಿರಣನೇ ಹತ್ತಿ ಮಾವಿನಕಾಯಿ ಕೊಯ್ಯುವುದು ಎಂದು ನಿಶ್ಚಯಿಸಿ ಆಗಿತ್ತು. ಬೆಳಿಗ್ಗೆ 5:30ಕ್ಕೇ ಆಪರೇಷನ್ ಸ್ಪಾಟ್ ತಲುಪಿದೆವು. ಸಂತೋಷ ಕೆಳಗೇ ನಿಂತು ಒಂದು ಪ್ಲಾಸ್ಟಿಕ್ ಲಕೋಟೆ ಹಿಡಿದುಕೊಂಡಿದ್ದ. ಕಿತ್ತು ಎಸೆದ ಮಾವಿನಕಾಯಿಗಳನ್ನೆಲ್ಲಾ ಆರಿಸುವುದು ಅವನ ಕೆಲಸ. ನಾನು ಆ ಮನೆಯ ಕಂಪೌಂಡ್ ಹತ್ತಿ ನಿಂತಿದ್ದೆ. ಪಕ್ಕದಲ್ಲಿನ ಹೇರ್ ಕಟಿಂಗ್ ಸಲೂನ್ ಹಂಚನ್ನು ಹತ್ತಲು ಇಳಿಯಲು ಕಿರಣನಿಗೆ ಸಹಾಯ ಮಾಡಲು. ಕಿರಣ ಅಂತೂ ಸಾಹಸ ಮಾಡಿ ಹಂಚನ್ನು ಏರಿ ಕುಳಿತಿದ್ದ. ಮರ ತಲುಪಲು ಸ್ವಲ್ಪ ಮೇಲಕ್ಕೆ ಹೋಗಬೇಕಿತ್ತು. ಅವನು ಹೆಜ್ಜೆಯಿಟ್ಟಾಗಲೆಲ್ಲಾ ಹಂಚಿನ ಸದ್ದಾಗಿ ನನಗೆ ಭಯವಾಗುತ್ತಿತ್ತು. ಸಂತೋಷ ಕೆಳಗಿನಿಂದಲೇ ಮೆಲ್ಲಗೆ ಹೋಗೋ ಎನ್ನುತ್ತಿದ್ದ. ಯಾವುದೋ ಬ್ಯಾಂಕ್ ದರೋಡೆ ಮಾಡುತ್ತಿರುವವರಂತೆ ಮೂರರದೂ ಗಂಭೀರ ಮುಖಭಾವ. ಇನ್ನೇನು ಕಿರಣ ಮಾವಿನ ಮರ ಮುಟ್ಟಿ ಮಿಡಿಗಳನ್ನು ಕೀಳಲು ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ ಹಂಚಿನ ಮೇಲೆ ಮಲಗಿದ್ದ ಓತಿಕ್ಯಾತವೊಂದು ಅವನು ಕಾಲಿಟ್ಟ ರಭಸಕ್ಕೆ ಎಚ್ಚರಗೊಂಡು ಅವನ ಕಾಲಮೇಲೆಯೇ ದಾಟಿ ಓಡಿಹೋಯಿತು. ಮೊದಲೇ ಹೆದರಿದ್ದ ಕಿರಣ ಕಾಲಹತ್ತಿರವೂ ನೋಡದೆ "ಆಯ್ಯೋ... ಹಾವು... ಹಾವು..." ಎಂದು ಚೀರಿ ಹಂಚಿನಿಂದ ಒಮ್ಮೆಲೇ ಕೆಳಗೆ ಜಿಗಿದೇಬಿಟ್ಟ. ಅವನು ಚೀರಿದ ರಭಸಕ್ಕೆ ಮನೆಯಲ್ಲಿನ ನಾಯಿ ಬೊಗಳತೊಡಗಿತು. ಓಡಿ ಜಿಗಿಯುವ ಭರಾಟಿಯಲ್ಲಿ ಒಂದೆರಡು ಹಂಚುಗಳೂ ಮುರಿದುಹೋದವು. ಮೊದಲೇ ಹೆದರಿದ್ದ ನಮ್ಮಿಬ್ಬರಿಗೆ ಏನಾಯಿತು ಎಂದೇ ತಿಳಿಯಲಿಲ್ಲ. ಒಂದೇ ನೆಗೆತಕ್ಕೆ ಸೈಕಲ್ ಏರಿ ಎರಡು ಕಿಲೋಮೀಟರ್ ದೂರ ಬಂದುಬಿಟ್ಟಿದ್ದೆವು. ಹಿಂದೆ ತಿರುಗಿ ನೋಡಿದರೆ ಕಿರಣ ಸೈಕಲನ್ನು ಹತ್ತಲೂ ಪುರುಸೊತ್ತಿಲ್ಲದೆ ತಳ್ಳಿಕೊಂಡೇ ಓಡಿಬರುತ್ತಿದ್ದ.
Thursday, March 6, 2008
ನಾನಿರುವುದೆ ನಿಮಗಾಗಿ...

ನಾನಿರುವುದೆ ನಿಮಗಾಗಿ
ನಾಡಿರುವುದೆ ನಮಗಾಗಿ
ಅಣ್ಣಾವ್ರ ದನಿಯಲ್ಲಿ ಹಾಡು ಕೇಳುತ್ತಿದ್ದರೆ ಮಯೂರನಾಗಿ ರೂಪವೆತ್ತ ಅಣ್ಣಾವ್ರು ಕಣ್ಣ ಎದುರಿಗೇ ಬಂದುಬಿಡುತ್ತಿದ್ದರು. ಆದರೆ ಈಗ ಆ ಜಾಗವನ್ನು ಬೇರೆಯೊಬ್ಬ ಆಕ್ರಮಿಸಿಕೊಂಡುಬಿಟ್ಟಿದ್ದಾನೆ! ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಹಾಡು ಕೇಳಿದಾಕ್ಷಣ ಒಬ್ಬ ಕರ್ರಗಿನ ದಪ್ಪ ಮೀಸೆಯ ಧಡೂತಿ ವ್ಯಕ್ತಿ ಆಟೋ ಓಡಿಸುತ್ತಾ ಮನೆಯ ಎದುರಿಗೆ ನಿಂತಿರುತ್ತಾನೆ! ಇದ್ಯಾಕಪ್ಪಾ ಹೀಗಾಗೋಯ್ತು? ಅಣ್ಣಾವ್ರು ಬಂದ್ರು ಅಂತ ಹೊರಗೆ ಬಂದ್ರೆ ಇದು ಯಾರೋ ಬೇರೆ ಎಂದುಕೊಳ್ಳುವಷ್ಟರಲ್ಲಿ ನೆನಪಾಗುತ್ತದೆ. ಈತ ನಮ್ಮ ಮಹಾನಗರ ಪಾಲಿಕೆಯವರು ಕಸ ವಿಲೇವಾರಿ ಮಾಡುವುದಕ್ಕೋಸ್ಕರ ನೇಮಿಸಿರುವ ಆಸಾಮಿ. ಆತನಿಗೊಂದು ಆಟೋ ಕೊಟ್ಟುಬಿಟ್ಟಿದ್ದಾರೆ. ಅವನ ಸೌಭಾಗ್ಯವೋ ಅಥವಾ ಅಣ್ಣಾವ್ರ ದುರ್ಭಾಗ್ಯವೋ ಆ ಆಟೊಕ್ಕೊಂದು ಸ್ಪೀಕರ್ ಬೇರೆ ಜೋತುಹಾಕಿಬಿಟ್ಟಿದ್ದಾರೆ. ಅದು ದಿನಬೆಳಗಾದರೆ ಹಾಡುವುದು ಒಂದೇ ಹಾಡು. ’ನಾನಿರುವುದು ನಿಮಗಾಗಿ’.
ಒಳ್ಳೇ ಹಾಡು ಎನ್ನುವುದೇನೋ ನಿಜ. ಆದರೆ ಅದನ್ನೇ ಈ ಕಸವಿಲೇವಾರಿಗೆ ಉಪಿಯೋಗಿಸಿಕೊಳ್ಳುವ ಬದಲು ಸ್ವಲ್ಪ ರೀಮಿಕ್ಸ್ ಮಾಡಿದರೆ ಹೇಗೆ ಎಂದು ಯೋಚಿಸತೊಡಗಿದೆ. ಕಸದ ಗುಂಗಿನಲ್ಲಿ ಬರೆದ ಗಬ್ಬು ಗಬ್ಬಾದ ರೀಮಿಕ್ಸ್. ದಿನನಿತ್ಯವೂ ನಮ್ಮಂಥವರು ಕುಳಿತು ಒಟ್ಟುಹಾಕಿರುವ ಕೇಜಿಗಟ್ಟಲೆ ಕಸವನ್ನು ಬೇಸರಿಸಿಕೊಳ್ಳದೆ ದೂರ ಸಾಗಿಸಿ ನಗರವನ್ನು ಶುಚಿಯಾಗಿಡಲು ಪ್ರಯತ್ನಪಡುತ್ತಿರುವ ಪಾಲಿಕೆಯ ನೌಕರರಿಗೇ ಇದನ್ನು ಅರ್ಪಿಸಿದರೆ ಚೆನ್ನ.
ನಾನಿರುವುದೆ ನಿಮಗಾಗಿ
ಕಸವಿರುವಿದೆ ನನಗಾಗಿ
ಪ್ಲಾಸ್ಟಿಕ್ ಇರಲಿ, ಪೇಪರ್ ಇರಲಿ
ಹರಿದಾಯಕ್ಕಡವೇ ಇರಲಿ
ನಾನಿರುವುದು ನಿಮಗಾಗಿ
ಒಂದೇ ಮನೆಯ ಕಸಗಳು ಹಲವು ಹೊರಗೇ ಎಸೆದರೆ ದುರ್ನಾಥ
ಎಸೆಯುವ ಬದಲು ನನಗೇ ಕೊಡಲು ಮಾಡಿದೆ ಸರ್ಕಾರ ಕಾಯಿದೆಯ
ಭರವಸೆ ನೀಡುವೆ ಇಂದು ನಾ ಬರುವೆನು ಪ್ರತಿದಿನವೆಂದು
ತಾಯಿಯ ಆಣೆ ಕಸವನು ಪಡೆಯದೆ ನಾ ಹಿಂದಿರುಗೆನು ಎಂದು
ಸಾವಿರ ಜನುಮದ ಪುಣ್ಯವೊ ಏನೊ ನಾನೀ ಕೆಲಸಕೆ ಸೇರಿರುವೆ
ದೇವರ ದಯವೋ ಪಾಲಿಕೆ ವರವೋ ನಲ್ಮೆಯ ಆಟೋ ಪಡೆದಿರುವೆ
ಕಸವನು ಬಡಿದೋಡಿಸುವ ಈ ನಾಡನು ಶುಚಿಯಾಗಿಡುವ
ಜನತೆಗೆ ನೆಮ್ಮದಿ ಸುಖವನು ತರಲು ಹೇಸಿಗೆಯನೆ ಹೊರುವೆ
Thursday, February 21, 2008
ಶ್...!!! ಅಣ್ಣಾವ್ರು ಮಲ್ಗವ್ರೆ.

ಟೀ ಕುಡಿಯುವಾಗ ಸುಮ್ಮನೇ ಕುಡಿಯಲಾಗುತ್ತದೆಯೇ? ನಮ್ಮ ಅಫೀಸಿಂದ ಪ್ರಾರಂಭಿಸಿ ಅಕ್ಕ ಪಕ್ಕದ ಅಫೀಸುಗಳನ್ನು ಮುಗಿಸಿ ಜಗತ್ತೆಲ್ಲವನ್ನೂ ಸುತ್ತಿಕೊಂಡು ಬರುತ್ತಿತ್ತು ನಮ್ಮ ಸುದ್ದಿಗಳ ಸಂಗ್ರಹ. ಹೀಗೆ ಸಾಮಾನ್ಯಜ್ಞಾನ ಹೆಚ್ಚು ಮಾಡಿಕೊಂಡಾದ ಮೇಲೆ ವಾಪಸ್ ನಮ್ಮ ಸ್ಥಳಕ್ಕೆ ಹೋಗುವಷ್ಟರಲ್ಲಿ 10:45 ಅಥವಾ 11ಗಂಟೆ. ಅಂತೂ ದಿನದ ಕೆಲಸ ಪ್ರಾರಂಭಿಸೋಣವೆಂದರೆ, ಎಲ್ಲಿಂದ ಪ್ರಾರಂಭಿಸುವುದು ಎಂಬುದೇ ದೊಡ್ಡ ಚಿಂತೆ. ಅಷ್ಟಕ್ಕೂ ಇದನ್ನು ಇವತ್ತೇ ಮುಗಿಸಬೇಕು ಎಂಬ ಗಡಿಬಿಡಿಯಿಲ್ಲ. ಇದನ್ನು ಶುರು ಮಾಡಿದರೆ ಅರ್ಧ ಗಂಟೆಯಲ್ಲೇ ಮುಗಿಸಿ ಬಿಡಬಹುದು. ಅದಿಕ್ಕೆ ಇದನ್ನು ಆಮೇಲೆ ನೋಡಿದರಾಯಿತು. ಅದೋ... ಛೆ... ತಲೆಗೇ ಹತ್ತುತ್ತಿಲ್ಲ. ಹೇಗಾದರೂ ಮುಗಿಸಬೇಕು. ಏನು ಮಾಡುವುದಪ್ಪಾ ಎಂದು ಯೋಚಿಸುವಷ್ಟರಲ್ಲಿ 12ಗಂಟೆ. ಈಗ ಊಟದ ಸಮಯ. ಎಲ್ಲಾರು ಮಾಡುವುದು ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ... ಗೇಣು ಬಟ್ಟೆಗಾಗಿ.
12ಗಂಟೆಗೇ ಊಟಾನಾ? ಎಂದು ಕೆಲವರು ಆಶ್ಚರ್ಯ ಪಡಬಹುದು. ಆದರೆ ಇದಕ್ಕೂ ತಡವಾಗಿ ಹೋದರೆ ಊಟಕ್ಕೆ ದೊಡ್ಡ ಕ್ಯೂ ನಿಂತಿರುತ್ತದೆ. ಅಷ್ಟೇ ಅಲ್ಲದೆ ಕುಳಿತುಕೊಳ್ಳಲೂ ಜಾಗ ಹುಡುಕಬೇಕಾಗುತ್ತದೆ. ಆದ್ದರಿಂದ ಸೇಫ್ಟಿಗೆ ಎಂದು 12ಕ್ಕೆ ಕೆಫೆಟೇರಿಯಾಕ್ಕೆ ಹಾಜರ್. ಥತ್... ಇವತ್ತೂ ಅದೇ ಪಲ್ಯ. ಈ ಚಪಾತಿಯನ್ನು ಹರಿಯಲು ಮೊದಲು ಜಿಮ್ಗೆ ಹೋಗಿ ಬರಬೇಕಿತ್ತು. ಈ ಕಿತ್ತೋಗಿರೋ ರಸಂನಲ್ಲಿ ಏನೂ ಇಲ್ಲಾ... ನೀರಿಗೆ ಮೆಣಸಿನ ಪುಡಿ ಕಲಸಿ ಕೊಟ್ಟಿದಾರೆ! ಎನ್ನುವ ಕಮೆಂಟ್ಗಳ ನಡುವೆ ಊಟ. ಊಟ ಮಾಡೋದು, ಇಡೀ ದಿನ ಕಂಪ್ಯೂಟರ್ ಮುಂದೆ ಕೂಡೋದು... ಇದನ್ನೇ ಮಾಡಿದ್ರೆ ಬೊಜ್ಜು ಬರಲ್ವಾ? ಸ್ವಲ್ಪಾನೂ ಬಾಡಿಗೆ ಎಕ್ಸರ್ಸೈಜ್ ಇಲ್ದೇ ಇದ್ರೆ ಹೇಗೆ? ಎಂದು ಕೇಳಿಕೊಂಡು ಒಂದು ರೌಂಡ್ ಕ್ಯಾಂಪಸ್ ಸುತ್ತಾ ತಿರುಗಾಡಿಕೊಂಡು ಬಂದು ವಾಪಸ್ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಒಂದೂವರೆ ಅಥವಾ ಎರಡು ಗಂಟೆ!
ಮತ್ತೆ ಕನ್ಫ್ಯೂಜನ್ ಶುರು. ಯಾವ್ ಕೆಲಸ ಕೈಗೆತ್ತಿಕೊಳ್ಳಲಿ ಅಂತ. ಯಾವುದೋ ಒಂದನ್ನು ಎತ್ತಿಕೊಂಡರಾಯಿತು ಎಂದುಕೊಂಡು ಕವಡೆ ಹಾಕಿ ಒಂದು ಕೆಲಸ ಶುರು ಮಾಡುವುದು. ಒಂದರ್ಧ ಗಂಟೆ ಕಳೆದಿರುವುದಿಲ್ಲ. ಆಗಲೇ ಕಣ್ಣು ಕೂರುತ್ತಿದೆ! ಬೆಳಗ್ಗೆಯಿಂದ ದುಡಿದು ದುಡಿದು ಸುಸ್ತಾದುದಕ್ಕಿರಬೇಕು! ಹಾಗೆಯೇ ಕೊಂಚ ಕುರ್ಚಿಗೆ ಒರಗಿಕೊಂಡು ನಿದ್ರೆ ಮಾಡಿದರಾಯಿತು ಎಂದಂದುಕೊಂಡು ಒರಗಿದರೆ, ಗಡದ್ದಾದ ನಿದ್ರೆಯೇ ಬಂದುಬಿಡಬೇಕೆ? ಎಚ್ಚರವಾದಾಗ ಮೂರು ಗಂಟೆ! ಒಂದು ದಿನ ಹೀಗೇ ಮಲಗಿ ಎಚ್ಚರವಾದಮೇಲೆಯೇ ಗೊತ್ತಾಗಿದ್ದು. ಕೆಲಸವಿಲ್ಲದೇ ಆಕಡೆ ಈಕಡೆ ಸುತ್ತುತ್ತಿದ್ದ ಮಹೇಶ ನಾನು ಮಲಗಿದ್ದನ್ನು ನೋಡಿ ತನ್ನ ಮೊಬೈಲ್ನಿಂದ ಫೋಟೋ ತೆಗೆದಿದ್ದ! ಎಚ್ಚರವಾದ ತಕ್ಷಣ ಮತ್ತೆ ನಿದ್ದೆ ಬರಬಾರದಲ್ಲ, ಅದಕ್ಕಾಗಿ ಒಂದು ಕಪ್ ಟೀ. ಟೀ ಮುಗಿಸಿ ಬರುವಷ್ಟರಲ್ಲಿ ಯಥಾಪ್ರಕಾರ ಇನ್ನೊಂದು ಗಂಟೆ ಕಳೆದಿರುತ್ತಿತ್ತು. 5 ಗಂಟೆಗೆ ಎಲ್ಲರೂ ಹೊರಡುವ ಸಮಯ. ಆದ್ದರಿಂದ 4:30ರಿಂದಲೇ ತಯಾರಿ ಪ್ರಾರಂಭ. ಎಷ್ಟೋ ಜನರನ್ನು ಇವತ್ತು ಮಾತಾಡಿಸಿಯೇ ಇಲ್ಲ! ಎಲ್ಲರನ್ನೂ ಭೇಟಿಯಾಗಿ, ನಾಳೆ ಮತ್ತೆ ಭೇಟಿಯಾಗೋಣವೆಂದು ಹೇಳಿ ಬರುವಷ್ಟರಲ್ಲಿ ಹೊರಡುವ ಸಮಯ! ಆಲ್ಲಿಗೆ ಅವತ್ತಿನ ಕೆಲಸ ಮುಗಿಯಿತು.
ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಉಳಿದೆಲ್ಲ ದಿನಚರಿ ಬಹುತೇಕ ಹಾಗೇ ಉಳಿದಿದ್ದರೂ, ಟೀ ಕುಡಿಯಲು, ಊಟ ಮಾಡಲು ಬರುವ ಗೆಳೆಯರು ಮಾತ್ರ ಬೇರೆ. ಮಲಗಿದ್ದಾಗ ಫೋಟೋ ತೆಗೆದು ಊರಿಗೆಲ್ಲ ತೋರಿಸಿ, ನಕ್ಕು, ಮತ್ತೆ ನನಗೆ ಮೇಲ್ ಮಾಡುವಷ್ಟು ಸಲುಗೆಯವರು ಇಲ್ಲ. ಮನುಷ್ಯನ ಸ್ವಭಾವವೇ ಹೀಗೋ ಏನೊ. ಕಳೆದು ಹೋದ ದಿನಗಳೇ ಚೆಂದ ಎನಿಸುತ್ತದೆ. ಆದರೆ... ಛೆ, ಕಾಲಚಕ್ರಕ್ಕೆ ದೇವರು ರೆವರ್ಸ್ ಗೇರ್ ಕೊಟ್ಟೇ ಇಲ್ಲವಲ್ಲಾ!
Wednesday, February 6, 2008
ಒಂದು ನೋಟ, ನಗೆಯ ಮಾಟ, ಪ್ರೇಮದೂಟ... ಆಮೇಲೆ ಕೈಯಲ್ಲಿ ಬಿಯರ್ ಲೋಟ

ಫೆಬ್ರವರಿ ೧೪, ’ಪ್ರೇಮಿಗಳ ದಿನ’. ಹಾಗಿದ್ದರೆ ವರ್ಷದ ಉಳಿದ ೩೬೪ ದಿನಗಳು ವಿರಹಿಗಳ ದಿನಗಳೋ? ಅಥವಾ ಈ ದಿನ ಮಾಡಿದ ತಪ್ಪಿಗಾಗಿ ಪ್ರೇಮಿಗಳು ಪಶ್ಚಾತ್ತಾಪ ಪಡುವ ದಿನಗಳೋ? ಏನೊ ಒಂದು. ಒಟ್ಟಿನಲ್ಲಿ ಹೂ ಮಾರುವವರಿಗೆ, ಗ್ರೀಟಿಂಗ್ಸ್ ಹಾಗು ಗಿಫ್ಟ್ ಮಾರುವವರಿಗೆ ಶುಭದಿನ. ಪ್ರೇಮಿಗಳಲ್ಲದವರಿಗೆ ಹುಡುಕಾಟದ ಅಥವಾ ಹೊಟ್ಟೆಯುರಿಯ ದಿನ. ಈಗಂತೂ ಫಾದರ್ಸ್ ಡೇ, ಮದರ್ಸ್ ಡೇ ಬಂದು ಕುಳಿತಿರುವುದರಿಂದ, ತಂದೆ ತಾಯಿಯನ್ನು ಒಂದು ದಿವಸ ನೆನೆಸಿಕೊಂಡು ಒಂದು ಗ್ರೀಟಿಂಗ್ ಕೊಟ್ಟರೆ ಮಕ್ಕಳಾದ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಕಾಲ ಬಂದೊದಗಿದೆ. ಮುಂದೊಂದು ದಿನ ಇದೇ ಪರಿಸ್ಥಿತಿ ಈಗಿನ so called valentineಗೂ ಬಂದರೆ ಅಚ್ಚರಿಯೇನಿಲ್ಲ. ಒಂದು ದಿನ ಅವನನ್ನು/ಳನ್ನು ನೆನೆಸಿಕೊಂಡು ಒಂದು ಗ್ರೀಟಿಂಗ್ ಕಳಿಸಿಕೊಟ್ಟು ಉಳಿದಷ್ಟು ದಿನ ಬೇರೆಯವನ/ಳ ಜೊತೆ ಡೇಟಿಂಗ್ ಮುಂದುವರಿಸುವುದು. ಆಹಾ ಏನು ಸಂಸ್ಕಾರವಂತರು ಕಣ್ರೀ ಈ ವಿದೇಶೀಯರು ಎಂಥೆಂಥ ಪದ್ಧತಿಗಳನ್ನು ಹುಟ್ಟುಹಾಕಿದ್ದಾರೆ! ಏನು ಬುದ್ಧಿವಂತರು ಕಣ್ರೀ ನಮ್ಮವರು. ಅವನ್ನೆಲ್ಲಾ ಕಣ್ಣು ಮುಚ್ಚಿ ಅನುಸರಿಸುತ್ತಿದ್ದಾರೆ. ಮುಂದುವರಿಯುತ್ತಿದ್ದೇವೆ ಎನ್ನುವುದರ ಲಕ್ಷಣವಿರಬೇಕು. ಆದರೆ ನಾವು ಮುಂದುವರಿಯುತ್ತಿರುವುದು ಎತ್ತಕಡೆ ಎಂಬುದು ಪ್ರಶ್ನಾರ್ಹ.
Love at first sight. ಅಬ್ಬಾ... ಒಂದೇ ಒಂದು ನೋಟ. ನಮ್ಮಿಬ್ಬರಲ್ಲೂ ಜನ್ಮ ಜನ್ಮದ ಅನುಬಂಧ ಇದೆ ಎಂದು ಇಬ್ಬರಿಗೂ ಅನಿಸಿಬಿಡುತ್ತದೆ. ಒಬ್ಬರಿಗೇ ಅನ್ನಿಸಿದ್ದರೆ, ಲವಿಂಗ್ ಬದಲು ಬೆಗ್ಗಿಂಗ್ ಶುರು ಆಗಿರುತ್ತದೆ. ಆ ವಿಷಯ ಬೇರೆ. ಆದರೂ ಒಂದೇ ಒಂದು ನೋಟದಲ್ಲಿ ಜೀವನ ಸಂಗಾತಿಯನ್ನು ಕಂಡುಹಿಡಿಯುವ ಈ ಬಿದ್ಧಿವಂತಿಕೆ ಬರೀ ಎಡವಟ್ಟುಗಳನ್ನೇ ತಂದು ಕೂರಿಸುವುದು ಯಾಕೋ ಕಾಣೆ. ವಯಸ್ಸಿಗೆ ಬಂದಾಗ ಕತ್ತೆಯೂ ಮುದ್ದಾಗಿ ಕಾಣುತ್ತದಂತೆ. ಈ ದೈಹಿಕ ಆಕರ್ಷಣೆಯನ್ನೇ ಪ್ರೀತಿ ಪ್ರೇಮ ಎಂದುಕೊಂಡು ಹಳ್ಳಕ್ಕೆ ಬೀಳುತ್ತಿದೆ ಯುವಜನತೆ. ಅರೇಂಜ್ಡ್ ಮ್ಯಾರೇಜ್ನಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳುವ ಜನ, ಈ ’love at first sight’ ಹೇಳುವುದು ಎಷ್ಟು ಹಾಸ್ಯಾಸ್ಪದ! ಇತರರೆಲ್ಲಾ ಲವ್ ಮಾಡುತ್ತಿದ್ದಾರೆ! ನಾನೊಬ್ಬನೇ ಮಾಡದಿದ್ದರೆ ನನ್ನ ಪ್ರೆಸ್ಟೀಜ್ ಏನಾಗಬೇಡ. ಎಂದಂದುಕೊಂಡು ಲವ್ ಮಾಡುವವರು ಎಸ್ಟು ಜನವೋ. ಲವ್ ಮಾಡದೆ ಮದುವೆಯಾಗುವುದೊಂದು ಮಹಾಪರಾಧವೆಂದು ತಿಳಿದುಕೊಂಡವರೆಸ್ಟು ಜನವೊ. ಅದು ಹೇಗಪ್ಪಾ ಗೊತ್ತಿಲದೇ ಇರುವ ವ್ಯಕ್ತಿಯ ಜೊತೆ ಜೀವನವಿಡೀ ಸಂಸಾರ ನೆಡೆಸುತ್ತೀರಿ ಎಂದು ಕೇಳುವ ಜನ ಬಹುತೇಕ ಅಂಕಿ ಅಂಶಗಳನ್ನು ಗಮನಿಸಿಲ್ಲ. ೧೦೦ಕ್ಕೆ ೭೦ರಿಂದ ೮೦ ಪ್ರೇಮವಿವಾಹಗಳು ದುಃಖಾಂತ ಕಾಣುತ್ತವೆ. ಸುಖಾಂತ ಕಾಣುವುದು ಸಿನೆಮಾ ಧಾರಾವಾಹಿಗಳಲ್ಲಿ ಮಾತ್ರವೇನೊ. ಹಾಗಾದರೆ ಈ ಅರೆಂಜ್ಡ್ ಮದುವೆಗಳೆಲ್ಲಾ ಸುಖಮಯವಾಗಿ ಸಾಗಿದೆ ಎಂಬರ್ಥವಲ್ಲ. ಮದುವೆ ಮುರಿದುಹೋಗುವ ಸಾಧ್ಯತೆಗಳು ಬಹಳ ಕಡಿಮೆ.
ಮನುಷ್ಯನ ಸ್ವಭಾವವೇ ಹಾಗೆ. ತಾನಾಗಿಯೇ ಆಯ್ಕೆಮಾಡಿಕೊಂಡ ವಸ್ತುಗಳಲ್ಲಿನ ಚಿಕ್ಕ ಚಿಕ್ಕ ದೋಷಗಳೂ ದೊಡ್ಡದಾಗಿ ಕಾಣುತ್ತವೆ. ಅದೇ ತಾನಾಗಿಯೇ ದೊರೆತ ವಸ್ತುಗಳಲ್ಲಿ ದೊಷಗಳು ಕಂಡರೂ ಅನುಸರಿಸಿಕೊಂಡು ಹೋಗುವ ಧಾರಾಳತನ ಬಂದುಬಿಡುತ್ತದೆ. ಮನುಷ್ಯನ ಈ ಸ್ವಭಾವ ಕೇವಲ ನಿರ್ಜೀವ ವಸ್ತುಗಳಲ್ಲಷ್ಟೇ ಅಲ್ಲ. ಸಜೀವ ವಸ್ತುಗಳಲ್ಲಿಯೂ ಕೂಡಾ ಇದೇ ಸ್ವಭಾವವನ್ನು ಮುಂದುವರಿಸುತ್ತಾನೆ. ಅಷ್ಟಕ್ಕೂ ನಾವು ನಮ್ಮ ತಂದೆ ತಾಯಿಯನ್ನು ಆಯ್ಕೆಮಾಡಿಕೊಂಡು ಹುಟ್ಟಿದ್ದೇವೆಯೆ? ದೇಶವನ್ನು ರಾಜ್ಯವನ್ನು ಸಮಾಜವನ್ನು ಆಯ್ಕೆಮಾಡಿಕೊಂಡು ಜನಿಸಿದ್ದೇವೆಯೆ? ಹಾಗೆಂದುಕೊಂಡು ಈ ಆಯ್ಕೆಯ ಸ್ವಾತಂತ್ರ್ಯವೇ ಇರಬಾರದೆಂದಲ್ಲ. ಈ ಸ್ವಾತಂತ್ರ್ಯ ಸದ್ವಿನಿಯೋಗವಾಗಬೇಕೇ ಹೊರತು ದುಡುಕುತನದಿಂದಾಗುವ ಸ್ವೇಚ್ಛೆಯಾಗಬಾರದು. ಪ್ರೀತಿ ಪ್ರೇಮಗಳು ನಮ್ಮ ಸಂಸ್ಕೃತಿಯಲ್ಲಿ ನಿಶಿದ್ಧ ಎಂಬ ತಪ್ಪು ಕಲ್ಪನೆ ಬಹಳ ಜನರಿಗಿದೆ. ಆದರೆ ವೇದಗಳೇ ಇವನ್ನು ನಿಶಿದ್ಧವೆಂದು ಹೇಳಿಲ್ಲ. ಅದರ ಬದಲು ವೇದಾಧ್ಯಯನದ ನಂತರ ವಿವಾಹ ಸಂಸ್ಕಾರದ ಮೊದಲು ವರನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಹೆಣ್ಣಿಗೆ ನೀಡಲಾಗಿದೆ! ಆದರೆ ಇಲ್ಲಿ ಗುರುತಿಸಬೇಕಾದ ಅಂಶವೆಂದರೆ ಇದು ನೆಡೆಯಬೇಕಾದುದು ವೇದಾಧ್ಯಯನದ ನಂತರ. ಅಂದರೆ ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದು, ಸಮಾಜದ ಬಗ್ಗೆ ಇಹದ ಬಗ್ಗೆ ಪರದ ಬಗ್ಗೆ ಜ್ಞಾನವನ್ನು ಪಡೆದು ಬದುಕುವ ರೀತಿಯನ್ನು ಅರಿತಾದ ಮೇಲೆ ಈ ಸ್ವಾತಂತ್ರ್ಯದ ಉಪಯೋಗ. ಆದರೆ ಈಗ ವೇದಾಧ್ಯಯನ ಕನಸಿನ ಮಾತು ಬಿಡಿ. ಕೊನೆಯಪಕ್ಷ ಹೈ ಸ್ಕೂಲ್ ಆದರೂ ಮುಗಿಯಬೇಡವೇ? ’ಚೆಲುವಿನ ಚಿತ್ತಾರ’ ನೋಡಿಕೊಂಡು ನಮ್ಮ ಬದುಕೂ ಚಿತ್ತಾರವಾಗುತ್ತದೆ ಎಂದುಕೊಂಡ ಅಪ್ರಾಪ್ತರು ಈ ಪ್ರೇಮದ ಬಲೆಗೆ ಬಿದ್ದು ಬದುಕನ್ನು ಚಿತ್ತಾರದ ಬದಲು ಚಿತ್ರಾನ್ನ ಮಾಡಿಕೊಳ್ಳುವರಷ್ಟೆ.
ವಿದ್ಯಾಲಯಗಳು ಜ್ಞಾನದ ದೇವಾಲಯಗಳಾಗದೆ ಪ್ರೇಮಾಲಯಗಳಾಗಿವೆ. ಜ್ಞಾನದ ಬದಲು ಪ್ರೇಮವನ್ನು ತಲೆಯಲ್ಲಿ ತುಂಬಿಕೊಂಡ ಈ ಪ್ರೇಮಾರ್ಥಿಗಳು ಮುಂದೆ ಜೀವನದಲ್ಲಿ ಸಾಧಿಸುವುದಾದರೂ ಏನು? ಭಾರತೀಯ ಜನಸಂಖ್ಯೆಗೆ ತಮ್ಮ ಕೊಡುಗೆಯನ್ನು ಕೊಡಬಲ್ಲರಷ್ಟೆ. ಕಲಿಕೆಯಲ್ಲಿನ ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಕಾಲ ಮೀರಿದ ಮೇಲೆ ಬುದ್ಧಿಬಂದರೂ ಪ್ರಯೋಜನವಿಲ್ಲ. ಕಲಿಕೆಯೂ ಹತ್ತದೆ ಇತ್ತ ಪ್ರೇಮವೂ ಕೈಗೂಡದೆ ಎಡಬಿಡಂಗಿಯಾಗುವವರೇ ಬಹಳ ಜನ. ಹೀಗೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನೇ ತ್ಯಾಗ, ಪ್ರೇಮಕ್ಕಾಗಿ ನೀಡಿದ ಮಹಾನ್ ಬಲಿದಾನ ಎಂದು ಬಿಂಬಿಸುತ್ತಿರುವ ಇಂದಿನ ಸಿನೆಮಾಗಳು, ಧಾರಾವಾಹಿಗಳು, ಕಥೆ ಕಾದಂಬರಿಗಳು ನಿಜಕ್ಕೂ ಸಮಾಜಕ್ಕೆ ತಪ್ಪು ದಾರಿಯನ್ನು ತೋರಿಸುತ್ತಿದೆ. ಅಷ್ಟಕ್ಕೂ ತಮ್ಮ ಜೀವನವನ್ನು ಸ್ವೇಚ್ಛೆಯಂತೆ ಬದುಕುವ ಹಕ್ಕು ತಮಗಿದೆಯೇ ಎಂದು ಯಾರಾದರೂ ಯೋಚಿಸಿದ್ದಾರೆಯೇ? ಹೆತ್ತು ಬೆಳೆಸಿದ ತಾಯಿ ತಂದೆ, ವಿದ್ಯೆ ನೀಡಿ ಮನುಷ್ಯನನ್ನಾಗಿಸಿದ ಈ ಸಮಾಜ ಇವೆಲ್ಲದರ ಋಣ ನಮ್ಮ ಮೇಲಿಲ್ಲವೆ? ಅವನ್ನು ತೀರಿಸದೆಯೇ ರೆಕ್ಕೆ ಬಂದಾಗ ಹಕ್ಕಿ ಹಾರಿಹೋಗುವಂತೆ ನಿಮಗೂ ನಮಗೂ ಸಂಬಂಧವಿಲ್ಲ. ನನಗೆ ಪ್ರೇಮವೇ ದೇವರು. ಅದೇ ತಾಯಿ ತಂದೆ ಎಂದು ಹೇಳಿ ಹೊರನಡೆಯುವುದು ಸ್ವಾರ್ಥವೆನಿಸುತ್ತದೆ.
ಅಯ್ಯೋ ಬಿಡಿ. ಈ ವಿಷಯದಲ್ಲಿ ಬರೆದಷ್ಟೂ ಕಮ್ಮಿಯೇ ತಿಳಿದಷ್ಟೂ ಕಮ್ಮಿಯೇ. ಅಷ್ಟಕ್ಕೂ ನನಗಿನ್ನೂ ಈಗಿನ valentine ಪ್ರೇಮ ಅರ್ಥವೇ ಆಗಿಲ್ಲ. ಈ valentine ಪದದ ಅರ್ಥ ಹುಡುಕುತ್ತಿದ್ದೆ. ಅದರ ಅರ್ಥ ಹೀಗಿದೆ: "A sweetheart chosen to receive a greeting on Saint Valentine's Day" ! ಇಲ್ಲಿ ’A' ಎಂದು ಕರೆಯಲಾಗಿದೆ ಹೊರತು ’The' ಎಂದು ಹೇಳಿಲ್ಲ. ಅಂದರೆ ನಿಮಗೆ ಸಾವಿರ sweetheartಗಳು ಇದ್ದರೂ ತೊಂದರೆಯಿಲ್ಲ. ಇದು ಪಾಶ್ಚಾತ್ಯರ ತಪ್ಪಲ್ಲ ಬಿಡಿ. ಅವರಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಆದರ್ಶಪುರುಷನಾಗಿರಲಿಲ್ಲ ಅಥವಾ ಲೋಕಮಾತೆ ಸೀತೆ ಆದರ್ಶವಾಗಿರಲಿಲ್ಲವಲ್ಲ. ಆದರೆ ಇಂಥ ಮಹಾನ್ ಸಂಸ್ಕೃತಿಯನ್ನು ಹೊಂದಿಯೂ Saint Valentine ನಮಗೆ ಆದರ್ಶವಾಗುತ್ತಿರುವುದು ಮಾತ್ರ ವಿಪರ್ಯಾಸ.
Tuesday, February 5, 2008
ಪ್ಯಾಂಟಿನ ಬಣ್ಣ
ಬಣ್ಣ
ನನ್ನ ಪ್ಯಾಂಟಿನ ಬಣ್ಣ
ನೀಲಿ ಜೀನ್ಸಿನ ಬಣ್ಣ
ನೀಲಿ ಜೀನ್ಸಿನ ಬಣ್ಣ
ನಾನು ಬಿಡಿಸಲು ಕೆಸರು
ಬಿಡುತಲೇದುಸಿರು
ತಿಕ್ಕಿದರೆ ಬಿಟ್ಟಿತು ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ
ಈ ನೀಲಿ ಪ್ಯಾಂಟಿನ ಬಣ್ಣ ಒಗೆಯುವುದಕಿಂತ ಮುನ್ನ
ಅಣಕಿಸಿ ನಗುವ ಹಾಗೆ ಆ ನೀಲಿ ಆಗಸವನ್ನ
ನಾ ತಂದು ರಿನ್ ಪುಡಿಯನ್ನ ನೀರಲ್ಲಿ ಬೆರೆಸಿ ಅದನ
ಪ್ಯಾಂಟನ್ನು ಮುಳುಗಿಸಿದಾಗ ಬಕೆಟೆಲ್ಲ ಅದರದೆ ಬಣ್ಣ
ಬಾನಿನಿಂದ ಇಳಿದುಬಂದ ನೀಲಿ ತಾರೆಯು
ಮೈಯ ತೊಳೆದು ಬಣ್ಣವನ್ನು ಬಿಟ್ಟು ಹೋಯಿತು
ಮೇಲೆ ಕುಳಿತು ನೋಡುತಲಿ ಮಿಟುಕಿಸಿ ಕಣ್ಣ
ನಸು ನಗೆ ಬೀರುತಿದೆ ಎಲ್ಲಿಯದೀ ಬಣ್ಣ
ಹೋಗುವುದು ಎಂದರೆ ಹೊಲಸು ಹೋಗಿದ್ದು ಪ್ಯಾಂಟಿನ ಬಣ್ಣ
ಬಿಟ್ಟ ಮೇಲೆ ಆ ಪ್ಯಾಂಟನ್ನ ಮುತ್ತಿತ್ತು ಈ ಬನಿಯನ್ನ
ಬನಿಯನ್ನಿಗಿಂತ ಬಿಳುಪು ಈ ನನ್ನ ಪ್ಯಾಂಟಿನ ಬಣ್ಣ
ಬಿಳುಪಿದ್ದ ಬನಿಯನ್ ಎಲ್ಲಾ ಈಗಂತು ನೀಲಿ ಬಣ್ಣ
ಬನಿಯನ್ನಿನ ನೀಲಿ ಬಣ್ಣ ಬಿಡಿಸಲಾಗದು
ಪ್ಯಾಂಟಿನ ಬಿಳುಪು ಬನಿಯನ್ನನ್ನು ಹೋಲುತಿಹುದು
ಪ್ಯಾಂಟು ಮತ್ತು ಬನಿಯನ್ನಿನ ಪ್ರೇಮಗೀತವು
ಬಿಡಿಸಲಾರದ ಬಣ್ಣದಂತೆ ಅಮರವಾದವು
Wednesday, January 23, 2008
ಬದುಕೆಂಬ ಗಣಿತವನ್ನು ಬಿಡಿಸಿದವರು

Wednesday, January 16, 2008
ನಾವು ಕನ್ನdigaru - ೪
ಆತ: ಸಾರ್... ಅಕೌಂಟ್ ಇದನಾಲದಾನ್ ಓಪನ್ ಪಣ್ಣಿಟ್ಟೆ. operate ಪಣ್ಣುಂ ವಾರಾದ್...
ನಾನು: ಇವತ್ತೇ access ಮಾಡಕೆ ಬರಲ್ಲ ಅನ್ಸತ್ತೆ ಸಾರ್... ನಾಳೆ try ಮಾಡಿ.
ಆತ: ಆಮಾ ಸಾರ್... ಅಕೌಂಟ್ ಒಪನ್ ಪಣ್ಣಿಟ್ಟೆ.
ನಾನು: Thats what sir... you try tomorrow.
ಆತ: ಸಾರ್... language ತಮಿಳ್ ಸಾರ್.
ನಾನು: But I dont know tamil!
ಅಷ್ಟರಲ್ಲಿ, ನನ್ನ ಸುತ್ತ ಮುತ್ತ ನಿಂತಿದ್ದ ನಾಲ್ಕಾರು ಮಂದಿ ಅವನನ್ನು ಮಾತನಾಡಿಸತೊಡಗಿದರು.
"ಸಾರ್... ಇಪ್ಪ ವಾಂಗ ಸಾರ್... ಎನ್ನ ಪ್ರಾಬ್ಲಮ್?"
ನನ್ನ ಸುತ್ತಮುತ್ತಲಿದ್ದ ಎಲ್ಲರೂ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು! ನಾನೊಬ್ಬನೇ ಪರಕೀಯನಂತೆ ನಿಂತಿದ್ದೆ!
ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.
Thursday, January 10, 2008
ಕತ್ತಲೆಯ ಬೆಳಕು

"ಅಯ್ಯೋ... ಕರೆಂಟ್ ಹೋಯ್ತು!!!" ಈ ವಾಕ್ಯವನ್ನು ದಿನಕ್ಕೊಂದುಬಾರಿಯಾದರೂ ಕೇಳಿಯೇ ಇರುತ್ತೇವೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಕಡಿಮೆಯಿದ್ದರೂ ನಮ್ಮೂರಿನಲ್ಲಂತೂ ಸಧ್ಯದಲ್ಲೇ ಲೋಡ್ ಶೆಡ್ಡಿಂಗ್ ಶುರು ಆಗುತ್ತದಂತೆ. ಮಳೆಗಾಲ ಮುಗಿದು ಇನ್ನೂ ನಾಲ್ಕು ತಿಂಗಳು ಕಳೆದಿಲ್ಲ. ನಮ್ಮ KEBಯವರಿಗೆ ಎಷ್ಟು ದುಡ್ಡುಕೊಡುತ್ತೇವೆಂದರೂ, ಕೆಲಸವಿಲ್ಲದ ಕಾರಣಕ್ಕೋ ಏನೊ, ಅಂತೂ ಕರೆಂಟನ್ನು ದಿನಕ್ಕೆ ಎರಡು ಗಂಟೆಯಾದರೂ ತೆಗೆಯದಿದ್ದರೆ ಅವರಿಗೆ ಸಮಾಧಾನವಿಲ್ಲ. ರಾಜ್ಯದ ಕೋಟಿಗಟ್ಟಲೆ ಮುತ್ತೈದೆಯರ ಶಾಪ ತಗುಲಿಯೂ KEBಯವರು ಇಂದಿಗೂ ಬದುಕುಳಿದು ಕೆಲಸ ಮಾಡುತ್ತಿರುವುದು ಅಚ್ಚರಿಯ ಸಂಗತಿ! ಬಹುಶಃ ಈಗಿನ ಮುತ್ತೈದೆಯರ power ಮೊದಲಿನವರ ಹಾಗೆ ಉಳಿದಿಲ್ಲ ಎನಿಸುತ್ತದೆ. ಎಲ್ಲರೂ ಕರೆಂಟು ಹೋದ ಕೂಡಲೇ KEBಯವರ ವಿರುದ್ಧ ವಾಗ್ಸಮರಕ್ಕೆ ಸಿದ್ಧವಾಗಿಬಿಡುತ್ತಾರೆ. ಅದರಲ್ಲೂ ಕ್ರಿಕೆಟ್ ಮ್ಯಾಚ್ ಬರುತ್ತಿದ್ದಾಗ ಹೋದರಂತೂ ಎಲ್ಲ ಗಂಡಸರಿಂದಲೂ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಅಡಿಗೆ ಮಾಡಲು ಮಿಕ್ಸರ್ ಹಾಕಿದಾಗ ಅಥವಾ ರಾತ್ರಿ ವರ್ಷಗಟ್ಟಲೆ ನೆಡೆಯುವ ಕಥೆಯೇ ಮುಂದುವರಿಯದ ಮೆಗಾ ಧಾರಾವಾಹಿಗಳ ಸಮಯದಲ್ಲಿ ಕರೆಂಟು ಹೋಗಿಬಿಟ್ಟರಂತೂ ಮುಗಿಯಿತು. ಗಂಡಂದಿರ ಮೇಲಿನ ಸಿಟ್ಟೂ ಸೇರಿ KEBಯವರಿಗೆ ಸಹಸ್ರನಾಮಾವಳಿ ಪೂಜೆಯೇ ನೆರವೇರಿಬಿಡುತ್ತದೆ. ಇಷ್ಟಕ್ಕೂ KEBಯವರು ಕರೆಂಟನ್ನು ಯಾಕೆ ತೆಗೆಯುತ್ತಾರೆ ಎಂದು ಯೋಚಿಸಿದ್ದೇವೆಯೆ ?
ಈ ಕರೆಂಟು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕರೆಂಟಿಲ್ಲ ಎಂದರೆ ಟಿವಿ ಇಲ್ಲ, ಫ್ರಿಡ್ಜ್ ಇಲ್ಲ, ಲೈಟ್ ಇಲ್ಲ, ಮಿಕ್ಸರ್ ಇಲ್ಲ, ವಾಷಿಂಗ್ ಮಷಿನ್ ಇಲ್ಲ, ಫ್ಯಾನ್ ಇಲ್ಲ, ಎಸಿ ಇಲ್ಲ ಒಟ್ಟಿನಲ್ಲಿ ಏನೂ ಇಲ್ಲ. ಆದರೂ ನಾವಿದ್ದೇವೆ. ನಮ್ಮ ಜೊತೆ ಅಗಾಧವಾದ ಕತ್ತಲೆಯಿದೆ. ಮನುಷ್ಯ ವಿದ್ಯುಚ್ಛಕ್ತಿಯ ಮೇಲೆ ಹೆಚ್ಚಾಗಿಯೇ ಅವಲಂಬಿಸಿಬಿಟ್ಟಿದ್ದಾನೆ. ಅದಿಲ್ಲದಿದ್ದರೆ ಎನೂ ಇಲ್ಲವೆಂಬ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣಗಳೂ ಕರೆಂಟಿಲ್ಲದಿದ್ದರೆ ಉಪಯೋಗಕ್ಕೆ ಬರುವುದಿಲ್ಲ. ಈಗಂತೂ ಕಾರು ಬೈಕುಗಳೂ ಕೂಡಾ ವಿದ್ಯುಚ್ಛಕ್ತಿ ಚಾಲಿತವಾಗಿವೆ. ಕರೆಂಟಿಲ್ಲದೆ ಮೊದಲು ಜನ ಹೇಗೆ ಬದುಕುತ್ತಿದ್ದರಪ್ಪಾ ಎಂದು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿದೆ. ಹಿಂದೊಂದು ಕಾಲವಿತ್ತು, ನಿನ್ನೆ ಮಾಡಿದ ಅಡಿಗೆಯನ್ನು ಇವತ್ತು ತಿನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈಗ ದಿನನಿತ್ಯ ಅಡಿಗೆ ಮಾಡುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಹ್ಯಾಗಿದ್ದರೂ ಹಳಸಲು ಪೆಟ್ಟಿಗೆ (ಫ್ರಿಡ್ಜ್) ಇದೆಯಲ್ಲಾ. ಆದರೆ ಕರೆಂಟು ಹೋದರೆ ಮಾತ್ರ ಕೆಲಸ ಕೆಟ್ಟಿತು. ಅಡಿಗೆಯನ್ನಂತೂ ಹೊಸತಾಗಿ ಮಾಡಲೇಬೇಕು. ಅದೂ ಅಲ್ಲದೆ ಆ ಹಳಸಲು ಪೆಟ್ಟಿಗೆಯಲ್ಲಿ ಹಳಸಿಹೋದ ಪದಾರ್ಥಗಳ ದುರ್ಗಂಧ ಹೊರಹಾಕಲೂ ಒದ್ದಾಡಬೇಕು. ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕಪ್ಪಾ ಅವ್ರು ಕರೆಂಟ್ ತೆಗೀತಾರೆ?
ಹಿಂದೆ ಯಾವುದೋ personality development ಬಗ್ಗೆ ಪುಸ್ತಕ ಓದುತ್ತಿದ್ದ ನೆನಪು. ಶಿವ್ ಖೆರಾ ಅವರದ್ದು. ಬಹುತೇಕ ಕಡೆ be positive, be positive ಎಂದು ಹೀಳಿದ್ದರು. ನಾನೂ ಆಗ ಬಹಳಸ್ಟು ತಲೆ ಕೆಡಿಸಿಕೊಂಡಿದ್ದೆ. ಪೊಸಿಟಿವ್ ಆಗುವುದು ಎಂದರೇನು ಎಂದು. ಅಲ್ಲಿ ಕೆಲವು ಉದಾಹರಣೆಗಳೂ ಇದ್ದವು. ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರಿದ್ದರೆ, ಗ್ಲಾಸು ಅರ್ಧ ಖಾಲಿ ಇದೆ ಎನ್ನುವುದು ನೆಗೆಟಿವ್ ಥಿಂಕಿಂಗ್. ಗ್ಲಾಸು ಅರ್ಧ ತುಂಬಿದೆ ಎನ್ನುವುದು ಪೊಸಿಟಿವ್ ಥಿಂಕಿಂಗ್ ಎಂದು. ಆಗೆಲ್ಲಾ ನನಗನಿಸುತ್ತಿತ್ತು, ಎಲ್ಲದನ್ನೂ ಪೊಸಿಟಿವ್ ಆಗಿ ತಗೋಬೇಕು ಅಂತ ಹೇಳ್ತಿದಾರಲ್ಲಾ, ನೆಗೆಟಿವ್ ಥಿಂಕಿಂಗ್ಅನ್ನೂ ಪೊಸಿಟಿವ್ ಆಗಿ ಯಾಕೆ ತಗೊಳಲ್ಲಾ ಅಂತ. ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಅದು ಬೇರೆ ವಿಷಯ. ಆದರೆ ಈ ಕರೆಂಟು ಹೋಗುವುದನ್ನೂ ನಾವು ಪೊಸಿಟಿವ್ ಮಾರ್ಗದಲ್ಲಿ ವಿಚಾರ ಮಾಡಿದರೆ ನಮಗೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದೇನೊ. "ಯಾಕಾದ್ರೂ ಕರೆಂಟು ತೆಗೀತಾರೇನೊ?", "ಇದರಿಂದ ಇವರಿಗೇನು ಲಾಭ?" ಎಂದು ಯೋಚಿಸುವುದನ್ನು ಬಿಟ್ಟು "ಯಾಕೆ ಕರೆಂಟು ತೆಗೀತಾರೆ?" "ಇದರಿಂದ ನಮಗೇನು ಲಾಭ?" ಎಂದು ಯೋಚಿಸಬೇಕಾಗಿದೆ. ನಾನಂತೂ ಇದೇ ಮಾರ್ಗದಲ್ಲಿ ಯೋಚಿಸಲು ಪ್ರಾರಂಭಿಸಿದೆ. ಯಾಕೆಂದರೆ ನನ್ನ ಬ್ಲಡ್ ಗ್ರುಪ್ಪೇ ಹೇಳತ್ತೆ. B positive ! ಕೆಲವು ಪೊಸಿಟಿವ್ ಅಂಶಗಳು ಗಮನಕ್ಕೂ ಬಂದವು.
ಕರೆಂಟ್ ಹೋಗುವುದರಿಂದ ಏನಾಗುತ್ತದೆ? ಲೈಟ್ ಹತ್ತುವುದಿಲ್ಲ. ಎಲ್ಲ ಕಡೆ ಮೇಣದ ಬತ್ತಿಗಳನ್ನೋ ಚಿಮಣಿ ದೀಪಗಳನ್ನೋ ಹೊತ್ತಿಸುತ್ತೇವೆ. ಮನುಷ್ಯ ಬೆಂಕಿಯನ್ನು ಕಂಡು ಹಿಡಿಯುವ ಮೊದಲು ರಾತ್ರಿ ಪೂರ್ತಿ ಕತ್ತಲೆಯಲ್ಲೇ ಬದುಕುತ್ತಿದ್ದ. ಬೆಂಕಿಯನ್ನು ಕಂಡುಹಿಡಿದು ಕ್ರಂತಿಯನ್ನೇ ಮಾಡಿದ. ಆಗ ಆತನಿಗೆ ರಾತ್ರಿಯೂ ಬೆಳಕಾಯಿತು. ಅದೊಂದು ಕತ್ತಲೆಯಿಂದ ಬೆಳಕಿನೆಡೆಗೆ ಮನುಕುಲ ನೆಡೆದ ಕಾಲ. ಅಂಥ ಕಾಲವನ್ನು ನಮಗೆ ಈಗ ನಾವು ಹೊತ್ತಿಸಿದ ಮೇಣದಬತ್ತಿಗಳು, ಚಿಮಣಿ ದೀಪಗಳು ನೆನಪಿಸಿ ಕೊಡುತ್ತವೆ. ಮನುಷ್ಯ ಎಷ್ಟೇ ದೊಡ್ಡವನಾದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದಂತೆ. ಆದ್ದರಿಂದ KEBಯವರಿಂದ ಮನುಷ್ಯ ನೆಡೆದು ಬಂದ ಹಾದಿಯನ್ನು ಪ್ರತಿಯೊಬ್ಬ ನಾಗರಿಕನಿಗೂ ನೆನಪು ಮಾಡಿಸುವ ಕಾರ್ಯ ಪ್ರತಿದಿನವೂ ನಡೆಯುತ್ತದೆ. ಎಂತಹ ಮಹಾನ್ ಧ್ಯೇಯ. ಕರೆಂಟು ಹೋದಾಗ A/C ಕೂಡಾ ಕೆಲಸ ಮಾಡುವುದಿಲ್ಲ. ಮನೆಯಲ್ಲೇ ಕುಳಿತುಕೊಂಡು A/C ಹಚ್ಚಿಕೊಂಡು ಮನೆಯ ತುಂಬಾ ಇಂಗಾಲದ ಡೈ ಆಕ್ಸೈಡ್ ತುಂಬಿದ್ದರೂ ಅದನ್ನೇ ಮತ್ತೆ ಮತ್ತೆ ಉಸಿರಾಡುತ್ತಿರುವ ಜನ A/C ಕೆಲಸ ಮಾಡದೇ ಇದ್ದಾಗ ಮನೆಯಿಂದ ಹೊರಬರುತ್ತಾರೆ. ಹಿತವಾದ ಆಮ್ಲಜನಕಭರಿತ ತಣ್ಣನೆಯ ಗಾಳಿಯನ್ನು ಸೇವಿಸುತ್ತಾರೆ. ದೇಹದ ಎಲ್ಲ ಭಾಗಗಳಿಗೆ, ವಿಶೇಷವಾಗಿ ಮೆದುಳಿಗೆ ನವಚೈತನ್ಯ ಬಂದಂತಾಗುತ್ತದೆ. ಮನುಷ್ಯ ಆರೋಗ್ಯವಂತನಾಗುತ್ತಾನೆ. ದಿನನಿತ್ಯವೂ ಒಂದೆರಡು ಗಂಟೆ ಹಿತಕರವಾದ ಹವಾಸೇವನೆಯಿಂದ ಮನುಷ್ಯರನ್ನು ಆರೋಗ್ಯವಂತರನ್ನಾಗಿಸುವ KEBಯವರ ಧ್ಯೇಯ ನಿಜಕ್ಕೂ ಮೆಚ್ಚುವಂಥದ್ದೆ.
ಬೆಳೆಯುವ ಮಕ್ಕಳಲ್ಲಿ ಎಷ್ಟೊಂದು ಕಾಂಪಿಟಿಷನ್! ತಮ್ಮ ಮಕ್ಕಳು ಪಕ್ಕದ ಮನೆಯವರಿಗಿಂತ ಹೆಚ್ಚು ಸ್ಕೋರ್ ಮಾಡಬೇಕು. ಸಂಬಂಧಿಕರ ಮಗುವಿಗಿಂತ ಹೆಚ್ಚು ಓದಬೇಕು ಎಂದು ಮಕ್ಕಳ ಮೇಲೆ ಹೇರುವ ತಂದೆ ತಾಯಿಗಳೆಷ್ಟು. ಇಂತಹ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಂದೆ ತಾಯಿ ಹೆಚ್ಚು ಗಮನ ಹರಿಸುತ್ತಿಲ್ಲ. ಆದರೆ ಕರೆಂಟು ಹೋದರೆ ಅಭ್ಯಾಸಕ್ಕಂತೂ ಆಗುವುದಿಲ್ಲವಲ್ಲ. ಹೊರಗಡೆ ಎಲ್ಲಾ ಗೆಳೆಯರು ಸೇರಿ ಕತ್ತಲೆಯಲ್ಲೇ ಹರಟುತ್ತಾ ಕೂಡಬಹುದು. ಅಥವಾ ಬೇರೆ ಏನಾದರೂ ಆಟಗಳನ್ನು ಆಡಬಹುದು. ಒಟ್ಟಿನಲ್ಲಿ ಅಭ್ಯಾಸ, ಓದು ಎನ್ನುವ ದಿನನಿತ್ಯದ ಶೋಷಣೆಯಿಂದ ಮುಕ್ತಿ. ಮಕ್ಕಳಿಗೆ ತಮ್ಮ ಬಾಲ್ಯವನ್ನು ಹಿಂದಿರುಗಿಸುವ ಈ ಕತ್ತಲೆ ನಿಜಕ್ಕೂ KEBಯವರ ಕೊಡುಗೆಯಲ್ಲವೆ? ದಿನ ಪೂರ್ತಿ ಧಾರವಾಹಿಗಳನ್ನು ನೋಡುತ್ತಿದ್ದ ಅಥವಾ ಕಂಪ್ಯೂಟರನ್ನೇ ದಿಟ್ಟಿಸಿ ಆಯಾಸಗೊಂಡಿದ್ದ ಕಣ್ಣಿಗಂತೂ ಈ ಎರಡು ಗಂಟೆಗಳ ಕಾಲ ಸ್ವರ್ಗ ಸುಖವಿದ್ದಂತೆ. ಪ್ರತಿಯೊಬ್ಬರ ದೃಷ್ಟಿಯ ಬಗ್ಗೂ ಕಾಳಜಿವಹಿಸುವ ಈ ಕರೆಂಟು ತೆಗೆಯುವ ಕಾರ್ಯಕ್ರಮ ನಿಜಕ್ಕೂ ನೇತ್ರದಾನದಷ್ಟೇ ಶ್ರೇಷ್ಠವಾದುದಲ್ಲವೆ. ಕರೆಂಟು ಹೋದಾಗ ಮಾಡಲು ಕೆಲಸವಿಲ್ಲದೆ ಮನೆಯ ಹೆಂಗಸರು ಪಕ್ಕದ ಮನೆಯ ಸುಬ್ಬಮ್ಮನನ್ನೋ ಮುನಿಯಮ್ಮನನ್ನೋ ಕರೆದು ಹರಟುತ್ತಾ ಕೂತರೆ ಮಾತೆಯರಿಗೆ ಮಾತೆಯರೆಂಬ ಹೆಸರು ಸಾರ್ಥಕವಾದಂತಲ್ಲವೆ? ಹೆಂಗಸರಿಗೆ ಮರೆತುಹೋದ ತಮ್ಮ ಹುಟ್ಟುಗುಣವನ್ನು ಪುನಃ ನೆನಪಿಸುವ ಕಾರ್ಯ ನಿಜಕ್ಕೂ ಧರ್ಮಸ್ಥಾಪನೆಯ ಕಾರ್ಯವಲ್ಲವೆ?
"ಅಯ್ಯೋ..." ಕ್ಷಮಿಸಿ, "ಅರೆ ವ್ಹಾ... ಈ ಲೇಖನ ಬರೆಯುತ್ತಿರುವಾಗಲೇ ಮತ್ತೆ ಕರೆಂಟ್ ಹೋಯ್ತು". KEBಯವರು ನೂರು ವರ್ಷ ಸುಖವಾಗಿ ಬಾಳಲಿ. ನಾನು ಹೊರಗಡೆ ತಣ್ಣನೆಯ ಗಾಳಿ ಸೇವಿಸಿ ಆರೋಗ್ಯ ವರ್ಧಿಸಿಕೊಂಡು ಬರುತ್ತೇನೆ.
Thursday, January 3, 2008
"ಮತಾಂತರ" - ಒಂದು ಮಂಥನ

ನವೆಂಬರ್ 12 2004 ಒಂಗೋಲ್, 15018 ಜನರನ್ನು ಒಂದೇ ದಿನದಲ್ಲಿ ಬ್ಯಾಪ್ಟೈಸ್ ಮಾಡಲಾಯಿತು. ಒಂದೇ ಒಂದು ವರ್ಷದೊಳಗೆ 10,000 ಚರ್ಚ್ಗಳ ಸ್ಥಾಪನೆಯ ಉದ್ದೇಶವನ್ನೂ ತಿಳಿಸಲಾಯಿತು. ಇಷ್ಟೆಲ್ಲ ನೆಡೆದಿದ್ದು ಕೇವಲ ಒಂದು ಕ್ರಿಶ್ಚಿಯನ್ ತಂಡದಿಂದ. ಸೆವೆಂತ್ ಡೇ ಅಡ್ವೆಂಟಿಸ್ಟ್. 1998ರಲ್ಲಿ 225,000 ಜನರನ್ನು ಹೊಂದಿದ್ದ ಸೆವೆಂತ್ ಅಡ್ವೆಂಟಿಸ್ಟ್ ಚರ್ಚ್ 2005ರ ಒಳಗೆ 825,000 ಜನರನ್ನು ಹೊಂದಿತ್ತು. ಇಂತಹಾ ನೂರಾರು ತಂಡಗಳು, ಸಂಸ್ಥೆಗಳು ಭಾರತದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿವೆ. ಇದು ಕೇವಲ ಒಂದು ಉದಾಹರಣೆಯಷ್ಟೆ. 2001ರಲ್ಲಿ ಅಂಧ್ರಪ್ರದೇಶದ ಕ್ರೈಸ್ತರ ಜನಸಂಖ್ಯೆ 6.96%. 2005ರಲ್ಲಿ ಅದು 17% ಆಗಿದೆ. ಇದೇ ದರದಲ್ಲಿ ಮುಂದುವರಿದರೆ ಇನ್ನೊಂದು ದಶಕ ಕಳೆಯುವಷ್ಟರಲ್ಲಿ ಆಂಧ್ರಪ್ರದೇಶ ಕಿರಿಸ್ತಾನವಾಗುತ್ತದೆ. ತಮಿಳು ನಾಡಿನ ಪರಿಸ್ಥಿತಿ ಇದಕ್ಕೆ ಹೊರತಾಗೇನಿಲ್ಲ. ಅಲ್ಲಿ ಈಗಲೇ ಜನಸಂಖ್ಯೆ 28%ಕ್ಕೆ ಮುಟ್ಟಿದೆ. ಆದರೆ ಈ ಅಂಕಿಅಂಶಗಳು ಹೊರಬರುತ್ತಿಲ್ಲ. ಏಕೆಂದರೆ ಇದರಿಂದ ಅಲ್ಪಮತೀಯರಿಗೆ ಸುಗುವ ರೆಸರ್ವೇಶನ್ ಮತ್ತಿತರೆ ಸವಲತ್ತುಗಳು ಸಿಗುವುದಿಲ್ಲವಾದ್ದರಿಂದ. ಇದರಿಂದಾದದುಶ್ಪರಿಣಾಮ ನಮ್ಮ ಕಣ್ಣಮುಂದೇ ಇದೆ. 1947ರಲ್ಲಿ ಸಂಪೂರ್ಣ ಹಿಂದೂರಾಜ್ಯಗಳಾಗಿದ್ದ ಈಶಾನ್ಯದ ನಾಲ್ಕು ರಾಜ್ಯಗಳಲ್ಲಿ ಈಗಿನ ಕ್ರೈಸ್ತರ ಜನಸಂಖ್ಯೆ 75% ದಿಂದ 95%ದ ವರೆಗೆ ಬೆಳೆದಿದೆ. ಕೇವಲ ಹಿಂದುಗಳ ಸಂಖ್ಯೆ ಇಳಿಮುಖವಾಗಿರುವುದು ಸಮಸ್ಯೆಯಲ್ಲ. ಈಗ ಆ ರಾಜ್ಯಗಳು ಭಾರತದಿಂದ ಬೇರ್ಪಡಲು ಹವಣಿಸುತ್ತಿವೆ!
ಮನುಷ್ಯ ಸಂಘಜೀವಿ. ಅವನು ಬಾಳಿ ಬದುಕಲು ಒಂದು ಸಮಾಜ ಬೇಕೇ ಬೇಕು. ಆ ಸಮಾಜವಿದ್ದಂತೆ ಅಲ್ಲಿಯ ಜನರ ಜೀವನ, ಭಾವನೆಗಳು, ಬೌದ್ಧಿಕ ವಿಕಸನಗಳು ಇರುತ್ತವೆ. ಒಂದು ಸಮಾಜಕ್ಕೆ ಸಂಸ್ಕೃತಿಯೆಂಬ ಗಟ್ಟಿಯಾದ ಹಿನ್ನೆಲೆ ದೊರೆತಾಗ ಮಾತ್ರ ಆ ಸಮಾಜದಿಂದ ವಿಶ್ವಕ್ಕೇ ಉತ್ತಮ ಕೊಡುಗೆಗಳನ್ನು ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಈಗಾಗಲೇ ನಶಿಸಿಹೋದ ಸಾವಿರಾರು ಜನಜೀವನಗಳಲ್ಲಿ ಅದೂ ಒಂದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. "ಹಿಂದೂ" ಎಂಬುದು ಒಂದು ಧರ್ಮವಷ್ಟೇ ಅಲ್ಲ. ಅದೊಂದು ಜೀವನ ಪದ್ಧತಿ. ಈ ಜೀವನ ಪದ್ಧತಿ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಲದ ಪ್ರವಾಹಕ್ಕೆ ಸಿಕ್ಕು ತರಗಲೆಗಳಂತೆ ಉದುರಿಹೋದ ಇತರೇ ಸಂಸ್ಕೃತಿಗಳಂತಲ್ಲದೆ, ಸಾವಿರಾರು ಆಕ್ರಮಣಗಳಿಗೊಳಗಾದರೂ ಮರ್ಮಾಘಾತಸಮ ಕೊಡಲಿ ಏಟುಗಳನ್ನು ತಿಂದರೂ ಹಿಂದೂ ಸಂಸ್ಕೃತಿ ಅಲುಗಾಡದೇ ಬೃಹದ್ ವಟವೃಕ್ಷದಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣವಿಷ್ಟೆ. ಇದರ ಮೂಲದಲ್ಲಿ ದೋಷವಿರಲಿಲ್ಲ. ಕಲ್ಮಶ ಕಪಟಗಳು ಇದರೆಡೆಗೆ ಸುಳಿಯಲಿಲ್ಲ. ಇತರರನ್ನು ಬಲಾತ್ಕಾರವಾಗಿ ತನ್ನೆಡೆಗೆ ಸೆಳೆಯುವ ಕ್ರೂರತ್ವ ಇದರಲ್ಲಿರಲಿಲ್ಲ. "ವಸುಧೈವ ಕುಟುಂಬಕಂ", ಇಡೀ ವಿಶ್ವವೇ ಒಂದು ಕುಟುಂಬ ಎಂಬಂತಹ ಮಹತ್ತರವಾದ ಧೋರಣೆ ಈ ಧರ್ಮದ್ದಾಗಿದೆ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ" ಎಂದು ಹೀಳಿದ ಈ ಧರ್ಮದ ಉದಾತ್ತ ಮನೋಭಾವವೆಲ್ಲಿ; ಕೇವಲ ನಾನು ನಂಬಿರುವವನಷ್ಟೇ ದೇವರು, ಬೇರೆಯವರನ್ನು ನಂಬಿರುವವರೆಲ್ಲರೂ ಮಹಾನ್ ಪಾಪಿಗಳು ಎಂದು ಸಾರುವ ಮತಗಳೆಲ್ಲಿ?
ಮತಾಂತರದ ಪರಿಣಾಮದ ವ್ಯಾಪ್ತಿ ಕೇವಲ ಮನುಷ್ಯನ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲ. ಮತಾಂತರದಿಂದ ರಾಷ್ಟ್ರಾಂತರವಾಗುತ್ತದೆ. ಅಯೋಧ್ಯೆ ದ್ವಾರಕೆಗಳು ಪವಿತ್ರಭೂಮಿಗಳಾಗಿದ್ದ ವ್ಯಕ್ತಿಗೆ ಇನ್ನು ಮುಂದೆ ಅವು ಕೇವಲ ಇತರ ನಗರಗಳಂತಾಗಿ, ರೋಮ್ ಬೆತ್ಲಹೇಮ್ಗಳು ಪವಿತ್ರಭೂಮಿಗಳಾಗುತ್ತವೆ. ತುಳಿಯುತ್ತಿರುವ ನೆಲ ಕೇವಲ ಮಣ್ಣಾಗಿ ಉಳಿಯುತ್ತದೆಯೇ ಹೊರತು ಯೋಗಭೂಮಿಯಾಗಿ, ಭಾರತಮಾತೆಯಾಗಿ ಕಾಣಿಸುವುದಿಲ್ಲ. ಇನ್ನು ಅವಳಬಗ್ಗೆ ಪ್ರೀತಿ ಎಲ್ಲಿಂದ ಹುಟ್ಟಬೇಕು? ಗಂಗೆ ಪತಿತಪಾವನೆಯಾಗದೆ ಕೇವಲ ನೀರಾಗುತ್ತಾಳೆ. ಹಿಮಾಲಯ ಸಾಧು ಸಂತರ ಆಧ್ಯಾತ್ಮ ತಾಣವಾಗದೆ ಕೇವಲ ಕೆಲಸಕ್ಕೆ ಬಾರದ ಹಿಮಾವ್ರತ ಬಂಜರು ಭೂಮಿಯಾಗುತ್ತದೆ. ದೇಶದ ಆದರ್ಶಪುರುಷರುಗಳಾದ ರಾಮ, ಕೃಷ್ಣ, ವೇದವ್ಯಾಸ, ಅಗಸ್ತ್ಯ, ವಾಲ್ಮೀಕಿ, ಚಾಣಕ್ಯರುಗಳೆಲ್ಲ ಕಾಲ್ಪನಿಕ ಪಾತ್ರಗಳಾಗುತ್ತಾರೆ. ಧರ್ಮೋಧ್ಧಾರಕರಾದ ಶಂಕರ, ಮಾಧ್ವ, ರಾಮಾನುಜ, ಸಮರ್ಥ ರಾಮದಾಸ, ವಿದ್ಯಾರಣ್ಯ, ರಾಮಕೃಷ್ಣ, ವಿವೇಕಾನಂದರು ಪಾಪಿಗಳಾಗುತ್ತಾರೆ. ದೇಶದ ಒಳಿತಿಗೆ ಜೀವನವನ್ನೇ ಮುಡಿಪಾಗಿಟ್ಟ ಶಿವಾಜಿ, ರಣಾ ಪ್ರತಾಪ್, ಪ್ರಥ್ವಿರಾಜ, ಝಾನ್ಸಿ ರಾಣಿ, ಚಂದ್ರಗುಪ್ತ, ವಿಕ್ರಮಾದಿತ್ಯರು ನಗೆಪಾಟಲಾಗುತ್ತಾರೆ. ಒಟ್ಟಿನಲ್ಲಿ ದೇಶದಮೇಲಿನ ಶ್ರದ್ಧೆ ಭಕ್ತಿ ಗೌರವಗಳು ಮಾಯವಾಗಿ ಇದೇ ಭಕ್ತಿ ಶ್ರದ್ಧೆಗಳು ಇನ್ನೊಂದು ದೇಶದ ಪಾಲಾಗುತ್ತದೆ.
ಇಷ್ಟಕ್ಕೂ ಪರಮತಸಹಿಷ್ಣುತೆ ಕೇವಲ ಹಿಂದುಗಳೇಕೆ ಅನುಸರಿಸಬೇಕು? ಒಂದು ಕಾನೂನು ಅಥವಾ ನಿಯಮ ಫಲಕಾರಿಯಾಗುವುದು ಪ್ರತಿಯೊಬ್ಬನೂ ಅದನ್ನು ಪಾಲಿಸಿದಾಗ ಮಾತ್ರ. ಅಲ್ಪಸಂಖ್ಯಾತರು ಧರ್ಮಪ್ರಚಾರ ಪರಧರ್ಮನಿಂದನೆ ಮಾಡಿದರೆ ಅದು ಜಾತ್ಯಾತೀತತೆ, ಬಹುಸಂಖ್ಯಾತರು ಇದನ್ನು ಪ್ರತಿಭಟಿಸಿದರೇ ಅದು ಕೋಮುವಾದ ಎಂದು ಅರ್ಥೈಸುತ್ತಿರುವ ಇಂದಿನ ರಾಜಕಾರಣಿಗಳು ಮತ್ತು ತಥಾಕಥಿತ ಬುದ್ಧಿಜೀವಿಗಳಿಗೆ ಬುದ್ಧಿಬ್ರಮಣೆಯಾಗಿದೆಯೆನ್ನಬೇಕಲ್ಲವೆ. ಧರ್ಮನಾಶವಾಗುತ್ತಿರಬೇಕಾದರೆ ಕೈ ಕಟ್ಟಿ ಕುಳಿತುಕೊಳ್ಳುವುದು ಹಿಂದುವಿನ ಸ್ವಭಾವವಲ್ಲ. ಅಂದು ಮಹಾಭಾರತದಲ್ಲಿ ಕುರುವಂಶದರಿಂದ ಧರ್ಮನಾಶವಾದಾಗ ಕೃಷ್ಣ ಪಾಂಡವರಿಗೆ ಕೈ ಕಟ್ಟಿ ಕೂತಿರಿ ಎಂದು ಹೇಳಲಿಲ್ಲ. ಸ್ವಜನರ ಹತ್ಯೆ ನನ್ನಿಂದಾಗದು ಎಂದು ಅರ್ಜುನ ಬಿಲ್ಲು ಬಿಸುಟಿ ಕುಳಿತಿದ್ದಾಗ ಗೀತೋಪದೇಶ ನೀಡಿ "ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದುಚ್ಛರಿಸಿದಾಗಲೇ ಧರ್ಮ ಕೇವಲ ಶಾಸ್ತ್ರವಿಚಾರಗಳಿಂದ ಕೂಡಿರುವುದಷ್ಟೇ ಅಲ್ಲ, ಶಸ್ತ್ರವನ್ನೂ ಹಿಡಿದು ಯುದ್ಧಮಾಡುವುದೂ ಇದಕ್ಕೆ ಗೊತ್ತಿರಬೇಕು ಎಂದು ಆ ಜಗದ್ಗುರುವು ಸಾರಿದ. ಇಂತಹ ಮತಾಂತರಗಳ ಮೂಲವನ್ನರಿತುದಕ್ಕೇ ಇರಬೇಕು ಸ್ವಾಮಿ ವಿವೇಕಾನಂದರು "ಒಬ್ಬ ಹಿಂದು ಮತಾಂತರಗೊಂಡರೆ, ಒಬ್ಬ ಹಿಂದು ಕಡಿಮೆಯಾದುದಷ್ಟೇ ಅಲ್ಲ ಒಬ್ಬ ವೈರಿ ಹೆಚ್ಚಾದಂತೆ" ಎಂದು ಹೇಳಿದುದು. ಆದರೆ ಕೇವಲ ಅವರ ಮಾತುಗಳನ್ನು ಕೇಳಿ ಈಗಿನ ಜನತೆಗೆ ಬುದ್ಧಿಬರುವುದು ಕಷ್ಟವೇ ಇದೆ. ಬಹುಶಃ ಭಾರತವನ್ನು ಭಾರತವಾಗೇ ಇರಿಸಲು ವಿವೇಕಾನಂದರು ಮತ್ತೊಮ್ಮೆ ಹುಟ್ಟಿ ಬರಬೇಕೋ ಏನೊ?