ಬೆಂಗಳೂರಿನ ಜನರಿಗೆ ಬಾಂಬ್ ಬ್ಲಾಸ್ಟ್ ಹೊಸತು. ಆದರೂ ಥಿಯರೊಟಿಕಲ್ ನಾಲೆಡ್ಜ್ ಪ್ರತಿಯೊಬ್ಬ ಭಾರತೀಯನಿಗೂ ಬಹಳವಾಗಿಯೇ ಆಗಿಬಿಟ್ಟಿದೆ. ಸ್ವಲ್ಪ ಜನ ಹೆದರಿದರೆ ಇದನ್ನು ಎಂಜಾಯ್ ಮಾಡಿದವರೇ ಬಹಳಷ್ಟು ಜನ ಎನಿಸುತ್ತದೆ. ಮೂರು ಘಂಟೆಯ ಸುಮಾರಿಗೆ ಒಬ್ಬನಿಂದ ಸುದ್ದಿ ಬಂತು. ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಎಂದು. ಹೋದಸಲವೂ ಹೀಗೇ ಆಗಿತ್ತು. ಕೆಂಪೇಗೌಡ ಬಸ್ ನಿಲ್ದಾಣದಲ್ಲೇ ಬಾಂಬ್ ಸ್ಪೋಟ ಎಂದು ಸುದ್ದಿ ಹಬ್ಬಿತ್ತು. ಮಾರನೇ ದಿನವೇ ಗೊತ್ತಾಗಿದ್ದು. ಅದು ಅಗ್ನಿಶಾಮಕ ದಳದ ಅಣಕು ಪ್ರದರ್ಶನ ಎಂದು. ಇದೂ ಹೀಗೇ ಏನೊ ಇರಬೇಕು ಎಂದು ಸುಮ್ಮನಾಗಿಬಿಟ್ಟೆ. ಅವನು ಅಷ್ಟಕ್ಕೇ ಸುಮ್ಮನಾಗದೆ NDTV ಸೈಟಿನ ಲಿಂಕನ್ನೂ ಕಳಿಸಿದ. ಅದರಲ್ಲಿ ಬಾಂಬ್ ಸ್ಪೋಟದ ಬಗ್ಗೆ ಬರೆದಿದ್ದ ಒಂದೇ ಒಂದು ವಾಕ್ಯ ಓದಿದಾಗ ನನಗೆ ನಿಜಕ್ಕೂ ಆಶ್ಚರ್ಯ ದುಃಖ ಭಯ ಎಲ್ಲಾ ಒಟ್ಟಿಗೇ ಆಗಿಬಿಟ್ಟಿತು. ಈ ಟೆರರಿಸ್ಟ್‌ಗಳಿಗೆ ಬೇರೆ ಕೆಲ್ಸಾ ಇಲ್ವೇನಪ್ಪಾ... ಥತ್.. ರಾಕ್ಷಸ ಜಾತಿಯವ್ರು ಎಂದುಕೊಳ್ಳುವಷ್ಟರಲ್ಲೆ ಶಾಂತವಾಗಿದ್ದ ಆಫೀಸ್ ತುಂಬೆಲ್ಲ ಗದ್ದಲ. ಬಾಂಬು... ಬ್ಲಾಸ್ಟು... ಮೂರು... ಐದು... ಏಳು... ಒಟ್ನಲ್ಲಿ ಬಾಂಬ್ ಹಾರಿಸಿದವನ ಧ್ಯೇಯ ಈಡೇರಿತು ಅನಿಸುತ್ತದೆ.
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಮಾಮಾ ಮಾಮಾ ಬಾಂಬ್ ಬ್ಲಾಸ್ಟ್
ಮಾಮಾ ಮಾಮಾ ಬಾಂಬ್ ಬ್ಲಾಸ್ಟ್
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಎಂಥಾ ಜನ ನೋಡಿ ಅವರೆಂಥಾ ಜನ ನೋಡಿ
ಢಂ ಢಂ ಢಮಾರ್ ಢಮಾರ್
ಇಪ್ಪತ್ತೊಂದನೆ ಶತಮಾನ ಟೆರರಿಸಮ್ಮಿನ ಜಮಾನ
ಸ್ನೇಹಕೆ ಬಾಂಬೆ ಬಹುಮಾನ ಕ್ರೌರ್ಯವೆ ಎಲ್ಲಕೆ ಯಜಮಾನ
ಯಾಕೆ ಇವರು ಹೀಗೆ ಆದರೋ
ಜನರ ಸಾವಲಿ ಸುಖವ ಕಾಣ್ವರೋ
ಹಾಕ್ಬೇಕು ಇವ್ರ ಜೈಲಿಗೆ ತಳ್ಬೇಕು ಇವ್ರ ನೇಣಿಗೆ
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಬಿಕನಾಸಿ ಓ ದರ್ಬೇಸಿ ಅಡಕಾಸಿ ಓ ಪರದೇಸಿ
ತಲೆಕೆಟ್ಟಿರುವ ಜಿಹಾದಿ ಬೈದರು ಇಲ್ಲ ಮರ್ಯಾದಿ
ಮಾನಗೆಟ್ಟ ಮಂದಿ ಅವರೆಲ್ಲ
ಮಾನವೀಯತೆ ಎಂಬುದೆ ಗೊತ್ತಿಲ್ಲ
ಹಿಡಿದ್‌ಹಾಕಿ ಅವ್ರ ಬಡಿದ್‌ಹಾಕಿ ಕರುಣೆ ಇಲ್ದೆ ಕೊಂದ್‌ಹಾಕಿ
ಢಮಾರ್ ಢಮಾರ್ ಢಂ ಢಂ ಢಮಾರ್ ಢಮಾರ್
ಎಂಥಾ ಜನ ನೋಡಿ ಅವರೆಂಥಾ ಜನ ನೋಡಿ
ಢಂ ಢಂ ಢಮಾರ್ ಢಮಾರ್
ಢಂ ಢಂ ಢಮಾರ್ ಢಮಾರ್
"ಇವತ್ತು ಸಂಜೆ ಕ್ರಿಕೆಟ್ ಆಡ್ಲಿಕ್ಕೆ ಬರ್ತೀಯೇನೊ?"
"ಇಲ್ಲಪ್ಪಾ... ನಂಗೆ ತಬ್ಲಾ ಕ್ಲಾಸ್ ಇದೆ"
"ಯೆಲ್ಲೀ ತಬ್ಲಾ ಕ್ಲಾಸು ತೆಗ್ಯೋ... ಸುಮ್ನೆ ಆಡ್ಲಿಕ್ ಬಾ. ಮಜಾ ಬರ್ತದೆ".
ಅಂತೂ ಗೆಳೆಯರೆಲ್ಲಾ ಸೇರಿ ನನ್ನ ತಲೆ ಕೆಡಿಸೇ ಬಿಟ್ಟಿದ್ದರು. ಆಗ ತಬಲಾ ಕಲಿಯಲು ನನಗೇನೂ ಇಂಟರೆಸ್ಟ್ ಇರಲಿಲ್ಲ. ಆದರೆ ನನ್ನ ತಂದೆಗಿತ್ತಲ್ಲಾ! ಅವರಿಗೆ ಕಲಿಯಲಿಕ್ಕೆ ಆಗಲಿಲ್ಲವಂತೆ. ಅದಕ್ಕೇ ನನ್ನನ್ನು ಕಲಿಯಲಿಕ್ಕೆ ಹಚ್ಚಿಬಿಟ್ಟಿದ್ದರು. ನಾನೋ ಇಲ್ಲದ ಮನಸ್ಸಿನಿಂದ ತಬಲಾ ಕಲಿಯಲು ಹೋಗುತ್ತಿದ್ದೆ. ಯಾವುದೇ ವಿದ್ಯೆಯಾದರೂ ಹಾಗೆಯೇ. ಕಲಿಯುವುದಕ್ಕೆ ಕಷ್ಟವೆನಿಸತೊಡಗಿದರೆ ಅದರ ಮೇಲೆ ಆಸಕ್ತಿಯೇ ಹೊರಟುಹೋಗುತ್ತದೆ. ನಾನು ಐದನೇ ತರಗತಿಯಲ್ಲಿರಬೇಕಾದರೇ ನನ್ನ ತಂದೆ ನನ್ನನ್ನು ತಬಲಾ ಕ್ಲಾಸಿಗೆ ಹಚ್ಚಿಬಿಟ್ಟಿದ್ದರು. ಅದರಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಪಾಸಾದ ನಂತರ ನನ್ನನ್ನು ಬೇರೊಬ್ಬರಲ್ಲಿ ತಬಲಾ ಕಲಿಯಲು ಕಳಿಸಿದರು. ಇವರು ಬಹಳ ಚೆನ್ನಾಗೇನೋ ಹೇಳಿಕೊಡುತ್ತಿದ್ದರು. ಆದರೆ ಅಲ್ಲಿ ಬರುವ ಹುಡುಗರೆಲ್ಲಾ ನನಗಿಂತ ಹೆಚ್ಚು ಚೆನ್ನಾಗಿ ನುಡಿಸುವವರು. ನಾನು ಇನ್ನೂ ಬಚ್ಚಾ. ಅದೇ ಕಾರಣಕ್ಕೋ ಏನೊ. ಬರಬರುತ್ತ ನನಗೆ ಕ್ರಿಕೆಟ್‌ನಲ್ಲೇ ಆಸಕ್ತಿ ಹೆಚ್ಚತೊಡಗಿತ್ತು. ಪ್ರತೀ ಶನಿವಾರ ಮತ್ತು ಭಾನುವಾರ ತಬಲಾ ಕ್ಲಾಸ್‌ಗಳು. ಹುಡುಗರ ಕ್ರಿಕೆಟ್ ಅಂತೂ ದಿನವೂ ನೆಡೆದೇ ಇರುತಿತ್ತು. ಆದರೂ ಶನಿವಾರ ಭಾನುವಾರ ಹೋಗಲು ತಪ್ಪಿಸಿಕೊಂಡರೆ ಏನೋ ಒಂದು ಕಳೆದುಕೊಂಡಂತೆ. ಸೋಮವಾರ ಶಾಲೆಗೆ ಹೋದ ತಕ್ಷಣ ನಿನ್ನೆ ಆಡಿದ ಕ್ರಿಕೆಟ್ಟಿನ ಸುದ್ದಿ. ನನಗಂತೂ ಜಗತ್ತಿನ ಅತಿ ದೊಡ್ಡ ಸುಖವನ್ನು ಕಳೆದುಕೊಳ್ಳುತ್ತಿದ್ದೇನೋ ಎನಿಸತೊಡಗಿತ್ತು.
ಜಗತ್ತಿನಲ್ಲಿ ಅತ್ಯಂತ ಸುಲಭವಾಗಿ ಯಾವುದೇ ಗುರುವಿನ ಸಹಾಯವಿಲ್ಲದೆ ಕಲಿಯಬಹುದಾದ ಒಂದೇ ಒಂದು ವಿದ್ಯೆ ಅಂದರೆ ಸುಳ್ಳು ಹೇಳುವುದು. ನಾನೂ ಯಾವುದೇ ಗುರುವಿನ ಸಹಾಯವಿಲ್ಲದೆ ಕಲಿತುಬಿಟ್ಟಿದ್ದೆ. ತಬಲಾ ಕ್ಲಾಸಿಗೆಂದು ಮನೆಯಲ್ಲಿ ಹೇಳಿ ಶಾಲೆಯ ಗ್ರೌಂಡಿಗೆ ಹಾಜರ್ ಆಗಿಬಿಡುತ್ತಿದ್ದೆ. ಸತತವಾಗಿ ಮೂರ್ನಾಲಕು ವಾರ ಹೀಗೇ ಕಳೆಯಿತು. ಪ್ರತಿಸಲವೂ ತಬಲಾ ಕ್ಲಾಸಿಗೆ ಹೋಗಿಬಂದರೆ ಹುಡುಗನ ಬಟ್ಟೆ ಯಾಕಿಷ್ಟು ಕೊಳೆಯಾಗಿರುತ್ತದೆ ಎಂದು ನನ್ನ ತಾಯಿ ಸಂಶಯಪಟ್ಟಿರಲೂಬಹುದು. ಆದರೆ ಆ ಸ್ವರ್ಗಸುಖದ ಮುಂದೆ ಈ ಸಣ್ಣ ಪುಟ್ಟ ವಿಷಯಗಳೆಲ್ಲ ನನಗೆಲ್ಲಿ ತಲೆಗೆ ಹತ್ತಿರಬೇಕು? ಒಂದು ತಿಂಗಳು ಹೀಗೇ ನಡೆದವು ನನ್ನ ತಬಲಾ ಮ್ಯಾಚ್‌ಗಳು. ಪ್ರತೀ ತಿಂಗಳೂ ನನ್ನ ತಬಲಾ ಮೇಸ್ಟ್ರಿಗೆ ಫೀಸ್ ಕೊಡುವುದು ನಾನೇ. ಆದ್ದರಿಂದ ಮುಂದಿನ ತಿಂಗಳ ಮೊದಲನೇ ವಾರ ಅಲ್ಲಿಗೆ ಹೋಗಿ ಮುಖ ತೋರಿಸಿ ಫೀಸ್ ಕೊಟ್ಟು. ಏನೋ ಮೈ ಹುಶಾರಿರಲಿಲ್ಲ ಎಂದು ರೈಲು ಬಿಡುವುದು ಎಂದು ನಿರ್ಧರಿಸಿಕೊಂಡಿದ್ದೆ. ಆದರೆ ಎಲ್ಲವೂ ನಾವೆಂದುಕೊಂಡಂತೆ ಆದರೆ ಈ ಜಗತ್ತೇ ಬೇರೆ ರೀತಿ ಇರುತ್ತಿತ್ತು. ನಾವೊಂದು ಬಗೆದರೆ ದೈವವಿನ್ನೊಂದು ಬಗೆಯುತ್ತದೆ ಎನ್ನುತ್ತಾರಲ್ಲಾ ಹಾಗೆ.
ಅವತ್ತಿಗೆ ತಬಲಾ ಕ್ಲಾಸ್ ತಪ್ಪಿಸಲು ಪ್ರಾರಂಭಿಸಿ ಸರಿಯಾಗಿ ಒಂದು ತಿಂಗಳಾಗಿತ್ತು. ಅವತ್ತಂತೂ ಸ್ವಲ್ಪ ಜಾಸ್ತಿ ಹೊತ್ತೇ ಕ್ರಿಕೆಟ್ ಆಡುತ್ತಾ ಉಳಿದುಬಿಟ್ಟಿದ್ದೆ. ನಂತರ ಮನೆಗೆ ಬಂದಾಗ ನನ್ನ ದುರಾದೃಷ್ಟವಶಾತ್ ಆಗಲೇ ನನ್ನ ತಂದೆ ಮನೆಗೆ ಬಂದಾಗಿತ್ತು. "ಬಾರೋ.. ಜಾಕಿರ್ ಹುಸೇನ್..." ಎಂದು ಬರಮಾಡಿಕೊಂಡರು. ಅವರು ಅದನ್ನು ತಮಾಷೆಗಾಗಿ ಹೇಳಿದರೆಂದು ನಾನು ಭಾವಿಸಿದ್ದೆ. ಆದರೆ ಅವರ ಮುಖದಮೇಲಿನ ಸಿಟ್ಟು ನನ್ನ ಗಮನಕ್ಕೇ ಬಂದಿರಲಿಲ್ಲವೇನೊ.
"ಎಲ್ಲೋಗಿದ್ದೆ ಇಷ್ಟೊತ್ತು?"
"ತಬ್ಲಾ ಕ್ಲಾಸಿಗೆ"
"ಓ ತಬ್ಲಾ ಕ್ಲಾಸು... ನೋಡೇ... ನಿನ್ ಮಗ ತಬ್ಲಾ ಕ್ಲಾಸಿಗೆ ಹೋಗಿದ್ನಡಾ...!"
ನಾನು ಒಳಗೊಳಗೇ ಬೆವರತೊಡಗಿದೆ. ಇದ್ಯಾಕಪ್ಪಾ ಇವ್ರಿಗೆ ಸಂಶಯ ಬಂತು ಎಂದು ನನಗೆ ಅರ್ಥವೇ ಆಗಲಿಲ್ಲ.
"ನೀವು ಸುಮ್ನಿರ್ತಾ... ಅವ್ರು ಮಾತಾಡ್ತೆ ಹೇಳಿ ಹೇಳಿದ್ರಲಿ..." ನನ್ನ ತಾಯಿಯ ಉತ್ತರ. ನನಗಂತೂ ಇವೆಲ್ಲ ಬಿಡಿಸಲಾಗದ ಒಗಟುಗಳಂತೆ ಕಾಣತೊಡಗಿದವು. ಅವರಿಬ್ಬರು ಅಷ್ಟಕ್ಕೇ ಸುಮ್ಮನಾದರಲ್ಲಾ ಎಂದು ಸಂತೋಷಗೊಂಡೆ.
ಮುಂದಿನ ವಾರ ತಬಲಾ ಕ್ಲಾಸಿಗೆ ಹೋಗೇ ಬಿಡೋಣ. ಇಲ್ಲವಾದರೆ ಇದು ವಿಪರೀತಕ್ಕೆ ತಿರುಗುತ್ತದೆ ಎಂದು ನಿರ್ಧರಿಸಿ ಹೋದೆ. ಆದರೆ ಫೀಸ್ ವಿಚಾರ ನನ್ನ ತಂದೆ ಹತ್ತಿರ ಕೇಳಲು ನನಗೂ ಭಯ. ಅವರೂ ಅದರ ವಿಚಾರ ಹೇಳಲೇ ಇಲ್ಲ. ತಬಲಾ ಕ್ಲಾಸ್‌ನಲ್ಲಿ ಆಗಲೇ ನಾಲ್ಕೈದು ಹುಡುಗರು ತಾಲೀಮು ನೆಡೆಸುತ್ತಾ ಕುಳಿತಿದ್ದರು. ನನ್ನ ನೋಡಿದ ಕೂಡಲೆ ಮೇಸ್ಟ್ರು "ಬಹಳ ದಿವ್ಸಾ ಆಯ್ತಲ್ಲಪ್ಪಾ.. ಬಂದೇ ಇರ್ಲಿಲ್ಲಾ... ಯಾಕೆ ಹುಶಾರಿರ್ಲಿಲ್ವಾ?" ಎಂದು ಕೇಳಿ ನನ್ನ ಹಾದಿ ಸುಗಮವಾಗಿಸಿಕೊಟ್ಟುಬಿಟ್ಟರು. ನಾನು ಹೌದು ಜ್ವರ ಮತ್ತೆ ವೀಕ್ನೆಸ್ ಇತ್ತು ಎಂದು ಅದಕ್ಕೆ ಮಸಾಲೆ ಹಾಕಿದೆ. ಹುಂ... ಎಂದು ಒಮ್ಮೆ ಮುಗುಳ್ನಕ್ಕು ಅವರೇ ನುಡಿಸುತ್ತಿದ್ದ ತಬಲಾವನ್ನು ನನ್ನ ಕೈಗೆ ಕೊಟ್ಟು ನುಡಿಸು ಎಂದರು. ನಾನು ನನಗೆ ಹೋದತಿಂಗಳು ಹೇಳಿಕೊಟ್ಟಿದ್ದನ್ನು ನುಡಿಸತೊಡಗಿದೆ. ಒಂದು ಇಪ್ಪತ್ತು ನಿಮಿಷ ಹೀಗೇ ನುಡಿಸಿದ ನಂತರ ಮೇಸ್ಟ್ರು ಉಳಿದವರೆಲ್ಲರಿಗೆ ನಿಲ್ಲಿಸಿ ಎಂದರು. ನಾನು ಮಾತ್ರ ನುಡಿಸುತ್ತಾ ಇದ್ದೆ. ಉಳಿದವರಿಗೆ ನನ್ನನ್ನು ತೋರಿಸುತ್ತಾ...
"ನೋಡಿದ್ರಾ... ಇವ್ನು ಒಂದು ತಿಂಗ್ಳು ಪ್ರಾಕ್ಟಿಸ್ ಮಾಡಿರಲಿಲ್ಲ. ಆದ್ರೂ ಒಂಚೂರೂ ಮರೀದೇ ಎಲ್ಲಾ ಸರಿಯಾಗಿ ನುಡಿಸ್ತಾ ಇದಾನೆ. ಬೆರಳಿನ ಮೂವ್‌ಮೆಂಟ್ ನೋಡಿ ಎಷ್ಟು ನೀಟಾಗಿದೆ. ಮೊದ್ಲು ಬಹಳ ಕಷ್ಟಪಟ್ಟಿದಾನೆ. ಅಷ್ಟೇ ಇಂಟರೆಸ್ಟ್ ಇದೆ. ಅದಕ್ಕೇ ಕಲ್ತಿದ್ದನ್ನ ಮರೀಲಿಲ್ಲ. ನೀವೂ ಹೀಗೇ ಆಗ್ಬೇಕು." ಎಂದರು. ನಾನಂತೂ ಹಿಗ್ಗಿನಿಂದ ಬೀಗಿಹೋದೆ.
ಸಂಜೆ ಮನೆಗೆ ಬಂದಾಗ ತಂದೆಯದು ಮತ್ತದೇ ಪ್ರಶ್ನೆ. ಎಲ್ಲೋಗಿದ್ದೆ? ನನ್ನದು ಮತ್ತದೇ ಉತ್ತರ. ತಬ್ಲಾ ಕ್ಲಾಸಿಗೆ. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿಬಿಟ್ಟರು. ಯಾಕೋ ಗೊತ್ತಿಲ್ಲ. ನನಗೆ ತಬಲಾ ಕ್ಲಾಸಿಗೇ ಹೋಗೋಣ ಎನಿಸತೊಡಗಿತು. ಆಗಿನಿಂದ ಒಂದು ವಾರವೂ ತಪ್ಪಿಸದೆ ಹೋಗತೊಡಗಿದೆ. ಕೆಲವು ದಿನಗಳ ನಂತರ ನನ್ನ ತಾಯಿಯಿಂದ ನನಗೆ ಗೊತ್ತಾಯಿತು. ಆ ವಾರ ನಾನು ಕ್ರಿಕೆಟ್ ಆಡುತ್ತಿದ್ದಾಗ ಅವರು ಅಕಸ್ಮಾತ್ ನನ್ನ ತಬಲಾ ಕ್ಲಾಸ್‌ಗೆ ಹೋಗಿಬಿಟ್ಟಿದ್ದರಂತೆ. ಅಲ್ಲಿ ನಾನಿಲ್ಲದಿರುವುದನ್ನು ಕಂಡು ಮೇಸ್ಟ್ರನ್ನು ಕೇಳಿದರೆ ಅವರು ನಾನು ಒಂದು ತಿಂಗಳಿನಿಂದ ಬಾರದುದನ್ನು ತಿಳಿಸಿದರಂತೆ. ನನ್ನ ತಂದೆ ಅಷ್ಟಕ್ಕೇ ಕೋಪಿಸಿಕೊಂಡು ಅವನಿಗೆ ಇವತ್ತು ರಾತ್ರಿ ಮಾಡ್ತೀನಿ ಎಂದು ಕೂಗಾಡಿದಾಗ ನನ್ನ ಮೇಸ್ಟ್ರೇ ನೀವೇನೂ ಹೇಳಬಾರದು. ನಾನು ಪರಿಸ್ಥಿತಿನ ಹ್ಯಾಂಡಲ್ ಮಾಡ್ತೀನಿ ಎಂದಿದ್ದರಂತೆ. ಇವೆಲ್ಲದರ ವಿಚಾರವನ್ನೂ ಎತ್ತದೆ ನನ್ನ ಮನಸ್ಸನ್ನು ತಿದ್ದಿಬಿಟ್ಟಿದ್ದರು.
ಇವತ್ತು ನಾನು ದೊಡ್ಡ ಕ್ರಿಕೆಟರ್ ಆಗಿಲ್ಲ. ಅಥವಾ ದೊಡ್ಡ ತಬಲ್‌ಜಿ ಕೂಡಾ ಆಗಿಲ್ಲ. ತಬಲಾದಲ್ಲಿ ಸೀನಿಯರ್ ಮುಗಿಸಿದ್ದೇನಷ್ಟೆ. ಆದರೆ ಕೊನೆಪಕ್ಷ ನನಗೆ ಭಾರತೀಯ ಸಂಗೀತದಲ್ಲಿ ಆಸಕ್ತಿ ಮೂಡಿದೆ. ಯಾಕಾದರು ಬೇಸರವಾದಾಗ ಹಿಂದುಸ್ತಾನಿ ಸಂಗೀತ ಕೇಳಿದರೆ ಮನಸ್ಸು ಮುದಗೊಳ್ಳುತ್ತದೆ. ಭಾವಗೀತೆಗಳ ಪ್ರಪಂಚದಲ್ಲಿ ಸುಖಿಸುವ ಅದೃಷ್ಟ ದೊರಕಿದೆ. ಇವನ್ನೆಲ್ಲಾ ನನ್ನದಾಗಿಸಿದ ಆ ಅದ್ಭುತ ಗುರುವಿಗೆ ಕೇವಲ ದುಡ್ಡಿನ ರೂಪದಲ್ಲಿ ಗುರುದಕ್ಷಿಣೆ ನೀಡಿ ನಾನು ಋಣಮುಕ್ತಾನಾಗಿದ್ದೇನೆಯೆ? ಅವರಿಗೇ ಗೊತ್ತು.
ನೇತಾಜಿ ಬಾಯ್ಸ್ ಹಾಸ್ಟೆಲ್‌ನಲ್ಲಿ ರೂಮ್ ನಂ 61 ಮತ್ತು 62 ತರಲೆಗಳ ರೂಮು ಎಂದೇ ಪ್ರಸಿದ್ಧ. ಹಾಸ್ಟೆಲ್ಲಿನಲ್ಲಿ ಯಾವುದೇ ಕಿತಾಪತಿ ನೆಡೆದರೂ ಈ ಎರಡು ರೂಮುಗಳಿಂದ ಒಬ್ಬವನಾದರೂ ರಿಪ್ರೆಸೆಂಟೇಟಿವ್ ಅಲ್ಲಿ ಹಾಜರಿರುತ್ತಿದ್ದ. ಹಾಗೆ ನೋಡಿದರೆ ಇಲ್ಲಿದ್ದವರೆಲ್ಲಾ ಸಂಭಾವಿತರೇ. ಆದರೆ ಎಲ್ಲರಲ್ಲೂ ಕುತೂಹಲ ಜಾಸ್ತಿ. ಆದರೆ ಸಿಕ್ಕಿಕೊಳ್ಳದೆ ಜಾರಿಕೊಂಡುಬರುವ ಚಾಕಚಕ್ಯತೆ ಮಾತ್ರ ಯಾರ ಹತ್ತಿರವೂ ಇರಲಿಲ್ಲವೇನೊ. 61ರಲ್ಲಿ ಇಬ್ಬರು ಗೋಕಾಕ್‌ನವರು ಒಬ್ಬ ಹುಬ್ಬಳ್ಳಿಯವ ಮತ್ತು ಇನ್ನೊಬ್ಬ ಗದಗಿನವ. 62ರಲ್ಲಿ ಇಬ್ಬರು ಹುಬ್ಬಳ್ಳಿಯವರು ಒಬ್ಬ ಗೋಕಾಕಿನವ ಮತ್ತೊಬ್ಬ ನಾನು. ಎಲ್ಲರೂ ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡುಬಿಟ್ಟಿದ್ದೆವು. ಏನೇ ಘಟನೆ ನೆಡೆಯಲಿ ಎಲ್ಲರಿಗೂ ಹೇಳಲೇಬೇಕು. ಏನೇ ಸಮಸ್ಯೆ ಬರಲಿ ಎಲ್ಲರೂ ಕೂಡಿ ಬಗೆಹರಿಸಬೇಕು. ಯಾರೇ ಹೊಸಾ ಫಿಗರ್ ಕಾಣಲಿ ಎಲ್ಲರೂ ಕೂಡಿ ಮಾರ್ಕ್ಸ್ ಹಾಕಬೇಕು. ಎಲ್ಲದಕ್ಕೂ ಮಿಗಿಲಾಗಿ ಯಾರೇ ಮನೆಯಿಂದ ಏನೇ ತಿಂಡಿ ತಂದರೂ ಎಲ್ಲರು ಕೂಡಿಯೇ ಖಾಲಿಮಾಡಬೇಕು. ಚುರುಮುರಿ, ಚಕ್ಕುಲಿ, ಕೋಡ್‌ಬಳೆ, ಕರ್ಜಿಕಾಯಿ, ನಾಲ್ಕೈದು ರೀತಿಯ ಉಂಡೆ, ಶೇಂಗಾ ಹೋಳಿಗೆ, ಕರದಂಟು... ತರುತ್ತಿದ್ದ ತಿನಿಸುಗಳಿಗೆ ಲೆಕ್ಕವೇ ಇರಲಿಲ್ಲ.
ಎಲ್ಲರೂ ಒಟ್ಟಿಗೆ ತಿಂಡಿತಿನ್ನುವುದು ಒಂದು ಸಂಪ್ರದಾಯವೇ ಆಗಿಹೋಗಿತ್ತು. ಆದರೆ ಯಾರಾದರೊಬ್ಬ ಬುತ್ತಿಯನ್ನು ತೆರೆದರೆ ಎಲ್ಲರನ್ನೂ ಹೋಗಿ ಕರೆದು ಬರುವ ವ್ಯವಧಾನ ಯಾರಿಗಿರುತ್ತಿತ್ತು? ಇದಕ್ಕಾಗಿ ಒಂದು ವ್ಯವಸ್ಥೆಯನ್ನು ಮಾಡಿಕೊಂಡುಬಿಟ್ಟಿದ್ದೆವು. ಒಂದು ರೂಮಿನಲ್ಲಿ ಬುತ್ತಿ ಓಪನ್ ಆದರೆ ಪಕ್ಕದ ರೂಮಿನವರನ್ನು ಕರೆಯಬೇಕಾದರೆ ಮೂರು ಸಲ ಜೋರಾಗಿ ಗೋಡೆ ಗುದ್ದುವುದು. ರೂಮ್ ನಂ 61 ಮತ್ತು 62ರ ನಡುವೆ ಇದ್ದಿದ್ದು ಒಂದೇ ಗೋಡೆ. ಅದನ್ನೇ ಮೂರುಸಲ ಗುದ್ದಿಬಿಟ್ಟರಾಯಿತು. ಪಕ್ಕದ ರೂಮಿನವರಿಗೆ ಸಿಗ್ನಲ್ ಹೋದಂತೆ. ಇನ್ನು ಬರುವುದು ಬಿಡುವುದು ಅವರ ಕರ್ಮ. ಕೆಲವುಸಲವಂತೂ ಎಲ್ಲೋ ತಿರುಗಾಡಲು ಹೋಗಿದ್ದವರು ವಾಪಸ್ ಬರುವಷ್ಟರಲ್ಲಿ ತಾವೇ ಮನೆಯಿಂದ ತಂದ ತಿಂಡಿ ಖಾಲಿಯಾಗಿಬಿಟ್ಟಿರುತ್ತಿತ್ತು. ಅಕ್ಕ ಪಕ್ಕ ಯಾರನ್ನು ನೋಡಿದರೂ ಈ ಘಟನೆಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಸನ್ಯಾಸಿ ಬೆಕ್ಕಣ್ಣಗಳಂತೆ ಪುಸ್ತಕ ಹಿಡಿದು ಕುಳಿತುಬಿಟ್ಟಿರುತ್ತಿದ್ದರು. ಕೆಲವುಸಲವಂತೂ ತಾವೇ ತಂದ ತಿನಿಸುಗಳು ಖಾಲಿಯಾದದ್ದು ತಿಳಿದುಬರುವುದು ಮತ್ತೊಮ್ಮೆ ತಾವೇ ಬುತ್ತಿ ಬಿಚ್ಚಿದಾಗ ಮಾತ್ರ. ಇದಕ್ಕೋಸ್ಕರ ಯಾರೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಬದಲಾಗಿ ಸೇಡುತೀರಿಸಿಕೊಳ್ಳುವುದಕ್ಕಾಗಿ ಸಮಯಕಾಯುತ್ತಿದ್ದರು.
ಒಂದು ಸಂಜೆ ವಿದ್ಯಾಗಿರಿ ಪೂರ್ತಿ ಕರೆಂಟ್ ಹೋಗಿಬಿಟ್ಟಿತ್ತು. ನಮ್ಮ ಹಾಸ್ಟೆಲ್ ಜನರೇಟರ್ ಉರಿದು ಉರಿದು ಸುಸ್ತಾಗಿ ಮಲಗಿಬಿಟ್ಟಿತ್ತು. ಹಾಸ್ಟೆಲ್ ಪೂರ್ತಿ ಕತ್ತಲಿನ ತೆಕ್ಕೆಗೆ ಜಾರುತ್ತಿತ್ತು. ನಾನು ಮತ್ತು ನನ್ನ ರೂಮ್‌ಮೇಟ್ಸ್ ಹರಟೆ ಕೊಚ್ಚಲು 61ಗೆ ಹೋಗಿದ್ದೆವು. ಸಿಕ್ಕಾಪಟ್ಟೆ ಸೆಕೆ, ಅದರಲ್ಲೂ ಕರೆಂಟಿಲ್ಲ. ಅದಕ್ಕಾಗಿ ರೂಮಿನ ಬಾಗಿಲನ್ನು ಪೂರ್ತಿ ತೆರೆದಿಟ್ಟುಬಿಟ್ಟಿದ್ದೆವು. ನನ್ನ ರೂಮ್‌ಮೇಟ್‌ಗಳಲ್ಲಿ ಸಂತ್ಯಾ ಒಬ್ಬನೇ ಅಲ್ಲೇ ಕೂತು ಕತ್ತಲಲ್ಲಿ ಎನೋ ಓದಲು ಪ್ರಯತ್ನಿಸುತ್ತಿದ್ದ. ಮೊದಲೇ ಓದುವುದು ಅಂದರೆ ಆಗದ ನಮಗೆ ಪರಿಸ್ಥಿತಿಯೂ ಜೊತೆಗೂಡಿದರೆ ಕೇಳಬೇಕೆ? ನಾವು ಇಂಜಿನಿಯರಿಂಗ್ ಮಾಡುತ್ತಿದ್ದೇವೆ ಎನ್ನುವುದನ್ನೇ ಮರೆತುಬಿಡುತ್ತಿದ್ದೆವು. ಸೂರ್ಯ ಮುಳುಗಿ ಪೂರ್ತಿ ಕತ್ತಲಾದಮೇಲೆ ನಮ್ಮವರಲ್ಲೇ ಒಬ್ಬ "ಲೇ... ಸುಮ್ನ ಟೈಮ್ ವೇಸ್ಟ್ ಮಾಡುದು ಬ್ಯಾಡಾ. ಹ್ಯಾಂಗೂ ಇವತ್ತು ರಾತ್ರಿ ಕರೆಂಟು ಬರಾಂಗಿಲ್ಲ. ಎಲ್ಲರೂ ಇಲ್ಲೇ ಕುಂತ್ ಅಂತ್ಯಾಕ್ಷರಿ ಆಡೂಣು." ಎಂದ. "ಮೊದ್ಲು ಹೊಟ್ಟಿ ವಿಚಾರ ಮಾಡ್‌ಪಾ ದೋಸ್ತಾ..." ಎಂದು ಇನ್ನೊಬ್ಬ ಊಟದ ಸಮಯವಾದುದನ್ನು ಎಚ್ಚರಿಸಿದ.
ಅವತ್ತಿನ ಊಟ ಫುಲ್ ರೊಮ್ಯಾಂಟಿಕ್ ಕ್ಯಾಂಡಲ್ ಲೈಟ್ ಡಿನ್ನರ್. ಊಟಕ್ಕೆ ಹೋದಾಗ ನಮ್ಮ ಪ್ಲಾನನ್ನು ಇನ್ನೂ ನಾಲ್ಕು ಜನರಿಗೆ ಹೇಳಿ ನಮ್ಮ ಸಂಖ್ಯೆ ಹೆಚ್ಚಿಸಿಕೊಂಡೆವು. ಶುರುವಾಯಿತು ಕತ್ತಲಿನಲ್ಲಿ ಅಂತ್ಯಾಕ್ಷರಿ. ಯಾರಿಗೂ ಯಾರ ಮುಖವೂ ಕಾಣುತ್ತಿಲ್ಲ. ಪೂರ್ತಿ ಕತ್ತಲು. ರೂಮಿನಲ್ಲಿದ್ದ ಒಟ್ಟೂ ನಾಲ್ಕು ಮಂಚಗಳ ಮೇಲೆ ಹದಿನೈದಿಪ್ಪತ್ತು ಜನ ಕುಳಿತೆವು. ಯಾರ್ಯಾರು ಎಲ್ಲೆಲ್ಲಿ ಕುಳಿತಿದ್ದರೋ ಒಬ್ಬರಿಗೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಎರಡು ಮಂಚದ ಜನ ಓಂದುಕಡೆ ಇನ್ನುಳಿದವರು ಇನ್ನೊಂದುಕಡೆ ಎಂದು ನಿರ್ಧರಿಸಿಯಾಗಿತ್ತು. ಹಾಡುಗಳೇನೋ ಪ್ರಾರಂಭವಾದವು. ಆದರೆ ಅದನ್ನು ಹಾಡುತ್ತಿರುವವರು ಯಾವ ಪಕ್ಷದವರು ಎಂದೇ ತಿಳಿಯುತ್ತಿರಲಿಲ್ಲ. ಒಂದುಕಡೆಯಿಂದ ಶಬ್ದ ಶುರುವಾಗುತ್ತಿತ್ತು. ಅದಕ್ಕೆ ಎಲ್ಲರೂ ಧ್ವನಿಗೂಡಿಸುತ್ತಿದ್ದರು. ಯಾವ ತಂಡದವನೇ ಹಾಡಲಿ ಎಲ್ಲರೂ ಒಟ್ಟಾಗಿ ಘಟ್ಟಿಧ್ವನಿಯಲ್ಲಿ ಒದರಲು ಶುರುಮಾಡಿಬಿಟ್ಟರು. ಈ ಒದರಾಟ ಹಾಸ್ಟೆಲ್ ಪೂರ್ತಿ ಕೇಳಿ ಅಕ್ಕಪಕ್ಕದ ರೂಮಿನವರು ಪಕ್ಕದ ವಿಂಗಿನವರು ಎಲ್ಲರೂ ಬಂದು ಸೇರಿಬಿಟ್ಟಿದ್ದರು. ಎಷ್ಟು ಜನಬಂದು ಸೇರುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಧ್ವನಿಗಳು ಬಹಳವಾಗುತ್ತಿದ್ದುದು ಮಾತ್ರ ಎಲ್ಲರ ಗಮನಕ್ಕೆ ಬರುತ್ತಲಿತ್ತು.
ಬರುಬರುತ್ತ ಕೇವಲ ಹಾಡಷ್ಟೇ ಅಲ್ಲದೆ ಯಾರೋ ಯಾರಿಗೋ ಹೊಡೆದು ಅವರು ಒದರಿಕೊಳ್ಳುವ ಶಬ್ದ. ಸಖಾಸುಮ್ಮನೆ ಚೀರಾಟಗಳು ಬೈಗುಳಗಳು ಎಲ್ಲವೂ ಶುರುವಾಗಿಬಿಟ್ಟವು. ಹೇಗೂ ಯಾರಿಗೂ ಮುಖ ಕಾಣುತ್ತಿಲ್ಲ. ಎಲ್ಲರೂ ತಮ್ಮ ಬಯ್ಯುವ ಚಟವನ್ನು ತೀರಿಸಿಕೊಳ್ಳಲು ಶುರುಮಾಡಿಬಿಟ್ಟರು. ಈಗ ಅವರ ಧ್ವನಿಯಲ್ಲದೆ ಬೇರೆಯವರ ರೀತಿ ಅಥವಾ ವಿಚಿತ್ರವಾದ ಸ್ವರದಲ್ಲಿ ಕೂಗತೊಡಗಿದರು. ಅಲ್ಲಿ ಏನು ನೆಡೆಯುತ್ತಿದೆ ಎಂದೇ ಯಾರಿಗೂ ಗೊತ್ತಾಗುತ್ತಿಲ್ಲ. ಇದು ಹೀಗೇ ಮುಂದುವರಿದರೆ ವಾರ್ಡನ್ ಬಂದೇ ಬರುತ್ತಾರೆ ಎಂದು ಊಹಿಸಿ ಒಬ್ಬೊಬ್ಬರೇ ಜಾಗ ಖಾಲಿಮಾಡಲು ನಿಶ್ಚಯಿಸಿದೆವು. ಅಷ್ಟರಲ್ಲಿ ಒಬ್ಬನ ಚೀರಾಟ ತಾರಕಕ್ಕೇರಿತು. ಎಲ್ಲರೂ ಸ್ವಲ್ಪ ಹೆದರಿದರೋ ಏನೊ... ರೂಮು ಸ್ವಲ್ಪ ಶಾಂತವಾಯಿತು. "ಥೂ ನನ್ ಮಕ್ಳಾ... ಹಿಂಗಾ ಒದ್ರೂದು... ಯಾರೋ ಹೊರ್ಗಿಂದ ಬಾಗ್ಲಾ ಹಾಕ್ ಹೋಗ್ಯಾರ... ಮೊದ್ಲು ಬಾಗ್ಲು ತೆಗಸ್ರಪ್ಪ... ಸೆಕಿ ತಡ್ಕೊಲಾಕಾಗ್ವಲ್ದು" ಎಂದಿತು ಯಾವುದೋ ಒಂದು ಧ್ವನಿ. ಹೋಗಿ ನೋಡಿದರೆ ನಿಜವಾಗಿಯೂ ಬಾಗಿಲು ಹಾಕಿತ್ತು. ಎಷ್ಟು ಜಗ್ಗಿದರೂ ಬರುತ್ತಿರಲಿಲ್ಲ. ಕತ್ತಲಲ್ಲಿ ಒಳಗಿಂದಲೇ ಬೋಲ್ಟ್ ಹಾಕಿಲ್ಲವಲ್ಲಾ ಎಂದೂ ಚೆಕ್ ಮಾಡಿ ಆಯಿತು. ಹೊರಗಡೆಯಿಂದ ಬಾಗಿಲು ಹಾಕಿರುವುದು ಕನ್‌ಫರ್ಮ್ ಆಯಿತು.
"ಯಾವ್ ಹಲ್ಕಟ್ ಸೂಳಾಮಗಾಲೇ ಅವ..." ಶುರುವಾಯಿತು ಸಂಸ್ಕೃತದ ಸುರಿಮಳೆ. ಆ ಮಗ. ಈ ಮಗ. ಎಲ್ಲರ ಕಿವಿ ಪಾವನವಾಗುವವರೆಗೆ ಹೊರಗಡೆಯಿಂದ ಚಿಲಕ ಹಾಕಿದವನಿಗೆ ಸಹಸ್ರನಾಮ ಪೂಜೆಯಾಯಿತು. "ಲೇ ಸುಮ್ನ ಬೈತಾ ಕುಂತ್ರ ಏನೂ ಆಗಾಂಗಿಲ್ಲ. ಈಗ ಬಾಗ್ಲು ಹ್ಯಾಂಗ್ ತೆಗ್ಯೂದು ಅಂತ್ ಯೋಚ್ನಿ ಮಾಡ್ರಿ" ಎಂದಿತು ಒಂದು ಬುದ್ಧಿವಂತ ಧ್ವನಿ. ಆಗ ನನ್ನ ರೂಂಮೇಟ್ ಒಂದು ಉಪಾಯ ಸೂಚಿಸಿದ. ನಮ್ಮ ರೂಮಿನಲ್ಲಿ ಸಂತ್ಯಾ ಓದುತ್ತ ಕುಳಿತಿದ್ದ. ಅವನಂತೂ ಇಲ್ಲಿ ಬಂದಿರಲಿಲ್ಲ. ಅವನನ್ನು ಕರೆಯುವುದು ಎಂದು. ಸರಿ... ನಮ್ಮ ಮಾಮೂಲಿ ಕೋಡ್ ಸಿಗ್ನಲ್ ಬಳಸಿದೆವು. ಗೋಡೆಯನ್ನು ಬಡಿಯತೊಡಗಿದರು. ಸಂತ್ಯಾ ಮಲಗಿದ್ದವ ಎದ್ದು ಓಡೋಡಿ ಬಂದ. ಹೊರಗಿನಿಂದಲೇ ಅವನ ಧ್ವನಿ ಕೇಳಿಸುತ್ತಿತ್ತು.
"ಲೇ... ಎಲ್ಲಾ ಖಾಲಿ ಮಾಡ್ಬೇಡ್ರಲೇ.. ಮಕ್ಳಾ ಬಾಗ್ಲಾ ಹಾಕ್ಕೊಂಡ್ ಕೂತೀರೀ... ತೆಗೀರಲೇ..."
ಅವನಿಗೆ ತಿಳಿಸಿ ಹೇಳಲಾಯಿತು. ಆದರೆ ಪರಿಸ್ಥಿತಿ ಅಷ್ಟು ಸರಳವಾಗಿರಲಿಲ್ಲ. ನಮ್ಮ ಚೀರಾಟ ಕೂಗಾಟಗಳನ್ನು ಕೇಳಿ ಹಾಸ್ಟೆಲ್ ಮ್ಯಾನೇಜರ್ ಬಂದು ನೋಡಿ, ಬಾಗಿಲನ್ನು ಹೊರಗಿನಿಂದ ಹಾಕಿ ಅದಕ್ಕೆ ದೊಡ್ಡದೊಂದು ಬೀಗವನ್ನು ಹಾಕಿ ಹೋಗಿದ್ದ. ಸಂತ್ಯಾನಿಗೆ ಒಳಗಿಂದಲೇ ಆರ್ಡರ್ ಹೋಗಿತ್ತು. ಹೇಗಾದರೂ ಮಾಡಿ ಅದನ್ನು ಮುರಿ ಎಂದು. ಅವನು ಅದಕ್ಕೇ ಜೋತುಬಿದ್ದರೂ ಅವನಿಂದ ಏನೂ ಮಾಡಲಾಗಲಿಲ್ಲ.
ಹತ್ತು ನಿಮಿಷದಲ್ಲಿ ಮ್ಯಾನೇಜರ್ ವರ್ಡನ್ ಜೊತೆ ಬಂದು ರೂಮಿನ ಬಾಗಿಲು ತೆಗೆದ. ಎಲ್ಲರಿಗೂ ಮಧ್ಯರಾತ್ರಿ ಮಂಗಳಾರತಿಯಾಯಿತು. ಮ್ಯಾನೇಜರ್ ತಂದಿದ್ದ ಒಂದು ಪೆನ್ ಟಾರ್ಚ್‌ನಿಂದ ಎಲ್ಲರ ಮುಖಕ್ಕೆ ಬೆಳಕು ಬಿಟ್ಟು ವಾರ್ಡನ್‌ಗೆ ಎಲ್ಲರನ್ನೂ ಪರಿಚಯಿಸಿದ. ಎಲ್ಲರೂ ಸೇರಿ ಒಂದು ಕ್ಷಮಾಪಣಾ ಪತ್ರ ಬರೆದುಕೊಡಬೇಕೆಂದು ವಾರ್ಡನ್ ಆಜ್ಞೆ ಹೊರಡಿಸಿ ಹೋದರು. ಒಂದು ಮೇಣದಬತ್ತಿ ಬೆಳಕಿನಲ್ಲಿ ಪತ್ರವೂ ತಯಾರಾಯಿತು. ಅದರ ಮೇಲೆ ಎಲ್ಲರೂ ಸಹಿಮಾಡಿಕೊಟ್ಟರು. ಆ ಪತ್ರವನ್ನು ತೆಗೆದುಕೊಂಡು ಮ್ಯಾನೇಜರ್ ಹೊರಟುಹೋದ. 61, 62ರೂಮುಗಳು ಮತ್ತೊಮ್ಮೆ ಪ್ರಸಿದ್ಧಿ ಪಡೆದಿದ್ದವು. ಆದರೆ ಆಗತಾನೇ ನಿದ್ದೆಗಣ್ಣಿನಿಂದ ಎದ್ದು ಬಂದಿದ್ದ ಸಂತ್ಯಾ ಮಾತ್ರ ಕೇಳುತ್ತಿದ್ದ... "ಇಷ್ಟೊಂದ್ ಮಂದಿ ಇಲ್ಯಾಕ್ ಬಂದ್ ಕಿರ್ಚಾಡಾಕತ್ತಿದ್ರಿ?". ನಾವು ಅಂತ್ಯಾಕ್ಷರಿ ಆಡುತ್ತಿದ್ದೆವು ಎಂದು ಯಾರಿಗೂ ಅನ್ನಿಸಿರಲೇ ಇಲ್ಲ.

ಮೊನ್ನೆ ರೇಡಿಯೋ ಮಿರ್ಚಿಯಲ್ಲಿ ಪಲ್ಲವಿ ನೆಡೆಸಿಕೊಡುವ ಮಿರ್ಚಿ talkies ಕೇಳುತ್ತಾ ಇದ್ದೆ. ಕರ್ಣ ಚಿತ್ರದ ’ಪ್ರೀತಿಯೆ ನನ್ನುರಿಸು’ ಹಾಡು ಪ್ರಸಾರವಾಗುತ್ತಿತ್ತು. ಇದು ’ಪ್ಯಾರ್ ಬಿನ ಚೈನ್ ಕಹಾಂ ರೇ’ ಹಾಡಿನ ರೀಮಿಕ್ಸು. ಅಲ್ಲಾ... ನಮ್ಮಲ್ಲಿ ಈ ರೀಮಿಕ್ಸಿನ ಚಟ ಯಾವಾಗಿಂದಲೋ ಇದೆಯಲ್ಲಾ... ಎಂದುಕೊಳ್ಳುತ್ತಿದ್ದೆ. ಅಷ್ಟಕ್ಕೂ ಒಳ್ಳೆಯದನ್ನ ಕಲಾತ್ಮಕವಾಗಿ ಕನ್ನಡೀಕರಿಸಿದರೆ ತಪ್ಪೇನು ಅನಿಸಿತು. ಅದರ ಜೊತೆಗೇ, ನಿಜವಾಗಿಯೂ ಈ ವಾಯುಮಾಲಿನ್ಯದ ನಡುವೆಯೂ ನಮಗೆ ಪ್ರೀತಿಯೇ ಉಸಿರಾಗಿದೆಯೇ ಎಂದು ಯೋಚಿಸತೊಡಗಿದೆ. ಆಗಿನ ಕಾಲದ ಜನರಿಗೆ ಪ್ರೀತಿಯೇ ಉಸಿರಾಗಿತ್ತೋ ಏನೊ. ಈಗಂತೂ ಬಿ. ಅರ್. ಲಕ್ಷ್ಮಣ್‌ರಾವ್ ಹೇಳಿದಂತೆ,
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂಥೆಯೇ ಅದು ಥೇಟು
ಬಿಡಬಲ್ಲೆನೇನೆ ನಿನ್ನಾ
ಚಿನ್ನಾ ಹಾಗೆಯೇ ಸಿಗರೇಟನ್ನ
ಎನ್ನುವ ಕಾಲ. ಆದ್ದರಿಂದ ಖಂಡಿತ ಜನರಿಗೀಗ ಧೂಮವೇ ಉಸಿರಾಗಿಬಿಟ್ಟಿದೆ! ಸಿಗರೇಟ್ ಧೂಮದ ಉಂಗುರಗಳ ಗುಂಗಿನಲ್ಲಿ ಈ ರೀಮಿಕ್ಸಿನ ರೀಮಿಕ್ಸ್.
ಧೂಮವೆ ನನ್ನುಸಿರು
ಧೂಮವೆ ನನ್ನುಸಿರು
ದಿನವೂ ಹಗಲು ಸಂಜೆ ರಾತ್ರಿ ಎಲ್ಲೆಂದರೆಲ್ಲಿ
ಹೊಗೆ ಕುಡಿಯುವುದೇ
ಸಿಗರೇಟ್ ಹೊಗೆಯನು ಕುಡಿಯುವುದು
ಕುಡಿಯುತ ಹರುಷವ ಪಡೆಯುವುದು
ಬಾನಲಿ ಉಂಗುರ ಬಿಡಿಸುವುದು
ಸ್ವರ್ಗವು ಇದುವೇಎನ್ನುವುದು
ಹರುಷದಿ ಪರಿಸರ ಕೆಡಿಸುವುದು
ಧೂಮದ ಕಾಟಕೆ ಜಗವೆಲ್ಲ
ಸೊರಗಿ ಹೋಗಿದೆ ಸುಳ್ಳಲ್ಲ
ಸಿಗರೇಟ್ ಸೇವನೆ ನಿಲ್ಲಲ್ಲ
ಹೊಗೆಕುಡಿದವಗೆ ಮುಪ್ಪಿಲ್ಲ
ಯೌವನ ಮುಗಿಯುತೆ ನಾನಿಲ್ಲ
ಒರಿಜಿನಲ್ ಸೌಂಡ್‌ಟ್ರಾಕ್ ಕೇಳಬಯಸುವವರು ಇಲ್ಲಿ ಕ್ಲಿಕ್ಕಿಸಿ.