Thursday, August 12, 2010

ನಿತ್ಯಾನಂದರ ಕನಸು



ಶ್ರಾವಣ ಶುರುವಾಯಿತು. ನಿತ್ಯಾನಂದರು ಪಂಚಾಗ್ನಿ ಹೋಮ ಮಾಡಿ ಪವಿತ್ರರಾಗಿದ್ದಾರೆ. ಬಹಳ ದಿನಗಳ ವಿರಹ ಬೇಗೆಯಿಂದ ಬಳಲಿದ್ದಾರೆ. ಇತ್ತಕಡೆ ಅವರ ಸೇವಕಿ ರಂಜಿತೆಯೂ ವಿರಹಿಯಾಗಿ ನೊಂದಿದ್ದಾಳೆ. ಅಹಲ್ಯೆಯದ್ದು ಭಾರತದ ಮೊದಲ ಸೆಕ್ಸ್ ಕಾಂಡ ಎಂದು ಹೇಳಿ ತಮ್ಮ ಬುದ್ಧಿಮತ್ತೆಯನ್ನು ತೋರಿರುವ ಸ್ವಾಮಿಗಳು, ರಂಜಿತೆ ಅತ್ಯಂತ ಒಳ್ಳೆಯ ಸೇವಕಿ ಎನ್ನುವುದರ ಮೂಲಕ ತಾವು ನೊಂದವರ ಕೈ ಬಿಡುವಂಥವರಲ್ಲ ಎಂದು ಸಾರಿದ್ದಾರೆ. ಮೊನ್ನೆ ಉಪನ್ಯಾಸ ಮಾಡುತ್ತಿದ್ದಾಗ ರಂಜಿತೆಯ ನೆನಪಾದಾಗ ಹಾಗೇ ಕನಸಿನಲ್ಲಿ ಮುಳುಗಿದರು...

ಲೊಕೇಷನ್ ಛೇಂಜ್...

ಒಂದು ಗುಡ್ಡ. ಅದರ ಮೇಲೆ ಒಂದೇ ಒಂದು ಮರ. ಮರದ ತುಂಬಾ ಹೂವು. ಕೆಳಗೆ ಧ್ಯಾನಸ್ಥರಾಗಿ ನಿತ್ಯಾನಂದರು. ಒದೊಂದೇ ಹೂವಿನ ಪೂಜೆ ಇವರಿಗೆ ಸಾಲದೆಂದು ಇಡೀ ಮರವನ್ನೇ ಅಲುಗಾಡಿಸಿ ಹೂವಿನ ಮಳೆಗರೆಯುತ್ತಿರುವ ರಂಜಿತೆ! ಹೂವಿನ ಮಳೆಗೆ ನಿತ್ಯಾನಂದರಿಗೆ ಎಚ್ಚರವಾಗಿ ಸುತ್ತಲೂ ನೋಡಿದಾಗ ಕಂಡವಳು, ಬಿಳಿಯ ಸೀರೆಯನುಟ್ಟ ಸುಂದರ ಸೇವಕಿ ರಂಜಿತೆ! ಮನದೊಳಗಿನಿಂದ ಹಾಡೊಂದು ಹುಟ್ಟಿದೆ!

ಎಂದೆಂದೂ ರಂಜಿತೆ ನಿನ್ನ ಕೈ ಬಿಡಲಾರೆ
ಸ್ವಾಮಿಯೆ ನಿಮ್ಮ ಮೊಗದಲಿ ಕಂಡೆ ನಗುವಿನ ಧಾರೆ
ದೇವರಾಣೆ ಮನವನು ಗೆದ್ದ ಸೇವಕಿಯು ನೀನೆ
ನೀವೆ ನನ್ನ ದೇವತೆ ಎಂದೂ ಬೇರೇನನು ಕಾಣೆ

ರಂಜಿತೆ ಧ್ಯಾನದ ವೇಳೆ ಮುಗಿಯಿತು ಬಾರೆ
ಮೈ ಕೈ ನೋವಿಗೆ ಮದ್ದು ನೀಡೆಲೆ ತಾರೆ
ನೀ ಗುರುವಾಗಿರೆ ಮನವದು ನಲಿದಿರೆ
ನಾ ನಿಮ್ಮ ಸೇವೆಯನ್ನು ಎಂದು ಮಾಡುವೆ ಮಾಡುವೆ ಮಾಡುವೆ

ಸ್ವಾಮಿಯೆ ನಿಮ್ಮಯ ಮೈಗೆ ಎಣ್ಣೆಯ ಹಚ್ಚಿ
ಸೇವೆಯ ಮಾಡುವೆ ಬನ್ನಿ ಕದವನು ಮುಚ್ಚಿ
ಈ ಜನರ ಮೋಸವ ನಾನರಿಯದಾದೆನು
ಮರೆಯದೆ ಸುತ್ತ ನೋಡಿ ಕ್ಯಾಮರಾ ಹುಡುಕುವೆ ಹುಡುಕುವೆ ಹುಡುಕುವೆ

ಸಾವಿರ ಜನುಮವೆ ಬರಲಿ ಬೇಡುವುದೊಂದೇ
ಬೆಡ್‌ರೂಮಲ್ಲಿ ಕ್ಯಾಮರಾ ಇಡದಿರು ತಂದೆ
ಹೇಗೊ ಅಡ್ಜಸ್ಟ್ ಮಾಡಿಹೆ ಜನಕೆ ಟೋಪಿ ಹಾಕಿಹೆ
ಮುಂದೆಯೂ ಜನರು ಮರುಳು ಆದರೆ ಕಿರಿಯುವೆ ಹಲ್ ಕಿರಿಯುವೆ ಹಲ್ ಕಿರಿಯುವೆ

ಪಕ್ಕದಲ್ಲಿರುವವರು "ಸ್ವಾಮೀಜಿ ಸಮಾಧಿಸ್ತರಾಗಿಬಿಟ್ಟಿದ್ದಾರೆ! ಎಲ್ಲರೂ ದೇವರ ನಾಮ ಹೇಳಿರಿ." ಎಂದಾಗಲೇ ನಿತ್ಯಾನಂದರಿಗೆ ಎಚ್ಚರವಾದದ್ದು.
"ದೇವರನ್ನು ಸುಲಭವಾಗಿ ಹುಡುಕಿಬಿಡಬಹುದು... ಹಿಡನ್ ಕ್ಯಾಮರಾಗಳನ್ನು ಹುಡುಕುವುದು ಮಾತ್ರ ಬಲು ಕಷ್ಟ!" ಎಂದು ಪ್ರವಚನ ಮುಗಿಸಿದರು.

ಎಲ್ಲರೂ ನಿತ್ಯ ಆನಂದವನ್ನು ಹೊಂದಿರಿ.
ಹರಿಃ ಓಂ ತತ್ ಸತ್. ನಿತ್ಯಾರ್ಪಣಮಸ್ತು!

[ವಿ.ಸೂ.: ಇದು ಕೇವಲ ಕಾಲ್ಪನಿಕ! ಈ ಘಟನಗೆ ಅಥವಾ ವ್ಯಕ್ತಿಗೆ ಯಾವುದೇ ಹೋಲಿಕೆಯಾದರೆ ಅದು ನಮ್ಮ ದುರ್ದೈವ!]