Thursday, April 17, 2008

ಘಟ್ಟಿ ಕೂತ್ಗೋರಿ....

"ವಿದ್ಯಾಗಿರಿಗೆ ಬರ್ತೀರೇನ್ರಿ?"
"ನೂರು ರುಪಾಯಿ ಆಕ್ಕೇತಿ ನೋಡ್ರಿ"
ನೂರು ರೂಪಾಯಾ? ನಮ್ಮ ಹತ್ತಿರ ಇಪ್ಪತ್ತು ರೂಪಾಯಿಗೆ ಒಂದು ಪೈಸೆಯೂ ಹೆಚ್ಚು ಇರಲಿಲ್ಲ. ರಾತ್ರಿ ಹನ್ನೊಂದುವರೆ ಆಗಿಬಿಟ್ಟಿತ್ತು. ಬಾಗಲ್ಕೋಟ್ ಸಿಟಿಯಿಂದ ವಿದ್ಯಾಗಿರಿಗೆ ಹೋಗುವ ಕೊನೆಯ ಬಸ್ಸು ರಾತ್ರಿ ಹತ್ತು ಗಂಟೆಗಾಗಲೇ ಹೊರಟುಹೋಗಿತ್ತು. ರಾತ್ರಿ ಹೇಗಪ್ಪಾ ಮನೆಮುಟ್ಟುವುದು ಎಂದು ನಮ್ಮ ತಲೆಬಿಸಿ ನಮಗಾದರೆ, "ಅಪ್ಪನ ರೊಕ್ಕ ಕುಡ್ಯಾಕ್ ಖರ್ಚು ಮಾಡಾಕ್ ಬರ್ತೈತಿ... ಆಟೋಕ್ಕೆ ಕೊಡಾಕ್ ಬರಾಂಗಿಲ್ಲಾ?" ಎಂದು ಆ ಆಟೋ ಡ್ರೈವರ್ ಬೇರೆ ರೇಗಿಸುತ್ತಿದ್ದ. ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿ. ಅಲ್ಲಿದ್ದವರು ನಾವಿಬ್ಬರು ಮತ್ತೆ ಆ ಆಟೋಡ್ರೈವರ್ ಅಷ್ಟೇ. ಸುತ್ತಮುತ್ತಲೂ ಒಂದು ನರಪಿಳ್ಳೆಯೂ ಓಡಾಡುತ್ತಿರಲಿಲ್ಲ. ಗುರುಸಿದ್ದೇಶ್ವರ ಚಿತ್ರಮಂದಿರದ ಎದುರಿದ್ದ ಸೋಡಿಯಂ ಲ್ಯಾಂಪೊಂದು ಆವರಿಸಿದ್ದ ಕತ್ತಲನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿತ್ತು. ಅಪರೂಪಕ್ಕೆ ಒಂದೊಂದು ಟ್ರಕ್ಕು ಆ ಮಾರ್ಗವಾಗಿ ಹೋಗುತ್ತಿದ್ದವು. ಎಲ್ಲ ಟ್ರಕ್ಕುಗಳಿಗೂ ಕೈ ಮಾಡಿ ಮಾಡಿ ಕೈಸೋತವೇ ಹೊರತೂ ಯಾವ ಟ್ರಕ್ಕೂ ನಿಲ್ಲಲಿಲ್ಲ.

ಆದಿನ ಸಂಜೆ ನಾಳೆಯ ನಾಟಕದ ಪ್ರದರ್ಶನಕ್ಕಾಗಿ ತಯಾರಿ ನೆಡೆದಿತ್ತು. ನಾಳೆ ಬೆಳಿಗ್ಗೆ ಆರು ಗಂಟೆಗೆ ಬೆಳಗಾವಿಗೆ ನಾಟಕದ ಕಾಂಪಿಟೇಷನ್‌ಗೆ ಹೋಗಬೇಕಿತ್ತು. ಸ್ಟೇಜ್ ಹಿಂದೆ ಹಾಕಲು ನೀಲಿ ಪರದೆ ಅಲ್ಲಿ ಬಹುಶಃ ಸಿಗಲಿಕ್ಕಿಲ್ಲ ಎಂದು ಊಹಿಸಿದ್ದ ನಮ್ಮ ಡೈರೆಕ್ಟರ್ ನನ್ನ ಮತ್ತು ಪವನನನ್ನ ನೀಲಿ ಪರದೆ ಕೇಳಿಕೊಂಡು ತರಲು ಬಾಗಲ್ಕೋಟ್ ಸಿಟಿಯಲ್ಲಿದ್ದ ಅರ್.ಎಸ್.ಎಸ್ ಕಾರ್ಯಾಲಯಕ್ಕೆ ಕಳಿಸಿದ್ದರು. ನೀಲಿ ಪರದೆಯೇನೋ ಸಿಕ್ಕಿತು. ಆದರೆ ಅಲ್ಲಿಯ ಪರಿಚಿತರೊಂದಿಗೆ ಮಾತನಾಡುತ್ತಾ ಹೊತ್ತು ಹೋಗಿದ್ದೇ ಗೊತ್ತಾಗದೆ ನಮ್ಮ ಪವನ ಸಾಹೇಬ್ರು ವಾಪಸ್ ಹೊರಡುವುದನ್ನು ತುಂಬ ತಡಮಾಡಿಬಿಟ್ಟಿದ್ದರು. ವಿದ್ಯಾಗಿರಿಯಿಂದ ಬಾಗಲ್ಕೋಟೆ ಸಿಟಿಯಿರುವುದು ಕನಿಷ್ಟಪಕ್ಷ ಐದಾರು ಕಿಲೋಮೀಟರ್ ದೂರದಲ್ಲಿ. ದಾರಿಮಧ್ಯ ಸಿಮೆಂಟ್ ಫ್ಯಾಕ್ಟರಿ ಬಿಟ್ಟರೆ ಬೇರೆ ಏನೂ ಇಲ್ಲ. ನೆಡೆದುಕೊಂಡು ಹೋಗುವುದಕ್ಕೆ ಅದರಲ್ಲೂ ಮಧ್ಯರಾತ್ರಿಯಲ್ಲಿ, ನಮಗಂತೂ ಧೈರ್ಯವೇ ಇರಲಿಲ್ಲ. ಬಸ್ಟ್ಯಾಂಡಿಗೆ ಬರುವಷ್ಟರಲ್ಲೇ 10:45 ಆಗಿಬಿಟ್ಟಿತ್ತು. ಯಾವುದಾದರೂ ಗಾಡಿ ಸಿಗಬಹುದೇನೋ ಎಂದು ಕಾಯುತ್ತಾ ಒಂದು ಗಂಟೆಯಾದರೂ ಯಾವ ಗಾಡಿಯೂ ನಮ್ಮ ಕೈಹತ್ತಲಿಲ್ಲ. ಉಳಿದಿದ್ದ ಒಂದೇ ಒಂದು ಮಾರ್ಗವೆಂದರೆ ಆ ಆಟೋ ಹತ್ತಿ ಹೋಗುವುದು. ಅವನನ್ನು ಕೇಳಿದರೆ ನೂರು ರೂಪಾಯಿ ಹಾಗೆ ಹೀಗೆ ಅಂದುಬಿಟ್ಟ. ನಾವು ಅಷ್ಟೆಲ್ಲ ಆಗಲ್ಲಪ್ಪಾ ಎಂದಿದ್ದಕ್ಕೆ ಕುಡುಕರು ಗಿಡುಕರು ಎಂದು ನಮ್ಮ ಸ್ವಾಭಿಮಾನ ಬೇರೆ ಕೆರಳಿಸಿಬಿಟ್ಟ. ಏನೇ ಆಗಲಿ ಮತ್ತೆ ಅವನ ಹತ್ತಿರ ಮಾತ್ರ ಹೋಗುವುದು ಬೇಡ ಎಂದು ನಿರ್ಧರಿಸಿಬಿಟ್ಟೆವು.

"ಎಲ್ಲಾ ನಿಮ್ಮಿಂದಾನೇ..." ರಾಗ ಎಳೆದೆ.
"ಲೇ... ಅಪ್ರೂಪಕ್ಕೆ ಸಿಕ್ಯಾರ... ಬಿಟ್ ಬರಾಕ್ ಆಕ್ಕೇತೇನ್ಲೆ?" ಅವರ ಉತ್ತರ. ಮತ್ತೆ ಇಬ್ಬರೂ ಆಕಡೆಯ ರೋಡಿನ ತುದಿಗೆ ನೋಡಲು ಪ್ರಾರಂಭಿಸಿದೆವು. ಯಾವ ಗಾಡಿಯ ಸುಳಿವೂ ಇಲ್ಲ. ರಾತ್ರಿ ಹೋಗಿ ಇನ್ನೊಂದಿಷ್ಟು ಸ್ಟೇಜ್ ತಯಾರಿ ಬೇರೆ ಮಾಡಬೇಕಿತ್ತು. ಅದು ಹಾಳಾಗಿ ಹೋಗಲಿ, ಹೇಗೋ ಓಟ್ಟಿನಲ್ಲಿ ರೂಮು ತಲುಪಿದರೆ ಸಾಕಾಗಿತ್ತು. ಈ ಸ್ಮಶಾನ ಮೌನದ ನಡುವೆ ಒಂದು ಬೈಕಿನ ಶಬ್ದ ಕೇಳಿಸಿತು. ನಾವಿಬ್ಬರಿದ್ದುದರಿಂದ ಆ ಬೈಕ್‌ಮೇಲಂತೂ ಹೋಗಲಿಕ್ಕಾಗುವುದಿಲ್ಲ ಎಂದು ಸುಮ್ಮನೆ ನಿಂತೆವು. ಆ ಬೈಕ್ ಸವಾರನೋ ಅಂಗಿಯ ಗುಂಡಿಗಳನ್ನು ಅರ್ಧಕ್ಕರ್ಧ ಬಿಚ್ಚಿಕೊಂಡು ಆಕಡೆ ಈಕಡೆ ಒಂದು ಚೂರೂ ನೋಡದೆ ಸಿಕ್ಕಪಟ್ಟೆ ಸ್ಪೀಡಾಗಿ ಓಡಿಸುತ್ತಾ ನಮ್ಮ ಮುಂದೆಯೇ ಹಾದು ಹೋದ. ಮತ್ತೆ ಹತ್ತು ನಿಮಿಷಗಳ ಮೌನ. ಪುನಃ ಮತ್ತೊಂದು ಬೈಕಿನ ಶಬ್ದ ಕೇಳಿಸತೊಡಗಿತು. ಬೈಕ್ ಹತ್ತಿರ ಬಂದಾಗ ನೋಡಿದರೆ, ಹತ್ತು ನಿಮಿಷದ ಹಿಂದೆ ಯಾವ ಬೈಕ್ ನಮ್ಮೆದುರಿಗೆ ಹಾದು ಹೋಗಿತ್ತೋ ಅದೇ ಬೈಕ್. ಆ ಬೈಕ್ ಓಡಿಸುವವ ಮತ್ತದೇ ಪೊಸಿಶನ್‌ನಲ್ಲಿ ಅಂಗಿ ಗುಂಡಿಗಳನ್ನು ಬಿಚ್ಚಿಕೊಂಡು ಮತ್ತದೇ ವೇಗದಲ್ಲಿ ನಮ್ಮೆದುರಿಂದಲೇ ಹಾದುಹೋದ. ನಾವಿಬ್ಬರು ಮುಖ ಮುಖ ನೋಡಿಕೊಂಡೆವು.

ಇನ್ನೇನೂ ಮಾಡಲು ತೋಚದೆ ನಾವಿಬ್ಬರೂ ಗರುಡಗಂಬಗಳಂತೆ ರಸ್ತೆ ಬದಿಯಲ್ಲಿ ನಿಂತಿರುವಾಗ ಪರಿಚಯದವರೊಬ್ಬರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಅವರ ಕೆಲಸ ಅಲ್ಲಿನ ಪ್ರಾದೇಶಿಕ ಪತ್ರಿಕೆಯಲ್ಲಾದುದರಿಂದ ಬಹಳ ಹೊತ್ತು ಇರಬೇಕಾದ ಪರಿಸ್ಥಿತಿಯಿತ್ತು. ಅಂತೂ ಒಬ್ಬರಾದ್ರೂ ಸಿಕ್ರಲ್ಲ ಎಂದುಕೊಂಡು ಹೀಗಾಗಿಬಿಟ್ಟಿದೆ ನಮ್ಮ ಪರಿಸ್ಥಿತಿ ಎಂದು ಹೇಳಿಕೊಂಡೆವು. ಅವರಿಗೆ ಬೆಳಿಗ್ಗೆಯೇ ಅವರ ಗಾಡಿ ಬೇಕಿತ್ತಂತೆ. ಇಲ್ಲದಿದ್ದರೆ ನಿಮ್ಮಿಬ್ಬರಿಗೆ ಕೊಟ್ಟುಬಿಡುತ್ತಿದ್ದೆ. ನೀವು ನಾಳೆ ವಾಪಸ್ ತಂದು ಮುಟ್ಟಿಸಬಹುದಿತ್ತು ಎಂದರು. ಇನ್ನು ಬೇರೆ ಉಪಾಯ ಏನಿದೆ ಎಂದು ಯೋಚಿಸುತ್ತಿರುವಾಗಲೇ ಮತ್ತೆ ಬೈಕಿನ ಶಬ್ದವಾಯಿತು. ಮತ್ತೆ ಅದೇ ಬೈಕ್ ಅದೇ ಸ್ಪೀಡ್‌ನಲ್ಲಿ ಹತ್ತಿರ ಬರುತ್ತಿತ್ತು. ಇವರು "ತಡೀರಿ... ಒಂದ್ ಕೆಲ್ಸಾ ಮಾಡೂನು" ಎಂದನ್ನುತ್ತಾ ಆ ಬೈಕ್‌ನವನಿಗೆ ಕೈ ಮಾಡಿದರು. ಅವನಿದ್ದ ಸ್ಪೀಡಿಗೆ ಅವನು ನಮ್ಮಿಂದ ಅರ್ಧ ಕಿಲೋಮೀಟರ್ ದೂರ ಹೋಗಿ ನಿಂತ. ವಾಪಸ್ಸು ಬಂದು ಅವರಿಗೆ ನಮಸ್ಕಾರಾ ಸಾರ್ ಎಂದ. ಇವರಿಬ್ಬರನ್ನೂ ವಿದ್ಯಾಗಿರಿಗೆ ಬಿಟ್ಟುಕೊಡ್ತೀಯೇನಪ್ಪಾ ಎಂದು ಅವರು ಕೇಳಿದೊಡನೆಯೇ ಈತ ಅದಕ್ಕೇನು ಸಾರ್ ಎಂದು ಒಪ್ಪಿಗೆ ಸೂಚಿಸಿಬಿಟ್ಟ. ತಮ್ಮ ಕೆಲಸ ಮುಗಿಸಿದ್ದಕ್ಕೆ ಅವರು ನಮಗೆ ವಿದಾಯ ಹೇಳಿ ಹೊರಟುಬಿಟ್ಟರು.

ಬೈಕನ್ನೊಮ್ಮೆ ಜೋರಾಗಿ ಅಲ್ಲಾಡಿಸಿ ಟ್ಯಾಂಕಿನ ಹತ್ತಿರ ಕಿವಿ ಹಿಡಿದ. ಆಮೇಲೆ ತನ್ನಷ್ಟಕ್ಕೆ ತಾನೇ ತಲೆ ಅಲ್ಲಾಡಿಸಿ ನಮ್ಮ ಕಡೆ ನೋಡಿದ. "ವಿದ್ಯಾಗಿರೀಗೆ ಹೊಂಟೀರೇನ್ರಿ? ಬರ್ರಿ...". ನಾನು ಮಧ್ಯದಲ್ಲಿ ಕೂತೆ. ನನ್ನ ಹಿಂದೆ ಪವನ. ಅವನ ಕಟಾರಾ ಸುಜುಕಿ ಸಮುರೈನಲ್ಲಿ ನಮ್ಮ ತ್ರಿಬಲ್ ರೈಡಿಂಗ್ ಶುರುವಾಯಿತು. "ನೋಡ್ರೀ... ನಾನು ಈಗss ಹೇಳಾಕತ್ತೀನಿ. ಘಟ್ಟಿ ಕೂತ್ಗೋರಿ. ನಾನು ನಶಾದಾಗದೀನಿ" ಎಂದುಬಿಟ್ಟ. ನನ್ನ ಜಂಘಾಬಲವೇ ಉಡುಗಿಹೋಯಿತು. ಕಣ್ಣು ಮುಚ್ಚಿ ರಾಮ ಕೃಷ್ಣ ಹೇಳಲು ಪ್ರಾರಂಭಿಸಿದೆ. ಕೆಲವೇ ಸೆಕಂಡುಗಳಲ್ಲಿ ಬೈಕು 60km/h ಸ್ಪೀಡಿಗೆ ಹೋಗಿ ಮುಟ್ಟುಬಿಟ್ಟಿತ್ತು. ಅಲ್ಲಿಯ ರೋಡಿನ ಪರಿಸ್ಥಿತಿಯೋ ಕೇಳುವುದು ಬೇಡ. ಆ ರೋಡಿನಲ್ಲಿ ಇವನ ಕಟಾರಾ ಬೈಕು ಆ ಸ್ಪೀಡಿನಲ್ಲಿ ತ್ರಿಬಲ್ ರೈಡಿಂಗ್ ಬೇರೆ. ಬೈಕಿನ ಶಾಕ್ ಅಬ್ಸಾರ್ಬರ್ಸ್ ಪೂರ್ತಿ ಅಕ್ಕಿಹೋಗಿತ್ತು. ಎಲ್ಲಾದರೂ ಹೊಂಡ ಹಾರಿಸಿದರೆ ಕಟಾರ್ ಎಂದು ಶಬ್ದ ಬೇರೆ ಬರುತ್ತಿತ್ತು. ಅವನಿಗಂತೂ ಇದೆಲ್ಲದರ ಪರಿವೆಯೇ ಇಲ್ಲವೇನೊ ಎಂಬಂತೆ ಓಡಿಸುತ್ತಿದ್ದ. ಅರ್ಧ ದಾರಿ ಸಾಗಿದ ಮೇಲೆ ಪ್ರಶ್ನೋತ್ತರಗಳನ್ನು ಶುರುಮಾಡಿದ.
"ಏನ್ ಮಾಡ್ಕೊಂಡದೀರಿ?"
"ಇಂಜಿನಿಯರಿಂಗ್ ಕಲ್ಯಾಕತ್ತೀವ್ರಿ"
"ಯಾವ ಬ್ರಾಂಚು?"
"ಕಂಪ್ಯೂಟರ್ ಸೈನ್ಸ್‌ರಿ"
"ಓಹ್... ಹಂಗಾರss ಅನಾಮಿ ಗೊತ್ತೇನ್ ನಿಮ್ಗ?"
ಯಲಾ ಇವ್ನಾ, ಹೋಗಿ ಹೋಗಿ ನಮ್ಮ HODಸುದ್ದೀಗೆ ಕೈ ಹಾಕಿದ್ನಲ್ಲಪ್ಪಾ ಎಂದುಕೊಳ್ಳುವಷ್ಟರಲ್ಲಿ ಅವನೇ ಮುಂದುವರಿಸಿದ.
"ಅವ ಮತ್ತ ನಾನು ಭಾರೀ ದೋಸ್ತ್... ನಿಮ್ಗೇನಾರ ಪ್ರಾಬ್ಲಮ್ ಆದ್ರ ನಂಗ್ ಹೇಳ್ರಿ. ನಾನು ಅನಾಮಿಗೆ ಹೇಳ್ತೀನಿ"
ಕೃತಾರ್ಥರಾದೆವು ತಂದೆ. ಮೊದಲು ದಯವಿಟ್ಟು ಮನೆಗೆ ತಲುಪಿಸಿಬಿಡು ಎಂದು ಬಾಯಿ ಬಿಟ್ಟು ಹೇಳುವುದೊಂದು ಬಾಕಿ ಇತ್ತು.
"ಅಂದಾಂಗ... ಈಗೀಗ ಬಾಗಲ್ಕೋಟ್ನಾಗ ಭಾಳ್ ಸೆಕಿ ಶುರು ಆಗ್ಬಿಟೈತಿ ನೋಡ್ರಿ. ಮನ್ಯಾಗ ಕುಂದ್ರಾಕಾಗಾಂಗಿಲ್ಲ. ಅದ್ಕss ಸೊಲ್ಪ ಹವಾ ಸೇವ್ಸೂನೂ ಅಂತ ಗಾಡಿ ಓಡ್ಸಾಕತ್ತೀನಿ" ಎಂದು ತನ್ನ ಸಮಸ್ಯೆಯನ್ನು ವಿವರಿಸಿದ. ನಾವು ಹುಂ ಹುಂ ಎಂದು ತಲೆ ಹಾಕಿದೆವು.

ಅಂತೂ ಕಾಲೇಜು ತಲುಪಿದಾಗ ಹೋದ ಜೀವ ಮತ್ತೆ ಬಂದಂತಾಗಿತ್ತು. ಇಲ್ಲೇ ಬಿಡಿ ಸಾಕು ಎಂದು ಎಷ್ಟು ಹೇಳಿದರೂ ಕೇಳದೆ ರೋಮಿಗೇ ತಂದು ಮುಟ್ಟಿಸಿದ. "ಏನಾರ ಹೆಲ್ಪ್ ಬೇಕಿದ್ರೆ ಕೇಳ್ರಿ... ನಾನು ನಿಮ್ಮ HODಗೆ ಹೇಳ್ತೀನಿ... ಗುಡ್ ನೈಟ್" ಎಂದು ಹೇಳಿ ಬೀಳ್ಕೊಟ್ಟ. ಎಚ್ಚರವಾಗಿದ್ದವ ದುಡ್ಡು ತೆಗೆದುಕೊಂಡೂ ಮಾಡದೇ ಇದ್ದ ಸಹಾಯವನ್ನ ನಿಶೆಯಲ್ಲಿದ್ದವ ಪ್ರತಿಫಲವನ್ನೇ ನಿರೀಕ್ಷಿಸದೆ ಮನಃಪೂರಕವಾಗಿ ಮಾಡಿಮುಗಿಸಿದ್ದ.

Tuesday, April 15, 2008

ಮಾಡರ್ನ್ ನಿಂಗಿ


ಸ್ವಲ್ಪ ದಿನದ ಹಿಂದೆ ಪ್ರತಾಪ್ ಸಿಂಹರ ಒಂದು ಲೇಖನದ ಬಗ್ಗೆ ಅಗೋಕನ್ನಡದಲ್ಲಿ ಸಿಕ್ಕಾಪಟ್ಟೆ ಚರ್ಚೆ ನೆಡೆಯುತ್ತಾ ಇತ್ತು. ಹುಡುಗಿಯರ ಮೇಲೆ ನೆಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಕೇವಲ ಹುಡುಗರಷ್ಟೇ ಕಾರಣರಲ್ಲ, ಕೆಲವು ಸಂದರ್ಭಗಳಲ್ಲಿ ಆ ಕಾಮುಕರ ಕಾಮ ಕೆರಳಿಸುವವರು ಹುಡುಗಿಯರೇ ಎನ್ನುವುದು ಕೆಲವರ ವಾದವಾಗಿದ್ದರೆ ಇನ್ನು ಕೆಲವರದ್ದು ಇದಕ್ಕೆ ವಿರೋಧವಿತ್ತು. ನಮಗ್ಯಾಕ್ರೀ ಈ ವಿಷಯ ಅದು ನಮಗೆ ಸಂಬಂಧ ಇಲ್ಲಾ ಎಂದು ತೆಗೆದು ಹಾಕುವುದೂ ಸರಿಯಲ್ಲ. ಇದು ಸಮಾಜದ ಸ್ವಸ್ಥ್ಯದ ಪ್ರಶ್ನೆ. ಹಾಗೆಂದುಕೊಂಡು ಕಡಿಮೆ ಬಟ್ಟೆ ಹಾಕಿಕೊಂಡು ಶೋಕಿ ಮಾಡುತ್ತಿರುವ ಹೆಣ್ಣುಮಕ್ಕಳೆಲ್ಲರಿಗೆ ಬಟ್ಟೆ ತೊಡಿಸಲು ಸಾಧ್ಯವೇ? ನಮ್ಮಂಥವರು ಹೆಚ್ಚು ಅಂದರೆ ಇಂತಹ ರೀಮಿಕ್ಸ್ ಗೀತೆಗಳನ್ನು ಬರೆಯಬಹುದು. ಹೂವು ಹಣ್ಣು ಚಿತ್ರದ ಸಿ ಅಶ್ವಥ್ ಹಾಡಿರುವ "ನಿಂಗಿ ನಿಂಗಿ ನಿಂಗಿ ನಿಂಗಿ" ಧಾಟಿಯಲ್ಲಿ....

ತಂಗಿ ತಂಗಿ ತಂಗಿ ತಂಗಿ
ಪ್ಯಾಟೀಗ್ ಹೊಂಟೀಯೇನ ತಂಗಿ
ತಂಗಿ ತಂಗಿ ತಂಗಿ ತಂಗಿ
ಟಸ್ ಪುಸ್ ಅಂತೀಯಲ್ಲೆ ತಂಗಿ

ನಿನ್ನ ನೋಡುತ್ತಾ
ಜನ್ರೆಲ್ಲ ಬೆಪ್ಪ
ಆಗ್ಯಾರ ನೋಡಲ್ಲಿ

ಟೈಟು ಜೀನ್ಸು ಶಾರ್ಟು ಟಾಪು
ಹಾಕಿಕೊಂಡ ನೀ ನಿಂತಿ
ಬಳಿ ಇಲ್ಲದೇ ಟಿಕಳಿ ಇಲ್ಲದೇ
ಬೆದರುಬೊಂಬೆ ಹಾಂಗ ಕಾಣತಿ

ಮುಖಕ್ಕೆ ಸುಣ್ಣ ಮೆತ್ತತಿ
ತುಟಿಗೆ ಬಣ್ಣ ಹಚ್ಚತಿ
ಜಡಿನ ಕತ್ತರಿಸುತಿ
ನಿನ್ನ ನೀನು ಮರೆಸುತಿ

ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ

ಕರೀಗ್ಲಾಸ ಹಾಕಿಕೊಂಡು
ಹುಡುಗರ್ ಮುಂದ ಪೋಸ್ ಕೊಡ್ತಿ
ಸುಮ್ ಸುಮ್ನೆ ನಗನಗತಾ
ಅವರ್ನ ಬುಟ್ಟಿಗ್ ಬೀಳಿಸ್ಕೊಳತಿ

ಅವಗ ಕೈ ನೀಡತಿ
ಇವನ ನೀ ನೋಡತಿ
ನಿನ್ನ ನೀನು ಮಾರತಿ
ಒಳ್ಳೆ ಬೆಲೆ ಬೇಡತಿ

ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ

Monday, April 7, 2008

ನಿಜಕ್ಕೂ ನಾವು ಮುಂದುವರಿಯುತ್ತಿದ್ದೇವೆಯೆ?


ಎಪ್ರಿಲ್ 6 ರಾತ್ರಿ 8:30ರ ಸಿರ್ಸಿಯಿಂದ ಬೆಂಗಳೂರಿಗೆ ಹೋಗುವ ಮೇಘದೂತ ಬುಕ್ ಮಾಡಿಸಿದ್ದೆ. ಅವತ್ತೇ ಸಿರ್ಸಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮೆರವಣಿಗೆ ಬೇರೆ ಇತ್ತು. ಹೇಗೋ ಸಂದಿ ಗೊಂದಿಗಳಲ್ಲಿ ಬೈಕ್ ತೂರಿಸಿಕೊಂಡು ಬಸ್ಟಾಂಡಿಗೆ ಹೋದಾಗಲೇ ಗೊತ್ತಾಗಿದ್ದು, ಆ ಬಸ್ ಕ್ಯಾನ್ಸಲ್ ಆಗಿದೆ. ಅದರ ಬದಲು ಇನ್ಯಾವುದೋ ಬಸ್ಸಿನಲ್ಲಿ ನಮ್ಮನ್ನೆಲ್ಲ ಕಳಿಸುತ್ತಾರೆ ಎಂದು. 9 ಗಂಟೆಗೆ ರಾಜಹಂಸ ಇತ್ತು. ಅದನ್ನ ಬಿಟ್ಟರೆ ಇನ್ನೊಂದು ಮೇಘದೂತ ಕುಮಟಾದಿಂದ ಬರಲು 10:30 ಆಗುತ್ತಿತ್ತು. ಆದ್ದರಿಂದ 100 ರೂಪಾಯಿಗಳ ಪಂಗನಾಮ ಆದರೂ ಪರವಾಗಿಲ್ಲ, ರಾಜಹಂಸಕ್ಕೇ ಹೋಗುವುದೆಂದು ನಿರ್ಧರಿಸಿ ಅಲ್ಲೇ ಯಾವುದೋ ಒಂದು ಸೀಟ್ ಅಡ್ಜಸ್ಟ್ ಮಾಡಿಕೊಂಡು ಕುಳಿತೆ. ಅವತ್ತು ಮಧ್ಯಾಹ್ನ ಮಲಗಲು ಆಗದೇ ಇದ್ದ ಕಾರಣಕ್ಕೋ ಏನೊ ಚೆನ್ನಾಗಿಯೇ ನಿದ್ರೆ ಬಂತು.

ಅರಬರೆ ಎಚ್ಚರವಾದಾಗ ಕಂಡಕ್ಟರ್ ’ಶಿವ್ಮೊಗ್ಗಾ... ಶಿವ್ಮೊಗ್ಗಾ’ ಅನ್ನುವುದು ಕೇಳಿಸುತ್ತಿತ್ತು. ಮತ್ತೆ ನಿದ್ರೆ. ಮುಂದೆ ತುಂಬಾನೇ ನಿದ್ದೆ ಬಂದುಬಿಟ್ಟಿತ್ತು ಎನಿಸುತ್ತದೆ. ಎಚ್ಚರವಾದಾಗ ವಾತಾವರಣ ಸಂಪೂರ್ಣ ಶಾಂತ. ಬಸ್ ಚಲಿಸುತ್ತಿಲ್ಲ. ಅಕ್ಕಪಕ್ಕದವರ ಗೊರಕೆ ಸದ್ದೊಂದು ಕೇಳಿಸುತ್ತಿದೆ. ಡ್ರೈವರ್ ಸಾಹೇಬ್ರು ಬಸ್ಸಿನ ಇಂಡಿಕೇಟರ್ ಆನ್ ಮಾಡಿಟ್ಟುದುದರಿಂದ ಅದೊಂದು ಟುಯ್ನ್ ಟುಯ್ನ್ ಎನ್ನುತ್ತಿತ್ತು. ಇಲ್ಲೇ ಎಲ್ಲೋ ಪ್ರಕೃತಿಕರೆಬಂದು ಹೋಗಿರಬೇಕೆಂದು ಹಾಗೇ ಮಗ್ಗುಲು ಬದಲಿಸಿದೆ. ಮತ್ತೊಂದು ರಾಜಹಂಸ ಬಸ್ ಬಂದು ನಮ್ಮೆದುರೇ ನಿಂತಿತು. ಆ ಬಸ್ಸಿನವನೂ ಇಂಡಿಕೇಟರ್ ಆನ್ ಮಾಡಿ ಗಾಡಿಯಿಂದಿಳಿದು ಗಡಬಡೆಯಿಂದ ಎತ್ತಲೋ ಓಡಿಹೋದ. ಇವ್ನಿಗ್ಯಾಕಪ್ಪಾ ಇಷ್ಟು ಅವಸರ ಅಂದುಕೊಂಡು ಸುಮ್ಮನಾದೆ. ದೂರದಲ್ಲಿ ಕೆಲವು ಶಬ್ದಗಳು ಕೇಳಿಬರತೊಡಗಿದವು. ಯಾರೋ ಜೋರಾಗಿ ನರಳುತ್ತಿರುವ ಶಬ್ದ. "ಅಮ್ಮಾ... ಅಯ್ಯೋ..." ಬರಬರುತ್ತ ಶಬ್ದ ಹೆಚ್ಚಾಗತೊಡಗಿತು. ಕರಳು ಕಿತ್ತುಬರುವಂತೆ ಯಾರೋ ಚೀರುತ್ತಿದ್ದ. ಅದರ ಜೊತೆಗೆ ಜನರ ಗುಜುಗುಜು ಕೇಳಿಬರುತ್ತಿತ್ತು.

ಇದೇನಾಯ್ತಪ್ಪಾ ಎಂದುಕೊಂಡು ಬಸ್ಸಿನಿಂದ ಕೆಳಗಿಳಿಯಲು ಹೋದರೆ, ನಮ್ಮ ಡ್ರೈವರ್ ಬಸ್ಸಿನ ಬಾಗಿಲು ತೆರೆಯದೆಯೇ ಇಳಿದು ಹೋಗಿಬಿಟ್ಟಿದ್ದ. ಅದರ ಬಟನ್ ಯಾವುದೆಂದು ತಿಳಿಯಲಿಲ್ಲ. ನಾನೂ ಡ್ರೈವರ್ ಸೀಟಿನ ಪಕ್ಕದಲ್ಲಿದ್ದ ಬಾಗಿಲಿನಿಂದಲೇ ಇಳಿದು ಹೋಗಿ ನೋಡಿದೆ. ಶಿರಸಿ-ಶಿವಮೊಗ್ಗ-ಬೆಂಗಳೂರು ಆರ್ಡಿನರಿ ಬಸ್ಸೊಂದು ಒಂದು ಮರಕ್ಕೆ ನೇರವಾಗಿ ಢಿಕ್ಕಿ ಹೊಡೆದು ನಿಂತುಬಿಟ್ಟಿದೆ. ಅದರ ಸುತ್ತಲೂ ಐವತ್ತರವತ್ತು ಜನ ಸುತ್ತುವರಿದೂ ಏನೇನೋ ಮಾಡುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿ ಹದಿನೈದಿಪ್ಪತ್ತು ಜನ ಮಲಗಿ ನರಳುತ್ತಿದ್ದಾರೆ. ಅವರ ಸುತ್ತಲೂ ಕೆಲವು ಜನ ಅವರಿಗೆ ನೀರನ್ನು ನೀಡುತ್ತಾ ಸಮಾಧಾನಪಡಿಸುತ್ತಿದ್ದಾರೆ. ಇದರ ಮಧ್ಯ ಬಸ್ಸಿನಲ್ಲೇ ಸಿಕ್ಕಿಕೊಂಡು ನೋವು ಅನುಭವಿಸುತ್ತಿದ್ದ ಆ ಬಸ್ಸಿನ ಡ್ರೈವರ್ ನೋವು ತಾಳಲಾರದೆ ಚೀರುತ್ತಿದ್ದಾನೆ. ಜನ ಅವನನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಇದಿಷ್ಟು ಕೇವಲ 10 ನಿಮಿಷದಲ್ಲಿ ಸಂಭವಿಸಿಬಿಟ್ಟಿದೆ. ನಮ್ಮ ಬಸ್ಸಿನ ಹಿಂದೆ ಉತ್ತರ ಕನ್ನಡದಿಂದ ಹೊರಟಿದ್ದ ಎಲ್ಲ KSRTC ಬಸ್ಸುಗಳು ಸಾಲಾಗಿ ನಿಂತುಬಿಟ್ಟಿದ್ದವು. ಎಲ್ಲ ಸಿಬ್ಬಂದಿಗಳೂ ಅಲ್ಲಿ ಸಿಲುಕಿಕೊಂಡಿದ್ದ ಡ್ರೈವರ್‌ನನ್ನು ಬಿಡಿಸುವ ಪ್ರಯತ್ನದಲ್ಲಿದ್ದರು. ಇದರೊಟ್ಟಿಗೆ ಅದೇ ದಾರಿಯಲ್ಲಿ ಹೊರಟಿದ್ದ ಐದಾರು ಟ್ರಕ್ಕುಗಳೂ ನಿಂತಿದ್ದವು. ಇದು ನೆಡೆದಿದ್ದು ತುಮಕೂರಿಗೆ ಒಂದು ಹತ್ತು ಕಿಲೋಮೀಟರ್ ಅಂತರದಲ್ಲಿ. ಸುತ್ತಲು ವಾಸಿಸುತ್ತಿದ್ದ ರೈತರೆಲ್ಲರೂ ಅವನನ್ನು ಬಿಡಿಸುವ ಪ್ರಯತ್ನದಲ್ಲಿದ್ದರು.

ಬಸ್ಸು ಎಷ್ಟು ವೇಗವಾಗಿ ಬಂದು ಮರಕ್ಕೆ ಗುದ್ದಿತ್ತೆಂದರೆ, ಮರ ಅರ್ಧ ಕೊರೆದುಹೋಗಿತ್ತು. ನೂರಾರು ಜನ ಕೈಗೂಡಿಸಿ ಬಸ್ಸನ್ನು ದೂಕಿದರೂ ಬಸ್ಸು ಒಂದಿಂಚೂ ಕದಲಲಿಲ್ಲ. ಇದು ನೆಡೆದಿದ್ದು ರಾತ್ರಿ ಮೂರರಿಂದ ಮೂರೂವರೆಯ ಒಳಗೆ. ಅಲ್ಲಿದ್ದ ಜನರು ಹತ್ತಿರವಿದ್ದ ಪೋಲೀಸ್ ಸ್ಟೇಷನ್, ಹಾಸ್ಪಿಟಲ್‌ಗೆಲ್ಲಾ ಕರೆಮಾಡಿ ಆಗಿತ್ತು. ಸಧ್ಯದಲ್ಲೇ ಅಂಬ್ಯುಲೆನ್ಸ್ ಬರಬಹುದೆಂದು ಕಾಯುತ್ತಿದ್ದರು. ಆ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರನ್ನು ಇನ್ನೊಂದು ಬಸ್ಸಿನಲ್ಲಿ ಕೂರಿಸಿ ಕಳಿಸಲಾಯಿತು. ಹೆಚ್ಚು ಪೆಟ್ಟಾಗಿದ್ದ ಕೆಲ ಪ್ರಯಾಣಿಕರಿಗೆ ಅಂಬ್ಯುಲೆನ್ಸ್ ಬರುತ್ತದೆ ಎನ್ನುತ್ತಿದ್ದರು. ಆದರೂ ಯಾರೂ ಕಾಯದೆ ಬೇರೆ ಬಸ್ಸಿನಲ್ಲಿ ಕುಳಿತು ಹೊರಟುಬಿಟ್ಟರು. ಸುತ್ತಲಿದ್ದ ನಾಗರಿಕರ ಪ್ರಯತ್ನವಂತೂ ನೆಡೇದೇ ಇತ್ತು. ಐದು ಗಂಟೆಯಸುಮಾರಿಗೆ ಇಬ್ಬರು ಪೋಲೀಸರು ಟಿವಿಎಸ್ ಎಕ್ಸೆಲ್ ಸೂಪರ್‌ನಲ್ಲಿ ಬಂದರು. ಅವರು ಬಂದು ಮೂಕಪ್ರೇಕ್ಷಕರ ಸಂಖ್ಯೆ ಹೆಚ್ಚು ಮಾಡಿದರೇ ವಿನಃ ಬೇರೇನೂ ಅವರಿಂದ ಸಾಧ್ಯವಾಗಲಿಲ್ಲ. ಐದೂವರೆ ಗಂಟೆಯ ಹೊತ್ತಿಗೆ ಒಂದು ಅಗ್ನಿಶಾಮಕ ಟ್ರಕ್ ಬಂದು ನಿಂತಿತು. ಅದು ಯಾಕೆ ಬೇಕಿತ್ತೋ ದೇವರಿಗೇ ಗೊತ್ತು. ಅದರಲ್ಲಿದ್ದ ಮೂರ್ನಾಲಕು ಜನ ಇಳಿದು ಬ್ಯಾಟರಿ ಹಿಡಿದುಕೊಂಡು ನಿಂತರು. ಅಂಬ್ಯುಲೆನ್ಸಿನ ಪತ್ತೆಯೇ ಇಲ್ಲ. ಬೆಳಕಾಯಿತು. ಆರು ಗಂಟೆಯಾಯಿತು. ಇನ್ನೂ ಆ ಬಸ್ಸಿನ ಡ್ರೈವರ್‌ನನ್ನು ಹೊರತೆಗೆಯಲು ಆಗಲೇ ಇಲ್ಲ. 3 ಗಂಟೆಯಿಂದ ಅವನು ನೋವಿನಿಂದ ನರಳುತ್ತಲೇ ಇದ್ದ. ನಮ್ಮ ಕಂಡಕ್ಟರ್ "ಇದು ಇನ್ನೂ ಬಹಳ ತಡಾ ಆಗ್ತದೆ ಅಂತ ಕಾಣ್ತದೆ... ಈಗ ನಾವೂ ಇವ್ನನ್ನ ಬಿಟ್ಟು ಹೋಗ್ಬಿಟ್ರೆ ಸರಿ ಬರುದಿಲ್ಲ... ನೀವೆಲ್ಲಾ ಬೇರೆ ಬಸ್ಸಿಗೆ ಹೋಗ್ಬಿಡಿ." ಎಂದು ಹೇಳಿ ನಮ್ಮನ್ನು ಯಲ್ಲಾಪುರ-ಬೆಂಗಳೂರು ರಾಜಹಂಸ ಬಸ್ಸಿಗೆ ಹತ್ತಿಸಿ ಕಳುಹಿಸಿದ. ಡ್ರೈವರ್‌ನ ಆರ್ತನಾದ ಕೇಳುತ್ತಲೇ ಇತ್ತು.

ಕೊನೆಗೂ ಅಂಬ್ಯುಲೆನ್ಸ್ ಬಂದಿತೋ ಬಿಟ್ಟಿತೋ ಯಾರಿಗೆ ಗೊತ್ತು? ಆ ಡ್ರೈವರನ ಕಾಲಿಗೆ ಬಸ್ಸಿನ ಕೆಲವು ಕಬ್ಬಿಣದ ತುಂಡುಗಳು ತೂರಿಕೊಂಡುಬಿಟ್ಟಿದುದರಿಂದ ಗ್ಯಾಸ್ ವೆಲ್ಡರ್ಸ್‌ಗಳ ಬರುವಿಕೆಯನ್ನೂ ಜನ ಕಾಯುತ್ತಿದ್ದರು. ಅವರೆಲ್ಲರೂ ಬಂದು ಆ ಡ್ರೈವರ್‌ನನ್ನು ಆ ಮೃತ್ಯುಕೂಪದಿಂದ ಬಿಡಿಸುವವರೆಗೂ ಆತನಿಗೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಿದನೆಂದೇ ನಂಬಿದ್ದೇನೆ.