Thursday, October 26, 2017

ಗೆಂಡೆತಿಮ್ಮನ ಕಾಳಗ

ಬುದ್ಧನಿಗೆ ಬೋಧೀವೃಕ್ಷದ ಕೆಳಗೆ ಜ್ಣಾನೋದಯವಾದರೆ, ನಮ್ಮ ತಿಮ್ಮನಿಗೆ ಬೆಂಗಳೂರು ರೋಡಿನಲ್ಲಿ ಬೈಕ್ ಓಡಿಸುತ್ತಾ
ಜ್ಞಾನೋದಯವಾಯಿತು. ಜ್ಞಾನೋದಯವಾದೊಡನೆಯೇ ಈ ಕೆಳಗಿನ ಮೂರು ಕಗ್ಗಗಳನ್ನು ಬರೆದು ಮುಗಿಸಿಬಿಟ್ಟ !


ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ. ಆದುದರಿಂದ ತಿಮ್ಮನ ಸಲಹೆ,

ರೋಡೆಲ್ಲ ಬರಿ ಗುಂಡಿ ಕುಣಿಯುತ ಸಾಗಿದೆ ಬಂಡಿ
ವೇಗದೊಂದಿಗೆ ಕುಣಿತ ತಳುಕು ಹಾಕಿಹುದು ||
ಕತ್ತು ಮೈ ಕೈ ಸೊಂಟ ಉಳುಕೀತು ನಿಧಾನಿಸು
ಗುಂಡಿಯೊಳು ಜಗವಿಹುದು - ಗೆಂಡೆತಿಮ್ಮ - || ೧ ||


ವಿಧಿಲಿಖಿತವನ್ನು ತಪ್ಪಿಸುವವರಾರು ?

ತಿರುಗಿಸು ಮೋಟಾರನು ಗುಂಡಿ ಕಂಡರೆ ಮುಂದೆ
ತಿರುಗಿಸಿದೆಡೆ ಗುಂಡಿ ಇದ್ದೊಡೆ ನಿನ್ನ ಕರ್ಮ ||
ತಪ್ಪಿಸಲಾಗದು ಗುಂಡಿಯೆನ್ನುವುದೆ ವಿಧಿ ಬರಹ
ಬೀಳದಿರು ಗುಂಡಿಯೊಳು - ಗೆಂಡೆತಿಮ್ಮ || ೨ ||


ಇದಕ್ಕೆಲ್ಲಾ ಕಾರಣವಾದರೂ ಏನು ? ಕಲಿಯುಗದಲ್ಲಿ ಕಲ್ಕಿ ಅವತಾರದ ಬದಲು ಲಂಚಾವತಾರ !

ತಿನ್ನುವುದು ಸಹಜದ ಧರ್ಮ ತಿನಿಸುವುದು ಪರಧರ್ಮ
ಅವತಿಂದನೆನುತ ತಿನುವುದತಿಶಯದ ಧರ್ಮ ||
ತಿನಿಸ ತಿನಿಸುವ ತಿನಿಸಿ ತಿನುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ - ಗೆಂಡೆತಿಮ್ಮ || ೩ ||


ತಿಮ್ಮನೇನೋ ಕಷ್ಟಪಟ್ಟು ಮನೆ ಮುಟ್ಟಿದ. ಮನೆ ಮುಟ್ಟದವರು ಗುಂಡಿಯಲ್ಲೇ ಹೊದ್ದು ಮಲಗಬೇಕು...

Monday, June 15, 2015

ಭಾಗ್ಯದ ಸಿದ್ದ ರಾಮಣ್ಣ

ಭಾಗ್ಯ ಬಹಳ ಸುದ್ದಿ ಮಾಡ್ತಾ ಇದೆ. ಇದು ಜನರ ದೌರ್ಭಾಗ್ಯವೋ.. ಸರ್ಕಾರದ ದೌರ್ಭಾಗ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಸಚಿವರು ಒಂದು ಹೇಳುವುದು.. ಮುಖ್ಯಮಂತ್ರಿ ಇನ್ನೊಂದು ಹೇಳುವುದು,
ಇದರ ಮಧ್ಯೆ ಜನ, ಸಾಹಿತಿಗಳು ಭಾಗ್ಯಗಳ ಬಗ್ಗೆ ಮಗದೊಂದು ಹೇಳುವುದು ಮುಂದುವರೆದಿದೆ... ಈ ಎಲ್ಲಾ ಭಾಗ್ಯಗಳ ಮಧ್ಯದಲ್ಲಿ ನಿಮಗೊಂದು ರೀಮಿಕ್ಸ್ ಭಾಗ್ಯ !
’ಪುರಂದರ ದಾಸ’ರ ಕ್ಷಮೆ ಕೋರಿ... ಹಾಗೂ ಮಾನ್ಯ ಮುಖ್ಯಮಂತ್ರಿಗಳು ನಗೆಚಾಟಿಕೆಯನ್ನು ಹಾಗೇ ಸ್ವೀಕರಿಸಿ ನನ್ನನ್ನು arrest ಮಾಡಿಸುವುದಿಲ್ಲ ಎಂದು ಭಾವಿಸಿ... :P


ಭಾಗ್ಯದ ಸಿದ್ದ ರಾಮಣ್ಣ
ನಮ್ಮಪ್ಪ, ನೀ ಸೌಭಾಗ್ಯದ ಸಿದ್ದ ರಾಮಣ್ಣ

ಕೆಂಪು ದೀಪದ ವಾಹನವೇರುತ
ಜನರನು ಹೋಗದೆ ಬಿಡದೆಯೆ ನಿಲಿಸುತ
ಪ್ರಜೆಗಳು ಕೆಲಸಕೆ ಹೋಗುವ ವೇಳೆಗೆ
ಅಡ್ದಕೆ ಹಾಯುವ ಮಾರ್ಜಾಲದಂತೆ

ಕುಂತರೆ ನೀನು ಭಾಗ್ಯವ ಬಿಟ್ಟೆ
ನಿಂತರೆ ನೀನು ಭಾಗ್ಯವ ಬಿಟ್ಟೆ
ಭಾಗ್ಯದ ಮೇಲೆ ಭಾಗ್ಯವ ಬಿಡುವ
ಭರದಲಿ ರಾಜ್ಯಭಾರವ ಮರೆತೆ

ಕ್ಷೀರ ಭಾಗ್ಯದಿ ಹಾಲನು ಹರಿಸಿ
ಅನ್ನ ಭಾಗ್ಯದಿ ಅನ್ನವ ಉಣಿಸಿ
ಪಶು ಭಾಗ್ಯದಿ ಪಶುಗಳ ಬೆಳೆಸಿ
ಶಾದಿ ಭಾಗ್ಯದಿ ಮಲಗಿಸಿ ಬಿಟ್ಟೆ

ಮಾತು ಮಾತಿಗೆ ದಿಲ್ಲಿಗೋಡಿದೆ
ಸಭೆ ಸಮಾರಂಭದಿ ತೂಕಡಿಸಿದೆ
ಇಂದಿರೆ ಬದಲು ಸೋನಿಯಾ ಅಂದೆ
ಕಾಂಗ್ರೆಸ್ ರಾಣಿಗೆ ಸಲಾಮು ಹೊಡೆದೆ

Tuesday, April 14, 2015

ಹುಣ್ಣು

ಭವಿಷ್ಯದಲ್ಲಿ ಏನಾಗುಬಹುದು ಎಂದು ಸರಿಯಾಗಿ ಊಹಿಸುವವನು... ಅಥವಾ ಈಗಿನ ಸಮಸ್ಯೆಗೆ ಹೀಗೆ ಮಾಡಿದರೆ ಭವಿಷ್ಯದಲ್ಲಿ ಇದಕ್ಕೆ ಪರಿಹಾರ ಸಿಗಬಹುದು ಎಂದು ಸರಿಯಾದ ಹೆಜ್ಜೆ ಇಡುವವನು ದಾರ್ಶನಿಕ (visionary). ಯಾಕೋ ಇವತ್ತಿನ ಪರಿಸ್ಥಿತಿ ನೋಡಿದರೆ ನಿಮ್ಮ ಜನರನ್ನು ನೀವೇ ಅರ್ಥ ಮಾಡಿಕೊಂಡಿರಲಿಲ್ಲ ಎನಿಸುತ್ತಿದೆ! 

Anyway... ಡಾ. ಅಂಬೇಡ್ಕರರ ಜಯಂತಿಯ ಪ್ರಯುಕ್ತ .. ನಾಡಿನ ಸಮಸ್ತ ಬುದ್ಧಿಜೀವಿಗಳಿಗೆ ನನ್ನ ಒಂದು ಚಿಕ್ಕ ಕೊಡುಗೆ..

ವಿರೋಧಕ್ಕಾಗಿ ಹೋರಾಟ ಬೀದಿಗಳಲ್ಲಿ ಬಯಲಾಟ
ಪ್ರಚಾರಕ್ಕಾಗಿ ಹಾರಾಟ ಆದರ್ಶಗಳ ಮಾರಾಟ
ನಿಜವಾಗಿಯೂ ಏಳ್ಗೆಯ ಕನಸನ್ನು ಕಂಡೆಯಾ
ಅಥವಾ ಕಣ್ಣು ಮುಚ್ಚಿ ದನದ ಮಾಂಸ ತಿಂದೆಯಾ?


ಜ್ನಾನಕ್ಕೆ ಪೀಠವೇ ಪೀಠಕ್ಕೆ ಜಾತಿಯೇ
ಶಾರದೆಗೂ ಜಾತಿಯ ಮೇಲೆಯೇ ಪ್ರೀತಿಯೇ
ಆ ಜಾತಿ ಈ ಜಾತಿ ಎಲ್ಲಾ ಒಂದೇ ಜಾತಿ
ಹುಣ್ಣಾದರೆ ಕೆರೆದುಕೊಳ್ಳುವ ಜಾತಿ

ನೋಡಿದರು ಕೆಲವರು ಹುಣ್ಣಿಗೆ ಮುಲಾಮು ಹಚ್ಚಿ
ನೋಡಿದರು ಕೆಲವರು ತಮ್ಮ ಬಾಯಿ ಮುಚ್ಚಿ
ಮಾಸಿತೆಂದುಕೊಂಡರೆ ಹುಣ್ಣು ಹುಟ್ಟಿತೆಲೆ ಮತ್ತೊಂದು
ಕೆಲವರು ಸುಖಿಸಿದರು ಹುಣ್ಣನ್ನು ಪರರಿಗೆ ಹಚ್ಚಿ

- ಸಿದ್ಧಾರ್ಥ

Thursday, February 6, 2014

ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ...

ದೇಶದ ರಾಜಕಾರಣದಲ್ಲಿ ಕೇವಲ ಮಫ್ಲರ್ ಕಟ್ಟಿಕ್ಕೊಂಡು ಎಲ್ಲರ ಚಳಿ ಬಿಡಿಸುರುವ ಕೇಜ್ರಿವಾಲರ ಬಗ್ಗೆ ಬರೆದು, ಬಹುತೇಕ ಮುಚ್ಚೇ ಹೋಗಿರುವ ನನ್ನ ಬ್ಲಾಗನ್ನು ಮತ್ತೆ ಚಾಲ್ತಿಯಲ್ಲಿ ತರುವ ಪ್ರಯತ್ನ ಇದಲ್ಲ. ಬರೆಯದಿದ್ದರೆ ಕೇಜ್ರಿವಾಲರಿಗೆ ಅಪಮಾನ ಎಂದು ಬರೆಯುತ್ತಿದ್ದೇನೆ!

ಮೊದಲೆಲ್ಲಾ ’ವಾಲ’ ಎಂದು ಕೇಳಿದಾಗಲೆಲ್ಲ ಶಬ್ದವನ್ನು ಪೂರ್ತಿಗೊಳಿಸಲು ಬಹಳಷ್ಟು ಆಯ್ಕೆಗಳಿರುತ್ತಿದ್ದವು. ಡಬ್ಬಾವಾಲ, ಟೋಪಿವಾಲ, ಚಾಯ್ ವಾಲ ಇತ್ಯಾದಿ. ಈಗ "___ವಾಲ" ಇದನ್ನು ಪೂರ್ತಿಗೊಳಿಸಿ ಎಂದು ಯಾರಿಗೇ ಕೇಳಿದರೂ ನೂರಕ್ಕೆ ತೊಂಬತ್ತೊಂಬತ್ತು ಜನ ಕೇಜ್ರಿವಾಲ ಎಂದೇ ಹೇಳುವುದು! ಪೊರಕೆ ಹಿಡಿದು ಕಸಗುಡಿಸುವುದಷ್ಟೇ ಅಲ್ಲ ರಜ್ಯವನ್ನೂ ಆಳಬಹುದು ಎಂದು ಹೇಳಿಕೊಟ್ಟ ಪೊರಕೆಮಾನವ ನಮ್ಮ ಕೇಜ್ರಿ.

ಇವರ ಧ್ಯಾನದಲ್ಲೇ ಟೋಪಿವಾಲ ಹಾಡು ಕೇಳುತ್ತಿದ್ದಾಗ ಅನಾಯಾಸವಾಗಿ ಬಂದ ರೀಮಿಕ್ಸ್ ಇದು.


ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ತುಂಬಾ ಜುಜಬಿ ಮನ್‌ಷಾ ನಾನು ಕಾಮನ್ ಮ್ಯಾನು ನನ್ನ ಫ್ಯಾನು 
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ನನ್ನ ಕೆಮ್ಮಿಗ್ ಮದ್ದೇ ಇಲ್ಲ ನನ್ನ ಮುಂದೆ ಕೆಮ್ಮಂಗಿಲ್ಲ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ
ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ನಾನು ತೊಟ್ಟ ಟೋಪಿಯನ್ನೇ ಜನರೆಲ್ರೂ ತೊಟ್ಟುಕೊಂಡ್ರು
ನಾನು ಕೂತ ಧರಣಿಗೇನೆ ಪೋಲೀಸ್ರು ರಜೆ ಹಾಕಿ ಬಿಟ್ರು
ನಾವ್ ಮಧ್ಯ ರಾತ್ರಿ ರೇಡ್ ಮಾಡ್ತಿವಿ... ಬೇರೆಯವ್ರಿಗ್ ಕ್ಯಾಕರ್ಸಿ ಉಗಿತಿವಿ
ನಮಗೆ ಮಿಷಿನ್ನು ಗನ್ನು ಬೇಡಾರೀ... ಧರಣಿ ಮಾಡೋಕ್ ಕೂತ್ರೆ ನಡುಗಿ ಸಾಯ್ತಾರ್ರೀ
ಗಾಂಧಿ ನೆಡೆದ ದಾರಿ ನಮ್ದು ಕೇಳಿರಿ... ಗಾಂಧಿ ವಿರುದ್ಧಾನೆ ಧರಣಿ ಮಾಡ್ತಿವಿ

ರೋಡಿನ್ ಮಧ್ಯ ಧರಣಿಯಲ್ಲಿ ಚಳೀಲಿ ಮಲ್ಗೋ ಕರ್ಮದಲ್ಲಿ
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ಭ್ರಷ್ಟಿಗಳ ಊರಿನಲ್ಲಿ ಲಂಚಾಸುರನ ಜಾತ್ರೆಯಲ್ಲಿ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ

ಅಣ್ಣ ತಮ್ಮ ಎಲ್ಲ ಬಿಟ್ಟೆ ನೀವೆ ಬಂಧು ಎಂದು ಭಾಷೆ ತೊಟ್ಟೆ
ಸರ್ಕಾರಿ ಬಂಗ್ಲೆ ಬಿಟ್ಟೆ ನನ್ನ ಕಾರಿನಲ್ಲೆ ನಾನು ಹೊರಟೆ ಬಿಟ್ಟೆ
ನಾವು ಕರೆಂಟ್ ಬಿಲ್ಲು ಅರ್ಧ ಮಾಡ್ತಿವಿ... ನಿಮ್ಮ ದುಡ್ಡಲ್ ಉಳಿದರ್ಧ ತುಂಬ್ತಿವಿ
ನಾವು ನೀರು ಎಲ್ಲರಿಗೂ ಕೊಡ್ತಿವಿ... ಜಾಸ್ತಿ ಕೊಟ್ರೆ ದುಡ್ಡು ಕೂಡಾ ತಗೊತಿವಿ
ತೊಂದ್ರೆ ಆದ್ರೆ ಒಂದು ರಿಂಗ್ ಮಾಡಿರಿ... ಸಾಕ್ಷಿ ಕೊಟ್ಟು ನೀವೆ ಜೈಲಿಗ್ ಹಾಕಿರಿ

ಮೊದ್ಲು ಸಾವ್ರ ಪ್ರೂಫು ಕೊಟ್ಟೆ ಈಗ ಎಲ್ಲ ಕಳ್ಕೊಂಡ್ ಬಿಟ್ಟೆ
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ನನ್ನ ಕೆಮ್ಮಿಗ್ ಮದ್ದೇ ಇಲ್ಲ ನನ್ನ ಮುಂದೆ ಕೆಮ್ಮಂಗಿಲ್ಲ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ

ಕೇಜ್ರಿ ಅವರ ಫ್ಯಾನ್ ಆಗಿರುವುದರಿಂದ ಹಾಗೂ ಕೇಜ್ರಿವಾಲರು ನನ್ನ ವಿರುದ್ಧ ದಾವೆ ಹಾಕಬಾರದೆಂದು ಕೊನೆಯ ಸಾಲು!
ಇದರಲ್ಲಿ ಹಾಕಿರುವ ಫೋಟೋ  "www.newsyaps.com" ದಿಂದ ಕದ್ದಿದ್ದು.