Thursday, October 26, 2017

ಗೆಂಡೆತಿಮ್ಮನ ಕಾಳಗ

ಬುದ್ಧನಿಗೆ ಬೋಧೀವೃಕ್ಷದ ಕೆಳಗೆ ಜ್ಣಾನೋದಯವಾದರೆ, ನಮ್ಮ ತಿಮ್ಮನಿಗೆ ಬೆಂಗಳೂರು ರೋಡಿನಲ್ಲಿ ಬೈಕ್ ಓಡಿಸುತ್ತಾ
ಜ್ಞಾನೋದಯವಾಯಿತು. ಜ್ಞಾನೋದಯವಾದೊಡನೆಯೇ ಈ ಕೆಳಗಿನ ಮೂರು ಕಗ್ಗಗಳನ್ನು ಬರೆದು ಮುಗಿಸಿಬಿಟ್ಟ !


ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ. ಆದುದರಿಂದ ತಿಮ್ಮನ ಸಲಹೆ,

ರೋಡೆಲ್ಲ ಬರಿ ಗುಂಡಿ ಕುಣಿಯುತ ಸಾಗಿದೆ ಬಂಡಿ
ವೇಗದೊಂದಿಗೆ ಕುಣಿತ ತಳುಕು ಹಾಕಿಹುದು ||
ಕತ್ತು ಮೈ ಕೈ ಸೊಂಟ ಉಳುಕೀತು ನಿಧಾನಿಸು
ಗುಂಡಿಯೊಳು ಜಗವಿಹುದು - ಗೆಂಡೆತಿಮ್ಮ - || ೧ ||


ವಿಧಿಲಿಖಿತವನ್ನು ತಪ್ಪಿಸುವವರಾರು ?

ತಿರುಗಿಸು ಮೋಟಾರನು ಗುಂಡಿ ಕಂಡರೆ ಮುಂದೆ
ತಿರುಗಿಸಿದೆಡೆ ಗುಂಡಿ ಇದ್ದೊಡೆ ನಿನ್ನ ಕರ್ಮ ||
ತಪ್ಪಿಸಲಾಗದು ಗುಂಡಿಯೆನ್ನುವುದೆ ವಿಧಿ ಬರಹ
ಬೀಳದಿರು ಗುಂಡಿಯೊಳು - ಗೆಂಡೆತಿಮ್ಮ || ೨ ||


ಇದಕ್ಕೆಲ್ಲಾ ಕಾರಣವಾದರೂ ಏನು ? ಕಲಿಯುಗದಲ್ಲಿ ಕಲ್ಕಿ ಅವತಾರದ ಬದಲು ಲಂಚಾವತಾರ !

ತಿನ್ನುವುದು ಸಹಜದ ಧರ್ಮ ತಿನಿಸುವುದು ಪರಧರ್ಮ
ಅವತಿಂದನೆನುತ ತಿನುವುದತಿಶಯದ ಧರ್ಮ ||
ತಿನಿಸ ತಿನಿಸುವ ತಿನಿಸಿ ತಿನುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ - ಗೆಂಡೆತಿಮ್ಮ || ೩ ||


ತಿಮ್ಮನೇನೋ ಕಷ್ಟಪಟ್ಟು ಮನೆ ಮುಟ್ಟಿದ. ಮನೆ ಮುಟ್ಟದವರು ಗುಂಡಿಯಲ್ಲೇ ಹೊದ್ದು ಮಲಗಬೇಕು...