Tuesday, March 31, 2009

ನಾಡಿ ಭವಿಷ್ಯ... ಒಂದು ಅನುಭವ.


ಮೊನ್ನೆ ನಮ್ಮ ಡೈರೆಕ್ಟರ್ ಮಗನ ನಾಮಕರಣದ ಕಾರ್ಯಕ್ರಮದಲ್ಲಿ ಕುಳಿತು ಹರಟುತ್ತಿದ್ದೆವು. ಜಾತಕ ಭವಿಷ್ಯ ಅದು ಇದು ಸುದ್ದಿಗಳು ಬರತೊಡಗಿದ್ದವು. ನಾನೂ ಕೆಲವು ಕೇಳಿದ ಅಂತೆ ಕಂತೆಗಳನ್ನು ಅಲ್ಲಿ ಹೇಳತೊಡಗಿದೆ. ನಾಡಿ ಭವಿಷ್ಯದ ಬಗ್ಗೆ! ನಮ್ಮ ಹೆಸರು, ಮನೆಮಂದಿಯ ಹೆಸರು, ನಾವು ಇದುವರೆಗೆ ಮಾಡಿದ ಪ್ರತಿಯೊಂದೂ ಕೆಲಸಗಳು ಆ ಗ್ರಂಥದಲ್ಲಿ ಎಷ್ಟೋ ವರ್ಷಗಳ ಮೊದಲು ಋಷಿಮುನಿಗಳು ಬರೆದಿಟ್ಟಿದ್ದಾರಂತೆ! ನಮ್ಮ ಹೆಬ್ಬೆಟ್ಟಿನ ಗುರುತು ಮತ್ತು ಹುಟ್ಟಿದ ದಿನಾಂಕ ಕೊಟ್ಟರೆ ಅದನ್ನು ಹುಡುಕಿ ನಮ್ಮ ಮುಂದೆ ಓದುತ್ತಾರಂತೆ... ಹಾಗೆ... ಹೀಗೆ... ಎಂದು. ಎಲ್ಲರೂ ಇದೇನೂ ಹೊಸತಲ್ಲ ಎನ್ನುವಂತೆ ಕೇಳುತ್ತಿದ್ದರು. ಹೇಮಂತ ಮಾತ್ರ ಸ್ವಲ್ಪ ಆಸಕ್ತಿ ತೋರಿ, ಅಂಥದ್ದು ಬೆಂಗಳೂರಿನಲ್ಲಿ ಎಲ್ಲಿದೆ ಎಂದು ವಿಚಾರಿಸಿದ. ಯಾವುದೋ ಕಾಲದಲ್ಲಿ ಆಸಕ್ತಿ ಹುಟ್ಟಿ ನಾನು ಇಂಟರ್ನೆಟ್‌ನಲ್ಲಿ ಹುಡುಕಿ ಇಟ್ಟಿದ್ದೆ. ಅದನ್ನೇ ನಾಳೆ ಕಳಿಸುತ್ತೇನೆ. ನಾನು ವಿಚಾರಿಸಿಲ್ಲ. ನೀನೇ ಹೋಗಿ ವಿಚಾರಿಸು ಎಂದು ಅವನಿಗೇ ಬಕ್ರಾ ಮಾಡುವ ಕಾರ್ಯಕ್ರಮ ಮುಂದಿಟ್ಟೆ.

ಮನುಷ್ಯನಿಗೆ ತನ್ನ ಜೀವನದಲ್ಲಿ ಮುಂದಾಗುವ ಘಟನೆಗಳನ್ನು ತಿಳಿದುಕೊಳ್ಳುವ ಕುತೂಹಲ ನಿನ್ನೆ ಮೊನ್ನೆಯದಲ್ಲ. ಬಹುಷಃ ಅವನು ಹುಟ್ಟಿದಾಗಿನಿಂದಲೇ ಈ ಕುತೂಹಲವೂ ಹುಟ್ಟಿಕೊಂಡು ಬಂದಿದೆ. ಹಾಗೆ ತಿಳಿದುಕೊಳ್ಳುವುದು ಸಾಧ್ಯವೋ ಅಸಾಧ್ಯವೋ ಗೊತ್ತಿಲ್ಲ. ತಿಳಿದುಕೊಳ್ಳುವುದು ಎಷ್ಟು ಸರಿ ಎನ್ನುವುದು ಮಾತ್ರ ಬಗೆಹರಿಯದ ಪ್ರಶ್ನೆ. ಅಕಸ್ಮಾತ್ ಹಾಗೆ ತಿಳಿದುಕೊಳ್ಳುವುದಾದರೆ ಮುಂದೆ ಬರುವ ಗಂಡಾಂತರಗಳನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಕೆಲವರ ವಾದವಾದರೆ, ಹಾಗೆ ತಿಳಿದುಕೊಂಡಾಕ್ಷಣ ನಮ್ಮ ಬುದ್ಧಿ ಅದೇ ದಾರಿಯಲ್ಲಿ set ಆಗಿಬಿಡುತ್ತದೆ. ಬೇರೆಯ ರೀತಿಯಲ್ಲಿ ವಿಚಾರಿಸುವ ವಿವೇಚನೆಯೇ ನಮ್ಮಿಂದ ಹೊರಟುಹೋಗುತ್ತದೆ ಎನ್ನುವುದು ಇನ್ನು ಕೆಲವರ ಹೇಳಿಕೆ. ಒಟ್ಟಿನಲ್ಲಿ ಇದು ಸರಿಯೋ ತಪ್ಪೋ ಗೊತ್ತಿಲ್ಲ. ನನಗಂತೂ ಅಕಸ್ಮಾತ್ ಹೀಗೆ ಕೆಲವು ಗ್ರಂಥಗಳು ಇರುವುದಾದರೆ, ಅದೂ ಅಲ್ಲದೆ ಅದರಲ್ಲಿ ನಮ್ಮ ಬಗ್ಗೆ ಸವಿವರವಾಗಿ ಬರೆದುಕೊಂಡಿದೆಯಾದರೆ ಯಾಕೆ ಒಮ್ಮೆ ನೋಡಿಬರಬಾರದು ಎನ್ನುವ ಕುತೂಹಲ. ನಮ್ಮ ಬುದ್ಧಿ ನಮ್ಮ ಕೈಲಿದ್ದರೆ ಯಾವ ಭವಿಷ್ಯತಾನೆ ಏನು ಮಾಡೀತು ಎನ್ನುವುದು ನನ್ನ ಧೋರಣೆ.

ಹೇಮಂತ ಹೀಗೆ ಕೇಳಿ ಹಾಗೆ ಬಿಟ್ಟುಬಿಡುತ್ತಾನೆ ಎಂದುಕೊಂಡಿದ್ದೆ. ಆದರೆ ಮಹಾನುಭಾವ ಹೋಗಿ ಅವನ ಮತ್ತು ಅವನ ತಾಯಿಯ ಬಗ್ಗೆ ನಾಡಿ ಶಾಸ್ತ್ರ ಕೇಳಿಕೊಂಡು ಬಂದೇಬಿಟ್ಟಿದ್ದ. ನನಗೆ ಫೋನ್ ಮಾಡಿ ನನ್ನ ಜೀವನದಲ್ಲಿ ಆಗಿರುವ ಈವರೆಗಿನ ಘಟನೆಗಳನ್ನು ಖಡಾಖಂಡಿತವಾಗಿ ಹೇಳಿದ್ದಾರೆ. ನೂರಕ್ಕೆ ತೊಂಬತ್ತೈದರಷ್ಟು ಸತ್ಯ ಎಂದಾಗ ನನಗಂತೂ ಕುತೂಹಲ ಎರಡುಪಟ್ಟಾಯಿತು. ಹೋದರೆ ಮುನ್ನೂರು ರೂಪಾಯಿ. ಬಂದರೆ ನನ್ನ ಭವಿಷ್ಯ ಮತ್ತು ಇಂಥಹ ಒಂದು ವಿಜ್ನಾನಕ್ಕೇ ಸವಾಲೆಸಗುವುದರ ಬಗ್ಗೆ ತಿಳಿದುಕೊಂಡಂತಾಗುತ್ತದೆ ಎಂದು ಹೋಗಲೇಬೇಕು ಎಂದು ನಿರ್ಧರಿಸಿದೆ. ಮೊನ್ನೆ ಭಾನುವಾರ ಹೋಗಿ ಹೆಬ್ಬೆರಳಿನ ಗುರುತು ಮತ್ತು ಹುಟ್ಟಿದ ದಿನಾಂಕ ಕೊಟ್ಟು ಬಂದೆ. ಅದೇ ದಿನ ಸಂಜೆ ಕರೆಮಾಡಿ, ನಿಮ್ಮ ತಾಳೆಗರಿ ಸಿಕ್ಕರೆ ತಿಳಿಸುತ್ತೇವೆ ಎಂದರು. ಅವರಿಗೆ ಫೋನ್ ಯಾವಾಗ ಮಾಡುತ್ತೇನೋ ಅನಿಸುತ್ತಿತ್ತು. ಫೋನ್ ಮಾಡಿದಾಗ ಇವತ್ತು ಸಂಜೆ ಬಂದವರಲ್ಲವೋ? ಹುಟ್ಟಿದ ವರ್ಷ 1980 ಎಂದಾಗ ನಾನು ಸರಿಪಡಿಸಿದೆ. ಅಲ್ಲ ಅದು 1983 ಎಂದು. ಮತ್ತೆ ಈ ವರ್ಷದ ತಾಳೆಗರಿ ಹುಡುಕಬೇಕು ಮತ್ತೆ ಹೆಬ್ಬೆರಳಿನ ಗುರುತಿಗೆ ಹೊಂದಿಸಬೇಕು ಎಂದುಕೊಳ್ಳುತ್ತಿರುವಾಗಲೇ, ಓ ಹೌದಾ... ಪರವಾಗಿಲ್ಲ ಅದೂ ಸಿಕ್ಕಿದೆ, ನಾಳೆ ಐದು ಘಂಟೆಗೆ ಬಂದುಬಿಡಿ ಎಂದರು. ಆಗಲೇ ನನ್ನ ಅನುಮಾನ ಶುರುವಾಗಿಹೋಯ್ತು. ಅಷ್ಟು ಬೇಗ ಹೇಗೆ ಹುಡುಕಿದರು? ಹಾಗಿ ಹುಡುಕುವುದಾಗಿದ್ದರೆ ಮೊದಲು ಸಂಜೆ ಕರೆಮಾಡಿ ಎಂದು ಯಾಕೆ ಹೇಳಿದ್ದರು? ಏನೋ ಇರಬೇಕು. ನನಗೆ ನಾನೇ ಸಮಾಧಾನ ತಂದುಕೊಂಡೆ.

ಅಫೀಸಿನಲ್ಲಿ ಏನೋ ನೆಪ ಹೇಳಿ ಸರಿಯಾಗಿ ಐದು ಘಂಟೆಗೆ ಅಲ್ಲಿ ಹಾಜರಾದೆ. ಒಂದು ಹತ್ತು ನಿಮಿಷ ಕಾದಬಳಿಕ ನನ್ನನ್ನು ಒಂದು ರೂಮಿನಲ್ಲಿ ಕರೆದುಕೊಂಡು ಹೋದರು. ಅಲ್ಲಿ ಒಂದು ಮೇಜು ನಾಲ್ಕಾರು ಕುರ್ಚಿಗಳು ಒಂದು ಟೇಪ್ ರೆಕಾರ್ಡರ್ ಇತ್ತು. ಅಲ್ಲೇ ಒಂದು ಹತ್ತು ನಿಮಿಷ ಕಾದಬಳಿಕ ಒಬ್ಬಾತ ತನ್ನ ಕೈಯಲ್ಲಿ ತಾಳೆಗರಿಯ ಒಂದು ಕಟ್ಟನ್ನು ಹಿಡಿದುಕೊಂಡು ಬಂದು ನನ್ನ ಎದುರು ಮೇಜಿನ ಅತ್ತಕಡೆಯ ಕುರ್ಚಿಯಲ್ಲಿ ಕುಳಿತುಕೊಂಡ. ಅವನ ಜೊತೆ ಒಬ್ಬ ಹೆಂಗಸು ಅವನು ತಮಿಳಿನಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಅನುವಾದಿಸಲು. ಮತ್ತೊಬ್ಬ ಮೂಕ ಪ್ರೇಕ್ಷಕ. "ಈಗ ತಾಳೆಗರಿ ಯಾವುದು ಎನ್ನುವುದನ್ನು ಹುಡುಕುತ್ತೇವೆ" ಎಂದು ಅವಳು ನನಗೆ ಹೇಳಿದ ಕೂಡಲೆ ಆತ ತಾಳೆಗರಿಗಳನ್ನು ಓದಲು ಶುರುಮಾಡಿಕೊಂಡ. ’ಮಣ ಮಣ ಮಣ ನಾಡಿ... ಮಣ ಮಣ#$% %$#@$% @#$%@ ಕಳಂಬು ಕಳಂಬು ನಿಮ್ಮ ಹೆಸರು ’ಪ’ ದಿಂದ ಶುರು ಆಗುತ್ತದೆಯೇ?"
"ಇಲ್ಲ"
’ಮಣ ಮಣ ಮಣ ನಾಡಿ... ಮಣ ಮಣ#$% %$#@$% @#$%@ ಕಳಂಬು ಕಳಂಬು ನಿಮಗೆ ಮದುವೆ ಆಗಿದೆಯೇ?"
"ಹೌದು"
’ಮಣ ಮಣ ಮಣ ನಾಡಿ... ಮಣ ಮಣ#$% %$#@$% @#$%@ ಕಳಂಬು ಕಳಂಬು ನಿಮ್ಮ ತಮ್ಮನಿಗೂ ಮದುವೆಯಾಗಿದೆಯೇ?"
"ತಮ್ಮನಿಗೆ ಮದುವೆ ಆಗಿಲ್ಲ"
"ನಿಮ್ಮ ಅಣ್ಣನ ಹೆಸರು ’ಸ’ ದಿಂದ ಶುರುವಾಗುತ್ತದೆಯೇ?"
"ನನಗೆ ಅಣ್ಣ ಇಲ್ಲ"
ಹೀಗೆ ಪ್ರತಿಯೊಂದೂ ಪ್ರಶ್ನೆಗೆ ನನ್ನ ಉತ್ತರ "ಅಲ್ಲ" ಎಂದಾದಾಗ ಆ ತಾಳೆಗರಿಯನ್ನು ತೆಗೆದು ಪಕ್ಕದಲ್ಲಿಡುತ್ತಿದ್ದ. ಅದು ನನ್ನದಲ್ಲ ಎಂದು. ಅವನ ಪ್ರಶ್ನೆಗಳು ಮುಂದುವರಿದವು. ಬಹುಷಃ ಆತ ಕಮ್ಮಿಯೆಂದರೂ ನೂರೈವತ್ತು ಇನ್ನೂರು ಪ್ರಶ್ನೆಗಳನ್ನು ಕೇಳಿರಬಹುದು. ನನ್ನ ಹೆಸರು ಮೂರು ಅಕ್ಷರದ್ದೇ? ಅದರಲ್ಲಿ ದ ಬರುತ್ತದೆಯೇ? ರ ಬರುತ್ತದೆಯೇ? ಮೊದಲನೆಯದು ಸ ಕೊನೆಯದು ಥ? ಹೀಗೇ ನನ್ನ ಹೆಂಡತಿಯ ಹೆಸರು ಅಪ್ಪನ ಹೆಸರು ತಾಯಿಯ ಹೆಸರು ಎಲ್ಲವನ್ನೂ ಕೇಳಿಯೇ ತಿಳಿದುಕೊಂಡ. ಆದರೆ ಪೂರ್ತಿಯಾಗಿ ಅಲ್ಲ. ಎಷ್ಟನೇ ಅಕ್ಷರ ಯಾವುದು ಎಂದು. ಒಂದು ಪ್ರಶ್ನೆ ನನ್ನ ಬಗ್ಗಾದರೆ ಇನ್ನೊಂದು ನನ್ನಪ್ಪನ ಬಗ್ಗೆ. ಇನ್ನೊಂದು ಹೆಂಡತಿಯ ಬಗ್ಗೆ. ಒಟ್ಟಿನಲ್ಲಿ ಉತ್ತರಿಸುವವರಿಗೆ ತಾನು ಎಲ್ಲವನ್ನೂ ಹೇಳುತ್ತಿದ್ದೇನೆ ಎಂದೇ ಎನಿಸಿರಬಾರದು. ಹಾಗಿರುತ್ತಿದ್ದವು ಅವನ ಪ್ರಶ್ನೆಗಳು. ಕೊನೆಯದಾಗಿ ಅವನಿಗೆ ಎಲ್ಲವೂ ತಿಳಿಯಿತು ಎಂದಾದಕೂಡಲೇ ನಿಮ್ಮ ಹೆಸರು ಸಿದ್ಧಾರ್ಥ ನಿಮ್ಮ ತಂದೆ ಕಮಲಾಕರ ತಾಯಿ ಸುನಂದಾ ಹೆಂಡತಿ ಪೂರ್ಣಿಮಾ ಹೌದಾ? ಹೌದು ಎಂದಾದಕೂಡಲೇ ನನ್ನ ತಾಳೆಗರಿ ಸಿಕ್ಕಿಯೇಬಿಟ್ಟಿತು ಎನ್ನುವ ತರಹ ಅದನ್ನು ತೆಗೆದುಕೊಂಡು ಮತ್ತೆ ಇನ್ನೊಂದು ಕೋಣೆಗೆ ತೆರಳಿದ.

ನನಗೆ ಆಗಲೇ ಅರ್ಥವಾಗಿಹೋಗಿತ್ತು. ಇವರು ಯಾವ ನಾಡಿಗ್ರಂಥವನ್ನೂ ಓದುತ್ತಿಲ್ಲ. ಕೇವಲ ಪ್ರಶ್ನೆಗಳನ್ನು ಕೇಳಿ ನನ್ನನ್ನೇ ಮೂರ್ಖನನ್ನಾಗಿಸುತ್ತಿದ್ದಅರೆ ಎಂದು. ಕಳಂಬು ಕಳಂಬು ಎನ್ನುವುದು, ಒಂದು ಕಲ್ಲು ಒಗೆಯುವುದು. ಬಿದ್ದರೆ ಮಾವಿನಕಾಯಿ ಹೋದರೆ ಕಲ್ಲು. ಈ ಕಳಂಬುಗಳನ್ನು ಕೇಳಲಿಕ್ಕೆ ಮುನ್ನೂರು ರೂಪಾಯಿ ತೆತ್ತುದಕ್ಕೆ ಹೇಮಂತನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತಲಿತ್ತು. ಆದರೂ ಈಗ ಯಾವುದೋ ಗರಿ ತರುತ್ತಾನಂತಲ್ಲಾ... ಅದರಲ್ಲಾದರೂ ಸರಿಯಾಗಿರಬಹುದು. ಇವೆಲ್ಲಾ ಒಂದು ಬಿಲ್ಡ್‌ಅಪ್ ಕೊಡಲಿಕ್ಕಿರಬಹುದು ಎಂದೂ ಅನಿಸುತ್ತಿತ್ತು. ಮತ್ತೆ ಅದೇ ಮೂರು ಜನ ಮತ್ತೊಂದು ತಾಳೆಗರಿ ಕಟ್ಟನ್ನು ಹಿಡಿದುಕೊಂಡು ಬಂದು ನನ್ನ ಮುಂದೆ ಕುಳಿತರು. ಆದರೆ ಈಸಲ ವಿಶೇಷ ಎಂದರೆ ನನ್ನ ಕುಂಡಲಿಯನ್ನು ಅವನು ಒಂದು ಪಟ್ಟಿಯಲ್ಲಿ ಬರೆದುಕೊಂಡು ಬಂದಿದ್ದ. ಅದರ ಜೊತೆಗೆ ಒಂದಿಷ್ಟು ಟಿಪ್ಪಣಿಗಳನ್ನೂ ಬರೆದುಕೊಂಡಿದ್ದ. ಅದರ ಮೇಲೆಯೇ ಅವನ ತಾಳೆಗರಿ ಕಟ್ಟನ್ನು ಇಟ್ಟುಕೊಂಡು ಓದಲು ಸಿದ್ಧನಾದ. ಅವನ ಪಕ್ಕದಲ್ಲಿದ್ದ ಅನುವಾದಕಿ ಟೇಪ್ ರೆಕಾರ್ಡರ್‌ಗೆ ಹೊಸ ಕೆಸೆಟ್ ಹಾಕಿ ರೆಡಿ ಮಾಡಿದಳು. ಶುರುವಾಯಿತು ನನ್ನ ಭವಿಷ್ಯವಾಚನ.

ಅದೇ ಹಳೆಯ ಪುರಾಣ ಮತ್ತೆ ಹೇಳಲ್ಪಟ್ಟಿತು. ನಿನ್ನ ಹೆಸರು ಇದು. ನಿನ್ನಪ್ಪನ ಹೆಸರು ಇದು. ತಾಯಿ, ಹೆಂಡತಿ ಎಲ್ಲಾ ಬಂದು ಹೋದರು. ಆಮೇಲೆ ಆಗಲೇ ನಾನೇ ಹೇಳಿದ್ದ ಕೆಲವು ಉತ್ತರಗಳ ಪುನರಾವಲೋಕನ. ಸ್ವಲ್ಪ ಬೇರೆ ರೀತಿಯಲ್ಲಿ. ಆಗ ನಾನು ನನ್ನ ತಂದೆಗೆ ಸ್ವಲ್ಪ ಪೊಲಿಟಿಕಲ್ ಕಾಂಟ್ಯಾಕ್ಟ್ಸ್ ಇದೆ ಎಂದು ಹೇಳಿದ್ದರೆ, ಈಗ ಅವರಿಂದ ಬಂದ ಭವಿಷ್ಯವೇನೆಂದರೆ, ನಿಮಗೆ ಆಗದೇ ಇರುವವರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಸಹಿಸದ ಕೆಲವರು ಕುತಂತ್ರ ಮಾಡುತ್ತಾರೆ ಇತ್ಯಾದಿ ಇತ್ಯಾದಿ. ಅಲ್ಲಿ ಯಾವುದೇ ಗ್ರಂಥವಿಲ್ಲ ಎಂಬುದಂತೂ ನನಗೆ ಗೊತ್ತಾಗಿಹೋಗಿತ್ತು. ಆದರೆ ಈ ಮನುಷ್ಯನಿಗೆ ಕುಂಡಲಿ ಹಾಕಿಕೊಟ್ಟರೂ ಜಾತಕ ಹೇಳಲು ಬರುತ್ತಿಲ್ಲ ಎನ್ನುವುದು ಗೊತ್ತಾಯಿತು. ಒಟ್ಟಿನಲ್ಲಿ ನನಗೆ ಈಗ ಸಿಕ್ಕಾಪಟ್ಟೆ ಗಂಡಾಂತರಗಳಿವೆ. ಬೋನಸ್ ಸಿಗುವುದಿಲ್ಲ. ಪ್ರಮೋಷನ್ ಸಿಗುವುದಿಲ್ಲ. ಬಹುಷಃ ಅವನಿಗೆ ರೆಸೆಷನ್ ಬಗ್ಗೆ ತಿಳಿದಿರಬೇಕು! ಈ ಎಲ್ಲ ತೊಂದರೆಗಳ ನಿವಾರಣೆಗೆ ನಮ್ಮ ಗುರುಗಳು ನಲವತ್ತೆಂಟು ದಿನಗಳ ಕಾಲ ಗಣಪತಿಯ ಉಪಾಸನೆ ಮಾಡುತ್ತಾರೆ. ಅದಕ್ಕೆ ದಿವಸಕ್ಕೆ 50ರುಪಾಯಿ ಆಗುತ್ತದೆ. ಒಟ್ಟೂ 2400ರೂ. ನಾನು ’ನಮಸ್ಕಾರ’ ಹೇಳಿ ಎದ್ದುಬಂದೆ.

ನ್ಯಾಯವಾಗಿ ಬದುಕಲಿಕ್ಕೆ ಸಾವಿರ ಮಾರ್ಗಗಳಿವೆ. ಸುಳ್ಳುಹೇಳಿ ಜನರಿಗೆ ಮೋಸಮಾಡಿಯೇ ಬದುಕಬೇಕೆ? ಒಟ್ಟಿನಲ್ಲಿ ನನಗಂತೂ ನಾಡಿ ಬಗ್ಗೆ ಇದ್ದ ಕುತೂಹಲ ಕರಗಿತು. ಅಂದಹಾಗೆ ಅದರ ವಿಳಾಸವನ್ನೇ ಹೇಳಲಿಲ್ಲ. ಅದು "ಶ್ರೀ ಕೌಶಿಕ ಅಗಸ್ತ್ಯನಾಡಿ ವಾಕ್ಯ ಜ್ಯೋತಿಷ್ಯಾಲಯ", ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು. ಶಾಖೆಗಳು: ಲಂಡನ್, ಶ್ರೀಲಂಕಾ, ಮಲೇಷಿಯಾ ಹಾಗು ತಿರುಚಿ! ನೀವು ಹೋಗುವುದಾದರೆ ಇದಕ್ಕಂತೂ ಹೋಗಬೇಡಿ. ಅಲ್ಲೆ ಇನ್ನೊಂದು ನಾಡಿಭವಿಷ್ಯ ಹೇಳುವವರಿದ್ದಾರಂತೆ. ಅದು ಶುಕನಾಡಿ. ಇನ್ನು ಅಲ್ಲಿ ಬೇಕಾದರೆ ಪ್ರಯತ್ನಿಸಿ. ನಾಡಿಗ್ರಂಥಗಳೇ ಸುಳ್ಳು ಎಂದು ಹೇಳುವಷ್ಟು ಧೈರ್ಯ ನನ್ನಲ್ಲಿಲ್ಲ. ಆದರೆ ನಾನು ಹೋಗಿದ್ದ ಕಡೆಯಂತೂ ನಾಡಿಯೂ ಇಲ್ಲಾ ಗ್ರಂಥವೂ ಇಲ್ಲಾ. ಬರೀ ಮೈಂಡ್ ಗೇಮ್ ಅಷ್ಟೆ.

Tuesday, March 3, 2009

ಶಿವಪ್ಪ ಕಾಯೋ ತಂದೆ

ಎಂಥಾ ಪರಿಸ್ಥಿತಿ ಬಂದುಬಿಟ್ಟಿದೆ! ಮೊದಲು ಶಿರಸಿಯ ಸುತ್ತಮುತ್ತ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲಾ ಎಂದು ಗೋಳಾಡುತ್ತಿದ್ದರು. ಯಾಕೆಂದರೆ ಐಟಿ ಪ್ರಭಾವ. ಎಲ್ಲರಿಗೂ ಐಟಿ ಹುಡುಗರೇ ಬೇಕು. ಬೆಂಗಳೂರಲ್ಲೇ ಇರಬೇಕು. ತಿಂಗಳಿಗೆ ಮೂವತ್ತು ನಲವತ್ತು ಸಾವಿರ ಸಂಬಳ ತೆಗೆದುಕೊಳ್ಳುತ್ತಿರಬೇಕು. ಒಟ್ಟಿನಲ್ಲಿ ಎಲ್ಲರಿಗೂ ಐಟಿ ಹುಚ್ಚು ಹಿಡಿದಿತ್ತು. ಧಿಡೀರನೆ ರೆಸೆಷನ್ನು ಶುರು ಆಯ್ತು ನೋಡಿ, ಈಗ ಐಟಿ ಹುಡುಗರಿಗೇ ಮದುವೆಗೆ ಹೆಣ್ಣು ಸಿಗುವುದು ಕಷ್ಟವಾಗಿಬಿಟ್ಟಿದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ! ಹಾಗಂತ ಊರಿನಕಡೆಯ ಹುಡುಗರಿಗೆ ಹೆಣ್ಣು ಸಿಗುತ್ತಿವೆ ಎಂದಲ್ಲ. ಈಗಿನ ಹೆಣ್ಣುಮಕ್ಕಳ ಡಿಮ್ಯಾಂಡ್ ಏನಪ್ಪಾ ಅಂದ್ರೆ, ಹುಡುಗ ಐಟಿಯಲ್ಲಿ ಇದ್ದರೂ ಊರಿನಲ್ಲಿ 2-3ಎಕರೆ ಜಮೀನಿರಬೇಕು! ಕಂಪನಿಯಿಂದ ಹೊರಕ್ಕೆ ಹಾಕಿದರೂ ಊರಿಗೆ ಹೋಗಿ ಮಣ್ಣು ಹೊರಬಹುದು ಎಂಬುದು ಅವರ ಯೋಚನೆ. ಆದರೆ ಒಂದು ಸಲ ಕೀಬೋರ್ಡ್ ಒತ್ತಿದವರಿಗೆ ಮಣ್ಣು ಹೊರುವುದು ಸುಲಭದ ಮಾತಲ್ಲ ಎನ್ನುವುದು ಅವರಿಗಿನ್ನೂ ಹೊಳೆದಿಲ್ಲ. ಅದೇನೇ ಇರಲಿ...

ಈ ಐಟಿ ಇಂಡಸ್ಟ್ರಿ ತನ್ನ ಶ್ರೇಯಸ್ಸಿನ ತುತ್ತತುದಿಯಲ್ಲಿದ್ದಾಗ ಮದುವೆ ಫಿಕ್ಸ್ ಆಗಿ ಮುಹೂರ್ತಕ್ಕೆ ಸ್ವಲ್ಪ ವಿಳಂಬವಾಗಿ ಈಗ ಮದುವೆಯಾಗುತ್ತಿರುವ ಹೆಣ್ಣುಮಕ್ಕಳ ಪರಿಸ್ಥಿತಿ ನೋಡಿದರೆ ನನಗೆ ಯಾಕೋ ಅಯ್ಯೋ ಪಾಪ ಅನ್ನಿಸುತ್ತಿದೆ. ಅದರಲ್ಲೂ ಮದುವೆ ಆಗುವ ಗಂಡು ಸತ್ಯಂನಲ್ಲಿ ಕೆಲಸಮಾಡುತ್ತಿದ್ದರೆ ಅವಳ ದುಃಖಕ್ಕೆ ಎಣೆಯಿದೆಯೆ? ಬಹಶಃ ಅಂಥಾ ಹೆಣ್ಣುಮಕ್ಕಳೆಲ್ಲ ಕುಳಿತು ಹೀಗೆ ಶಿವನ ಹತ್ತಿರ ಮೊರೆಯಿಡುತ್ತಿರಬಹುದು...


ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ
ಐಟಿಯವನ ವರಿಸಲಾರೆ ಕಾಪಾಡಯಾ ಹರನೇ

ಐಟಿಯವನು ಎಂದು ಮೊದಲು ಭ್ರಮಿತಗೊಂಡೆ ನಾ
ಕೈ ತುಂಬಾ ಸಂಬಳ ತರುವ ಎಂದುಕೊಂಡೆ ನಾ

ಕಾಫಿಡೇಗೆ ಬಾ ಎನ್ನಲು ಮುಗಿಲ ನೋಡಿದಾ
ರಿಸೆಷನ್ನು ಸಂಬಳ ಕಡಿತಾ ಏನೊ ಹೇಳಿದಾ
ಕೊನೆಗೆ ವರ್ಷದ ಬೋನಸ್ ಕೂಡಾ ಇಲ್ಲವೆನ್ನುತಾ
ಕೆಲಸ ಹೋಗಿಲ್ಲ ಸಧ್ಯ ಎಂದು ಅರುಹಿದಾ

ಸಿನೆಮಾಗೆ ಕರೆದರೆ ಏನೊ ನೆಪವ ಹೇಳಿದಾ
ಟೆಕೆಟನ್ನು ತೆಗೆದಾಗಿದೆ ಎನ್ನಲು ಬರಲು ಒಪ್ಪಿದಾ
ಪಾಪ್‌ ಕಾರ್ನು ನಿನ್ನಯ ದೇಹಕೆ ಒಗ್ಗದೆನ್ನುತಾ
ಎರಡು ರೂಪಾಯಿಯ ಲಾಲಿ ಪಪ್ಪು ಕೊಡಿಸಿದಾ

ರಾತ್ರಿ ಕಾಲ್ ಮಾಡು ಎಂದರೆ ಮಿಸ್ಕಾಲ್ ನೀಡಿದಾ
ನಾನೇ ಕಾಲ್ ಮಾಡಿದ ಮೇಲೆ ಬ್ಲೇಡು ಹಾಕಿದಾ
ಮದುವೆಯಾದ ಮೇಲೆ ಹನಿಮೂನ್ ಬಗ್ಗೆ ಹೇಳುತಾ
ನಂದಿಬೆಟ್ಟವೆ ಸುಂದರ ತಾಣ ಎನ್ನತೊಡಗಿದಾ

ಅಪಾರ್ಟ್‌ಮೆಂಟು ಸೈಟು ಎಲ್ಲಾ ಮರೆತು ಹೋಗಿದೆ
ಚಿಕ್ಕದಾದ ಬಾಡಿಗೆ ಮನೆಯೇ ಸಾಕು ಎನಿಸಿದೆ
ಇಲ್ಲಿರುವುದು ಸುಮ್ಮನೆ ಅಲ್ಲಿ ನಮ್ಮನೆಯೊಂದಿದೆ
ಎನ್ನುವ ವೇದಾಂತದ ಮಾತೇ ಆಸ್ತಿಯಾಗಿದೆ

ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ
ಐಟಿಯವನ ವರಿಸಲಾರೆ ಕಾಪಾಡಯಾ ಹರನೇ