Thursday, July 15, 2010

ಮುಗಿಯದ ಮುಕ್ತ


[ವಿ.ಸೂ.: ಇದು ಒಬ್ಬ ನಾಡಾಡಿಯ ವಿಮರ್ಶೆಯಾಗಿದ್ದು ಕೇವಲ ನನ್ನ ವಯಕ್ತಿಕ ಅಭಿಪ್ರಾಯವಾಗಿರುತ್ತದೆ. ಬೇರೆಯವರ ವಿಚಾರಗಳು ಇದಕ್ಕೆ ತದ್ವಿರುದ್ಧವೂ ಆಗಿರಬಹುದು. ಇದನ್ನು ಇಲ್ಲಿ ಪ್ರಕಟಿಸುತ್ತಿರುವ ಉದ್ದೇಶ ಯಾರನ್ನೂ ನಿಂದಿಸುವುದಕ್ಕಾಗಿಯೋ ಬೇಸರಪಡಿಸುವುದಕ್ಕಾಗಿಯೋ ಸರ್ವಥಾ ಅಲ್ಲ.]


ಒಂದು ಮನೆ. ಗಂಡಸರಿದ್ದೂ ಇಲ್ಲದಂತಿರುವ ಮನೆ. ಮನೆಯ ಯಜಮಾನನಿಗೆ ತಿಕ್ಕಲು. ದುಡಿಮೆಯಿಲ್ಲ. ಹಿರಿಯ ಮಗಳಿಗೆ ಡೇಟ್ ಬಾರ್ ಆದಮೇಲೆ ಮದುವೆ. ಆದರೂ ಅವಳೇ ಈ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. ಮನೆಯಲ್ಲಿ ಉಳಿದವರೆಲ್ಲಾ ಕೆಲಸಕ್ಕೆ ಬಾರದವರು. ಒಬ್ಬ ತಮ್ಮನಿಗೆ ಯಾವಾಗಲೂ ಕೆಲಸ ಹೋಗಿರುತ್ತದೆ. ಇನ್ನೊಬ್ಬ ತಮ್ಮ ಉಣ್ಣುವುದನ್ನಷ್ಟೇ ಕಲಿತಿದ್ದಾನೆ. ಅದಷ್ಟೇ ಅಲ್ಲದೆ ಇನ್ನೊಂದಿಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತಾನೆ.
ಇನ್ನೊಂದು ಮನೆ. ಇಲ್ಲೂ ಯಜಮಾನನಿಗೆ ತಿಕ್ಕಲು. ಹೆಂಡತಿ ದುಡಿಯುತ್ತಾಳೆ. ಮಗಳು ಸಮಾಜ ಸೇವಕಿ. ಮಗನಿಗೆ ಸ್ವಂತ ಬುದ್ಧಿ ಇಲ್ಲ. ಅಮ್ಮ, ತಂಗಿ ಹೇಳುವುದನ್ನು ಕೇಳುತ್ತಾನೆ.
ಇನ್ನೊಂದು ರಾಜಕೀಯ ಕುಟುಂಬ. ಮುಖ್ಯಮಂತ್ರಿಯ ಮನೆ. ಒಬ್ಬ ಹೆಂಗಸು. ಮುಖ್ಯಮಂತ್ರಿಯ ಹೆಂಡತಿ. ಒಬ್ಬ ಮಗ ಆದರ್ಶವಾದಿ ಆದರೆ ಪುಕ್ಕಲ. ಸ್ವಂತಬುದ್ಧಿ ಇಲ್ಲ. ಸ್ನೇಹಿತೆ (ಈಗಿನ ಹೆಂಡತಿ)ಯ ಮಾತೇ ಆತನಿಗೆ ಸರ್ವಸ್ವ. ಮುಖ್ಯಮಂತ್ರಿ ಮತ್ತು ಇನ್ನೊಬ್ಬ ಮಗ ಕಟುಕರು.
ಮತ್ತೆ ಕೆಲವು ಪಾತ್ರಗಳು. ಗಂಡು ಪಾತ್ರಗಳು ಎಲ್ಲಾ ಕಟುಕರು ಇಲ್ಲಾ ಬುದ್ಧಿ ಒಂದು ಸುತ್ತು ಕಮ್ಮಿ ಇರುವವರು. ಹೆಣ್ಣು ಪಾತ್ರಗಳು ಎಲ್ಲಾ ಸಮಾಜೋದ್ಧಾರಕರು.
ಇವೆಲ್ಲವುಗಳ ನಡುವೆ ಒಬ್ಬನೇ ಒಬ್ಬ ಬುದ್ಧಿವಂತ ಆದರ್ಶವಾದಿ ಗಂಡಸು. ಅನ್ಯಾಯ ಮಾಡುವವರಿಗೆ ಸಿಂಹಸ್ವಪ್ನ! ಬಡವರ ಬಂಧು. ದೊಡ್ಡ ದೊಡ್ಡ ಲಾಯರ್‍ಗಳನ್ನು ಮಣ್ಣುಮುಕ್ಕಿಸುವ ಮೇಧಾವಿ. ಕ್ಲೈಂಟ್‍ಗಳ ಹತ್ತಿರ ಫೀಸನ್ನೇ ಕೇಳದ ಕರುಣಾಮಯಿ. ಅವರೇ ಸಿ.ಎಸ್.ಪಿ. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರೂ ಕೂಡಾ!

ಹೌದು. ನಾನು ಹೇಳುತ್ತಿರುವುದು "ಮುಕ್ತ ಮುಕ್ತ" ಎಂಬ ಮುಗಿಯದ ಧಾರಾವಾಹಿಯ ಬಗ್ಗೆ. ಬಹುಷಃ ಇದು ಮುಗಿದರೂ "ಮುಕ್ತ ಮುಕ್ತ ಮುಕ್ತ" ಬರಬಹುದೇನೊ. ಅವರ ಹಿಂದಿನ ಧಾರಾವಾಹಿಗಳು ಹೇಗಿದ್ದವು ಎಂಬುದು ನನಗೆ ನೆನಪಿನಲ್ಲಿ ಉಳಿದಿಲ್ಲ. ಆದರೆ ಸಧ್ಯದ ಧಾರಾವಾಹಿಯಂತೂ ಸ್ತ್ರೀ ಸಾಮ್ರಾಜ್ಯದಲ್ಲಿ ಪುರುಷ ಶೋಷಣೆ! ನೋಡುಗರ ತಾಳ್ಮೆ ಪರೀಕ್ಷೆ. ಹಾಸಿಗೆ ಹಿಡಿದವರಿಗೆ ತೋರಿಸಿಬಿಟ್ಟರೆ ಬೇಗನೆ ಶಿವನ ಪಾದ ಸೇರಿಬಿಡುತ್ತಾರೆ. ಖೈದಿಗಳಿಗೆ ಇದನ್ನು ತೋರಿಸುವುದು ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ಎನಿಸಿಕೊಂಡಿದೆ. ಗರ್ಭಿಣಿಯರು ಇದನ್ನು ನೋಡಿದರೆ ನೂರಕ್ಕೆ ನೂರರಷ್ಟು ಹೆಣ್ಣಾಗುತ್ತದೆ. ಗಂಡಾದರೂ ಅದು ಹೆಣ್ಣಿನಂತೆಯೇ ಇರುತ್ತದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬುದ್ಧಿ ಭ್ರಮಣೆಯಾದವರು ಹೆಚ್ಚು ಗಲಾಟೆ ಮಾಡಿದರೆ, "ಮುಕ್ತ ಮುಕ್ತ" ತೋರಿಸುತ್ತೇನೆ ಎಂದು ಹೆದರಿಸುತ್ತಾರಂತೆ!

ನಮ್ಮನೆಯಲ್ಲಿ ಒಂದು ವರ್ಷದಿಂದ ಈ ಧಾರಾವಾಹಿಯನ್ನು ನೋಡುತ್ತಾ ಬಂದಿದ್ದಾರೆ. ಮೊನ್ನೆ ಊರಿಗೆ ಹೋದಾಗ ನಮ್ಮಪ್ಪನನ್ನು ಕೇಳಿದೆ.
"ಅಲ್ಲಾ ಅಪ್ಪಾ... ನೀವು ಒಂದು ವರ್ಷದಿಂದ ನೋಡ್ತಾ ಇದೀರಲ್ಲಾ... ಏನಾಯ್ತು"
"ಎಲ್ಲಾ ಪಾತ್ರಧಾರಿಗಳ ತೂಕ ಎರಡು ಕಿಲೋ ಜಾಸ್ತಿ ಆಯ್ತು! ಅಷ್ಟು ಬಿಟ್ಟರೆ no other development!"
"ಹೋಗ್ಲಿ ಬಿಡು... ಏನೋ ಒಂದು develop ಆಯ್ತಲ್ಲಾ..."

ಧಾರಾವಾಹಿಯಲ್ಲಿ ಒಬ್ಬನ ಜೊತೆ ಏನೋ ಒಂದು ಚಿಕ್ಕ ಘಟನೆ ನಡೆಯುತ್ತದೆ. ಅದನ್ನು ತೋರಿಸುತ್ತಾರೆ. ಇನ್ನೊಬ್ಬ ಬಂದು ಏನಾಯ್ತು ಎನ್ನುತ್ತಾನೆ. ಅವನು ಹೇಳುತ್ತಾನೆ. ಇನ್ನೊಬ್ಬಳು ಬಂದು ಏನಾಯ್ತೋ ಎನ್ನುತ್ತಾಳೆ. ಅವನು ಮತ್ತೆ ಹೇಳುತ್ತಾನೆ. ಅವಳು ಅದನ್ನೇ ಮತ್ತೆ ಹೇಳಿ, ಹೀಗಾಯ್ತಾ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಇನ್ನೊಬ್ಬ ಬರುತ್ತಾನೆ ಅವನಿಗೂ ಮತ್ತೆ ಹೇಳುತ್ತಾರೆ! ಇವೆಲ್ಲವನ್ನು ನೋಡಿ ಪ್ರೇಕ್ಷಕ ಮೂರ್ಛೆ ಹೋಗುತ್ತಾನೆ. ಇದು ದಿನನಿತ್ಯದ ಕಥೆ.

ಶಾಂಭವಿ ಟೀಚರ್ ಮನೆ ಒಂದು ರೀತಿಯ ವಿಶಿಷ್ಟ ಜಾತಿಯ ದೈಹಿಕವಾಗಿ ಕೊಬ್ಬಿದ ಮಂಗಗಳನ್ನು ಸಾಕಿದ zoo ಇದ್ದಂತೆ. ಯಾರಾದರು ಮನೆಗೆ ಬಂದರೆ ಒಂದು ಮಂಗ ಇನ್ನೊಂದಕ್ಕೆ ನೋಡಲು ಹೇಳುತ್ತದೆ. ಅದು ಹೋಗಿ ನೋಡುತ್ತದೆ. ವಾಪಸ್ ಬಂದು ಯಾರು ಎಂದು ಹೇಳುತ್ತದೆ. ಈಗ ಎಲ್ಲ ಮಂಗಗಳೂ ಒಂದರ ಹಿಂದೆ ಒಂದರಂತೆ ಹೊರಗೆ ಓಡುತ್ತವೆ. ಮಿಕ ಮಿಕ ನಡುತ್ತಾ ನಿಲ್ಲುತ್ತವೆ. ಸಂಬಂಧವಿಲ್ಲದಿದ್ದರೂ ಮಧ್ಯ ಬಾಯಿ ಹಾಕುತ್ತವೆ. ಯಾರೇ ಬರಲಿ ಗೂಂಡಾಗಳು, ರಾಜಕಾರಣಿಗಳು, ಪೋಲೀಸರು, ಪರಿಚಯದವರು, ಟೈಮ್ ಪಾಸ್‌ಗೆ ಬಂದವರು, ಯಾರೇ ಬಂದರೂ ಹೆಣ್ಣು ಮಂಗಗಳು ಮುಂದೆ ಬಂದು ಮಾತಾಡುತ್ತವೆ. ಗಂಡು ಮಂಗಗಳು ಹೌದು ಹೌದು ಎನ್ನುತ್ತವೆ!

ಪಾತ್ರಗಳಲ್ಲಿ ಹಿಡಿತ ಇಲ್ಲ. ಇವತ್ತು ಒಂದು ರೀತಿ ಇದ್ದ ಪಾತ್ರ ನಾಳೆ ಇನ್ನೊಂದು ರೀತಿ ವರ್ತಿಸುತ್ತದೆ. ಒಬ್ಬ ಸಾಫ್ಟ್‌ವೇರ್ ಇಂಜಿನೀಯರ್ ನಾಡಿದ್ದು ಸೈಂಟಿಸ್ಟ್ ಆಗಿಬಿಟ್ಟಿರುತ್ತಾನೆ. ಕೆಲವರ ಅತೀ ಮೃದು ಧೋರಣೆ, ಕೆಲವರ ಹುಂಬತನ, ಕೆಲವರ ಮಕ್ಕಳ ಬುದ್ಧಿ ನೋಡುಗರ ತಾಳ್ಮೆ ಪರೀಕ್ಷಿಸುತ್ತದೆ. ಶೀರ್ಷಿಕೆ ಹಾಡೊಂದನ್ನು ಬಿಟ್ಟರೆ ಹೇಳಿಕೊಳ್ಳುವಂತ ಯಾವ ವಿಷಯಗಳೂ ಇಲ್ಲಲ್ಲ. ಬಹುಷ: ಇವತ್ತು ಶೂಟಿಂಗಿಗೆ ಯಾರು ಬಂದಿದ್ದಾರೋ ಅವರನ್ನು ಬಳಸಿಕೊಂಡು ಕಥೆ ಬೆಳೆಸಿದಂತಿದೆ. ಗಟ್ಟಿಯಿಲ್ಲದ ಪಾತ್ರಗಳು, ಬಾಲಿಶ ಸಂಭಾಷಣೆ, ದುರ್ಬಲ ಕಥಾಹಂದರ, ಅನವಷ್ಯಕವಾಗಿ ಆದರ್ಶಗಳ ತುರುಕುವಿಕೆ ಈ ಧಾರಾವಾಹಿಯನ್ನು ಅಸಹಜ ಹಾಗೂ ಅಪ್ರಸ್ತುತವಾಗಿಸಿವೆ. ಈ ಧಾರಾವಾಹಿ ರಾತ್ರಿ ಮರುಪ್ರಸಾರಗೊಳ್ಳುವುದು ಮತ್ತು ಇದರ ಸಂವಾದ ಏರ್ಪಡಿಸುತ್ತಿರುವುದು ಹಾಸ್ಯಾಸ್ಪದ.

ಕೆಲವು ಅನಿವಾರ್ಯ ಕಾರಣಗಳಿಂದ ಅಪರೂಪಕ್ಕಾದರೂ ಇದನ್ನು ನೋಡಲೇಬೇಕಾದಾಗ ಆದ ಯಾತನೆಯ ಹಾಗೂ ತಡೆದುಕೊಂಡ ಕೋಪದ ಪ್ರತಿಫಲ ಈ ವಿಮರ್ಶೆ. ಸೀತಾರಾಮ್ ಅವರೇ ದಯವಿಟ್ಟು "ಮುಕ್ತ ಮುಕ್ತ ಮುಕ್ತ" ದಲ್ಲಾದರೂ ಈ ರೀತಿಯ ನಿರ್ಲಕ್ಷ ತೋರಬೇಡಿ. ಅಲ್ಲಾದರೂ ಒಳ್ಳೆಯ ಗಂಡಸರಿಗೆ 33% ಮೀಸಲಾತಿ ಕೊಡಿ.

Wednesday, July 14, 2010

ಆರಾಮಾಗಿ... ಇದ್ದೆ ನಾನು...


ಬೆಳಿಗ್ಗೆ ಅಲಾರ್ಮ್ ಬಾರಿಸಿದಕೂಡಲೇ ಎದ್ದುಬಿಡುವವರು ಯಾರಾದರು ಇದ್ದರೆ ನಿಮ್ಮ ಪಾದದ ಜೆರಾಕ್ಸ್ ಕಾಪಿ ನನ್ನ ಅಡ್ರೆಸ್ಸಿಗೆ ದಯವಿಟ್ಟು ಕಳುಹಿಸಿಕೊಡಿ. ಅದನ್ನು ನೋಡಿಯಾದರೂ ನನಗೆ ಬೆಳಿಗ್ಗೆ ಬೇಗ ಏಳುವ ಸ್ಪೂರ್ತಿ ಬರಬಹುದೇನೋ. ಏಷ್ಟೋ ಸಲ ಪ್ರಯತ್ನಿಸಿದ್ದೇನೆ. ಅಷ್ಟೇ ಏಕೆ, ಪ್ರತಿದಿನವೂ ಮಲಗುವಾಗ ಮಾರನೇ ದಿನ ಬೇಗ ಏಳಬೇಕು ಎಂದೇ ಅಂದುಕೊಂಡು ಮಲಗುವುದು. ಆದರೂ ಇನ್ನೂ ಅದು ಸಾಧ್ಯವಾಗಲಿಲ್ಲ. ಯಾಕೆಂದರೆ ಹಾಗೆ ಅಂದುಕೊಂಡಿದ್ದು ಬೆಳಿಗ್ಗೆ ಮರೆತು ಹೋಗಿರುತ್ತದಲ್ಲಾ! ಅದು ಬೆಳಿಗ್ಗೆಯೂ ನೆನಪಾಗಿದ್ದರೆ ಆಗ ಸಾಧ್ಯವಾಗುತ್ತಿತ್ತೇನೊ. ಆದರೆ ವಿವೇಕಾನಂದರು ಹೇಳಿಲ್ಲವೇ? Try and try until you succeed ಅಂತ. ನಾನೂ ನನ್ನ ಪ್ರಯತ್ನ ಮುಂದುವರಿಸುತ್ತೇನೆ.

ಮೊನ್ನೆ ಹೀಗೇ ನಿದ್ದೆಗಣ್ಣಿನಲ್ಲಿ ಆಫೀಸಿಗೆ ಹೊರಟಾಗ ಫಿವರ್ ಎಫ್ ಎಮ್ ನಲ್ಲಿ ಜಯಂತ್ ಕಾಯ್ಕಿಣಿಯವರ "ಆರಾಮಾಗಿ ಇದ್ದೆ ನಾನು" ಹಾಡು ಹಾಕಿದ್ದರು. ಅವರು ತಾಸಿಗೆ ಮೂರು ಬಾರಿ ಇದನ್ನೇ ಹಾಕುತ್ತಾರೆ ಅದು ಬೇರೆ ವಿಷಯ. ಆದರೆ ಆಗ ನಾನಗೂ ಹಾಗೇ ಅನ್ನಿಸಿತು. ಆರಾಮಾಗೇ ಇದ್ನಲ್ಲಪ್ಪಾ... ಸುಮ್ನೆ ಕಷ್ಟ ಪಡ್ತಿದೀನಿ ಎಂದು. ಅದೇ ಸಂದರ್ಭಕ್ಕೆ ಅದೇ ಹಾಡಿನ ರೀಮಿಕ್ಸ್:

ಆರಾಮಾಗಿ ಇದ್ದೆ ನಾನು ಒಂದೇ ಸಮನೆ ಅದು ಏನಾಯಿತು
ಅರೆ ಏನಾಯತು ಸದ್ದು ಜೋರಾಯಿತು ಬಲು ಕಹಿಯಾದ ಅನುಭವವಾಯಿತು
ಕೈ ಅಲುಗಾಡಿತು ಸದ್ದು ಮರೆಯಾಯಿತು ಮತ್ತೊಮ್ಮೆ ಆರಾಮು ಆಯಿತು

ಮಲಗಿದೆ ಪುನಃ ಮಲಗಿದೆ ಮನ ಇನ್ನೂನು ಸಂತಸಗೊಂಡಿತು
ಹೊಡೆಯುತ ಗೊರಕೆ ಹೊಡೆಯುತ ಕ್ಷಣ ಒಂದೊಂದು ಘರ್ಜನೆಯಾಯಿತು

ಮ್ಯಾನೇಜರ್ರು ನನ್ನ ಹಿಂದೆ ಬಂದು ನಿಂತ ಹಾಗೆ ಕನಸಾಗಿ ಈಗ
ದಿಗಿಲಾಯಿತು ಮತ್ತೆ ಎಚ್ಚರಾಯಿತು ಮನಸೀಗ ಬೇಸರಗೊಂಡಿತು

ಹೊರಟೆನು ಈಗ ಕೆಲಸಕೆ ಈ ನಿರ್ದಯಿ ದಿನವನು ಶಪಿಸುತಾ
ಹೊರಟಿತು ಹೃದಯ ಹೊರಟಿತು ಮತ್ತೊಮ್ಮೆ ಹಾಸಿಗೆ ನೆನೆಯುತಾ

ಕಾಣದಂತೆ ಸ್ವೈಪು ಮಾಡಿ ಈಗ ಓಡಿಹೋಗಿ ಮತ್ತೆ ಮಲುಗಲೇನು
ಹಾಳಾಯಿತು ಲೈಫು ಹಾಳಾಯಿತು ಈ ಬಡಜೀವ ಮತ್ತೆ ಬಡವಾಯಿತು

Wednesday, July 7, 2010

ಜೇನು ಕೊಂದ ವೀರ


ಅವತ್ತು ಬಾಗಲಕೋಟ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನೇತಾಜಿ ಬ್ಲಾಕ್‌ನ ಹುಡುಗರಲ್ಲೆಲ್ಲ ಭಾರೀ ಸುದ್ದಿ. ಅಲ್ಲೇ ಒಂದು ರೂಮಿನ ಕಿಟಕಿಗೆ ಕಟ್ಟಿದ್ದ ದೊಡ್ಡದಾದ ಒಂದು ಹೆಜ್ಜೇನಿನ ಗೂಡನ್ನು ಇವತ್ತು ರಾತ್ರಿ ಓಡಿಸುತ್ತಾರಂತೆ. ಅದಕ್ಕಾಗಿ ಒಂದು ಘಂಟೆ ಕರೆಂಟ್ ತೆಗೆಯುತ್ತಾರಂತೆ... ಆಗ ಎಲ್ಲರೂ ರೂಮಿನಲ್ಲಿ ಕೂತಿರಬೇಕಂತೆ... ಹಾಗಂತೆ ಹೀಗಂತೆ... ಕೆಲವರಿಗೆ ಯಾಕೆ ಎಂದು ಗೊತ್ತಿಲ್ಲದೆಯೇ ಉತ್ಸಾಹ ತುಂಬಿ ತುಳುಕುತ್ತಿತ್ತು. ಜೇನು ತೆಗೆದರೆ ಆ ರೂಮಿನವರು ನಿರ್ಭಯವಾಗಿರಬಹುದು ಎಂಬ ಉದಾತ್ತ ಧೋರಣೆಯಿಂದಲ್ಲ. ಒಂದು ಘಂಟೆ ಕರೆಂಟ್ ಹೋಗುತ್ತದಲ್ಲಾ ಎನ್ನುವ ಖುಷಿ. ಛೆ ಪಾಪ ಅದು ಅದರ ಪಾಡಿಗೆ ಗೂಡು ಕಟ್ಟಿಕೊಂಡಿದೆ. ಅದನ್ಯಾಕೆ ಓಡಿಸಬೇಕು? ಕೆಲಸ ಮುಗಿದ ಮೇಲೆ ಅದೇ ತಾನಾಗಿ ಹಾರಿ ಹೋಗುತ್ತದೆ ಎಂದು ಈ ಕಾರ್ಯಕ್ರಮಕ್ಕೆ ಕಪ್ಪು ಧ್ವಜ ತೋರಿಸುತ್ತಿದ್ದ ಜೇನುಪ್ರೇಮಿಗಳೂ ಇದ್ದರು. ಒಟ್ಟಿನಲ್ಲಿ ಅವತ್ತು ರಾತ್ರಿ ಎಲ್ಲರಿಗೂ ಭರ್ಜರಿ ಮೋಜಂತೂ ಕಾದಿತ್ತು. ಕರೆಂಟು ಹೋಗುತ್ತದೆ ಎಂದು ಮೊದಲೇ ತಿಳಿಸಿದರೆ ಎಲ್ಲರ ತಲೆಯಲ್ಲೂ ಒಂದೊಂದು ಕಾರ್ಯಕ್ರಮಗಳು ಮೂಡಿಬಂದಿರುತ್ತದೆ. ಬಹಳಷ್ಟು ಮಂದಿಯ ತಲೆಯಲ್ಲಿ ನಿದ್ರೆ ಮಾಡುವ ಕಾರ್ಯಕ್ರಮ ಬಂದರೆ ಅದು ನಮ್ಮ ಶೈಕ್ಷಣಿಕ ಪದ್ಧತಿಯ ಸೋಲು ಎಂದೇ ಎನ್ನಬೇಕು. ನಾವೂ ಬೇರೆ ಏನೂ ತೋಚದೆ ಸುಮ್ಮನೆ ಮಲಗಿದರಾಯಿತು ಎಂದುಕೊಂಡಿದ್ದೆವು.

61ನೇ ರೂಮಿನವರೆಲ್ಲರೂ ಅವತ್ತು ಸಂಜೆ 62ರಲ್ಲೇ ಠಿಕಾಣಿ ಹೂಡಿದ್ದರು. ಊಟ ಮುಗಿಸಿದ ಕೂಡಲೇ ಅಧ್ಯಯನಕ್ಕೆ ಯಾರಿಗಾದರೂ ಮನಸ್ಸು ಬರುತ್ತದೆಯೇ? ಆ ಲಕ್ಚರರ್ ಹೀಗೆ. ಈ ಲಕ್ಚರರ್ ಹಾಗೆ ಎನ್ನುವ ಮಾತುಗಳು ಬರತೊಡಗಿದ್ದವು. ಅವರು ನಮ್ಮನ್ನು ಅಳೆದು ಇಂಟರ್ನಲ್ ಪರೀಕ್ಷೆಯಲ್ಲಿ 25ಕ್ಕೆ ಒಂದಂಕಿ ಕೊಟ್ಟ ತಪ್ಪಿಗೆ ನಾವು ಅವರಿಗೆ ಶಿಕ್ಷೆ ವಿಧಿಸುತ್ತಿದ್ದೆವು. ಅಷ್ಟರಲ್ಲಿ ಶುರುವಾಯಿತು ಗದ್ದಲ. "ಇನ್ ಸೊಲ್ಪ್ ಹೊತ್ನ್ಯಾಗ ಲೈಟ್ ಆರಿಸ್ತಾರಂತ್ರಲೇ... ಎಲ್ಲರೂ ರೂಮ್‌ನಾಗ ಬಾಗ್ಲಾ ಹಾಕ್ಕೊಂಡ್ ಕೂತ್ಗೋರಿ..." ಯಾರೋ ಒಬ್ಬ ಸಮಾಜ ಸೇವಕ ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದ್ದ. ಜೇನು ಕಟ್ಟಿದ್ದ ಜಾಗ ನಮ್ಮ ರೂಮಿನಿಂದ ಬಹಳ ಹತ್ತಿರದಲ್ಲೇ ಇತ್ತು. 61ಕ್ಕೆ ಇನ್ನೂ ಹತ್ತಿರವಾಗುತ್ತಿದ್ದುದರಿಂದ, ಆ ರೂಮಿನ ಎಲ್ಲರೂ ನಮ್ಮ ರೂಮಿಗೇ ಬಂದು ಕುಳಿತಿದ್ದರು. ಎಲ್ಲರೂ ರೂಮಿನಲ್ಲೇ ಕುಳಿತುಕೊಳ್ಳಿ ಎನ್ನುವ ಕೂಗು ಕೇಳಿದೊಡನೆಯೇ ಎಲ್ಲರೂ ಹೊರಗೆ ಬಂದು ನೋಡತೊಡಗಿದರು. ಎಷ್ಟೆಂದರೂ ಈಗಿನ ಕಾಲದ ಯುವಕರಲ್ಲವೇ! ಮಾಡಬೇಡಿ ಎಂದಿದ್ದನ್ನು ಮಾಡಿಯೇ ತೀರುವವರು. ಆಕಡೆ ಈಕಡೆ ಎಲ್ಲರ ಮುಖ ಮುಖ ನೋಡಿಕೊಂಡು ಸುಮ್ಮನಾದರು. ಜೇನು ಬಿಡಿಸುವವರ ಸುಳಿವೇ ಇಲ್ಲ.

ಕರೆಂಟ್ ಹೋಯಿತು. ಗಾಢಾಂಧಕಾರ! ಈಗ ಎಲ್ಲರಿಗೂ ಗಡಿಬಿಡಿ ಶುರುವಾಯಿತು. ಆಗ ರೂಮಿನಿಂದ ಹೊರಗಡೆ ಧೈರ್ಯವಾಗಿ ಓಡಾಡುತ್ತಿದ್ದ ವೀರರು ಈಗ ಹಾಸ್ಟೆಲ್ಲಿನ ಗೋಡೆಯನ್ನೆಲ್ಲಾ ಸವರುತ್ತಾ ಬಾಗಿಲು ಎಲ್ಲಿದೆ ಎಂದು ಹುಡುಕಾಡತೊಡಗಿದರು. "ಥೂ ಇವನಾಪ್ನ... ಬಾಗ್ಲಾ ಎಲ್ಲೋತೋ?" ಎನ್ನುವ ಕೂಗೂ ಕೇಳಿಸತೊಡಗಿತ್ತು. ನಮ್ಮ ರೂಮಿನ ಬುದ್ಧಿವಂತರೆಲ್ಲರೂ ಹೊರಗೆ ಹೋಗದೆ ಬಾಗಿಲ ಸಂದಿಯಿಂದಲೇ ಹೊರಗಡೆ ನೋಡುತ್ತಿದ್ದುದರಿಂದ ಯಾವುದೇ ತೊಂದರೆಯಾಗದೆ ಒಳಗೆ ಬಂದು ಸೇರಿಕೊಂಡು ಬಾಗಿಲು ಹಾಕಿಕೊಂಡೆವು. ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಶಾಂತವಾಯಿತು. ಬಾಗಿಲ ಸಂದಿಯಿಂದ ಒಂದು ಟಾರ್ಚ್ ಬೆಳಕು ಇಣುಕುತ್ತಿತ್ತು. ಹಾಸ್ಟೆಲ್ ಮ್ಯಾನೇಜರ್ ಕೆಲವು ಜನರೊಟ್ಟಿಗೆ ಬರುತ್ತಿರಬೇಕು ಎಂದುಕೊಂಡೆವು. ಅಂತೂ ಆ ಜೇನುಗೂಡು ಕಟ್ಟಿದ್ದ ರೂಮಿನ ಕಡೆ ಆ ಜನರ ಕಾಲಿನ ಸದ್ದು ಹೊರಟಿತ್ತು. ಹತ್ತು ನಿಮಿಷ ಏನೋ ಸಣ್ಣ ಪುಟ್ಟ ಶಬ್ದಗಳು ಕೇಳಿಬಂದವು. ಮತ್ತೆ ಸ್ಮಶಾನ ಮೌನ. ನಮಗಂತೂ ಏನು ನೆಡೆಯುತ್ತಿದೆ ಎಂದು ಊಹಿಸುವುದೇ ಕಷ್ಟವಾಯಿತು. ಅತ್ತಕಡೆ ಜೇನುಗಳನ್ನು ಓಡಿಸಿಯಾಯಿತು ಎಂದೂ ತಿಳಿದುಕೊಳ್ಳುವಂತಿಲ್ಲ, ಇತ್ತಕಡೆ ಇನ್ನೂ ಎಷ್ಟು ಹೊತ್ತು ಹೀಗಿರಬೇಕು ಎನ್ನುವ ಚಿಂತೆ. ಸ್ವಲ್ಪ ಹೊತ್ತಿನಲ್ಲೇ ಜೇನುಗಳ ಗುಂಯ್‌ಗುಡುವ ಶಬ್ದ ಕೇಳಲು ಶುರುವಾಯಿತು. ನಮ್ಮಲ್ಲಿ ಯಾರೂ ಅಷ್ಟೊಂದು ಜೇನಿನ ಶಬ್ದವನ್ನು ಕೇಳೇ ಇರಲಿಲ್ಲ. ಮೊದಲು ಇದು ಎಂತಹ ಶಬ್ದ ಎಂಬುದೇ ತಿಳಿಯಲಿಲ್ಲ. ಆದರೆ ಅಲ್ಲಿದ್ದುದು ಒಂದೇ ಸಾಧ್ಯತೆ. ಆದ್ದರಿಂದ ಇದು ಅದೇ ಎಂದು ನಿಶ್ಚಯಿಸಿದೆವು.
ಸ್ವಲ್ಪ ಹೊತ್ತಿನ ನಂತರ ಮತ್ತೆ ಮೌನ.

ಈಗ ನಮ್ಮ ಕುತೂಹಲ ಮತ್ತೂ ಎರಡುಪಟ್ಟಾಯಿತು. ಜೇನೆಲ್ಲಾ ಓಡಿಹೋದವೇ ಅಥವಾ ಒಮ್ಮೆ ಆಕಡೆ ಈಕಡೆ ಹಾರಿ ಪುನಃ ಹೋಗಿ ಅಲ್ಲೇ ಕುಳಿತವೇ ಎಂದು. ಜಗತ್ತಿನಲ್ಲಿ ದೇವರು ಎಷ್ಟು ಜನ ಬುದ್ಧಿವಂತರನ್ನು ಸೃಷ್ಟಿಸಿದ್ದಾನೋ ಅಷ್ಟೇ ಜನ ಅತೀಬುದ್ಧಿವಂತರನ್ನೂ ಸೃಷ್ಟಿಸಿದ್ದಾನೆ. ಮತ್ತು ಅಷ್ಟೇ ಆತುರಗಾರರನ್ನೂ ಸೃಷ್ಟಿಸಿದ್ದಾನೆ. ಆದರೆ ಈ ಅಮಿತ್ ಇವೆರಡರದರ ಸಮ್ಮಿಶ್ರಣ! ಅತೀ ಆತುರದ ಅತೀ ಬುದ್ಧಿವಂತ! ರೂಮಿನ ವೆಂಟಿಲೇಷನ್ ಇಂದ ಜೇನು ಒಳಗೆಬಂದುಬಿಡಬಹುದು ಎಂದು ಗ್ರಹಿಸಿದ್ದ ಆತ, ಆಗಲೇ ಅದಕ್ಕೆ ರಟ್ಟನ್ನು ಮುಚ್ಚಿ ಗಮ್ ಟೇಪ್ ಹಚ್ಚಿಬಿಟ್ಟಿದ್ದ! ಆದರೆ ಈ ಸ್ಮಶಾನ ಮೌನ ಅವನಿಗೆ ಬಹಳಹೊತ್ತು ಸಹಿಸಲಸಾಧ್ಯವಾಗಿತ್ತು. ಅಲ್ಲೇ ಎಲ್ಲೋ ಕೈಹಾಕಿ ಮೇಣದಬತ್ತಿ ಹುಡುಕಿ, ಹೊತ್ತಿಸಿಬಿಟ್ಟ. ಸಿಗರೇಟ್ ಸೇದದಿದ್ದರೂ ಲೈಟರ್ ಇಟ್ಟುಕೊಳ್ಳುವ ಅಪರೂಪದ ಅಭ್ಯಾಸ ಆತನದು. ಎಲ್ಲರೂ ಮುಖ ನೋಡಿಕೊಂಡೆವು. ಮುಖ ಒಂದನ್ನು ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಎಲ್ಲರೂ ಚಾದರವನ್ನು ಮೇಲಿನಿಂದ ಸಂಪೂರ್ಣವಾಗಿ ಹೊದ್ದುಕೊಂಡು ಗ್ರೀಕ್ ಕಾಲದವರಂತೆ ತೋರುತ್ತಿದ್ದೆವು. ಒಂದೆರಡು ನಿಮಿಷ ಕಳೆದರೂ ನಮ್ಮ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ!

ಅಷ್ಟರಲ್ಲಿ ಕೆಲವು ಜೇನು ಹುಳುಗಳ ಶಬ್ದ. ಎಲ್ಲಿ ಎಂದು ಹುಡುಕುತ್ತಿರುವಾಗಲೇ ಇಲ್ಲೇ ಎಲ್ಲೋ ನಮ್ಮ ಮುಂದೆ ಹಾರಾಡುತ್ತಿರುವಂತೆ ಕಂಡಿತು. ಮೊದಲೇ ಹೆದರಿದ್ದ ಸಂತ್ಯಾ "ಅಯ್ಯೋ... ಈ ಮ್ಯಾಣದ್ ಬತ್ತಿಂದಾಲೇ ಅವು ಬರಾಕತ್ತಾವ್ ಲೇ..." ಎಂದು ಚೀರುತ್ತಾ ಟೇಬಲ್ ಮೇಲಿಟ್ಟಿದ್ದ ಮೇಣದಬತ್ತಿಯನ್ನು ಕೈಯಿಂದ ಜಾಡಿಸಿಬಿಟ್ಟ. ಈಗ ಬೆಳಕೂ ಇಲ್ಲ, ಮೇಣದಬತ್ತಿಯೋ ಎಲ್ಲಿ ಹೋಯಿತೋ ಯಾರಿಗೂ ಗೊತ್ತಿಲ್ಲ. ಜೇನು ಹುಳುಗಳ ಹಾರಾಟ ಮಾತ್ರ ಕೇಳುತ್ತಿದೆ! ಎಲ್ಲರಿಗೂ ಹೆದರಿಕೆ ಪ್ರಾರಂಭವಾಯಿತು. ಮುಖವನ್ನೂ ಬಿಡದೆ ಮುಸುಕು ಹಾಕಿಕೊಂಡು ಮಲಗೇ ಬಿಟ್ಟರು. ಅಷ್ಟರಲ್ಲಿ ಬುದ್ಧಿವಂತ ಮಿರ್ಜಿ "ಮೊದಲು ಕ್ಯಾಂಡಲ್ ಹುಡಕ್ರಲೇ... ಒಂದೋ ಎರಡೋ ಬಂದಾವು ಅಷ್ಟೇ... ಹೊಡದು ಬಿಡೂಣು.." ಎಂದ. ಅಮಿತ್ ತನ್ನಲ್ಲಿದ್ದ ಲೈಟರ್ ಹಚ್ಚಿದ. ಎಲ್ಲರೂ ತಮ್ಮ ತಮ್ಮ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಸಜ್ಜಾದರು. ಎದುರಿಗೇ ಹಾರಾಡುತ್ತಿದ್ದ ಒಂದು ಜೇನು ಅಮಿತನ ಕಣ್ಣಿಗೆ ಬಿತ್ತು. ಚಪ್ಪಲಿಯಿಂದ ಅದಕ್ಕೆ ಹೊಡೆದ. ಅದರ ರಭಸಕ್ಕೆ ಅವನ ಕೈಲಿದ್ದ ಲೈಟರ್ ಕೂಡಾ ಕೈಜಾರಿ ಎಲ್ಲೋ ಹೋಗಿ ಬಿತ್ತು. ಮತ್ತೆ ಗಾಡಾಂಧಕಾರ. ಕತ್ತಲಿನಲ್ಲೇ ಮಾತುಗಳು ತೇಲಿಬಂದವು.
"ಸಾಯ್ಸಿದಿಯೇನ್ಲೇ..?"
"ಹೊಡದ್ನಿ... ಆದ್ರ ಸತ್ತೋ ಇಲ್ಲೋ ಗೊತ್ತಿಲ್ಲ...!"
"ಥೂ ನಿಮ್ಮವ್ನ್... ಒಂದ್ ಕೆಲ್ಸಾನೂ ನೆಟ್ಟಗ್ ಮಾಡಾಂಗಿಲ್ಲಲೋ..."
ನಮ್ಮೆಲ್ಲರಿಗೂ ನಡುಕ ಶುರುವಾಗುವುದೊಂದು ಬಾಕಿ! ಈ ಅಮಿತ ಹೀರೋ ಆಗಲಿಕ್ಕೆ ಹೋಗಿ, ಎಲ್ಲರನ್ನೂ ಆಪತ್ತಿಗೆ ಸಿಕ್ಕಿಸಿದ್ನಲ್ಲಪ್ಪಾ ಅಂದುಕೊಂಡು ಮತ್ತೆ ಮುಸುಕು ಹಾಕಿಕೊಂಡು ಮೂಲೆ ಹಿಡಿದು ಕೂತುಬಿಟ್ಟೆವು.

ಹಾಸ್ಟೆಲ್‍ನವರು ಕರೆಂಟು ಕೊಡುವಹೊತ್ತಿಗೆ ಇಪ್ಪತ್ತು ನಿಮಿಷಗಳೇ ಕಳೆದುಹೋಗಿದ್ದವು. ಕೋಣೆಯತುಂಬಾ ಹುಡುಕಿದ ಮೇಲೆ ಒಂದು ಮೂಲೆಯಲ್ಲಿ ಪೆಟ್ಟುತಿಂದು ದಾರಿಕಾಣದೆ ಬಿದ್ದಿದ್ದ ಒಂದು ಜೇನು ಕಣ್ಣಿಗೆ ಬಿತ್ತು. ಹೊರಗಡೆ ಪರಿಸ್ಥಿತಿ ಏನಾಗಿದೆ ಎಂದು ನೋಡಿದರೆ, ಗೂಡಿನ ಕೆಳಗೆ ಹೊಗೆ ಹಾಕಿ ಜೇನನ್ನು ಓಡಿಸುವ ಬದಲು, ಪೂರ್ತಿ ಜೇನುಗೂಡಿಗೇ ಯಾವುದೋ ಪೌಡರ್ ಎರಚಿಬಿಟ್ಟಿದ್ದರು. ಬೋರಿಕ್ ಪೌಡರ್ ಇರಬೇಕೆಂದು ಊಹಿಸಿದೆವು. ಬಹಳಷ್ಟು ಜೇನುಗಳು ಸತ್ತೇ ಹೋಗಿದ್ದವು. ಇನ್ನುಳಿದಷ್ಟು ಹಾರಿ ಹೋಗಿದ್ದವು. ಕೆಲವು ಅಲ್ಲೇ ಕೆಳಗೆ ಬಿದ್ದು ಒದ್ದಾಡುತ್ತಿದ್ದವು. ಅದನ್ನೇ ನೋಡಲು ಬಂದ ಒಬ್ಬ "ಅಯ್ಯೋ ಇವು ಕಚ್ಚಾಂಗಿಲ್ಲಲೇ.. ಸುಮ್ನ ಸಾಯ್ಸಿದ್ರು ನೋಡು..." ಎಂದನ್ನುತ್ತಾ ಹೊರನೆಡೆದ. ತುಂಬಾ ಬೇಸರವಾಯಿತು. ಅವು ಇದುವರೆಗೆ ಒಬ್ಬನಿಗೂ ಕಚ್ಚಿರಲಿಲ್ಲ. ಅವುಗಳ ಪಾಡಿಗೆ ಗೂಡುಕಟ್ಟಿಕೊಂಡಿದ್ದವು. ಓಡಿಸಲೇ ಬೇಕು ಎಂದು ನಿರ್ಧಾರ ಮಾಡಿದರೂ ಓಡಿಸುವ ವಿಧಾನ ಗೊತ್ತಿರುವವರನ್ನು ಕರೆತಂದು ಪ್ರಾಣಹಾನಿಯಾಗದಂತೆ ಓಡಿಸಬಹುದಿತ್ತು. ಹೀಗೆ ಎಲ್ಲ ಹುಳುಗಳನ್ನು ಸಾಯಿಸುವ ಅಗತ್ಯವಿರಲಿಲ್ಲ. ಒಂದು ಮಾತಂತು ನಿಜ, ಮನುಷ್ಯನಿದ್ದಲ್ಲಿ ಬೇರೆಯವುಗಳಿಗೆ ಅವಕಾಶವಿಲ್ಲ! ಹತ್ತಾರು ಜನರ ಕಾರಣವಿಲ್ಲದ ಹೆದರಿಕೆಗೆ ನೂರಾರು ಜೇನುಗಳ ಮಾರಣಹೋಮ ನೆಡೆದುಹೋಗಿತ್ತು.