Tuesday, June 18, 2013

ಗುಟ್ಕಾ ನಿಷೇಧ ಹಾಗೂ ಸೈಡ್ ಇಫೆಕ್ಟ್ಸ್

ಯಾರು ಏನೇ ಹೇಳಿಕೊಳ್ಳಲಿ, ಸರ್ಕಾರವನ್ನು ತೆಗಳುವವರು ತೆಗಳುತ್ತಲೇ ಇರಲಿ. ಆದರೆ ಇವರು ಯಾರೂ ನಮ್ಮ ಘನ
ಸರ್ಕಾರದ ಸದುದ್ದೇಶವನ್ನು ತಿಳಿದುಕೊಳ್ಳುತ್ತಲೇ ಇಲ್ಲ! ನೇರವಾಗಿ ಹೇಳಿಕೊಳ್ಳಲಾಗದ ಕಾರಣಗಳು ’ಗುಟ್ಕಾ’ ನಿಷೇಧದ ಹಿಂದಿರುವುದು ಸ್ವಲ್ಪ ಯೋಚಿಸಿದವರಿಗೆಲ್ಲರಿಗೂ ಅರಿವಾಗುತ್ತದೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಪ್ರತಿಫಲವಾಗಿ ಒಳಿತು ಕೆಡಕುಗಳೆರಡೂ ಆಗೇ ಆಗುತ್ತದೆ. ಈ ನಿರ್ಧಾರವೂ ಇದೇ ರೀತಿಯ ಮಿಶ್ರ ಪ್ರತಿಫಲಗಳನ್ನು ಹೊಂದಿದೆ. ಮೊದಲಿಗೆ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿನ ಮರ್ಮ ತಿಳಿದುಕೊಳ್ಳೋಣ.

ಭಾರತದ ಅತೀ ದೊಡ್ಡ ಸಮಸ್ಯೆ ಯಾವುದು? ಜನಸಂಖ್ಯೆ! ಈ ಜನಸಂಖ್ಯೆ ನಿವಾರಣೆಗೆ ಸರ್ಕಾರ ಎಷ್ಟೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.. ಎಷ್ಟೊಂದು ಖರ್ಚು ಮಾಡಿಲ್ಲ! ಸರ್ಕಾರಿ ಆಸ್ಪತ್ರೆಗಳಲ್ಲಿ ನಿರೋಧ್‌ಗಳನ್ನೂ ಪುಗ್ಸಟ್ಟೆಯಾಗಿ ಕೊಟ್ಟರು. ಜನ ಅದನ್ನು ಮಕ್ಕಳು ಆಡುವ ಬಲೂನ್ ಎಂದುಕೊಂಡರೇ ಹೊರತು ಉಪಯೋಗ ತೆಗೆದುಕೊಂಡಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟಿರುವ ಸರ್ಕಾರ ಈಗ ’ಗುಟ್ಕಾ’ ನಿಷೇಧಿಸಿದೆ! ಇದರ ಹಿಂದಿರುವ ಕಾರಣ ಸಿಂಪಲ್ಲು. ಗುಟ್ಕಾ ತಿಂದರೆ ಎಷ್ಟು ಜನ ಸಾಯಬಹುದು? ಕ್ಯಾನ್ಸರ್ ಆಗಿ ಹೆಚ್ಚು ಅಂದರೆ ಒಬ್ಬನೇ ಒಬ್ಬ ಸಾಯಬಹುದು. ಅದನ್ನೇ ನಿಷೇಧಿಸಿಬಿಟ್ಟರೆ? ಗುಟ್ಕಾ ಸೇವಿಸುವವನು ಚಟಕ್ಕಾಗಿ ಏನಾದರೂ ಮಾಡಲೇ ಬೇಕಲ್ಲಾ... ಅವನ ಮುಂದಿರುವ ನೇರವಾದ ಆಯ್ಕೆ ಸಿಗರೇಟ್. ಗುಟ್ಕಾ ಸೇವಿಸುವ ಎಲ್ಲಾ ಜನರು ಗುಟ್ಕಾ ತ್ಯಜಿಸಿ ಸಿಗರೇಟ್ ಸೇದುವುದನ್ನು ರೂಢಿಸಿಕೊಂಡರೆ, ಅವನೊಟ್ಟಿಗೆ ಅವನು ಬಿಟ್ಟ ಹೊಗೆಯಲ್ಲೇ ಬದುಕಬೇಕಾದ ಇನ್ನೂ ಮೂರ್ನಾಲ್ಕು ಜನರನ್ನು ಕರೆದುಕೊಂಡೇ ಪರಲೋಕಕ್ಕೆ ಧಾವಿಸುತ್ತಾನೆ! ಜನಸಂಖ್ಯೆ ಕಡಿಮೆಯಾಗುವ ಮಟ್ಟ ಮೂರ್ನಾಲಕ್ಕು ಪಟ್ಟು ಜಾಸ್ತಿಯಾಗುತ್ತದೆ! ಈ ದೇಶೋಧ್ಧಾರದ ಕೆಲಸವನ್ನು ಅರ್ಥ ಮಾಡಿಕೊಳ್ಳದ ಜನ ಈ ನಿಯಮ ದುರುದ್ದೇಶದ್ದು ಎನ್ನುತ್ತಿದ್ದಾರೆ. ದೇವರೇ ಅವರಿಗೆ ಬುದ್ಧಿ ಕೊಡಬೇಕು.

ಆದರೂ ಈ ನಿರ್ಧಾರದಿಂದ ಜನರಿಗೆ ತೊಂದರೆಗಳೇ ಇಲ್ಲಾ ಎಂದೇನಲ್ಲಾ. ಬಹಳಷ್ಟು ತೊಂದರೆಗಳುಂಟಾಗುತ್ತವೆ. ಈ ಕೆಳಗಿನವು ಪ್ರಮುಖವಾದವುಗಳು.

೧. ನಗರದ ಧೋಬಿಗಳಿಗೆ ಕೆಲಸ ಕಮ್ಮಿಯಾಗಲಿದೆ! ಜನ ಗುಟ್ಕಾ ಸೇವಿಸಿ, ಬಸ್‌ಸ್ಟಾಪ್ ಗಳಲ್ಲಿ, ಬಸ್ ಚಲಿಸುವಾಗ, ಅಥವಾ ಅವರೇ ಚಲಿಸುತ್ತಿರುವಾಗ ಅತ್ತ ಇತ್ತ ನೋಡದೆ ಉಗುಳಿ ಪಕ್ಕದವರ ಬಟ್ಟೆಗೆ ಕೆಂಪು ಬಣ್ಣ ಬಳಿಯುವುದು ಕಡಿಮೆಯಾಗುವುದರಿಂದ ನಗರದ ಧೋಬಿಗಳಿಗೆ ಇದರಿಂದ ಲಾಸ್ ಆಗಲಿದೆ!

೨. ಪೌರ ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ! ಕಸಗುಡಿಸುವವರಿಗೆ ಕಡಿಮೆ ಕೆಲಸ ಬೀಳುವುದರಿಂದ ಅವರ ಸಂಖ್ಯೆ ತಗ್ಗಿಸಲು ಮುನಿಸಿಪಾಲಿಟಿಯವರು ನಿರ್ಧರಿಸಬಹುದು.

೩. ಶಬ್ದ ಮಾಲಿನ್ಯ ಹೆಚ್ಚಲಿದೆ! ಗುಟ್ಕಾ ತಿಂದು ಮಾತನಾಡಲಾಗದೆ 10-15 ನಿಮಿಷ ಮೌನವೃತ ಆಚರಿಸುವ ಜನ ಗುಟ್ಕಾ ನಿಷೇಧದಿಂದಾಗಿ ಬಾಯಿಗೆ ಬೀಗ ಹಾಕುವ ಕೆಲಸವನ್ನು ಬಿಡುತ್ತಾರೆ. ಈಗಲೇ ಲಿಮಿಟ್ ಮೀರಿರುವ ಶಬ್ದಮಾಲಿನ್ಯ ಇನ್ನೆಷ್ಟು ತೊಂದರೆ ತಂದೊಡ್ಡಬೇಕೋ...

೪. ಕಲಾರಸಿಕರ ಕೊರತೆ ಎದ್ದುಕಾಣಲಿದೆ! ಯಾವುದೇ ಸಂಗೀತ ಕಚೇರಿಯಾಗಲಿ, ನಾಟಕವಾಗಲಿ, ನೃತ್ಯವಾಗಲಿ ನೆಡೆಯುತ್ತಿರುವಾಗ ಪ್ರೇಕ್ಷಕರಲ್ಲಿ ಆಸಕ್ತಿಯಿಂದ ಕೇಳುತ್ತಿರುವ/ನೋಡುತ್ತಿರುವ ಪ್ರೇಕ್ಷಕರಲ್ಲಿ ಗುಟ್ಕಾ ಸೇವಿಸಿದವರ ಸಂಖ್ಯೆಯೇ ಹೆಚ್ಚು. ಗುಟ್ಕಾ ಸೇವಿಸಿರುವುದರಿಂದ ಅಕ್ಕ ಪಕ್ಕದವರ ಹತ್ತಿರ ಮಾತನಾಡಲಾಗದೆ ಮುಂದೆ ನೆಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಈ ನಿರ್ಧಾರದ ನಂತರ, ಸಿಗರೇಟ್ ಸೇದಲು ಎದ್ದು ಹೋಗಬಹುದು. ಅಥವಾ ಪಕ್ಕದವರ ಜೊತೆ ಹರಟುತ್ತಾ ಕೂರಬಹುದು. ಕಲಾವಿದರಂತೂ ಈ ಗುಟ್ಕಾವನ್ನು ಮಿಸ್ ಮಾಡಿಕೊಳ್ಳುತ್ತಾರೆ.

೫. ದಾರಿ ತಪ್ಪಿಸಿಕೊಂಡವರಿಗೆ ದೇವರೇ ಗತಿ! ಗುಡ್ಡಗಾಡಿನಲ್ಲಿ ಓಡಾದಿದವರಿಗೆ ಈ ಪರಿಸ್ಥಿತಿಯ ಅರಿವು ಸಹಜವಾಗೇ ಆಗುತ್ತದೆ. ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆಯೇ ಇಲ್ಲವೇ ಎನ್ನುವುದನ್ನು ನಿರ್ಧಾರ ಮಾಡುವುದು ದಾರಿಯ ಪಕ್ಕದಲ್ಲಿ ಬಿದ್ದ ಗುಟ್ಕಾ ಚೀಟಿಗಳು. ಗುಟ್ಕಾ ನಿಷೇಧದಿಂದ ಎಲ್ಲಾ ದಾರಿಗಳೂ ಸುಡುಗಾಡಿಗೇ ಕೊಂಡೊಯ್ಯುತ್ತವೇನೋ ಎಂದು ಭಾಸವಾಗಬಹುದು.

ಇಷ್ಟೊಂದು ಅನಾನುಕೂಲತೆಗಳಿದ್ದರೂ ಭಾರತ ನಿರ್ಮಾಣಕ್ಕೋಸ್ಕರ ಜನ ಹಾಗೂ ಸರ್ಕಾರ ಬದ್ಧವಾಗಿ ನಿಂತು ಗುಟ್ಕಾವನ್ನು ನಿಷೇಧಿಸಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಸರ್ಕಾರ ಮೇಲ್ಕಂಡ ಅನಾನುಕೂಲತೆಗಳಿಗೂ ಪರಿಹಾರ ಕಂಡುಹಿಡಿಯುತ್ತದೆ ಎನ್ನುವುದು ಒಬ್ಬ ಜನಸಾಮಾನ್ಯನ ವಿಶ್ವಾಸ!