Thursday, May 22, 2008

ಧೂಮವೆ ನನ್ನುಸಿರು!


ಮೊನ್ನೆ ರೇಡಿಯೋ ಮಿರ್ಚಿಯಲ್ಲಿ ಪಲ್ಲವಿ ನೆಡೆಸಿಕೊಡುವ ಮಿರ್ಚಿ talkies ಕೇಳುತ್ತಾ ಇದ್ದೆ. ಕರ್ಣ ಚಿತ್ರದ ’ಪ್ರೀತಿಯೆ ನನ್ನುರಿಸು’ ಹಾಡು ಪ್ರಸಾರವಾಗುತ್ತಿತ್ತು. ಇದು ’ಪ್ಯಾರ್ ಬಿನ ಚೈನ್ ಕಹಾಂ ರೇ’ ಹಾಡಿನ ರೀಮಿಕ್ಸು. ಅಲ್ಲಾ... ನಮ್ಮಲ್ಲಿ ಈ ರೀಮಿಕ್ಸಿನ ಚಟ ಯಾವಾಗಿಂದಲೋ ಇದೆಯಲ್ಲಾ... ಎಂದುಕೊಳ್ಳುತ್ತಿದ್ದೆ. ಅಷ್ಟಕ್ಕೂ ಒಳ್ಳೆಯದನ್ನ ಕಲಾತ್ಮಕವಾಗಿ ಕನ್ನಡೀಕರಿಸಿದರೆ ತಪ್ಪೇನು ಅನಿಸಿತು. ಅದರ ಜೊತೆಗೇ, ನಿಜವಾಗಿಯೂ ಈ ವಾಯುಮಾಲಿನ್ಯದ ನಡುವೆಯೂ ನಮಗೆ ಪ್ರೀತಿಯೇ ಉಸಿರಾಗಿದೆಯೇ ಎಂದು ಯೋಚಿಸತೊಡಗಿದೆ. ಆಗಿನ ಕಾಲದ ಜನರಿಗೆ ಪ್ರೀತಿಯೇ ಉಸಿರಾಗಿತ್ತೋ ಏನೊ. ಈಗಂತೂ ಬಿ. ಅರ್. ಲಕ್ಷ್ಮಣ್‌ರಾವ್ ಹೇಳಿದಂತೆ,
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂಥೆಯೇ ಅದು ಥೇಟು
ಬಿಡಬಲ್ಲೆನೇನೆ ನಿನ್ನಾ
ಚಿನ್ನಾ ಹಾಗೆಯೇ ಸಿಗರೇಟನ್ನ
ಎನ್ನುವ ಕಾಲ. ಆದ್ದರಿಂದ ಖಂಡಿತ ಜನರಿಗೀಗ ಧೂಮವೇ ಉಸಿರಾಗಿಬಿಟ್ಟಿದೆ! ಸಿಗರೇಟ್ ಧೂಮದ ಉಂಗುರಗಳ ಗುಂಗಿನಲ್ಲಿ ಈ ರೀಮಿಕ್ಸಿನ ರೀಮಿಕ್ಸ್.


ಧೂಮವೆ ನನ್ನುಸಿರು
ಧೂಮವೆ ನನ್ನುಸಿರು
ದಿನವೂ ಹಗಲು ಸಂಜೆ ರಾತ್ರಿ ಎಲ್ಲೆಂದರೆಲ್ಲಿ
ಹೊಗೆ ಕುಡಿಯುವುದೇ

ಸಿಗರೇಟ್ ಹೊಗೆಯನು ಕುಡಿಯುವುದು
ಕುಡಿಯುತ ಹರುಷವ ಪಡೆಯುವುದು
ಬಾನಲಿ ಉಂಗುರ ಬಿಡಿಸುವುದು
ಸ್ವರ್ಗವು ಇದುವೇಎನ್ನುವುದು
ಹರುಷದಿ ಪರಿಸರ ಕೆಡಿಸುವುದು

ಧೂಮದ ಕಾಟಕೆ ಜಗವೆಲ್ಲ
ಸೊರಗಿ ಹೋಗಿದೆ ಸುಳ್ಳಲ್ಲ
ಸಿಗರೇಟ್ ಸೇವನೆ ನಿಲ್ಲಲ್ಲ
ಹೊಗೆಕುಡಿದವಗೆ ಮುಪ್ಪಿಲ್ಲ
ಯೌವನ ಮುಗಿಯುತೆ ನಾನಿಲ್ಲ

ಒರಿಜಿನಲ್ ಸೌಂಡ್‌ಟ್ರಾಕ್ ಕೇಳಬಯಸುವವರು ಇಲ್ಲಿ ಕ್ಲಿಕ್ಕಿಸಿ.

Wednesday, May 14, 2008

ಬದುಕಿನ ಓಟದಲ್ಲಿ...


ಅಂದು ಯಾಕೋ ಬಹಳವಾಗಿಯೇ ಬೇಸರವಾಗುತ್ತಿತ್ತು. ಬೆಳಿಗ್ಗೆ ಆಫೀಸಿಗೆ ಹೋಗಿ ಮೇಲ್ ಚೆಕ್ ಮಾಡುವಷ್ಟರಲ್ಲೇ ತಿರುಗಿ ಮನೆಗೆ ಹೋಗಿಬಿಡಬೇಕೆಂದು ಮನಸ್ಸಾಗುತ್ತಿತ್ತು. ಟೀ ತೆಗೆದುಕೊಂಡುಬರಲು ಹೋದರೆ ದಾರಿಯಲ್ಲಿ ಸಿಕ್ಕವರೆಲ್ಲಾ ತೋರಿಸುವ ಅದೇ ಕೃತಕ ನಗೆ, ಟೀ ತಂದು ಕಂಪ್ಯೂಟರ್ ಮುಂದೆ ಕುಳಿತರೆ ಎದುರಿಗೆ ಅದೇ screen ಅದೇ code. ಮತ್ತೆ ನಿನ್ನೆ ಮಾಡಿದಂಥದೇ ಕೆಲಸ ಇವತ್ತೂ ಮಾಡಬೇಕಲ್ಲಪ್ಪಾ ಎಂದುಕೊಳ್ಳುತ್ತಿದ್ದೆ. ಅಷ್ಟಾಗಿಯೂ ನಾವು ಸಾಧಿಸುವುದಾದರೂ ಏನನ್ನು ಎನಿಸುತ್ತಿತ್ತು. ಊರಿನಲ್ಲಿ ಒಬ್ಬ ಶಿಕ್ಷಕನಿದ್ದರೆ ನಾಲ್ಕು ಜನ ವಿದ್ಯಾವಂತರಾಗುತ್ತಾರೆ, ಒಬ್ಬ ಡಾಕ್ಟರ್ ಇದ್ದರೆ ನಾಲ್ಕು ಜನ ರೋಗಮುಕ್ತರಾಗುತ್ತಾರೆ, ಒಬ್ಬ ರೈತನಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಊಟಮಾಡಿ ಹರಸುತ್ತಾರೆ. ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಇದ್ದರೆ? ಇದ್ದರೆ? ಏನಾಗುತ್ತದೆ? ಏನೂ ಹೊಳೆಯಲಿಲ್ಲ. ಹಾಂ... ಊರಿನಲ್ಲಿ ಜಾಗದ ಬೆಲೆ ಹೆಚ್ಚಾಗುತ್ತದೆ. ಮನೆಗಳ ಬಾಡಿಗೆ ವಿಪರೀತ ಏರುತ್ತದೆ. ಆಟೋದವರು ಟ್ಯಾಕ್ಸಿಯವರು ಅಪ್ಪನ ರೇಟ್ ಹೇಳುತ್ತಾರೆ. ಹೊಟೆಲ್‌ಗೆ ಹೋದರೆ ಸಾವಿರದ ಕೆಳಗೆ ಊಟವೇ ಆಗುವುದಿಲ್ಲ. ಅಂತೂ ಏನಾದರೊಂದು ಹೆಚ್ಚಾಗುತ್ತಿದೆ. ಛೆ, ಎಂಥ ಕೆಲಸ ಆಗಿಹೋಯ್ತು, ಹೋಗಿ ಹೋಗಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿಬಿಟ್ಟೆನಲ್ಲಾ ಎನಿಸತೊಡಗಿತು.

ಟೀ ಕುಡಿದು ಮುಗಿಸಿ ಇನ್ನೇನು ಕೆಲಸ ಮಾಡಲು ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಮೊಬೈಲ್‌ಗೆ ಯಾವುದೋ ನಂಬರ್‌ನಿಂದ ಕರೆ ಬಂತು. ಈ ಮೊಬೈಲ್ ಹಣೆಬರಹವೇ ಇಷ್ಟು. ಯಾವಾಗ ಕರೆ ಬರಲಿ ಎಂದು ಕಾಯುತ್ತಿರುತ್ತೇವೋ ಆಗ ಯಾವ ಕರೆಗಳೂ ಬರುವುದಿಲ್ಲ. ಏನಾದರೂ ಕೆಲಸ ಮಾಡಲು ಪ್ರಾರಂಭಿಸಿದ ಕೂಡಲೆ ಬಡಿದುಕೊಳ್ಳುತ್ತದೆ. ಯಾವುದೋ ಬ್ಯಾಂಕಿನಿಂದ, ನಿಮಗೆ ಲೈಫ್‌ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ಕೊಡುತ್ತಿದ್ದೇವೆ. ದಯವಿಟ್ಟು ತೆಗೆದುಕೊಳ್ಳಿ ಎಂದು. ಬ್ಯಾಡಾ ಹೋಗಮ್ಮಾ... ಎಂದು ಕರೆ ಮುಗಿಸಿದೆ. ಈ ಬ್ಯಾಂಕಿನವರು ಸಾಫ್ಟ್‌ವೇರ್ ಇಂಜಿನಿಯರುಗಳಿಗೇ ಏಕೆ ಕರೆ ಮಾಡಿ ಕಾರ್ಡ್ ತಗೆದುಕೊಳ್ಳಿ ಎನ್ನುತ್ತಾರೆ? ಬೇರೆಯವರಿಗೂ ಮಾಡುತ್ತಾರೇನೊ. ನನಗಂತೂ ಗೊತ್ತಿಲ್ಲ. ಆದರೆ ಇಷ್ಟೊಂದು ಸಂಬಳವಿರುವ ಈ ಜನರಿಗೆ ಸಾಲದ ಅಗತ್ಯವಾದರೂ ಏನು? ಮನುಷ್ಯನ ಮನಸ್ಸೇ ಹಾಗೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಎಷ್ಟೇ ಸಿಗಲಿ ಇನ್ನೂ ಬೇಕು ಎನ್ನುತ್ತಲೇ ಇರುತ್ತದೆ. ಹೀಗೆ ಬೇಕುಗಳು ಹೆಚ್ಚಾಗಿ ಜೇಬು ಖಾಲಿಯಾದಾಗಲಲ್ಲವೆ ಈ ಕ್ರೆಡಿಟ್ ಕಾರ್ಡ್‌ಗಳ ಉಪಯೋಗ. ಇಲ್ಲದಿದ್ದರೆ ತಿಂಗಳಿಗೆ 50-60ಸಾವಿರ ಸಂಬಳವಿರುವವರಿಗೆ ಸಾಲದ ಅಗತ್ಯವಾದರೂ ಏನಿರುತ್ತಿತ್ತು? ಹೀಗೆ ಸಾಲಗಾರರು ಹೆಚ್ಚಾಗಿರುತ್ತಿರುವುದರಿಂದಲೇ, ಬ್ಯಾಂಕುಗಳು ಕಂಡ ಕಂಡವರಿಗೆ ಕೇಳಿದಷ್ಟು ಸಾಲ ಕೊಡುವ ಸಾಮಾಜಿಕ ಕೆಲಸಕ್ಕೆ ಕೈಹಾಕಿರುವುದು. ಸಾಲದಲ್ಲೇ ಜೀವನ ಮಾಡುವುದಾದರೆ ಸಾಫ್ಟ್‌ವೇರ್ ಇಂಜಿನಿಯರ್ರೇ ಆಗಬೇಕಿತ್ತೆ? ಹೌದು. ಇಲ್ಲದಿದ್ದರೆ ಸಾಲ ಕೊಡುವವರೂ ಗತಿ ಇಲ್ಲ!

ಹಾಗೂ ಹೀಗೂ ಮೂರ್ನಾಲ್ಕು ಗಂಟೆ ಕಂಪ್ಯೂಟರ್ ಮುಂದೆ ತಪಸ್ಸು ಮಾಡಿದ ಮೇಲೆ ಊಟಕ್ಕೆ ಹೋದೆ. ಇದನ್ನು ಊಟ ಎನ್ನುವುದಕ್ಕಿಂತ ಸಂಜೆಯವರೆಗೂ ಬದುಕಿರಲು ಮಾಡಲೇಬೇಕಾದ ಕ್ರಿಯೆ ಎನ್ನುವುದು ಒಳಿತು. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ಯಾವ ಪುಣ್ಯಾತ್ಮ ಹೇಳಿದನೊ. ನನಗಂತೂ ಮುಂದಾದರೂ ಏನಾದರು ಮಾಡಬೇಕಲ್ಲಾ ಎನ್ನುವುದಕ್ಕೋಸ್ಕರ ಹೊಟ್ಟೆಗೆ ಹಾಕಬೇಕಿದೆ. ತಿನ್ನುವ ಅನ್ನದ ಬಗ್ಗೆ ಕೆಟ್ಟ ಮಾತಾಡಬಾರದಂತೆ. ಹಾಗೆಂದುಕೊಂಡು ಸುಳ್ಳನ್ನು ಹೇಳಲು ಸತ್ಯಂ ವದ ಧರ್ಮಂ ಚರ ಎನ್ನುವ ಮಾತಿನ ಅಡ್ಡಿ. ಎಲ್ಲಿ ನೋಡಿದರೂ ಕಾಂಟ್ರಡಿಕ್ಷನ್‌ಗಳು. ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮುಗಿಸಿ ಮತ್ತೆ ಕೀಲಿಮಣೆ ಒತ್ತಲು ಶುರುಮಾಡಿದೆ. ಮೊಬೈಲ್‌ಗೆ ಈ ಬಾರಿ ಬಂದಿದ್ದು ಒಂದು SMS. "Life is very crazy... what u want, u dont get... what u get, u dont enjoy... what u enjoy, is not permanent... what is permanent is boring! thats life..." ಇಷ್ಟೆಲ್ಲಾ ಭಾಷಣ ಬಿಗಿದು ಬೋರ್ ಮಾಡಿದಮೇಲೆ Good Aftrnoon ಬೇರೆ. ಯಾವನಪ್ಪಾ ಇವ್ನು... ಇದನ್ನ ಇವತ್ತೇ ಕಳಿಸ್ಬೇಕಿತ್ತಾ ಎಂದುಕೊಂಡೆ. ಹೊಟ್ಟೆ ತುಂಬಿದುದರ ಪ್ರಭಾವವದಿಂದ ತೂಕಡಿಕೆ ಶುರುವಾಯಿತು. ಅರೆಬರೆ ನಿದ್ದೆ ಮಾಡುತ್ತಾ ಕೆಲಸ ಮಾಡುವುದರ ಮಜವೇ ಬೇರೆ. ಎಲ್ಲೀ ಕೆಲಸ ತೆಗ್ಯಪ್ಪಾ... ಸುಮ್ನೆ ಮಲ್ಗಿಬಿಡೋಣ ಅಂತ ಕೆಲವುಸಲ ಅನಿಸುತ್ತದೆ. ಮಲಗಿದ ಕೋಡಲೇ ಪಕ್ಕದಲ್ಲಿ ಯಾರದ್ದಾದರೂ ಸದ್ದಾದರೆ ಅವರೇನೆಂದುಕೊಂಡುಬಿಡುತ್ತಾರೋ ಎಂದು ಎಚ್ಚರಗೊಂಡು ಮತ್ತೆ ಕಂಪ್ಯೂಟರ್ ಗುರಾಯಿಸುವ ಕೆಲಸ ಶುರುಮಾಡುವುದು. ಥತ್... ಬರೀ ಬೇರೆಯವರ ಸಲುವಾಗಿಯೇ ಬದುಕಬೇಕಾಗಿದೆಯಲ್ಲಾ...

ಸಾಫ್ಟ್‌ವೇರ್ ಕಂಪನಿಗಳಲ್ಲಿ ಟೀ ಕಾಫಿ ಖರ್ಚಾಗುವಷ್ಟು ಬೇರೆಲ್ಲೂ ಆಗಲಿಕ್ಕಿಲ್ಲ. ಕೆಲಸ ಪ್ರಾರಂಭಿಸಿದ ಅರ್ಧಗಂಟೆಗೇ ತೂಕಡಿಕೆಯೂ ಪ್ರಾರಂಭ. ಅದನ್ನೋಡಿಸಲು ಒಂದು ಕಪ್ ಕಾಫಿ. ಇಲ್ಲದಿದ್ದರೆ ಬೇಜಾರು ಕಳೆಯಲು. ಅದೂ ಇಲ್ಲದಿದ್ದರೆ ಬೇರೆಯವರಿಗೆ ಕಾಂಪನಿಕೊಡಲು. ಒಟ್ಟಿನಲ್ಲಿ ಕಂಪ್ಯೂಟರ್‌ಗಳಿಗಿಂತ ಟೀ ಮಷಿನ್‌ಗಳಿಗೇ ಹೆಚ್ಚಿನ ಕೆಲಸ. ಟೀ ಕುಡಿಯುವಾಗ ಮನಸ್ಸಿಗೆ ನೂರಾರು ಯೋಚನೆಗಳು. ಮನುಷ್ಯ ದುಡಿಯುವುದು ಏತಕ್ಕೆ? ಕೇವಲ ಹೊಟ್ಟೆಗೆ ಬಟ್ಟೆಗೆ ಅನ್ನುವುದಂತೂ ಸುಳ್ಳು. ಕೇವಲ ಅವುಗಳಿಗಷ್ಟೇ ಆದರೆ ಇಷ್ಟೊಂದು ಸಂಬಳವಿದ್ದರೂ ಸಾಲಮಾಡುವ ಪರಿಸ್ಥಿತಿ ದೊರಕುತ್ತಿರಲಿಲ್ಲ. ಜನರೆಲ್ಲ ಕಾರಿನಲ್ಲಿ ಓಡಾಡುತ್ತಿರುವಾಗ ತಾನು ಬೈಕಿನಲ್ಲಿ ಓಡಾಡುವುದು ಎಷ್ಟು ಕಷ್ಟ. ನಾವು ಬೈಕು ಏರಿ ಹೊರಡುತ್ತಿರುವಾಗ ಪಕ್ಕದಮನೆಯವನು ಹೊಸತಾಗಿ ಖರೀದಿಸಿದ ಹೊಂಡಾ ಸಿಟಿಯಲ್ಲಿ ಕೂತು ನಕ್ಕರೆ ಆ ನಗುವೂ ಅಣಕದಂತೆ ತೋರುತ್ತದೆ. ಒಬ್ಬ ಕಾರು ಖರೀದಿಸಿದರೆ ಅವನಿಗೆ ಖುಷಿಯೇನೋ ಆಗುತ್ತದೆ. ಆದರೆ ಬೇರೆಯವರು ಅದನ್ನು ನೋಡಿ ಹೊಗಳಿದರೆ ಖರೀದಿಸಿದುದಕ್ಕಿಂತ ಹೆಚ್ಚು ಸಂತೋಷವಾಗುತ್ತದೆ. ಹೊಸ ಬಟ್ಟೆ ತೊಟ್ಟು ಆಫೀಸಿಗೆ ಹೋದರೆ ಎಷ್ಟು ಸಂತೋಷವಾಗುತ್ತದೋ ಯಾರೂ ಅದನ್ನು ಗುರಿತಿಸಲೇ ಇಲ್ಲವಾದರೆ ಅದಕ್ಕಿಂತ ಹೆಚ್ಚು ದುಃಖವಾಗುತ್ತದೆ. ಆ ಹೊಸ ಬಟ್ಟೆಯ ಮೇಲೇ ತಾತ್ಸಾರವಾಗುತ್ತದೆ. ಹೊಸದುದರ ತರಹ ಕಾಣಿಸುತ್ತಿಲ್ಲವೇನೋ ಎನಿಸುತ್ತದೆ. ಹೀಗೇಕೆ? ಮನುಷ್ಯ ತನ್ನಲ್ಲಾಗುವ ಎಷ್ಟೊಂದು ಭಾವನೆಗಳಿಗೆ ಬೇರೆಯವರನ್ನವಲಂಬಿಸಿದ್ದಾನೆ!

ಸಂಜೆ ಮನೆಗೆ ಹೊರಟಾಗ ಬೆಳಗಿನಷ್ಟು ಬೇಸರ ಉಳಿದಿರಲಿಲ್ಲ. ಬೇಸರಕ್ಕೇ ನನ್ನನ್ನು ನೋಡಿ ಬೇಸರ ಮೂಡಿತೋ ಏನೊ. ಗಾಡಿಯಲ್ಲಿ ಪೆಟ್ರೋಲ್ ಆಗಿಹೋಗಿತ್ತು. 200 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡೆ. ಮನೆಗೆ ಹೊರಟಾಗ ದಾರಿಯಲ್ಲಿ ನೆನಪಾಯಿತು. ಮನೆಬಾಡಿಗೆ ಇನ್ನೂ ಕೊಟ್ಟಿರಲಿಲ್ಲ. ಕಿಸೆಯಲ್ಲಿ ದುಡ್ಡೂ ಇರಲಿಲ್ಲ. ATMಗೆ ಹೋಗಿ ದುಡ್ಡು ತೆಗೆಯುತ್ತಿದ್ದೆ. ಇಷ್ಟೊಂದು ಬಾಡಿಗೆ ತೆರುವ ಶಕ್ತಿ ಬಹುಶಃ ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವುದರಿಂದ ಮಾತ್ರ ಸಾಧ್ಯ ಎನಿಸುತ್ತಿತ್ತು. ತಮ್ಮನಿಂದ ಕರೆ ಬಂತು. ಅಕ್ಕಿ ಬೇಳೆ ಖಾಲಿಯಾಗಿದೆ. ಇನ್ನು ಅದನ್ನು ಬೇರೆ ತೆಗೆದುಕೊಂಡು ಹೋಗಬೇಕಲ್ಲಪ್ಪಾ ಎಂದುಕೊಂಡು ಅಲ್ಲೇ ಪಕ್ಕದ ಸುಪರ್‌ಮಾರ್ಕೆಟ್‌ಗೆ ಹೋದೆ. ಅಕ್ಕಿ ಬೇಳೆಗಳ ಬೆಲೆ ನೋಡಿದರೂ ಅದೇ ಹಳೆಯ ವಿಚಾರ. ಅಷ್ಟಕ್ಕೂ ನಮ್ಮೂರಲ್ಲೂ ಅಕ್ಕಿ ಬೆಲೆ ಏರಿದೆ. ಆ ಹಳ್ಳಿಯಲ್ಲಿ ಯಾವ ಸಾಫ್ಟ್‌ವೇರ್ ಕಂಪನಿಯೂ ಇಲ್ಲ. ಅಲ್ಲೂ ಜಾಗದ ಬೆಲೆ ಗಗನಕ್ಕೇರುತ್ತಿದೆ. ನಾನಂತೂ ಕಾರಣ ಅಲ್ಲ. ಹಾಗಿದ್ದರೆ ಬೇಂಗಳೂರಿನಲ್ಲಿ ಮಾತ್ರ ನಾನ್ಯಾಕೆ ಕಾರಣ? ಖಂಡಿತ ಅಲ್ಲ ಎಂದು ನಿರ್ಧರಿಸಿ ಪಾಪಪ್ರಜ್ಞೆಯಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೆ. ನನ್ನ ಅಪ್ಪ ಅಮ್ಮನ ಕಾಲದಲ್ಲಿ ತಿಂಗಳಿಗೆ ಸಾವಿರ ರೂಪಾಯಿ ಸಂಬಳ ಬಂದುಬಿಟ್ಟರೇ ಅವನು ದೊಡ್ಡ ಶ್ರೀಮಂತ. ಅದು ಈಗ ಲಕ್ಷಕ್ಕೇರಲು ಸಾಫ್ಟ್‌ವೇರ್ ಅಂತೂ ಕಾರಣ ಅಲ್ಲ. ಅದು ಬಂದಿರುವುದು ಮೊನ್ನೆ ಮೊನ್ನೆಯಷ್ಟೇ.

ಅಷ್ಟರಲ್ಲಿ ಬಿಲ್ ಮಾಡಿಸಿಕೊಳ್ಳಲು ನನ್ನ ಹಿಂದೆ ಕ್ಯೂ ನಿಂತಿದ್ದವನು "ಸಾರ್... ಏನು ಯೋಚಿಸ್ತಿದೀರಿ? ಮುಂದೆ ನೆಡೀರಿ" ಎಂದ. ನನ್ನ ಮುಂದಿದ್ದವ ಆಗಲೇ ಬಿಲ್ ಕೊಟ್ಟು ಹೋಗಿಯಾಗಿತ್ತು. ನನಗೂ ಹಾಗೇ ಅನಿಸಿತು. ಯೋಚಿಸುತ್ತಾ ಕುಳಿತರೆ ಮುಂದೆ ಹೋಗುವುದಕ್ಕಾಗುವುದಿಲ್ಲ. ಮುಂದೆ ಹೋಗಬೇಕು ಅಂದರೆ ಯೋಚಿಸುವುದನ್ನು ಬಿಡಲೇಬೇಕು!