Thursday, December 27, 2007

ಬಸ್ಸು ಸಾಗಲಿ ಮುಂದೆ ಹೋಗಲಿ


ಬೆಂಗಳೂರಿನಿಂದ ಶಿರಸಿಗೆ ಪ್ರಯಾಣ ಬೆಳೆಸಿದ್ದು ಇದೇ ಮೊದಲಬಾರಿಯೇನಲ್ಲ. ಪ್ರತಿಬಾರಿಯೂ ಹೊಸ ಹೊಸ ಅನುಭವಗಳು ಆದರೂ ಒಂದೆರಡು ಅನುಭವಗಳು ಪ್ರತೀಬಾರಿಯೂ ಆಗುತ್ತವೆ. ಮನೆ ತಲುಪಲು ಆಗುವ ವಿಳಂಬ ಮತ್ತು ಬೆನ್ನು ನೋವು. ಈ ಅನುಭವಗಳನ್ನು ಪಡೆದು, ’ದೋಣಿ ಸಾಗಲಿ’ ಗೀತೆಯಿಂದ ಪ್ರೇರಿತನಾಗಿ ಅದರ ಈಗಿನ version ಹೊರಬಿಟ್ಟಿದ್ದೇನೆ.

ರಾಷ್ಟ್ರಕವಿ ಕುವೆಂಪುರವರ ಕ್ಷಮೆಕೋರಿ,

ಬಸ್ಸು ಸಾಗಲಿ ಮುಂದೆ ಹೋಗಲಿ
ಶಿರಸಿ ನಗರವ ಸೇರಲಿ
ಹೊಂಡ ಗುಂಡಿಗೆ ಇಳಿಯುತೇಳುತ
ಸಿಕ್ಕ ಸಿಕ್ಕೆಡೆ ಹಾಯಲಿ

ಕುಣಿದು ಕುಣಿದು ಹಾರಿ ಹಾರಿ ಹಳ್ಳ ದಿಣ್ಣೆಯ ದಾಟಲಿ
ಎಗರಿ ಎಗರಿ ಬೀಳುವೆಮ್ಮೆಯ ಬೆನ್ನ ಮಾಲಿಶ್ ಮಾಡಲಿ
ಬೆಟ್ಟ ಗುಡ್ಡವ ಏರಲೆಳೆಸುವ ದೃಢ ಮನಸ್ಥಿತಿ ದೊರಕಲಿ
ನಡೆದು ಹೋಗುವ ಪಾದಚಾರಿಯ ದಾಟಿ ಮುಂದಕೆ ಹೋಗಲಿ

ಗಾಜು ಒಡೆದಿಹ ಬಸ್ಸ ಕಿಟಕಿಯ ನಡುವೆ ಗಾಳಿಯು ತೂರಲಿ
ಕುಣಿವ ಭರದಲಿ ಬಾರದೆಂದಿಹ ನಿದಿರೆ ಕರುಣೆಯ ತೋರಲಿ
ಜನರ ಕೆಳಗಿಹ ಕುರ್ಚಿಯಡಿಗಿಹ ಹಲ್ಲಿ ಎಚ್ಚರಗೊಂಡಿರೆ
ರಕ್ತ ಹೀರಿ ಕೊಬ್ಬಿಕೊಂಡಿಹ ತಿಗಣೆಗಳ ತಿನ್ನುತಲಿರೆ

ಬಾನಿನಂಗಳ ಬೆಳಗುತಿಹುದು ಮೂಡಣದ ರವಿ ಹಿಮತೊರೆ
ಹೊತ್ತು ಹತ್ತಾಗಿದ್ದರಿಂದಿಗು ಬಾರದೂ ದಾವಣಗೆರೆ
ಒಮ್ಮೆ ಪಂಕ್ಚರ್ ಆಗಿ ಹೋಗಿದೆ ಇನ್ನು ಆಗದೆ ಸಾಗಲಿ
ಇಂದಿಗಂತೂ ಮುಟ್ಟಲೊಲ್ಲದು ನಾಳೆಯಾದರು ಮುಟ್ಟಲಿ

Thursday, December 13, 2007

ವೀಕೆಂಡ್‌ಗೆ ಎನ್ ಗುರು ವಿಶೇಷ?

ಶುಕ್ರವಾರ ಸಂಜೆ ಆಯಿತೆಂದರೆ ಸಾಕು. ಸಾಫ್ಟ್‌ವೇರ್ ಇಂಜಿನಿಯರುಗಳೆಲ್ಲರ ಮುಖಾರವಿಂದಗಳು ಅರಳಿಬಿಡುತ್ತವೆ. ಎರಡು ದಿನ ರಜೆ ಇದೆ, ಏನಾದರು ವಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದಲ್ಲ. ಇನ್ನೆರಡು ದಿನ ಆಫಿಸ್‌ಗೆ ಹೋಗಬೇಕಾಗಿಲ್ಲವಲ್ಲಾ ಎಂದು! ಎಲ್ಲರಿಗೂ ಈ ಸಾಫ್ಟ್‌ವೇರ್ ಉದ್ಯೋಗ ಎಷ್ಟು ಹಿಡಿಸಿದೆ ಎನ್ನುವುದಕ್ಕೆ ಬೇರಾವ ಪುರಾವೆಗಳೂ ಬೇಕಿಲ್ಲವಲ್ಲವೆ. ಬಹಳಸಲ ಹಾಗೇ ಆಗುತ್ತದೆ. ಹೊರಗೆ ಹೋಗುವ ಮನಸ್ಸಿಲ್ಲದಿದ್ದರೂ ರಜೆ ಇದೆಯಲ್ಲಾ ಎಂದು plan ಹಾಕಿಯೇಬಿಡುತ್ತೇವೆ. ಆ planಗಳು ಎಷ್ಟು ಫಲಕಾರಿಯಾಗುತ್ತವೆಯೋ ಶನಿವಾರ ಬೆಳಿಗ್ಗೆಯೇ ಗೊತ್ತಾಗಬೇಕು.

ಯಾಕೋ ಆ ಶನಿವಾರ ಬೆಳಿಗ್ಗೆ ಬಹಳ ಬೇಗನೇ ಎಚ್ಚರವಾಗಿಬಿಟ್ಟಿತು. ೮ ಗಂಟೆಗೆ! ಇವತ್ತು ವೀಕೆಂಡ್ ಎಂದು ನೆನಪಾದಮೇಲಂತೂ ನಿದ್ದೆ ಹಾರಿಯೇ ಹೋಯಿತು. ತಲೆಯಲ್ಲಿ ಐದಾರು ಗೆಳೆಯರ ಚಿತ್ರಗಳು ಯಕ್ಷಗಾನ ಮಾಡತೊಡಗಿದವು. ಅವನನ್ನು ಕಂಡು ಎಷ್ಟು ದಿನ ಅಯ್ತು. ಒಂದು ಫೋನ್ ಕೂಡಾ ಮಾಡ್ಲಿಲ್ಲ. ಈ ವೀಕೆಂಡ್ ಅವನ ಹತ್ರಾನೇ ಹೋಗೋಣ. ಆದರೆ ನಾನೇ ಯಾಕೆ ಫೋನ್ ಮಾಡ್ಬೇಕು? ಬೇಕಾದ್ರೆ ಅವನೇ ಮಾಡ್ತಾನೆ, ಎಂದುಕೊಳ್ಳುವಷ್ಟರಲ್ಲಿ ಒಂದು ಪಾತ್ರ ಕಡಿಮೆಯಾಯಿತು. ಇವನನ್ನ ಎರಡು ವಾರದ ಹಿಂದಷ್ಟೇ ಭೇಟಿಯಾದೆ. ಇವನಂತೂ ಯಾವಾಗ್ಲೂ chatನಲ್ಲಿ ಸಿಗ್ತಾನೆ. ಇವನಂತೂ onsiteನಲ್ಲಿದಾನೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಮೂರು ಪಾತ್ರಗಳು ನೇಪಥ್ಯಕ್ಕೆ ತಿರುಗಿದವು.

ಉಳಿದ ಎರಡೇ ಎರಡು ಪಾತ್ರಗಳಲ್ಲಿ ಒಂದು ಗಿರಿನಗರದಲ್ಲಿ ಕುಣಿಯುತ್ತಿದ್ದರೆ ಇನ್ನೊಂದು ವೈಟ್‌ಫೀಲ್ಡ್‌ನಲ್ಲಿ ಕುಣಿಯುತ್ತಿತ್ತು. ಹಾಸಿಗೆಯಲ್ಲೇ ಹೊರಳಾಡುತ್ತಾ ಪಕ್ಕದಲ್ಲೇ ಇದ್ದ ಲ್ಯಾಪ್‌ಟಾಪ್ on ಮಾಡಿ, ಇದ್ದು ಬಿದ್ದ playlistಗಳನ್ನೆಲ್ಲಾ winampಗೆ ತುಂಬಿ play ಮಾಡಿದೆ. ಗಿರಿನಗರದಲ್ಲಿ ಕುಣಿಯುತ್ತಿದ್ದ ಪಾತ್ರದ ಜೊತೆಗೇ ಕುಣಿದರಾಯಿತು ಎಂದಂದುಕೊಂಡು phone ಮಾಡಿದೆ. Not Reachable! ಯಾವ ಊರಿನ ಯಾವ ಕೊಂಪೆಯಲ್ಲಿ ಬಿದ್ದಿದ್ದಾನೊ ಎಂದಂದುಕೊಂಡು ಉಳಿದ ಒಂದೇ ಒಂದು ಪಾತ್ರಕ್ಕೆ ಕರೆ ಮಾಡಿದೆ. ನಾಲ್ಕೇ ನಾಲ್ಕು ಮಾತುಗಳಲ್ಲಿ ಪಾತ್ರ ಮುಗಿದು ಹೋಯಿತು.
"ಎಲ್ಲಿದೀಯೋ?"
"ಮನೇಲಿ"
"ವೀಕೆಂಡ್‌ಗೆ ಎನ್ ಗುರು ವಿಶೇಷ?"
"ನಾನು ಸಿರ್ಸಿ ಮನೇಲಿದೀನಿ ಕಣೋ"
"ಓ... ಸಿರ್ಸಿಲಿದೀಯಾ? ಸರಿ ಬಿಡು. ಬಂದ್‌ಮೇಲೆ ಕಾಲ್ ಮಾಡು"

ರಂಗಸ್ಥಳ ಖಾಲಿಯಾಯಿತು. ಗಂಟೆ ಇನ್ನೂ ಬೆಳಿಗ್ಗೆ ೯. ಕೆಲಸವಿಲ್ಲ ಕಾರ್ಯವಿಲ್ಲ. ಥತ್... ಬರೀ ಗಂಡು ಪಾತ್ರಗಳು. ಒಂದಾದರೂ ಸ್ತ್ರೀ ವೇಷ ಇದ್ದಿದ್ದರೆ ರಂಗಸ್ಥಳ ಹೀಗೆ ಬರಿದಾಗುತ್ತಿರಲಿಲ್ಲ ಎನಿಸಿತು. ಈ ಅನಿಸಿಕೆ ನಿದ್ರಾದೇವಿಗೆ ಕೇಳಿಹೋಯಿತೊ ಏನೊ. ಮತ್ತೆ ಬಂದು ಮುಸಿಕಿದಳು. ನಾನೂ ಮುಸುಕೆಳೆದುಕೊಂಡೆ.

winampನಲ್ಲಿ ಭಾವಗೀತೆಗಳು ಮುಗಿದು ಭಕ್ತಿಗೀತೆಗಳು ಪ್ರಾರಂಭವಾಗಿದ್ದವು. ದಾಸರ ಪದ ತನ್ನ ಇಂಪನ್ನು ಪಸರಿಸುತ್ತಿತ್ತು.
"ಹ್ಯಾಂಗೆ ಮಾಡಲಯ್ಯಾ ಕೃಷ್ಣ... ಹೋಗುತಿದೆ ಆಯುಷ್ಯ..."

Wednesday, December 12, 2007

ನಾವು ಕನ್ನdigaru - ೩

ಸಂದರ್ಭ: ಮಾರತ್‌ಹಳ್ಳಿ ಬಸ್ ನಿಲ್ದಾಣ. ಗದ್ದಲವೋ ಗದ್ದಲ. ಗೌಜಿಯೋ ಗೌಜಿ. ಆದರೆ ಎಲ್ಲೂ ಕನ್ನಡ ಮಾತ್ರ ಕೇಳಿಬರುವುದಿಲ್ಲ. ಇತ್ತ ಎನ್ನಡ ಅತ್ತ ಎಕ್ಕಡ. ಸೇಬುಹಣ್ಣು ಕೊಳ್ಳಲು ಹೋಗಿದ್ದೆ.

ನಾನು: ಒಂದು ಕಿಲೊ ಸೇಬು ಹಣ್ಣು ಹೇಗಪ್ಪಾ?
ವ್ಯಾಪಾರಿ: ಅಂಜು ರೂಬಾ...
ನಾನು: ಆಂ ???
ವ್ಯಾಪಾರಿ: Fifty rupees...

ಇಂಗ್ಲೀಷ್ ಕಲಿಯುತ್ತಾರೆ. ಕನ್ನಡ ಕಲಿಯಲು ಏನಪ್ಪಾ ತೊಂದರೆ ಎಂದುಕೊಳ್ಳುತ್ತಾ ಹೊರಬೀಳುತ್ತಿದ್ದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ನನ್ನನ್ನು ನೋಡಿ, "ಸಾರ್ ಮಲಯಾಲಮ್ಮಾ???" ಎಂದ. ಯಾವ ಮಲಯಾಳಿ ಚಿತ್ರದಲ್ಲಿ ನನ್ನಂಥವನನ್ನೇ ನೋಡಿದ್ದನೋ ಏನೋ. ನನಗಂತೂ ರೋಸಿ ಹೋಗಿತ್ತು. "ಕನ್ನಡ... ಕನ್ನಡ..." ಎಂದೆ. ಗಟ್ಟಿಯಾಗಿ. "ಓ.. ಹಿ.. ಹಿ.." ಎಂದು ಹಲ್ಲು ಕಿರಿದುಕೊಂಡು ಹೋದ.

ಇಷ್ಟೆಲ್ಲಾ ಮುಗಿಸಿ ಒಂದು ಸಂತೂರ್ ಸೋಪ್ ಕೊಳ್ಳಲು ಮನೆಯ ಹತ್ತಿರವೇ ಇದ್ದ ಒಂದು ಅಂಗಡಿಗೆ ಹೋದೆ.

ನಾನು: ಸಂತೂರ್ ಸೋಪ್
ಅಂಗಡಿಯವ: ತೆಲಗಾ ಸಾರ್?
ನಾನು: ( ಊಹೂಂ ಎಂಬಂತೆ ತಲೆಯಾಡಿಸಿದೆ )
ಅಂಗಡಿಯವ: ತಮಿಳಾ?
ನಾನು: ( ಮತ್ತೆ ತಲೆಯಾಡಿಸಿದೆ )
ಅಂಗಡಿಯವ: ಓ ಗನ್ನಡಾ???
ನಾನು: ( ಸುಮ್ಮನೆ ಮುಗುಳ್ನಕ್ಕೆ )
ಅಂಗಡಿಯವ ಸಂತೂರ್ ಸೋಪ್ ಕೊಟ್ಟು "ತೆಗೆದುಗೊಲ್ಲಿ" ಎಂದು ನಕ್ಕ.
ಒಬ್ಬನಾದರೂ ’ಗನ್ನಡ ಗಲಿಯುತ್ತಿದ್ದಾನಲ್ಲಾ’ ಎಂದು ಸಂತೋಷವಾಯಿತು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Thursday, December 6, 2007

ನಾವು ಕನ್ನdigaru - ೨

ಸಂದರ್ಭ: ಶುಕ್ರವಾರ ರಾತ್ರಿ ೧೦ ಘಂಟೆಯ ಶೋ ನೋಡಲು Innovative Multiplexಗೆ ಹೋಗಿದ್ದೆ. ಅಲ್ಲಿ ಒಂದಿಷ್ಟು ಜನರ ಗುಂಪುಗಳು ನಿಂತು ಸಮಯ ದೂಡಲು ಮಾತುಕತೆಯಲ್ಲಿ ಮುಳುಗಿದ್ದವು. ಆ ಗುಂಪುಗಳ ನಡುವೆ ನಡೆಯುತ್ತಿದ್ದ ಸಂಭಾಷಣೆಗಳು ಇಂತಿದ್ದವು.

ಒಂದನೆಯ ಗುಂಪು:
ಒಬ್ಬ: ಇಂದ ಪಡತ ನಾನ್ ಯೆರುಕಿನೇ ಪಾರ್ತಿಟ್ಟೇನ್. ಪದಮ್ ರೊಂಬ ನಲ್ಲ ಇರುಕು. ಅದನಾಲದಾನ್ ಇನ್ನೋರುವಟಿ ಪಾಕವಂದೇನ್.
ಇನ್ನೊಬ್ಬ: ಹೇ ಮಚ್ಚಾ, ಉನುಕು ತೆರಿಯಾಮಾ? ರಜನಿ ಸಾರ್ ಶಂಕರ ಉಡಿಯಾ ಪದಮ್ ಪನ್ರಾರು. ನಿಶ್ಚೈಮಾ ಪೆರಿಯಾ ಹಿಟ್ ಆವುಮ್.

ಎರಡನೆಯ ಗುಂಪು:
ಒಬ್ಬ: ಮಾಮಾ, ನೇನು ಇಪ್ಪುಡು Flextronicsಲೊ ಪಣಿ ಚೇಸ್ತಾವುನ್ನಾನು.
ಇನ್ನೊಬ್ಬ: ಅಲಗಾ? ಯೇಂತಾ ಜೀತಮ್ ಇಸ್ತುನ್ನಾರು ವಲು? ಚಾಲ ಇಶ್ಟಾರು ಅನುಕುಂಟಾ? ಇಪ್ಪುಡು ಚಾಲ ವರದಕ್ಷಿಣಮ್ ಕೂಡಾ ದೊರಕುತುಂದಿ. ಹಾ... ಹಾ... ಹಾ...

ಮೂರನೇ ಗುಂಪು:
ಆಕೆ: ಹೇ ಪುಟ್ಟಾ, Come here. ಬಾ ಇಲ್ಲಿ.
ಮಗು: Paapa... paapa... I want that. Paapa...
ಈತ: No ಪುಟ್ಟಾ, thats not good for health. Come ಶಾಲು, ಆಕಡೆ ಹೋಗೋಣ. Otherwise he will start crying now.
ಆಕೆ: Wait a second. Let ಮಾಲತಿ also come.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Tuesday, December 4, 2007

ನಾವು ಕನ್ನdigaru - ೧

ಸಂದರ್ಭ: ನನ್ನ ಬೈಕ್ ಸರ್ವಿಸ್ ಮಾಡಿಸಲು ಖಿವ್‍ರಾಜ್ ಮೋಟರ್ಸ್‌ಗೆ ಹೋಗಿದ್ದೆ. ಸರ್ವಿಸ್ ಮಾಡಲು ಇದ್ದ ಎರಡು ಯಂತ್ರಗಳಲ್ಲಿ ಒಂದು ಯಂತ್ರ ಕೆಟ್ಟುಹೋಗಿದ್ದ ಕಾರಣ ಕೇವಲ Free Serviceನವರಿಗೆ ಮಾತ್ರ ಪ್ರವೇಶ ಎಂದು 9 ಘಂಟೆಗೆ ಬಂದು ಬಾಗಿಲು ತೆಗೆದ ಅಂಗಡಿಯ ಸರ್ವಿಸ್ ಬಾಯ್ ಹೇಳಿದ. ಮುಂದಿನದನ್ನು ಅವರವರ ಮಾತುಗಳಲ್ಲೇ ಕೇಳಿ:

ಸ. ಬಾ. (ಸರ್ವಿಸ್ ಬಾಯ್) : ಒಂದು ಮಿಶಿನ್ ಕೆಟ್ಟುಬಿಟ್ಟಿದೆ ಸಾರ್. ಇವತ್ತು ಫ್ರೀ ಸರ್ವಿಸ್ ಅಸ್ಟೇ ಮಾಡೋದು.
ಆತ: ರೀ ಅದ್ ಹೇಗ್ರೀ ನೀವು ಹಾಗೆ ಹೇಳ್ತೀರಾ? ನಾವು ಇಷ್ಟು ಹೊತ್ತು ಕ್ಯೂದಲ್ಲಿ ನಿಂತಿಲ್ವಾ?
ಸ. ಬಾ. : ಏನೂ ಮಾಡಕಾಗಲ್ಲ ಸಾರ್. ಮಿಶಿನ್ ಕೆಟ್ಟೋಗಿದೆ. ನಾಳೆ ಬನ್ನಿ.
ಆತ: ಒಂದು ತಾಸು ಕ್ಯೂದಲ್ಲಿ ನಿಂತಿದೀವಿ. ಈಗ ಇವ್ರು ಹೀಗೆ ಹೇಳ್ತಾರಲ್ರೀ!
ಈತ: You are right sir. ನಾವು ಕ್ಯೂದಲ್ಲಿ ನಿಂತಾಗ್ಲೇ ಇವ್ರು ಬಂದು ಹೇಳ್ಬೇಕಿತ್ತು.
ಸ. ಬಾ. : ಹಾಗಲ್ಲ ಸಾರ್ ಅದು... ಮಿಶಿನ್ ಕೆಟ್ಟೋಗಿರೋದು ಈಗಸ್ಟೇ ಗೊತ್ತಾಯ್ತು.
ಆತ: ಏನು ಈಗ್ಲೇ ಕೆಟ್ಟೋಯ್ತ? ಒಂದೂ ಗಾಡಿ ಸೆರ್ವಿಸ್ ಮಾಡ್ಲಿಲ್ಲಾ.. ಕೆಟ್ಟೋಯ್ತಾ? what are you telling? we want service ಅಸ್ಟೆ.
ಸ. ಬಾ. : ಆಗಲ್ಲ ಸಾರ್.
ಈತ: Why ಆಗಲ್ಲ? Why ಆಗಲ್ಲ? We wait in queue for 1 hour & now you tell ಆಗಲ್ಲ. No no no no... We want service thats all.
ಆತ: Correct sir. We dont go without servicce. Call your manager. I speak. At any cost we want service

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Thursday, November 29, 2007

ಸಾಫ್ಟ್ ವೇರ್ ಉದ್ಯೋಗ - ಎಷ್ಟು ಸುರಕ್ಷಿತ ?


ಮೂರು ವರ್ಷಗಳ ಹಿಂದೆ ಮುಗಿದ ಇಂಜಿನಿಯರಿಂಗ್ ಮೊನ್ನೆ ಮೊನ್ನೆಯಷ್ಟೇ ಮುಗಿದಂತಿದೆ. ಆಗಿನ ಘಟನೆಗಳು ಇನ್ನೂ ಕಣ್ಣ ಮುಂದೆಯೇ ನೆಡೆಯುತ್ತಿದೆಯೇನೋ ಎನಿಸುತ್ತದೆ. ನನಗೆ ಅವನ ಪರಿಚಯವಾದದ್ದು ಇಂಜಿನಿಯರಿಂಗ್‍ನಲ್ಲೇ. ಮೊದಲನೇ ವರ್ಷದಲ್ಲಿ ನಾನು ಮತ್ತು ಅವನು ಹಾಸ್ಟೆಲ್‍ನಲ್ಲಿ ಅಕ್ಕಪಕ್ಕದ ರೂಮಿನವರು. ಒಟ್ಟೂ ಎಂಟು ಜನರು ನಾವು, ಎಲ್ಲಿ ಹೋದರೂ ಒಟ್ಟಿಗೆ, ಏನೇ ಮಾಡಿದರೂ ಒಟ್ಟಿಗೆ. ಯಾರಾದರೂ ಊರಿಗೆ ಹೋಗಿಬಂದರಂತೂ ಮುಗಿಯಿತು. ಎಲ್ಲರೂ ಮುತ್ತಿಬಿಡುತ್ತಿದ್ದೆವು. ತಂದ ತಿಂಡಿ ಖಾಲಿ ಆದಮೇಲೆಯೇ ಎಲ್ಲರೂ ಹಿಂತಿರುಗುತ್ತಿದ್ದುದು. ಈ ನಮ್ಮ ಗುಂಪಿನಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದವನೆಂದರೆ ಅವನು. ಶಾಂತ ಮನೋಭಾವ, ಗೆಳೆಯರ ಮೇಲಿನ ಕಾಳಜಿ, ಇತರರು ಬಯಸದೇ ಇದ್ದರೂ ಅವರಿಗೆ ಸಹಾಯವನ್ನೀಡುವ ಮನಸ್ಸು ಅವನಲ್ಲಿತ್ತು. ಅವನ ಹಾಸಿಗೆಯ ಮೇಲೆ ಎದ್ದಕೂಡಲೇ ಕಾಣಿಸಬೇಕು ಎಂದು ಗೋಡೆಗೆ ಅಂಟಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರ ಮತ್ತು ರಾಮಕೃಷ್ಣರ ಭಿತ್ತಿಚಿತ್ರಗಳು ಅವನ ಆದರ್ಶಗಳನ್ನು ಸಾರುತ್ತಿದ್ದವು.


ನಾನು ಕಂಪ್ಯೂಟರ್ ಸೈನ್ಸ್ ಆಯ್ದುಕೊಂಡಿದ್ದರೆ, ಅವನದು ಎಲೆಕ್ಟ್ರಾನಿಕ್ಸ್. ಆದರೂ ಅಕ್ಕಪಕ್ಕದ ರೂಮಿನವರಾದ ಕಾರಣ ದಿನವೂ ಒಂದೆರಡು ತಾಸು ಹರಟೆಗೆ ತೊಂದರೆಯಿರಲಿಲ್ಲ. ನಮ್ಮ ಗುಂಪಿನಲ್ಲಿ ಹೆಚ್ಚು ಗಂಭೀರವಾಗಿ ವಿಷಯಗಳನ್ನು ಓದುತ್ತಿದ್ದವನೆಂದರೆ ಅವನೇ. ಅವನಿಗಿಂತಲೂ ಹೆಚ್ಚಿಗೆ ಅಂಕಗಳಿಸುವ ಹುಡುಗರೂ ಸಹ ಅವನ ಹತ್ತಿರ ಬಂದು ತಿಳಿಯದೇ ಇದ್ದ ವಿಷಯಗಳನ್ನು ಚರ್ಚಿಸುವುದನ್ನು ನೋಡಿದ್ದೇನೆ. ಎಷ್ಟು ತಿಳಿದುಕೊಂಡಿದ್ದರೇನು ಪ್ರಯೋಜನ? ಹೊರಗಡೆ ಕೇಳುವುದು ಕೇವಲ ಅಂಕಗಳನ್ನೇ ತಾನೆ? ಇಂಜಿನಿಯರಿಂಗ್ ಮುಗಿಸಿ ಹೊರಬಂದಮೇಲೆಯೂ ಕೂಡ ನಾವೆಲ್ಲರೂ ಒಟ್ಟಿಗೆ ಮನೆಮಾಡಿ ಕೆಲಸಕ್ಕೆ ಹುಡುಕಾಟ ನಡೆಸಿದೆವು.


ಅವನೂ ಹುಡುಕುತ್ತಿದ್ದ. ಆದರೆ ನಮಗಿಂತ ಅಂಕಗಳಲ್ಲಿ ಕಡಿಮೆ ಇತ್ತು ಎಂದೋ ಏನೋ ನಮಗೆಲ್ಲರಿಗೂ ಕೆಲಸ ದೊರೆತಮೇಲೂ ಅವನ ಹುಡುಕಾಟ ಮುಂದುವರಿದಿತ್ತು. ಯಾವುದೇ ಇಂಜಿನಿಯರಿಂಗ್ ಕೋರ್ಸ್ ಮಾಡಿದರೂ ಕೂಡ ಬೆಂಗಳೂರಿನಲ್ಲಿ ಬದುಕಬೇಕಾದರೆ ಕೊನೆಗೆ ಸಾಫ್ಟ್ ವೇರ್ ಉದ್ಯೋಗವನ್ನೇ ಮಾಡಬೇಕು. ಇಲೆಕ್ಟ್ರಾನಿಕ್ಸ್ ಓದಿದರೂ ಕೂಡ ಅವನೂ ಕೆಲವು ಕೋರ್ಸ್‍ ಮಾಡಿ ಸಾಫ್ಟ್ ವೇರ್ ಉದ್ಯೋಗಕ್ಕೇ ಹುಡುಕಾಟ ನೆಡೆಸತೊಡಗಿದ. ಕೊನೆಗೂ ಒಂದು ಕೆಲಸ ಸಿಕ್ಕಿತು. ಆದರೆ ಅವನು ಮಾಡಿದ್ದ ಕೋರ್ಸಿಗೆ ಮತ್ತು ಅವನ ಕೆಲಸಕ್ಕೆ ಸಂಬಂಧವೇ ಇರಲಿಲ್ಲ. ಏನೇ ಆಗಲಿ ಒಟ್ಟಿನಲ್ಲಿ ಒಂದು ಕೆಲಸ ಸಿಕ್ಕಿತಲ್ಲಾ ಎಂದು ಸೇರಿಕೊಂಡ.


ಒಂದೈದು ತಿಂಗಳ ಹಿಂದೆ, ಬಹುಶಃ ಅವನು ಕೆಲಸಕ್ಕೆ ಸೇರಿ ಎರಡು ವರ್ಷಗಳೇ ಕಳೆದಿರಬಹುದು. ಕೈಗೆ ಒಳ್ಳೆಯ ಸಂಬಳವೂ ಬರುತ್ತಿತ್ತು. ಇದ್ದಕ್ಕಿದ್ದಂತೆಯೇ ಕಂಪನಿಗೆ ಲಾಸ್ ಆಗುತ್ತಿದೆ ಎಂದು ಕಾರಣಕೊಟ್ಟ ಕಂಪನಿ ಮ್ಯಾನೇಜ್‍ಮೆಂಟ್‍ನವರು ಇವನನ್ನು ಮತ್ತು ಇವನ ಜೊತೆ ಮತ್ತಿಬ್ಬರನ್ನು ಹೊರಹಾಕಿಬಿಟ್ಟರು. ಬೇರೆ ಕೆಲಸವಿಲ್ಲ. ಪ್ರತೀ ತಿಂಗಳು ಇವನೇ ಮನೆಗೆ ಹಣ ಕಳಿಸುತ್ತಿದ್ದ. ಮನೆಯಲ್ಲಿ ಅರ್ಥಿಕವಾಗಿ ಸ್ವಲ್ಪ ತೊಂದರೆಯಿದೆ. ವಯಸ್ಸಾದ ತಂದೆ ತಾಯಿ. ಔಷಧೋಪಚಾರಕ್ಕೂ ಹಣ ಬೇಕು. ಅಣ್ಣನಿಗೆ ಸರಿಯಾದ ಉದ್ಯೋಗ ದೊರೆತಿಲ್ಲ. ಅವನ ಮದುವೆಯನ್ನೂ ಮಾಡಬೇಕೆಂದು ನಿರ್ಧರಿಸಿದ್ದರು. ಅದಕ್ಕೂ ಇವನೇ ಹಣ ನೀಡಬೇಕಿತ್ತು. ಬೆಂಗಳೂರಿನಲ್ಲಿ ಇರುವ ಮನೆಬಾಡಿಗೆಯನ್ನೂ ಕೊಡಬೇಕು. ಇವನು ಮದುವೆಯಾಗಿಲ್ಲವೆಂಬುದೊಂದೇ ಇವನ ಅದೃಷ್ಟ.


ಬಹಳಷ್ಟು ಕಂಪನಿಗಳನ್ನು ಕೆಲಸಕ್ಕಾಗಿ ಅಲೆದ ಮೇಲೂ ಎಲ್ಲೂ ಕೆಲಸ ದೊರೆತಿಲ್ಲ. ಇದರ ಜೊತೆ ಉಳಿದೆಲ್ಲ ತೊಂದರೆಗಳು ಮತ್ತು ಮಾನಸಿಕ ವೇದನೆ. ಲಕ್ಷಗಟ್ಟಲೆ ಸುರಿದು ಇಂಜಿನಿಯರಿಂಗ್ ಕಲಿಸಿದ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲವಲ್ಲಾ ಎಂಬ ದುಃಖ. ಸಮಯಕ್ಕೆ ಸರಿಯಾಗಿ ಆಹಾರ ನಿದ್ದೆಯಿಲ್ಲದೆ ಓಡಾಟ ನೆಡಸಿದ್ದಕ್ಕಾಗೋ ಅಥವಾ ವಿಧಿಗೆ ಬೇರೆ ಯಾರೂ ಅಮಾಯಕರು ದೊರಕಲೇ ಇಲ್ಲವೋ ಎಂಬಂತೆ ಬಂದೊರಗಿದ ಕರುಳಬೇನೆ ರೋಗ. ೨೦-೨೧ ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ. ಒಂದುವಾರದ ಹಿಂದಷ್ಟೇ ಕೆಲಸದ ಹುಡುಕಾಟವನ್ನು ಪುನರಾರಂಭಿಸಲು ಮತ್ತೆ ಬೆಂಗಳೂರಿಗೆ ಬಂದಿದ್ದಾನೆ. ಕೆಲಸದ ಹುಡುಕಾಟ ಮುಂದುವರೆದಿದೆ. ಅವನ ಹುಡುಕಾಟ ಸಫಲವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವುದನ್ನು ಬಿಟ್ಟರೆ ನನಗೆ ಬೇರೆ ಏನೂ ತೋಚುತ್ತಿಲ್ಲ.

Monday, November 26, 2007

ಮದುವೆ ಆದ್ರು ನೋಡ್ರೀ, ಸಾಗರ್ ಮತ್ತು ಕಾದಂಬರಿ


ಸಾಗರ್ ನಮ್ಮ AceMAP ತಂಡದ (ಕುಟುಂಬದ ಎಂದರೇ ಹೆಚ್ಚು ಸೂಕ್ತ) ಹಿರಿಯ ಸದಸ್ಯರಲ್ಲೊಬ್ಬ. ನಮ್ಮ ಈ L&T Infotech ನಲ್ಲಿ ಕೆಲಸ ಮಾಡುತ್ತಿರುವವರ ಹುಡುಗರ ತಂಡದಲ್ಲಿ ಇದು ಮೊದಲನೇ ಮದುವೆಯ ಸಡಗರ. ಈಗ L&Tಯಲ್ಲಿ ಉಳಿದಿರುವವರು ಕೇವಲ ಮೂರೋ ನಾಲ್ಕೋ ಜನರಾದರೂ ಆ ಕುಟುಂಬದಿಂದ ಯಾರೂ ಬೇರೆಯಾಗಿಲ್ಲ. ಈ ಸಡಗರದ ಜೊತೆಗೆ AceMAP ತಂಡದ ಸದಸ್ಯರೆಲ್ಲಾ ಮತ್ತೊಮ್ಮೆ ಒಂದುಕಡೆ ಸೇರಬಹುದಲ್ಲಾ ಎನ್ನುವ ಸಂಭ್ರಮ. ಹಿಂದಿರುಗಿಬರಲು ರೈಲ್ವೆ ಟಿಕೆಟ್‍ಗಳು ದೊರತಿದ್ದರೂ ಹೋಗುವಾಗ ವೇಟಿಂಗ್ ಇದ್ದ ಕಾರಣ ವಿಆರ್‍ಏಲ್‍ನಲ್ಲಿ ಧಾರವಾಡಕ್ಕೆ ಶುಕ್ರವಾರ ರಾತ್ರಿ (23/11/2007) ಹೊರಟೆವು.


ಬಸ್ ಬಿಡುವುದು 9:30ಕ್ಕೇ ಆದರೂ ವಿಆರ್‍ಏಲ್‍ನವರು ತಮ್ಮ ಸ್ಟ್ಯಾಂಡರ್ಡ್ ಟೈಮನ್ನು ಕಾಯ್ದುಕೊಂಡು 11:00ಕ್ಕೆ ಬೆಂಗಳೂರಿಂದ ಹೊರಟರು. ಯಥಾಪ್ರಕಾರ ಯಾವಾಗಲೂ ಇಂತಹ ಬಸ್‍ಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವಂಥ ತಿಗಣೆಗಳು ಹೇರಳವಾಗಿ ನನ್ನ ಸೀಟ್‍ನ ಕೆಳಗೇ ಕುಳಿತಿದ್ದವು. ನಾವೆಲ್ಲರೂ ಮಾತಿನಲ್ಲಿ ಮಗ್ನವಾದರೆ, ಅವುಗಳು ನಮ್ಮ ರಕ್ತ ಹಂಚಿಕೊಳ್ಳುವುದರಲ್ಲಿ ಮಗ್ನವಾದವು.


ಮೈ ಕೊರೆವ ಛಳಿ. ಅದರಲ್ಲೂ ಎಲ್ಲ ಕಿಟಕಿಗಳನ್ನು ಮುಚ್ಚಿದರೂ ಎಲ್ಲಿಂದಲೋ ನುಸುಳಿಬರುವ ತಣ್ಣನೆಯ ಗಾಳಿ. ಇದರ ಮಧ್ಯ ಜಾಕೆಟ್ ತರಲು ಮರೆತಿದ್ದ ನಮ್ಮ ರೆಡ್ಡಿಗಾರು ಛಳಿಯಲ್ಲೇ ನಡುಗುತ್ತಾ "ಇದೇನು ಮಗಾ... ಛಲೀನೇ ಇಲ್ಲಾ... ಸಕತ್ತು ಹಾಟು..." ಎನ್ನುತ್ತಿದ್ದ. ಚಿತ್ರದುರ್ಗ ತಲುಪಿದೆವು. ಆ ಛಳಿಯಲ್ಲಿ ಒಂದೊಂದು ಕಪ್ ಬಿಸಿ ಬಿಸಿ ಟೀ ಚಪ್ಪರಿಸುತ್ತಾ ಮಾತನಾಡುವಾಗ ಆಗುವ ಆನಂದ ಅನುಭವಿಸಿಯೇ ತೀರಬೇಕು. ಅವರ ಕಂಪೆನಿಯ ಸಮಾಚಾರ ಇವರ ಕಂಪೆನಿಯ ಸಮಾಚಾರವೆಲ್ಲಾ ಮುಗಿಯಿತು. ಎಲ್ಲರೂ ವಿಷಯಕ್ಕಾಗಿ ತಡಕಾಡುತ್ತಿದ್ದರು. ಆಗಷ್ಟೇ ಯಾರೋ ಪ್ರಸ್ತಾಪಿಸಿದ್ದು, ’ಎಂ ಪಿ ಪ್ರಕಾಶ್ ಮತ್ತೆ ಕಾಂಗ್ರೆಸ್ ಜತೆಗೂಡಿ ಮತ್ತೆ ಸರ್ಕಾರ ರಚಿಸ್ತಾರಂತೆ!’. ಶುರುವಾಯಿತು ರಾಜಕೀಯದ ಡಿಸ್ಕಷನ್. ಒಬ್ಬ ದೇವೇಗೌಡರ ದುರ್ಭುದ್ಧಿಗೆ ವ್ಯಥೆಪಟ್ಟರೆ ಇನ್ನೊಬ್ಬ ಯಡಿಯೂರಪ್ಪನವರ ಸ್ಥಿತಿಗೆ ಮರುಕಪಟ್ಟ. ಒಟ್ಟಿನಲ್ಲಿ ಮುಂದಿನ ಇಲೆಕ್ಷನ್‍ನಲ್ಲಿ ಬಿಜೆಪಿಗೆ clean sweep mejority ಕೊಡಿಸಿಯೇ ಬಿಟ್ಟೆವು. ಅಷ್ಟರಲ್ಲಿ ನಮ್ಮ ಬಸ್ಸಿನ ಹಾರನ್ ಬಾರಿಸಿತು.


ಬಸ್ಸಿನಲ್ಲಿ ಮತ್ತೊಂದು ನಿದ್ದೆ ಮುಗಿಸಿದಾಗ ಹುಬ್ಬಳ್ಳಿ ತಲುಪಿದ್ದೆವು. ನನ್ನ ಹಿಂದೆಯೇ ಕುಳಿತಿದ್ದ ಕನ್ನಡ ’ಉಲಿಸಿ’ ’ಬೆಲೆಸಿ’ ಸಂಘದ ಅಧ್ಯಕ್ಷರು ಉಪಾಧ್ಯಕ್ಷರಾದ ಮಹೇಶ ಮತ್ತು ಸಾಯಿ ನಡುವೆ ಮಾತುಕತೆ ನೆಡೆದಿತ್ತು.
"ಹುಬ್ಬಲ್ಲಿ ಬಂತು ಮಗಾ"
"ಇದು ಹುಬ್ಬಲ್ಲಿ ಅಲ್ಲ ಮಚ್ಚಾ"
"ನಾನು ಹೇಲ್ತೀನಿ ಇದು ಹುಬ್ಬಲ್ಲಿನೇ"
"ಸರಿ ಬಿಡು"
ಇವರ ಇನ್ನೊಂದೆರಡು ಹಲ್ಲಿ ಪಲ್ಲಿಗಳನ್ನು ಕೇಳುವಷ್ಟರಲ್ಲಿ ಧಾರವಾಡ ತಲುಪಿದ್ದೆವು. ನಮ್ಮ ಸ್ವಾಗತಕ್ಕೆ ಸ್ವತಃ ಮದುವೆಗಂಡು ಸಾಗರ್ ಕಾಯುತ್ತಾ ಕುಳಿತಿದ್ದ. ಬಹಳ ದಿನಗಳ ನಂತರ ಸಾಗರ್‍ನನ್ನು ನೋಡಿದ ನಮಗೆ ಗಮನಕ್ಕೆ ಬಂದಿದ್ದು ಅವನ ಮುಖದಲ್ಲಿ ಆಗಲೇ ಮನೆಮಾಡಿದ್ದ ಅದೊಂದುರೀತಿಯ ಸಂತೋಷಭಾವ. ಅದು ನಮ್ಮೆಲ್ಲರ ಆಗಮನದಿಂದಲೋ ಅಥವಾ ಮದುವೆಯಾಗುತ್ತಿದ್ದೇನೆಂಬ ಖುಷಿಗೋ ಅವನೇ ಬಲ್ಲ.


ಕಲ್ಯಾಣಮಂಟಪದ ಎದುರುಗಡೆಯೇ ಸಾಗರ್ ನಮಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ. ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಕಿತ್ತೂರು ಕೋಟೆಗೆ ಪ್ರಯಾಣ ಬೆಳೆಸಿದೆವು. ಸಂಜೆ ಮೆರವಣಿಗೆ 5 ಗಂಟೆಗೆ ಪ್ರಾರಂಭವಾಗುವುದಿತ್ತು. ಅಷ್ಟರೊಳಗೆ ಹೋಗಿಬಂದುಬಿಡಬಹುದು ಎಂದು ದೃಢೀಕರಿಸಿಕೊಂಡೇ ಹೊರಟಿದ್ದೆವು. ಕಿತ್ತೂರಿನ ಕೋಟೆಯಲ್ಲಿ ಈಗ ಹೇಳಿಕೊಳ್ಳುವಂತಹದ್ದೇನೂ ಉಳಿದಿಲ್ಲವಾದರೂ ಧಾರವಾಡಕ್ಕೆ ಹೋದರೆ ಒಮ್ಮೆ ಅಲ್ಲಿಗೂ ಒಂದು ಭೇಟಿ ನೀಡಿ ಬರಬಹುದು. ಯಾವುದೇ ಶಿಲ್ಪಕಲಾಕೃತಿಗಳು ರಾರಾಜಿಸದಿದ್ದರೂ ರಾಣಿಯ ಅರಮನೆಯ ಅಡಿಪಾಯವನ್ನಷ್ಟಾದರೂ ನೋಡಬಹುದು. ಕಿತ್ತೂರು ಕೋಟೆಯನ್ನು ನೋಡಿಕೊಂಡು ಗುಂಡಪಿಯ ಗೆಳೆಯನ ಮನೆಗೆ ಹೋದೆವು. ಅಲ್ಲಿ ತಿಂದ ಕೊಬ್ಬರಿ ಹಾಕಿದ ಅವಲಕ್ಕಿ ಹಸಿದ ಹೊಟ್ಟೆಗೆ ಮೃಷ್ಟಾನ್ನ ತಿಂದಂತಾಯಿತು. ಗುಂಡಪಿಯ ಗೆಳೆಯನ ಹೊಲಗದ್ದೆಗಲನ್ನು ನೋಡಿಕೊಂಡು ವಾಪಸ್ ಧಾರವಾಡ ತಲುಪಿದಾಗ ೬ ಗಂಟೆಯಾಗಿತ್ತು. ಮೆರವಣಿಗೆ ಆಗ ತಾನೇ ಹೊರಟಿತ್ತು.


ಮದುವೆಯಲ್ಲಿ ಗಂಡು ಹೆಣ್ಣು ಮೆರವಣಿಗೆಯಲ್ಲಿ ಬರುವುದನ್ನು ಕೇವಲ ಟಿವಿಯಲ್ಲಿ ಸಿನೆಮಾಗಳಲ್ಲಿ ನೋಡಿದ್ದ ನನಗೆ ಇದೊಂದು ಹೊಸ ಅನುಭವ. ದೂರದಿಂದಲೇ ಮೊಟ್ಟಮೊದಲು ಕಣ್ಣಿಗೆ ಬಿದ್ದದ್ದು 25-30 ಟ್ಯೂಬ್‍ಲೈಟ್‍ಗಳು. ಅವು ಪೂರ್ತಿ ರಸ್ತೆಯನ್ನು ಅತಿಕ್ರಮಿಸಿಕೊಂಡುಬಿಟ್ಟಿದ್ದವು. ಅವೆಲ್ಲವುಗಳ ಮುಂದೆ ಹತ್ತಾರು ಮಕ್ಕಳು ಪಟಾಕಿಗಳನ್ನು ಸಿಡಿಸುತ್ತಿದ್ದರು. ಕುಡಕೆ, ಧಡಾಕಿ, ಬಾಳಂಗಳಕ್ಕೆ ಹೋಗಿ ಚಿತ್ರ ವಿಚಿತ್ರ ಚಿತ್ತಾರಗಳನ್ನು ಬಿಡಿಸುತ್ತಿದ್ದ ಪಟಾಕಿಗಳು ಮೆರವಣಿಗೆಗೆ ಭರ್ಜರಿ ಆರಂಭವನ್ನು ನೀಡಿದ್ದವು. ನಂತರ ನೆರೆದ ಟ್ಯೂಬ್‍ಲೈಟ್ ಸಾಲುಗಳ ಮಧ್ಯದಲ್ಲಿ ಆರ್ಕೆಸ್ಟ್ರಾದವರು ವಿವಿಧ ಹಿಂದಿ ಮತ್ತು ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ಅವರ ಮಧ್ಯದಿಂದ ಬರುತ್ತಿದ್ದ ಹುಡುಗಿಯ ಧ್ವನಿಯ ಹಿಂದೆ ಬಿದ್ದಿದ್ದ ನಮ್ಮಲ್ಲಿಬ್ಬರಿಗೆ ಅಚ್ಚರಿಯಾಗಿದ್ದು ಹುಡುಗನೇ ಹುಡುಗಿಯ ರೀತಿ ಹಾಡುತ್ತಿದ್ದುದನ್ನು ಕಂಡು. ಇವೆಲ್ಲವುಗಳು ದಾಟಿದಮೇಲೆ ಬರುತ್ತಿದ್ದ ನವದಂಪತಿ ಜೋಡಿ ಮಳೆಗಾಲದ ಮೋಡಗಳನ್ನೂ ದಾಟಿನಿಂತ ಎರಡು ಮಿನುಗುವ ತಾರೆಗಳಂತಿದ್ದರು. ಅವರ ಸುತ್ತಲು ಕುಣಿದು ಕುಪ್ಪಳಿಸುತ್ತಿದ್ದ ಹೆಣ್ಣುಮಕ್ಕಳು ಈ ತಾರಾಜೋಡಿಗೆ ಪ್ರಭಾವಲಯವನ್ನು ಮೂಡಿಸಿದಂತಿತ್ತು. ಈ ಪ್ರಭೆಯನ್ನು ಹೆಚ್ಚಿಸಲೋ ಕಲಕಲೋ ಎಂಬಂತೆ ಜೋಶ್ ತಡೆದುಕೊಳ್ಳಲಾಗದ ನಮ್ಮ AceMAPನ Josh Machine ಕರ್ಣ ಒಂದೆರಡು ಸ್ಟೆಪ್ ಹಾಕಲು ಹೋಗೇಬಿಟ್ಟರು.


ಮೆರವಣಿಗೆ ಕಲ್ಯಾಣಮಂಟಪ ತಲುಪಿದಮೇಲೆ ನಿಶ್ಚಿತಾರ್ಥ ಶಾಸ್ತ್ರ ನಡೆಯಿತು. ನಂತರ ಊಟ. ಆಮೇಲೆ ವಾಪಸ್ ನಮ್ಮ ರೂಮಿಗೆ ತೆರಳಿ ಅಲ್ಲಿದ್ದ ಎರಡೂ ಮಂಚಗಳನ್ನು ಸೇರಿಸಿ ತಂದಿದ್ದ ಇಸ್ಪೀಟ್ ಕಾರ್ಡ್‍ಗಳನ್ನು ಹೊರತೆಗೆದ ನಂತರ ಬೇರೆ ಪ್ರಪಂಚವೇ ಬೇಡವಾಯಿತು. ಸತತ ನಾಲ್ಕು ಗಂಟೆಗಳಕಾಲ ಆಟವಾಡಿ, ಒಂದು ರಾಂಗ್ ಷೋ ಕೂಡ ಮಾಡಿ ಅಜೇಯನಾಗಿ ನಿಂತಿದ್ದ ಮಹೇಶನನ್ನು ಸೋಲಿಸಲು ಸಾಧ್ಯವಿಲ್ಲವೆಂದು ಅರಿತಮೇಲೆ ಮಲಗಲು ನಿರ್ಧರಿಸಿದೆವು.


ಮಾರನೇ ದಿನ ಮದುವೆ ಮುಹೂರ್ತ 12ಕ್ಕಿತ್ತು. ನಾವೆಲ್ಲರೂ ಎದ್ದು ತಯಾರಾಗಿ ಕಲ್ಯಾಣಮಂಟಪ ತಲುಪುವಷ್ಟರಲ್ಲಿ ಆಗಲೇ 11:30 ಆಗಿಹೋಗಿತ್ತು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು, ’ಹುಡುಗ ಪಾಪ ಹಳ್ಳಕ್ಕೆ ಬಿದ್ದಾ..’ ಎಂದಂದುಕೊಳ್ಳುತ್ತಾ ಭರ್ಜರಿ ಊಟವನ್ನು ಮತ್ತೊಮ್ಮೆ ಮನಃಪೂರ್ವಕವಾಗಿ ಸವಿದೆವು. ಸಾಗರ್ ಮತ್ತು ಕಾದಂಬರಿಯರನ್ನು ಭೇಟಿಯಾಗಿ ವೈವಾಹಿಕ ಜೀವನದಲ್ಲಿ ಅವರಿಗೆ ಶುಭಕೋರಿ ಬೀಳ್ಕೊಡುವಾಗ ಎಲ್ಲರ ಹೃದಯವೂ ಭಾರವಾಗಿತ್ತೋ ಏನೋ. ಮಾತುಗಳು ಮೊದಲಿಗಿಂತ ಕಡಿಮೆಯಾಗಿಬಿಟ್ಟಿದ್ದವು. ಎಲ್ಲರಿಗೂ ಮೌನವೇ ಇಷ್ಟವೆನಿಸತೊಡಗಿತ್ತು. ಇವೆಲ್ಲವುಗಳ ನಡುವೆ ಆಗಾಗ ನೆನಪಿಗೆ ಬರುತ್ತಿದ್ದವರು AceMAP ಕುಟುಂಬದ ಉಳಿದ ಸದಸ್ಯರು. ಅನಿವಾರ್ಯ ಕಾರಣಗಳಿಗೊಳಗಾಗಿ ಮದುವೆಗೆ ಬರಲಾಗದುದಕ್ಕೆ ಅವರಿಗೂ ಸಂಕಟ.

ಯಾದವಿ ಮನೋಜ ದೀಪಕ
ಮಂಜು ವಿಜಯ ಅಶೋಕ
ಇವರೆಲ್ಲರಿಗೆ, ತಾವು ಬರಲಾಗಲಿಲ್ಲವಲ್ಲಾ
ಎಂಬುದೊಂದೇ ಶೋಕ
ನಮಗನಿಸಿದ್ದೂ ಅದೇ,
ನೀವೂ ಇರಬೇಕಿತ್ತು ನಮ್ಮ ಪಕ್ಕ.

ಹಳೆಯ ದಿನಗಳನ್ನು ನೆನಪಿಸಿಕೊಂಡಾಗ, ಹತ್ತಿರದವರು ದೂರಾದಾಗ, ಮನಸ್ಸು ಕೆಲಸದ ಏಕತಾನತೆಯಿಂದ ಬಳಲಿದಾಗ ನನ್ನನ್ನು ಸಂತೈಸುವುದು ಅಡಿಗರ ಆ ಒಂದು ಸಾಲು ಮಾತ್ರ.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"


ಸಾಗರ್ ಮತ್ತು ಕಾದಂಬರಿ ಅವರ ವೈವಾಹಿಕ ಜೀವನ ಶುಭಪ್ರದವಾಗಲಿ.

Thursday, November 22, 2007

ಉದಯವಾಯಿತು ಚೆಲುವ ಕನ್ನಡ ನಾಡು

====================
ರಚನೆ: ಶ್ರೀಯುತ ರಿಚರ್ಡ್ ಲೂಯಿಸ್
====================

ಕನ್ನಡ ಕಸ್ತೂರಿ ಅಂತಾರೆ.
ಆದರೆ, ಇಂಥಾ ನಮ್ಮ ಕನ್ನಡದ ಪರಿಸ್ಥಿತಿ ನಮ್ಮ ಕರ್ನಾಟಕದಲ್ಲಿ ಏನಾಗಿದ್ಯಪ್ಪಾ ಅಂತಂದ್ರೆ,
ನಾವು ಕನ್ನಡ ಅಂದ್ರೆ ಇನ್ನೊಬ್ಬ ಅಂತಾನೆ ’ಎನ್ನಡ’
ಅಲ್ಲಪ್ಪಾ ನಾನು ಮಾತಾದಿದ್ದು ಕನ್ನಡ,
ಇವ್ನಂತಾನಲ್ಲ ಎನ್ನಡ ಅಂತ ಇನ್ನೊಬ್ನಿಗೆ ಹೇಳಿದ್ರೆ
ಅವನಂತಾನೆ ’ಏಮ್ರಾ ಎಕ್ಕಡ?’

ಅಯ್ಯಯ್ಯೋ ಈ ಕನ್ನಡ ನಾಡ್ನಲ್ಲಿ ಕನ್ನಡವೇ ಇಲ್ವಲ್ಲಪ್ಪಾ
ಇಲ್ನೋಡಿದ್ರೆ ಎನ್ನಡ ಅಲ್ನೋಡಿದ್ರೆ ಎಕ್ಕಡ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

ಕನ್ನಡ ಕಸ್ತೂರಿ ಭಾಷೆ ಗತಿ ಹೀಗಾಯ್ತು.
ಹೋಗ್ಲಿ ನಮ್ಮ ಕನ್ನಡಿಗರ ಹೃದಯದಂತಿರುವ
ವಿಶಾಲವಾದ ಕರ್ನಾಟಕ ರಾಜ್ಯದ ಗತಿ ಏನಾಯ್ತಪ್ಪಾ ಅಂತಂದ್ರೆ,

ಕಾಸರಗೋಡು ಕೇರಳಾಕ್ಕೆ ಸೇರೋಯ್ತು.
ಬೆಳಗಾಮು ಮಹಾರಾಷ್ಟ್ರಕ್ಕೆ ಸೇರಲೇಬೇಕು.
ಕೋಲಾರ ಚೆನ್ನೈಗೆ ರಾಯಚೂರು ಆಂದ್ರಕ್ಕೆ
ಕಾವೇರಿ ಚೆನ್ನೈಗೆ ಕೃಷ್ಣಾ ನೀರು ಆಂದ್ರಕ್ಕೆ
ಸೇರ್‍ಬೇಕು ಸೇರ್‍ಬೇಕು ಸೇರಲೇಬೇಕು.
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ವಿಶಾಲ ಕರ್ನಾಟಕದ ಪರಿಸ್ಥಿತಿ ಹೀಗಾಯ್ತು.
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಏನಾಯ್ತಪ್ಪಾ ಅಂತಂದ್ರೆ,

ಸದಾಶಿವನಗರ ಬರೀ ಸಿಂದಿ ಗುಜರಾತಿಗಳದು
ಚಿಕ್ಕಪೇಟೆ ಬಳೇಪೇಟೆಗಳು ಬರೀ ಮಾರ್ವಾಡಿಗಳದು
ಅಳಿದುಳಿದ ಮಾವಳ್ಳಿ ಗುಟ್ಟಳ್ಳಿ ಸುಂಕೇನಳ್ಳಿ
ಹಳ್ಳಿ ಪಳ್ಳಿಗಳೆಲ್ಲಾ ಕನ್ನಡಿಗರದು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ನಮ್ಮ ಭಾಷೆನೂ ಹಿಂಗಾಯ್ತು, ರಾಜ್ಯಾನೂ ಹಿಂಗಾಯ್ತು
ನಮ್ಮ ಕಲೆ ಸಂಸ್ಕೃತಿಯ ಕನ್ನಡಿ ಈ ನಮ್ಮ ಟಿವಿ ಚಾನಲ್‍ಗಳ ಗತಿ ಏನಾಯ್ತಪ್ಪಾ ಅಂತಂದ್ರೆ,

ನಿಮ್ಮ ಉದಯಾ ಟಿವಿಗೆ ಮದ್ರಾಸಿನ ಯಜಮಾನರು
ನಮ್ಮ ಈ ಟಿವಿಕ್ಕ್ ಆಂದ್ರಾವಾರು ಯಜಮಾನರು
ಕಾವೇರಿ ಕೇರಳ, ಮುಂಬೈದು ಸುಪ್ರಭಾತ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಟಿವಿ ಸ್ಥಿತಿಯೇನೋ ಹೀಗಾಯ್ತು,
ಚಲನಚಿತ್ರಗಳ ಗತಿ ಏನಪ್ಪಾ ಅಂದ್ರೆ,

ಕನ್ನಡದ ಹೀರೋಯಿನ್‍ಗಳೆಲ್ಲಾ ಬಾಂಬೆ ಮದ್ರಾಸಿನವರು
ಕನ್ನಡದ ನಿರ್ದೇಶಕರೆಲ್ಲಾ ಕೇರಳ ಆಂದ್ರದವರು
ಲೈಟ್‍ಬಾಯ್ಸು ಕನ್ನಡದವರು ಸೆಟ್‍ಬಾಯ್ಸು ಕನ್ನಡದವರು
ಎಕ್ಸ್ಟ್ರಾಸು ಕನ್ನಡದವರು ಕ್ಯಾಂಪ್‍ಬಾಯ್ಸು ಕನ್ನಡದವರು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಕಲೆ ಸ್ಥಿತಿ ಹಿಂಗಾಯ್ತು, ಸಂಸ್ಕೃತಿನೂ ಹಿಂಗಾಯ್ತು
ರಾಜ್ಯದ ಆಡಳಿತ ಹೇಗಾಯ್ತಪ್ಪಾ ಅಂತಂದ್ರೆ,

ಐ ಎ ಎಸ್ ಆಫೀಸರುಗಳೆಲ್ಲಾ ಬಂಗಾಲದವರು
ಐ ಪಿ ಎಸ್ ಆಫೀಸರುಗಳೆಲ್ಲಾ ನಯಿದಿಲ್ಲಿಯವರು
ಡ್ರೈವರ್‍ಗಳು ಕನ್ನಡದವರು ಪಿಸಿಗಳು ಕನ್ನಡದವರು
ಮುಸರೆ ತಿಕ್ಕೋರು ಕನ್ನಡದವರು ಕೂಲಿ ಮಾಡೋರು ಕನ್ನಡದವರು
ಗಾಡಿ ಎಳ್ಯೋರು ಕನ್ನಡದವರು ಬೀಡಿ ಸೇದೋರು ಕನ್ನಡದವರು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಅಣ್ಣಾ ಚೆನ್ನೈ ಅಣ್ಣಾ,
ಎನ್ನಡಾ?
ಅಣ್ಣಾ ಆಂದ್ರದ್ ಅಣ್ಣಾ
ಏಮಿರಾ?
ನಿಮ್‍ಮೇಲೆ ನಮಗೇನೂ ಕೋಪ ಇಲ್ಲಾ
ನಾವು ನಿಮ್ಮನ್ನ ಕೇಳೋದಿಷ್ಟೆ

ನೀವಿಲ್ಲಿ ಬಂದಾಯ್ತು ಬಂದಿಲ್ಲಿ ನೆಲೆಸಾಯ್ತು
ಅನ್ನಬೇಡ ಎನ್ನಡ ಕಲಿ ಸ್ವಲ್ಪ ಕನ್ನಡ
ಪ್ರೀತಿಯಿಂದ ಕರೆದಾಗ ಎತ್ತಬೇಡ ಎಕ್ಕಡ
ಎನ್ನಡ ಎಕ್ಕಡ ಬಿಟ್ಟು ಕಲಿ ಕನ್ನಡ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಹಾಡನ್ನು ಆನಂದಿಸಲು ಈ ಕೊಂಡಿಗೆ ಹೋಗಿರಿ

’ಅಮ್ಮ’ಳಲ್ಲಿಲ್ಲದ ವಿಶೇಷತೆ ’ಮಮ್ಮಿ’ಯಲ್ಲೇನಿದೆ?


ಭಾರತೀಯರು ಭಾವಜೀವಿಗಳು. ಭಾಷೆ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನ. ಕೇವಲ ಭಾಷೆಯಿಂದಷ್ಟೇ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದೇನಿಲ್ಲ. ಮುಖಭಾವದಿಂದ, ಹಾವಭಾವದಿಂದ, ಕಣ್ಣಿನಿಂದ ಮನುಷ್ಯನ ಭಾವನೆಗಳು ವ್ಯಕ್ತವಾಗುತ್ತಲೇ ಇರುತ್ತದೆ. ಭಾರತದ ಯಾವುದೇ ಭಾಷೆಯ ಯಾವುದೇ ಶಬ್ದವನ್ನು ತೆಗೆದುಕೊಳ್ಳಿ, ಅದರಿಂದ ಒಂದು ಭಾವ ಒಸರುತ್ತಿರುತ್ತದೆ. ಇದು ಕೇವಲ ರೂಢಿಯಲ್ಲ, ಮನೋಶಾಸ್ತ್ರ. ಮನುಷ್ಯ ಯಾವುದೇ ಶಬ್ದ ಹೊರಹೊಮ್ಮಿಸುವಾಗ ಅದರ ಹಿಂದೊಂದು ಪ್ರೇರಣೆಯಿರುತ್ತದೆ. ಒಂದು ಭಾವವಿರುತ್ತದೆ. ಆ ಶಬ್ದವನ್ನು ಉಚ್ಛರಿಸಿದಾಗ ಆ ಭಾವ ತನ್ನಿಂತಾನೆಯೇ ಪ್ರಕಟವಾಗಿಬಿಟ್ಟಿರುತ್ತದೆ. ಧ್ವನಿಯ ವಿಶೇಷ ಕಸರತ್ತಿಲ್ಲದೆ ಯಾವ ಭಾಷೆಯನ್ನು ಆಡಿದಾಗ ಭಾವನೆಗಳು ಸರಾಗವಾಗಿ ಹರಿದು ಬರುತ್ತದೆಯೋ ಆ ಭಾಷೆ ಪರಿಪೂರ್ಣವಾಗಿದೆಯೆಂದರ್ಥ. ನಾವೆಲ್ಲರೂ ಗರ್ವದಿಂದ ಹೇಳಿಕೊಳ್ಳಬೇಕಾದ ಒಂದು ಅಂಶವೆಂದರೆ ನಮ್ಮ ಕಸ್ತೂರಿ ಕನ್ನಡವೂ ಇಂತಹ ಭಾಷೆಗಳಲ್ಲೊಂದು.


ಭಾಷೆ ಹುಟ್ಟುವುದು ಒಂದೆರಡು ಪಂಡಿತರು ಕುಳಿತು ಮಾಡುವ ಚರ್ಚೆಯಿಂದಲೋ ಅಥವಾ ಯಾವುದಾದರೂ ಮನಶಾಸ್ತ್ರಜ್ಞನ ಥೀಸಿಸ್‍ನಿಂದಲೋ ಅಲ್ಲ. ಒಂದು ಜನಾಂಗ ಬೆಳೆದಂತೆ, ಒಂದು ನಾಗರೀಕತೆ ಬೆಳೆದಂತೆ ಭಾಷೆಯೂ ಹುಟ್ಟಿ ಬೆಳೆಯುತ್ತದೆ. ಆಯಾ ಸ್ಥಳಗಳ ಭಾಷೆ ಆಯಾ ಜನಜೀವನವನ್ನು ಪ್ರತಿಬಿಂಬಿಸುತ್ತದೆ. ಸಾವಿರಾರು ವರ್ಷಗಳಿಂದ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಈ ಭಾಷೆಯ ಶಬ್ದಗಳನ್ನು ನಿನ್ನೆ ಮೊನ್ನೆ ಬಂದಂತಹ ಪರಕೀಯರ ಭಾಷೆಯ ಶಬ್ದಗಳು ಅತಿಕ್ರಮಿಸುವುದು ಎಷ್ಟು ಸೂಕ್ತ? ಅಂತಹ ಶಬ್ದಗಳು ನಮಗೆ ಹೊಂದುತ್ತವೆಯೇ? ಅಥವಾ ಅಂತಹ ಶಬ್ದಗಳ ಮೋಹಕ್ಕೊಳಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬೇಕೆ? ನಮ್ಮತನವನ್ನು ಕಳೆದುಕೊಳ್ಳಬೇಕೆ?


’ಅಮ್ಮಾ’ ಎನ್ನುವ ಎರಡಕ್ಷರದಲ್ಲಿ ಮುಕ್ಕೋಟಿ ದೇವತೆಗಳನ್ನು ಕಂಡ ಸಂಸ್ಕೃತಿ ನಮ್ಮದು. ಅಂತಹ ಶಬ್ದವನ್ನು ಮೂಲೆಗುಂಪಾಗಿಸಿ ಅದರ ಬದಲು ಕಾಯ್ದಿಟ್ಟ ಹೆಣವೆಂಬ ಅರ್ಥ ಕೊಡುವ ’ಮಮ್ಮಿ’ಯನ್ನು ತಂದು ಕೂರಿಸಬೇಕೆ? ಮಗು ನೋವಾದಾಗ ಮೊದಲು ತಾಯಿಯನ್ನು ನೆನಪಿಸಿಕೊಂಡು ಕೂಗುವ ’ಅಮ್ಮಾ’ ಎನ್ನುವ ಎರಡಕ್ಷರದಿಂದ ಹೊಮ್ಮುವ ಭಾವ ’ಮಮ್ಮಿ’ ಎಂದಾಗ ಮೂಡಿಬರುವುದಿಲ್ಲ. ಸಂತಸದ ಸುದ್ದಿಯನ್ನು ಮೊದಲು ತಾಯಿಗೆ ತಿಳಿಯಗೊಡಬೇಕು ಎನ್ನುವ ಆತುರದಲ್ಲಿ ಮನೆ ಹೊಕ್ಕಿ ’ಅಮ್ಮಾ’ ಎಂದು ಮಗ ಕರೆಯುವಾಗ ಸ್ಫುರಿಸುವ ಭಾವ ’ಮಮ್ಮಿ’ ಎಂದಾಗ ಸೊರಗಿಹೋಗುತ್ತದೆಯೇನೋ ಅನ್ನಿಸುತ್ತದೆ. ಇಂತಹ ಕೃತಕ ಭಾಷೆ ನಮ್ಮದಾಗಬೇಕೆ? ಶಬ್ದ ಶಬ್ದಕ್ಕೂ ಭಾವಸಂಚಾರವೀಯುವ ಸರ್ವೋನ್ನತ ಭಾಷೆಯನ್ನು, ಭಾವನೆಗಳನ್ನೇ ಹೊಮ್ಮಗೊಡದ ನಿರ್ಜೀವ ಭಾಷೆಯನ್ನಾಗಿಸುವುದರಲ್ಲಿ ಯಾವ ಪುರುಷಾರ್ಥವಿದೆ?


ಇಷ್ಟಕ್ಕೂ ನಾನು ಮನನೊಂದುಕೊಂಡದ್ದು, ನಮ್ಮ so called high society ಜನರು ತಮ್ಮ ತಾಯಿಯನ್ನು ಮಮ್ಮಿ ಎಂದಿದ್ದಕ್ಕಲ್ಲ. ಮುಖವನ್ನೇ ಕಾಣದಂತೆ ಮೇಕಪ್ ಮಾಡಿಕೊಳ್ಳುವ, ಸಾವಿರ ರೂಪಾಯಿಗಳಿಗೂ ಕೆಳಗೆ ವಸ್ತುಗಳೇ ಸಿಗದಂತಹ ’ಷಾಪಿಂಗ್ ಕಾಂಪ್ಲೆಕ್ಸ್’ ’ಮಾಲ್’ ಗಳಲ್ಲಿ ಸುತ್ತಾಡುವ ಬೆಡಗಿಯರು ತಮ್ಮ ತಾಯಂದಿರನ್ನು ’ಮಾಮ್’ ಎಂದು ಕರೆದಾಗಲಲ್ಲ. ನಮ್ಮ ಮನೆಯ ಹಿಂದುಗಡೆಯೇ ಗುಡಿಸಲು ಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡಿರುವ, ಆಂಗ್ಲ ಭಾಷೆಯ ಗಂಧವೇ ಇಲ್ಲದ ಮನೆಗಳ ಮಕ್ಕಳು ತಾಯಂದಿರನ್ನು ಮಮ್ಮಿ ಎಂದಾಗ. ಎಂದೂ ನಮ್ಮವಳಲ್ಲದ ನಮ್ಮವಳಾಗಲು ಸಾಧ್ಯವಿಲ್ಲದ ಈ ’ಮಮ್ಮಿ’ ನಮಗೆ ಬೇಕೆ? ಅವಳಿಗಾಗಿ ನಾವು ನಮ್ಮ ’ಅಮ್ಮ’ಳನ್ನು ತೊರೆಯಬೇಕೆ?

Wednesday, November 14, 2007

ಕನ್ನಡವ ಕಾಪಾಡು ಕನ್ನಡಿಗರಿಂದ




ಕನ್ನಡಕ್ಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ಕನ್ನಡಿಗರಿಂದ


ಬಹುಶಃ ವರ್ಷಗಳ ಹಿಂದೆ ಡುಂಡಿರಾಜರು ಬರೆದ ಈ ಚುಟುಕು ಕೇವಲ ವಿನೋದಕ್ಕಾಗಿರಲಿಕ್ಕಿಲ್ಲ. ಇದರ ಹಿಂದಿನ ಕನ್ನಡದ ಪರಿಸ್ಥಿತಿಯ ಚಿತ್ರಣ ನೋಡುಗರ ಕಣ್ಣಿಗೆ ತಿಳಿಯದ್ದೇನೂ ಅಲ್ಲ. ಬೆಂಗಳೂರು ಕನ್ನಡಿಗರ, ಕನ್ನಡದ ಸಧ್ಯದ ಪರಿಸ್ಥಿತಿ ಎಲ್ಲರಿಗೂ ತಿಳಿದಿದ್ದೇ. ಆದರೂ ಇದೊಂದು ಸರಿಪಡಿಸಲಸಾಧ್ಯವಾದ ಸಮಸ್ಯೆಯಂತೆ ಬೆಳೆಯುತ್ತಿರುವುದು ನಮ್ಮ ದುರಾದೃಷ್ಟ. ಹಾಗಿದ್ದರೆ ನಿಜವಾಗಿಯೂ ಕನ್ನಡದ ಪರಿಸ್ಥಿತಿ ಅಸ್ಟೊಂದು ಹದಗೆಟ್ಟಿದೆಯೇ? ಕೇವಲ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಇಳಿದಿರಬಹುದು. ಪಟ್ಟಣ ಬೆಳೆದಾಗ ಇವೆಲ್ಲ ಸಹಜ ಎಂದು ನಮಗನಿಸಬಹುದು. ಆದರೆ ಇದು ಕೇವಲ ಕನ್ನಡಿಗರ ಸಂಖ್ಯೆ ಇಳಿಮುಖವಾಗಿರುವ ಪ್ರಶ್ನೆಯಲ್ಲ. ಕನ್ನಡಿಗರಲ್ಲೇ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ!!!

ಕನ್ನಡವನ್ನು ಉಳಿಸಿ, ಬೆಳೆಸಿ ಎನ್ನುವ ಘೋಷಣೆಗಳು ಇವತ್ತಿನದಲ್ಲ. ಬಹಳಷ್ಟು ವರ್ಷಗಳ ಹಿಂದೆಯೇ ಇದು ಕೇಳಿ ಬರುತ್ತಿತ್ತು. ಅದು ಈಗಲೂ ಮುಂದುವರಿದಿದೆ. ಆದರೆ ಈಗ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ "ಕನ್ನಡ ಉಳಿಸಿ"ಯ ಬದಲು "ಕನ್ನಡ ಉಲಿಸಿ" ಎಂದು ಕೇಳಲ್ಪಡುತ್ತಿದೆ! ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ "ಹಾರ್ಧಿಕ" "ಶುಭಾಷಯಗಳು" ರಾರಾಜಿಸುತ್ತಿವೆ. ದೋಷವೇ ಇರದ ಭಿತ್ತಿಪತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬರೆಸುವ ಈ ಭಿತ್ತಿಪತ್ರಗಳಲ್ಲೇ ಭಾಷಾದೋಷವಿದೆಯೇ ಎಂದು ಪರೀಕ್ಷಿಸದ ನಾವು ಖರ್ಚಿಲ್ಲದೇ ಮಾತನಾಡುವಾಗ ಅಥವಾ ಪತ್ರ ಬರೆಯುವಾಗ ಆಡುವ ಭಾಷೆಯ ಬಗ್ಗೆ ಲಕ್ಷವಹಿಸುತ್ತೇವೆಯೆ?

ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ನೆಡೆದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು. ಒಂದು ತರಕಾರಿ ಅಂಗಡಿಗೆ ಗಜ್ಜರಿಯನ್ನು ಕೊಂಡುಕೊಳ್ಳಲು ಹೋಗಿದ್ದೆ. ತರಕಾರಿ ಅಂಗಡಿಯವನು ಚೆನ್ನಾಗಿಯೇ ಕನ್ನಡ ಮಾತನಾಡುತ್ತಿದ್ದ. ಆದರೆ ಅವನಿಗೆ "ಗಜ್ಜರಿ" ಎನ್ನುವ ಶಬ್ದವೇ ಗೊತ್ತಿರುವಂತೆ ತೋರಲಿಲ್ಲ. ’ಸಾರ್ ಅದಾ? ಇದಾ?’ ಎಂದು ಇದ್ದು ಬಿದ್ದ ತರಕಾರಿಗಳನ್ನೆಲ್ಲ ತೋರಿಸಿ ನನ್ನನ್ನೇ ಕೇಳಿದ. ಅಂತೂ ಕೊನೆಗೂ ನನಗೆ ಬೇಕಾದದ್ದು ಅವನ ಕಣ್ಣಿಗೆ ಬಿತ್ತು. ತೂಕ ಮಾಡುತ್ತಾ ನನಗೆ ಹೇಳಿದ "ನೀವು ಇದಕ್ಕೆ ಗಜ್ಜರಿ ಅಂತೀರಾ ಸಾರ್? ಅಚ್ಚಕನ್ನಡದಲ್ಲಿ ನಾವು ಇದನ್ನ ’ಕ್ಯಾರಟ್’ ಅಂತೀವಿ" ಎಂದು! ಅವನು ಇದನ್ನ ಕ್ಯಾರಟ್ ಎಂದು ತಿಳಿದಿದ್ದರೆ ತೊಂದರೆ ಇರಲಿಲ್ಲ. ಆದರೆ ಆ ಶಬ್ದ ಅಚ್ಚಕನ್ನಡದ ಶಬ್ದವೆಂದೇ ಭಾವಿಸಿರುವ ಅವನ ಸಾಮಾನ್ಯಜ್ಞಾನಕ್ಕೆ ಏನೆನ್ನಬೇಕು?

’ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎನ್ನುವ ನಾಣ್ಣುಡಿಯೇ ಇದೆ. ಮೊನ್ನೆ ಹಾಗೇ ಸುತ್ತಾಡಲಿಕ್ಕೆ ಸ್ನೇಹಿತರ ಜೊತೆ ಹೊರಟಿದ್ದಾಗ ಒಬ್ಬ ಹೆಂಗಸು ತನ್ನ ಪುಟ್ಟ ಕಂದನನ್ನು ಎತ್ತಿಕೊಂಡು ಊಟಮಾಡಿಸುತ್ತಿದ್ದಳು. ಆ ಮಗುವಿಗೆ ಊಟ ಬೇಡವಾಗಿತ್ತು. ಆಗ ಆ ತಾಯಿ ’ಅಲ್ಲಿ ನೋಡು ಪುಟ್ಟಾ ’ಡಾಗು’... ನೀನು ಊಟ ಮಾಡಿಲ್ಲಾ ಅಂದ್ರೆ ಅದು ಬಂದು ಕಚ್ಚಿಬಿಡತ್ತೆ’ ಎನ್ನುತ್ತಿದ್ದಳು. ಈ ಪರಿಸ್ಥಿತಿ ಬೆಂಗಳೂರಿನದಷ್ಟೇ ಎಂದುಕೊಂಡಿದ್ದ ನನಗೆ, ಮೊನ್ನೆ ಊರಿಗೆ ( ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ) ಹೋದಾಗ ನೆಡೆದ ಘಟನೆ ಪರಿಸ್ಥಿತಿಯ ತೀವ್ರತೆಯನ್ನು ಬಿಡಿಸಿ ತೋರಿಸಿತು. ಅಲ್ಲೂ ಒಬ್ಬ ಮಹಿಳೆ ತನ್ನ ಕಂದನಿಗೆ ದಾರಿಯಲ್ಲಿ ಮಲಗಿದ್ದ ಒಂದು ಎಮ್ಮೆಯನ್ನು ತೋರಿಸಿ ’ಇದು ಏನು ಪುಟ್ಟಾ?... ಬಫೆಲ್ಲೋ..." ಎಂದು ಹೇಳಿಕೊಡುತ್ತಿದ್ದಳು. ಮೊದಲ ಗುರುವಿನ ಪರಿಸ್ಥಿತಿಯೇ ಹೀಗಿದ್ದರೆ, ಮುಂದೆ ಆ ಮಕ್ಕಳು ’ನಾಯಿ’ ’ಎಮ್ಮೆ’ ಗಳನ್ನು ಮರೆಯುವುದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ಆಗುವ ಅನರ್ಥಕ್ಕೆ ಹೊಣೆ ಆ ಮಕ್ಕಳಂತೂ ಅಲ್ಲ.

ಕನ್ನಡ ಶಬ್ದಗಳು ಹೇರಳವಾಗಿ ಇರುವಾಗ ಅವುಗಳನ್ನು ಆಂಗ್ಲ ಪದಗಳಿಂದ ಬದಲಿಸುವುದರಿಂದ ಸಿಗುವ ಲಾಭವಾದರೂ ಏನು? ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೂ ಇವತ್ತು ನಾಯಿಯನ್ನು ಆಂಗ್ಲಭಾಷೆಯಲ್ಲಿ ಏನೆಂದು ಕರೆಯುತ್ತಾರೆ ಎನ್ನುವುದು ಗೊತ್ತು. ಒಂದು ಮಗು ಆಂಗ್ಲಭಾಷೆಯನ್ನು ಪ್ರಾಥಮಿಕ ಶಾಲೆಯಲ್ಲೇ ಕಲಿತಾಕ್ಷಣ ಅದು ಬಿಲ್ ಗೇಟ್ಸ್ ಆಗಿಬಿಡುತ್ತದೆಯೇ? ಅಥವಾ ಕನ್ನಡವನ್ನು ಕಲಿತಾಕ್ಷಣ ನಿಶ್ಪ್ರಯೋಜಕವಾಗಿಬಿಡುತ್ತದೆಯೇ? ಅಷ್ಟಕ್ಕೂ ಸಾಧನೆಗೆ ಬೇಕಿರುವುದು ಛಲವೇ ಹೊರತು ಭಾಷಾಜ್ಞಾನವಲ್ಲ. ಸ್ವಾಮಿ ವಿವೇಕಾನಂದರು ಕೇವಲ ಮೂರು ತಿಂಗಳಿನಲ್ಲಿ ಫ್ರೆಂಚ್ ಕಲಿತು ಫ್ರೆಂಚರೂ ತಲೆತಗ್ಗಿಸುವಂತೆ ಭಾಷಣ ಮಾಡಿರಲಿಲ್ಲವೇ? ನಮಗೇಕೆ ಇಂಥವರು ಆದರ್ಶವ್ಯಕ್ತಿಗಳಾಗುತ್ತಿಲ್ಲ? ಉತ್ತರವಿಷ್ಟೇ, ನಾವಿನ್ನೂ ಮಾನಸಿಕ ದಾಸ್ಯದಿಂದ ಹೊರಬಂದಿಲ್ಲ. ಇನ್ನಷ್ಟೂ ದಾಸರಾಗುತ್ತಿದ್ದೇವೆ. ನಮ್ಮ ಭವ್ಯ ಸಂಸ್ಕೃತಿಯ ಪರಿಚಯ ನಮಗೇ ಇಲ್ಲದಾಗಿದೆ. ನಮ್ಮತನವನ್ನೇ ನಾವು ದ್ವೇಷಿಸತೊಡಗಿದ್ದೇವೆ. ಪರದೇಶವೆಂದರೆ ಸ್ವರ್ಗ, ನಾವಿರುವುದು ನರಕವೆಂಬ ತಪ್ಪು ಕಲ್ಪನೆಯಲ್ಲಿ ಸಿಕ್ಕಿಬಿದ್ದಿದ್ದೇವೆ. ಈಗಾಗಲೇ ’ಸಂಸ್ಕೃತ’ವನ್ನು ಮರೆತು ನಮ್ಮದೇ ಆದ ಅಪಾರ ಜ್ಞಾನಭಂಡಾರವನ್ನು ನಮ್ಮ ಕೈಯಿಂದಲೇ ಮುಚ್ಚಿಕೊಂಡಿದ್ದೇವೆ. ಇನ್ನು ಕನ್ನಡವನ್ನೂ ಮರೆತು ಕೇವಲ ಭೋಗಜೀವಿಗಳಾದ ಪಾಶ್ಚಾತ್ಯರಂತಾಗಲಿದ್ದೇವೆ. ನಮಗೆ ಸ್ವತ್ವದ ಅರಿವಾಗುವವರೆಗೆ, ಸ್ವಾಭಿಮಾನ ಮೂಡುವವರೆಗೆ, ಎಷ್ಟೇ ಘೋಷಣೆಗಳನ್ನು ಕೂಗಿದರೂ ಎಷ್ಟೇ ಸಂರಕ್ಷಣಾ ವೇದಿಕೆಗಳನ್ನು ರಚಿಸಿದರೂ ನೀರಿನಲ್ಲಿ ಹೋಮ ಮಾಡಿದಂತೆ.

Tuesday, November 13, 2007

ಮೊದಲ ತೊದಲು ನುಡಿ

ಡೈರಿ ಬರೆಯುವ ಹವ್ಯಾಸವಿಟ್ಟುಕೊಳ್ಳಬೇಕೆಂದುಕೊಂಡು, ಅದನ್ನು ಪೂರೈಸಿಕೊಳ್ಳಲಾಗದೇ ಹೋದುದಕ್ಕೆ ಈ ಬ್ಲಾಗಿನ ಪ್ರಯತ್ನ. ಅಷ್ಟಕ್ಕೂ ಯಾತಕ್ಕಾದರೂ ಬೇಕು ಈ ಬ್ಲಾಗ್ ? ಏಕೈಕ ಹಾಗೂ ಸರಳವಾದ ಉತ್ತರ "ಮನದಾಳದ ಮಾತುಗಳನ್ನು ತೆರೆದಿಡಲು". ಮನದ ಮಾತುಗಳನ್ನು ತೆರೆದಿಡುವ ಅವಶ್ಯಕತೆಯಾದರೂ ಏನು ?

ನಾಲ್ಕಾರು ಹಿರಿಯ ಸಾಹಿತಿಗಳ ಸಾಹಿತ್ಯವನ್ನೋ, ಕಾದಂಬರಿಗಳನ್ನೋ ಓದಿದ ಕೂಡಲೇ ನಮಗೂ ಏನಾದರೂ ಬರೆಯಬೇಕೆಂಬ ಹಂಬಲ ಹುಟ್ಟುವುದು ಸಹಜ. ಇದು ಆ ಸಾಹಿತಿಗಳಿಗೆ ಹೆಗ್ಗಳಿಕೆಯಷ್ಟೆ. ತಮ್ಮ ಸಾಹಿತ್ಯದ ಮೂಲಕ ಬೇರೆಯವರಲ್ಲೂ ಬರವಣಿಗೆಯ ಬಗ್ಗೆ ಆಸಕ್ತಿ ಮೂಡಿಸುವ ಆ ಹಿರಿಯ ಚೇತನಗಳಿಗೆ ಎಷ್ಟು ಕೃತಜ್ನತೆಗಳನ್ನು ಹೇಳಿದರೂ ಸಾಲದು.

ಇಂತಹದೇ ಸಾಹಸಕ್ಕೆ ಕೈ ಹಾಕಿರುವ ಸಾವಿರಾರು ’ಬ್ಲಾಗ್’ದಾರರಲ್ಲಿ ನಾನೂ ಒಬ್ಬನೆಂದರೆ ತಪ್ಪಾಗಲಾರದು. ನನ್ನ ಬ್ಲಾಗ್ ಪ್ರಾರಂಭಿಸಿದ ಇವತ್ತಿನ ದಿನವಾವುದೋ, ರಾಹುಕಾಲ ಎಂದಿದೆಯೋ ತಿಳಿಯದು. ಒಟ್ಟಿನಲ್ಲಿ ಈ ದಿನ ಕೆಲಸದಲ್ಲಿ ಆಸಕ್ತಿ ಮೂಡದಿರುವುದು ಇಂತಹ ಸದಭಿರುಚಿಯ ಕೆಲಸಕ್ಕೆ ಪ್ರೇರಣೆಯಾಯಿತು ಎಂಬುದು ಸಂತಸದ ವಿಷಯ. ಒಟ್ಟಿನಲ್ಲಿ ಇದೊಂದು ಕೇವಲ ಆರಂಭಶೂರತ್ವದ ಕೆಲಸವಾಗದಿರಲಿ ಎಂಬುದು ಆ ದೇವರಲ್ಲಿ ನನ್ನ ಪ್ರಾರ್ಥನೆ.