Thursday, December 27, 2007

ಬಸ್ಸು ಸಾಗಲಿ ಮುಂದೆ ಹೋಗಲಿ


ಬೆಂಗಳೂರಿನಿಂದ ಶಿರಸಿಗೆ ಪ್ರಯಾಣ ಬೆಳೆಸಿದ್ದು ಇದೇ ಮೊದಲಬಾರಿಯೇನಲ್ಲ. ಪ್ರತಿಬಾರಿಯೂ ಹೊಸ ಹೊಸ ಅನುಭವಗಳು ಆದರೂ ಒಂದೆರಡು ಅನುಭವಗಳು ಪ್ರತೀಬಾರಿಯೂ ಆಗುತ್ತವೆ. ಮನೆ ತಲುಪಲು ಆಗುವ ವಿಳಂಬ ಮತ್ತು ಬೆನ್ನು ನೋವು. ಈ ಅನುಭವಗಳನ್ನು ಪಡೆದು, ’ದೋಣಿ ಸಾಗಲಿ’ ಗೀತೆಯಿಂದ ಪ್ರೇರಿತನಾಗಿ ಅದರ ಈಗಿನ version ಹೊರಬಿಟ್ಟಿದ್ದೇನೆ.

ರಾಷ್ಟ್ರಕವಿ ಕುವೆಂಪುರವರ ಕ್ಷಮೆಕೋರಿ,

ಬಸ್ಸು ಸಾಗಲಿ ಮುಂದೆ ಹೋಗಲಿ
ಶಿರಸಿ ನಗರವ ಸೇರಲಿ
ಹೊಂಡ ಗುಂಡಿಗೆ ಇಳಿಯುತೇಳುತ
ಸಿಕ್ಕ ಸಿಕ್ಕೆಡೆ ಹಾಯಲಿ

ಕುಣಿದು ಕುಣಿದು ಹಾರಿ ಹಾರಿ ಹಳ್ಳ ದಿಣ್ಣೆಯ ದಾಟಲಿ
ಎಗರಿ ಎಗರಿ ಬೀಳುವೆಮ್ಮೆಯ ಬೆನ್ನ ಮಾಲಿಶ್ ಮಾಡಲಿ
ಬೆಟ್ಟ ಗುಡ್ಡವ ಏರಲೆಳೆಸುವ ದೃಢ ಮನಸ್ಥಿತಿ ದೊರಕಲಿ
ನಡೆದು ಹೋಗುವ ಪಾದಚಾರಿಯ ದಾಟಿ ಮುಂದಕೆ ಹೋಗಲಿ

ಗಾಜು ಒಡೆದಿಹ ಬಸ್ಸ ಕಿಟಕಿಯ ನಡುವೆ ಗಾಳಿಯು ತೂರಲಿ
ಕುಣಿವ ಭರದಲಿ ಬಾರದೆಂದಿಹ ನಿದಿರೆ ಕರುಣೆಯ ತೋರಲಿ
ಜನರ ಕೆಳಗಿಹ ಕುರ್ಚಿಯಡಿಗಿಹ ಹಲ್ಲಿ ಎಚ್ಚರಗೊಂಡಿರೆ
ರಕ್ತ ಹೀರಿ ಕೊಬ್ಬಿಕೊಂಡಿಹ ತಿಗಣೆಗಳ ತಿನ್ನುತಲಿರೆ

ಬಾನಿನಂಗಳ ಬೆಳಗುತಿಹುದು ಮೂಡಣದ ರವಿ ಹಿಮತೊರೆ
ಹೊತ್ತು ಹತ್ತಾಗಿದ್ದರಿಂದಿಗು ಬಾರದೂ ದಾವಣಗೆರೆ
ಒಮ್ಮೆ ಪಂಕ್ಚರ್ ಆಗಿ ಹೋಗಿದೆ ಇನ್ನು ಆಗದೆ ಸಾಗಲಿ
ಇಂದಿಗಂತೂ ಮುಟ್ಟಲೊಲ್ಲದು ನಾಳೆಯಾದರು ಮುಟ್ಟಲಿ

5 comments:

ದೀಪಕ said...

ನಮಸ್ಕ್ರಾರ/\:)

ತು೦ಬಾನೇ ಚೆನ್ನಾಗಿದೆ. ನಿನ್ನ ಶಿರಸಿಯ ಪ್ರಯಾಣದ ಅನುಭವವನ್ನು ಕವನದ ರೂಪದಲ್ಲಿ ಸೊಗಸಾಗಿ ಬರೆದಿದ್ದೀಯ.
ಒಳ್ಳೆ ಲೇಖನದ ಜೊತೆಗೆ, ಹೀಗೆ ಕವಿತೆಗಳನ್ನು ಬರೆಯುತ್ತಾ ಮನದನಿಯನ್ನು ಪ್ರಕಾಶಿಸುತ್ತಿರು.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ

ಸಿದ್ಧಾರ್ಥ said...

ಪ್ರಿಯ ಮಿತ್ರ ದೀಪಕನ ಅನಿಸಿಕೆಗಳಿಗೆ ವಂದನೆಗಳು. ನಿನ್ನ ಪ್ರೋತ್ಸಾಹವೇ ನನ್ನ ಸಾಹಿತ್ಯಗಿರಿ ಚಾರಣಕ್ಕೆ ಊರುಗೋಲು.

Unknown said...

thumbaa chennagide... nan PC nalli kannada fonts illa haagagi aangla bhaashe yalle nanna anisike yannu barediddene

inti
-Ashwini

ಸಿದ್ಧಾರ್ಥ said...

Aksharagalu yaavudaadarenu? Balasida bhaashe kannada, balasuvavara hrudaya kannada. Aste saaku.

Anisikegalige dhanyavaadagalu. Bandu hogtaa iru.

ಸುರೇಖಾ ಭೀಮಗುಳಿ said...

" ಸೃಷ್ಟಿ " (ದೋಣಿ ಸಾಗಲಿ ಮುಂದೆ ಹೋಗಲಿ ದಾಟಿಯಲ್ಲಿ )
***************************************************
ಬಾಳ ನೌಕೆಯು ತೇಲಿ ಹೋಗಲಿ ಭವದ ಸಾಗರ ದಾಟಲೀ
ಪಯಣದಾಸುಖ, ಗಮ್ಯದಾಹಿತ, ಬದುಕು ಸಾರ್ಥಕವಾಗಲೀ || ಪಲ್ಲವಿ ||
ಮಳೆಯು ಸುರಿಯಲಿ, ಇಳೆಯು ತಣಿಯಲಿ, ಭೂಮಿ ಆಗಸ ಸೇರಲೀ
ಮಂಜು ಬೀಳಲಿ, ಪುಷ್ಪ ಬಿರಿಯಲಿ, ಪ್ರಕೃತಿ ಸೊಬಗದು ಹೆಚ್ಚಲೀ ||
ಬಿಸಿಲು ಕಾಯಲಿ, ಮೋಡ ಓಡಲಿ, ನೋಟ ಹಬ್ಬವ ಹೂಡಲೀ ||
ಹೊತ್ತು ಮೀರಲಿ, ತಾರೆ ಬೆಳಗಲಿ, ಚಂದ್ರ ಕಾಂತಿಯ ಚೆಲ್ಲಲೀ || ಬಾಳ ನೌಕೆಯು ||
ಗಿಡವು ಚಿಗುರಲಿ, ಮೊಗ್ಗು ಮೂಡಲಿ, ಮೊಗ್ಗು ಹೂವಾಗರಳಲೀ ||
ಹೂವಿನಂದವ ಕಂಡ ದುಂಬಿಯು ಜೇನ ಸವಿಯನು ಉಣ್ಣಲೀ ||
ದುಂಬಿ ಸ್ಪರ್ಶದಿ, ಕಾಯಿ ಕಚ್ಚಲಿ, ಕಾಯಿ ಹಣ್ಣುಗಳಾಗಲೀ ||
ಹೂವು ಕಾಯೋ ಹಣ್ಣೊ ಬೀಜವೊ ಸೃಷ್ಟಿಗುಪಕೃತವಾಗಲೀ || ಬಾಳ ನೌಕೆಯು ||
ಸಕಲ ಸೃಷ್ಟಿಯು ದೇವ ನಿರ್ಮಿತ ಎಂಬ ಸತ್ಯವ ತಿಳಿಯಿರೀ ||
ಸೃಷ್ಟಿಕರ್ತನ ಇಚ್ಚೆಯಂತೆಯೇ ನಮ್ಮ ಜೀವನ ಅರಿಯಿರೀ ||
ಅಂದ ಸವಿಯುವ, ನೋವ ಮರೆಯುವ, ಸೃಷ್ಟಿಕರ್ತನ ನೆನೆಯುವಾ ||
ಸರ್ವ ಕಾಲಕು, ಸರ್ವ ಸೃಷ್ಟಿಗು, ಶಾಂತಿ ಸುಖವನೆ ಬಯಸುವಾ || ಬಾಳ ನೌಕೆಯು ||
- ಸುರೇಖಾ ಭೀಮಗುಳಿ
08/06/2015