Tuesday, February 19, 2013

ಸ್ವಾತಂತ್ರ್ಯ ಹೋರಾಟದ ಪ್ರಹಸನ!

ಅಗಸ್ಟ್ 15ರಂದು ಹೈಸ್ಕೂಲಿನಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಅವಕಾಶ ಒದಗಿಬಂದಿತ್ತು. ಸ್ವತಂತ್ರ  ದಿನಾಚರಣೆಯಂದು ಏನಾದರು ಮಾಡಿದರೆ ಅದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೇ ಆಗಿರಬೇಕು ಎಂಬುದು ಎಲ್ಲರ ಅಭಿಮತ. ನೃತ್ಯರೂಪಕ ಮಾಡಲಂತೂ ಸಾಧ್ಯವಿರಲಿಲ್ಲ. ನಮ್ಮಲ್ಲಿ ನೃತ್ಯಮಾಡುವವರಿರಲಿ... ಹಾಡು ಹಾಡಲೂ ಯಾರೂ ಇರಲಿಲ್ಲ. ಹೆಣ್ಣು ಮಕ್ಕಳನ್ನು ನಮ್ಮೊಟ್ಟಿಗೆ ಸೇರಿಸಿಕೊಳ್ಳುವುದು ಎಲ್ಲರಿಗೂ ಇಷ್ಟವಿದ್ದರೂ, "ಹೆಣ್ ಮಕ್ಳನ್ನಾ ಮಾತ್ರ ಹಾಕ್ಕೊಂಡು ಮಾಡುದ್ ಬೇಡಾ.. ಹಾಂ..." ಎಂದೇ ಎಲ್ಲರೂ ಹೇಳುತ್ತಿದ್ದರು. ಇನ್ನು ಉಳಿದಿರುವುದು ಒಂದೇ. ನಾಟಕ ಮಾಡಬೇಕು. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ನಾಟಕ ಬರೆದು ಕೊಡುವವರ ಕೊರತೆ. ಕೊನೆಗೆ ನಮ್ಮದೇ ಪಠ್ಯದಲ್ಲಿದ್ದ ಒಂದು ಪಾಠವನ್ನೇ ಆಯ್ದುಕೊಂಡು ಅದನ್ನೇ ನಾಟಕ ಮಾಡುವುದು ಎಂದು ನಿರ್ಧರಿಸಿಬಿಟ್ಟೆವು.

ಕಾನ್ಸೆಪ್ಟು ಬಹಳ ಸಿಂಪಲ್ಲು. ಕೆಲವು ಹೋರಾಟಗಾರರು ಹಾಡು ಹಾಡುತ್ತಾ, ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೋಗುವ ದೃಶ್ಯ. ಪಾಠದಲ್ಲಿ ಬಂದಿರುವ ಹಾಡು, ಮಾತುಗಳನ್ನೇ ಒಬ್ಬೊಬ್ಬರಾಗಿ ಹೇಳುವುದು. ಸ್ವಲ್ಪ ಸಮಯದ ನಂತರ ಪೋಲೀಸರು ಬಂದು ಇದನ್ನೆಲ್ಲ ಮಾಡಬೇಡಿ ಎಂದು ಹೇಳುವುದು. ಹೋರಾಟಗಾರರು ಕದಲದೇ ಹಾಗೇ ನಿಲ್ಲುವುದು. ಪೋಲೀಸರು ಲಾಠಿ ಚಾರ್ಜ್ ಮಾಡುವುದು. ಹೋರಾಟಗರರು ವಂದೇ ಮಾತರಂ ಘೋಷಣೆ ಕೂಗುತ್ತಾ ಅಲ್ಲೇ ಕುಸಿದು ಬೀಳುವುದು. ದೇಶದ ಸ್ವಾತಂತ್ರ್ಯ ಹೋರಾಟವನ್ನೇ ಜನರ ಮುಂದೆ ತೋರಿಸುತ್ತಿರುವುದರ ಗಾಂಭೀರ್ಯದ ಅರಿವು ನಮಗೆ ಯಾರಿಗೂ ಇಲ್ಲದಿದ್ದರೂ, ಎಲ್ಲರಿಗೂ ಅಭಿನಯ ಮಾಡಿ ಕ್ಲಾಸಿನ ಎಲ್ಲ ಹೆಣ್ಣುಮಕ್ಕಳ ಮುಂದೆ ಹೀರೋ ಆಗುವ ಆಸೆಯಂತೂ ಉತ್ಕಟವಾಗಿತ್ತು. ಸ್ಕ್ರಿಪ್ಟ್ ಫೈನಲೈಸ್ ಆಗಿಹೋಯಿತು. ಪಾತ್ರಗಳನ್ನೂ ಹಂಚಿ ಆಯಿತು. ಎಲ್ಲರೂ ಅವರವರ ಮಾತುಗಳನ್ನು ಕಂಠಪಾಠ ಮಾಡಿಕೊಳ್ಳಲು ಪ್ರಾರಂಭಿಸಿದರು.

ಎರಡು ಮುಖ್ಯ ಪಾತ್ರಗಳು. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವನೇ ಮೆರವಣಿಗೆಯನ್ನು ಮುನ್ನಡೆಸುತ್ತಿರುವವ. ಇನ್ನೊಬ್ಬ ಪೋಲೀಸ್ ಅಧಿಕಾರಿ. ಇನ್ನು ಒಂದಿಷ್ಟು ಹೋರಾಟಗಾರರು ಮತ್ತೆ ಒಂದಿಷ್ಟು ಪೋಲೀಸ್ ಪೇದೆಗಳು. ಕೇವಲ 8-10 ನಿಮಿಷಗಳ ಪ್ರದರ್ಶನವಾದುದರಿಂದ ಎಲ್ಲರಿಗೂ ಓವರ್ ಕಾನ್ಫಿಡೆನ್ಸ್. ತಕ್ಕಮಟ್ಟಿಗೆ ರೆಹರ್ಸಲ್ ಮಾಡಿಕೊಂಡು, ಎಲ್ಲರೂ ತಮ್ಮ ತಮ್ಮ ಕಾಸ್ಟೂಮ್ಸ್ ಹೊಂದಿಸಿಕೊಂಡು ಅಗಸ್ಟ್ 15ರಂದು ಪ್ರದರ್ಶನಕ್ಕೆ ಸಿದ್ಧರಾದೆವು. ಖಾಕಿ ಚಡ್ಡಿ ಹಾಕಲು ವಿರೋಧ ವ್ಯಕ್ತಪಡಿಸಿದ್ದ ಪೋಲೀಸ್ ಅಧಿಕಾರಿ ಮಾರುತಿ, ಕೊನೆಗೂ ಒಂದು ಖಾಕಿ ಪ್ಯಾಂಟನ್ನು ಹೊಂದಿಸಿಕೊಂಡು ಬಂದಿದ್ದ. ಪೇದೆಗಳಿಗೆ ಚಡ್ಡಿಯೇ ಗತಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಜುಬ್ಬ, ಪಂಚೆ ಮತ್ತು ಗಾಂಧೀ ಟೋಪಿ. ದ್ವ್ಹಜಾರೋಹಣ ಎಲ್ಲಾ ನೆರವೇರಿಸಿದ ಮೇಲೆ ಕಾರ್ಯಕ್ರಮಗಳು ಪ್ರಾರಂಭವಾದವು. ಒಂದೆರಡು ಪ್ರವಚನಕಾರರು ಅದೇ ಗಾಂಧಿ ನೆಹರು ಪುರಾಣಗಳನ್ನು ಪಠಿಸಿದ ಮೇಲೆ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು.

ಮೊದಲಿಗೆ ದೇಶಭಕ್ತಿಗೀತೆ ಅದು ಇದು ಎಲ್ಲಾ ಕಾರ್ಯಕ್ರಮಗಳು. ಕೊನೆಯಲ್ಲಿ ನಮ್ಮ ನಾಟಕ! ಎಲ್ಲರಿಗೂ ಪುಕು ಪುಕು ಶುರುವಾಗಿತ್ತು. ಎಲ್ಲರೂ ಇದೀರೇನಪ್ಪಾ ಎಂದು ಹುಡುಕಿದರೆ ನಮ್ಮ ಪೋಲೀಸ್ ಪಾತ್ರಧಾರಿ ಮಾರುತಿಯೇ ಮಂಗಮಾಯ. ಕೊನೆಗೆ ಇನ್ನೇನು ನಮ್ಮ ನಾಟಕದ ಘೋಷಣೆಯಾಗಿಯೇ ಬಿಡುತ್ತದೆ ಎನ್ನುವಾಗ ಪ್ರತ್ಯಕ್ಷನಾದ. ಪೋಲೀಸ್ ಲಾಠಿ ತರುವುದು ಮರೆತು ಇಲ್ಲೇ ಎಲ್ಲೋ ಹೋಗಿ ಕೊನೆಗೂ ಒಂದು ಲಾಠಿಯ ವ್ಯವಸ್ಠೆ ಮಾಡಿಕೊಂಡು ಬಂದಿದ್ದ.

ಪ್ರದರ್ಶನ ಪ್ರಾರಂಭವಾಯಿತು. ನಾವು ಸ್ವಾತಂತ್ರ್ಯಹೋರಾಟಗಾರರೆಲ್ಲಾ ಘೋಷಣೆಗಳನ್ನು ಕೂಗುತ್ತಾ ಹಾಡು ಹಾಡುತ್ತಾ ಜನರ ಮಧ್ಯದಲ್ಲೆಲ್ಲಾ ಓಡಾಡಿ ನಾಟಕಕ್ಕೆ ಭರ್ಜರಿ ಪ್ರಾರಂಭ ಒದಗಿಸಿಬಿಟ್ಟೆವು. ಇನ್ನು ಪೋಲೀಸರ ಎಂಟ್ರಿ. ಮಾರುತಿ ಮತ್ತು ಇಬ್ಬರು ಪೇದೆಗಳು ಗತ್ತಿನಿಂದ ಬರುತ್ತಿದ್ದಂತೆ ಜನರೆಲ್ಲಾ ಗುಸುಗುಸು ಶುರುಮಾಡಿದರು. ಲಾಠಿ ತಿರಿಗಿಸುತ್ತಾ ಬಂದ ಪೋಲೀಸ್ ಇನ್‌ಸ್ಪೆಕ್ಟರ್‌ನ   ಸ್ಟೈಲ್ ನೋಡಿ ಜನ ದಂಗಾಗಿ ಹೋಗಿದ್ದರು. ತನ್ನ ಬಗ್ಗೆ ಜನ ಗಮನ ಕೊಡುತ್ತಿದ್ದಾರೆ ಎಂದು ಹುರುಪಿನಿಂದಲೋ ಏನೋ ಮಾರುತಿ ತಾನು ಹಿಡಿದಿದ್ದ ಲಾಠಿಯನ್ನು ಇನ್ನೋ ಜೋರಾಗಿ ತಿರುಗಿಸತೊಡಗಿದ. ಇವನು ತಿರುಗಿಸಿದ ರಭಸಕ್ಕೆ ಆ ಲಾಠಿ ಅವನ ಕೈ ಜಾರಿ ಮೇಲಕ್ಕೆ ಹಾರಿ ಎದುರು ಕೂತಿದ್ದ ಜನರ ಮಧ್ಯೆ ಹೋಗಿ ಬಿದ್ದುಬಿಟ್ಟಿತು. ಜನ ಹೋ.. ಎಂದು ಚೀರಲು ಶುರುಮಾಡಿಬಿಟ್ಟರು. ಲಾಠಿ ಕೈ ತಪ್ಪಿತಲ್ಲಾ ಎಂದು ತರಲು ಹೊರಟ ಮಾರುತಿ ಜನರ ಚೀರಾಟ ಕೇಳಿ ಮಧ್ಯದಲ್ಲೇ ನಿಂತು ಬಿಟ್ಟ. ಜನ ಹುಚ್ಚಾಪಟ್ಟೆ ನಗಲು ಶುರುಮಾಡಿಬಿಟ್ಟರು. ಏನು ಮಾಡುವುದು ಎಂದೇ ತೊಚದೆ ಪೋಲಿಸ್ ಇನ್‌ಸ್ಪೆಕ್ಟರ್ ಕೈಯಲ್ಲಿ ಲಾಠಿಯೇ ಇಲ್ಲದೆ ಲಾಠಿ ಚಾರ್ಜ್ ಘೋಷಿಸಿಬಿಟ್ಟ. ಪೇದೆಗಳು ಮತ್ತು ಇನ್‌ಸ್ಪೆಕ್ಟರ್ ಮಾರುತಿ ಕೈಯಿಂದಲೇ ಹೋರಾಟಗಾರರಿಗೆ ಗುದ್ದಲು ಶುರುಮಾಡಿದರು. ಜನರ ನಗು ಚೀರಾಟ ಇನ್ನೋ ಜೋರಾಯಿತು. ಸ್ವಾತಂತ್ಯ್ರ ಹೋರಾಟಗಾರರೋ ಅಲ್ಲೇ ಘೋಷಣೆ ಕೂಗುತ್ತಾ ಕುಸಿಯುವ ಬದಲು, ಈ ಪೋಲೀಸರ ಗುದ್ದು ತಪ್ಪಿಸಿಕೊಳ್ಳಲು ಓಡಲು ಶುರುಮಾಡಿಬಿಟ್ಟರು. ಒಂದಿಬ್ಬರು ಗುದ್ದು ತಿಂದ ಸಿಟ್ಟಿಗೆ ಅಲ್ಲೇ ಪೋಲೀಸರಿಗೆ ವಾಪಸ್ ಗುದ್ದಿ ದಿಕ್ಕಾಪಾಲಾಗಿ ಓಡಿಹೋದರು. ಪೋಲೀಸರು ಅವರ ಹಿಂದೆ ಅಟ್ಟಿಸಿಕೊಂಡು ಹೋದರು. ರಂಗಸ್ಥಳ ಒಮ್ಮೆಯೇ ಖಾಲಿಯಾಗಿಹೋಯಿತು. ನಾಟಕ ಮುಗಿಯಿತು ಎಂದು ಹೇಳಲೂ ಯಾರೂ ಇಲ್ಲದೆ,  ಜನರೇ ಅರ್ಥಮಾಡಿಕೊಂಡು ನಗುವನ್ನು ತಡೆದುಕೊಂಡು ಮುಂದಿನ ಕಾರ್ಯಕ್ರಮಕ್ಕೆ ಸಿದ್ಧರಾದರು.

ಸ್ವಾತಂತ್ಯ್ರ ಹೋರಾಟ ಒಂದು ಪ್ರಹಸನವಾಗಿ ಕೊನೆಗೊಂಡಿತು. ಈಗ ನಮ್ಮನ್ನು ನಾವೇ ನೋಡಿಕೊಂಡರೆ, ನಿಜಕ್ಕೂ ನಮ್ಮ ಹಿಂದಿನವರು ಹೋರಾಡಿದ್ದು ಪ್ರಹಸನದಂತೆಯೇ ಭಾಸವಾಗುತ್ತದೆ!