Monday, November 2, 2009

ಬೊಂಬೆಯಾಟವಯ್ಯಾ...


"ಈ ಯಪ್ಪನಿಗೆ ಬೇರೆ ಕೆಲ್ಸಾ ಇಲ್ವಾ? ಒಂದಾದ್ರು ಕಂಪನಿ ಸರಿಯಾಗಿ ನೆಡಸ್ಕೊಂಡ್ ಹೋಗೋದ್ ಬ್ಯಾಡ್ವಾ... ಬರೀ ಇದೇ ಆಯ್ತು. ಕಂಪನಿ ಮಾಡೋದು... ಮಾರೋದು"
ಮನೆಯಲ್ಲಿ ನನ್ನ ಈಗಿನ ಕಂಪನಿಯ CEO ಬಗ್ಗೆ ಮಾತಾಡ್ತಾ ಇದ್ರು. ಈತ ಮಾಡೋದೂ ಹೀಗೇ. Starent Networks ಇವನ ಐದನೇ ಕಂಪನಿಯಂತೆ! ಒಟ್ನಲ್ಲಿ ಈ ಕಂಪನಿಯನ್ನ ಟೆಲಿಕಾಮ್ ದಿಗ್ಗಜ cisco ತಗೊಂಡ್ ಬಿಟ್ಟಿದೆ. ಈಗ ನಮ್ಮ ಪರಿಸ್ಥಿತಿ ಹಾಗೆ ನೋಡಿದ್ರೆ ಏನೂ ಚಿಂತಾಜನಕ ಪರಿಸ್ಥಿತಿ ಏನೂ ಅಲ್ಲ. ಎಲ್ಲರಿಗೂ ಕೆಲಸ ಇರುತ್ತೆ ಅಂತೆಲ್ಲ ಭಾಷಣ ಮಾಡಿ ಆಗಿದೆ. ಆದರೂ ಮನಸ್ಸಿನಲ್ಲಿ ತನ್ನಿಂತಾನೇ ಹುಟ್ಟಿಕೊಂಡ್ಬಿಡೋ ಈ ಅಸುರಕ್ಷಿತ ಭಾವನೆ ಯಾರು ಹೇಗೆ ತಡೆಯೋಕೆ ಪ್ರಯತ್ನ ಪಟ್ರೂ ತಡೆಯೋದು ಸಾಧ್ಯ ಇಲ್ಲ ಅನ್ಸತ್ತೆ. ಏನೇ ಹೇಳಿ, ಯಾರೇ ಸಮಾಧಾನ ಮಾಡಿದ್ರೂ, ಸಮಾಧಾನಾನೇ ಮಾಡ್ಕೋಬಾರ್ದು ಅಂತಿರೋರಿಗೆ ಹೇಗೆ ಸಮಾಧಾನ ಆಗ್ಬೇಕು!

ಈ ಸಂದರ್ಭದಲ್ಲಿ "ಬೊಂಬೆಯಾಟವಯ್ಯಾ" ರೀಮಿಕ್ಸ್ ನಿಮ್ಮೆಲ್ಲರಿಗಾಗಿ.

ಬೊಂಬೆಯಾಟವಯ್ಯಾ... ಇದು ಬೊಂಬೆಯಾಟವಯ್ಯಾ
ಅವನೋ ಪರಾರಿ ನೋಡೋ ಮುರಾರಿ ಕೆಲಸವನುಳಿಸಯ್ಯಾ

ಯೇನು ಕಾರಣ ಯಾವ ತೊಂದರೆ ಏಕೆ ಮಾರಿದನೊ ನಾ ಅರಿಯೆ
ಯಾರ ಟೀಮಿಗೆ ಯಾವ ಕೆಲಸಕೆ ಎಲ್ಲಿ ನೂಕುವರೊ ನಾ ಅರಿಯೆ
ಕುಣಿಸಿದಂತೆ ಕುಣಿವೆ ಒದ್ದೋಡಿಸಿದರೋಡುವೆ
ಈ ಕಂಪನಿ ಆ ಕಂಪನಿ ಜಿಗಿದು ಜಿಗಿದು ದಣಿವೆ

3G ಹೋದರೂ 4G ಬಂದರೂ ಬದಲಾದುದೇನು ನಾ ತಿಳಿಯೆ
ಯಾವ ತಂತ್ರಕು ಯಾವ ಮಂತ್ರಕು ನನ್ನ ಕೊಡುಗೆಯೇನು ನಾ ತಿಳಿಯೆ
ಕಾಪಿ ಪೇಸ್ಟ್ ಮಾಡುವೆ ನಾನೆ ಬರೆದೆ ಎನುವೆ
ಅಕಾಶವೆ ಮೇಲ್ಬೀಳಲಿ ಸಂಬಳಕ್ಕಾಗಿಯೇ ದುಡಿವೆ