Wednesday, November 14, 2012

ಪುರುಸೊತ್ತಿಲ್ಲಾ ಯಾಕೆ?

ಅರ್ಧ ವರ್ಷದಿಂದ ಯಾವುದೇ ಬ್ಲಾಗ್ ಅಪ್‌ಡೇಟ್ಸ್ ಇಲ್ಲ. ಒಂದು ಕಾಲದಲ್ಲಿ ನಾನೂ ಬ್ಲಾಗ್ ಬರೆಯುತ್ತಿದ್ದೆ ಎನ್ನುವುದೇ ಮರೆತುಹೋದಂತಾಗಿದೆ! ಕಾಲೇಜ್ ಫ್ರೆಂಡ್ಸ್‌ಗಳನ್ನು ಭೇಟಿ ಮಾಡಿ ವರ್ಷಗಟ್ಟಲೆ ಆಗಿಹೋಗಿದೆ. ಹಳೆಯ ಕಲೀಗ್‌ಗಳನ್ನು ಫೇಸ್‌ಬುಕ್‌ನಲ್ಲಿ ನೋಡಿಯೇ ಖುಷಿಪಡಬೇಕಿದೆ! ಕಥೆ ಕಾದಂಬರಿಗಳನ್ನು ಓದುವುದು ಮರೆತೇ ಹೋಗಿದೆ. ಅವೆಲ್ಲಾ ಮುಂದಿನ ಮಾತು... ಬೆಳಿಗ್ಗೆ ಎದ್ದು ಪೇಪರ್ ತಿರುಗಿಸಲೂ ಟೈಮ್ ಇಲ್ಲಾ! ಒಟ್ಟಿನಲ್ಲಿ ಯಾವುದಕ್ಕೂ ಪುರುಸೊತ್ತಿಲ್ಲ! ಹೀಗೆಲ್ಲಾ ಏಕೆ ಆಗುತ್ತಿದೆ? ನಿಜವಾಗಿಯೂ ಜೀವನದಲ್ಲಿ ಅಷ್ಟೊಂದು ಬ್ಯುಸಿ ಆಗಿಬಿಟ್ಟಿದ್ದೇನೆಯೇ? ಗೊತ್ತಿಲ್ಲ...

ಬ್ಯುಸಿ ಆಗಿಬಿಟ್ಟಿದ್ದೇನೆ ಎನ್ನುವುದು ಕೆಲವು ಸಲ ನಿಜ ಎಂದು ಕಂಡರೂ ಬಹಳಷ್ಟು ಸಲ ನಮ್ಮ ಆಲಸ್ಯವನ್ನು ಮರೆಮಾಚುವ ನೆಪಮಾತ್ರ ಎನಿಸುತ್ತದೆ. ಫೋನ್ ಮಾಡಿ ಹೇಗಿದ್ದೀಯಾ ಗುರು... ಅರಾಮಾ? ಎಂದು ಕೇಳಲಿಕ್ಕೂ ಪುರುಸೊತ್ತಿಲ್ಲದಷ್ಟು ಬ್ಯುಸಿ ಬಹುಷಃ ನಮ್ಮ ಮನ್‌ಮೋಹನ್ ಸಿಂಗರೂ ಇರಲಿಕ್ಕಿಲ್ಲ. ಅವರಿಗೆ ಬಹುಷಃ ಕೆಲಸವೇ ಇಲ್ಲವೇನೊ.. ಅದು ಬೇರೇ ವಿಷಯ. ಆದರೂ ನಾವು ಬ್ಯುಸಿ. ಒಂದು ವಸ್ತುವನ್ನು ಕಳೆದುಕೊಳ್ಳಲು ನಾವು ಏನೂ ಮಾಡಬೇಕಾಗಿಲ್ಲ. ಅದೇ ಅದನ್ನ ಪಡೆದುಕೊಳ್ಳಲು ಹೆಣಗಬೇಕಾಗುತ್ತದೆ. ಅದನ್ನು ಉಳಿಸಿಕೊಳ್ಳಲು ಅದಕ್ಕೂ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಈ ಸಂಬಂಧಗಳೂ ಹಾಗೆ. ಹೈಸ್ಕೂಲು, ಕಾಲೇಜುಗಳಲ್ಲಿ ಚಡ್ಡಿ ದೋಸ್ತ್ ಗಳಾಗಿದ್ದವರು, ಇವತ್ತು ಇಲ್ಲೇ ಬೆಂಗಳೂರಿನಲ್ಲೇ ಇದ್ದಾರೆ ಎಂದರೂ, ಅವರ ಫೋನ್ ನಂಬರ್ ಸಿಕ್ಕಿದ್ದರೂ ಯಾಕೋ ಮಾತನಾಡಲಾಗದಷ್ಟು ಬ್ಯುಸಿ ನಾವು!

ಮನುಷ್ಯ ಬೆಳೆದು ದೊಡ್ಡವನಾದಂತೆಲ್ಲಾ ಸಾಮಾಜಿಕವಾಗಿ ಅವನ ವಲಯ ಹೆಚ್ಚಾಗುತ್ತಾ ಹೋದರೂ ಆಂತರಿಕವಾಗಿ ಅವನು ಸಂಕುಚಿತಗೊಳ್ಳುತ್ತಾ ಹೋಗುತ್ತಾನೆ! ಚಿಕ್ಕವರಾಗಿದ್ದಾಗ ಮನೆಯವರಿಗಿಂತ ಹೆಚ್ಚಾಗಿದ್ದ ಗೆಳೆಯರು ದೊಡ್ಡವರಾಗುತ್ತಾ ಗೆಳೆಯರಷ್ಟೇ ಆಗಿ ಉಳಿಯುತ್ತಾರೆ. ಮತ್ತೊಂದು ದಿನ ಹಾಯ್ ಬಾಯ್ ಫ್ರೆಂಡ್ಸ್ ಆಗುತ್ತಾರೆ. ಒಂದು ದಿನ ’ನನ್ನ ಹೊಸಾ ನಂಬರ್’ ಎಂದು ಮೆಸೇಜ್ ಬಂದರೂ ಅದನ್ನು ಫೋನ್ ಬುಕ್‌ನಲ್ಲಿ ಅಪ್‌ಡೇಟ್ ಮಾಡಲು ನಮಗೆ ಪುರುಸೊತ್ತಿಲ್ಲದಷ್ಟು ದೂರಾಗುತ್ತಾರೆ.  ದೂರಾಗುತ್ತಲೇ ಹೋಗುತ್ತಾರೆ! ತಾನು ತನ್ನ ಮನೆ, ತನ್ನ ಹೆಂಡತಿ ಮಕ್ಕಳು, ಸಂಬಂಧಿಕರು ಹಾಗು ಕೆಲವೇ ಕೆಲವು ಸ್ನೇಹಿತರೊಂದಿಗೆ ತನ್ನ ವ್ಯವಹಾರಗಳನ್ನು ಮೊಟಕುಗೊಳಿಸಿಬಿಡುತ್ತಾನೆ! ಇದರಲ್ಲಿ ತಪ್ಪು ಹುಡುಕಬೇಕೋ, ಅಥವಾ ಮನುಷ್ಯನ ಸ್ವಭಾವವೇ ಹೀಗೋ, ಅಥವಾ ಇದೇ ಸರಿಯೋ ಅರ್ಥವಾಗುತ್ತಿಲ್ಲ.

ಇತ್ತೀಚೆಗೆ ಹೊಸದೊಂದನ್ನ ನನ್ನ ದಿನಚರ್ಯೆಗೆ   ಕೂಡಿಸಿದ್ದೇನೆ. ಮಾರ್ನಿಂಗ್ ವಾಕ್!!! ಬೆಳಿಗ್ಗೆ ಎದ್ದು ವಾಕಿಂಗ್ ಮಾಡಬೇಕು ಎಂದುಕೊಂಡಿದ್ದು ಹೊಸತೇನಲ್ಲ. ಪ್ರಾರಂಭಿಸಿದ್ದೂ ಹೊಸತಲ್ಲ. ಆದರೆ ಎರಡು ತಿಂಗಳಾದರೂ ಅದನ್ನ ಬಿಡದಿರುವುದು ಹೊಸತು. ಬಹಳ ಹೇಳಿಕೊಂಡರೆ ನಾಳೆಯೇ ಬಿಟ್ಟುಬಿಟ್ಟರೆ ಕಷ್ಟ! ಈಗ ಜೊತೆಗೆ ಗೆಳೆಯನಿರುವುದರಿಂದ ಬೆಳಿಗ್ಗೆ ಒಂದಿಷ್ಟು ಬ್ಯಾಡ್ಮಿಂಟನ್ ಆಡಿ ಆಮೇಲೆ ಸ್ವಲ್ಪ ಸಮಯ ವಾಕ್ ಮಾಡಲು ಒಂದು ರೀತಿಯ ಹುಮ್ಮಸ್ಸಿದೆ. ಹಾಗೆ ಮಾಡುತ್ತಿರುವಾಗ ಅಕ್ಕಪಕ್ಕದಲ್ಲಿ ಬರೀ ಮುದುಕರು, ಇಲ್ಲಾ  ಪಾರ್ಕಿನ ನೆಲಕ್ಕೆ ಹಾಕಿದ ಸಿಮೆಂಟುಕಲ್ಲುಗಳನ್ನು ಭದ್ರವಾಗಿ ನೆಲಕ್ಕೇ ಕೂರಿಸುವಂತಹ ಭರ್ಜರಿ ಕಾಯದವರು. ವಯಸ್ಸಾದವರು ಒಬ್ಬೊಬ್ಬರೇ ಬಂದು ವಾಕ್ ಮಾಡುವವರು ಕಮ್ಮಿ. ಒಬ್ಬರೇ ಬಂದರೂ ಇಲ್ಲಿ ಪರಿಚಯದವರ ಜೊತೆ ಎರಡು ಸುತ್ತು ಸುತ್ತಿ, ಗಂಟೆಗಟ್ಟಲೆ ಹರಟುತ್ತಾ ಕೂರುತ್ತಾರೆ! ಈ ವಯಸ್ಸಿನಲ್ಲಿ ಇವರುಗಳಿಗೆ ಹೇಗೆ ಜೊತೆಗಾರರು ಸಿಗುತ್ತಾರೆ ಎಂದು ನನಗೆ ಆಶ್ಚರ್ಯ!

ಯಾವಾಗಲೂ ಸಂಪರ್ಕದಲ್ಲಿರಲು ಬಹುಷಃ ಇಬ್ಬರಲ್ಲಿ ಒಂದೇ ವಿಷಯದ ಬಗ್ಗೆ ಆಸಕ್ತಿ ಇರಲೇಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ ಅಥವಾ ಸಂಶೋಧನೆ! ನನಗೆ ಗೊತ್ತಿಲ್ಲದಿದ್ದುದು ಹೊಳೆದಾಗ ಬೇರೆಯವರಿಗೆ ಅದು ಹೊಸತೋ ಅಲ್ಲವೋ ನನಗೆ ಸಂಬಂಧವಿಲ್ಲ. ನನ್ನ ಮಟ್ಟಿಗಂತೂ ಅದು ಹೊಸ ಸಂಶೋಧನೆಯೇ. ಇಬ್ಬರ ನಡುವೆ ಯಾವುದೇ ಸಂಗತಿಗಳು ಕಾಮನ್ ಇಲ್ಲದಿದ್ದರೆ ಅವರಿಬ್ಬರು ಹೇಗೆ ಸಂಪರ್ಕದಲ್ಲಿರಲು ಸಾಧ್ಯ? ಹಾಗೆ ಇರುವುದು ಗಂಡ ಹೆಂಡತಿ ಅಷ್ಟೇ. ಈಗೀಗ ಅದೂ ಕಡಿಮೆಯಾಗುತ್ತಿದೆ. ಈ ಪಾರ್ಕಿನಲ್ಲಿ ಕೂತು ಹರಟುವ ಮುದುಕ ಮುದುಕಿಯರೆಲ್ಲರಿಗೂ ಒಂದೇ ಕಾಮನ್ ಇಂಟರೆಸ್ಟ್! ಆ ಮನೆ ಈ ಮನೆ ವಿಚಾರ. ಗಂಡಸರದ್ದು ಅಲ್ಲಿ ಇಲ್ಲಿ ಕೆಲಸಕಾರ್ಯಗಳ ಬಗ್ಗೆ, ದೇಶದ ದುಸ್ಥಿತಿಯ ಬಗ್ಗೆ, ಮಕ್ಕಳ ಜೀವನದ ಬಗ್ಗೆ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾತುಕತೆಗಳಾದರೆ, ಹೆಂಗಸರದ್ದು ಅವರ ಮನೆಯಲ್ಲಿ ನೆಡೆದ ಫಂಕ್ಷನ್ನು, ಅಲ್ಲಿ ಅವರು ಉಟ್ಟಿದ್ದ ಸೀರೆ, ಒಡವೆ... ಇವರ ಮನೆಯಲ್ಲಿ ಸೊಸೆಯ ಕಾಟ... ಅಡಿಗೆ ವಿಷಯಗಳು, ಅಂತೆ ಕಂತೆಗಳು ಇತ್ಯಾದಿ ಇತ್ಯಾದಿ.

ನಿಂತ ನೀರು ಕೆಡುವುದು ಬೇಗ. ಬತ್ತಿ ಹೋಗುವುದೂ ಬೇಗ. ಜೀವನ ಹರಿಯುವ ನೀರಾದರೆ ಸ್ವಲ್ಪ ವಾಸಿ. ಹೀಗೇ ಸಾಗಬೇಕು ಅಂದುಕೊಂಡರೂ ಸಾಗುವುದು ಮಾತ್ರ ಇಳಿಜಾರಿನಲ್ಲೇ. ಸಾಗುತ್ತಲಿದ್ದರಾಯಿತು... ಬತ್ತಿಹೋಗುವವರೆಗೆ ಅಥವಾ ಸಾಗರ ಸೇರುವವರೆಗೆ!