Tuesday, October 6, 2009

ಲಂಚಾಸುರನನು ನೋಡಲ್ಲಿ...


ರಾಷ್ಟ್ರಕವಿ ಕುವೆಂಪುರವರ ಕ್ಷಮೆ ಕೋರಿ, ಅವರ "ಉಳುವಾ ಯೋಗಿಯ ನೋಡಲ್ಲಿ" ಗೀತೆಯ ರೀಮಿಕ್ಸ್ ಮಾಡಿದ್ದೇನೆ. ಈಗ ಉಳುವಾ ಯೋಗಿಗಳು ಬಹಳ ಅಪರೂಪ ಆಗ್ಬಿಟ್ಟಿದಾರೆ ಬಿಡಿ. ಒಂದೇ ದುಡ್ಡಿನ ಆಸೆಗೋಸ್ಕರ ಭೂಮಿಯನ್ನ ಮಾರಿಬಿಡ್ತಾರೆ! ಇಲ್ಲಾ ಅಂದ್ರೆ ಆಲಸ್ಯ ಬಂದು ದುಡಿಯದೆ ಭೂಮಿಯನ್ನು ಬಂಜರು ಮಾಡ್ಬಿಡ್ತಾರೆ. ಇನ್ನು ನಿಜವಾಗ್ಲೂ ಬೆಳೆ ಬೆಳೀಬೇಕು ಅನ್ನೋರಿಗೆ ಸಾವಿರಾರು ತೊಂದರೆಗಳು. ನೀರಿಲ್ಲ... ಮಳೆ ಸರಿಯಾಗಿ ಬರುವುದಿಲ್ಲ. ಬಂದರೆ ಎಲ್ಲವನ್ನೂ ಮುಳುಗಿಸಿಬಿಡುವಂಥಾ ಪ್ರಳಯ! ಎಲ್ಲಾ ಇದ್ದರೂ ಆರ್ಥಿಕ ತೊಂದರೆ, ಗೊಬ್ಬರ ಇಲ್ಲ. ಒಟ್ಟಿನಲ್ಲಿ ರೈತರೇ ಕಮ್ಮಿ ಆಗ್ತಿರೋ ಈ ಕಾಲದಲ್ಲಿ ಒಬ್ಬರ ಸಂಖ್ಯೆ ಮಾತ್ರ ದಿನೇ ದಿನೇ ಏರುತ್ತಾ ಇದೆ. ಅವರೇ ಲಂಚಾಸುರರು. ನಾನು ಬರೀ ಸರ್ಕಾರೀ ಕ್ಷೇತ್ರವೊಂದನ್ನೇ ಉದ್ದೇಶಿಸಿ ಹೇಳುತ್ತಾ ಇಲ್ಲ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ತಾವು ಮಾಡುತ್ತಾ ಇರುವ ಕರ್ತವ್ಯಕ್ಕೇ ಸಂಬಳಕ್ಕಿಂತ ಹೆಚ್ಚು ಆಸೆ ಪಡುತ್ತಿರುವವರ ಸಂಖ್ಯೆಯೇ ಜಾಸ್ತಿ. ಮನುಕುಲದ ದುರಾಸೆಯೆಂಬ ಆಸುರೀ ಪ್ರವೃತ್ತಿಗೆ ಬಹುಷಃ ಕಡಿವಾಣವಿಲ್ಲ.


ವಂಚಿಸಿ ದುಡಿದಾ ಹಣದೊಳು ಮುಳುಗಿದ ಲಂಚಾಸುರನನು ನೋಡಲ್ಲಿ
ಲಂಚವ ತಿನ್ನದೆ ಸೇವೆಯ ಮಾಡುವ ಮನುಜರು ಜಗದೊಳು ದುರ್ಲಭವೋ
ಪರರಾ ಕಷ್ಟಕೆ ಗಮನವ ಕೊಡದೆಲೆ ಸ್ವಾರ್ಥವೆ ಜೀವನ ಸಾಧನೆಯೋ
ಲಂಚಾಸುರನನು ನೋಡಲ್ಲಿ ಲಂಚಾಸುರನನು ನೋಡಲ್ಲಿ

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ಕಾಂಗ್ರೆಸ್ ಇರಲಿ ಬಿಜೇಪಿ ಬರಲಿ ನಡೆಯಲಿ ಗೌಡರ ಗದ್ದಲವೋ
ಮುತ್ತಿಗೆ ಹಾಕಲಿ ಲೋಕಾಯುಕ್ತ ಲಂಚವ ಪಡೆವುದ ಬಿಡುವುದೆ ಇಲ್ಲ

ಯಾರಿಗು ಹೇಳದೆ ಮೂರಂತಸ್ಥಿನ ಮನೆಯನು ಕಟ್ಟಿಸಿ ಸುಖಿಸುವನೊ
ಮಡದಿ ಮಕ್ಕಳ ಸುಖವಾಗಿರಿಸಲು ಪರರಿಗೆ ಕಷ್ಟವ ನೀಡುವನೊ
ಇವನಿಗೆ ದಾಹವೆ ಪ್ರಕೃತಿಯ ಧರ್ಮ ದಾಹವ ನೀಗುವುದೆಲ್ಲರ ಕರ್ಮ