Saturday, June 28, 2008

ಅಂತ್ಯಾಕ್ಷರಿ ತಂದ ಅವಾಂತರ

ನೇತಾಜಿ ಬಾಯ್ಸ್ ಹಾಸ್ಟೆಲ್‌ನಲ್ಲಿ ರೂಮ್ ನಂ 61 ಮತ್ತು 62 ತರಲೆಗಳ ರೂಮು ಎಂದೇ ಪ್ರಸಿದ್ಧ. ಹಾಸ್ಟೆಲ್ಲಿನಲ್ಲಿ ಯಾವುದೇ ಕಿತಾಪತಿ ನೆಡೆದರೂ ಈ ಎರಡು ರೂಮುಗಳಿಂದ ಒಬ್ಬವನಾದರೂ ರಿಪ್ರೆಸೆಂಟೇಟಿವ್ ಅಲ್ಲಿ ಹಾಜರಿರುತ್ತಿದ್ದ. ಹಾಗೆ ನೋಡಿದರೆ ಇಲ್ಲಿದ್ದವರೆಲ್ಲಾ ಸಂಭಾವಿತರೇ. ಆದರೆ ಎಲ್ಲರಲ್ಲೂ ಕುತೂಹಲ ಜಾಸ್ತಿ. ಆದರೆ ಸಿಕ್ಕಿಕೊಳ್ಳದೆ ಜಾರಿಕೊಂಡುಬರುವ ಚಾಕಚಕ್ಯತೆ ಮಾತ್ರ ಯಾರ ಹತ್ತಿರವೂ ಇರಲಿಲ್ಲವೇನೊ. 61ರಲ್ಲಿ ಇಬ್ಬರು ಗೋಕಾಕ್‌ನವರು ಒಬ್ಬ ಹುಬ್ಬಳ್ಳಿಯವ ಮತ್ತು ಇನ್ನೊಬ್ಬ ಗದಗಿನವ. 62ರಲ್ಲಿ ಇಬ್ಬರು ಹುಬ್ಬಳ್ಳಿಯವರು ಒಬ್ಬ ಗೋಕಾಕಿನವ ಮತ್ತೊಬ್ಬ ನಾನು. ಎಲ್ಲರೂ ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡುಬಿಟ್ಟಿದ್ದೆವು. ಏನೇ ಘಟನೆ ನೆಡೆಯಲಿ ಎಲ್ಲರಿಗೂ ಹೇಳಲೇಬೇಕು. ಏನೇ ಸಮಸ್ಯೆ ಬರಲಿ ಎಲ್ಲರೂ ಕೂಡಿ ಬಗೆಹರಿಸಬೇಕು. ಯಾರೇ ಹೊಸಾ ಫಿಗರ್ ಕಾಣಲಿ ಎಲ್ಲರೂ ಕೂಡಿ ಮಾರ್ಕ್ಸ್ ಹಾಕಬೇಕು. ಎಲ್ಲದಕ್ಕೂ ಮಿಗಿಲಾಗಿ ಯಾರೇ ಮನೆಯಿಂದ ಏನೇ ತಿಂಡಿ ತಂದರೂ ಎಲ್ಲರು ಕೂಡಿಯೇ ಖಾಲಿಮಾಡಬೇಕು. ಚುರುಮುರಿ, ಚಕ್ಕುಲಿ, ಕೋಡ್‌ಬಳೆ, ಕರ್ಜಿಕಾಯಿ, ನಾಲ್ಕೈದು ರೀತಿಯ ಉಂಡೆ, ಶೇಂಗಾ ಹೋಳಿಗೆ, ಕರದಂಟು... ತರುತ್ತಿದ್ದ ತಿನಿಸುಗಳಿಗೆ ಲೆಕ್ಕವೇ ಇರಲಿಲ್ಲ.

ಎಲ್ಲರೂ ಒಟ್ಟಿಗೆ ತಿಂಡಿತಿನ್ನುವುದು ಒಂದು ಸಂಪ್ರದಾಯವೇ ಆಗಿಹೋಗಿತ್ತು. ಆದರೆ ಯಾರಾದರೊಬ್ಬ ಬುತ್ತಿಯನ್ನು ತೆರೆದರೆ ಎಲ್ಲರನ್ನೂ ಹೋಗಿ ಕರೆದು ಬರುವ ವ್ಯವಧಾನ ಯಾರಿಗಿರುತ್ತಿತ್ತು? ಇದಕ್ಕಾಗಿ ಒಂದು ವ್ಯವಸ್ಥೆಯನ್ನು ಮಾಡಿಕೊಂಡುಬಿಟ್ಟಿದ್ದೆವು. ಒಂದು ರೂಮಿನಲ್ಲಿ ಬುತ್ತಿ ಓಪನ್ ಆದರೆ ಪಕ್ಕದ ರೂಮಿನವರನ್ನು ಕರೆಯಬೇಕಾದರೆ ಮೂರು ಸಲ ಜೋರಾಗಿ ಗೋಡೆ ಗುದ್ದುವುದು. ರೂಮ್ ನಂ 61 ಮತ್ತು 62ರ ನಡುವೆ ಇದ್ದಿದ್ದು ಒಂದೇ ಗೋಡೆ. ಅದನ್ನೇ ಮೂರುಸಲ ಗುದ್ದಿಬಿಟ್ಟರಾಯಿತು. ಪಕ್ಕದ ರೂಮಿನವರಿಗೆ ಸಿಗ್ನಲ್ ಹೋದಂತೆ. ಇನ್ನು ಬರುವುದು ಬಿಡುವುದು ಅವರ ಕರ್ಮ. ಕೆಲವುಸಲವಂತೂ ಎಲ್ಲೋ ತಿರುಗಾಡಲು ಹೋಗಿದ್ದವರು ವಾಪಸ್ ಬರುವಷ್ಟರಲ್ಲಿ ತಾವೇ ಮನೆಯಿಂದ ತಂದ ತಿಂಡಿ ಖಾಲಿಯಾಗಿಬಿಟ್ಟಿರುತ್ತಿತ್ತು. ಅಕ್ಕ ಪಕ್ಕ ಯಾರನ್ನು ನೋಡಿದರೂ ಈ ಘಟನೆಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಸನ್ಯಾಸಿ ಬೆಕ್ಕಣ್ಣಗಳಂತೆ ಪುಸ್ತಕ ಹಿಡಿದು ಕುಳಿತುಬಿಟ್ಟಿರುತ್ತಿದ್ದರು. ಕೆಲವುಸಲವಂತೂ ತಾವೇ ತಂದ ತಿನಿಸುಗಳು ಖಾಲಿಯಾದದ್ದು ತಿಳಿದುಬರುವುದು ಮತ್ತೊಮ್ಮೆ ತಾವೇ ಬುತ್ತಿ ಬಿಚ್ಚಿದಾಗ ಮಾತ್ರ. ಇದಕ್ಕೋಸ್ಕರ ಯಾರೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಬದಲಾಗಿ ಸೇಡುತೀರಿಸಿಕೊಳ್ಳುವುದಕ್ಕಾಗಿ ಸಮಯಕಾಯುತ್ತಿದ್ದರು.


ಒಂದು ಸಂಜೆ ವಿದ್ಯಾಗಿರಿ ಪೂರ್ತಿ ಕರೆಂಟ್ ಹೋಗಿಬಿಟ್ಟಿತ್ತು. ನಮ್ಮ ಹಾಸ್ಟೆಲ್ ಜನರೇಟರ್ ಉರಿದು ಉರಿದು ಸುಸ್ತಾಗಿ ಮಲಗಿಬಿಟ್ಟಿತ್ತು. ಹಾಸ್ಟೆಲ್ ಪೂರ್ತಿ ಕತ್ತಲಿನ ತೆಕ್ಕೆಗೆ
ಜಾರುತ್ತಿತ್ತು. ನಾನು ಮತ್ತು ನನ್ನ ರೂಮ್‌ಮೇಟ್ಸ್ ಹರಟೆ ಕೊಚ್ಚಲು 61ಗೆ ಹೋಗಿದ್ದೆವು. ಸಿಕ್ಕಾಪಟ್ಟೆ ಸೆಕೆ, ಅದರಲ್ಲೂ ಕರೆಂಟಿಲ್ಲ. ಅದಕ್ಕಾಗಿ ರೂಮಿನ ಬಾಗಿಲನ್ನು ಪೂರ್ತಿ ತೆರೆದಿಟ್ಟುಬಿಟ್ಟಿದ್ದೆವು. ನನ್ನ ರೂಮ್‌ಮೇಟ್‌ಗಳಲ್ಲಿ ಸಂತ್ಯಾ ಒಬ್ಬನೇ ಅಲ್ಲೇ ಕೂತು ಕತ್ತಲಲ್ಲಿ ಎನೋ ಓದಲು ಪ್ರಯತ್ನಿಸುತ್ತಿದ್ದ. ಮೊದಲೇ ಓದುವುದು ಅಂದರೆ ಆಗದ ನಮಗೆ ಪರಿಸ್ಥಿತಿಯೂ ಜೊತೆಗೂಡಿದರೆ ಕೇಳಬೇಕೆ? ನಾವು ಇಂಜಿನಿಯರಿಂಗ್ ಮಾಡುತ್ತಿದ್ದೇವೆ ಎನ್ನುವುದನ್ನೇ ಮರೆತುಬಿಡುತ್ತಿದ್ದೆವು. ಸೂರ್ಯ ಮುಳುಗಿ ಪೂರ್ತಿ ಕತ್ತಲಾದಮೇಲೆ ನಮ್ಮವರಲ್ಲೇ ಒಬ್ಬ "ಲೇ... ಸುಮ್ನ ಟೈಮ್ ವೇಸ್ಟ್ ಮಾಡುದು ಬ್ಯಾಡಾ. ಹ್ಯಾಂಗೂ ಇವತ್ತು ರಾತ್ರಿ ಕರೆಂಟು ಬರಾಂಗಿಲ್ಲ. ಎಲ್ಲರೂ ಇಲ್ಲೇ ಕುಂತ್ ಅಂತ್ಯಾಕ್ಷರಿ ಆಡೂಣು." ಎಂದ. "ಮೊದ್ಲು ಹೊಟ್ಟಿ ವಿಚಾರ ಮಾಡ್‌ಪಾ ದೋಸ್ತಾ..." ಎಂದು ಇನ್ನೊಬ್ಬ ಊಟದ ಸಮಯವಾದುದನ್ನು ಎಚ್ಚರಿಸಿದ.

ಅವತ್ತಿನ ಊಟ ಫುಲ್ ರೊಮ್ಯಾಂಟಿಕ್ ಕ್ಯಾಂಡಲ್ ಲೈಟ್ ಡಿನ್ನರ್. ಊಟಕ್ಕೆ ಹೋದಾಗ ನಮ್ಮ ಪ್ಲಾನನ್ನು ಇನ್ನೂ ನಾಲ್ಕು ಜನರಿಗೆ ಹೇಳಿ ನಮ್ಮ ಸಂಖ್ಯೆ ಹೆಚ್ಚಿಸಿಕೊಂಡೆವು. ಶುರುವಾಯಿತು ಕತ್ತಲಿನಲ್ಲಿ ಅಂತ್ಯಾಕ್ಷರಿ. ಯಾರಿಗೂ ಯಾರ ಮುಖವೂ ಕಾಣುತ್ತಿಲ್ಲ. ಪೂರ್ತಿ ಕತ್ತಲು. ರೂಮಿನಲ್ಲಿದ್ದ ಒಟ್ಟೂ ನಾಲ್ಕು ಮಂಚಗಳ ಮೇಲೆ ಹದಿನೈದಿಪ್ಪತ್ತು ಜನ ಕುಳಿತೆವು. ಯಾರ್ಯಾರು ಎಲ್ಲೆಲ್ಲಿ ಕುಳಿತಿದ್ದರೋ ಒಬ್ಬರಿಗೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಎರಡು ಮಂಚದ ಜನ ಓಂದುಕಡೆ ಇನ್ನುಳಿದವರು ಇನ್ನೊಂದುಕಡೆ ಎಂದು ನಿರ್ಧರಿಸಿಯಾಗಿತ್ತು. ಹಾಡುಗಳೇನೋ ಪ್ರಾರಂಭವಾದವು. ಆದರೆ ಅದನ್ನು ಹಾಡುತ್ತಿರುವವರು ಯಾವ ಪಕ್ಷದವರು ಎಂದೇ ತಿಳಿಯುತ್ತಿರಲಿಲ್ಲ. ಒಂದುಕಡೆಯಿಂದ ಶಬ್ದ ಶುರುವಾಗುತ್ತಿತ್ತು. ಅದಕ್ಕೆ ಎಲ್ಲರೂ ಧ್ವನಿಗೂಡಿಸುತ್ತಿದ್ದರು. ಯಾವ ತಂಡದವನೇ ಹಾಡಲಿ ಎಲ್ಲರೂ ಒಟ್ಟಾಗಿ ಘಟ್ಟಿಧ್ವನಿಯಲ್ಲಿ ಒದರಲು ಶುರುಮಾಡಿಬಿಟ್ಟರು. ಈ ಒದರಾಟ ಹಾಸ್ಟೆಲ್ ಪೂರ್ತಿ ಕೇಳಿ ಅಕ್ಕಪಕ್ಕದ ರೂಮಿನವರು ಪಕ್ಕದ ವಿಂಗಿನವರು ಎಲ್ಲರೂ ಬಂದು ಸೇರಿಬಿಟ್ಟಿದ್ದರು. ಎಷ್ಟು ಜನಬಂದು ಸೇರುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಧ್ವನಿಗಳು ಬಹಳವಾಗುತ್ತಿದ್ದುದು ಮಾತ್ರ ಎಲ್ಲರ ಗಮನಕ್ಕೆ ಬರುತ್ತಲಿತ್ತು.

ಬರುಬರುತ್ತ ಕೇವಲ ಹಾಡಷ್ಟೇ ಅಲ್ಲದೆ ಯಾರೋ ಯಾರಿಗೋ ಹೊಡೆದು ಅವರು ಒದರಿಕೊಳ್ಳುವ ಶಬ್ದ. ಸಖಾಸುಮ್ಮನೆ ಚೀರಾಟಗಳು ಬೈಗುಳಗಳು ಎಲ್ಲವೂ ಶುರುವಾಗಿಬಿಟ್ಟವು. ಹೇಗೂ ಯಾರಿಗೂ ಮುಖ ಕಾಣುತ್ತಿಲ್ಲ. ಎಲ್ಲರೂ ತಮ್ಮ ಬಯ್ಯುವ ಚಟವನ್ನು ತೀರಿಸಿಕೊಳ್ಳಲು ಶುರುಮಾಡಿಬಿಟ್ಟರು. ಈಗ ಅವರ ಧ್ವನಿಯಲ್ಲದೆ ಬೇರೆಯವರ ರೀತಿ ಅಥವಾ ವಿಚಿತ್ರವಾದ ಸ್ವರದಲ್ಲಿ ಕೂಗತೊಡಗಿದರು. ಅಲ್ಲಿ ಏನು ನೆಡೆಯುತ್ತಿದೆ ಎಂದೇ ಯಾರಿಗೂ ಗೊತ್ತಾಗುತ್ತಿಲ್ಲ. ಇದು ಹೀಗೇ ಮುಂದುವರಿದರೆ ವಾರ್ಡನ್ ಬಂದೇ ಬರುತ್ತಾರೆ ಎಂದು ಊಹಿಸಿ ಒಬ್ಬೊಬ್ಬರೇ ಜಾಗ ಖಾಲಿಮಾಡಲು ನಿಶ್ಚಯಿಸಿದೆವು. ಅಷ್ಟರಲ್ಲಿ ಒಬ್ಬನ ಚೀರಾಟ ತಾರಕಕ್ಕೇರಿತು. ಎಲ್ಲರೂ ಸ್ವಲ್ಪ ಹೆದರಿದರೋ ಏನೊ... ರೂಮು ಸ್ವಲ್ಪ ಶಾಂತವಾಯಿತು. "ಥೂ ನನ್ ಮಕ್ಳಾ... ಹಿಂಗಾ ಒದ್ರೂದು... ಯಾರೋ ಹೊರ್ಗಿಂದ ಬಾಗ್ಲಾ ಹಾಕ್ ಹೋಗ್ಯಾರ... ಮೊದ್ಲು ಬಾಗ್ಲು ತೆಗಸ್ರಪ್ಪ... ಸೆಕಿ ತಡ್ಕೊಲಾಕಾಗ್ವಲ್ದು" ಎಂದಿತು ಯಾವುದೋ ಒಂದು ಧ್ವನಿ. ಹೋಗಿ ನೋಡಿದರೆ ನಿಜವಾಗಿಯೂ ಬಾಗಿಲು ಹಾಕಿತ್ತು. ಎಷ್ಟು ಜಗ್ಗಿದರೂ ಬರುತ್ತಿರಲಿಲ್ಲ. ಕತ್ತಲಲ್ಲಿ ಒಳಗಿಂದಲೇ ಬೋಲ್ಟ್ ಹಾಕಿಲ್ಲವಲ್ಲಾ ಎಂದೂ ಚೆಕ್ ಮಾಡಿ ಆಯಿತು. ಹೊರಗಡೆಯಿಂದ ಬಾಗಿಲು ಹಾಕಿರುವುದು ಕನ್‌ಫರ್ಮ್ ಆಯಿತು.

"ಯಾವ್ ಹಲ್ಕಟ್ ಸೂಳಾಮಗಾಲೇ ಅವ..." ಶುರುವಾಯಿತು ಸಂಸ್ಕೃತದ ಸುರಿಮಳೆ. ಆ ಮಗ. ಈ ಮಗ. ಎಲ್ಲರ ಕಿವಿ ಪಾವನವಾಗುವವರೆಗೆ ಹೊರಗಡೆಯಿಂದ ಚಿಲಕ ಹಾಕಿದವನಿಗೆ ಸಹಸ್ರನಾಮ ಪೂಜೆಯಾಯಿತು. "ಲೇ ಸುಮ್ನ ಬೈತಾ ಕುಂತ್ರ ಏನೂ ಆಗಾಂಗಿಲ್ಲ. ಈಗ ಬಾಗ್ಲು ಹ್ಯಾಂಗ್ ತೆಗ್ಯೂದು ಅಂತ್ ಯೋಚ್ನಿ ಮಾಡ್ರಿ" ಎಂದಿತು ಒಂದು ಬುದ್ಧಿವಂತ ಧ್ವನಿ. ಆಗ ನನ್ನ ರೂಂಮೇಟ್ ಒಂದು ಉಪಾಯ ಸೂಚಿಸಿದ. ನಮ್ಮ ರೂಮಿನಲ್ಲಿ ಸಂತ್ಯಾ ಓದುತ್ತ ಕುಳಿತಿದ್ದ. ಅವನಂತೂ ಇಲ್ಲಿ ಬಂದಿರಲಿಲ್ಲ. ಅವನನ್ನು ಕರೆಯುವುದು ಎಂದು. ಸರಿ... ನಮ್ಮ ಮಾಮೂಲಿ ಕೋಡ್‌ ಸಿಗ್ನಲ್ ಬಳಸಿದೆವು. ಗೋಡೆಯನ್ನು ಬಡಿಯತೊಡಗಿದರು. ಸಂತ್ಯಾ ಮಲಗಿದ್ದವ ಎದ್ದು ಓಡೋಡಿ ಬಂದ. ಹೊರಗಿನಿಂದಲೇ ಅವನ ಧ್ವನಿ ಕೇಳಿಸುತ್ತಿತ್ತು.
"ಲೇ... ಎಲ್ಲಾ ಖಾಲಿ ಮಾಡ್ಬೇಡ್ರಲೇ.. ಮಕ್ಳಾ ಬಾಗ್ಲಾ ಹಾಕ್ಕೊಂಡ್ ಕೂತೀರೀ... ತೆಗೀರಲೇ..."
ಅವನಿಗೆ ತಿಳಿಸಿ ಹೇಳಲಾಯಿತು. ಆದರೆ ಪರಿಸ್ಥಿತಿ ಅಷ್ಟು ಸರಳವಾಗಿರಲಿಲ್ಲ. ನಮ್ಮ ಚೀರಾಟ ಕೂಗಾಟಗಳನ್ನು ಕೇಳಿ ಹಾಸ್ಟೆಲ್ ಮ್ಯಾನೇಜರ್ ಬಂದು ನೋಡಿ, ಬಾಗಿಲನ್ನು ಹೊರಗಿನಿಂದ ಹಾಕಿ ಅದಕ್ಕೆ ದೊಡ್ಡದೊಂದು ಬೀಗವನ್ನು ಹಾಕಿ ಹೋಗಿದ್ದ. ಸಂತ್ಯಾನಿಗೆ ಒಳಗಿಂದಲೇ ಆರ್ಡರ್ ಹೋಗಿತ್ತು. ಹೇಗಾದರೂ ಮಾಡಿ ಅದನ್ನು ಮುರಿ ಎಂದು. ಅವನು ಅದಕ್ಕೇ ಜೋತುಬಿದ್ದರೂ ಅವನಿಂದ ಏನೂ ಮಾಡಲಾಗಲಿಲ್ಲ.

ಹತ್ತು ನಿಮಿಷದಲ್ಲಿ ಮ್ಯಾನೇಜರ್ ವರ್ಡನ್ ಜೊತೆ ಬಂದು ರೂಮಿನ ಬಾಗಿಲು ತೆಗೆದ. ಎಲ್ಲರಿಗೂ ಮಧ್ಯರಾತ್ರಿ ಮಂಗಳಾರತಿಯಾಯಿತು. ಮ್ಯಾನೇಜರ್ ತಂದಿದ್ದ ಒಂದು ಪೆನ್ ಟಾರ್ಚ್‌ನಿಂದ ಎಲ್ಲರ ಮುಖಕ್ಕೆ ಬೆಳಕು ಬಿಟ್ಟು ವಾರ್ಡನ್‌ಗೆ ಎಲ್ಲರನ್ನೂ ಪರಿಚಯಿಸಿದ. ಎಲ್ಲರೂ ಸೇರಿ ಒಂದು ಕ್ಷಮಾಪಣಾ ಪತ್ರ ಬರೆದುಕೊಡಬೇಕೆಂದು ವಾರ್ಡನ್ ಆಜ್ಞೆ ಹೊರಡಿಸಿ ಹೋದರು. ಒಂದು ಮೇಣದಬತ್ತಿ ಬೆಳಕಿನಲ್ಲಿ ಪತ್ರವೂ ತಯಾರಾಯಿತು. ಅದರ ಮೇಲೆ ಎಲ್ಲರೂ ಸಹಿಮಾಡಿಕೊಟ್ಟರು. ಆ ಪತ್ರವನ್ನು ತೆಗೆದುಕೊಂಡು ಮ್ಯಾನೇಜರ್ ಹೊರಟುಹೋದ. 61, 62ರೂಮುಗಳು ಮತ್ತೊಮ್ಮೆ ಪ್ರಸಿದ್ಧಿ ಪಡೆದಿದ್ದವು. ಆದರೆ ಆಗತಾನೇ ನಿದ್ದೆಗಣ್ಣಿನಿಂದ ಎದ್ದು ಬಂದಿದ್ದ ಸಂತ್ಯಾ ಮಾತ್ರ ಕೇಳುತ್ತಿದ್ದ... "ಇಷ್ಟೊಂದ್ ಮಂದಿ ಇಲ್ಯಾಕ್ ಬಂದ್ ಕಿರ್ಚಾಡಾಕತ್ತಿದ್ರಿ?". ನಾವು ಅಂತ್ಯಾಕ್ಷರಿ ಆಡುತ್ತಿದ್ದೆವು ಎಂದು ಯಾರಿಗೂ ಅನ್ನಿಸಿರಲೇ ಇಲ್ಲ.