Thursday, November 22, 2007

’ಅಮ್ಮ’ಳಲ್ಲಿಲ್ಲದ ವಿಶೇಷತೆ ’ಮಮ್ಮಿ’ಯಲ್ಲೇನಿದೆ?


ಭಾರತೀಯರು ಭಾವಜೀವಿಗಳು. ಭಾಷೆ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನ. ಕೇವಲ ಭಾಷೆಯಿಂದಷ್ಟೇ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದೇನಿಲ್ಲ. ಮುಖಭಾವದಿಂದ, ಹಾವಭಾವದಿಂದ, ಕಣ್ಣಿನಿಂದ ಮನುಷ್ಯನ ಭಾವನೆಗಳು ವ್ಯಕ್ತವಾಗುತ್ತಲೇ ಇರುತ್ತದೆ. ಭಾರತದ ಯಾವುದೇ ಭಾಷೆಯ ಯಾವುದೇ ಶಬ್ದವನ್ನು ತೆಗೆದುಕೊಳ್ಳಿ, ಅದರಿಂದ ಒಂದು ಭಾವ ಒಸರುತ್ತಿರುತ್ತದೆ. ಇದು ಕೇವಲ ರೂಢಿಯಲ್ಲ, ಮನೋಶಾಸ್ತ್ರ. ಮನುಷ್ಯ ಯಾವುದೇ ಶಬ್ದ ಹೊರಹೊಮ್ಮಿಸುವಾಗ ಅದರ ಹಿಂದೊಂದು ಪ್ರೇರಣೆಯಿರುತ್ತದೆ. ಒಂದು ಭಾವವಿರುತ್ತದೆ. ಆ ಶಬ್ದವನ್ನು ಉಚ್ಛರಿಸಿದಾಗ ಆ ಭಾವ ತನ್ನಿಂತಾನೆಯೇ ಪ್ರಕಟವಾಗಿಬಿಟ್ಟಿರುತ್ತದೆ. ಧ್ವನಿಯ ವಿಶೇಷ ಕಸರತ್ತಿಲ್ಲದೆ ಯಾವ ಭಾಷೆಯನ್ನು ಆಡಿದಾಗ ಭಾವನೆಗಳು ಸರಾಗವಾಗಿ ಹರಿದು ಬರುತ್ತದೆಯೋ ಆ ಭಾಷೆ ಪರಿಪೂರ್ಣವಾಗಿದೆಯೆಂದರ್ಥ. ನಾವೆಲ್ಲರೂ ಗರ್ವದಿಂದ ಹೇಳಿಕೊಳ್ಳಬೇಕಾದ ಒಂದು ಅಂಶವೆಂದರೆ ನಮ್ಮ ಕಸ್ತೂರಿ ಕನ್ನಡವೂ ಇಂತಹ ಭಾಷೆಗಳಲ್ಲೊಂದು.


ಭಾಷೆ ಹುಟ್ಟುವುದು ಒಂದೆರಡು ಪಂಡಿತರು ಕುಳಿತು ಮಾಡುವ ಚರ್ಚೆಯಿಂದಲೋ ಅಥವಾ ಯಾವುದಾದರೂ ಮನಶಾಸ್ತ್ರಜ್ಞನ ಥೀಸಿಸ್‍ನಿಂದಲೋ ಅಲ್ಲ. ಒಂದು ಜನಾಂಗ ಬೆಳೆದಂತೆ, ಒಂದು ನಾಗರೀಕತೆ ಬೆಳೆದಂತೆ ಭಾಷೆಯೂ ಹುಟ್ಟಿ ಬೆಳೆಯುತ್ತದೆ. ಆಯಾ ಸ್ಥಳಗಳ ಭಾಷೆ ಆಯಾ ಜನಜೀವನವನ್ನು ಪ್ರತಿಬಿಂಬಿಸುತ್ತದೆ. ಸಾವಿರಾರು ವರ್ಷಗಳಿಂದ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಈ ಭಾಷೆಯ ಶಬ್ದಗಳನ್ನು ನಿನ್ನೆ ಮೊನ್ನೆ ಬಂದಂತಹ ಪರಕೀಯರ ಭಾಷೆಯ ಶಬ್ದಗಳು ಅತಿಕ್ರಮಿಸುವುದು ಎಷ್ಟು ಸೂಕ್ತ? ಅಂತಹ ಶಬ್ದಗಳು ನಮಗೆ ಹೊಂದುತ್ತವೆಯೇ? ಅಥವಾ ಅಂತಹ ಶಬ್ದಗಳ ಮೋಹಕ್ಕೊಳಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬೇಕೆ? ನಮ್ಮತನವನ್ನು ಕಳೆದುಕೊಳ್ಳಬೇಕೆ?


’ಅಮ್ಮಾ’ ಎನ್ನುವ ಎರಡಕ್ಷರದಲ್ಲಿ ಮುಕ್ಕೋಟಿ ದೇವತೆಗಳನ್ನು ಕಂಡ ಸಂಸ್ಕೃತಿ ನಮ್ಮದು. ಅಂತಹ ಶಬ್ದವನ್ನು ಮೂಲೆಗುಂಪಾಗಿಸಿ ಅದರ ಬದಲು ಕಾಯ್ದಿಟ್ಟ ಹೆಣವೆಂಬ ಅರ್ಥ ಕೊಡುವ ’ಮಮ್ಮಿ’ಯನ್ನು ತಂದು ಕೂರಿಸಬೇಕೆ? ಮಗು ನೋವಾದಾಗ ಮೊದಲು ತಾಯಿಯನ್ನು ನೆನಪಿಸಿಕೊಂಡು ಕೂಗುವ ’ಅಮ್ಮಾ’ ಎನ್ನುವ ಎರಡಕ್ಷರದಿಂದ ಹೊಮ್ಮುವ ಭಾವ ’ಮಮ್ಮಿ’ ಎಂದಾಗ ಮೂಡಿಬರುವುದಿಲ್ಲ. ಸಂತಸದ ಸುದ್ದಿಯನ್ನು ಮೊದಲು ತಾಯಿಗೆ ತಿಳಿಯಗೊಡಬೇಕು ಎನ್ನುವ ಆತುರದಲ್ಲಿ ಮನೆ ಹೊಕ್ಕಿ ’ಅಮ್ಮಾ’ ಎಂದು ಮಗ ಕರೆಯುವಾಗ ಸ್ಫುರಿಸುವ ಭಾವ ’ಮಮ್ಮಿ’ ಎಂದಾಗ ಸೊರಗಿಹೋಗುತ್ತದೆಯೇನೋ ಅನ್ನಿಸುತ್ತದೆ. ಇಂತಹ ಕೃತಕ ಭಾಷೆ ನಮ್ಮದಾಗಬೇಕೆ? ಶಬ್ದ ಶಬ್ದಕ್ಕೂ ಭಾವಸಂಚಾರವೀಯುವ ಸರ್ವೋನ್ನತ ಭಾಷೆಯನ್ನು, ಭಾವನೆಗಳನ್ನೇ ಹೊಮ್ಮಗೊಡದ ನಿರ್ಜೀವ ಭಾಷೆಯನ್ನಾಗಿಸುವುದರಲ್ಲಿ ಯಾವ ಪುರುಷಾರ್ಥವಿದೆ?


ಇಷ್ಟಕ್ಕೂ ನಾನು ಮನನೊಂದುಕೊಂಡದ್ದು, ನಮ್ಮ so called high society ಜನರು ತಮ್ಮ ತಾಯಿಯನ್ನು ಮಮ್ಮಿ ಎಂದಿದ್ದಕ್ಕಲ್ಲ. ಮುಖವನ್ನೇ ಕಾಣದಂತೆ ಮೇಕಪ್ ಮಾಡಿಕೊಳ್ಳುವ, ಸಾವಿರ ರೂಪಾಯಿಗಳಿಗೂ ಕೆಳಗೆ ವಸ್ತುಗಳೇ ಸಿಗದಂತಹ ’ಷಾಪಿಂಗ್ ಕಾಂಪ್ಲೆಕ್ಸ್’ ’ಮಾಲ್’ ಗಳಲ್ಲಿ ಸುತ್ತಾಡುವ ಬೆಡಗಿಯರು ತಮ್ಮ ತಾಯಂದಿರನ್ನು ’ಮಾಮ್’ ಎಂದು ಕರೆದಾಗಲಲ್ಲ. ನಮ್ಮ ಮನೆಯ ಹಿಂದುಗಡೆಯೇ ಗುಡಿಸಲು ಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡಿರುವ, ಆಂಗ್ಲ ಭಾಷೆಯ ಗಂಧವೇ ಇಲ್ಲದ ಮನೆಗಳ ಮಕ್ಕಳು ತಾಯಂದಿರನ್ನು ಮಮ್ಮಿ ಎಂದಾಗ. ಎಂದೂ ನಮ್ಮವಳಲ್ಲದ ನಮ್ಮವಳಾಗಲು ಸಾಧ್ಯವಿಲ್ಲದ ಈ ’ಮಮ್ಮಿ’ ನಮಗೆ ಬೇಕೆ? ಅವಳಿಗಾಗಿ ನಾವು ನಮ್ಮ ’ಅಮ್ಮ’ಳನ್ನು ತೊರೆಯಬೇಕೆ?

2 comments:

ದೀಪಕ said...

ನಮಸ್ಕಾರ/\:)

'ಅಮ್ಮ' ಎ೦ದರೆ ಏನೋ ಹರುಷವೋ ! ಒಬ್ಬ ಮನುಷ್ಯನ ಜೀವನದಲ್ಲಿ ಭಾವನೆಗಳು ಅತೀ ಮುಖ್ಯ. ಭಾವನೆಗಳಿಲ್ಲದ ಮನುಷ್ಯ ಇದ್ದು ಕೂಡ ಸತ್ತ೦ತೆ. ಅದರಲ್ಲಿಯೂ ಕೂಡ ನಮ್ಮ 'ಕನ್ನಡ' ಭಾಷೆಯು ಭಾವನೆಯನ್ನು ಒಡಗೂಡಿಸಿಕೊ೦ಡು ಬ೦ದ೦ತಹ ಭಾಷೆ. ಈ ಭಾಷೆಯನ್ನು ಮಾತನಾಡುವಾಗ ಭಾವನೆಗಳು ತನ್ನಿ೦ತಾನೆ ಹೊರಬರುತ್ತದೆ.

ಒ೦ದು ಚಿಕ್ಕ ಉದಾಹರಣೆಯೊ೦ದಿಗೆ ಕನ್ನಡ ಭಾಷೆಯಲ್ಲಿರುವ ಭಾವನೆಯ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಈಗಿನ ಕರ್ನಾಟಕ ರಾಜಕೀಯ ಅವ್ಯವಸ್ಥೆಯ ಆಗರವಾಗಲಿಕ್ಕೆ ಮುಖ್ಯ ಕಾರಣರಾದ ದೇವೇಗೌಡರು ನಿನ್ನೆ ಅಸೆ೦ಬ್ಲಿಯಲ್ಲಿ ಮಾಡಿದ ಭಾಷಣ ನೋಡಿದವರಿಗೆ ಅವರ ಮಾಡಿದ ಭಾಷಣದ ಉದ್ದೇಶವನ್ನು ಅರಿಯುವಲ್ಲಿ ಬಹಳ ಕಷ್ಟವಾಗಿರಬೇಕು. ಆ೦ಗ್ಲ ಭಾಷೆಯಲ್ಲಿ ಮಾಡಿದ ಈ ಭಾಷಣದಲ್ಲಿ ಅವರು ತಮ್ಮ ಮೇಲೆ ಅನುಕ೦ಪ ಬರುವ೦ತೆಯೋ, ಅಥವಾ ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವ೦ತಹ ಭಾವನೆ ಇರಲಿಲ್ಲ. ಕಾಟಾಚಾರಕ್ಕಾಗಿ ಮಾಡಿದ ಭಾಷಣವಾಗಿತ್ತು. ಆದೇ ದೇವೇಗೌಡರು ಕನ್ನಡದಲ್ಲಿ ಭಾಷಣ ಮಾಡಿದರೆ, ಅದರ ಭಾವನೆ ಸಮಸ್ತ ಕನ್ನಡಿಗರಿಗೆ ಅರ್ಥವಾಗುವ೦ತಿರುತ್ತದೆ.

ಹೀಗೆ ಭಾವನೆಯ ಭಾಷ್ಯವನ್ನು ಕೊಡುವ 'ಕನ್ನಡ' ಭಾಷೆಯಲ್ಲಿರುವ ಭಾವಪೂರ್ಣ ಪದವಾದ 'ಅಮ್ಮ'ವನ್ನು ತಿರಸ್ಕರಿಸಿ, ಸತ್ತ ಹೆಣವನ್ನು ಸೂಚಿಸುವ ಆ೦ಗ್ಲ ಪದವಾದ 'ಮಮ್ಮಿ'ಯನ್ನು ಬಳಸಿ ಹೆತ್ತ ತಾಯಿಯನ್ನು ಸತ್ತ ತಾಯಿಯನ್ನಾಗಿ ಮಾಡುವ ಜನರಿಗೆ ಬುದ್ದಿ ಕೊಡಲೆ೦ದು ಕನ್ನಡ ತಾಯಿ ರಾಜರಾಜೇಶ್ವರಿಯನ್ನು ಕೋರುತ್ತೇನೆ.

ನಿನ್ನ ಲೇಖನಗಳು ಹೀಗೆಯೇ ಮು೦ದುವರೆಯಲೆ೦ದು ಆಶಿಸುತ್ತೇನೆ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Durga Das said...

adu problem irodu , namma janara manasinalli hokka STATUS yemba bootha, aaa bootha kelage iliyuva tanka , AMMA - "MOMMY" aagiruthe, APPA - "DADY"ya DAADI :) aagiruthe..