Monday, November 26, 2007

ಮದುವೆ ಆದ್ರು ನೋಡ್ರೀ, ಸಾಗರ್ ಮತ್ತು ಕಾದಂಬರಿ


ಸಾಗರ್ ನಮ್ಮ AceMAP ತಂಡದ (ಕುಟುಂಬದ ಎಂದರೇ ಹೆಚ್ಚು ಸೂಕ್ತ) ಹಿರಿಯ ಸದಸ್ಯರಲ್ಲೊಬ್ಬ. ನಮ್ಮ ಈ L&T Infotech ನಲ್ಲಿ ಕೆಲಸ ಮಾಡುತ್ತಿರುವವರ ಹುಡುಗರ ತಂಡದಲ್ಲಿ ಇದು ಮೊದಲನೇ ಮದುವೆಯ ಸಡಗರ. ಈಗ L&Tಯಲ್ಲಿ ಉಳಿದಿರುವವರು ಕೇವಲ ಮೂರೋ ನಾಲ್ಕೋ ಜನರಾದರೂ ಆ ಕುಟುಂಬದಿಂದ ಯಾರೂ ಬೇರೆಯಾಗಿಲ್ಲ. ಈ ಸಡಗರದ ಜೊತೆಗೆ AceMAP ತಂಡದ ಸದಸ್ಯರೆಲ್ಲಾ ಮತ್ತೊಮ್ಮೆ ಒಂದುಕಡೆ ಸೇರಬಹುದಲ್ಲಾ ಎನ್ನುವ ಸಂಭ್ರಮ. ಹಿಂದಿರುಗಿಬರಲು ರೈಲ್ವೆ ಟಿಕೆಟ್‍ಗಳು ದೊರತಿದ್ದರೂ ಹೋಗುವಾಗ ವೇಟಿಂಗ್ ಇದ್ದ ಕಾರಣ ವಿಆರ್‍ಏಲ್‍ನಲ್ಲಿ ಧಾರವಾಡಕ್ಕೆ ಶುಕ್ರವಾರ ರಾತ್ರಿ (23/11/2007) ಹೊರಟೆವು.


ಬಸ್ ಬಿಡುವುದು 9:30ಕ್ಕೇ ಆದರೂ ವಿಆರ್‍ಏಲ್‍ನವರು ತಮ್ಮ ಸ್ಟ್ಯಾಂಡರ್ಡ್ ಟೈಮನ್ನು ಕಾಯ್ದುಕೊಂಡು 11:00ಕ್ಕೆ ಬೆಂಗಳೂರಿಂದ ಹೊರಟರು. ಯಥಾಪ್ರಕಾರ ಯಾವಾಗಲೂ ಇಂತಹ ಬಸ್‍ಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವಂಥ ತಿಗಣೆಗಳು ಹೇರಳವಾಗಿ ನನ್ನ ಸೀಟ್‍ನ ಕೆಳಗೇ ಕುಳಿತಿದ್ದವು. ನಾವೆಲ್ಲರೂ ಮಾತಿನಲ್ಲಿ ಮಗ್ನವಾದರೆ, ಅವುಗಳು ನಮ್ಮ ರಕ್ತ ಹಂಚಿಕೊಳ್ಳುವುದರಲ್ಲಿ ಮಗ್ನವಾದವು.


ಮೈ ಕೊರೆವ ಛಳಿ. ಅದರಲ್ಲೂ ಎಲ್ಲ ಕಿಟಕಿಗಳನ್ನು ಮುಚ್ಚಿದರೂ ಎಲ್ಲಿಂದಲೋ ನುಸುಳಿಬರುವ ತಣ್ಣನೆಯ ಗಾಳಿ. ಇದರ ಮಧ್ಯ ಜಾಕೆಟ್ ತರಲು ಮರೆತಿದ್ದ ನಮ್ಮ ರೆಡ್ಡಿಗಾರು ಛಳಿಯಲ್ಲೇ ನಡುಗುತ್ತಾ "ಇದೇನು ಮಗಾ... ಛಲೀನೇ ಇಲ್ಲಾ... ಸಕತ್ತು ಹಾಟು..." ಎನ್ನುತ್ತಿದ್ದ. ಚಿತ್ರದುರ್ಗ ತಲುಪಿದೆವು. ಆ ಛಳಿಯಲ್ಲಿ ಒಂದೊಂದು ಕಪ್ ಬಿಸಿ ಬಿಸಿ ಟೀ ಚಪ್ಪರಿಸುತ್ತಾ ಮಾತನಾಡುವಾಗ ಆಗುವ ಆನಂದ ಅನುಭವಿಸಿಯೇ ತೀರಬೇಕು. ಅವರ ಕಂಪೆನಿಯ ಸಮಾಚಾರ ಇವರ ಕಂಪೆನಿಯ ಸಮಾಚಾರವೆಲ್ಲಾ ಮುಗಿಯಿತು. ಎಲ್ಲರೂ ವಿಷಯಕ್ಕಾಗಿ ತಡಕಾಡುತ್ತಿದ್ದರು. ಆಗಷ್ಟೇ ಯಾರೋ ಪ್ರಸ್ತಾಪಿಸಿದ್ದು, ’ಎಂ ಪಿ ಪ್ರಕಾಶ್ ಮತ್ತೆ ಕಾಂಗ್ರೆಸ್ ಜತೆಗೂಡಿ ಮತ್ತೆ ಸರ್ಕಾರ ರಚಿಸ್ತಾರಂತೆ!’. ಶುರುವಾಯಿತು ರಾಜಕೀಯದ ಡಿಸ್ಕಷನ್. ಒಬ್ಬ ದೇವೇಗೌಡರ ದುರ್ಭುದ್ಧಿಗೆ ವ್ಯಥೆಪಟ್ಟರೆ ಇನ್ನೊಬ್ಬ ಯಡಿಯೂರಪ್ಪನವರ ಸ್ಥಿತಿಗೆ ಮರುಕಪಟ್ಟ. ಒಟ್ಟಿನಲ್ಲಿ ಮುಂದಿನ ಇಲೆಕ್ಷನ್‍ನಲ್ಲಿ ಬಿಜೆಪಿಗೆ clean sweep mejority ಕೊಡಿಸಿಯೇ ಬಿಟ್ಟೆವು. ಅಷ್ಟರಲ್ಲಿ ನಮ್ಮ ಬಸ್ಸಿನ ಹಾರನ್ ಬಾರಿಸಿತು.


ಬಸ್ಸಿನಲ್ಲಿ ಮತ್ತೊಂದು ನಿದ್ದೆ ಮುಗಿಸಿದಾಗ ಹುಬ್ಬಳ್ಳಿ ತಲುಪಿದ್ದೆವು. ನನ್ನ ಹಿಂದೆಯೇ ಕುಳಿತಿದ್ದ ಕನ್ನಡ ’ಉಲಿಸಿ’ ’ಬೆಲೆಸಿ’ ಸಂಘದ ಅಧ್ಯಕ್ಷರು ಉಪಾಧ್ಯಕ್ಷರಾದ ಮಹೇಶ ಮತ್ತು ಸಾಯಿ ನಡುವೆ ಮಾತುಕತೆ ನೆಡೆದಿತ್ತು.
"ಹುಬ್ಬಲ್ಲಿ ಬಂತು ಮಗಾ"
"ಇದು ಹುಬ್ಬಲ್ಲಿ ಅಲ್ಲ ಮಚ್ಚಾ"
"ನಾನು ಹೇಲ್ತೀನಿ ಇದು ಹುಬ್ಬಲ್ಲಿನೇ"
"ಸರಿ ಬಿಡು"
ಇವರ ಇನ್ನೊಂದೆರಡು ಹಲ್ಲಿ ಪಲ್ಲಿಗಳನ್ನು ಕೇಳುವಷ್ಟರಲ್ಲಿ ಧಾರವಾಡ ತಲುಪಿದ್ದೆವು. ನಮ್ಮ ಸ್ವಾಗತಕ್ಕೆ ಸ್ವತಃ ಮದುವೆಗಂಡು ಸಾಗರ್ ಕಾಯುತ್ತಾ ಕುಳಿತಿದ್ದ. ಬಹಳ ದಿನಗಳ ನಂತರ ಸಾಗರ್‍ನನ್ನು ನೋಡಿದ ನಮಗೆ ಗಮನಕ್ಕೆ ಬಂದಿದ್ದು ಅವನ ಮುಖದಲ್ಲಿ ಆಗಲೇ ಮನೆಮಾಡಿದ್ದ ಅದೊಂದುರೀತಿಯ ಸಂತೋಷಭಾವ. ಅದು ನಮ್ಮೆಲ್ಲರ ಆಗಮನದಿಂದಲೋ ಅಥವಾ ಮದುವೆಯಾಗುತ್ತಿದ್ದೇನೆಂಬ ಖುಷಿಗೋ ಅವನೇ ಬಲ್ಲ.


ಕಲ್ಯಾಣಮಂಟಪದ ಎದುರುಗಡೆಯೇ ಸಾಗರ್ ನಮಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ. ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಕಿತ್ತೂರು ಕೋಟೆಗೆ ಪ್ರಯಾಣ ಬೆಳೆಸಿದೆವು. ಸಂಜೆ ಮೆರವಣಿಗೆ 5 ಗಂಟೆಗೆ ಪ್ರಾರಂಭವಾಗುವುದಿತ್ತು. ಅಷ್ಟರೊಳಗೆ ಹೋಗಿಬಂದುಬಿಡಬಹುದು ಎಂದು ದೃಢೀಕರಿಸಿಕೊಂಡೇ ಹೊರಟಿದ್ದೆವು. ಕಿತ್ತೂರಿನ ಕೋಟೆಯಲ್ಲಿ ಈಗ ಹೇಳಿಕೊಳ್ಳುವಂತಹದ್ದೇನೂ ಉಳಿದಿಲ್ಲವಾದರೂ ಧಾರವಾಡಕ್ಕೆ ಹೋದರೆ ಒಮ್ಮೆ ಅಲ್ಲಿಗೂ ಒಂದು ಭೇಟಿ ನೀಡಿ ಬರಬಹುದು. ಯಾವುದೇ ಶಿಲ್ಪಕಲಾಕೃತಿಗಳು ರಾರಾಜಿಸದಿದ್ದರೂ ರಾಣಿಯ ಅರಮನೆಯ ಅಡಿಪಾಯವನ್ನಷ್ಟಾದರೂ ನೋಡಬಹುದು. ಕಿತ್ತೂರು ಕೋಟೆಯನ್ನು ನೋಡಿಕೊಂಡು ಗುಂಡಪಿಯ ಗೆಳೆಯನ ಮನೆಗೆ ಹೋದೆವು. ಅಲ್ಲಿ ತಿಂದ ಕೊಬ್ಬರಿ ಹಾಕಿದ ಅವಲಕ್ಕಿ ಹಸಿದ ಹೊಟ್ಟೆಗೆ ಮೃಷ್ಟಾನ್ನ ತಿಂದಂತಾಯಿತು. ಗುಂಡಪಿಯ ಗೆಳೆಯನ ಹೊಲಗದ್ದೆಗಲನ್ನು ನೋಡಿಕೊಂಡು ವಾಪಸ್ ಧಾರವಾಡ ತಲುಪಿದಾಗ ೬ ಗಂಟೆಯಾಗಿತ್ತು. ಮೆರವಣಿಗೆ ಆಗ ತಾನೇ ಹೊರಟಿತ್ತು.


ಮದುವೆಯಲ್ಲಿ ಗಂಡು ಹೆಣ್ಣು ಮೆರವಣಿಗೆಯಲ್ಲಿ ಬರುವುದನ್ನು ಕೇವಲ ಟಿವಿಯಲ್ಲಿ ಸಿನೆಮಾಗಳಲ್ಲಿ ನೋಡಿದ್ದ ನನಗೆ ಇದೊಂದು ಹೊಸ ಅನುಭವ. ದೂರದಿಂದಲೇ ಮೊಟ್ಟಮೊದಲು ಕಣ್ಣಿಗೆ ಬಿದ್ದದ್ದು 25-30 ಟ್ಯೂಬ್‍ಲೈಟ್‍ಗಳು. ಅವು ಪೂರ್ತಿ ರಸ್ತೆಯನ್ನು ಅತಿಕ್ರಮಿಸಿಕೊಂಡುಬಿಟ್ಟಿದ್ದವು. ಅವೆಲ್ಲವುಗಳ ಮುಂದೆ ಹತ್ತಾರು ಮಕ್ಕಳು ಪಟಾಕಿಗಳನ್ನು ಸಿಡಿಸುತ್ತಿದ್ದರು. ಕುಡಕೆ, ಧಡಾಕಿ, ಬಾಳಂಗಳಕ್ಕೆ ಹೋಗಿ ಚಿತ್ರ ವಿಚಿತ್ರ ಚಿತ್ತಾರಗಳನ್ನು ಬಿಡಿಸುತ್ತಿದ್ದ ಪಟಾಕಿಗಳು ಮೆರವಣಿಗೆಗೆ ಭರ್ಜರಿ ಆರಂಭವನ್ನು ನೀಡಿದ್ದವು. ನಂತರ ನೆರೆದ ಟ್ಯೂಬ್‍ಲೈಟ್ ಸಾಲುಗಳ ಮಧ್ಯದಲ್ಲಿ ಆರ್ಕೆಸ್ಟ್ರಾದವರು ವಿವಿಧ ಹಿಂದಿ ಮತ್ತು ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ಅವರ ಮಧ್ಯದಿಂದ ಬರುತ್ತಿದ್ದ ಹುಡುಗಿಯ ಧ್ವನಿಯ ಹಿಂದೆ ಬಿದ್ದಿದ್ದ ನಮ್ಮಲ್ಲಿಬ್ಬರಿಗೆ ಅಚ್ಚರಿಯಾಗಿದ್ದು ಹುಡುಗನೇ ಹುಡುಗಿಯ ರೀತಿ ಹಾಡುತ್ತಿದ್ದುದನ್ನು ಕಂಡು. ಇವೆಲ್ಲವುಗಳು ದಾಟಿದಮೇಲೆ ಬರುತ್ತಿದ್ದ ನವದಂಪತಿ ಜೋಡಿ ಮಳೆಗಾಲದ ಮೋಡಗಳನ್ನೂ ದಾಟಿನಿಂತ ಎರಡು ಮಿನುಗುವ ತಾರೆಗಳಂತಿದ್ದರು. ಅವರ ಸುತ್ತಲು ಕುಣಿದು ಕುಪ್ಪಳಿಸುತ್ತಿದ್ದ ಹೆಣ್ಣುಮಕ್ಕಳು ಈ ತಾರಾಜೋಡಿಗೆ ಪ್ರಭಾವಲಯವನ್ನು ಮೂಡಿಸಿದಂತಿತ್ತು. ಈ ಪ್ರಭೆಯನ್ನು ಹೆಚ್ಚಿಸಲೋ ಕಲಕಲೋ ಎಂಬಂತೆ ಜೋಶ್ ತಡೆದುಕೊಳ್ಳಲಾಗದ ನಮ್ಮ AceMAPನ Josh Machine ಕರ್ಣ ಒಂದೆರಡು ಸ್ಟೆಪ್ ಹಾಕಲು ಹೋಗೇಬಿಟ್ಟರು.


ಮೆರವಣಿಗೆ ಕಲ್ಯಾಣಮಂಟಪ ತಲುಪಿದಮೇಲೆ ನಿಶ್ಚಿತಾರ್ಥ ಶಾಸ್ತ್ರ ನಡೆಯಿತು. ನಂತರ ಊಟ. ಆಮೇಲೆ ವಾಪಸ್ ನಮ್ಮ ರೂಮಿಗೆ ತೆರಳಿ ಅಲ್ಲಿದ್ದ ಎರಡೂ ಮಂಚಗಳನ್ನು ಸೇರಿಸಿ ತಂದಿದ್ದ ಇಸ್ಪೀಟ್ ಕಾರ್ಡ್‍ಗಳನ್ನು ಹೊರತೆಗೆದ ನಂತರ ಬೇರೆ ಪ್ರಪಂಚವೇ ಬೇಡವಾಯಿತು. ಸತತ ನಾಲ್ಕು ಗಂಟೆಗಳಕಾಲ ಆಟವಾಡಿ, ಒಂದು ರಾಂಗ್ ಷೋ ಕೂಡ ಮಾಡಿ ಅಜೇಯನಾಗಿ ನಿಂತಿದ್ದ ಮಹೇಶನನ್ನು ಸೋಲಿಸಲು ಸಾಧ್ಯವಿಲ್ಲವೆಂದು ಅರಿತಮೇಲೆ ಮಲಗಲು ನಿರ್ಧರಿಸಿದೆವು.


ಮಾರನೇ ದಿನ ಮದುವೆ ಮುಹೂರ್ತ 12ಕ್ಕಿತ್ತು. ನಾವೆಲ್ಲರೂ ಎದ್ದು ತಯಾರಾಗಿ ಕಲ್ಯಾಣಮಂಟಪ ತಲುಪುವಷ್ಟರಲ್ಲಿ ಆಗಲೇ 11:30 ಆಗಿಹೋಗಿತ್ತು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು, ’ಹುಡುಗ ಪಾಪ ಹಳ್ಳಕ್ಕೆ ಬಿದ್ದಾ..’ ಎಂದಂದುಕೊಳ್ಳುತ್ತಾ ಭರ್ಜರಿ ಊಟವನ್ನು ಮತ್ತೊಮ್ಮೆ ಮನಃಪೂರ್ವಕವಾಗಿ ಸವಿದೆವು. ಸಾಗರ್ ಮತ್ತು ಕಾದಂಬರಿಯರನ್ನು ಭೇಟಿಯಾಗಿ ವೈವಾಹಿಕ ಜೀವನದಲ್ಲಿ ಅವರಿಗೆ ಶುಭಕೋರಿ ಬೀಳ್ಕೊಡುವಾಗ ಎಲ್ಲರ ಹೃದಯವೂ ಭಾರವಾಗಿತ್ತೋ ಏನೋ. ಮಾತುಗಳು ಮೊದಲಿಗಿಂತ ಕಡಿಮೆಯಾಗಿಬಿಟ್ಟಿದ್ದವು. ಎಲ್ಲರಿಗೂ ಮೌನವೇ ಇಷ್ಟವೆನಿಸತೊಡಗಿತ್ತು. ಇವೆಲ್ಲವುಗಳ ನಡುವೆ ಆಗಾಗ ನೆನಪಿಗೆ ಬರುತ್ತಿದ್ದವರು AceMAP ಕುಟುಂಬದ ಉಳಿದ ಸದಸ್ಯರು. ಅನಿವಾರ್ಯ ಕಾರಣಗಳಿಗೊಳಗಾಗಿ ಮದುವೆಗೆ ಬರಲಾಗದುದಕ್ಕೆ ಅವರಿಗೂ ಸಂಕಟ.

ಯಾದವಿ ಮನೋಜ ದೀಪಕ
ಮಂಜು ವಿಜಯ ಅಶೋಕ
ಇವರೆಲ್ಲರಿಗೆ, ತಾವು ಬರಲಾಗಲಿಲ್ಲವಲ್ಲಾ
ಎಂಬುದೊಂದೇ ಶೋಕ
ನಮಗನಿಸಿದ್ದೂ ಅದೇ,
ನೀವೂ ಇರಬೇಕಿತ್ತು ನಮ್ಮ ಪಕ್ಕ.

ಹಳೆಯ ದಿನಗಳನ್ನು ನೆನಪಿಸಿಕೊಂಡಾಗ, ಹತ್ತಿರದವರು ದೂರಾದಾಗ, ಮನಸ್ಸು ಕೆಲಸದ ಏಕತಾನತೆಯಿಂದ ಬಳಲಿದಾಗ ನನ್ನನ್ನು ಸಂತೈಸುವುದು ಅಡಿಗರ ಆ ಒಂದು ಸಾಲು ಮಾತ್ರ.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"


ಸಾಗರ್ ಮತ್ತು ಕಾದಂಬರಿ ಅವರ ವೈವಾಹಿಕ ಜೀವನ ಶುಭಪ್ರದವಾಗಲಿ.

5 comments:

C.A.Gundapi said...

Maga ultimate one :)
especially the "LAST LINE".

"Software Engineer nalli Adagida Lekhaka"

Keep Going ...

ದೀಪಕ said...

ನಮಸ್ಕಾರ/\:)

ಉತ್ತಮ 'ಪ್ರವಾಸ'ದ ಅನುಭವವನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು. AceMAP ಕುಟು೦ಬದಲ್ಲಾದ ಪ್ರಥಮ ಮದುವೆಗೆ ನಾವೆಲ್ಲಾ ಗೈರು ಹಾಜರಾದದ್ದು ದುರದೃಷ್ಟಕರವಾದ ವಿಷಯ. ಈ ಲೇಖನವನ್ನು ಓದುತ್ತಾ ಓದುತ್ತಾ ಈ 'ಪ್ರವಾಸ'ದಲ್ಲಿ ನಾನು ಕೂಡ ಭಾಗಿಯಾಗಿ, 'ಪ್ರವಾಸ'ದ ಎಲ್ಲಾ ಕ್ಷಣಗಳನ್ನು ದೃಶ್ಯರೂಪದಲ್ಲಿ ಕಲ್ಪನೆ ಮಾಡಿಕೊಳ್ಳುತ್ತಾ ಕಳೆದ ಮಧುರ ಕ್ಷಣಗಳನ್ನು ನಾನು ಮರೆಯಲು ಸಾಧ್ಯವಿಲ್ಲ. AceMAP ಕುಟು೦ಬದ ಪ್ರಥಮ ವರನಾದ 'ಸಾಗರ'ನ ಮೆರವಣಿಗೆ ಸ೦ದರ್ಭದಲ್ಲಿ Josh M/C ಕರ್ಣ ಕುಣಿದಿದ್ದರ ಬಗ್ಗೆ, ಮಹೇಶನ ಇಸ್ಪೀಟ್ ಆಟದ ಬಗ್ಗೆ, 'ಕಿತ್ತೂರಿ'ನ ಚಿಕ್ಕ ಪ್ರವಾಸದ ಬಗ್ಗೆ ಲೇಖನದಲ್ಲಿ ಪ್ರಸ್ತಾಪಿಸಿ, ಈ 'ಪ್ರವಾಸ'ದ ಆನ೦ದವನ್ನು ಎಲ್ಲರೂ ಸವೆಯುವ೦ತೆ ಮಾಡಿದ ಈ ಪ್ರಯತ್ನಕ್ಕೆ ನನ್ನ ಧನ್ಯವಾದಗಳು. ಲೇಖನ ಮುಗಿಯುವ ಹೊತ್ತಿಗೆ ನನ್ನ ಕಣ್ಣ೦ಚಿನಲ್ಲಿ ನೀರು ಬ೦ದದ್ದನ್ನು ಗಮನಿಸದೇ ಇರುವಷ್ಟು ನನ್ನನ್ನು ತಲ್ಲೀನನಾಗಿ ಮಾಡಿದ ಸಿದ್ಧಾರ್ಥನಿಗೆ ನಾನು ಚಿರಋಣಿ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Unknown said...

Siddale,

Super baradidiya......

Good.
Le nijawagalu Naa sagara maduve bhari miss maadakonde....
Merawanige munde kunidu kuppalisi warshagale kalede hodavu....naavu bandiddare sakkata majaa maadatidvi..

Karna Natikar said...

ಸಿದ್ದ ನಿನ್ನ ಲೇಖನ ಓದಿ ಭಾಳ ಖುಶಿ ಆಯ್ತು ಒಳ್ಳೆ ಪ್ರವಾಸ ಲೇಖನ ಒದಂಗ ಆತು. ನಿಜವಾಗ್ಲು ಮದುವೆ ಮುಗಿಸಿ ಬರುವಾಗ ಎದೆ ತುಂಬಾ ಭಾರ ಆಗಿತ್ತು ಜೀವನದಲ್ಲ ಈ ಥರಾ ಅವಕಾಶಗ"ಲು" ಸಿಗೊದು ತುಂಬ ಕಡಿಮೆ. ಎರಡು ದಿನಗಳು ಹೇಗೆ ಹೊದ್ವು ಗೊತ್ತೇ ಆಗ್ಲಿಲ್ಲ ಮತ್ತೆ ಬೆಂಗಳೂರಿಗೆ ಬರೊವಾಗ ಮನಸ್ಸು ಬೆಜಾರಗಿತ್ತು ಆದ್ರೆ ಎನ್ಮಡೊದು ನೀನು ಹೇಳಿದ ಹಾಗೆ ಅಡಿಗರ ಸಾಲುಗಳು ಈ ಸಂಧರ್ಬಕ್ಕೆ ಸೂಕ್ತ ಅನ್ನಿಸ್ತ ಇವೆ.

ಸಿದ್ಧಾರ್ಥ said...

ತಮ್ಮೆಲ್ಲರ ಅಭಿಪ್ರಾಯಗಳಿಗೆ ವಂದನೆಗಳು. ನಾನು ಬರೆದ ಲೇಖನಗಳನ್ನು ಕಥನಗಳನ್ನು ತಾಳ್ಮೆಯಿಂದ ಓದುವ ನಿಮ್ಮಂಥ ಸ್ನೇಹಿತರನ್ನು ಪಡೆದುದಕ್ಕೆ ನಾನು ಧನ್ಯ.

ವಂದನೆಗಳೊಂದಿಗೆ
- ಸಿದ್ಧಾರ್ಥ