Wednesday, November 14, 2007

ಕನ್ನಡವ ಕಾಪಾಡು ಕನ್ನಡಿಗರಿಂದ




ಕನ್ನಡಕ್ಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ಕನ್ನಡಿಗರಿಂದ


ಬಹುಶಃ ವರ್ಷಗಳ ಹಿಂದೆ ಡುಂಡಿರಾಜರು ಬರೆದ ಈ ಚುಟುಕು ಕೇವಲ ವಿನೋದಕ್ಕಾಗಿರಲಿಕ್ಕಿಲ್ಲ. ಇದರ ಹಿಂದಿನ ಕನ್ನಡದ ಪರಿಸ್ಥಿತಿಯ ಚಿತ್ರಣ ನೋಡುಗರ ಕಣ್ಣಿಗೆ ತಿಳಿಯದ್ದೇನೂ ಅಲ್ಲ. ಬೆಂಗಳೂರು ಕನ್ನಡಿಗರ, ಕನ್ನಡದ ಸಧ್ಯದ ಪರಿಸ್ಥಿತಿ ಎಲ್ಲರಿಗೂ ತಿಳಿದಿದ್ದೇ. ಆದರೂ ಇದೊಂದು ಸರಿಪಡಿಸಲಸಾಧ್ಯವಾದ ಸಮಸ್ಯೆಯಂತೆ ಬೆಳೆಯುತ್ತಿರುವುದು ನಮ್ಮ ದುರಾದೃಷ್ಟ. ಹಾಗಿದ್ದರೆ ನಿಜವಾಗಿಯೂ ಕನ್ನಡದ ಪರಿಸ್ಥಿತಿ ಅಸ್ಟೊಂದು ಹದಗೆಟ್ಟಿದೆಯೇ? ಕೇವಲ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಇಳಿದಿರಬಹುದು. ಪಟ್ಟಣ ಬೆಳೆದಾಗ ಇವೆಲ್ಲ ಸಹಜ ಎಂದು ನಮಗನಿಸಬಹುದು. ಆದರೆ ಇದು ಕೇವಲ ಕನ್ನಡಿಗರ ಸಂಖ್ಯೆ ಇಳಿಮುಖವಾಗಿರುವ ಪ್ರಶ್ನೆಯಲ್ಲ. ಕನ್ನಡಿಗರಲ್ಲೇ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ!!!

ಕನ್ನಡವನ್ನು ಉಳಿಸಿ, ಬೆಳೆಸಿ ಎನ್ನುವ ಘೋಷಣೆಗಳು ಇವತ್ತಿನದಲ್ಲ. ಬಹಳಷ್ಟು ವರ್ಷಗಳ ಹಿಂದೆಯೇ ಇದು ಕೇಳಿ ಬರುತ್ತಿತ್ತು. ಅದು ಈಗಲೂ ಮುಂದುವರಿದಿದೆ. ಆದರೆ ಈಗ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ "ಕನ್ನಡ ಉಳಿಸಿ"ಯ ಬದಲು "ಕನ್ನಡ ಉಲಿಸಿ" ಎಂದು ಕೇಳಲ್ಪಡುತ್ತಿದೆ! ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ "ಹಾರ್ಧಿಕ" "ಶುಭಾಷಯಗಳು" ರಾರಾಜಿಸುತ್ತಿವೆ. ದೋಷವೇ ಇರದ ಭಿತ್ತಿಪತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬರೆಸುವ ಈ ಭಿತ್ತಿಪತ್ರಗಳಲ್ಲೇ ಭಾಷಾದೋಷವಿದೆಯೇ ಎಂದು ಪರೀಕ್ಷಿಸದ ನಾವು ಖರ್ಚಿಲ್ಲದೇ ಮಾತನಾಡುವಾಗ ಅಥವಾ ಪತ್ರ ಬರೆಯುವಾಗ ಆಡುವ ಭಾಷೆಯ ಬಗ್ಗೆ ಲಕ್ಷವಹಿಸುತ್ತೇವೆಯೆ?

ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ನೆಡೆದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು. ಒಂದು ತರಕಾರಿ ಅಂಗಡಿಗೆ ಗಜ್ಜರಿಯನ್ನು ಕೊಂಡುಕೊಳ್ಳಲು ಹೋಗಿದ್ದೆ. ತರಕಾರಿ ಅಂಗಡಿಯವನು ಚೆನ್ನಾಗಿಯೇ ಕನ್ನಡ ಮಾತನಾಡುತ್ತಿದ್ದ. ಆದರೆ ಅವನಿಗೆ "ಗಜ್ಜರಿ" ಎನ್ನುವ ಶಬ್ದವೇ ಗೊತ್ತಿರುವಂತೆ ತೋರಲಿಲ್ಲ. ’ಸಾರ್ ಅದಾ? ಇದಾ?’ ಎಂದು ಇದ್ದು ಬಿದ್ದ ತರಕಾರಿಗಳನ್ನೆಲ್ಲ ತೋರಿಸಿ ನನ್ನನ್ನೇ ಕೇಳಿದ. ಅಂತೂ ಕೊನೆಗೂ ನನಗೆ ಬೇಕಾದದ್ದು ಅವನ ಕಣ್ಣಿಗೆ ಬಿತ್ತು. ತೂಕ ಮಾಡುತ್ತಾ ನನಗೆ ಹೇಳಿದ "ನೀವು ಇದಕ್ಕೆ ಗಜ್ಜರಿ ಅಂತೀರಾ ಸಾರ್? ಅಚ್ಚಕನ್ನಡದಲ್ಲಿ ನಾವು ಇದನ್ನ ’ಕ್ಯಾರಟ್’ ಅಂತೀವಿ" ಎಂದು! ಅವನು ಇದನ್ನ ಕ್ಯಾರಟ್ ಎಂದು ತಿಳಿದಿದ್ದರೆ ತೊಂದರೆ ಇರಲಿಲ್ಲ. ಆದರೆ ಆ ಶಬ್ದ ಅಚ್ಚಕನ್ನಡದ ಶಬ್ದವೆಂದೇ ಭಾವಿಸಿರುವ ಅವನ ಸಾಮಾನ್ಯಜ್ಞಾನಕ್ಕೆ ಏನೆನ್ನಬೇಕು?

’ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎನ್ನುವ ನಾಣ್ಣುಡಿಯೇ ಇದೆ. ಮೊನ್ನೆ ಹಾಗೇ ಸುತ್ತಾಡಲಿಕ್ಕೆ ಸ್ನೇಹಿತರ ಜೊತೆ ಹೊರಟಿದ್ದಾಗ ಒಬ್ಬ ಹೆಂಗಸು ತನ್ನ ಪುಟ್ಟ ಕಂದನನ್ನು ಎತ್ತಿಕೊಂಡು ಊಟಮಾಡಿಸುತ್ತಿದ್ದಳು. ಆ ಮಗುವಿಗೆ ಊಟ ಬೇಡವಾಗಿತ್ತು. ಆಗ ಆ ತಾಯಿ ’ಅಲ್ಲಿ ನೋಡು ಪುಟ್ಟಾ ’ಡಾಗು’... ನೀನು ಊಟ ಮಾಡಿಲ್ಲಾ ಅಂದ್ರೆ ಅದು ಬಂದು ಕಚ್ಚಿಬಿಡತ್ತೆ’ ಎನ್ನುತ್ತಿದ್ದಳು. ಈ ಪರಿಸ್ಥಿತಿ ಬೆಂಗಳೂರಿನದಷ್ಟೇ ಎಂದುಕೊಂಡಿದ್ದ ನನಗೆ, ಮೊನ್ನೆ ಊರಿಗೆ ( ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ) ಹೋದಾಗ ನೆಡೆದ ಘಟನೆ ಪರಿಸ್ಥಿತಿಯ ತೀವ್ರತೆಯನ್ನು ಬಿಡಿಸಿ ತೋರಿಸಿತು. ಅಲ್ಲೂ ಒಬ್ಬ ಮಹಿಳೆ ತನ್ನ ಕಂದನಿಗೆ ದಾರಿಯಲ್ಲಿ ಮಲಗಿದ್ದ ಒಂದು ಎಮ್ಮೆಯನ್ನು ತೋರಿಸಿ ’ಇದು ಏನು ಪುಟ್ಟಾ?... ಬಫೆಲ್ಲೋ..." ಎಂದು ಹೇಳಿಕೊಡುತ್ತಿದ್ದಳು. ಮೊದಲ ಗುರುವಿನ ಪರಿಸ್ಥಿತಿಯೇ ಹೀಗಿದ್ದರೆ, ಮುಂದೆ ಆ ಮಕ್ಕಳು ’ನಾಯಿ’ ’ಎಮ್ಮೆ’ ಗಳನ್ನು ಮರೆಯುವುದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ಆಗುವ ಅನರ್ಥಕ್ಕೆ ಹೊಣೆ ಆ ಮಕ್ಕಳಂತೂ ಅಲ್ಲ.

ಕನ್ನಡ ಶಬ್ದಗಳು ಹೇರಳವಾಗಿ ಇರುವಾಗ ಅವುಗಳನ್ನು ಆಂಗ್ಲ ಪದಗಳಿಂದ ಬದಲಿಸುವುದರಿಂದ ಸಿಗುವ ಲಾಭವಾದರೂ ಏನು? ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೂ ಇವತ್ತು ನಾಯಿಯನ್ನು ಆಂಗ್ಲಭಾಷೆಯಲ್ಲಿ ಏನೆಂದು ಕರೆಯುತ್ತಾರೆ ಎನ್ನುವುದು ಗೊತ್ತು. ಒಂದು ಮಗು ಆಂಗ್ಲಭಾಷೆಯನ್ನು ಪ್ರಾಥಮಿಕ ಶಾಲೆಯಲ್ಲೇ ಕಲಿತಾಕ್ಷಣ ಅದು ಬಿಲ್ ಗೇಟ್ಸ್ ಆಗಿಬಿಡುತ್ತದೆಯೇ? ಅಥವಾ ಕನ್ನಡವನ್ನು ಕಲಿತಾಕ್ಷಣ ನಿಶ್ಪ್ರಯೋಜಕವಾಗಿಬಿಡುತ್ತದೆಯೇ? ಅಷ್ಟಕ್ಕೂ ಸಾಧನೆಗೆ ಬೇಕಿರುವುದು ಛಲವೇ ಹೊರತು ಭಾಷಾಜ್ಞಾನವಲ್ಲ. ಸ್ವಾಮಿ ವಿವೇಕಾನಂದರು ಕೇವಲ ಮೂರು ತಿಂಗಳಿನಲ್ಲಿ ಫ್ರೆಂಚ್ ಕಲಿತು ಫ್ರೆಂಚರೂ ತಲೆತಗ್ಗಿಸುವಂತೆ ಭಾಷಣ ಮಾಡಿರಲಿಲ್ಲವೇ? ನಮಗೇಕೆ ಇಂಥವರು ಆದರ್ಶವ್ಯಕ್ತಿಗಳಾಗುತ್ತಿಲ್ಲ? ಉತ್ತರವಿಷ್ಟೇ, ನಾವಿನ್ನೂ ಮಾನಸಿಕ ದಾಸ್ಯದಿಂದ ಹೊರಬಂದಿಲ್ಲ. ಇನ್ನಷ್ಟೂ ದಾಸರಾಗುತ್ತಿದ್ದೇವೆ. ನಮ್ಮ ಭವ್ಯ ಸಂಸ್ಕೃತಿಯ ಪರಿಚಯ ನಮಗೇ ಇಲ್ಲದಾಗಿದೆ. ನಮ್ಮತನವನ್ನೇ ನಾವು ದ್ವೇಷಿಸತೊಡಗಿದ್ದೇವೆ. ಪರದೇಶವೆಂದರೆ ಸ್ವರ್ಗ, ನಾವಿರುವುದು ನರಕವೆಂಬ ತಪ್ಪು ಕಲ್ಪನೆಯಲ್ಲಿ ಸಿಕ್ಕಿಬಿದ್ದಿದ್ದೇವೆ. ಈಗಾಗಲೇ ’ಸಂಸ್ಕೃತ’ವನ್ನು ಮರೆತು ನಮ್ಮದೇ ಆದ ಅಪಾರ ಜ್ಞಾನಭಂಡಾರವನ್ನು ನಮ್ಮ ಕೈಯಿಂದಲೇ ಮುಚ್ಚಿಕೊಂಡಿದ್ದೇವೆ. ಇನ್ನು ಕನ್ನಡವನ್ನೂ ಮರೆತು ಕೇವಲ ಭೋಗಜೀವಿಗಳಾದ ಪಾಶ್ಚಾತ್ಯರಂತಾಗಲಿದ್ದೇವೆ. ನಮಗೆ ಸ್ವತ್ವದ ಅರಿವಾಗುವವರೆಗೆ, ಸ್ವಾಭಿಮಾನ ಮೂಡುವವರೆಗೆ, ಎಷ್ಟೇ ಘೋಷಣೆಗಳನ್ನು ಕೂಗಿದರೂ ಎಷ್ಟೇ ಸಂರಕ್ಷಣಾ ವೇದಿಕೆಗಳನ್ನು ರಚಿಸಿದರೂ ನೀರಿನಲ್ಲಿ ಹೋಮ ಮಾಡಿದಂತೆ.

6 comments:

ದೀಪಕ said...

ನಮಸ್ಕಾರ/\:)

ಭಟ್ಟರು ಪ್ರಥಮ ಎಸೆತದಲ್ಲೇ ಸಿಕ್ಸರ್ ಹೊಡೆದ೦ತಿದೆ. ಕನ್ನಡ ಭಾಷೆಯ ಇ೦ದಿನ ಪರಿಸ್ಥಿತಿಯನ್ನು ಉದಾಹರಣೆಗಳ ಮುಖಾ೦ತರ ವಿಶ್ಲೇಷಿಸಿರುವ ಸ೦ಗತಿ ಮೆಚ್ಚುವ೦ತಹದ್ದು.
ಪರಿಸ್ಥಿತಿ ಹೀಗೆಯೇ ಮು೦ದುವರೆದರೆ, 'ಕ್ಯಾರಟ್' ರೀತಿಯಲ್ಲಿ 'ಡಾಗು', 'ಬಫೆಲೋ' ಕೂಡ ನಮ್ಮ ಭಾಷೆಯ ಪದಗಳಾಗುವ ಕಾಲ ಸನ್ನಿಹಿತವಾಗಿದೆಯೇನೋ ಎ೦ದೆನಿಸುತ್ತದೆ.
ಹೀಗೆಯೇ, 'ಕೀ ಬೋರ್ಡ್'ನಿ೦ದ ಲೇಖನಗಳು ಹುಟ್ಟುತ್ತಿರಲಿ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ.

Unknown said...

ನಮಸ್ಕಾರ ಗೆಳೆಯ,

ಕರೆ ಹೇಳ ಬೇಕಂದರೆ, ಲೇಖನ ಮಾತ್ರ ಸೂಪರ್ ಆಗಿ ಬರದ್ದಿಯ. ಹೀಗೆ ನಿನ್ನ ಲೇಖನಗಳು ಪ್ರಕಟವಾಗುತಿರಲಿ.

-- ಬಸವರಾಜ

ಸಿದ್ಧಾರ್ಥ said...

ನಿಮ್ಮ ಅಭಿಪ್ರಾಯಗಳಿಗೆ ವಂದನೆಗಳು. ಇವೇ ನಮಗೆ ಸ್ಪೂರ್ತಿ.

ಧನ್ಯವಾದಗಳೊಂದಿಗೆ,
- ಸಿದ್ಧಾರ್ಥ

Karna Natikar said...

ನಮಸ್ಕಾರ,
ಕನ್ನಡ ಕನ್ನಡಿಗರಿಂದಲೆ ಹಾಳಗ್ತಿದೆ ಅನ್ನೊಕೆ ನಿನು ಕೊಟ್ಟ ಉದಾಹರಣೆಗಳೆ ಸಾಕ್ಷಿ.ಒಳ್ಳೆ ಲೆಖನ ಹೀಗೆ ಬರಿತಾ ಇರು

-ಕರ್ಣ

ವಿಜಯ್ ಶೀಲವಂತರ said...

ಸಿದ್ಧಾರ್ಥ, ತುಂಬಾ ಒಳ್ಳೆ ಲೆಖನ ಇದು.

ನಾನು ಬೆಕಾದಶ್ಟ್ ಕಡೆ ನೋಡಿದೀನಿ, ತಂದೆ,ತಾಯಂದಿರು ತಮ್ಮ ಮಕ್ಳಿಗೆ ಆಂಗ್ಲ ಭಾಷೆಯಲ್ಲೇ ಮಾತಾಡೋದನ್ನ ಹೇಳ್ಕೊಡೋದು.

ನಾಳೆ ನಮ್ಮ ಮಕ್ಳಿಗೆ ಈ ಗತಿ ಬರದಂಗ ನೊಡ್ಕೊಳ್ಳುನು. :)

ಭಾಳ ಒಳ್ಳೆ ಲೇಖನ, ನನಗು ನಿಮ್ಮಲ್ಲಿ ಹಂಚಿಕೊಳ್ಳಿಕ್ಕೆ ಬೇಕಾದಶ್ಟಿದೆ....ಆದರೆ ಸಮಯದ ಅಭಾವ.

ಬಿಡುವಾದಾಗ ಬರೆಯುವೆ. ಉಳಿದವರು ಬರಿತಾ ಇರಬೇಕೆಂದು ಕೇಳಿಕೊಳ್ಳುವೆ.


ಇಂತಿ,
ವಿಜಯ್

ಸಿದ್ಧಾರ್ಥ said...

ಕರ್ಣ ಹಾಗೂ ವಿಜಯ್, ತಮ್ಮ ಅಭಿಪ್ರಾಯಗಳಿಗೆ ನಾನು ಆಭಾರಿ.