Thursday, November 29, 2007

ಸಾಫ್ಟ್ ವೇರ್ ಉದ್ಯೋಗ - ಎಷ್ಟು ಸುರಕ್ಷಿತ ?


ಮೂರು ವರ್ಷಗಳ ಹಿಂದೆ ಮುಗಿದ ಇಂಜಿನಿಯರಿಂಗ್ ಮೊನ್ನೆ ಮೊನ್ನೆಯಷ್ಟೇ ಮುಗಿದಂತಿದೆ. ಆಗಿನ ಘಟನೆಗಳು ಇನ್ನೂ ಕಣ್ಣ ಮುಂದೆಯೇ ನೆಡೆಯುತ್ತಿದೆಯೇನೋ ಎನಿಸುತ್ತದೆ. ನನಗೆ ಅವನ ಪರಿಚಯವಾದದ್ದು ಇಂಜಿನಿಯರಿಂಗ್‍ನಲ್ಲೇ. ಮೊದಲನೇ ವರ್ಷದಲ್ಲಿ ನಾನು ಮತ್ತು ಅವನು ಹಾಸ್ಟೆಲ್‍ನಲ್ಲಿ ಅಕ್ಕಪಕ್ಕದ ರೂಮಿನವರು. ಒಟ್ಟೂ ಎಂಟು ಜನರು ನಾವು, ಎಲ್ಲಿ ಹೋದರೂ ಒಟ್ಟಿಗೆ, ಏನೇ ಮಾಡಿದರೂ ಒಟ್ಟಿಗೆ. ಯಾರಾದರೂ ಊರಿಗೆ ಹೋಗಿಬಂದರಂತೂ ಮುಗಿಯಿತು. ಎಲ್ಲರೂ ಮುತ್ತಿಬಿಡುತ್ತಿದ್ದೆವು. ತಂದ ತಿಂಡಿ ಖಾಲಿ ಆದಮೇಲೆಯೇ ಎಲ್ಲರೂ ಹಿಂತಿರುಗುತ್ತಿದ್ದುದು. ಈ ನಮ್ಮ ಗುಂಪಿನಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದವನೆಂದರೆ ಅವನು. ಶಾಂತ ಮನೋಭಾವ, ಗೆಳೆಯರ ಮೇಲಿನ ಕಾಳಜಿ, ಇತರರು ಬಯಸದೇ ಇದ್ದರೂ ಅವರಿಗೆ ಸಹಾಯವನ್ನೀಡುವ ಮನಸ್ಸು ಅವನಲ್ಲಿತ್ತು. ಅವನ ಹಾಸಿಗೆಯ ಮೇಲೆ ಎದ್ದಕೂಡಲೇ ಕಾಣಿಸಬೇಕು ಎಂದು ಗೋಡೆಗೆ ಅಂಟಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರ ಮತ್ತು ರಾಮಕೃಷ್ಣರ ಭಿತ್ತಿಚಿತ್ರಗಳು ಅವನ ಆದರ್ಶಗಳನ್ನು ಸಾರುತ್ತಿದ್ದವು.


ನಾನು ಕಂಪ್ಯೂಟರ್ ಸೈನ್ಸ್ ಆಯ್ದುಕೊಂಡಿದ್ದರೆ, ಅವನದು ಎಲೆಕ್ಟ್ರಾನಿಕ್ಸ್. ಆದರೂ ಅಕ್ಕಪಕ್ಕದ ರೂಮಿನವರಾದ ಕಾರಣ ದಿನವೂ ಒಂದೆರಡು ತಾಸು ಹರಟೆಗೆ ತೊಂದರೆಯಿರಲಿಲ್ಲ. ನಮ್ಮ ಗುಂಪಿನಲ್ಲಿ ಹೆಚ್ಚು ಗಂಭೀರವಾಗಿ ವಿಷಯಗಳನ್ನು ಓದುತ್ತಿದ್ದವನೆಂದರೆ ಅವನೇ. ಅವನಿಗಿಂತಲೂ ಹೆಚ್ಚಿಗೆ ಅಂಕಗಳಿಸುವ ಹುಡುಗರೂ ಸಹ ಅವನ ಹತ್ತಿರ ಬಂದು ತಿಳಿಯದೇ ಇದ್ದ ವಿಷಯಗಳನ್ನು ಚರ್ಚಿಸುವುದನ್ನು ನೋಡಿದ್ದೇನೆ. ಎಷ್ಟು ತಿಳಿದುಕೊಂಡಿದ್ದರೇನು ಪ್ರಯೋಜನ? ಹೊರಗಡೆ ಕೇಳುವುದು ಕೇವಲ ಅಂಕಗಳನ್ನೇ ತಾನೆ? ಇಂಜಿನಿಯರಿಂಗ್ ಮುಗಿಸಿ ಹೊರಬಂದಮೇಲೆಯೂ ಕೂಡ ನಾವೆಲ್ಲರೂ ಒಟ್ಟಿಗೆ ಮನೆಮಾಡಿ ಕೆಲಸಕ್ಕೆ ಹುಡುಕಾಟ ನಡೆಸಿದೆವು.


ಅವನೂ ಹುಡುಕುತ್ತಿದ್ದ. ಆದರೆ ನಮಗಿಂತ ಅಂಕಗಳಲ್ಲಿ ಕಡಿಮೆ ಇತ್ತು ಎಂದೋ ಏನೋ ನಮಗೆಲ್ಲರಿಗೂ ಕೆಲಸ ದೊರೆತಮೇಲೂ ಅವನ ಹುಡುಕಾಟ ಮುಂದುವರಿದಿತ್ತು. ಯಾವುದೇ ಇಂಜಿನಿಯರಿಂಗ್ ಕೋರ್ಸ್ ಮಾಡಿದರೂ ಕೂಡ ಬೆಂಗಳೂರಿನಲ್ಲಿ ಬದುಕಬೇಕಾದರೆ ಕೊನೆಗೆ ಸಾಫ್ಟ್ ವೇರ್ ಉದ್ಯೋಗವನ್ನೇ ಮಾಡಬೇಕು. ಇಲೆಕ್ಟ್ರಾನಿಕ್ಸ್ ಓದಿದರೂ ಕೂಡ ಅವನೂ ಕೆಲವು ಕೋರ್ಸ್‍ ಮಾಡಿ ಸಾಫ್ಟ್ ವೇರ್ ಉದ್ಯೋಗಕ್ಕೇ ಹುಡುಕಾಟ ನೆಡೆಸತೊಡಗಿದ. ಕೊನೆಗೂ ಒಂದು ಕೆಲಸ ಸಿಕ್ಕಿತು. ಆದರೆ ಅವನು ಮಾಡಿದ್ದ ಕೋರ್ಸಿಗೆ ಮತ್ತು ಅವನ ಕೆಲಸಕ್ಕೆ ಸಂಬಂಧವೇ ಇರಲಿಲ್ಲ. ಏನೇ ಆಗಲಿ ಒಟ್ಟಿನಲ್ಲಿ ಒಂದು ಕೆಲಸ ಸಿಕ್ಕಿತಲ್ಲಾ ಎಂದು ಸೇರಿಕೊಂಡ.


ಒಂದೈದು ತಿಂಗಳ ಹಿಂದೆ, ಬಹುಶಃ ಅವನು ಕೆಲಸಕ್ಕೆ ಸೇರಿ ಎರಡು ವರ್ಷಗಳೇ ಕಳೆದಿರಬಹುದು. ಕೈಗೆ ಒಳ್ಳೆಯ ಸಂಬಳವೂ ಬರುತ್ತಿತ್ತು. ಇದ್ದಕ್ಕಿದ್ದಂತೆಯೇ ಕಂಪನಿಗೆ ಲಾಸ್ ಆಗುತ್ತಿದೆ ಎಂದು ಕಾರಣಕೊಟ್ಟ ಕಂಪನಿ ಮ್ಯಾನೇಜ್‍ಮೆಂಟ್‍ನವರು ಇವನನ್ನು ಮತ್ತು ಇವನ ಜೊತೆ ಮತ್ತಿಬ್ಬರನ್ನು ಹೊರಹಾಕಿಬಿಟ್ಟರು. ಬೇರೆ ಕೆಲಸವಿಲ್ಲ. ಪ್ರತೀ ತಿಂಗಳು ಇವನೇ ಮನೆಗೆ ಹಣ ಕಳಿಸುತ್ತಿದ್ದ. ಮನೆಯಲ್ಲಿ ಅರ್ಥಿಕವಾಗಿ ಸ್ವಲ್ಪ ತೊಂದರೆಯಿದೆ. ವಯಸ್ಸಾದ ತಂದೆ ತಾಯಿ. ಔಷಧೋಪಚಾರಕ್ಕೂ ಹಣ ಬೇಕು. ಅಣ್ಣನಿಗೆ ಸರಿಯಾದ ಉದ್ಯೋಗ ದೊರೆತಿಲ್ಲ. ಅವನ ಮದುವೆಯನ್ನೂ ಮಾಡಬೇಕೆಂದು ನಿರ್ಧರಿಸಿದ್ದರು. ಅದಕ್ಕೂ ಇವನೇ ಹಣ ನೀಡಬೇಕಿತ್ತು. ಬೆಂಗಳೂರಿನಲ್ಲಿ ಇರುವ ಮನೆಬಾಡಿಗೆಯನ್ನೂ ಕೊಡಬೇಕು. ಇವನು ಮದುವೆಯಾಗಿಲ್ಲವೆಂಬುದೊಂದೇ ಇವನ ಅದೃಷ್ಟ.


ಬಹಳಷ್ಟು ಕಂಪನಿಗಳನ್ನು ಕೆಲಸಕ್ಕಾಗಿ ಅಲೆದ ಮೇಲೂ ಎಲ್ಲೂ ಕೆಲಸ ದೊರೆತಿಲ್ಲ. ಇದರ ಜೊತೆ ಉಳಿದೆಲ್ಲ ತೊಂದರೆಗಳು ಮತ್ತು ಮಾನಸಿಕ ವೇದನೆ. ಲಕ್ಷಗಟ್ಟಲೆ ಸುರಿದು ಇಂಜಿನಿಯರಿಂಗ್ ಕಲಿಸಿದ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲವಲ್ಲಾ ಎಂಬ ದುಃಖ. ಸಮಯಕ್ಕೆ ಸರಿಯಾಗಿ ಆಹಾರ ನಿದ್ದೆಯಿಲ್ಲದೆ ಓಡಾಟ ನೆಡಸಿದ್ದಕ್ಕಾಗೋ ಅಥವಾ ವಿಧಿಗೆ ಬೇರೆ ಯಾರೂ ಅಮಾಯಕರು ದೊರಕಲೇ ಇಲ್ಲವೋ ಎಂಬಂತೆ ಬಂದೊರಗಿದ ಕರುಳಬೇನೆ ರೋಗ. ೨೦-೨೧ ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ. ಒಂದುವಾರದ ಹಿಂದಷ್ಟೇ ಕೆಲಸದ ಹುಡುಕಾಟವನ್ನು ಪುನರಾರಂಭಿಸಲು ಮತ್ತೆ ಬೆಂಗಳೂರಿಗೆ ಬಂದಿದ್ದಾನೆ. ಕೆಲಸದ ಹುಡುಕಾಟ ಮುಂದುವರೆದಿದೆ. ಅವನ ಹುಡುಕಾಟ ಸಫಲವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವುದನ್ನು ಬಿಟ್ಟರೆ ನನಗೆ ಬೇರೆ ಏನೂ ತೋಚುತ್ತಿಲ್ಲ.

3 comments:

ದೀಪಕ said...

ನಮಸ್ಕಾರ/\:)

ಈ ಸಾಫ್ಟ್ವೇರ್ ಉದ್ಯೋಗದಲ್ಲಿ ನೆಮ್ಮದಿ ಇಲ್ಲ. ಭದ್ರತೆ ಇಲ್ಲ. ಮನುಷ್ಯನಿಗೆ ಅವನ ಕೆಲಸದಲ್ಲಿ ಭದ್ರತೆ ಇದೆ ಅ೦ತ ಗೊತ್ತಾದರೆ, ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುತ್ತದೆ.
ಗಗನಕ್ಕೇರುತ್ತಿರುವ ಎಲ್ಲಾ ಪದಾರ್ಥಗಳ ಬೆಲೆಗಳು ಈ ನೆಮ್ಮದಿಯನ್ನು ಮತ್ತಷ್ಟು ಹಾಳು ಮಾಡುತ್ತವೆ. ಇ೦ತಹ ಸ೦ದರ್ಭದಲ್ಲಿ ಕೆಲಸವೇ ಹೋದರೆ, ಆ ಮನುಷ್ಯನ ಪಾಡು ಹೇಳತೀರಲಾಗದು :(
ಯಾವಾಗ ಈ ಸಾಫ್ಟ್ವೇರ್ ಉದ್ಯಮ ಬೀಳುತ್ತದೆಯೋ ಎ೦ಬ ಚಿ೦ತೆಯಲ್ಲಿಯೇ ನಮ್ಮ ದಿನಚರಿಯನ್ನು ಶುರು ಮಾಡುವ ಹಾಗಾಗಿದೆ. ಹೀಗೆ ಚಿ೦ತೆ ಮಾಡಲು ನಾವು ಇಷ್ಟು ಓದಬೇಕೇ ಎ೦ಬ ಪ್ರಶ್ನೆ ನನ್ನನ್ನು ಕಾಡುವ೦ತೆ ಮಾಡಿದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೇನೆ.
ನಿನ್ನ ರೂಮ್ ಮೇಟಿನ ಸಾಫ್ಟ್ಬೇರ್ ಜೀವನದ ಬಗ್ಗೆ ನಮ್ಮಲ್ಲಿ ಹ೦ಚಿಕೊ೦ಡದ್ದಕ್ಕೆ ಮತ್ತು ಈ ಲೇಖನದಿ೦ದ ನಮ್ಮ ಉದ್ಯಮದ ಬಗ್ಗೆ ಇನ್ನಷ್ಟು ತಲೆಕೆಡಿಸಿಕೊಳ್ಳುವ೦ತೆ ಮಾಡಿದ ನಿನ್ನ ಈ ಪ್ರಯತ್ನಕ್ಕೆ ನನ್ನ ಧನ್ಯವಾದಗಳು.

ಇ೦ತಿ,

ದೀಪಕ.

Basu said...

Sidda, e article nanu hege miss madide anta nange gottagilla, tumba chennagi man muttuva hage baridedi, e artilce li baruva vyakti ninagintalu chennagi nangu gottu,

sidda, kelavomme samaya sandharbah eno manushya tumba swarthi agtane, eno antastu,hana mado uddeshadalli nammavarannu navu ello martidivi ansutte, adare duddu bedave beda anta heloku agodilla, elladakku mukhyvagi navu nammavarnnu aritukollabeku,preeti vishwas sneha ivugala munde ellavu nashwar..

Durga Das said...

2007 Novembernalli bareda e blogannu eega odtha idini, nimma AA gelyanu eega olleya kelsadalli iddu, olle jeevana nadesuthidaare yendu aashisuve.

- "ಸಾಫ್ಟ್ ವೇರ್ ಉದ್ಯೋಗ - ಎಷ್ಟು ಸುರಕ್ಷಿತ ?"
anta nanagu kaadtha ide :( :)