Monday, June 15, 2015

ಭಾಗ್ಯದ ಸಿದ್ದ ರಾಮಣ್ಣ

ಭಾಗ್ಯ ಬಹಳ ಸುದ್ದಿ ಮಾಡ್ತಾ ಇದೆ. ಇದು ಜನರ ದೌರ್ಭಾಗ್ಯವೋ.. ಸರ್ಕಾರದ ದೌರ್ಭಾಗ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಸಚಿವರು ಒಂದು ಹೇಳುವುದು.. ಮುಖ್ಯಮಂತ್ರಿ ಇನ್ನೊಂದು ಹೇಳುವುದು,
ಇದರ ಮಧ್ಯೆ ಜನ, ಸಾಹಿತಿಗಳು ಭಾಗ್ಯಗಳ ಬಗ್ಗೆ ಮಗದೊಂದು ಹೇಳುವುದು ಮುಂದುವರೆದಿದೆ... ಈ ಎಲ್ಲಾ ಭಾಗ್ಯಗಳ ಮಧ್ಯದಲ್ಲಿ ನಿಮಗೊಂದು ರೀಮಿಕ್ಸ್ ಭಾಗ್ಯ !
’ಪುರಂದರ ದಾಸ’ರ ಕ್ಷಮೆ ಕೋರಿ... ಹಾಗೂ ಮಾನ್ಯ ಮುಖ್ಯಮಂತ್ರಿಗಳು ನಗೆಚಾಟಿಕೆಯನ್ನು ಹಾಗೇ ಸ್ವೀಕರಿಸಿ ನನ್ನನ್ನು arrest ಮಾಡಿಸುವುದಿಲ್ಲ ಎಂದು ಭಾವಿಸಿ... :P


ಭಾಗ್ಯದ ಸಿದ್ದ ರಾಮಣ್ಣ
ನಮ್ಮಪ್ಪ, ನೀ ಸೌಭಾಗ್ಯದ ಸಿದ್ದ ರಾಮಣ್ಣ

ಕೆಂಪು ದೀಪದ ವಾಹನವೇರುತ
ಜನರನು ಹೋಗದೆ ಬಿಡದೆಯೆ ನಿಲಿಸುತ
ಪ್ರಜೆಗಳು ಕೆಲಸಕೆ ಹೋಗುವ ವೇಳೆಗೆ
ಅಡ್ದಕೆ ಹಾಯುವ ಮಾರ್ಜಾಲದಂತೆ

ಕುಂತರೆ ನೀನು ಭಾಗ್ಯವ ಬಿಟ್ಟೆ
ನಿಂತರೆ ನೀನು ಭಾಗ್ಯವ ಬಿಟ್ಟೆ
ಭಾಗ್ಯದ ಮೇಲೆ ಭಾಗ್ಯವ ಬಿಡುವ
ಭರದಲಿ ರಾಜ್ಯಭಾರವ ಮರೆತೆ

ಕ್ಷೀರ ಭಾಗ್ಯದಿ ಹಾಲನು ಹರಿಸಿ
ಅನ್ನ ಭಾಗ್ಯದಿ ಅನ್ನವ ಉಣಿಸಿ
ಪಶು ಭಾಗ್ಯದಿ ಪಶುಗಳ ಬೆಳೆಸಿ
ಶಾದಿ ಭಾಗ್ಯದಿ ಮಲಗಿಸಿ ಬಿಟ್ಟೆ

ಮಾತು ಮಾತಿಗೆ ದಿಲ್ಲಿಗೋಡಿದೆ
ಸಭೆ ಸಮಾರಂಭದಿ ತೂಕಡಿಸಿದೆ
ಇಂದಿರೆ ಬದಲು ಸೋನಿಯಾ ಅಂದೆ
ಕಾಂಗ್ರೆಸ್ ರಾಣಿಗೆ ಸಲಾಮು ಹೊಡೆದೆ

1 comment:

sunaath said...

ವಾಹ್! ಸಿದ್ಧಾರ್ಥ! ಸಿದ್ದಣ್ಣನ ಭಾಗ್ಯರೇಖೆಯನ್ನು ಚೆನ್ನಾಗಿ ಗುರುತಿಸಿರುವಿರಿ. ‘ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯಾ!’ ಎನ್ನೋಣವೆ?