Tuesday, February 19, 2013

ಸ್ವಾತಂತ್ರ್ಯ ಹೋರಾಟದ ಪ್ರಹಸನ!

ಅಗಸ್ಟ್ 15ರಂದು ಹೈಸ್ಕೂಲಿನಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಅವಕಾಶ ಒದಗಿಬಂದಿತ್ತು. ಸ್ವತಂತ್ರ  ದಿನಾಚರಣೆಯಂದು ಏನಾದರು ಮಾಡಿದರೆ ಅದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೇ ಆಗಿರಬೇಕು ಎಂಬುದು ಎಲ್ಲರ ಅಭಿಮತ. ನೃತ್ಯರೂಪಕ ಮಾಡಲಂತೂ ಸಾಧ್ಯವಿರಲಿಲ್ಲ. ನಮ್ಮಲ್ಲಿ ನೃತ್ಯಮಾಡುವವರಿರಲಿ... ಹಾಡು ಹಾಡಲೂ ಯಾರೂ ಇರಲಿಲ್ಲ. ಹೆಣ್ಣು ಮಕ್ಕಳನ್ನು ನಮ್ಮೊಟ್ಟಿಗೆ ಸೇರಿಸಿಕೊಳ್ಳುವುದು ಎಲ್ಲರಿಗೂ ಇಷ್ಟವಿದ್ದರೂ, "ಹೆಣ್ ಮಕ್ಳನ್ನಾ ಮಾತ್ರ ಹಾಕ್ಕೊಂಡು ಮಾಡುದ್ ಬೇಡಾ.. ಹಾಂ..." ಎಂದೇ ಎಲ್ಲರೂ ಹೇಳುತ್ತಿದ್ದರು. ಇನ್ನು ಉಳಿದಿರುವುದು ಒಂದೇ. ನಾಟಕ ಮಾಡಬೇಕು. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ನಾಟಕ ಬರೆದು ಕೊಡುವವರ ಕೊರತೆ. ಕೊನೆಗೆ ನಮ್ಮದೇ ಪಠ್ಯದಲ್ಲಿದ್ದ ಒಂದು ಪಾಠವನ್ನೇ ಆಯ್ದುಕೊಂಡು ಅದನ್ನೇ ನಾಟಕ ಮಾಡುವುದು ಎಂದು ನಿರ್ಧರಿಸಿಬಿಟ್ಟೆವು.

ಕಾನ್ಸೆಪ್ಟು ಬಹಳ ಸಿಂಪಲ್ಲು. ಕೆಲವು ಹೋರಾಟಗಾರರು ಹಾಡು ಹಾಡುತ್ತಾ, ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೋಗುವ ದೃಶ್ಯ. ಪಾಠದಲ್ಲಿ ಬಂದಿರುವ ಹಾಡು, ಮಾತುಗಳನ್ನೇ ಒಬ್ಬೊಬ್ಬರಾಗಿ ಹೇಳುವುದು. ಸ್ವಲ್ಪ ಸಮಯದ ನಂತರ ಪೋಲೀಸರು ಬಂದು ಇದನ್ನೆಲ್ಲ ಮಾಡಬೇಡಿ ಎಂದು ಹೇಳುವುದು. ಹೋರಾಟಗಾರರು ಕದಲದೇ ಹಾಗೇ ನಿಲ್ಲುವುದು. ಪೋಲೀಸರು ಲಾಠಿ ಚಾರ್ಜ್ ಮಾಡುವುದು. ಹೋರಾಟಗರರು ವಂದೇ ಮಾತರಂ ಘೋಷಣೆ ಕೂಗುತ್ತಾ ಅಲ್ಲೇ ಕುಸಿದು ಬೀಳುವುದು. ದೇಶದ ಸ್ವಾತಂತ್ರ್ಯ ಹೋರಾಟವನ್ನೇ ಜನರ ಮುಂದೆ ತೋರಿಸುತ್ತಿರುವುದರ ಗಾಂಭೀರ್ಯದ ಅರಿವು ನಮಗೆ ಯಾರಿಗೂ ಇಲ್ಲದಿದ್ದರೂ, ಎಲ್ಲರಿಗೂ ಅಭಿನಯ ಮಾಡಿ ಕ್ಲಾಸಿನ ಎಲ್ಲ ಹೆಣ್ಣುಮಕ್ಕಳ ಮುಂದೆ ಹೀರೋ ಆಗುವ ಆಸೆಯಂತೂ ಉತ್ಕಟವಾಗಿತ್ತು. ಸ್ಕ್ರಿಪ್ಟ್ ಫೈನಲೈಸ್ ಆಗಿಹೋಯಿತು. ಪಾತ್ರಗಳನ್ನೂ ಹಂಚಿ ಆಯಿತು. ಎಲ್ಲರೂ ಅವರವರ ಮಾತುಗಳನ್ನು ಕಂಠಪಾಠ ಮಾಡಿಕೊಳ್ಳಲು ಪ್ರಾರಂಭಿಸಿದರು.

ಎರಡು ಮುಖ್ಯ ಪಾತ್ರಗಳು. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವನೇ ಮೆರವಣಿಗೆಯನ್ನು ಮುನ್ನಡೆಸುತ್ತಿರುವವ. ಇನ್ನೊಬ್ಬ ಪೋಲೀಸ್ ಅಧಿಕಾರಿ. ಇನ್ನು ಒಂದಿಷ್ಟು ಹೋರಾಟಗಾರರು ಮತ್ತೆ ಒಂದಿಷ್ಟು ಪೋಲೀಸ್ ಪೇದೆಗಳು. ಕೇವಲ 8-10 ನಿಮಿಷಗಳ ಪ್ರದರ್ಶನವಾದುದರಿಂದ ಎಲ್ಲರಿಗೂ ಓವರ್ ಕಾನ್ಫಿಡೆನ್ಸ್. ತಕ್ಕಮಟ್ಟಿಗೆ ರೆಹರ್ಸಲ್ ಮಾಡಿಕೊಂಡು, ಎಲ್ಲರೂ ತಮ್ಮ ತಮ್ಮ ಕಾಸ್ಟೂಮ್ಸ್ ಹೊಂದಿಸಿಕೊಂಡು ಅಗಸ್ಟ್ 15ರಂದು ಪ್ರದರ್ಶನಕ್ಕೆ ಸಿದ್ಧರಾದೆವು. ಖಾಕಿ ಚಡ್ಡಿ ಹಾಕಲು ವಿರೋಧ ವ್ಯಕ್ತಪಡಿಸಿದ್ದ ಪೋಲೀಸ್ ಅಧಿಕಾರಿ ಮಾರುತಿ, ಕೊನೆಗೂ ಒಂದು ಖಾಕಿ ಪ್ಯಾಂಟನ್ನು ಹೊಂದಿಸಿಕೊಂಡು ಬಂದಿದ್ದ. ಪೇದೆಗಳಿಗೆ ಚಡ್ಡಿಯೇ ಗತಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಜುಬ್ಬ, ಪಂಚೆ ಮತ್ತು ಗಾಂಧೀ ಟೋಪಿ. ದ್ವ್ಹಜಾರೋಹಣ ಎಲ್ಲಾ ನೆರವೇರಿಸಿದ ಮೇಲೆ ಕಾರ್ಯಕ್ರಮಗಳು ಪ್ರಾರಂಭವಾದವು. ಒಂದೆರಡು ಪ್ರವಚನಕಾರರು ಅದೇ ಗಾಂಧಿ ನೆಹರು ಪುರಾಣಗಳನ್ನು ಪಠಿಸಿದ ಮೇಲೆ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು.

ಮೊದಲಿಗೆ ದೇಶಭಕ್ತಿಗೀತೆ ಅದು ಇದು ಎಲ್ಲಾ ಕಾರ್ಯಕ್ರಮಗಳು. ಕೊನೆಯಲ್ಲಿ ನಮ್ಮ ನಾಟಕ! ಎಲ್ಲರಿಗೂ ಪುಕು ಪುಕು ಶುರುವಾಗಿತ್ತು. ಎಲ್ಲರೂ ಇದೀರೇನಪ್ಪಾ ಎಂದು ಹುಡುಕಿದರೆ ನಮ್ಮ ಪೋಲೀಸ್ ಪಾತ್ರಧಾರಿ ಮಾರುತಿಯೇ ಮಂಗಮಾಯ. ಕೊನೆಗೆ ಇನ್ನೇನು ನಮ್ಮ ನಾಟಕದ ಘೋಷಣೆಯಾಗಿಯೇ ಬಿಡುತ್ತದೆ ಎನ್ನುವಾಗ ಪ್ರತ್ಯಕ್ಷನಾದ. ಪೋಲೀಸ್ ಲಾಠಿ ತರುವುದು ಮರೆತು ಇಲ್ಲೇ ಎಲ್ಲೋ ಹೋಗಿ ಕೊನೆಗೂ ಒಂದು ಲಾಠಿಯ ವ್ಯವಸ್ಠೆ ಮಾಡಿಕೊಂಡು ಬಂದಿದ್ದ.

ಪ್ರದರ್ಶನ ಪ್ರಾರಂಭವಾಯಿತು. ನಾವು ಸ್ವಾತಂತ್ರ್ಯಹೋರಾಟಗಾರರೆಲ್ಲಾ ಘೋಷಣೆಗಳನ್ನು ಕೂಗುತ್ತಾ ಹಾಡು ಹಾಡುತ್ತಾ ಜನರ ಮಧ್ಯದಲ್ಲೆಲ್ಲಾ ಓಡಾಡಿ ನಾಟಕಕ್ಕೆ ಭರ್ಜರಿ ಪ್ರಾರಂಭ ಒದಗಿಸಿಬಿಟ್ಟೆವು. ಇನ್ನು ಪೋಲೀಸರ ಎಂಟ್ರಿ. ಮಾರುತಿ ಮತ್ತು ಇಬ್ಬರು ಪೇದೆಗಳು ಗತ್ತಿನಿಂದ ಬರುತ್ತಿದ್ದಂತೆ ಜನರೆಲ್ಲಾ ಗುಸುಗುಸು ಶುರುಮಾಡಿದರು. ಲಾಠಿ ತಿರಿಗಿಸುತ್ತಾ ಬಂದ ಪೋಲೀಸ್ ಇನ್‌ಸ್ಪೆಕ್ಟರ್‌ನ   ಸ್ಟೈಲ್ ನೋಡಿ ಜನ ದಂಗಾಗಿ ಹೋಗಿದ್ದರು. ತನ್ನ ಬಗ್ಗೆ ಜನ ಗಮನ ಕೊಡುತ್ತಿದ್ದಾರೆ ಎಂದು ಹುರುಪಿನಿಂದಲೋ ಏನೋ ಮಾರುತಿ ತಾನು ಹಿಡಿದಿದ್ದ ಲಾಠಿಯನ್ನು ಇನ್ನೋ ಜೋರಾಗಿ ತಿರುಗಿಸತೊಡಗಿದ. ಇವನು ತಿರುಗಿಸಿದ ರಭಸಕ್ಕೆ ಆ ಲಾಠಿ ಅವನ ಕೈ ಜಾರಿ ಮೇಲಕ್ಕೆ ಹಾರಿ ಎದುರು ಕೂತಿದ್ದ ಜನರ ಮಧ್ಯೆ ಹೋಗಿ ಬಿದ್ದುಬಿಟ್ಟಿತು. ಜನ ಹೋ.. ಎಂದು ಚೀರಲು ಶುರುಮಾಡಿಬಿಟ್ಟರು. ಲಾಠಿ ಕೈ ತಪ್ಪಿತಲ್ಲಾ ಎಂದು ತರಲು ಹೊರಟ ಮಾರುತಿ ಜನರ ಚೀರಾಟ ಕೇಳಿ ಮಧ್ಯದಲ್ಲೇ ನಿಂತು ಬಿಟ್ಟ. ಜನ ಹುಚ್ಚಾಪಟ್ಟೆ ನಗಲು ಶುರುಮಾಡಿಬಿಟ್ಟರು. ಏನು ಮಾಡುವುದು ಎಂದೇ ತೊಚದೆ ಪೋಲಿಸ್ ಇನ್‌ಸ್ಪೆಕ್ಟರ್ ಕೈಯಲ್ಲಿ ಲಾಠಿಯೇ ಇಲ್ಲದೆ ಲಾಠಿ ಚಾರ್ಜ್ ಘೋಷಿಸಿಬಿಟ್ಟ. ಪೇದೆಗಳು ಮತ್ತು ಇನ್‌ಸ್ಪೆಕ್ಟರ್ ಮಾರುತಿ ಕೈಯಿಂದಲೇ ಹೋರಾಟಗಾರರಿಗೆ ಗುದ್ದಲು ಶುರುಮಾಡಿದರು. ಜನರ ನಗು ಚೀರಾಟ ಇನ್ನೋ ಜೋರಾಯಿತು. ಸ್ವಾತಂತ್ಯ್ರ ಹೋರಾಟಗಾರರೋ ಅಲ್ಲೇ ಘೋಷಣೆ ಕೂಗುತ್ತಾ ಕುಸಿಯುವ ಬದಲು, ಈ ಪೋಲೀಸರ ಗುದ್ದು ತಪ್ಪಿಸಿಕೊಳ್ಳಲು ಓಡಲು ಶುರುಮಾಡಿಬಿಟ್ಟರು. ಒಂದಿಬ್ಬರು ಗುದ್ದು ತಿಂದ ಸಿಟ್ಟಿಗೆ ಅಲ್ಲೇ ಪೋಲೀಸರಿಗೆ ವಾಪಸ್ ಗುದ್ದಿ ದಿಕ್ಕಾಪಾಲಾಗಿ ಓಡಿಹೋದರು. ಪೋಲೀಸರು ಅವರ ಹಿಂದೆ ಅಟ್ಟಿಸಿಕೊಂಡು ಹೋದರು. ರಂಗಸ್ಥಳ ಒಮ್ಮೆಯೇ ಖಾಲಿಯಾಗಿಹೋಯಿತು. ನಾಟಕ ಮುಗಿಯಿತು ಎಂದು ಹೇಳಲೂ ಯಾರೂ ಇಲ್ಲದೆ,  ಜನರೇ ಅರ್ಥಮಾಡಿಕೊಂಡು ನಗುವನ್ನು ತಡೆದುಕೊಂಡು ಮುಂದಿನ ಕಾರ್ಯಕ್ರಮಕ್ಕೆ ಸಿದ್ಧರಾದರು.

ಸ್ವಾತಂತ್ಯ್ರ ಹೋರಾಟ ಒಂದು ಪ್ರಹಸನವಾಗಿ ಕೊನೆಗೊಂಡಿತು. ಈಗ ನಮ್ಮನ್ನು ನಾವೇ ನೋಡಿಕೊಂಡರೆ, ನಿಜಕ್ಕೂ ನಮ್ಮ ಹಿಂದಿನವರು ಹೋರಾಡಿದ್ದು ಪ್ರಹಸನದಂತೆಯೇ ಭಾಸವಾಗುತ್ತದೆ!

Wednesday, November 14, 2012

ಪುರುಸೊತ್ತಿಲ್ಲಾ ಯಾಕೆ?

ಅರ್ಧ ವರ್ಷದಿಂದ ಯಾವುದೇ ಬ್ಲಾಗ್ ಅಪ್‌ಡೇಟ್ಸ್ ಇಲ್ಲ. ಒಂದು ಕಾಲದಲ್ಲಿ ನಾನೂ ಬ್ಲಾಗ್ ಬರೆಯುತ್ತಿದ್ದೆ ಎನ್ನುವುದೇ ಮರೆತುಹೋದಂತಾಗಿದೆ! ಕಾಲೇಜ್ ಫ್ರೆಂಡ್ಸ್‌ಗಳನ್ನು ಭೇಟಿ ಮಾಡಿ ವರ್ಷಗಟ್ಟಲೆ ಆಗಿಹೋಗಿದೆ. ಹಳೆಯ ಕಲೀಗ್‌ಗಳನ್ನು ಫೇಸ್‌ಬುಕ್‌ನಲ್ಲಿ ನೋಡಿಯೇ ಖುಷಿಪಡಬೇಕಿದೆ! ಕಥೆ ಕಾದಂಬರಿಗಳನ್ನು ಓದುವುದು ಮರೆತೇ ಹೋಗಿದೆ. ಅವೆಲ್ಲಾ ಮುಂದಿನ ಮಾತು... ಬೆಳಿಗ್ಗೆ ಎದ್ದು ಪೇಪರ್ ತಿರುಗಿಸಲೂ ಟೈಮ್ ಇಲ್ಲಾ! ಒಟ್ಟಿನಲ್ಲಿ ಯಾವುದಕ್ಕೂ ಪುರುಸೊತ್ತಿಲ್ಲ! ಹೀಗೆಲ್ಲಾ ಏಕೆ ಆಗುತ್ತಿದೆ? ನಿಜವಾಗಿಯೂ ಜೀವನದಲ್ಲಿ ಅಷ್ಟೊಂದು ಬ್ಯುಸಿ ಆಗಿಬಿಟ್ಟಿದ್ದೇನೆಯೇ? ಗೊತ್ತಿಲ್ಲ...

ಬ್ಯುಸಿ ಆಗಿಬಿಟ್ಟಿದ್ದೇನೆ ಎನ್ನುವುದು ಕೆಲವು ಸಲ ನಿಜ ಎಂದು ಕಂಡರೂ ಬಹಳಷ್ಟು ಸಲ ನಮ್ಮ ಆಲಸ್ಯವನ್ನು ಮರೆಮಾಚುವ ನೆಪಮಾತ್ರ ಎನಿಸುತ್ತದೆ. ಫೋನ್ ಮಾಡಿ ಹೇಗಿದ್ದೀಯಾ ಗುರು... ಅರಾಮಾ? ಎಂದು ಕೇಳಲಿಕ್ಕೂ ಪುರುಸೊತ್ತಿಲ್ಲದಷ್ಟು ಬ್ಯುಸಿ ಬಹುಷಃ ನಮ್ಮ ಮನ್‌ಮೋಹನ್ ಸಿಂಗರೂ ಇರಲಿಕ್ಕಿಲ್ಲ. ಅವರಿಗೆ ಬಹುಷಃ ಕೆಲಸವೇ ಇಲ್ಲವೇನೊ.. ಅದು ಬೇರೇ ವಿಷಯ. ಆದರೂ ನಾವು ಬ್ಯುಸಿ. ಒಂದು ವಸ್ತುವನ್ನು ಕಳೆದುಕೊಳ್ಳಲು ನಾವು ಏನೂ ಮಾಡಬೇಕಾಗಿಲ್ಲ. ಅದೇ ಅದನ್ನ ಪಡೆದುಕೊಳ್ಳಲು ಹೆಣಗಬೇಕಾಗುತ್ತದೆ. ಅದನ್ನು ಉಳಿಸಿಕೊಳ್ಳಲು ಅದಕ್ಕೂ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಈ ಸಂಬಂಧಗಳೂ ಹಾಗೆ. ಹೈಸ್ಕೂಲು, ಕಾಲೇಜುಗಳಲ್ಲಿ ಚಡ್ಡಿ ದೋಸ್ತ್ ಗಳಾಗಿದ್ದವರು, ಇವತ್ತು ಇಲ್ಲೇ ಬೆಂಗಳೂರಿನಲ್ಲೇ ಇದ್ದಾರೆ ಎಂದರೂ, ಅವರ ಫೋನ್ ನಂಬರ್ ಸಿಕ್ಕಿದ್ದರೂ ಯಾಕೋ ಮಾತನಾಡಲಾಗದಷ್ಟು ಬ್ಯುಸಿ ನಾವು!

ಮನುಷ್ಯ ಬೆಳೆದು ದೊಡ್ಡವನಾದಂತೆಲ್ಲಾ ಸಾಮಾಜಿಕವಾಗಿ ಅವನ ವಲಯ ಹೆಚ್ಚಾಗುತ್ತಾ ಹೋದರೂ ಆಂತರಿಕವಾಗಿ ಅವನು ಸಂಕುಚಿತಗೊಳ್ಳುತ್ತಾ ಹೋಗುತ್ತಾನೆ! ಚಿಕ್ಕವರಾಗಿದ್ದಾಗ ಮನೆಯವರಿಗಿಂತ ಹೆಚ್ಚಾಗಿದ್ದ ಗೆಳೆಯರು ದೊಡ್ಡವರಾಗುತ್ತಾ ಗೆಳೆಯರಷ್ಟೇ ಆಗಿ ಉಳಿಯುತ್ತಾರೆ. ಮತ್ತೊಂದು ದಿನ ಹಾಯ್ ಬಾಯ್ ಫ್ರೆಂಡ್ಸ್ ಆಗುತ್ತಾರೆ. ಒಂದು ದಿನ ’ನನ್ನ ಹೊಸಾ ನಂಬರ್’ ಎಂದು ಮೆಸೇಜ್ ಬಂದರೂ ಅದನ್ನು ಫೋನ್ ಬುಕ್‌ನಲ್ಲಿ ಅಪ್‌ಡೇಟ್ ಮಾಡಲು ನಮಗೆ ಪುರುಸೊತ್ತಿಲ್ಲದಷ್ಟು ದೂರಾಗುತ್ತಾರೆ.  ದೂರಾಗುತ್ತಲೇ ಹೋಗುತ್ತಾರೆ! ತಾನು ತನ್ನ ಮನೆ, ತನ್ನ ಹೆಂಡತಿ ಮಕ್ಕಳು, ಸಂಬಂಧಿಕರು ಹಾಗು ಕೆಲವೇ ಕೆಲವು ಸ್ನೇಹಿತರೊಂದಿಗೆ ತನ್ನ ವ್ಯವಹಾರಗಳನ್ನು ಮೊಟಕುಗೊಳಿಸಿಬಿಡುತ್ತಾನೆ! ಇದರಲ್ಲಿ ತಪ್ಪು ಹುಡುಕಬೇಕೋ, ಅಥವಾ ಮನುಷ್ಯನ ಸ್ವಭಾವವೇ ಹೀಗೋ, ಅಥವಾ ಇದೇ ಸರಿಯೋ ಅರ್ಥವಾಗುತ್ತಿಲ್ಲ.

ಇತ್ತೀಚೆಗೆ ಹೊಸದೊಂದನ್ನ ನನ್ನ ದಿನಚರ್ಯೆಗೆ   ಕೂಡಿಸಿದ್ದೇನೆ. ಮಾರ್ನಿಂಗ್ ವಾಕ್!!! ಬೆಳಿಗ್ಗೆ ಎದ್ದು ವಾಕಿಂಗ್ ಮಾಡಬೇಕು ಎಂದುಕೊಂಡಿದ್ದು ಹೊಸತೇನಲ್ಲ. ಪ್ರಾರಂಭಿಸಿದ್ದೂ ಹೊಸತಲ್ಲ. ಆದರೆ ಎರಡು ತಿಂಗಳಾದರೂ ಅದನ್ನ ಬಿಡದಿರುವುದು ಹೊಸತು. ಬಹಳ ಹೇಳಿಕೊಂಡರೆ ನಾಳೆಯೇ ಬಿಟ್ಟುಬಿಟ್ಟರೆ ಕಷ್ಟ! ಈಗ ಜೊತೆಗೆ ಗೆಳೆಯನಿರುವುದರಿಂದ ಬೆಳಿಗ್ಗೆ ಒಂದಿಷ್ಟು ಬ್ಯಾಡ್ಮಿಂಟನ್ ಆಡಿ ಆಮೇಲೆ ಸ್ವಲ್ಪ ಸಮಯ ವಾಕ್ ಮಾಡಲು ಒಂದು ರೀತಿಯ ಹುಮ್ಮಸ್ಸಿದೆ. ಹಾಗೆ ಮಾಡುತ್ತಿರುವಾಗ ಅಕ್ಕಪಕ್ಕದಲ್ಲಿ ಬರೀ ಮುದುಕರು, ಇಲ್ಲಾ  ಪಾರ್ಕಿನ ನೆಲಕ್ಕೆ ಹಾಕಿದ ಸಿಮೆಂಟುಕಲ್ಲುಗಳನ್ನು ಭದ್ರವಾಗಿ ನೆಲಕ್ಕೇ ಕೂರಿಸುವಂತಹ ಭರ್ಜರಿ ಕಾಯದವರು. ವಯಸ್ಸಾದವರು ಒಬ್ಬೊಬ್ಬರೇ ಬಂದು ವಾಕ್ ಮಾಡುವವರು ಕಮ್ಮಿ. ಒಬ್ಬರೇ ಬಂದರೂ ಇಲ್ಲಿ ಪರಿಚಯದವರ ಜೊತೆ ಎರಡು ಸುತ್ತು ಸುತ್ತಿ, ಗಂಟೆಗಟ್ಟಲೆ ಹರಟುತ್ತಾ ಕೂರುತ್ತಾರೆ! ಈ ವಯಸ್ಸಿನಲ್ಲಿ ಇವರುಗಳಿಗೆ ಹೇಗೆ ಜೊತೆಗಾರರು ಸಿಗುತ್ತಾರೆ ಎಂದು ನನಗೆ ಆಶ್ಚರ್ಯ!

ಯಾವಾಗಲೂ ಸಂಪರ್ಕದಲ್ಲಿರಲು ಬಹುಷಃ ಇಬ್ಬರಲ್ಲಿ ಒಂದೇ ವಿಷಯದ ಬಗ್ಗೆ ಆಸಕ್ತಿ ಇರಲೇಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ ಅಥವಾ ಸಂಶೋಧನೆ! ನನಗೆ ಗೊತ್ತಿಲ್ಲದಿದ್ದುದು ಹೊಳೆದಾಗ ಬೇರೆಯವರಿಗೆ ಅದು ಹೊಸತೋ ಅಲ್ಲವೋ ನನಗೆ ಸಂಬಂಧವಿಲ್ಲ. ನನ್ನ ಮಟ್ಟಿಗಂತೂ ಅದು ಹೊಸ ಸಂಶೋಧನೆಯೇ. ಇಬ್ಬರ ನಡುವೆ ಯಾವುದೇ ಸಂಗತಿಗಳು ಕಾಮನ್ ಇಲ್ಲದಿದ್ದರೆ ಅವರಿಬ್ಬರು ಹೇಗೆ ಸಂಪರ್ಕದಲ್ಲಿರಲು ಸಾಧ್ಯ? ಹಾಗೆ ಇರುವುದು ಗಂಡ ಹೆಂಡತಿ ಅಷ್ಟೇ. ಈಗೀಗ ಅದೂ ಕಡಿಮೆಯಾಗುತ್ತಿದೆ. ಈ ಪಾರ್ಕಿನಲ್ಲಿ ಕೂತು ಹರಟುವ ಮುದುಕ ಮುದುಕಿಯರೆಲ್ಲರಿಗೂ ಒಂದೇ ಕಾಮನ್ ಇಂಟರೆಸ್ಟ್! ಆ ಮನೆ ಈ ಮನೆ ವಿಚಾರ. ಗಂಡಸರದ್ದು ಅಲ್ಲಿ ಇಲ್ಲಿ ಕೆಲಸಕಾರ್ಯಗಳ ಬಗ್ಗೆ, ದೇಶದ ದುಸ್ಥಿತಿಯ ಬಗ್ಗೆ, ಮಕ್ಕಳ ಜೀವನದ ಬಗ್ಗೆ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾತುಕತೆಗಳಾದರೆ, ಹೆಂಗಸರದ್ದು ಅವರ ಮನೆಯಲ್ಲಿ ನೆಡೆದ ಫಂಕ್ಷನ್ನು, ಅಲ್ಲಿ ಅವರು ಉಟ್ಟಿದ್ದ ಸೀರೆ, ಒಡವೆ... ಇವರ ಮನೆಯಲ್ಲಿ ಸೊಸೆಯ ಕಾಟ... ಅಡಿಗೆ ವಿಷಯಗಳು, ಅಂತೆ ಕಂತೆಗಳು ಇತ್ಯಾದಿ ಇತ್ಯಾದಿ.

ನಿಂತ ನೀರು ಕೆಡುವುದು ಬೇಗ. ಬತ್ತಿ ಹೋಗುವುದೂ ಬೇಗ. ಜೀವನ ಹರಿಯುವ ನೀರಾದರೆ ಸ್ವಲ್ಪ ವಾಸಿ. ಹೀಗೇ ಸಾಗಬೇಕು ಅಂದುಕೊಂಡರೂ ಸಾಗುವುದು ಮಾತ್ರ ಇಳಿಜಾರಿನಲ್ಲೇ. ಸಾಗುತ್ತಲಿದ್ದರಾಯಿತು... ಬತ್ತಿಹೋಗುವವರೆಗೆ ಅಥವಾ ಸಾಗರ ಸೇರುವವರೆಗೆ!

Monday, December 26, 2011

ಯಾವನಿಗ್ ಗೊತ್ತು...


ನಮ್ಮ ಮಾಜಿ ಮುಖ್ಯಮಂತ್ರಿಗಳನ್ನ ಟಿವಿಲಿ ನೋಡದಾಗಲೆಲ್ಲ ನನಗೆ ಅಯ್ಯೋ ಅನ್ಸತ್ತೆ. ಯಾಕೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ಮನುಷ್ಯ, ಹೋರಾಟಗಾರನಾಗಿ, ರಾಜಕಾರಣಿಯಾಗಿ, ಮುಖ್ಯಮಂತ್ರಿಯಾಗಿ, ಮಾಡಬಾರದ್ದನ್ನೆಲ್ಲ ಮಾಡಿ, ಲೋಕಾಯುಕ್ತರ ಬಲೆಗೆ ಬಿದ್ದು, ಹೈ ಕಮಾಂಡ್‌ನಿಂದ ಬೈಸಿಕೊಂಡು, ಅಧಿಕಾರ ಬಿಟ್ಟು, ಜೈಲಿಗೂ ಹೋಗಿ, ಅಸ್ಪತ್ರೆಗೂ ತಿರುಗಿ, ಜಾಮೀನು ತೆಗೆದುಕೊಂಡು ಮತ್ತೆ ಅಧಿಕಾರ ಬೇಕು ಎಂದು ಹಂಬಲಿಸುತ್ತಿರುವುದನ್ನು ನೋಡಿದರೆ, ಒಬ್ಬ ಮನುಷ್ಯನ ಕಾಲಚಕ್ರ ಓಳ್ಳೆ ಸೈನ್ ವೇವ್ ಥರಾ ಆಗೋಯ್ತಲ್ಲಾ ಅಂತ ಪಾಪ ಅನ್ಸತ್ತೆ! ಮುಂದೇನಾಗ್ಬಹುದು ಅಂತೀರಿ? ಯಾವನಿಗ್ ಗೊತ್ತು ಅಲ್ವಾ? ಅವ್ರಿಗೂ ಗೊತ್ತಿಲ್ಲ. ಬಹುಷಃ ಅವ್ರು ಮನೆಲ್ ಕೂತು, ಟಿವಿ ನೋಡ್ತಾ, ಹೀಗ್ ಹಾಡ್ತಿರ್‌ಬಹುದು...

ಏನು ಮಾಡೋದು ಜುಜಬಿ ಕೇಸೊಂದು
ತಗ್ಲಾಕ್ಕೊಂಡ್ ಬಿಡ್ತು
ತಗ್ಲಾಕ್ಕೊಂಡ್ ಬಿಡ್ತು

ಮಂತ್ರಿ ಆಗ್ತೀನಾ ಚೊಂಬೇ ಗತಿನಾ
ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಖುರ್ಚಿಯ ಮೇಲೇ ಕುಂತಾಗ ಹಿಂದೆ ಮುಳ್ಳು ಒಂದು
ಚುಚ್‌ದಾಂಗ್ ಆಯ್ತು
ಮುಳ್ಳು ನನ್ನನ್ನೇ ಯಾಕೆ ಚುಚ್‌ಬಿಡ್ತೋ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮತ್ತೆ ಕೂರ್ತೀನಾ ನಿಂತೇ ಇರ್ತೀನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಅದು ಯಾವ್ದೋ ಒಂದು ಲ್ಯಾಂಡು ಪೇಪರ್‌ನಾ
ಕಣ್ ಮುಚ್ಕೊಂಡ್ ಮಾಡಿ ಬಿಟ್ಟೆ ಸೈನನ್ನಾ
ಎಣಿಸುತ್ತಾ ಕೂತೆ ಕೋಟಿ ಕೋಟಿ ನಾ
ಲೋಕಾಯುಕ್ತಾ ಮಾಡ್ತು ರೇಡನ್ನಾ
ಮತ್ತೇ ಮತ್ತೇ ಹೇಳ್ದೆ ನಾನ್ ನಿರ್ದೋಷಿ ಕಣ್ರೀ
ಆದ್ರೇ ಮೇಲಿನ್ ದಡ್ರು ನನ್ ನಂಬ್ಲಿಲ್ಲಾ ಕಣ್ರೀ
ನನ್ನನ್ನಾ ನೋಡಿ ಉರ್‌ಕೊಳ್ಳೋ ಜನರು
ಮಾಟ ಮಂತ್ರಾ ಮಾಡಿಸ್‌ಬಿಟ್ರು

ಇಂಥಾ ಟೈಮಲ್ಲಿ ಜಿದ್ದು ಬೇಕಿತ್ತಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂಜುನಾಥಾನೇ ಕೋಪಿಸ್ಕೊಂಡ್ ಬಿಟ್ಟಿದ್ನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಪರಪ್ಪನ್ ಅಗ್ರಹಾರ ಸರಿ ಇಲ್ಲಾ
ಎದೆ ನೋವು ಯಾಕೋ ಜಾಸ್ತಿ ಆಯ್ತಲ್ಲಾ
ಆಸ್ಪತ್ರೆಗೂ ಹೋಗಿ ಕುಂತ್ನಲ್ಲಾ
ನಾನೇನಂದ್ರು ಜಡ್ಜು ನಂಬ್ತಿಲ್ಲಾ
ಶೋಭಕ್ಕಂಗೆ ಹೇಳಿ ಪೂಜೇ ಮಾಡ್‌ಸ್ದೆ ಕಣ್ರೀ
ತುಂಬಾ ಒಳ್ಳೆ ರೆಸಲ್ಟ್ ಬಂದೇ ಬಿಡ್ತು ನೋಡ್ರಿ
ಜಡ್ಜು ನನ್ನನ್ನಾ ನೋಡಿದ ಕೂಡ್ಲೇ
ಜಾಮೀನು ಕೊಟ್ಟು ಕಳ್ಸೇ ಬಿಟ್ರು

ಮುಂದೆ ಬೆಂಗ್ಳೂರಾ ಇಲ್ಲಾ ದಿಲ್ಲಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂತ್ರಿ ಆಗ್ತೀನಾ ಚೊಂಬೇ ಗತಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

Thursday, May 19, 2011

ಕುಣಿದು ಕುಣಿದು ಬನ್ನಿ


ನಾನು ಮದುವೆ ಆಗಬೇಕಾದರೆ ಇವಳ ಮನೆಗೆ ಹೋಗಿದ್ದು. ಆಗ ಸಾಲ್ಕಣಿಗೆ ಹೋಗುವ ದಾರಿಯಿಂದ ಬಲಕ್ಕೆ ತಿರುಗಿ, ಅರ್ಧ ಕಿಲೋಮೀಟರ್ ಸ್ವಲ್ಪ ಡಾಂಬರ್ ಕಂಡಿರುವ ರಸ್ತೆ ಮತ್ತರ್ಧ ಮಣ್ಣುರಸ್ತೆಯಲ್ಲಿ ಹಕ್ರೆಮನೆಗೆ ಹೋಗಬೇಕಾಗಿತ್ತು. ಈ ಮಣ್ಣುರಸ್ತೆಯನ್ನು ಡಂಬರೀಕರಣ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ನಮ್ಮ ಮದುವೆ ಆಗಿ, ಮೂರು ವರ್ಷಗಳೇ ಕಳೆದು ನಮಗೆ ಪ್ರಮೋಷನ್ ಬೇರೇ ಸಿಕ್ಕು, ಇವಳ ಬಾಳಂತನಕ್ಕೆ ಊರಿಗೆ ಕಳಿಸಿಯೂ ಆಯಿತು. ಮಗರಾಯನ ಮುಖ ನೋಡಲು ಆಗಾಗ ಅಲ್ಲಿಗೆ ಹೋಗಬೇಕಾದುದರಿಂದ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಕಾಡುತ್ತಿದೆ! ಸುಮ್ಮನೇ ಮಣ್ಣುರಸ್ತೆಯನ್ನು ಹಾಗೆಯೇ ಬಿಟ್ಟುಬಿಟ್ಟಿದ್ದರೇ ಚೆನ್ನಾಗಿತ್ತೋ ಏನೋ. ಡಾಂಬರ್ ಹಾಕ್ತೀವಿ ಎಂದು ಹೇಳಿ ಊರಿನ ಜನರ ಕಿವಿಯಮೇಲೆ ದಾಸವಾಳವನ್ನು ಕೂರಿಸುವ ಕೆಲಸ ಮಾಡಿಬಿಟ್ಟಿದ್ದಾರೆ! ಈ ಡಾಂಬರ್ ಹಾಕುವ ಸಂಭ್ರಮ ಬಹುಷಃ ನಮ್ಮ ಜೀವಮಾನದಲ್ಲಿ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ.

ಕಲ್ಲು ತಂದು ಹಾಕಿ ಒಂದು ವಾರ ಮತ್ತೆ ತಲೆ ಹಾಕದೇ ಇರುವುದು. ಜನ ಕಷ್ಟಪಟ್ಟು ಸರ್ಕಸ್ ಮಾಡುತ್ತಾ ಓಡಾಡುವುದು. ಕಲ್ಲುಗಳಲ್ಲಿ ಅರ್ಧ ಗಟಾರಕ್ಕೆ ಸೇರಿ ಗಟಾರ ಯಾವುದು, ರಸ್ತೆ ಯಾವುದು ಎಂದು ಪತ್ತೆಯೇ ಆಗದಿರುವುದು. ಮತ್ತೆ ಇವರು ಬಂದು ಮತ್ತೆ ಕಲ್ಲು ಹಾಕಿ ಹೋಗುವುದು. ಇದೇ ಆಗಿಹೊಗಿದೆ! ಕಳೆದಸಲ ಅದರ ಮೇಲೆ ಒಂದಿಷ್ಟು ಮಣ್ಣನ್ನೂ ಸುರಿದು ಹೋಗಿಬಿಟ್ಟರು. ಊರಿಗೆ ಬಂದವರೆಲ್ಲಾ ಕೆಂಪು ಕೆಂಪು! ದಾರಿಯ ಪಕ್ಕದಲ್ಲಿರುವುದೆಲ್ಲಾ ಕೆಂಪು ಎಲೆಗಳ ಗಿಡಗಳು! ನಾನು ಮನೆಯಿಂದ ಕಾರು ತೆಗೆದುಕೊಂಡು ಅಲ್ಲಿಗೆ ಹೋದರೆ, ಮನೆಗೆ ಬರುವಾಗ ನನ್ನ ತಂದೆ ಒಂದು ಬಕೆಟ್ ನೀರು ಹಿಡಿದುಕೊಂಡು ಬಾಗಿಲಲ್ಲೇ ಕಾಯುತ್ತಿರುತ್ತಾರೆ!

ಒಂದು ರಸ್ತೆ ಡಾಂಬರೀಕರಣಕ್ಕೆ ನಮ್ಮ ಸರಕಾರಕ್ಕೆ ಎಷ್ಟು ಸಮಯ ಬೇಕು? ಒಂದು ವರ್ಷ? ಎರಡು ವರ್ಷ? ಮೂರು ವರ್ಷ? ಅಲ್ಲಾ ಸ್ವಾಮಿ ನೀವು ಐದು ವರ್ಷ ಬರೀ ಜಲ್ಲಿ ಕಲ್ಲು ಹಾಕಿಸಿ ಹೋದರೆ, ಮುಂದಿನ ಸರಕಾರ ಮತ್ತೆ ಇದನ್ನೇ ಮಾಡುವುದಿಲ್ಲವೆ? ಒಟ್ಟಿನಲ್ಲಿ ತಮ್ಮ ಖುರ್ಚಿ ಭದ್ರ ಮಾಡಿಕೊಳ್ಳುವುದೇ ಸರಕಾರದ ಸಾಧನೆಯಾಗುತ್ತಿರುವ ಈ ಕಾಲದಲ್ಲಿ ಎಲ್ಲಿ ಡಾಂಬರ್ ಹಾಕಬೇಕು ಎನ್ನುವುದೆಲ್ಲಾ ಯಾರಿಗೆ ಬೇಕಾಗಿದೆ? ಇಂಥಹದೇ ಸರಕಾರಗಳು ಮತ್ತೆ ಮತ್ತೆ ಬರುತ್ತಿದ್ದರೆ ಬಹುಷಃ ನನ್ನ ಮುಪ್ಪಿನಕಾಲದಲ್ಲಿ ನಾನು ನಕ್ಸಲೈಟ್ ಆದರೆ ಆಶ್ಚರ್ಯವಿಲ್ಲ.

ಈ ಹೊಂಡ ಹಾರುವಿಕೆಯಿಂದ ಬೇಸತ್ತು, ಈ ಬಾರಿ ಹೋಗುವಾಗ ಹಾಡುತ್ತಾ ಹೋಗಬೇಕು ಎಂದು ಒಂದು ರೀಮಿಕ್ಸ್ ರಚಿಸಿದ್ದೇನೆ. ಮುಂಗಾರು ಮಳೆಯ "ಕುಣಿದು ಕುಣಿದು ಬಾರೆ" ಇಂದ ಸ್ಫೂರ್ತಿಗೊಂಡು!


ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ

ಕುಣಿದು ಕುಣಿದು ಬನ್ನಿ
ಜಿಗಿದು ಜಿಗಿದು ಬನ್ನಿ
ಬರುವಾ ನಿಮ್ಮ ಜೊತೆಗೆ
ಅಮೃತಾಂಜನ್ ತನ್ನಿ
ರೋಡಲಿ ಹೊಂಡಾ ಕಂಡವರೇ
ಗಟಾರದಲ್ಲಿ ಇಳ್ಕೊಂಡ್ ಬನ್ನಿ
ರೋಡೇ ಮಾಯ
ನಮ್ಮೂರ್ ರೋಡೇ ಮಾಯ
ರೋಡಲಿ ಬೈಕು ಹೊಡೆಯಲು ಹೋಗಿ
ಮೈ ಕೈ ಗಾಯ

ಜಲ್ಲಿ ಕಲ್ಲು ಹಾಕಿ
ಮೇಲೆ ಮಣ್ಣು ಹಾಕಿ
ಡಾಂಬರ್‌ಗಾಗಿ ಕಾಯುತ ಕುಳಿತು
ಮಳೆಯಲಿ ಎಲ್ಲಾ ಕೊಚ್ಕೊಂಡ್ ಹೋಯ್ತು
ರೋಡೇ ಮಾಯ!

ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ

ಈ ಸಲ ಹಾಡಿಕೊಂಡು ಹೋಗುವಾಗ ದಾರಿ ಚಿಕ್ಕದಾಗುತ್ತದೋ ನೋಡಬೇಕು!