Thursday, February 6, 2014

ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ...

ದೇಶದ ರಾಜಕಾರಣದಲ್ಲಿ ಕೇವಲ ಮಫ್ಲರ್ ಕಟ್ಟಿಕ್ಕೊಂಡು ಎಲ್ಲರ ಚಳಿ ಬಿಡಿಸುರುವ ಕೇಜ್ರಿವಾಲರ ಬಗ್ಗೆ ಬರೆದು, ಬಹುತೇಕ ಮುಚ್ಚೇ ಹೋಗಿರುವ ನನ್ನ ಬ್ಲಾಗನ್ನು ಮತ್ತೆ ಚಾಲ್ತಿಯಲ್ಲಿ ತರುವ ಪ್ರಯತ್ನ ಇದಲ್ಲ. ಬರೆಯದಿದ್ದರೆ ಕೇಜ್ರಿವಾಲರಿಗೆ ಅಪಮಾನ ಎಂದು ಬರೆಯುತ್ತಿದ್ದೇನೆ!

ಮೊದಲೆಲ್ಲಾ ’ವಾಲ’ ಎಂದು ಕೇಳಿದಾಗಲೆಲ್ಲ ಶಬ್ದವನ್ನು ಪೂರ್ತಿಗೊಳಿಸಲು ಬಹಳಷ್ಟು ಆಯ್ಕೆಗಳಿರುತ್ತಿದ್ದವು. ಡಬ್ಬಾವಾಲ, ಟೋಪಿವಾಲ, ಚಾಯ್ ವಾಲ ಇತ್ಯಾದಿ. ಈಗ "___ವಾಲ" ಇದನ್ನು ಪೂರ್ತಿಗೊಳಿಸಿ ಎಂದು ಯಾರಿಗೇ ಕೇಳಿದರೂ ನೂರಕ್ಕೆ ತೊಂಬತ್ತೊಂಬತ್ತು ಜನ ಕೇಜ್ರಿವಾಲ ಎಂದೇ ಹೇಳುವುದು! ಪೊರಕೆ ಹಿಡಿದು ಕಸಗುಡಿಸುವುದಷ್ಟೇ ಅಲ್ಲ ರಜ್ಯವನ್ನೂ ಆಳಬಹುದು ಎಂದು ಹೇಳಿಕೊಟ್ಟ ಪೊರಕೆಮಾನವ ನಮ್ಮ ಕೇಜ್ರಿ.

ಇವರ ಧ್ಯಾನದಲ್ಲೇ ಟೋಪಿವಾಲ ಹಾಡು ಕೇಳುತ್ತಿದ್ದಾಗ ಅನಾಯಾಸವಾಗಿ ಬಂದ ರೀಮಿಕ್ಸ್ ಇದು.


ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ತುಂಬಾ ಜುಜಬಿ ಮನ್‌ಷಾ ನಾನು ಕಾಮನ್ ಮ್ಯಾನು ನನ್ನ ಫ್ಯಾನು 
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ನನ್ನ ಕೆಮ್ಮಿಗ್ ಮದ್ದೇ ಇಲ್ಲ ನನ್ನ ಮುಂದೆ ಕೆಮ್ಮಂಗಿಲ್ಲ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ
ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ನಾನು ತೊಟ್ಟ ಟೋಪಿಯನ್ನೇ ಜನರೆಲ್ರೂ ತೊಟ್ಟುಕೊಂಡ್ರು
ನಾನು ಕೂತ ಧರಣಿಗೇನೆ ಪೋಲೀಸ್ರು ರಜೆ ಹಾಕಿ ಬಿಟ್ರು
ನಾವ್ ಮಧ್ಯ ರಾತ್ರಿ ರೇಡ್ ಮಾಡ್ತಿವಿ... ಬೇರೆಯವ್ರಿಗ್ ಕ್ಯಾಕರ್ಸಿ ಉಗಿತಿವಿ
ನಮಗೆ ಮಿಷಿನ್ನು ಗನ್ನು ಬೇಡಾರೀ... ಧರಣಿ ಮಾಡೋಕ್ ಕೂತ್ರೆ ನಡುಗಿ ಸಾಯ್ತಾರ್ರೀ
ಗಾಂಧಿ ನೆಡೆದ ದಾರಿ ನಮ್ದು ಕೇಳಿರಿ... ಗಾಂಧಿ ವಿರುದ್ಧಾನೆ ಧರಣಿ ಮಾಡ್ತಿವಿ

ರೋಡಿನ್ ಮಧ್ಯ ಧರಣಿಯಲ್ಲಿ ಚಳೀಲಿ ಮಲ್ಗೋ ಕರ್ಮದಲ್ಲಿ
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ಭ್ರಷ್ಟಿಗಳ ಊರಿನಲ್ಲಿ ಲಂಚಾಸುರನ ಜಾತ್ರೆಯಲ್ಲಿ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ

ಅಣ್ಣ ತಮ್ಮ ಎಲ್ಲ ಬಿಟ್ಟೆ ನೀವೆ ಬಂಧು ಎಂದು ಭಾಷೆ ತೊಟ್ಟೆ
ಸರ್ಕಾರಿ ಬಂಗ್ಲೆ ಬಿಟ್ಟೆ ನನ್ನ ಕಾರಿನಲ್ಲೆ ನಾನು ಹೊರಟೆ ಬಿಟ್ಟೆ
ನಾವು ಕರೆಂಟ್ ಬಿಲ್ಲು ಅರ್ಧ ಮಾಡ್ತಿವಿ... ನಿಮ್ಮ ದುಡ್ಡಲ್ ಉಳಿದರ್ಧ ತುಂಬ್ತಿವಿ
ನಾವು ನೀರು ಎಲ್ಲರಿಗೂ ಕೊಡ್ತಿವಿ... ಜಾಸ್ತಿ ಕೊಟ್ರೆ ದುಡ್ಡು ಕೂಡಾ ತಗೊತಿವಿ
ತೊಂದ್ರೆ ಆದ್ರೆ ಒಂದು ರಿಂಗ್ ಮಾಡಿರಿ... ಸಾಕ್ಷಿ ಕೊಟ್ಟು ನೀವೆ ಜೈಲಿಗ್ ಹಾಕಿರಿ

ಮೊದ್ಲು ಸಾವ್ರ ಪ್ರೂಫು ಕೊಟ್ಟೆ ಈಗ ಎಲ್ಲ ಕಳ್ಕೊಂಡ್ ಬಿಟ್ಟೆ
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ನನ್ನ ಕೆಮ್ಮಿಗ್ ಮದ್ದೇ ಇಲ್ಲ ನನ್ನ ಮುಂದೆ ಕೆಮ್ಮಂಗಿಲ್ಲ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ

ಕೇಜ್ರಿ ಅವರ ಫ್ಯಾನ್ ಆಗಿರುವುದರಿಂದ ಹಾಗೂ ಕೇಜ್ರಿವಾಲರು ನನ್ನ ವಿರುದ್ಧ ದಾವೆ ಹಾಕಬಾರದೆಂದು ಕೊನೆಯ ಸಾಲು!
ಇದರಲ್ಲಿ ಹಾಕಿರುವ ಫೋಟೋ  "www.newsyaps.com" ದಿಂದ ಕದ್ದಿದ್ದು. 

Thursday, July 25, 2013

ಕೌರವರ ಮನೆಯ ಲಾಜಿಸ್ಟಿಕ್ ಪ್ರಾಬ್ಲಮ್ಸ್

ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲ! ನೀವು ಯಾವುದಾದರೊಂದು ಸಿನೆಮಾ ನೋಡಿದಾಗ, ಕಥೆ/ಕಾದಂಬರಿ ಓದಿದಾಗ ಎಷ್ಟೊಂದು ಪ್ರಶ್ನೆಗಳು ಏಳುತ್ತವೆ. ಆದರೆ ಕೆಲವೊಂದನ್ನು ನಾವು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವನು ಯಾಕೆ ಹಾಗೆ ಮಾಡಿದಾ... ಇವಳು ಯಾಕೆ ಹೀಗೆ ಮಾಡಿದಳು..? ಮೆಗಾ ಸೀರಿಯಲ್‌ಗಳನ್ನು ನೋಡಬೇಕಾದರಂತೂ ಒಂದೇ ಪ್ರಶ್ನೆ! ’ಇವರು ಯಾವಾಗ ಕಥೆ ಮುಂದುವರಿಸುತ್ತಾರೆ ?’. ಆಶ್ಚರ್ಯ ಎಂದರೆ ಕಾಲೇಜಿನಲ್ಲಿ ಪಾಠ ಕೇಳುವಾಗ ಮಾತ್ರ ಇಂತಹ ಸಮಸ್ಯೆಗಳು ಬರಲೇ ಇಲ್ಲಾ. ನಮ್ಮ ಲಕ್ಚರರ್‌ಗಳಿಗೇ ಇದರ ಕ್ರೆಡಿಟ್ ಸಲ್ಲಬೇಕು. ಇಂಜಿನಿಯರಿಂಗ್‌ನಲ್ಲಂತೂ ಪ್ರಶ್ನೆಗಳು ಉಧ್ಬವಿಸುವುದು ಹೋಗಲಿ ಪರೀಕ್ಷೆಯಲ್ಲಿ ಕುಳಿತಾಗ ಪ್ರಶ್ನೆಗಳಿಗೆ ಉತ್ತರಗಳೂ ಉದ್ಭವಿಸುತ್ತಿರಲಿಲ್ಲ. ಇದಕ್ಕೂ ಕ್ರೆಡಿಟ್ ಲಕ್ಚರರ್‌ಗಳಿಗೇ ಹೋಗಬೇಕಾದರೂ ನಮ್ಮ ಪಾಲೂ ಕೊಂಚ ಇದೆ.

ಚಿಕ್ಕಂದಿನಿಂದಲೂ ಪ್ರಶ್ನೆ ಕೇಳುವ ಮನಸ್ಥಿತಿ ನಮ್ಮದಲ್ಲ. ಕೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಲೇ ಬೆಳೆದಿರುವುದು ನಾವು. ಆದರೂ ಇತ್ತೀಚೆಗೆ ಜೀವನದ ಕೆಲವು ಬಗೆಹರಿಸಲಾಗದ ಸಮಸ್ಯೆಗಳು ಕಣ್ಣೆದುರಿಗೆ ಬಂದು ನಿಂತಾಗ ಅದರ ಬಗೆಗೆ ಯೋಚಿಸತೊಡಗುತ್ತೇವೆ. ಪ್ರಶ್ನೆಗಳು ಮೂಡುತ್ತವೆ. ಬೆಂಗಳೂರಿನಲ್ಲಿ ಬಹು ಅಪರೂಪಕ್ಕೆ ಮಳೆಗಾಲದಲ್ಲಿ ಮಳೆ. ಮನೆ ಎನ್ನುವುದು ಧೋಬಿಘಾಟ್ ಆಗಿ ಹೋಗಿದೆ. ಬಟ್ಟೆ ಹೊರಗೆ ಒಣಗಿಸುವಂತಿಲ್ಲ. ಒಳಗೆ ಒಣಗಿಸಿದರೆ ನಾಲ್ಕು ದಿನವಾದರೂ ಒಣಗುವುದಿಲ್ಲ. ಪ್ಯಾಂಟು ಶರ್ಟು, ಮನೆಯಲ್ಲಿ ಬರ್ಮುಡಾ ಧರಿಸುತ್ತಿರುವ ನಮಗೇ ಇಷ್ಟು ಸಮಸ್ಯೆಯಾದರೆ ಮಹಾಭಾರತದ ಕಾಲದಲ್ಲಿ ಕೌರವರ ಮನೆಯಲ್ಲಿ, ಗಂಡ ಹೆಂಡತಿ ಹಾಗೂ ನೂರಾಒಂದು ಮಕ್ಕಳಿದ್ದ ಆ ಮನೆಯಲ್ಲಿ ಇನ್ನೆಷ್ಟು ಸಮಸ್ಯೆ ಆಗಿರಲಿಕ್ಕೆ ಸಾಕು? ಮನೆಯಲ್ಲಿ ಬಟ್ಟೆ ಒಣಗಿಸಲಿಕ್ಕೆ ಜಾಗ ಹುಡುಕುವವರೇ ಎರಡು ಜನರಿದ್ದಿರಬೇಕು! ಬಹುಷಃ ಪ್ರತಿಯೊಬ್ಬರ ರೂಮಿನಲ್ಲಿ, ಮಧ್ಯ ಕಾರಿಡಾರ್‌ನಲ್ಲಿ, ಕೊನೆಗೆ ರಾಜಸಭೆಯಲ್ಲೂ ಸೀರೆ, ಪಂಚೆ ಒಣಗಿಸುತ್ತಿದ್ದರೇನೋ... ವ್ಯಾಸರಿಗೇ ಗೊತ್ತು.

ನನ್ನನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ ಇದಲ್ಲಾ. ನಾನು, ಕೆಲವು ಸಲ ನನ್ನ ತಮ್ಮ, ಊರಿಗೆ ಹೋದಾಗ ಅಪ್ಪನನ್ನು ಸೇರಿಸಿ ಮನೆಯಲ್ಲಿರುವವರು ಮೂರೇ ಜನ ಗಂಡಸರು. ಆದರೂ ಎಷ್ಟೋ ಬಾರಿ ಒಳ ಉಡುಪುಗಳ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಾಗಿವೆ. ಈಗಂತೂ ನನ್ನ ಬ್ರಾಂಡ್ ಇದೇ ಕಾರಣಕ್ಕೋಸ್ಕರ ಬದಲಾಯಿಸಿಕೊಂಡುಬಿಟ್ಟಿದ್ದೇನೆ! ನಿಕ್ಕರ್ ಹೇಗೋ ಕಂಡುಹಿಡಿದುಬಿಡಬಹುದು. ಈ ಬನಿಯನ್‌ಗಳದ್ದೇ ತಾಪತ್ರಯ. ಎಷ್ಟು ಬಾರಿ ಬೇರೆಯವರದ್ದನ್ನು ಧರಿಸಿದ್ದೇನೋ ಗೊತ್ತಿಲ್ಲ. ಇದನ್ನು ನೆನೆದುಕೊಂಡಾಗೆಲ್ಲಾ ನನಗೆ ಕಾಡುವ ಪ್ರಶ್ನೆ, ಮಹಾಭಾರತದ ಕಾಲದಲ್ಲಿ, ಕೌರವರ ಮನೆಯಲ್ಲಿನ ಪರಿಸ್ಥಿತಿ ಹೀಗಿದ್ದೀತು? ಆಗ ಚಡ್ಡಿ ಬಳಸುತ್ತಿದ್ದರೋ ಅಥವಾ ಲಂಗೋಟಿಯೋ? ಏನೇ ಆಗಲಿ... ನೂರಾಒಂದು ಜನ! ಎಲ್ಲರ ಲಂಗೋಟಿಗಳನ್ನಂತೂ ದಿನನಿತ್ಯವೂ ತೊಳೆಯಲೇ ಬೇಕು. ನೂರಾಒಂದು ಲಂಗೋಟಿಗಳನ್ನು ಎಲ್ಲಿ ಒಣಗಿಸುತ್ತಿದ್ದರು? ಒಂದೇ ಕಡೆ ಒಣಗಿಸಿಬಿಟ್ಟರೆ ಮುಗಿಯಿತು. ದಿನನಿತ್ಯವೂ ಬೇರೆ ಬೇರೆಯವರದ್ದೇ ಲಂಗೋಟಿಗಳು. ಎಲ್ಲರೂ ತಮ್ಮ ತಮ್ಮ ಬಚ್ಚಲಿನಲ್ಲೇ ಒಣಗಿಸಿಕೊಳ್ಳುತ್ತಿದ್ದರೂ ಎಂದಿಟ್ಟುಕೊಂಡರೆ, ಮನೆಯಲ್ಲಿ ಕನಿಷ್ಟ ಎಂದರೂ ನೂರಾಒಂದು ರೂಮುಗಳು.. ವಿಥ್ ಅಟ್ಯಾಚಡ್ ಬಾಥ್! ನಮ್ಮ ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆಯಂತೆ! ಬರಗೆಟ್ಟ ಸ್ಥಿತಿಯಲ್ಲೂ ರಾಷ್ಟ್ರಪತಿಗೆ ಇಷ್ಟೊಂದು ಐಶಾರಾಮೀ ಜೀವನ ಇರಬೇಕಾದರೆ, ರಾಜರ ಕಾಲದಲ್ಲಿ, ಕೌರವೇಶ್ವರನಿಗೆ ಇಷ್ಟೂ ಇಲ್ಲದಿದ್ದರೆ ಹೇಗೆ? ಆದರೂ ಕನ್‌ಫ್ಯೂಜನ್ ಬೇಡಾ ಎಂದು ಲಂಗೋಟಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ಹೊಲಿಸಿಬಿಡುತ್ತಿದ್ದರು ಎಂಬುದೇ ನನ್ನ ಊಹೆ.

ನೂರಾಒಂದನೆಯದು ಹೆಣ್ಣಾದುದರಿಂದ ಅವಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು ಎಂದಿಟ್ಟುಕೊಂಡರೆ, ಕೌರವರ ಈ ನೂರು ಮಕ್ಕಳು, ಅವರ ಹೆಂಡಿರುಗಳು, ಅವರ ಮಕ್ಕಳುಗಳು, ಒಟ್ಟಾಗಿ, ಕನಿಷ್ಟಪಕ್ಷ, ಒಂದು ನಾನೂರು ಐನೂರು ಜನರಾದರೂ ಇದ್ದಾರು. ಇವರೆಲ್ಲರೂ ಬೆಳಿಗ್ಗೆ ಶೌಚಕ್ಕೆ ಹೋಗಬೇಕು ಎಂದರೆ ಒಟ್ಟೂ ಎಷ್ಟು ಪಾಯಖಾನೆಗಳನ್ನು ಕಟ್ಟಿಸಿಯಾರು? ನಮ್ಮ ಮನೆಯಲ್ಲಿ ಎರಡು ಪಾಯಿಖಾನೆ ಇದ್ದು ಆರು ಜನರಿದ್ದಾಗಲೇ ಎಷ್ಟೋ ಬಾರಿ ಟೈಮಿಂಗ್ ಕ್ಲಾಷ್ ಆಗುತ್ತಿತ್ತು. ಕೌರವರ ಮನೆಯಲ್ಲಿ ಆಗದೇ ಇದ್ದೀತೇ? ಎಲ್ಲರ ರೂಮಿನಲ್ಲಿ ಕೊಮೋಡ್‌ ಅಂತೂ ಇರಲಿಕ್ಕೆ ಸಾಧ್ಯವಿಲ್ಲ. ಯಾಕಂದರೆ ಅದು ಈಗಿನ ಪದ್ಧತಿ. ಎಲ್ಲರೂ ಬಯಲಿಗೆ ಹೋಗುತ್ತಿದ್ದರು ಎನ್ನುವುದಕ್ಕೂ ಸಾಧ್ಯವಿಲ್ಲ. ಎಲ್ಲಾ ರಾಜಮನೆತನದವರು. ಬಯಲಿಗೆ ಹೋದರೆ ಜನಸಾಮಾನ್ಯರು ಏನು ಮಾಡಬೇಕು. ಬೆಳಿಗ್ಗೆಯಿಂದ ಪಾಯಿಖಾನೆಗೆ ಕ್ಯೂ ನಿಲ್ಲುತ್ತಿದ್ದರು ಎಂದಿಟ್ಟುಕೊಂಡರೆ ಕೆಲವರ ಸರದಿ ಬರುವಷ್ಟರಲ್ಲಿ ಮಾರನೇ ದಿನವೇ ಆಗಿಹೋಗುತ್ತಿತ್ತೋ ಏನೊ. ಸಾಲಾಗಿ ನಾನೂರು ಪಾಯಖಾನೆ ಕಟ್ಟಿಸಿಟ್ಟಿದ್ದರು ಎಂದಿಟ್ಟುಕೊಂಡರೆ ಅದರಲ್ಲಿ ಖಾಲಿ ಯಾವುದಿದೆ ಎಂದು ಕಂಡುಹಿಡಿಯುವುದಕ್ಕೆ ಏನಾದರೂ ಉಪಾಯ ಮಾಡಿರಲೇ ಬೇಕು. ಇಲ್ಲದಿದ್ದರೆ ಹುಡುಕುವಷ್ಟರಲ್ಲೇ ಅವಘಡ ಸಂಭಿವಿಸುವ ಸಾಧ್ಯತೆಗಳೇ ಜಾಸ್ತಿ. ಈ ಸಮಸ್ಯೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ವ್ಯಾಸರೇ ಹೇಳಬೇಕು.

ಒಟ್ಟಿನಲ್ಲಿ ನನಗನಿಸುವುದೇನಪ್ಪಾ ಅಂದರೆ, ಈ ಎಲ್ಲಾ ಕಾರಣಗಳಿಗೇ, ಕೌರವರಿಗೆ ವಿದ್ಯಾಭ್ಯಾಸಕ್ಕೆ, ಶಸ್ತ್ರಾಭ್ಯಾಸಕ್ಕೆ ಸಮಯವಿಲ್ಲದೆ ಎಲ್ಲರೂ ಕೆಲಸಕ್ಕೆ ಬಾರದವರಾಗಿ, ಪಾಂಡವರ ಎದುರು ಸೋಲಬೇಕಾಯಿತು! ಅದಕ್ಕೇ ಹಿರಿಯರು ಹೇಳಿದ್ದು.
ಚಿಕ್ಕ ಸಂಸಾರ... ಚೊಕ್ಕ ಸಂಸಾರ...
ಒಂದೇ ಪಾಯಖಾನೆಯಿದ್ದರೂ ಎಲ್ಲರಿಗೂ ಸಸಾರ!

Monday, July 1, 2013

ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?

ಕೆಳಗಿನ ಪ್ಯಾರಾ "ಹೀಗೂ ಉಂಟೆ" ಸ್ಟೈಲ್ ಅಲ್ಲಿ...

ಎಂಟು ವರ್ಷ ಸಾಫ್ಟ್‌ವೇರಲ್ಲಿ ಕೆಲ್ಸಾ... ಕೈ ತುಂಬಾ ಸಂಬಳಾ... ಹೆಂಡ್ತಿ ಮತ್ತು ಮಗು... ಚಿಕ್ಕ ಚೊಕ್ಕ ಸಂಸಾರ... ಇಷ್ಟೆಲ್ಲಾ ಇದ್ರೂ ಯಾವುದೋ ಒಂದು ಕೊರತೆ! ಲೈಫಲ್ಲಿ ತೃಪ್ತಿ ಅನ್ನೋದೇ ಇಲ್ವಾ? ಸಂತೋಷ ಅನ್ನೋದು ಎಲ್ಲಿದೆ? ಎಲ್ಲಾ ಇದ್ರೂ ಏನೋ ಒಂದು ಕಮ್ಮಿ... ಅದೇನು? ಹುಡಕಿದ್ರೆ ಸಿಗುತ್ತಾ ಅಥ್ವಾ ಇಲ್ವಾ? ಅದೇನು ಅಂತಾ ಹುಡ್ಕಕ್ ಆಗ್ದೇ ಇರೋದಾದ್ರು ಯಾಕೆ? ಇದಕ್ಕೆ ಉತ್ತರಾ ಸಿಗತ್ತಾ ಅಥ್ವಾ ಇಲ್ವಾ..? ಹೀಗೆ ಯೋಚ್ಸಕ್ಕೆ ಶುರು ಮಾಡಿದ್ರೆ ನಮಗೆ ಕಾಡುವ ಕಟ್ಟಕಡೆಯ ಪ್ರಶ್ನೆ "ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?"

ಈ ಸಾಫ್ಟ್‌ವೇರ್ ಜೀವನದಲ್ಲಿ ಏನಿದೆ ಅಂತಾ ಜನಾ ಅಷ್ಟೊಂದು ಕ್ರೇಸ್ ಹುಟ್ಟುಹಾಕಿದ್ರು ನನಗಂತೂ ತಿಳೀತಾ ಇಲ್ಲಾ. ’ಕೈ ತುಂಬಾ ಸಂಬಳ’ ಅನ್ನೋದೊಂದೇ ಮಾನದಂಡವಾಗಿಟ್ಕೊಂಡು ಎಲ್ಲಾ ತಂದೆ ತಾಯಂದ್ರು ಮಕ್ಳನ್ನಾ ರಾತ್ರಿ ಕಂಡ ಬಾವೀಲಿ ದಬ್ಬಿಬಿಟ್ರಲ್ಲಾ ಅನ್ನಿಸ್ತಿದೆ. ಈಗೀಗ ಹುಡುಗರೇ ಬುದ್ಧಿವಂತರಾಗಿಬಿಟ್ಟಿದಾರೆ. ಅವರೇ ಹೋಗಿ ಬಾವೀಲಿ ಬೀಳ್ತಾರೆ. ಒಟ್ನಲ್ಲಿ ಹೇಳೋದಾದ್ರೆ ಮನಃಪೂರ್ವಕವಾಗಿ ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ ಅಂತಾ ಹೇಳೋ ಸಾಫ್ಟ್‌ವೇರ್ ಇಂಜಿನೀಯರ್‌ಗಳು 20%-30% ಇರಬಹುದು ಅನ್ಸತ್ತೆ! ಹೀಗೆ ಯಾಕ್ ಆಗೋಯ್ತು ಅಂತಾ ತಲೆಮೇಲೆ ಕೈ ಆಡಸ್ತಾ ಒಂದು ರೀಮಿಕ್ಸ್ ...

'ಅಣ್ಣಾ ಬಾಂಡ್’ ಚಿತ್ರದ ’ಬೋಣಿ ಆಗದ ಹೃದಯಾನಾ’ ಧಾಟೀಲಿ...

ಇಂಟರ್ನೆಟ್ಟಿನ ಕೋಡನ್ನಾ ಕಾಪಿ ಪೇಸ್ಟು ಮಾಡ್ಕೊಂಡು
ಕಸ್ಟಮರ್ರಿಗೆ ಕಾಯುವ ಕ್ಯಾಮೆ ಬೇಕಿತ್ತಾ
ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ.., ಬೇಕಿತ್ತಾ...
ಮತ್ತೆ ಮತ್ತೆ ನನ್ನನ್ನೇ ನಾನೇ ಕ್ಷಮಿಸಿಕೊಳ್ಳುತ್ತಾ
ಮಾನಿಟರ್‌ನಾ ಪ್ರೀತ್ಸೋ ಕ್ಯಾಮೆ ಬೇಕಿತ್ತಾ
ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ...
ಹಾರಾಡ್ತಿರೋ ಮನಸಿಗೊಂದು ಕ್ಯೂಬು ಬೇಕಿತ್ತಾ
ಬಣ್ಣ ಕಾಣದಿರುವ ಬ್ಲಾಕ್ ಎಂಡ್ ವೈಟು ಸ್ಕ್ರೀನು ಬೇಕಿತ್ತಾ
ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?

ಕೀಬೋರ್ಡನ್ನಾ ಕುಟ್ಕೊಂಡು, ಮೌಸನ್ನಾ ಹಿಡ್ಕೊಂಡು
ಸೊಂಟಾ ನೋವು ಮಾಡಿಕೊಂಡ ನಾನು ಲೂಸಾ
ನನಗೂ ಬೋರಿಂಗ್ ಲೈಫಿಗೂನು ಖಾಸಾ ಖಾಸಾ
ಲೈಫು ಒಂದು ಪೋಯಮ್ಮು, ಇರಲೇ ಬೇಕು ಫ್ರೀಡಮ್ಮು
ಕುಂತೂ ನೋಡ್ದೆ ನಿಂತೂ ನೋಡ್ದೆ ಯೂಸಾಗ್ತಾ ಇಲ್ಲಾ
ಎದ್ರೂ ಕೂತ್ರೂ ಕ್ಯೂಬು ಬಿಟ್ರೆ ಬೇರೆ ಇಲ್ಲಾ
ಕೀಬೋರ್ಡ್ ಕುಟ್ಟೋ ಸೌಂಡು ಕೇಳ್ದ್ರೆ ಎಂಥಾ ಸಂಗೀತಾ
ಬಣ್ಣಾ ಮಾಸಿದ ಸ್ಕ್ರೀನಿನಲ್ಲಿ ನೋಡ್ದೆ ಎಂಥಾ ಚಿತ್ತಾರಾ
ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇ ಬೇಕಿತ್ತಾ

ಟೆಕ್ಕಿಗಳಿಗೆ ಮಾತ್ರಾನೆ ಹೆಣ್ಣು ಕೊಟ್ರು ನಮ್ಮೋರು
ಹೆಣ್ಣು ಪಡ್ಯಕ್ ಹೋಗಿ ಜನ ಹಳ್ಳಕ್ಕೇ ಬಿದ್ರು
ಕೆಲವ್ರಂತೂ ಹೆಣ್ಣಿಲ್ದೇನೇ ಕೂದಲ್ ಕಳ್ಕಂಡ್ರು
ಆಟ ಪಾಠ ಮರ್ತೋಯ್ತು ಕುಟ್ಟೋ ಕೆಲ್ಸ ಗಟ್ಟಾಯ್ತು
ಹೆಂಡ್ತೀ ಜೊತೆಗೂ ಫೇಸ್‌ಬುಕ್ಕಲ್ಲಿ ಚಾಟು ಶುರುವಾಯ್ತು
ಮಕ್ಕಳನ್ ಅನ್‌ಲೈನ್ ಶಾಪಿಂಗ್ ಮಾಡೋ ಕಾಲ ಬಂದೋಯ್ತು
ಎಲ್ಲಾ ಇದ್ರೂ ಕೂಡಾ ನಮ್ದು ಒಂದೇ ಲಾಜಿಕ್ಕು
ಲೈಫಲಿ ಆಸ್ತಿ ಮಾಡಿ ತೀರಿಕೊಳ್ಳೋದಿಕ್ಕೇ ಲಾಯಕ್ಕು
ಅಪ್ಪಿ ತಪ್ಪಿ ಬದುಕೋ ಅರ್ಥ ಹೊಳದ್ರೇ ಮ್ಯಾಜಿಕ್ಕು

ಸೂರ್ಯ ಹುಟ್ಟೋ ಟೈಮಲ್ಲಿ ಕ್ಯಾಲೆಂಡರ್ ನೋಡುತ್ತಾ
ವೀಕೆಂಡಿಗೆ ಕಾಯುವ ಕ್ಯಾಮೆ ಬೇಕಿತ್ತಾ

ಎಲ್ಲಿ ನೋಡಿದರಲ್ಲಿ ಕ್ಯೂಬುಗಳು, ಮಧ್ಯದಲ್ಲಿ ಅರೆನೆರೆತ ಕೂದಲುದುರಿರುವ ತಲೆಗಳು, ಬೇಕೋ ಬೇಡವೋ ಅನ್ನುವ ನಗೆಗಳು, ಕಾಫೀ ಕಪ್‌ಗಳು, ಗಂಟೆಗೊಮ್ಮೆ ಟಾಯ್ಲೆಟ್ ವಿಸಿಟ್‌ಗಳು... ಕಟಪಟ ಸದ್ದುಗಳು, ಬಿಟ್ಟಿ ಮೆಸೇಜ್‌ಗಳು, ಪ್ರಾಣ ಉಳಿಸುವ ಲಂಚ್‌ಗಳು, ಟೈಂ ಪಾಸ್‌ಗಾಗಿ ಮೀಟಿಂಗ್‌ಗಳು, ಕಳೆದು ಹೋಗುತ್ತಿರುವ ಟೈಂಗಳು... ಇಷ್ಟರಲ್ಲೇ ನಮ್ಮ ಲೈಫ್‌ಗಳು...!

Tuesday, June 18, 2013

ಗುಟ್ಕಾ ನಿಷೇಧ ಹಾಗೂ ಸೈಡ್ ಇಫೆಕ್ಟ್ಸ್

ಯಾರು ಏನೇ ಹೇಳಿಕೊಳ್ಳಲಿ, ಸರ್ಕಾರವನ್ನು ತೆಗಳುವವರು ತೆಗಳುತ್ತಲೇ ಇರಲಿ. ಆದರೆ ಇವರು ಯಾರೂ ನಮ್ಮ ಘನ
ಸರ್ಕಾರದ ಸದುದ್ದೇಶವನ್ನು ತಿಳಿದುಕೊಳ್ಳುತ್ತಲೇ ಇಲ್ಲ! ನೇರವಾಗಿ ಹೇಳಿಕೊಳ್ಳಲಾಗದ ಕಾರಣಗಳು ’ಗುಟ್ಕಾ’ ನಿಷೇಧದ ಹಿಂದಿರುವುದು ಸ್ವಲ್ಪ ಯೋಚಿಸಿದವರಿಗೆಲ್ಲರಿಗೂ ಅರಿವಾಗುತ್ತದೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಪ್ರತಿಫಲವಾಗಿ ಒಳಿತು ಕೆಡಕುಗಳೆರಡೂ ಆಗೇ ಆಗುತ್ತದೆ. ಈ ನಿರ್ಧಾರವೂ ಇದೇ ರೀತಿಯ ಮಿಶ್ರ ಪ್ರತಿಫಲಗಳನ್ನು ಹೊಂದಿದೆ. ಮೊದಲಿಗೆ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿನ ಮರ್ಮ ತಿಳಿದುಕೊಳ್ಳೋಣ.

ಭಾರತದ ಅತೀ ದೊಡ್ಡ ಸಮಸ್ಯೆ ಯಾವುದು? ಜನಸಂಖ್ಯೆ! ಈ ಜನಸಂಖ್ಯೆ ನಿವಾರಣೆಗೆ ಸರ್ಕಾರ ಎಷ್ಟೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.. ಎಷ್ಟೊಂದು ಖರ್ಚು ಮಾಡಿಲ್ಲ! ಸರ್ಕಾರಿ ಆಸ್ಪತ್ರೆಗಳಲ್ಲಿ ನಿರೋಧ್‌ಗಳನ್ನೂ ಪುಗ್ಸಟ್ಟೆಯಾಗಿ ಕೊಟ್ಟರು. ಜನ ಅದನ್ನು ಮಕ್ಕಳು ಆಡುವ ಬಲೂನ್ ಎಂದುಕೊಂಡರೇ ಹೊರತು ಉಪಯೋಗ ತೆಗೆದುಕೊಂಡಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟಿರುವ ಸರ್ಕಾರ ಈಗ ’ಗುಟ್ಕಾ’ ನಿಷೇಧಿಸಿದೆ! ಇದರ ಹಿಂದಿರುವ ಕಾರಣ ಸಿಂಪಲ್ಲು. ಗುಟ್ಕಾ ತಿಂದರೆ ಎಷ್ಟು ಜನ ಸಾಯಬಹುದು? ಕ್ಯಾನ್ಸರ್ ಆಗಿ ಹೆಚ್ಚು ಅಂದರೆ ಒಬ್ಬನೇ ಒಬ್ಬ ಸಾಯಬಹುದು. ಅದನ್ನೇ ನಿಷೇಧಿಸಿಬಿಟ್ಟರೆ? ಗುಟ್ಕಾ ಸೇವಿಸುವವನು ಚಟಕ್ಕಾಗಿ ಏನಾದರೂ ಮಾಡಲೇ ಬೇಕಲ್ಲಾ... ಅವನ ಮುಂದಿರುವ ನೇರವಾದ ಆಯ್ಕೆ ಸಿಗರೇಟ್. ಗುಟ್ಕಾ ಸೇವಿಸುವ ಎಲ್ಲಾ ಜನರು ಗುಟ್ಕಾ ತ್ಯಜಿಸಿ ಸಿಗರೇಟ್ ಸೇದುವುದನ್ನು ರೂಢಿಸಿಕೊಂಡರೆ, ಅವನೊಟ್ಟಿಗೆ ಅವನು ಬಿಟ್ಟ ಹೊಗೆಯಲ್ಲೇ ಬದುಕಬೇಕಾದ ಇನ್ನೂ ಮೂರ್ನಾಲ್ಕು ಜನರನ್ನು ಕರೆದುಕೊಂಡೇ ಪರಲೋಕಕ್ಕೆ ಧಾವಿಸುತ್ತಾನೆ! ಜನಸಂಖ್ಯೆ ಕಡಿಮೆಯಾಗುವ ಮಟ್ಟ ಮೂರ್ನಾಲಕ್ಕು ಪಟ್ಟು ಜಾಸ್ತಿಯಾಗುತ್ತದೆ! ಈ ದೇಶೋಧ್ಧಾರದ ಕೆಲಸವನ್ನು ಅರ್ಥ ಮಾಡಿಕೊಳ್ಳದ ಜನ ಈ ನಿಯಮ ದುರುದ್ದೇಶದ್ದು ಎನ್ನುತ್ತಿದ್ದಾರೆ. ದೇವರೇ ಅವರಿಗೆ ಬುದ್ಧಿ ಕೊಡಬೇಕು.

ಆದರೂ ಈ ನಿರ್ಧಾರದಿಂದ ಜನರಿಗೆ ತೊಂದರೆಗಳೇ ಇಲ್ಲಾ ಎಂದೇನಲ್ಲಾ. ಬಹಳಷ್ಟು ತೊಂದರೆಗಳುಂಟಾಗುತ್ತವೆ. ಈ ಕೆಳಗಿನವು ಪ್ರಮುಖವಾದವುಗಳು.

೧. ನಗರದ ಧೋಬಿಗಳಿಗೆ ಕೆಲಸ ಕಮ್ಮಿಯಾಗಲಿದೆ! ಜನ ಗುಟ್ಕಾ ಸೇವಿಸಿ, ಬಸ್‌ಸ್ಟಾಪ್ ಗಳಲ್ಲಿ, ಬಸ್ ಚಲಿಸುವಾಗ, ಅಥವಾ ಅವರೇ ಚಲಿಸುತ್ತಿರುವಾಗ ಅತ್ತ ಇತ್ತ ನೋಡದೆ ಉಗುಳಿ ಪಕ್ಕದವರ ಬಟ್ಟೆಗೆ ಕೆಂಪು ಬಣ್ಣ ಬಳಿಯುವುದು ಕಡಿಮೆಯಾಗುವುದರಿಂದ ನಗರದ ಧೋಬಿಗಳಿಗೆ ಇದರಿಂದ ಲಾಸ್ ಆಗಲಿದೆ!

೨. ಪೌರ ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ! ಕಸಗುಡಿಸುವವರಿಗೆ ಕಡಿಮೆ ಕೆಲಸ ಬೀಳುವುದರಿಂದ ಅವರ ಸಂಖ್ಯೆ ತಗ್ಗಿಸಲು ಮುನಿಸಿಪಾಲಿಟಿಯವರು ನಿರ್ಧರಿಸಬಹುದು.

೩. ಶಬ್ದ ಮಾಲಿನ್ಯ ಹೆಚ್ಚಲಿದೆ! ಗುಟ್ಕಾ ತಿಂದು ಮಾತನಾಡಲಾಗದೆ 10-15 ನಿಮಿಷ ಮೌನವೃತ ಆಚರಿಸುವ ಜನ ಗುಟ್ಕಾ ನಿಷೇಧದಿಂದಾಗಿ ಬಾಯಿಗೆ ಬೀಗ ಹಾಕುವ ಕೆಲಸವನ್ನು ಬಿಡುತ್ತಾರೆ. ಈಗಲೇ ಲಿಮಿಟ್ ಮೀರಿರುವ ಶಬ್ದಮಾಲಿನ್ಯ ಇನ್ನೆಷ್ಟು ತೊಂದರೆ ತಂದೊಡ್ಡಬೇಕೋ...

೪. ಕಲಾರಸಿಕರ ಕೊರತೆ ಎದ್ದುಕಾಣಲಿದೆ! ಯಾವುದೇ ಸಂಗೀತ ಕಚೇರಿಯಾಗಲಿ, ನಾಟಕವಾಗಲಿ, ನೃತ್ಯವಾಗಲಿ ನೆಡೆಯುತ್ತಿರುವಾಗ ಪ್ರೇಕ್ಷಕರಲ್ಲಿ ಆಸಕ್ತಿಯಿಂದ ಕೇಳುತ್ತಿರುವ/ನೋಡುತ್ತಿರುವ ಪ್ರೇಕ್ಷಕರಲ್ಲಿ ಗುಟ್ಕಾ ಸೇವಿಸಿದವರ ಸಂಖ್ಯೆಯೇ ಹೆಚ್ಚು. ಗುಟ್ಕಾ ಸೇವಿಸಿರುವುದರಿಂದ ಅಕ್ಕ ಪಕ್ಕದವರ ಹತ್ತಿರ ಮಾತನಾಡಲಾಗದೆ ಮುಂದೆ ನೆಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಈ ನಿರ್ಧಾರದ ನಂತರ, ಸಿಗರೇಟ್ ಸೇದಲು ಎದ್ದು ಹೋಗಬಹುದು. ಅಥವಾ ಪಕ್ಕದವರ ಜೊತೆ ಹರಟುತ್ತಾ ಕೂರಬಹುದು. ಕಲಾವಿದರಂತೂ ಈ ಗುಟ್ಕಾವನ್ನು ಮಿಸ್ ಮಾಡಿಕೊಳ್ಳುತ್ತಾರೆ.

೫. ದಾರಿ ತಪ್ಪಿಸಿಕೊಂಡವರಿಗೆ ದೇವರೇ ಗತಿ! ಗುಡ್ಡಗಾಡಿನಲ್ಲಿ ಓಡಾದಿದವರಿಗೆ ಈ ಪರಿಸ್ಥಿತಿಯ ಅರಿವು ಸಹಜವಾಗೇ ಆಗುತ್ತದೆ. ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆಯೇ ಇಲ್ಲವೇ ಎನ್ನುವುದನ್ನು ನಿರ್ಧಾರ ಮಾಡುವುದು ದಾರಿಯ ಪಕ್ಕದಲ್ಲಿ ಬಿದ್ದ ಗುಟ್ಕಾ ಚೀಟಿಗಳು. ಗುಟ್ಕಾ ನಿಷೇಧದಿಂದ ಎಲ್ಲಾ ದಾರಿಗಳೂ ಸುಡುಗಾಡಿಗೇ ಕೊಂಡೊಯ್ಯುತ್ತವೇನೋ ಎಂದು ಭಾಸವಾಗಬಹುದು.

ಇಷ್ಟೊಂದು ಅನಾನುಕೂಲತೆಗಳಿದ್ದರೂ ಭಾರತ ನಿರ್ಮಾಣಕ್ಕೋಸ್ಕರ ಜನ ಹಾಗೂ ಸರ್ಕಾರ ಬದ್ಧವಾಗಿ ನಿಂತು ಗುಟ್ಕಾವನ್ನು ನಿಷೇಧಿಸಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಸರ್ಕಾರ ಮೇಲ್ಕಂಡ ಅನಾನುಕೂಲತೆಗಳಿಗೂ ಪರಿಹಾರ ಕಂಡುಹಿಡಿಯುತ್ತದೆ ಎನ್ನುವುದು ಒಬ್ಬ ಜನಸಾಮಾನ್ಯನ ವಿಶ್ವಾಸ!