Thursday, February 21, 2008

ಶ್...!!! ಅಣ್ಣಾವ್ರು ಮಲ್ಗವ್ರೆ.

ಅದೊಂದು ಕಾಲ. ಬೆಳಗಾಗಿ 9 ಗಂಟೆಗೆ ಆಫೀಸಿಗೆ ಹೋಗುವುದು. ಅಫೀಸ್ ಐಡಿ, ಜಿಮೇಲ್ ಐಡಿ, ಯಾಹೂ ಐಡಿ, ರೆಡಿಫ್ ಐಡಿ... ಅಬ್ಬಬ್ಬಾ ಎಷ್ಟೊಂದು ಮೇಲ್ ಐಡಿಗಳನ್ನು ಚೆಕ್ ಮಾಡಬೇಕು. ಆಫೀಸ್ ಐಡಿಗೆ ಬಂದ ಮೇಲ್‍ಗಳನ್ನು ನನ್ನ ಸಿಸ್ಟಮ್‌ನಲ್ಲೇ ಚೆಕ್ ಮಾಡಿಬಿಡಬಹುದು. ಆದರೆ ಈ ಪ್ರೈವೇಟ್ ಐಡಿಗಳಿಗೆ ಇಂಟರ್ನೆಟ್ ಬೇಕು. ನಮ್ಮದೋ ಪಕ್ಕಾ ಸ್ವದೇಶೀ ಕಂಪನಿಯಾಗಿತ್ತು. ವಿಶ್ವದಲ್ಲಿರುವ ಎಲ್ಲಾ ಸೈಟ್‌ಗಳನ್ನೂ ಬ್ಲಾಕ್ ಮಾಡಿಬಿಟ್ಟಿದ್ದರು. ಗೂಗಲ್ ಒಂದನ್ನು ಬಿಟ್ಟು. ಆದರೆ ಗೂಗಲ್‌ನಲ್ಲಿ ಹುಡುಕಾಟ ನೆಡೆಸಿದ ಮೇಲೆ ಬಂದ ಲಿಂಕ್‌ಗಳನ್ನು ಕ್ಲಿಕ್ಕಿಸಿದರೆ, ಯಾವುದೂ ಹತ್ತುತ್ತಿರಲಿಲ್ಲ. ಬಹುತೇಕ ಎಲ್ಲವೂ ಬ್ಲಾಕ್. ಅದಕ್ಕಾಗಿ ಇಂತಹ ಪ್ರೈವೇಟ್ ಐಡಿಗಳಿಗೆ ಬಂದ ಸಂದೇಶಗಳನ್ನು ನೋಡಲು ಲೈಬ್ರರಿಗೆ ಹೋಗಬೇಕಾಗಿತ್ತು. ಅಲ್ಲಿ ಹೋದಮೇಲೆ, ಪ್ರಜಾವಾಣಿ, ವಿಜಯಕರ್ನಾಟಕ ಬಿಡಲು ಆಗುತ್ತದೆಯೇ? ಎಲ್ಲವನ್ನೂ ಮುಗಿಸಿ ವಾಪಸ್ ನನ್ನ ಸ್ಥಳಕ್ಕೆ ಬರುವಾಗ ಆಗಲೇ 10 ಗಂಟೆ! ಗೆಳೆಯರೆಲ್ಲಾ ತುದಿಗಾಲ ಮೇಲೆ ನಿಂತಿರುತ್ತಿದ್ದರು. ಯಾಕೆಂದರೆ ಇದು ಟೀ ಟೈಮ್.

ಟೀ ಕುಡಿಯುವಾಗ ಸುಮ್ಮನೇ ಕುಡಿಯಲಾಗುತ್ತದೆಯೇ? ನಮ್ಮ ಅಫೀಸಿಂದ ಪ್ರಾರಂಭಿಸಿ ಅಕ್ಕ ಪಕ್ಕದ ಅಫೀಸುಗಳನ್ನು ಮುಗಿಸಿ ಜಗತ್ತೆಲ್ಲವನ್ನೂ ಸುತ್ತಿಕೊಂಡು ಬರುತ್ತಿತ್ತು ನಮ್ಮ ಸುದ್ದಿಗಳ ಸಂಗ್ರಹ. ಹೀಗೆ ಸಾಮಾನ್ಯಜ್ಞಾನ ಹೆಚ್ಚು ಮಾಡಿಕೊಂಡಾದ ಮೇಲೆ ವಾಪಸ್ ನಮ್ಮ ಸ್ಥಳಕ್ಕೆ ಹೋಗುವಷ್ಟರಲ್ಲಿ 10:45 ಅಥವಾ 11ಗಂಟೆ. ಅಂತೂ ದಿನದ ಕೆಲಸ ಪ್ರಾರಂಭಿಸೋಣವೆಂದರೆ, ಎಲ್ಲಿಂದ ಪ್ರಾರಂಭಿಸುವುದು ಎಂಬುದೇ ದೊಡ್ಡ ಚಿಂತೆ. ಅಷ್ಟಕ್ಕೂ ಇದನ್ನು ಇವತ್ತೇ ಮುಗಿಸಬೇಕು ಎಂಬ ಗಡಿಬಿಡಿಯಿಲ್ಲ. ಇದನ್ನು ಶುರು ಮಾಡಿದರೆ ಅರ್ಧ ಗಂಟೆಯಲ್ಲೇ ಮುಗಿಸಿ ಬಿಡಬಹುದು. ಅದಿಕ್ಕೆ ಇದನ್ನು ಆಮೇಲೆ ನೋಡಿದರಾಯಿತು. ಅದೋ... ಛೆ... ತಲೆಗೇ ಹತ್ತುತ್ತಿಲ್ಲ. ಹೇಗಾದರೂ ಮುಗಿಸಬೇಕು. ಏನು ಮಾಡುವುದಪ್ಪಾ ಎಂದು ಯೋಚಿಸುವಷ್ಟರಲ್ಲಿ 12ಗಂಟೆ. ಈಗ ಊಟದ ಸಮಯ. ಎಲ್ಲಾರು ಮಾಡುವುದು ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ... ಗೇಣು ಬಟ್ಟೆಗಾಗಿ.

12ಗಂಟೆಗೇ ಊಟಾನಾ? ಎಂದು ಕೆಲವರು ಆಶ್ಚರ್ಯ ಪಡಬಹುದು. ಆದರೆ ಇದಕ್ಕೂ ತಡವಾಗಿ ಹೋದರೆ ಊಟಕ್ಕೆ ದೊಡ್ಡ ಕ್ಯೂ ನಿಂತಿರುತ್ತದೆ. ಅಷ್ಟೇ ಅಲ್ಲದೆ ಕುಳಿತುಕೊಳ್ಳಲೂ ಜಾಗ ಹುಡುಕಬೇಕಾಗುತ್ತದೆ. ಆದ್ದರಿಂದ ಸೇಫ್ಟಿಗೆ ಎಂದು 12ಕ್ಕೆ ಕೆಫೆಟೇರಿಯಾಕ್ಕೆ ಹಾಜರ್. ಥತ್... ಇವತ್ತೂ ಅದೇ ಪಲ್ಯ. ಈ ಚಪಾತಿಯನ್ನು ಹರಿಯಲು ಮೊದಲು ಜಿಮ್‌ಗೆ ಹೋಗಿ ಬರಬೇಕಿತ್ತು. ಈ ಕಿತ್ತೋಗಿರೋ ರಸಂನಲ್ಲಿ ಏನೂ ಇಲ್ಲಾ... ನೀರಿಗೆ ಮೆಣಸಿನ ಪುಡಿ ಕಲಸಿ ಕೊಟ್ಟಿದಾರೆ! ಎನ್ನುವ ಕಮೆಂಟ್‌ಗಳ ನಡುವೆ ಊಟ. ಊಟ ಮಾಡೋದು, ಇಡೀ ದಿನ ಕಂಪ್ಯೂಟರ್ ಮುಂದೆ ಕೂಡೋದು... ಇದನ್ನೇ ಮಾಡಿದ್ರೆ ಬೊಜ್ಜು ಬರಲ್ವಾ? ಸ್ವಲ್ಪಾನೂ ಬಾಡಿಗೆ ಎಕ್ಸರ್ಸೈಜ್ ಇಲ್ದೇ ಇದ್ರೆ ಹೇಗೆ? ಎಂದು ಕೇಳಿಕೊಂಡು ಒಂದು ರೌಂಡ್ ಕ್ಯಾಂಪಸ್ ಸುತ್ತಾ ತಿರುಗಾಡಿಕೊಂಡು ಬಂದು ವಾಪಸ್ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಒಂದೂವರೆ ಅಥವಾ ಎರಡು ಗಂಟೆ!

ಮತ್ತೆ ಕನ್‌ಫ್ಯೂಜನ್ ಶುರು. ಯಾವ್ ಕೆಲಸ ಕೈಗೆತ್ತಿಕೊಳ್ಳಲಿ ಅಂತ. ಯಾವುದೋ ಒಂದನ್ನು ಎತ್ತಿಕೊಂಡರಾಯಿತು ಎಂದುಕೊಂಡು ಕವಡೆ ಹಾಕಿ ಒಂದು ಕೆಲಸ ಶುರು ಮಾಡುವುದು. ಒಂದರ್ಧ ಗಂಟೆ ಕಳೆದಿರುವುದಿಲ್ಲ. ಆಗಲೇ ಕಣ್ಣು ಕೂರುತ್ತಿದೆ! ಬೆಳಗ್ಗೆಯಿಂದ ದುಡಿದು ದುಡಿದು ಸುಸ್ತಾದುದಕ್ಕಿರಬೇಕು! ಹಾಗೆಯೇ ಕೊಂಚ ಕುರ್ಚಿಗೆ ಒರಗಿಕೊಂಡು ನಿದ್ರೆ ಮಾಡಿದರಾಯಿತು ಎಂದಂದುಕೊಂಡು ಒರಗಿದರೆ, ಗಡದ್ದಾದ ನಿದ್ರೆಯೇ ಬಂದುಬಿಡಬೇಕೆ? ಎಚ್ಚರವಾದಾಗ ಮೂರು ಗಂಟೆ! ಒಂದು ದಿನ ಹೀಗೇ ಮಲಗಿ ಎಚ್ಚರವಾದಮೇಲೆಯೇ ಗೊತ್ತಾಗಿದ್ದು. ಕೆಲಸವಿಲ್ಲದೇ ಆಕಡೆ ಈಕಡೆ ಸುತ್ತುತ್ತಿದ್ದ ಮಹೇಶ ನಾನು ಮಲಗಿದ್ದನ್ನು ನೋಡಿ ತನ್ನ ಮೊಬೈಲ್‌ನಿಂದ ಫೋಟೋ ತೆಗೆದಿದ್ದ! ಎಚ್ಚರವಾದ ತಕ್ಷಣ ಮತ್ತೆ ನಿದ್ದೆ ಬರಬಾರದಲ್ಲ, ಅದಕ್ಕಾಗಿ ಒಂದು ಕಪ್ ಟೀ. ಟೀ ಮುಗಿಸಿ ಬರುವಷ್ಟರಲ್ಲಿ ಯಥಾಪ್ರಕಾರ ಇನ್ನೊಂದು ಗಂಟೆ ಕಳೆದಿರುತ್ತಿತ್ತು. 5 ಗಂಟೆಗೆ ಎಲ್ಲರೂ ಹೊರಡುವ ಸಮಯ. ಆದ್ದರಿಂದ 4:30ರಿಂದಲೇ ತಯಾರಿ ಪ್ರಾರಂಭ. ಎಷ್ಟೋ ಜನರನ್ನು ಇವತ್ತು ಮಾತಾಡಿಸಿಯೇ ಇಲ್ಲ! ಎಲ್ಲರನ್ನೂ ಭೇಟಿಯಾಗಿ, ನಾಳೆ ಮತ್ತೆ ಭೇಟಿಯಾಗೋಣವೆಂದು ಹೇಳಿ ಬರುವಷ್ಟರಲ್ಲಿ ಹೊರಡುವ ಸಮಯ! ಆಲ್ಲಿಗೆ ಅವತ್ತಿನ ಕೆಲಸ ಮುಗಿಯಿತು.

ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಉಳಿದೆಲ್ಲ ದಿನಚರಿ ಬಹುತೇಕ ಹಾಗೇ ಉಳಿದಿದ್ದರೂ, ಟೀ ಕುಡಿಯಲು, ಊಟ ಮಾಡಲು ಬರುವ ಗೆಳೆಯರು ಮಾತ್ರ ಬೇರೆ. ಮಲಗಿದ್ದಾಗ ಫೋಟೋ ತೆಗೆದು ಊರಿಗೆಲ್ಲ ತೋರಿಸಿ, ನಕ್ಕು, ಮತ್ತೆ ನನಗೆ ಮೇಲ್ ಮಾಡುವಷ್ಟು ಸಲುಗೆಯವರು ಇಲ್ಲ. ಮನುಷ್ಯನ ಸ್ವಭಾವವೇ ಹೀಗೋ ಏನೊ. ಕಳೆದು ಹೋದ ದಿನಗಳೇ ಚೆಂದ ಎನಿಸುತ್ತದೆ. ಆದರೆ... ಛೆ, ಕಾಲಚಕ್ರಕ್ಕೆ ದೇವರು ರೆವರ್ಸ್ ಗೇರ್ ಕೊಟ್ಟೇ ಇಲ್ಲವಲ್ಲಾ!

Wednesday, February 6, 2008

ಒಂದು ನೋಟ, ನಗೆಯ ಮಾಟ, ಪ್ರೇಮದೂಟ... ಆಮೇಲೆ ಕೈಯಲ್ಲಿ ಬಿಯರ್ ಲೋಟ


ನಾನಂತೂ ಶಿವಸೇನೆಯವನೂ ಅಲ್ಲ. ವಿಶ್ವ ಹಿಂದೂ ಪರಿಷತ್ತಿನ ಸದಸ್ಯನೂ ಅಲ್ಲ. ಆದರೆ ಒಬ್ಬ ಹಿಂದು ಮಾತ್ರ ಖಂಡಿತ ಹೌದು. ಪ್ರೇಮಿಗಳ ದಿನದಂದು ಕೆಲವು ಚಿತ್ರಮಂದಿರಗಳನ್ನು, ಕೆಲವು ಗಿಫ್ಟ್ ಸೆಂಟರ್‌ಗಳನ್ನು ಹೋಗಿ ಒಡೆದು ಬರಲು ಮನಸ್ಸು ಬರುವುದಿಲ್ಲವಾದರೂ ಆಚರಿಸಲೂ ಮನಸ್ಸು ಬರುವುದಿಲ್ಲ. ಆದರೆ ಆಚರಿಸುವವರನ್ನು ಕಂಡು ಅಸಹ್ಯವಂತೂ ಆಗುತ್ತದೆ. ನನಗೇಕೆ ಅಸಹ್ಯವಾಗಬೇಕು ಎಂದು ಬಹಳಸಲ ನನಗೆ ನಾನೇ ಕೇಳಿಕೊಂಡಿದ್ದೇನೆ. ಉತ್ತರವಂತೂ ಸಿಕ್ಕಿಲ್ಲ. ಆದರೆ ಆ ಅಸಹನೆ ನಿಂತಿಲ್ಲ. ಯಾಕೋ ಗೊತ್ತಿಲ್ಲ. ನಾನು ಬೆಳೆದ ಪರಿಸರದ ಪ್ರಭಾವವೋ ಅಥವಾ ಅಜ್ಞಾನವೋ ಏನೊ ಈ ಪ್ರೀತಿ ಪ್ರೇಮ ಅರ್ಥವೇ ಆಗುತ್ತಿಲ್ಲ. ಬಹುಶಃ ಪ್ರೇಮಿಗಳಿಗೂ ಅರ್ಥವಾಗಿಲ್ಲ.

ಫೆಬ್ರವರಿ ೧೪, ’ಪ್ರೇಮಿಗಳ ದಿನ’. ಹಾಗಿದ್ದರೆ ವರ್ಷದ ಉಳಿದ ೩೬೪ ದಿನಗಳು ವಿರಹಿಗಳ ದಿನಗಳೋ? ಅಥವಾ ಈ ದಿನ ಮಾಡಿದ ತಪ್ಪಿಗಾಗಿ ಪ್ರೇಮಿಗಳು ಪಶ್ಚಾತ್ತಾಪ ಪಡುವ ದಿನಗಳೋ? ಏನೊ ಒಂದು. ಒಟ್ಟಿನಲ್ಲಿ ಹೂ ಮಾರುವವರಿಗೆ, ಗ್ರೀಟಿಂಗ್ಸ್ ಹಾಗು ಗಿಫ್ಟ್ ಮಾರುವವರಿಗೆ ಶುಭದಿನ. ಪ್ರೇಮಿಗಳಲ್ಲದವರಿಗೆ ಹುಡುಕಾಟದ ಅಥವಾ ಹೊಟ್ಟೆಯುರಿಯ ದಿನ. ಈಗಂತೂ ಫಾದರ್ಸ್ ಡೇ, ಮದರ್ಸ್ ಡೇ ಬಂದು ಕುಳಿತಿರುವುದರಿಂದ, ತಂದೆ ತಾಯಿಯನ್ನು ಒಂದು ದಿವಸ ನೆನೆಸಿಕೊಂಡು ಒಂದು ಗ್ರೀಟಿಂಗ್ ಕೊಟ್ಟರೆ ಮಕ್ಕಳಾದ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಕಾಲ ಬಂದೊದಗಿದೆ. ಮುಂದೊಂದು ದಿನ ಇದೇ ಪರಿಸ್ಥಿತಿ ಈಗಿನ so called valentineಗೂ ಬಂದರೆ ಅಚ್ಚರಿಯೇನಿಲ್ಲ. ಒಂದು ದಿನ ಅವನನ್ನು/ಳನ್ನು ನೆನೆಸಿಕೊಂಡು ಒಂದು ಗ್ರೀಟಿಂಗ್ ಕಳಿಸಿಕೊಟ್ಟು ಉಳಿದಷ್ಟು ದಿನ ಬೇರೆಯವನ/ಳ ಜೊತೆ ಡೇಟಿಂಗ್ ಮುಂದುವರಿಸುವುದು. ಆಹಾ ಏನು ಸಂಸ್ಕಾರವಂತರು ಕಣ್ರೀ ಈ ವಿದೇಶೀಯರು ಎಂಥೆಂಥ ಪದ್ಧತಿಗಳನ್ನು ಹುಟ್ಟುಹಾಕಿದ್ದಾರೆ! ಏನು ಬುದ್ಧಿವಂತರು ಕಣ್ರೀ ನಮ್ಮವರು. ಅವನ್ನೆಲ್ಲಾ ಕಣ್ಣು ಮುಚ್ಚಿ ಅನುಸರಿಸುತ್ತಿದ್ದಾರೆ. ಮುಂದುವರಿಯುತ್ತಿದ್ದೇವೆ ಎನ್ನುವುದರ ಲಕ್ಷಣವಿರಬೇಕು. ಆದರೆ ನಾವು ಮುಂದುವರಿಯುತ್ತಿರುವುದು ಎತ್ತಕಡೆ ಎಂಬುದು ಪ್ರಶ್ನಾರ್ಹ.

Love at first sight. ಅಬ್ಬಾ... ಒಂದೇ ಒಂದು ನೋಟ. ನಮ್ಮಿಬ್ಬರಲ್ಲೂ ಜನ್ಮ ಜನ್ಮದ ಅನುಬಂಧ ಇದೆ ಎಂದು ಇಬ್ಬರಿಗೂ ಅನಿಸಿಬಿಡುತ್ತದೆ. ಒಬ್ಬರಿಗೇ ಅನ್ನಿಸಿದ್ದರೆ, ಲವಿಂಗ್ ಬದಲು ಬೆಗ್ಗಿಂಗ್ ಶುರು ಆಗಿರುತ್ತದೆ. ಆ ವಿಷಯ ಬೇರೆ. ಆದರೂ ಒಂದೇ ಒಂದು ನೋಟದಲ್ಲಿ ಜೀವನ ಸಂಗಾತಿಯನ್ನು ಕಂಡುಹಿಡಿಯುವ ಈ ಬಿದ್ಧಿವಂತಿಕೆ ಬರೀ ಎಡವಟ್ಟುಗಳನ್ನೇ ತಂದು ಕೂರಿಸುವುದು ಯಾಕೋ ಕಾಣೆ. ವಯಸ್ಸಿಗೆ ಬಂದಾಗ ಕತ್ತೆಯೂ ಮುದ್ದಾಗಿ ಕಾಣುತ್ತದಂತೆ. ಈ ದೈಹಿಕ ಆಕರ್ಷಣೆಯನ್ನೇ ಪ್ರೀತಿ ಪ್ರೇಮ ಎಂದುಕೊಂಡು ಹಳ್ಳಕ್ಕೆ ಬೀಳುತ್ತಿದೆ ಯುವಜನತೆ. ಅರೇಂಜ್ಡ್ ಮ್ಯಾರೇಜ್‌ನಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳುವ ಜನ, ಈ ’love at first sight’ ಹೇಳುವುದು ಎಷ್ಟು ಹಾಸ್ಯಾಸ್ಪದ! ಇತರರೆಲ್ಲಾ ಲವ್ ಮಾಡುತ್ತಿದ್ದಾರೆ! ನಾನೊಬ್ಬನೇ ಮಾಡದಿದ್ದರೆ ನನ್ನ ಪ್ರೆಸ್ಟೀಜ್ ಏನಾಗಬೇಡ. ಎಂದಂದುಕೊಂಡು ಲವ್ ಮಾಡುವವರು ಎಸ್ಟು ಜನವೋ. ಲವ್ ಮಾಡದೆ ಮದುವೆಯಾಗುವುದೊಂದು ಮಹಾಪರಾಧವೆಂದು ತಿಳಿದುಕೊಂಡವರೆಸ್ಟು ಜನವೊ. ಅದು ಹೇಗಪ್ಪಾ ಗೊತ್ತಿಲದೇ ಇರುವ ವ್ಯಕ್ತಿಯ ಜೊತೆ ಜೀವನವಿಡೀ ಸಂಸಾರ ನೆಡೆಸುತ್ತೀರಿ ಎಂದು ಕೇಳುವ ಜನ ಬಹುತೇಕ ಅಂಕಿ ಅಂಶಗಳನ್ನು ಗಮನಿಸಿಲ್ಲ. ೧೦೦ಕ್ಕೆ ೭೦ರಿಂದ ೮೦ ಪ್ರೇಮವಿವಾಹಗಳು ದುಃಖಾಂತ ಕಾಣುತ್ತವೆ. ಸುಖಾಂತ ಕಾಣುವುದು ಸಿನೆಮಾ ಧಾರಾವಾಹಿಗಳಲ್ಲಿ ಮಾತ್ರವೇನೊ. ಹಾಗಾದರೆ ಈ ಅರೆಂಜ್ಡ್ ಮದುವೆಗಳೆಲ್ಲಾ ಸುಖಮಯವಾಗಿ ಸಾಗಿದೆ ಎಂಬರ್ಥವಲ್ಲ. ಮದುವೆ ಮುರಿದುಹೋಗುವ ಸಾಧ್ಯತೆಗಳು ಬಹಳ ಕಡಿಮೆ.

ಮನುಷ್ಯನ ಸ್ವಭಾವವೇ ಹಾಗೆ. ತಾನಾಗಿಯೇ ಆಯ್ಕೆಮಾಡಿಕೊಂಡ ವಸ್ತುಗಳಲ್ಲಿನ ಚಿಕ್ಕ ಚಿಕ್ಕ ದೋಷಗಳೂ ದೊಡ್ಡದಾಗಿ ಕಾಣುತ್ತವೆ. ಅದೇ ತಾನಾಗಿಯೇ ದೊರೆತ ವಸ್ತುಗಳಲ್ಲಿ ದೊಷಗಳು ಕಂಡರೂ ಅನುಸರಿಸಿಕೊಂಡು ಹೋಗುವ ಧಾರಾಳತನ ಬಂದುಬಿಡುತ್ತದೆ. ಮನುಷ್ಯನ ಈ ಸ್ವಭಾವ ಕೇವಲ ನಿರ್ಜೀವ ವಸ್ತುಗಳಲ್ಲಷ್ಟೇ ಅಲ್ಲ. ಸಜೀವ ವಸ್ತುಗಳಲ್ಲಿಯೂ ಕೂಡಾ ಇದೇ ಸ್ವಭಾವವನ್ನು ಮುಂದುವರಿಸುತ್ತಾನೆ. ಅಷ್ಟಕ್ಕೂ ನಾವು ನಮ್ಮ ತಂದೆ ತಾಯಿಯನ್ನು ಆಯ್ಕೆಮಾಡಿಕೊಂಡು ಹುಟ್ಟಿದ್ದೇವೆಯೆ? ದೇಶವನ್ನು ರಾಜ್ಯವನ್ನು ಸಮಾಜವನ್ನು ಆಯ್ಕೆಮಾಡಿಕೊಂಡು ಜನಿಸಿದ್ದೇವೆಯೆ? ಹಾಗೆಂದುಕೊಂಡು ಈ ಆಯ್ಕೆಯ ಸ್ವಾತಂತ್ರ್ಯವೇ ಇರಬಾರದೆಂದಲ್ಲ. ಈ ಸ್ವಾತಂತ್ರ್ಯ ಸದ್ವಿನಿಯೋಗವಾಗಬೇಕೇ ಹೊರತು ದುಡುಕುತನದಿಂದಾಗುವ ಸ್ವೇಚ್ಛೆಯಾಗಬಾರದು. ಪ್ರೀತಿ ಪ್ರೇಮಗಳು ನಮ್ಮ ಸಂಸ್ಕೃತಿಯಲ್ಲಿ ನಿಶಿದ್ಧ ಎಂಬ ತಪ್ಪು ಕಲ್ಪನೆ ಬಹಳ ಜನರಿಗಿದೆ. ಆದರೆ ವೇದಗಳೇ ಇವನ್ನು ನಿಶಿದ್ಧವೆಂದು ಹೇಳಿಲ್ಲ. ಅದರ ಬದಲು ವೇದಾಧ್ಯಯನದ ನಂತರ ವಿವಾಹ ಸಂಸ್ಕಾರದ ಮೊದಲು ವರನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಹೆಣ್ಣಿಗೆ ನೀಡಲಾಗಿದೆ! ಆದರೆ ಇಲ್ಲಿ ಗುರುತಿಸಬೇಕಾದ ಅಂಶವೆಂದರೆ ಇದು ನೆಡೆಯಬೇಕಾದುದು ವೇದಾಧ್ಯಯನದ ನಂತರ. ಅಂದರೆ ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದು, ಸಮಾಜದ ಬಗ್ಗೆ ಇಹದ ಬಗ್ಗೆ ಪರದ ಬಗ್ಗೆ ಜ್ಞಾನವನ್ನು ಪಡೆದು ಬದುಕುವ ರೀತಿಯನ್ನು ಅರಿತಾದ ಮೇಲೆ ಈ ಸ್ವಾತಂತ್ರ್ಯದ ಉಪಯೋಗ. ಆದರೆ ಈಗ ವೇದಾಧ್ಯಯನ ಕನಸಿನ ಮಾತು ಬಿಡಿ. ಕೊನೆಯಪಕ್ಷ ಹೈ ಸ್ಕೂಲ್ ಆದರೂ ಮುಗಿಯಬೇಡವೇ? ’ಚೆಲುವಿನ ಚಿತ್ತಾರ’ ನೋಡಿಕೊಂಡು ನಮ್ಮ ಬದುಕೂ ಚಿತ್ತಾರವಾಗುತ್ತದೆ ಎಂದುಕೊಂಡ ಅಪ್ರಾಪ್ತರು ಈ ಪ್ರೇಮದ ಬಲೆಗೆ ಬಿದ್ದು ಬದುಕನ್ನು ಚಿತ್ತಾರದ ಬದಲು ಚಿತ್ರಾನ್ನ ಮಾಡಿಕೊಳ್ಳುವರಷ್ಟೆ.

ವಿದ್ಯಾಲಯಗಳು ಜ್ಞಾನದ ದೇವಾಲಯಗಳಾಗದೆ ಪ್ರೇಮಾಲಯಗಳಾಗಿವೆ. ಜ್ಞಾನದ ಬದಲು ಪ್ರೇಮವನ್ನು ತಲೆಯಲ್ಲಿ ತುಂಬಿಕೊಂಡ ಈ ಪ್ರೇಮಾರ್ಥಿಗಳು ಮುಂದೆ ಜೀವನದಲ್ಲಿ ಸಾಧಿಸುವುದಾದರೂ ಏನು? ಭಾರತೀಯ ಜನಸಂಖ್ಯೆಗೆ ತಮ್ಮ ಕೊಡುಗೆಯನ್ನು ಕೊಡಬಲ್ಲರಷ್ಟೆ. ಕಲಿಕೆಯಲ್ಲಿನ ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಕಾಲ ಮೀರಿದ ಮೇಲೆ ಬುದ್ಧಿಬಂದರೂ ಪ್ರಯೋಜನವಿಲ್ಲ. ಕಲಿಕೆಯೂ ಹತ್ತದೆ ಇತ್ತ ಪ್ರೇಮವೂ ಕೈಗೂಡದೆ ಎಡಬಿಡಂಗಿಯಾಗುವವರೇ ಬಹಳ ಜನ. ಹೀಗೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನೇ ತ್ಯಾಗ, ಪ್ರೇಮಕ್ಕಾಗಿ ನೀಡಿದ ಮಹಾನ್ ಬಲಿದಾನ ಎಂದು ಬಿಂಬಿಸುತ್ತಿರುವ ಇಂದಿನ ಸಿನೆಮಾಗಳು, ಧಾರಾವಾಹಿಗಳು, ಕಥೆ ಕಾದಂಬರಿಗಳು ನಿಜಕ್ಕೂ ಸಮಾಜಕ್ಕೆ ತಪ್ಪು ದಾರಿಯನ್ನು ತೋರಿಸುತ್ತಿದೆ. ಅಷ್ಟಕ್ಕೂ ತಮ್ಮ ಜೀವನವನ್ನು ಸ್ವೇಚ್ಛೆಯಂತೆ ಬದುಕುವ ಹಕ್ಕು ತಮಗಿದೆಯೇ ಎಂದು ಯಾರಾದರೂ ಯೋಚಿಸಿದ್ದಾರೆಯೇ? ಹೆತ್ತು ಬೆಳೆಸಿದ ತಾಯಿ ತಂದೆ, ವಿದ್ಯೆ ನೀಡಿ ಮನುಷ್ಯನನ್ನಾಗಿಸಿದ ಈ ಸಮಾಜ ಇವೆಲ್ಲದರ ಋಣ ನಮ್ಮ ಮೇಲಿಲ್ಲವೆ? ಅವನ್ನು ತೀರಿಸದೆಯೇ ರೆಕ್ಕೆ ಬಂದಾಗ ಹಕ್ಕಿ ಹಾರಿಹೋಗುವಂತೆ ನಿಮಗೂ ನಮಗೂ ಸಂಬಂಧವಿಲ್ಲ. ನನಗೆ ಪ್ರೇಮವೇ ದೇವರು. ಅದೇ ತಾಯಿ ತಂದೆ ಎಂದು ಹೇಳಿ ಹೊರನಡೆಯುವುದು ಸ್ವಾರ್ಥವೆನಿಸುತ್ತದೆ.

ಅಯ್ಯೋ ಬಿಡಿ. ಈ ವಿಷಯದಲ್ಲಿ ಬರೆದಷ್ಟೂ ಕಮ್ಮಿಯೇ ತಿಳಿದಷ್ಟೂ ಕಮ್ಮಿಯೇ. ಅಷ್ಟಕ್ಕೂ ನನಗಿನ್ನೂ ಈಗಿನ valentine ಪ್ರೇಮ ಅರ್ಥವೇ ಆಗಿಲ್ಲ. ಈ valentine ಪದದ ಅರ್ಥ ಹುಡುಕುತ್ತಿದ್ದೆ. ಅದರ ಅರ್ಥ ಹೀಗಿದೆ: "A sweetheart chosen to receive a greeting on Saint Valentine's Day" ! ಇಲ್ಲಿ ’A' ಎಂದು ಕರೆಯಲಾಗಿದೆ ಹೊರತು ’The' ಎಂದು ಹೇಳಿಲ್ಲ. ಅಂದರೆ ನಿಮಗೆ ಸಾವಿರ sweetheartಗಳು ಇದ್ದರೂ ತೊಂದರೆಯಿಲ್ಲ. ಇದು ಪಾಶ್ಚಾತ್ಯರ ತಪ್ಪಲ್ಲ ಬಿಡಿ. ಅವರಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಆದರ್ಶಪುರುಷನಾಗಿರಲಿಲ್ಲ ಅಥವಾ ಲೋಕಮಾತೆ ಸೀತೆ ಆದರ್ಶವಾಗಿರಲಿಲ್ಲವಲ್ಲ. ಆದರೆ ಇಂಥ ಮಹಾನ್ ಸಂಸ್ಕೃತಿಯನ್ನು ಹೊಂದಿಯೂ Saint Valentine ನಮಗೆ ಆದರ್ಶವಾಗುತ್ತಿರುವುದು ಮಾತ್ರ ವಿಪರ್ಯಾಸ.

Tuesday, February 5, 2008

ಪ್ಯಾಂಟಿನ ಬಣ್ಣ

ಬ್ಯಾಚಲರ್ ಲೈಫ್ ಅಂದ್ರೇ ಹೀಗೆ ನೋಡಿ. ಒಂದು ವಾರದ ಮೇಲೆ ಆಗಿತ್ತು. ಬಟ್ಟೆ ಒಗೆಯುವ ಪ್ರೋಗ್ರಾಮ್ ಹಾಕಿ. ಆದರೆ ಮುಹೂರ್ತ ಮಾತ್ರ ಬಂದಿರಲಿಲ್ಲ. ಒಗೆಯದೆ ಇದ್ದ ಬಟ್ಟೆಗಳ ರಾಶಿ ಮಾತ್ರ ದೊಡ್ಡದಾಗುತ್ತಲೇ ಇತ್ತು. ಅಂತೂ ಇಂತೂ ಮೊನ್ನೆ ಶನಿವಾರ ಮುಹೂರ್ತ ಬಂತು. ಆದರೆ ಬಟ್ಟೆಗಳ ಸಂಖ್ಯೆ ಭಾರತೀಯರ ಜನಸಂಖ್ಯೆಯಂತೆ ಬೆಳೆದು ಹೋಗಿದ್ದರಿಂದ, ಪ್ಯಾಂಟು ಬೇರೆ ಶರ್ಟು ಬೇರೆ ನೆನೆಸಲು ಸಾಧ್ಯವಾಗಲಿಲ್ಲ. ಎಲ್ಲಾ ಒಟ್ಟಿಗೇ ಒಂದೇ ಬಕೆಟ್ಟಿನಲ್ಲಿ ಸ್ನಾನಕ್ಕೆ ಇಳಿದವು. ಒಂದರ ಮೇಲೆ ಇನ್ನೊಂದಕ್ಕೆ ಪ್ರೀತಿ ಉಕ್ಕಿತೋ ಏನೊ, ಪ್ಯಾಂಟು ತನ್ನ ಬಣ್ಣವನ್ನು ಬನಿಯನ್ನಿಗೆ, ಬನಿಯನ್ನು ತನ್ನ ಬಣ್ಣವನ್ನು ಪ್ಯಾಂಟಿಗೆ ವರ್ಗಾಯಿಸಿಬಿಟ್ಟಿದ್ದವು. ಪ್ರೇಮವೇ ಕವನಕ್ಕೆ ಸ್ಫೂರ್ತಿಯಲ್ಲವೆ. ಆ ಪ್ರೇಮ ನಮ್ಮದಾಗಲಿ ಬೇರೆಯವರದಾಗಲಿ ಅಥವಾ ನಾನು ಕಂಡ ಇಂಥ ನಿರ್ಜೀವ ವಸ್ತುಗಳದ್ದಾಗಲಿ. ಆ ಪ್ರೇಮದ ಸ್ಫೂರ್ತಿಯಲ್ಲಿ ಈ ರೀಮಿಕ್ಸ್ ಕವನ...

ಬಣ್ಣ
ನನ್ನ ಪ್ಯಾಂಟಿನ ಬಣ್ಣ
ನೀಲಿ ಜೀನ್ಸಿನ ಬಣ್ಣ
ನೀಲಿ ಜೀನ್ಸಿನ ಬಣ್ಣ

ನಾನು ಬಿಡಿಸಲು ಕೆಸರು
ಬಿಡುತಲೇದುಸಿರು
ತಿಕ್ಕಿದರೆ ಬಿಟ್ಟಿತು ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ

ಈ ನೀಲಿ ಪ್ಯಾಂಟಿನ ಬಣ್ಣ ಒಗೆಯುವುದಕಿಂತ ಮುನ್ನ
ಅಣಕಿಸಿ ನಗುವ ಹಾಗೆ ಆ ನೀಲಿ ಆಗಸವನ್ನ
ನಾ ತಂದು ರಿನ್ ಪುಡಿಯನ್ನ ನೀರಲ್ಲಿ ಬೆರೆಸಿ ಅದನ
ಪ್ಯಾಂಟನ್ನು ಮುಳುಗಿಸಿದಾಗ ಬಕೆಟೆಲ್ಲ ಅದರದೆ ಬಣ್ಣ

ಬಾನಿನಿಂದ ಇಳಿದುಬಂದ ನೀಲಿ ತಾರೆಯು
ಮೈಯ ತೊಳೆದು ಬಣ್ಣವನ್ನು ಬಿಟ್ಟು ಹೋಯಿತು
ಮೇಲೆ ಕುಳಿತು ನೋಡುತಲಿ ಮಿಟುಕಿಸಿ ಕಣ್ಣ
ನಸು ನಗೆ ಬೀರುತಿದೆ ಎಲ್ಲಿಯದೀ ಬಣ್ಣ

ಹೋಗುವುದು ಎಂದರೆ ಹೊಲಸು ಹೋಗಿದ್ದು ಪ್ಯಾಂಟಿನ ಬಣ್ಣ
ಬಿಟ್ಟ ಮೇಲೆ ಆ ಪ್ಯಾಂಟನ್ನ ಮುತ್ತಿತ್ತು ಈ ಬನಿಯನ್ನ
ಬನಿಯನ್ನಿಗಿಂತ ಬಿಳುಪು ಈ ನನ್ನ ಪ್ಯಾಂಟಿನ ಬಣ್ಣ
ಬಿಳುಪಿದ್ದ ಬನಿಯನ್ ಎಲ್ಲಾ ಈಗಂತು ನೀಲಿ ಬಣ್ಣ

ಬನಿಯನ್ನಿನ ನೀಲಿ ಬಣ್ಣ ಬಿಡಿಸಲಾಗದು
ಪ್ಯಾಂಟಿನ ಬಿಳುಪು ಬನಿಯನ್ನನ್ನು ಹೋಲುತಿಹುದು
ಪ್ಯಾಂಟು ಮತ್ತು ಬನಿಯನ್ನಿನ ಪ್ರೇಮಗೀತವು
ಬಿಡಿಸಲಾರದ ಬಣ್ಣದಂತೆ ಅಮರವಾದವು

Wednesday, January 23, 2008

ಬದುಕೆಂಬ ಗಣಿತವನ್ನು ಬಿಡಿಸಿದವರು


ನಾವಿರುವುದು ಲಕ್ಚರರ್ಸ್ ಕಾಲನಿಯಲ್ಲಿ. ಕಾಲೇಜು ಮ್ಯಾನೇಜುಮೆಂಟಿನವರು ಕಟ್ಟಿಸಿಕೊಟ್ಟ ಮನೆಗಳಲ್ಲ ಅವು. ಕಲೇಜಿನ ಏಳೆಂಟು ಲಕ್ಚರರ್ಸ್, ಗೆಳೆಯರು ಎಂದೇ ಹೇಳಬೇಕು, ಒಟ್ಟಾಗಿ ಜಾಗ ಕೊಂಡು ಮನೆ ಕಟ್ಟಿಸಿಕೊಂಡ ಜಾಗ ಅದು. ಆದ್ದರಿಂದ ಸುತ್ತಮುತ್ತಲೂ ಎಲ್ಲರೂ ಕಾಲೇಜ್ ಲಕ್ಚರರ್ಸ್. ಆದರೆ ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪಕ್ಕದ ಮನೆಯವರು ಯಾರಾದರೇನು? ಅವರಂತೂ ನಮಗೆ ಕಲಿಸಲು ಬರುತ್ತಿದ್ದ ಟೀಚರ್ ಅಲ್ಲವಲ್ಲಾ. ಎಲ್ಲರ ಮನೆಯ ಕಂಪೌಂಡುಗಳೂ ನಮಗೆ ಆಟದ ಮೈದಾನವೇ. ಅದರಲ್ಲೂ ನನ್ನ ಪಕ್ಕದ ಮನೆಯವರದೆಂದರೆ ತುಂಬಾ ಖುಷಿ. ಎಲ್ಲರ ಮನೆಯ ಹಿತ್ತಲಲ್ಲೂ ಐದಾರು ತೆಂಗಿನ ಮರಗಳು, ಮಾವು, ಸಪೋಟ, ದಾಳಿಂಬೆ, ಗುಲಾಬಿ, ತುಳಸಿ ಗಿಡಗಳಷ್ಟೇ ತುಂಬಿಕೊಂಡಿದ್ದರೆ, ಅವರ ಮನೆಯಲ್ಲಿ ಚಿತ್ರವಿಚಿತ್ರವಾದ ಹೂಗಿಡಗಳು ಓರಣವಾಗಿ ನೆಟ್ಟಿದ್ದರು. ಕೆಲಸಕ್ಕೆ ಬಾರದ ಹುಲ್ಲುಕಡ್ದಿಗಳನ್ನು ಹುಡುಕಿದರೂ ಸಿಗುತ್ತಿರಲಿಲ್ಲ. ಬಹಳ ಚೊಕ್ಕಟವಾಗಿತ್ತು. ಅವರು ಕಾಲೇಜಿನಲ್ಲಿ Maths ಕಲಿಸುತ್ತಿದ್ದರು. ನಮ್ಮ ಓಣಿಯ ಜನರೆಲ್ಲರೂ ಅವರನ್ನು ’ಮೇಡಮ್’ ಎಂದೇ ಕರೆಯುತ್ತಿದ್ದರು. ನಾವು ಬಹುಶಃ ಅದನ್ನೇ ಹೆಸರೆಂದು ಭಾವಿಸಿ ಮೇಡಮ್ ಆಂಟಿ ಎನ್ನುತ್ತಿದ್ದೆವು!


ಅವರು ಲಲಿತಾ ಹೆಬ್ಬಾರ್. ಐವತ್ತರ ವಯಸ್ಸಿನ ಸಾಧಾರಣ ಎತ್ತರದ ಹದವಾದ ಮೈಕಟ್ಟಿನ ಮಹಿಳೆ. ಮದುವೆ ಆಗಿಲ್ಲ. ಯಾರೋ ನಿನ್ನನ್ನ ಮದುವೆ ಮಾಡ್ಕೋತೀನಿ ಎಂದು ಮುಂದೆ ಬಂದಾಗ, ನನ್ನ ಸಾಕುವ ತಾಕತ್ತು ನಿನ್ನಲ್ಲಿದೆಯೇನೋ ಎಂದು ಹೇಳಿ ಓಡಿಸಿಬಿಟ್ಟಿದ್ದರಂತೆ! ಅವರದ್ದು ಬಹಳ ಶಿಸ್ತುಬದ್ಧ ಜೀವನ. ಮನೆಯಲ್ಲಿ ಒಬ್ಬರೇ ಇರುತ್ತಿದ್ದರೂ ಯಾವ ವಸ್ತುಗಳೂ ಎಂದೂ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ನೋಡಿರಲಿಲ್ಲ. ಅಡುಗೆಯಲ್ಲಂತೂ ಎತ್ತಿದ ಕೈ. ಹೊಸ ಹೊಸ ರೀತಿಯ ಕಜ್ಜಾಯಗಳನ್ನು ಮಾಡಿ ನಮ್ಮನೆಗೆ ತಂದು ಕೊಡುತ್ತಿದ್ದರು. ಅದನ್ನು ತಿಂದುದು ಸಾಕಾಗದೆ ಅವರ ಮನೆಗೇ ನುಗ್ಗಿ ಬೇಡಿ ತಿನ್ನುತ್ತಿದ್ದೆ. ಆದರೂ ಅವರನ್ನು ನೋಡಿದಾಗಲೆಲ್ಲ ನನ್ನ ಅರಿವಿಗೇ ಬಾರದಂತೆ ಅವರ ಬಗ್ಗೆ ಏನೋ ಒಂದು ರೀತಿಯ ಭಯ ಶ್ರದ್ಧೆಗಳು ಹುಟ್ಟಿಬಿಡುತ್ತಿದ್ದವು. ಅವರು ಕಾಲೇಜಿನಲ್ಲಿ ಸಿಕ್ಕಪಟ್ಟೆ ಸ್ಟ್ರಿಕ್ಟ್ ಅಂತೆ ಎಂದು ಕೇಳಿದ್ದ ಮಾತುಗಳೂ ಅದಕ್ಕೆ ಪೋಷಣೆಯನ್ನು ನೀಡಿದ್ದವು. ಅಪರೂಪಕ್ಕೆ ಅವರೂ ಕೆಲವು ಹಾಡುಗಳನ್ನು ಕೇಳುತ್ತಿದ್ದರು. ಮನೆಯಲ್ಲಿ ಕಿಶೋರ್, ಮುಖೇಶ್‌ರ ಹಾಡುಗಳ ನೂರಾರು ಕೆಸೆಟ್‌ಗಳು ಬಿದ್ದಿದ್ದವು. ಕೆಲವುಸಲವಂತೂ ಅವುಗಳನ್ನು ಎಷ್ಟು ಗಟ್ಟಿಯಾಗಿ ಹಾಕುತ್ತಿದ್ದರೆಂದರೆ, ನಮ್ಮ ಮನೆಯಲ್ಲೇ ಕುಳಿತು ಎಲ್ಲ ಹಾಡುಗಳನ್ನು ಕೇಳಬಹುದಿತ್ತು. ಮನೆಯ ತುಂಬಾ ಪುಸ್ತಕಗಳು. ಹೊಸತು ಹಳತು ಎಲ್ಲಾ ಸೇರಿ ಮನೆಯಲ್ಲಿದ್ದ ಎಲ್ಲಾ ಬೀರುಗಳನ್ನೂ ತುಂಬಿ ಬಿಟ್ಟಿದ್ದವು. ಅವರು ಹೆಚ್ಚಾಗಿ ಓದುತ್ತಿದ್ದುದು ಇಂಗ್ಲೀಷ್ ಪುಸ್ತಕಗಳೇ.


ಹೈಸ್ಕೂಲ್ ಮುಗಿಸಿ ಕಾಲೇಜ್ ಸೇರಿದ ಮೇಲೆ ಅವರ ಬಗೆಗಿದ್ದ ಭಯ ಇನ್ನೂ ಜಾಸ್ತಿಯಾಯಿತು ಎಂದೇ ಹೇಳಬೇಕು. ನಮಗೆ Maths ಹೇಳಿಕೊಡಲು ಒಟ್ಟೂ ಮೂರು ಅಧ್ಯಾಪಕರುಗಳಿದ್ದರು. ಅವರಲ್ಲಿ ಇವರೂ ಒಬ್ಬರು. ಇವರು ಆಗ Maths ಡಿಪರ್ಟ್‌ಮೆಂಟಿನ Head ಕೂಡಾ ಆಗಿದ್ದರು. ಅವರ ಕಲಿಸುವ ಶೈಲಿಯಂತೂ ಎಲ್ಲರಿಗಿಂತಲೂ ಭಿನ್ನ. ಇಂಗ್ಲೀಷ್ ಭಾಷೆಯನ್ನು ಮಾತೃಭಾಷೆಯಷ್ಟೇ ಸುಲಭವಾಗಿ ಆಡಿಬಿಡುತ್ತಿದ್ದರು. ಕನ್ನಡ ಮಾಧ್ಯಮದಲ್ಲೇ ಕಲಿತು ಬಂದ ನಮ್ಮಂಥವರಿಗೆ ಒಂದೆರಡುಸಲ ಅವರು ಪ್ರಶ್ನೆ ಕೇಳಿದಾಗ ಪೀಕಲಾಟಕ್ಕೆ ಬಂದರೂ ನಾವಾಡುತ್ತಿದ್ದ ಹರಕು ಮುರುಕು ಇಂಗ್ಲೀಷಿಗೆ ಅಲ್ಲಿ ನಗುವವರು ಯಾರೂ ಇರುತ್ತಿರಲಿಲ್ಲ. ನಕ್ಕರೆ ಕ್ಲಾಸಿನಿಂದ ಹೊರಹಾಕಿಬಿಟ್ಟರೆ! ಸಮಯ ಪ್ರಜ್ಞೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ತಡವಾಗಿ ಕ್ಲಾಸಿಗೆ ಬಂದವರನ್ನು ಹೊರಹಾಕುತ್ತಿರಲಿಲ್ಲವಾದರೂ ಅವರಂತೂ ತಡವಾಗಿ ಬಂದದ್ದನ್ನು ನಾನು ಎಂದೂ ನೋಡೇ ಇಲ್ಲ. ಇವರ ಸಮಯಪ್ರಜ್ಞೆಯನ್ನು ನಮ್ಮ ಮನೆಯಲ್ಲಿ ಹೇಳಿದಾಗ ನನ್ನ ತಾಯಿ ಅವರು ಚಿಕ್ಕವರಿದ್ದಾಗ ನೆಡೆದ ಘಟನೆಯೊಂದನ್ನು ಹೇಳಿದರು. ಚಿಕ್ಕಂದಿನಲ್ಲಿ ಅವರು ಭರತನಾಟ್ಯದ ಕ್ಲಾಸಿಗೆ ಹೋಗುತ್ತಿದ್ದರಂತೆ. ಭರತನಾಟ್ಯದ ಗುರು ಮನೆಯ ಪಕ್ಕದಲ್ಲೇ ಒಂದು ಶಾಲೆಯಲ್ಲಿ ಪಾಠ ಹೇಳುತ್ತಿದ್ದನಂತೆ. ಇವರು ಮೊದಲು ಎಲ್ಲೋ ಬೇರೆ ಗುರುಗಳಲ್ಲಿ ಅಭ್ಯಾಸ ಮಾಡುತ್ತಿದ್ದವರು ಈಗ ಇವರಲ್ಲಿ ಬಂದಿದ್ದರಂತೆ. ಪಾಠ ನಾಳೆಯಿಂದ ೧೦ಕ್ಕೆ ಶುರುವಾಗುತ್ತದೆ ಎಂದು ಹೇಳಿಹೋದ ಗುರು ಮಾರನೇ ದಿನ ೧೦:೩೦ ಆದರೂ ಬರಲಿಲ್ಲವಂತೆ. ಹೀಗೇ ಮತ್ತೊಂದು ದಿನ ಕಳೆದಾದ ಮೇಲೆ, ಮೂರನೇ ದಿನ ೧೦:೩೦ ಆದರೂ ಗುರುಗಳು ಬಾರದುದನ್ನು ನೋಡಿ ಮನೆಗೆ ಹಿಂತಿರುಗಿದವರು ಮತ್ತೆ ಆಕಡೆ ತಲೆ ಹಾಕಲಿಲ್ಲವಂತೆ. ಈ ಘಟನೆ ನೆಡೆದಾಗ ಅವರು ಓದುತ್ತಿದ್ದುದು ಎಂಟನೇ ತರಗತಿ.


ಅವರಿಗೆ ಕಲಿಸುವಲ್ಲಿದ್ದ ಶ್ರದ್ಧೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಮ್ಮ ಪಿಯುಸಿ ಕ್ಲಾಸ್‌ಗಳು ಪ್ರಾರಂಭವಾದ ಮೊದಲನೇ ದಿನದಿಂದಲೇ ಅವರ ಎಕ್ಸ್‌ಟ್ರಾ ಕ್ಲಾಸ್‌ಗಳೂ ಪ್ರಾರಂಭವಾಗಿಬಿಡುತ್ತಿದ್ದವು. ಕಾಲೇಜಿನ ಬೇರೆ ಪ್ರೊಫೆಸರ್‌ಗಳೆಲ್ಲಾ ವಾರಕ್ಕೆ 20ರಿಂದ 25 ಗಂಟೆ ಪಾಠ ಹೇಳಿದರೆ ಇವರು ಕಮ್ಮಿಯೆಂದರೂ 35ಗಂಟೆಗಳ ಕಾಲ ಪಾಠ ಹೇಳುತ್ತಿದ್ದರು. ಎಕ್ಸ್‌ಟ್ರಾ ಕ್ಲಾಸುಗಳನ್ನು ಸೇರಿಸಿ. ನಮ್ಮ ಪಠ್ಯಕ್ರಮದಲ್ಲಿ set theory ಅನ್ನೋ ಒಂದು ಅಧ್ಯಾಯಕ್ಕೆ ಎರಡು ತಾಸುಗಳ ಅವಧಿಯನ್ನು PU Boardನವರು ನಿಶ್ಚಯಿಸಿದ್ದರು. ಆದರೆ ನಮಗೆ ಇವರು ತೆಗೆದುಕೊಂಡ ಅವಧಿಗಳು ಒಟ್ಟೂ 32. ಯಾವುದೇ ಅತಿಯಾದರೂ ಸರಿಯೆಲ್ಲವೆಂದಿಟ್ಟುಕೊಂಡರೂ ಇವರ ಕಲಿಸುವಿಕೆಯಲ್ಲಿ ಅತಿಯಾದುದು ಏನೂ ಇರಲಿಲ್ಲ. ಉಳಿದ ಅಧ್ಯಾಪಕರುಗಳು 3-4 ಬಗೆಯ ಸಮಸ್ಯೆಗಳನ್ನು ಬಿಡಿಸುತ್ತಿದ್ದರೆ, ಇವರು 30-40 ಬಗೆಯ ಸಮಸ್ಯೆಗಳನ್ನು ಬಿಡಿಸುತ್ತಿದ್ದರು. ಮತ್ತೆ ಅವಾವುದೂ ಸಿಲೇಬಸ್ ಬಿಟ್ಟು ಬೇರೆಯವುಗಳಲ್ಲ. ಇವರ ಇಂತಹ ಧೋರಣೆಯಿಂದಲೇ 100ಕ್ಕೆ 90ರಷ್ಟು ಹುಡುಗರು ಕ್ಲಾಸಿಗೇ ಬರುತ್ತಿರಲಿಲ್ಲ. ಅದೂ ಅಲ್ಲದೆ ಟ್ಯೂಷನ್‌ಗೆ ಹೋಗದ ಹುಡುಗನೇ ಇರದ ಈ ಕಾಲದಲ್ಲಿ, ಕಾಲೇಜಿಗೆ ಹೋಗುವ ಅವಷ್ಯಕತೆಯಾದರೂ ಏನು?


PUC ಎರಡನೇ ವರ್ಷದಲ್ಲಿ ನಾನು Mathsಗೆ ಟ್ಯೂಷನ್‌ಗೆ ಹೋಗುತ್ತಿದ್ದರೂ ಇವರಿಗೆ ಹೇಳಿರಲಿಲ್ಲ. ಇವರ ಕ್ಲಾಸ್‌ಗಳಿಗಂತೂ ತಪ್ಪದೇ ಹಾಜರಿರುತ್ತಿದ್ದೆ. ತಪ್ಪಿದ ದಿನ ನಮ್ಮ ಮನೆಗೇ ಬಂದು ಕಿವಿ ಹಿಂಡುತ್ತಿದ್ದರು! ಕೆಲವು ಹೊಸ ಹೊಸ ವಿದೇಶೀ ಲೇಖಕರ ಪುಸ್ತಕಗಳನ್ನು ತಂದು ಕೊಟ್ಟುಬಿಡುತ್ತಿದ್ದರು. ಅದರಲ್ಲಿನ ಪ್ರಾಬ್ಲಮ್‌ಗಳನ್ನು ಸಾಲ್ವ್ ಮಾಡಿ ಅವರಿಗೆ ತೋರಿಸಬೇಕಿತ್ತು. ಬಿಡಿಸಲು ಬಾರದ ಪ್ರಾಬ್ಲಮ್‌ಗಳನ್ನು ಅವರ ಹತ್ತಿರ ಕೂತು ತಿಳಿದುಕೊಳ್ಳಬೇಕಿತ್ತು. ನೂರರಲ್ಲಿ ಒಂದೋ ಎರಡೋ ಬಿಡಿಸುತ್ತಿದ್ದೆ! ಆದರೂ ಬೇಸರಿಸದೆ ಉಳಿದೆಲ್ಲವುಗಳನ್ನು ಹೇಳಿಕೊಡುತ್ತಿದ್ದರು. ಈ ವಿಷಯವನ್ನು ನನ್ನ ಕೆಲವು ಗೆಳೆಯರಿಗೂ ಹೇಳಿದ್ದೆ. ಒಮ್ಮೆ ನನ್ನ ಒಬ್ಬ ಗೆಳೆಯನಿಗೆ ಇವರು ಕ್ಲಾಸಿನಲ್ಲಿ ಬಿಡಿಸಿ ತೋರಿಸಿದ ಒಂದು ಸಮಸ್ಯೆ ಸರಿಬರಲಿಲ್ಲ. ಅವನು ಮನೆಯಲ್ಲಿ ಕುಳಿತು ಅದಕ್ಕೆ ಬೇರೆಯಾದ ಒಂದು ಉತ್ತರವನ್ನು ಕಂಡುಹಿಡಿದ. ಅದನ್ನು ಇವರಿಗೆ ಹೇಳಲು ಅವನಿಗೆ ಭಯ. ನನ್ನ ಹತ್ತಿರ ಬಂದು ಇದು ಹೀಗಲ್ಲ, ಹೀಗೆ ಎಂದು ತೋರಿಸಿದ. ನಾನು, ಇವತ್ತು ಅವರ ಮನೆಗೆ ಹೋಗೋಣ ಬಾ ಎಂದು ಅವನನ್ನು ಕರೆದುಕೊಂಡು ಹೋದೆ. ಅವರು ಈ ಸಮಸ್ಯೆಯನ್ನು ನನ್ನ ಗೆಳೆಯ ಬಿಡಿಸಿದುದನ್ನು ನೋಡಿ ಅದೂ ಅಲ್ಲದೆ ಅವರು ಮಾಡಿದ್ದ ತಪ್ಪನ್ನು ಇವನು ಗುರುತಿಸಿದ್ದುದನ್ನು ನೋಡಿ ಬಹಳವಾಗಿಯೇ ಸಂತಸಪಟ್ಟರು. ಸಿಟ್ಟು ಮಾಡಿಕೊಂಡುಬಿಡುವರೋ ಎಂಬುದು ಅವನ ಸಂಶಯವಾಗಿತ್ತು. ಅವನನ್ನು ಹೊಗಳಿ ಕಳಿಸಿಕೊಟ್ಟರು. ಮಾರನೇ ದಿನ ಕಾಲೇಜಿನಲ್ಲಿ ನಮಗೊಂದು ಆಷ್ಚರ್ಯ ಕಾದಿತ್ತು. BScಯಲ್ಲಿ ಓದುತ್ತಿದ್ದ ಎಲ್ಲಾ ತರಗತಿಯ ಹುಡುಗರೂ ನನ್ನ ಗೆಳೆಯನನ್ನು ಕೇಳಿಕೊಂಡು ಬರುತ್ತಿದ್ದರು. ನಮ್ಮ ಮೇಡಮ್ ಅವರಿಗೆಲ್ಲಾ ಹೋಗಿ, ನಾನು ನಿಮಗೆ PUC ಎರಡನೇ ವರ್ಷದಲ್ಲಿ ಒಂದು ಸಮಸ್ಯೆಯನ್ನು ತಪ್ಪಾಗಿ ಬಗೆಹರಿಸಿಬಿಟ್ಟಿದ್ದೆ. ಅದರ ಸರಿಯಾದ ಉತ್ತರ ಹೀಗಿದೆ. ಇದನ್ನು ನನಗೆ ತಿಳಿಸಿದವ ಇಂಥವನೊಬ್ಬ ಎಂದು ನನ್ನ ಗೆಳೆಯನ ಹೆಸರು ಹೇಳಿದ್ದರು. ಅಷ್ಟೇ ಅಲ್ಲದೆ ನಿಮಗೆ ನಿಮ್ಮ ಸೀನಿಯರ್‌ಗಳು ಸಿಕ್ಕರೆ ಅವರಿಗೂ ಈ ವಿಷಯವನ್ನು ಹೇಳಿ ಎಂದಿದ್ದರು! ತನ್ನ ಸೋಲಿನಲ್ಲಿ, ಶಿಷ್ಯನ ಗೆಲುವಿನಲ್ಲೇ ತನ್ನ ಗೆಲುವನ್ನು ಕಾಣುವ ಇಂಥ ಗುರು ಬಹಳ ದುರ್ಲಭ.


ಒಳ್ಳೆಯ ಹುಡುಗರಲ್ಲಿ ಎಷ್ಟು ಪ್ರೀತಿ ವಿಶ್ವಾಸಗಳನ್ನಿಟ್ಟಿದ್ದರೋ ಕೆಟ್ಟವರಲ್ಲಿ ಅಷ್ಟೇ ಅಸಡ್ಡೆಯಿತ್ತು. PUC ಮೊದಲನೇ ವರ್ಷದಲ್ಲಿ ನಪಾಸಾಗಿದ್ದ ಒಬ್ಬ highly influential ಹುಡುಗನೊಬ್ಬ ನಮ್ಮ ಪ್ರಿನ್ಸಿಪಾಲರಿಂದಲೇ ಪಾಸ್ ಮಾಡಿಸಲು ರೆಕಮೆಂಡೇಷನ್ ತಂದಿದ್ದ. ಖಡಾಖಂಡಿತವಾಗಿ ಪ್ರಿನ್ಸಿಪಾಲರಿಗೆ, ನಾನಿರುವ ತನಕ ಅವನು ಪಾಸಾಗುವುದಿಲ್ಲ ಎಂದು ಹೇಳಿಬಿಟ್ಟಿದ್ದರು. ಮೇಲಕ್ಕೆ ಕಠೋರ ವ್ಯಕ್ತಿಯಂತೆ ಕಂಡರೂ ತುಂಬಾ ಸಹೃದಯಿ. ಅಷ್ಟೇ ಸರಳ ವ್ಯಕ್ತಿ. ಕೊನೆಕೊನೆಗೆ ಅತಿಯಾಗಿ ಹೇಳುತ್ತಾರೆಂಬ ಕಾರಣಕ್ಕೋ, ಇಂತಹ ಅಪಪ್ರಚಾರಗಳಿಗೆ ಬಲಿಯಾಗೋ ಅಥವಾ ಟ್ಯೂಷನ್‌ಗೆ ಹೋಗುತ್ತೇವೆಂಬ ಕಾರಣಕ್ಕೋ ಏನೊ ಅವರ ಕ್ಲಾಸಿಗೆ 20-30 ಜನರೂ ಕೂಡುತ್ತಿರಲಿಲ್ಲವಂತೆ. ವರ್ಷಗಟ್ಟಲೆ ಅಲುಗಾಡದಿದ್ದ ಅವರ ಧೃಢ ಮನಸ್ಥಿತಿ ಏತಕ್ಕಾದರೂ ಇಂತಹ ಹುಡುಗರಿಗೆ ಪಾಠ ಹೇಳಿಕೊಡಲಿ ಎಂದು ನೊಂದಿತೋ ಏನೊ, ಅವರೂ voluntary retirement ತೆಗೆದುಕೊಂಡುಬಿಟ್ಟರು. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ "ನಾನು ಭಾಷಣ ಮಾಡುವುದಿಲ್ಲ, ಹಾಗಾದರಷ್ಟೇ ಕಾರ್ಯಕ್ರಮಕ್ಕೆ ಬರುತ್ತೇನೆ. ಇಲ್ಲವಾದರೆ ಬರುವುದೇ ಇಲ್ಲ" ಎಂದು ಕರಾರು ಹಾಕಿದ್ದರಂತೆ. ಗಣಿತದ ಖಜಾನೆಯೇ ಆಗಿದ್ದ ಅವರು ಮುಂದಿನ ಪೀಳಿಗೆಯ ಹುಡುಗರಿಗೆ ನಿಲುಕದ ನಿಧಿಸಂಪತ್ತಿನಂತೆಯೇ ಉಳಿದುಬಿಟ್ಟಿದ್ದಾರೆ.


ಈಗಂತೂ ಕೆಲಸವಿಲ್ಲವೆಂಬ ಕಾರಣಕ್ಕೇ ಇರಬೇಕು, ಅವರ ಹಿತ್ತಿಲಲ್ಲಿ ಇನ್ನೂ ಹೊಸ ಹೊಸ ಬಗೆಯ ಹೂಗಿಡಗಳು ರಾರಾಜಿಸುತ್ತಿವೆ. ನಮ್ಮನೆಗಂತೂ ಹೊಸ ಹೊಸ ಕಜ್ಜಾಯಗಳ ಸುರಿಮಳೆಯೇ ಆಗುತ್ತಿದೆ. ನಾನು ಮಾತ್ರ ಅದರ ಸವಿ ಸವಿಯಲಾರದವನಾಗಿ ಬೆಂಗಳೂರಿನಲ್ಲಿ ಕುಳಿತಿದ್ದೇನೆ.