"ವಿದ್ಯಾಗಿರಿಗೆ ಬರ್ತೀರೇನ್ರಿ?"
"ನೂರು ರುಪಾಯಿ ಆಕ್ಕೇತಿ ನೋಡ್ರಿ"
ನೂರು ರೂಪಾಯಾ? ನಮ್ಮ ಹತ್ತಿರ ಇಪ್ಪತ್ತು ರೂಪಾಯಿಗೆ ಒಂದು ಪೈಸೆಯೂ ಹೆಚ್ಚು ಇರಲಿಲ್ಲ. ರಾತ್ರಿ ಹನ್ನೊಂದುವರೆ ಆಗಿಬಿಟ್ಟಿತ್ತು. ಬಾಗಲ್ಕೋಟ್ ಸಿಟಿಯಿಂದ ವಿದ್ಯಾಗಿರಿಗೆ ಹೋಗುವ ಕೊನೆಯ ಬಸ್ಸು ರಾತ್ರಿ ಹತ್ತು ಗಂಟೆಗಾಗಲೇ ಹೊರಟುಹೋಗಿತ್ತು. ರಾತ್ರಿ ಹೇಗಪ್ಪಾ ಮನೆಮುಟ್ಟುವುದು ಎಂದು ನಮ್ಮ ತಲೆಬಿಸಿ ನಮಗಾದರೆ, "ಅಪ್ಪನ ರೊಕ್ಕ ಕುಡ್ಯಾಕ್ ಖರ್ಚು ಮಾಡಾಕ್ ಬರ್ತೈತಿ... ಆಟೋಕ್ಕೆ ಕೊಡಾಕ್ ಬರಾಂಗಿಲ್ಲಾ?" ಎಂದು ಆ ಆಟೋ ಡ್ರೈವರ್ ಬೇರೆ ರೇಗಿಸುತ್ತಿದ್ದ. ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿ. ಅಲ್ಲಿದ್ದವರು ನಾವಿಬ್ಬರು ಮತ್ತೆ ಆ ಆಟೋಡ್ರೈವರ್ ಅಷ್ಟೇ. ಸುತ್ತಮುತ್ತಲೂ ಒಂದು ನರಪಿಳ್ಳೆಯೂ ಓಡಾಡುತ್ತಿರಲಿಲ್ಲ. ಗುರುಸಿದ್ದೇಶ್ವರ ಚಿತ್ರಮಂದಿರದ ಎದುರಿದ್ದ ಸೋಡಿಯಂ ಲ್ಯಾಂಪೊಂದು ಆವರಿಸಿದ್ದ ಕತ್ತಲನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿತ್ತು. ಅಪರೂಪಕ್ಕೆ ಒಂದೊಂದು ಟ್ರಕ್ಕು ಆ ಮಾರ್ಗವಾಗಿ ಹೋಗುತ್ತಿದ್ದವು. ಎಲ್ಲ ಟ್ರಕ್ಕುಗಳಿಗೂ ಕೈ ಮಾಡಿ ಮಾಡಿ ಕೈಸೋತವೇ ಹೊರತೂ ಯಾವ ಟ್ರಕ್ಕೂ ನಿಲ್ಲಲಿಲ್ಲ.
ಆದಿನ ಸಂಜೆ ನಾಳೆಯ ನಾಟಕದ ಪ್ರದರ್ಶನಕ್ಕಾಗಿ ತಯಾರಿ ನೆಡೆದಿತ್ತು. ನಾಳೆ ಬೆಳಿಗ್ಗೆ ಆರು ಗಂಟೆಗೆ ಬೆಳಗಾವಿಗೆ ನಾಟಕದ ಕಾಂಪಿಟೇಷನ್‌ಗೆ ಹೋಗಬೇಕಿತ್ತು. ಸ್ಟೇಜ್ ಹಿಂದೆ ಹಾಕಲು ನೀಲಿ ಪರದೆ ಅಲ್ಲಿ ಬಹುಶಃ ಸಿಗಲಿಕ್ಕಿಲ್ಲ ಎಂದು ಊಹಿಸಿದ್ದ ನಮ್ಮ ಡೈರೆಕ್ಟರ್ ನನ್ನ ಮತ್ತು ಪವನನನ್ನ ನೀಲಿ ಪರದೆ ಕೇಳಿಕೊಂಡು ತರಲು ಬಾಗಲ್ಕೋಟ್ ಸಿಟಿಯಲ್ಲಿದ್ದ ಅರ್.ಎಸ್.ಎಸ್ ಕಾರ್ಯಾಲಯಕ್ಕೆ ಕಳಿಸಿದ್ದರು. ನೀಲಿ ಪರದೆಯೇನೋ ಸಿಕ್ಕಿತು. ಆದರೆ ಅಲ್ಲಿಯ ಪರಿಚಿತರೊಂದಿಗೆ ಮಾತನಾಡುತ್ತಾ ಹೊತ್ತು ಹೋಗಿದ್ದೇ ಗೊತ್ತಾಗದೆ ನಮ್ಮ ಪವನ ಸಾಹೇಬ್ರು ವಾಪಸ್ ಹೊರಡುವುದನ್ನು ತುಂಬ ತಡಮಾಡಿಬಿಟ್ಟಿದ್ದರು. ವಿದ್ಯಾಗಿರಿಯಿಂದ ಬಾಗಲ್ಕೋಟೆ ಸಿಟಿಯಿರುವುದು ಕನಿಷ್ಟಪಕ್ಷ ಐದಾರು ಕಿಲೋಮೀಟರ್ ದೂರದಲ್ಲಿ. ದಾರಿಮಧ್ಯ ಸಿಮೆಂಟ್ ಫ್ಯಾಕ್ಟರಿ ಬಿಟ್ಟರೆ ಬೇರೆ ಏನೂ ಇಲ್ಲ. ನೆಡೆದುಕೊಂಡು ಹೋಗುವುದಕ್ಕೆ ಅದರಲ್ಲೂ ಮಧ್ಯರಾತ್ರಿಯಲ್ಲಿ, ನಮಗಂತೂ ಧೈರ್ಯವೇ ಇರಲಿಲ್ಲ. ಬಸ್ಟ್ಯಾಂಡಿಗೆ ಬರುವಷ್ಟರಲ್ಲೇ 10:45 ಆಗಿಬಿಟ್ಟಿತ್ತು. ಯಾವುದಾದರೂ ಗಾಡಿ ಸಿಗಬಹುದೇನೋ ಎಂದು ಕಾಯುತ್ತಾ ಒಂದು ಗಂಟೆಯಾದರೂ ಯಾವ ಗಾಡಿಯೂ ನಮ್ಮ ಕೈಹತ್ತಲಿಲ್ಲ. ಉಳಿದಿದ್ದ ಒಂದೇ ಒಂದು ಮಾರ್ಗವೆಂದರೆ ಆ ಆಟೋ ಹತ್ತಿ ಹೋಗುವುದು. ಅವನನ್ನು ಕೇಳಿದರೆ ನೂರು ರೂಪಾಯಿ ಹಾಗೆ ಹೀಗೆ ಅಂದುಬಿಟ್ಟ. ನಾವು ಅಷ್ಟೆಲ್ಲ ಆಗಲ್ಲಪ್ಪಾ ಎಂದಿದ್ದಕ್ಕೆ ಕುಡುಕರು ಗಿಡುಕರು ಎಂದು ನಮ್ಮ ಸ್ವಾಭಿಮಾನ ಬೇರೆ ಕೆರಳಿಸಿಬಿಟ್ಟ. ಏನೇ ಆಗಲಿ ಮತ್ತೆ ಅವನ ಹತ್ತಿರ ಮಾತ್ರ ಹೋಗುವುದು ಬೇಡ ಎಂದು ನಿರ್ಧರಿಸಿಬಿಟ್ಟೆವು.
"ಎಲ್ಲಾ ನಿಮ್ಮಿಂದಾನೇ..." ರಾಗ ಎಳೆದೆ.
"ಲೇ... ಅಪ್ರೂಪಕ್ಕೆ ಸಿಕ್ಯಾರ... ಬಿಟ್ ಬರಾಕ್ ಆಕ್ಕೇತೇನ್ಲೆ?" ಅವರ ಉತ್ತರ. ಮತ್ತೆ ಇಬ್ಬರೂ ಆಕಡೆಯ ರೋಡಿನ ತುದಿಗೆ ನೋಡಲು ಪ್ರಾರಂಭಿಸಿದೆವು. ಯಾವ ಗಾಡಿಯ ಸುಳಿವೂ ಇಲ್ಲ. ರಾತ್ರಿ ಹೋಗಿ ಇನ್ನೊಂದಿಷ್ಟು ಸ್ಟೇಜ್ ತಯಾರಿ ಬೇರೆ ಮಾಡಬೇಕಿತ್ತು. ಅದು ಹಾಳಾಗಿ ಹೋಗಲಿ, ಹೇಗೋ ಓಟ್ಟಿನಲ್ಲಿ ರೂಮು ತಲುಪಿದರೆ ಸಾಕಾಗಿತ್ತು. ಈ ಸ್ಮಶಾನ ಮೌನದ ನಡುವೆ ಒಂದು ಬೈಕಿನ ಶಬ್ದ ಕೇಳಿಸಿತು. ನಾವಿಬ್ಬರಿದ್ದುದರಿಂದ ಆ ಬೈಕ್‌ಮೇಲಂತೂ ಹೋಗಲಿಕ್ಕಾಗುವುದಿಲ್ಲ ಎಂದು ಸುಮ್ಮನೆ ನಿಂತೆವು. ಆ ಬೈಕ್ ಸವಾರನೋ ಅಂಗಿಯ ಗುಂಡಿಗಳನ್ನು ಅರ್ಧಕ್ಕರ್ಧ ಬಿಚ್ಚಿಕೊಂಡು ಆಕಡೆ ಈಕಡೆ ಒಂದು ಚೂರೂ ನೋಡದೆ ಸಿಕ್ಕಪಟ್ಟೆ ಸ್ಪೀಡಾಗಿ ಓಡಿಸುತ್ತಾ ನಮ್ಮ ಮುಂದೆಯೇ ಹಾದು ಹೋದ. ಮತ್ತೆ ಹತ್ತು ನಿಮಿಷಗಳ ಮೌನ. ಪುನಃ ಮತ್ತೊಂದು ಬೈಕಿನ ಶಬ್ದ ಕೇಳಿಸತೊಡಗಿತು. ಬೈಕ್ ಹತ್ತಿರ ಬಂದಾಗ ನೋಡಿದರೆ, ಹತ್ತು ನಿಮಿಷದ ಹಿಂದೆ ಯಾವ ಬೈಕ್ ನಮ್ಮೆದುರಿಗೆ ಹಾದು ಹೋಗಿತ್ತೋ ಅದೇ ಬೈಕ್. ಆ ಬೈಕ್ ಓಡಿಸುವವ ಮತ್ತದೇ ಪೊಸಿಶನ್‌ನಲ್ಲಿ ಅಂಗಿ ಗುಂಡಿಗಳನ್ನು ಬಿಚ್ಚಿಕೊಂಡು ಮತ್ತದೇ ವೇಗದಲ್ಲಿ ನಮ್ಮೆದುರಿಂದಲೇ ಹಾದುಹೋದ. ನಾವಿಬ್ಬರು ಮುಖ ಮುಖ ನೋಡಿಕೊಂಡೆವು.
ಇನ್ನೇನೂ ಮಾಡಲು ತೋಚದೆ ನಾವಿಬ್ಬರೂ ಗರುಡಗಂಬಗಳಂತೆ ರಸ್ತೆ ಬದಿಯಲ್ಲಿ ನಿಂತಿರುವಾಗ ಪರಿಚಯದವರೊಬ್ಬರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಅವರ ಕೆಲಸ ಅಲ್ಲಿನ ಪ್ರಾದೇಶಿಕ ಪತ್ರಿಕೆಯಲ್ಲಾದುದರಿಂದ ಬಹಳ ಹೊತ್ತು ಇರಬೇಕಾದ ಪರಿಸ್ಥಿತಿಯಿತ್ತು. ಅಂತೂ ಒಬ್ಬರಾದ್ರೂ ಸಿಕ್ರಲ್ಲ ಎಂದುಕೊಂಡು ಹೀಗಾಗಿಬಿಟ್ಟಿದೆ ನಮ್ಮ ಪರಿಸ್ಥಿತಿ ಎಂದು ಹೇಳಿಕೊಂಡೆವು. ಅವರಿಗೆ ಬೆಳಿಗ್ಗೆಯೇ ಅವರ ಗಾಡಿ ಬೇಕಿತ್ತಂತೆ. ಇಲ್ಲದಿದ್ದರೆ ನಿಮ್ಮಿಬ್ಬರಿಗೆ ಕೊಟ್ಟುಬಿಡುತ್ತಿದ್ದೆ. ನೀವು ನಾಳೆ ವಾಪಸ್ ತಂದು ಮುಟ್ಟಿಸಬಹುದಿತ್ತು ಎಂದರು. ಇನ್ನು ಬೇರೆ ಉಪಾಯ ಏನಿದೆ ಎಂದು ಯೋಚಿಸುತ್ತಿರುವಾಗಲೇ ಮತ್ತೆ ಬೈಕಿನ ಶಬ್ದವಾಯಿತು. ಮತ್ತೆ ಅದೇ ಬೈಕ್ ಅದೇ ಸ್ಪೀಡ್‌ನಲ್ಲಿ ಹತ್ತಿರ ಬರುತ್ತಿತ್ತು. ಇವರು "ತಡೀರಿ... ಒಂದ್ ಕೆಲ್ಸಾ ಮಾಡೂನು" ಎಂದನ್ನುತ್ತಾ ಆ ಬೈಕ್‌ನವನಿಗೆ ಕೈ ಮಾಡಿದರು. ಅವನಿದ್ದ ಸ್ಪೀಡಿಗೆ ಅವನು ನಮ್ಮಿಂದ ಅರ್ಧ ಕಿಲೋಮೀಟರ್ ದೂರ ಹೋಗಿ ನಿಂತ. ವಾಪಸ್ಸು ಬಂದು ಅವರಿಗೆ ನಮಸ್ಕಾರಾ ಸಾರ್ ಎಂದ. ಇವರಿಬ್ಬರನ್ನೂ ವಿದ್ಯಾಗಿರಿಗೆ ಬಿಟ್ಟುಕೊಡ್ತೀಯೇನಪ್ಪಾ ಎಂದು ಅವರು ಕೇಳಿದೊಡನೆಯೇ ಈತ ಅದಕ್ಕೇನು ಸಾರ್ ಎಂದು ಒಪ್ಪಿಗೆ ಸೂಚಿಸಿಬಿಟ್ಟ. ತಮ್ಮ ಕೆಲಸ ಮುಗಿಸಿದ್ದಕ್ಕೆ ಅವರು ನಮಗೆ ವಿದಾಯ ಹೇಳಿ ಹೊರಟುಬಿಟ್ಟರು.
ಬೈಕನ್ನೊಮ್ಮೆ ಜೋರಾಗಿ ಅಲ್ಲಾಡಿಸಿ ಟ್ಯಾಂಕಿನ ಹತ್ತಿರ ಕಿವಿ ಹಿಡಿದ. ಆಮೇಲೆ ತನ್ನಷ್ಟಕ್ಕೆ ತಾನೇ ತಲೆ ಅಲ್ಲಾಡಿಸಿ ನಮ್ಮ ಕಡೆ ನೋಡಿದ. "ವಿದ್ಯಾಗಿರೀಗೆ ಹೊಂಟೀರೇನ್ರಿ? ಬರ್ರಿ...". ನಾನು ಮಧ್ಯದಲ್ಲಿ ಕೂತೆ. ನನ್ನ ಹಿಂದೆ ಪವನ. ಅವನ ಕಟಾರಾ ಸುಜುಕಿ ಸಮುರೈನಲ್ಲಿ ನಮ್ಮ ತ್ರಿಬಲ್ ರೈಡಿಂಗ್ ಶುರುವಾಯಿತು. "ನೋಡ್ರೀ... ನಾನು ಈಗss ಹೇಳಾಕತ್ತೀನಿ. ಘಟ್ಟಿ ಕೂತ್ಗೋರಿ. ನಾನು ನಶಾದಾಗದೀನಿ" ಎಂದುಬಿಟ್ಟ. ನನ್ನ ಜಂಘಾಬಲವೇ ಉಡುಗಿಹೋಯಿತು. ಕಣ್ಣು ಮುಚ್ಚಿ ರಾಮ ಕೃಷ್ಣ ಹೇಳಲು ಪ್ರಾರಂಭಿಸಿದೆ. ಕೆಲವೇ ಸೆಕಂಡುಗಳಲ್ಲಿ ಬೈಕು 60km/h ಸ್ಪೀಡಿಗೆ ಹೋಗಿ ಮುಟ್ಟುಬಿಟ್ಟಿತ್ತು. ಅಲ್ಲಿಯ ರೋಡಿನ ಪರಿಸ್ಥಿತಿಯೋ ಕೇಳುವುದು ಬೇಡ. ಆ ರೋಡಿನಲ್ಲಿ ಇವನ ಕಟಾರಾ ಬೈಕು ಆ ಸ್ಪೀಡಿನಲ್ಲಿ ತ್ರಿಬಲ್ ರೈಡಿಂಗ್ ಬೇರೆ. ಬೈಕಿನ ಶಾಕ್ ಅಬ್ಸಾರ್ಬರ್ಸ್ ಪೂರ್ತಿ ಅಕ್ಕಿಹೋಗಿತ್ತು. ಎಲ್ಲಾದರೂ ಹೊಂಡ ಹಾರಿಸಿದರೆ ಕಟಾರ್ ಎಂದು ಶಬ್ದ ಬೇರೆ ಬರುತ್ತಿತ್ತು. ಅವನಿಗಂತೂ ಇದೆಲ್ಲದರ ಪರಿವೆಯೇ ಇಲ್ಲವೇನೊ ಎಂಬಂತೆ ಓಡಿಸುತ್ತಿದ್ದ. ಅರ್ಧ ದಾರಿ ಸಾಗಿದ ಮೇಲೆ ಪ್ರಶ್ನೋತ್ತರಗಳನ್ನು ಶುರುಮಾಡಿದ.
"ಏನ್ ಮಾಡ್ಕೊಂಡದೀರಿ?"
"ಇಂಜಿನಿಯರಿಂಗ್ ಕಲ್ಯಾಕತ್ತೀವ್ರಿ"
"ಯಾವ ಬ್ರಾಂಚು?"
"ಕಂಪ್ಯೂಟರ್ ಸೈನ್ಸ್‌ರಿ"
"ಓಹ್... ಹಂಗಾರss ಅನಾಮಿ ಗೊತ್ತೇನ್ ನಿಮ್ಗ?"
ಯಲಾ ಇವ್ನಾ, ಹೋಗಿ ಹೋಗಿ ನಮ್ಮ HODಸುದ್ದೀಗೆ ಕೈ ಹಾಕಿದ್ನಲ್ಲಪ್ಪಾ ಎಂದುಕೊಳ್ಳುವಷ್ಟರಲ್ಲಿ ಅವನೇ ಮುಂದುವರಿಸಿದ.
"ಅವ ಮತ್ತ ನಾನು ಭಾರೀ ದೋಸ್ತ್... ನಿಮ್ಗೇನಾರ ಪ್ರಾಬ್ಲಮ್ ಆದ್ರ ನಂಗ್ ಹೇಳ್ರಿ. ನಾನು ಅನಾಮಿಗೆ ಹೇಳ್ತೀನಿ"
ಕೃತಾರ್ಥರಾದೆವು ತಂದೆ. ಮೊದಲು ದಯವಿಟ್ಟು ಮನೆಗೆ ತಲುಪಿಸಿಬಿಡು ಎಂದು ಬಾಯಿ ಬಿಟ್ಟು ಹೇಳುವುದೊಂದು ಬಾಕಿ ಇತ್ತು.
"ಅಂದಾಂಗ... ಈಗೀಗ ಬಾಗಲ್ಕೋಟ್ನಾಗ ಭಾಳ್ ಸೆಕಿ ಶುರು ಆಗ್ಬಿಟೈತಿ ನೋಡ್ರಿ. ಮನ್ಯಾಗ ಕುಂದ್ರಾಕಾಗಾಂಗಿಲ್ಲ. ಅದ್ಕss ಸೊಲ್ಪ ಹವಾ ಸೇವ್ಸೂನೂ ಅಂತ ಗಾಡಿ ಓಡ್ಸಾಕತ್ತೀನಿ" ಎಂದು ತನ್ನ ಸಮಸ್ಯೆಯನ್ನು ವಿವರಿಸಿದ. ನಾವು ಹುಂ ಹುಂ ಎಂದು ತಲೆ ಹಾಕಿದೆವು.
ಅಂತೂ ಕಾಲೇಜು ತಲುಪಿದಾಗ ಹೋದ ಜೀವ ಮತ್ತೆ ಬಂದಂತಾಗಿತ್ತು. ಇಲ್ಲೇ ಬಿಡಿ ಸಾಕು ಎಂದು ಎಷ್ಟು ಹೇಳಿದರೂ ಕೇಳದೆ ರೋಮಿಗೇ ತಂದು ಮುಟ್ಟಿಸಿದ. "ಏನಾರ ಹೆಲ್ಪ್ ಬೇಕಿದ್ರೆ ಕೇಳ್ರಿ... ನಾನು ನಿಮ್ಮ HODಗೆ ಹೇಳ್ತೀನಿ... ಗುಡ್ ನೈಟ್" ಎಂದು ಹೇಳಿ ಬೀಳ್ಕೊಟ್ಟ. ಎಚ್ಚರವಾಗಿದ್ದವ ದುಡ್ಡು ತೆಗೆದುಕೊಂಡೂ ಮಾಡದೇ ಇದ್ದ ಸಹಾಯವನ್ನ ನಿಶೆಯಲ್ಲಿದ್ದವ ಪ್ರತಿಫಲವನ್ನೇ ನಿರೀಕ್ಷಿಸದೆ ಮನಃಪೂರಕವಾಗಿ ಮಾಡಿಮುಗಿಸಿದ್ದ.
Thursday, April 17, 2008
Tuesday, April 15, 2008
ಮಾಡರ್ನ್ ನಿಂಗಿ

ಸ್ವಲ್ಪ ದಿನದ ಹಿಂದೆ ಪ್ರತಾಪ್ ಸಿಂಹರ ಒಂದು ಲೇಖನದ ಬಗ್ಗೆ ಅಗೋಕನ್ನಡದಲ್ಲಿ ಸಿಕ್ಕಾಪಟ್ಟೆ ಚರ್ಚೆ ನೆಡೆಯುತ್ತಾ ಇತ್ತು. ಹುಡುಗಿಯರ ಮೇಲೆ ನೆಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಕೇವಲ ಹುಡುಗರಷ್ಟೇ ಕಾರಣರಲ್ಲ, ಕೆಲವು ಸಂದರ್ಭಗಳಲ್ಲಿ ಆ ಕಾಮುಕರ ಕಾಮ ಕೆರಳಿಸುವವರು ಹುಡುಗಿಯರೇ ಎನ್ನುವುದು ಕೆಲವರ ವಾದವಾಗಿದ್ದರೆ ಇನ್ನು ಕೆಲವರದ್ದು ಇದಕ್ಕೆ ವಿರೋಧವಿತ್ತು. ನಮಗ್ಯಾಕ್ರೀ ಈ ವಿಷಯ ಅದು ನಮಗೆ ಸಂಬಂಧ ಇಲ್ಲಾ ಎಂದು ತೆಗೆದು ಹಾಕುವುದೂ ಸರಿಯಲ್ಲ. ಇದು ಸಮಾಜದ ಸ್ವಸ್ಥ್ಯದ ಪ್ರಶ್ನೆ. ಹಾಗೆಂದುಕೊಂಡು ಕಡಿಮೆ ಬಟ್ಟೆ ಹಾಕಿಕೊಂಡು ಶೋಕಿ ಮಾಡುತ್ತಿರುವ ಹೆಣ್ಣುಮಕ್ಕಳೆಲ್ಲರಿಗೆ ಬಟ್ಟೆ ತೊಡಿಸಲು ಸಾಧ್ಯವೇ? ನಮ್ಮಂಥವರು ಹೆಚ್ಚು ಅಂದರೆ ಇಂತಹ ರೀಮಿಕ್ಸ್ ಗೀತೆಗಳನ್ನು ಬರೆಯಬಹುದು. ಹೂವು ಹಣ್ಣು ಚಿತ್ರದ ಸಿ ಅಶ್ವಥ್ ಹಾಡಿರುವ "ನಿಂಗಿ ನಿಂಗಿ ನಿಂಗಿ ನಿಂಗಿ" ಧಾಟಿಯಲ್ಲಿ....
ತಂಗಿ ತಂಗಿ ತಂಗಿ ತಂಗಿ
ಪ್ಯಾಟೀಗ್ ಹೊಂಟೀಯೇನ ತಂಗಿ
ತಂಗಿ ತಂಗಿ ತಂಗಿ ತಂಗಿ
ಟಸ್ ಪುಸ್ ಅಂತೀಯಲ್ಲೆ ತಂಗಿ
ನಿನ್ನ ನೋಡುತ್ತಾ
ಜನ್ರೆಲ್ಲ ಬೆಪ್ಪ
ಆಗ್ಯಾರ ನೋಡಲ್ಲಿ
ಟೈಟು ಜೀನ್ಸು ಶಾರ್ಟು ಟಾಪು
ಹಾಕಿಕೊಂಡ ನೀ ನಿಂತಿ
ಬಳಿ ಇಲ್ಲದೇ ಟಿಕಳಿ ಇಲ್ಲದೇ
ಬೆದರುಬೊಂಬೆ ಹಾಂಗ ಕಾಣತಿ
ಮುಖಕ್ಕೆ ಸುಣ್ಣ ಮೆತ್ತತಿ
ತುಟಿಗೆ ಬಣ್ಣ ಹಚ್ಚತಿ
ಜಡಿನ ಕತ್ತರಿಸುತಿ
ನಿನ್ನ ನೀನು ಮರೆಸುತಿ
ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ
ಕರೀಗ್ಲಾಸ ಹಾಕಿಕೊಂಡು
ಹುಡುಗರ್ ಮುಂದ ಪೋಸ್ ಕೊಡ್ತಿ
ಸುಮ್ ಸುಮ್ನೆ ನಗನಗತಾ
ಅವರ್ನ ಬುಟ್ಟಿಗ್ ಬೀಳಿಸ್ಕೊಳತಿ
ಅವಗ ಕೈ ನೀಡತಿ
ಇವನ ನೀ ನೋಡತಿ
ನಿನ್ನ ನೀನು ಮಾರತಿ
ಒಳ್ಳೆ ಬೆಲೆ ಬೇಡತಿ
ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ
ತಂಗಿ ತಂಗಿ ತಂಗಿ ತಂಗಿ
ಪ್ಯಾಟೀಗ್ ಹೊಂಟೀಯೇನ ತಂಗಿ
ತಂಗಿ ತಂಗಿ ತಂಗಿ ತಂಗಿ
ಟಸ್ ಪುಸ್ ಅಂತೀಯಲ್ಲೆ ತಂಗಿ
ನಿನ್ನ ನೋಡುತ್ತಾ
ಜನ್ರೆಲ್ಲ ಬೆಪ್ಪ
ಆಗ್ಯಾರ ನೋಡಲ್ಲಿ
ಟೈಟು ಜೀನ್ಸು ಶಾರ್ಟು ಟಾಪು
ಹಾಕಿಕೊಂಡ ನೀ ನಿಂತಿ
ಬಳಿ ಇಲ್ಲದೇ ಟಿಕಳಿ ಇಲ್ಲದೇ
ಬೆದರುಬೊಂಬೆ ಹಾಂಗ ಕಾಣತಿ
ಮುಖಕ್ಕೆ ಸುಣ್ಣ ಮೆತ್ತತಿ
ತುಟಿಗೆ ಬಣ್ಣ ಹಚ್ಚತಿ
ಜಡಿನ ಕತ್ತರಿಸುತಿ
ನಿನ್ನ ನೀನು ಮರೆಸುತಿ
ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ
ಕರೀಗ್ಲಾಸ ಹಾಕಿಕೊಂಡು
ಹುಡುಗರ್ ಮುಂದ ಪೋಸ್ ಕೊಡ್ತಿ
ಸುಮ್ ಸುಮ್ನೆ ನಗನಗತಾ
ಅವರ್ನ ಬುಟ್ಟಿಗ್ ಬೀಳಿಸ್ಕೊಳತಿ
ಅವಗ ಕೈ ನೀಡತಿ
ಇವನ ನೀ ನೋಡತಿ
ನಿನ್ನ ನೀನು ಮಾರತಿ
ಒಳ್ಳೆ ಬೆಲೆ ಬೇಡತಿ
ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ
Monday, April 7, 2008
ನಿಜಕ್ಕೂ ನಾವು ಮುಂದುವರಿಯುತ್ತಿದ್ದೇವೆಯೆ?
ಎಪ್ರಿಲ್ 6 ರಾತ್ರಿ 8:30ರ ಸಿರ್ಸಿಯಿಂದ ಬೆಂಗಳೂರಿಗೆ ಹೋಗುವ ಮೇಘದೂತ ಬುಕ್ ಮಾಡಿಸಿದ್ದೆ. ಅವತ್ತೇ ಸಿರ್ಸಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮೆರವಣಿಗೆ ಬೇರೆ ಇತ್ತು. ಹೇಗೋ ಸಂದಿ ಗೊಂದಿಗಳಲ್ಲಿ ಬೈಕ್ ತೂರಿಸಿಕೊಂಡು ಬಸ್ಟಾಂಡಿಗೆ ಹೋದಾಗಲೇ ಗೊತ್ತಾಗಿದ್ದು, ಆ ಬಸ್ ಕ್ಯಾನ್ಸಲ್ ಆಗಿದೆ. ಅದರ ಬದಲು ಇನ್ಯಾವುದೋ ಬಸ್ಸಿನಲ್ಲಿ ನಮ್ಮನ್ನೆಲ್ಲ ಕಳಿಸುತ್ತಾರೆ ಎಂದು. 9 ಗಂಟೆಗೆ ರಾಜಹಂಸ ಇತ್ತು. ಅದನ್ನ ಬಿಟ್ಟರೆ ಇನ್ನೊಂದು ಮೇಘದೂತ ಕುಮಟಾದಿಂದ ಬರಲು 10:30 ಆಗುತ್ತಿತ್ತು. ಆದ್ದರಿಂದ 100 ರೂಪಾಯಿಗಳ ಪಂಗನಾಮ ಆದರೂ ಪರವಾಗಿಲ್ಲ, ರಾಜಹಂಸಕ್ಕೇ ಹೋಗುವುದೆಂದು ನಿರ್ಧರಿಸಿ ಅಲ್ಲೇ ಯಾವುದೋ ಒಂದು ಸೀಟ್ ಅಡ್ಜಸ್ಟ್ ಮಾಡಿಕೊಂಡು ಕುಳಿತೆ. ಅವತ್ತು ಮಧ್ಯಾಹ್ನ ಮಲಗಲು ಆಗದೇ ಇದ್ದ ಕಾರಣಕ್ಕೋ ಏನೊ ಚೆನ್ನಾಗಿಯೇ ನಿದ್ರೆ ಬಂತು.
ಅರಬರೆ ಎಚ್ಚರವಾದಾಗ ಕಂಡಕ್ಟರ್ ’ಶಿವ್ಮೊಗ್ಗಾ... ಶಿವ್ಮೊಗ್ಗಾ’ ಅನ್ನುವುದು ಕೇಳಿಸುತ್ತಿತ್ತು. ಮತ್ತೆ ನಿದ್ರೆ. ಮುಂದೆ ತುಂಬಾನೇ ನಿದ್ದೆ ಬಂದುಬಿಟ್ಟಿತ್ತು ಎನಿಸುತ್ತದೆ. ಎಚ್ಚರವಾದಾಗ ವಾತಾವರಣ ಸಂಪೂರ್ಣ ಶಾಂತ. ಬಸ್ ಚಲಿಸುತ್ತಿಲ್ಲ. ಅಕ್ಕಪಕ್ಕದವರ ಗೊರಕೆ ಸದ್ದೊಂದು ಕೇಳಿಸುತ್ತಿದೆ. ಡ್ರೈವರ್ ಸಾಹೇಬ್ರು ಬಸ್ಸಿನ ಇಂಡಿಕೇಟರ್ ಆನ್ ಮಾಡಿಟ್ಟುದುದರಿಂದ ಅದೊಂದು ಟುಯ್ನ್ ಟುಯ್ನ್ ಎನ್ನುತ್ತಿತ್ತು. ಇಲ್ಲೇ ಎಲ್ಲೋ ಪ್ರಕೃತಿಕರೆಬಂದು ಹೋಗಿರಬೇಕೆಂದು ಹಾಗೇ ಮಗ್ಗುಲು ಬದಲಿಸಿದೆ. ಮತ್ತೊಂದು ರಾಜಹಂಸ ಬಸ್ ಬಂದು ನಮ್ಮೆದುರೇ ನಿಂತಿತು. ಆ ಬಸ್ಸಿನವನೂ ಇಂಡಿಕೇಟರ್ ಆನ್ ಮಾಡಿ ಗಾಡಿಯಿಂದಿಳಿದು ಗಡಬಡೆಯಿಂದ ಎತ್ತಲೋ ಓಡಿಹೋದ. ಇವ್ನಿಗ್ಯಾಕಪ್ಪಾ ಇಷ್ಟು ಅವಸರ ಅಂದುಕೊಂಡು ಸುಮ್ಮನಾದೆ. ದೂರದಲ್ಲಿ ಕೆಲವು ಶಬ್ದಗಳು ಕೇಳಿಬರತೊಡಗಿದವು. ಯಾರೋ ಜೋರಾಗಿ ನರಳುತ್ತಿರುವ ಶಬ್ದ. "ಅಮ್ಮಾ... ಅಯ್ಯೋ..." ಬರಬರುತ್ತ ಶಬ್ದ ಹೆಚ್ಚಾಗತೊಡಗಿತು. ಕರಳು ಕಿತ್ತುಬರುವಂತೆ ಯಾರೋ ಚೀರುತ್ತಿದ್ದ. ಅದರ ಜೊತೆಗೆ ಜನರ ಗುಜುಗುಜು ಕೇಳಿಬರುತ್ತಿತ್ತು.
ಇದೇನಾಯ್ತಪ್ಪಾ ಎಂದುಕೊಂಡು ಬಸ್ಸಿನಿಂದ ಕೆಳಗಿಳಿಯಲು ಹೋದರೆ, ನಮ್ಮ ಡ್ರೈವರ್ ಬಸ್ಸಿನ ಬಾಗಿಲು ತೆರೆಯದೆಯೇ ಇಳಿದು ಹೋಗಿಬಿಟ್ಟಿದ್ದ. ಅದರ ಬಟನ್ ಯಾವುದೆಂದು ತಿಳಿಯಲಿಲ್ಲ. ನಾನೂ ಡ್ರೈವರ್ ಸೀಟಿನ ಪಕ್ಕದಲ್ಲಿದ್ದ ಬಾಗಿಲಿನಿಂದಲೇ ಇಳಿದು ಹೋಗಿ ನೋಡಿದೆ. ಶಿರಸಿ-ಶಿವಮೊಗ್ಗ-ಬೆಂಗಳೂರು ಆರ್ಡಿನರಿ ಬಸ್ಸೊಂದು ಒಂದು ಮರಕ್ಕೆ ನೇರವಾಗಿ ಢಿಕ್ಕಿ ಹೊಡೆದು ನಿಂತುಬಿಟ್ಟಿದೆ. ಅದರ ಸುತ್ತಲೂ ಐವತ್ತರವತ್ತು ಜನ ಸುತ್ತುವರಿದೂ ಏನೇನೋ ಮಾಡುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿ ಹದಿನೈದಿಪ್ಪತ್ತು ಜನ ಮಲಗಿ ನರಳುತ್ತಿದ್ದಾರೆ. ಅವರ ಸುತ್ತಲೂ ಕೆಲವು ಜನ ಅವರಿಗೆ ನೀರನ್ನು ನೀಡುತ್ತಾ ಸಮಾಧಾನಪಡಿಸುತ್ತಿದ್ದಾರೆ. ಇದರ ಮಧ್ಯ ಬಸ್ಸಿನಲ್ಲೇ ಸಿಕ್ಕಿಕೊಂಡು ನೋವು ಅನುಭವಿಸುತ್ತಿದ್ದ ಆ ಬಸ್ಸಿನ ಡ್ರೈವರ್ ನೋವು ತಾಳಲಾರದೆ ಚೀರುತ್ತಿದ್ದಾನೆ. ಜನ ಅವನನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಇದಿಷ್ಟು ಕೇವಲ 10 ನಿಮಿಷದಲ್ಲಿ ಸಂಭವಿಸಿಬಿಟ್ಟಿದೆ. ನಮ್ಮ ಬಸ್ಸಿನ ಹಿಂದೆ ಉತ್ತರ ಕನ್ನಡದಿಂದ ಹೊರಟಿದ್ದ ಎಲ್ಲ KSRTC ಬಸ್ಸುಗಳು ಸಾಲಾಗಿ ನಿಂತುಬಿಟ್ಟಿದ್ದವು. ಎಲ್ಲ ಸಿಬ್ಬಂದಿಗಳೂ ಅಲ್ಲಿ ಸಿಲುಕಿಕೊಂಡಿದ್ದ ಡ್ರೈವರ್‌ನನ್ನು ಬಿಡಿಸುವ ಪ್ರಯತ್ನದಲ್ಲಿದ್ದರು. ಇದರೊಟ್ಟಿಗೆ ಅದೇ ದಾರಿಯಲ್ಲಿ ಹೊರಟಿದ್ದ ಐದಾರು ಟ್ರಕ್ಕುಗಳೂ ನಿಂತಿದ್ದವು. ಇದು ನೆಡೆದಿದ್ದು ತುಮಕೂರಿಗೆ ಒಂದು ಹತ್ತು ಕಿಲೋಮೀಟರ್ ಅಂತರದಲ್ಲಿ. ಸುತ್ತಲು ವಾಸಿಸುತ್ತಿದ್ದ ರೈತರೆಲ್ಲರೂ ಅವನನ್ನು ಬಿಡಿಸುವ ಪ್ರಯತ್ನದಲ್ಲಿದ್ದರು.
ಬಸ್ಸು ಎಷ್ಟು ವೇಗವಾಗಿ ಬಂದು ಮರಕ್ಕೆ ಗುದ್ದಿತ್ತೆಂದರೆ, ಮರ ಅರ್ಧ ಕೊರೆದುಹೋಗಿತ್ತು. ನೂರಾರು ಜನ ಕೈಗೂಡಿಸಿ ಬಸ್ಸನ್ನು ದೂಕಿದರೂ ಬಸ್ಸು ಒಂದಿಂಚೂ ಕದಲಲಿಲ್ಲ. ಇದು ನೆಡೆದಿದ್ದು ರಾತ್ರಿ ಮೂರರಿಂದ ಮೂರೂವರೆಯ ಒಳಗೆ. ಅಲ್ಲಿದ್ದ ಜನರು ಹತ್ತಿರವಿದ್ದ ಪೋಲೀಸ್ ಸ್ಟೇಷನ್, ಹಾಸ್ಪಿಟಲ್‌ಗೆಲ್ಲಾ ಕರೆಮಾಡಿ ಆಗಿತ್ತು. ಸಧ್ಯದಲ್ಲೇ ಅಂಬ್ಯುಲೆನ್ಸ್ ಬರಬಹುದೆಂದು ಕಾಯುತ್ತಿದ್ದರು. ಆ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರನ್ನು ಇನ್ನೊಂದು ಬಸ್ಸಿನಲ್ಲಿ ಕೂರಿಸಿ ಕಳಿಸಲಾಯಿತು. ಹೆಚ್ಚು ಪೆಟ್ಟಾಗಿದ್ದ ಕೆಲ ಪ್ರಯಾಣಿಕರಿಗೆ ಅಂಬ್ಯುಲೆನ್ಸ್ ಬರುತ್ತದೆ ಎನ್ನುತ್ತಿದ್ದರು. ಆದರೂ ಯಾರೂ ಕಾಯದೆ ಬೇರೆ ಬಸ್ಸಿನಲ್ಲಿ ಕುಳಿತು ಹೊರಟುಬಿಟ್ಟರು. ಸುತ್ತಲಿದ್ದ ನಾಗರಿಕರ ಪ್ರಯತ್ನವಂತೂ ನೆಡೇದೇ ಇತ್ತು. ಐದು ಗಂಟೆಯಸುಮಾರಿಗೆ ಇಬ್ಬರು ಪೋಲೀಸರು ಟಿವಿಎಸ್ ಎಕ್ಸೆಲ್ ಸೂಪರ್‌ನಲ್ಲಿ ಬಂದರು. ಅವರು ಬಂದು ಮೂಕಪ್ರೇಕ್ಷಕರ ಸಂಖ್ಯೆ ಹೆಚ್ಚು ಮಾಡಿದರೇ ವಿನಃ ಬೇರೇನೂ ಅವರಿಂದ ಸಾಧ್ಯವಾಗಲಿಲ್ಲ. ಐದೂವರೆ ಗಂಟೆಯ ಹೊತ್ತಿಗೆ ಒಂದು ಅಗ್ನಿಶಾಮಕ ಟ್ರಕ್ ಬಂದು ನಿಂತಿತು. ಅದು ಯಾಕೆ ಬೇಕಿತ್ತೋ ದೇವರಿಗೇ ಗೊತ್ತು. ಅದರಲ್ಲಿದ್ದ ಮೂರ್ನಾಲಕು ಜನ ಇಳಿದು ಬ್ಯಾಟರಿ ಹಿಡಿದುಕೊಂಡು ನಿಂತರು. ಅಂಬ್ಯುಲೆನ್ಸಿನ ಪತ್ತೆಯೇ ಇಲ್ಲ. ಬೆಳಕಾಯಿತು. ಆರು ಗಂಟೆಯಾಯಿತು. ಇನ್ನೂ ಆ ಬಸ್ಸಿನ ಡ್ರೈವರ್‌ನನ್ನು ಹೊರತೆಗೆಯಲು ಆಗಲೇ ಇಲ್ಲ. 3 ಗಂಟೆಯಿಂದ ಅವನು ನೋವಿನಿಂದ ನರಳುತ್ತಲೇ ಇದ್ದ. ನಮ್ಮ ಕಂಡಕ್ಟರ್ "ಇದು ಇನ್ನೂ ಬಹಳ ತಡಾ ಆಗ್ತದೆ ಅಂತ ಕಾಣ್ತದೆ... ಈಗ ನಾವೂ ಇವ್ನನ್ನ ಬಿಟ್ಟು ಹೋಗ್ಬಿಟ್ರೆ ಸರಿ ಬರುದಿಲ್ಲ... ನೀವೆಲ್ಲಾ ಬೇರೆ ಬಸ್ಸಿಗೆ ಹೋಗ್ಬಿಡಿ." ಎಂದು ಹೇಳಿ ನಮ್ಮನ್ನು ಯಲ್ಲಾಪುರ-ಬೆಂಗಳೂರು ರಾಜಹಂಸ ಬಸ್ಸಿಗೆ ಹತ್ತಿಸಿ ಕಳುಹಿಸಿದ. ಡ್ರೈವರ್‌ನ ಆರ್ತನಾದ ಕೇಳುತ್ತಲೇ ಇತ್ತು.
ಕೊನೆಗೂ ಅಂಬ್ಯುಲೆನ್ಸ್ ಬಂದಿತೋ ಬಿಟ್ಟಿತೋ ಯಾರಿಗೆ ಗೊತ್ತು? ಆ ಡ್ರೈವರನ ಕಾಲಿಗೆ ಬಸ್ಸಿನ ಕೆಲವು ಕಬ್ಬಿಣದ ತುಂಡುಗಳು ತೂರಿಕೊಂಡುಬಿಟ್ಟಿದುದರಿಂದ ಗ್ಯಾಸ್ ವೆಲ್ಡರ್ಸ್‌ಗಳ ಬರುವಿಕೆಯನ್ನೂ ಜನ ಕಾಯುತ್ತಿದ್ದರು. ಅವರೆಲ್ಲರೂ ಬಂದು ಆ ಡ್ರೈವರ್‌ನನ್ನು ಆ ಮೃತ್ಯುಕೂಪದಿಂದ ಬಿಡಿಸುವವರೆಗೂ ಆತನಿಗೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಿದನೆಂದೇ ನಂಬಿದ್ದೇನೆ.
Wednesday, March 26, 2008
ಸಪ್ತರ್ಷಿಗಳು ಗ್ಲಾಸು ಒಡೆದರು...

"ಇನ್ಮುಂದೆ ಶಾಲೆ ಗ್ರೌಂಡ್‌ನಲ್ಲಿ ಕ್ರಿಕೆಟ್ ಆಡಿದ್ರೆ ನೋಡಿ. ಕ್ರಿಕೆಟ್ ಅಂತೆ ಕ್ರಿಕೆಟ್ಟು... ಅದರ ಬದ್ಲು ಖೋಖೋ ಆಡಿ. ಕಬಡ್ಡಿ ಆಡಿ" ಎಂದು ಒಂದು ವಾರದ ಹಿಂದಷ್ಟೇ ಗುಡುಗಿದ್ದರು ನಮ್ಮ ಪಿಇ ಮೇಸ್ಟ್ರು. ಬಹುತೇಕ ಎಲ್ಲ ಹೈಸ್ಕೂಲ್‌ಗಳಲ್ಲೂ ಪರಿಸ್ಥಿತಿ ಹೀಗೇ ಇರಬೇಕು. ಹುಡುಗರಿಗೆ ಕ್ರಿಕೆಟ್ ಬಿಟ್ಟರೆ ಬೇರೆ ಆಟಗಳೇ ಗೊತ್ತಿಲ್ಲ. ಮನೆಯೊಳಗಾಡುವ ಆಟಗಳನ್ನು ಕಂಪ್ಯೂಟರ್ ಗೇಮ್‌ಗಳು ಮರೆಸಿಬಿಟ್ಟಿದ್ದರೆ, ಹೊರಗಾಡುವ ಆಟಗಳನ್ನು ಈ ಕ್ರಿಕೆಟ್ಟು ನುಂಗಿಹಾಕಿಬಿಟ್ಟಿದೆ. ಕುಂಟೆಬಿಲ್ಲೆ, ಗಿಲ್ಲಿ ದಾಂಡು, ಲಗೋರಿಗಳನ್ನು ಜನ ಮರೆತೇ ಬಿಟ್ಟಿದ್ದಾರೆ. ಕಬ್ಬಡ್ಡಿ ಎಂದರಂತೂ ಕೆಲವರು ನಗಲು ಶುರುಮಾಡಿಬಿಡುತ್ತಾರೆ! ನಗುವಿಗೆ ನಮ್ಮ ನವರಸ ನಾಯಕ ಜಗ್ಗೇಶ್ ಪ್ರಭಾವವಿರಬೇಕು. ಅದೇನೇ ಇರಲಿ. ಕ್ರಿಕೆಟ್ಟು ಆಡುವುದನ್ನು ನಿಷೇಧಿಸಿದ ನಮ್ಮ ಮೇಸ್ಟ್ರು ಬ್ಯಾಟು ಬಾಲುಗಳನ್ನೂ ಕಿತ್ತುಕೊಂಡು ಹೋಗಿ ತಮ್ಮ ಟೇಬಲ್ ಕೆಳಗಿಟ್ಟುಕೊಂಡುಬಿಟ್ಟರು. ಸಿಟ್ಟು ತಡೆಯಲಾಗದ ನಾವು, "ನೋಡ್ರೋ... ಆಟ ಆಡ್ಬೇಡಿ ಅಂತ ಹೇಳಿದ್ರೆ ಆಗಿತ್ತಪ್ಪ... ಬ್ಯಾಟು ಬಾಲು ಯಾಕೆ ತಗೊಂಡು ಹೋಗ್ಬೇಕಿತ್ತು? ಇವತ್ತು ಸಂಜೆ ಅವರ ಮನೆಗೆ ಹೋಗಿ ನೋಡಿ ಬೇಕಿದ್ರೆ, ಅವರ ಮಗ ಅದೇ ಬ್ಯಾಟು ಬಾಲಲ್ಲಿ ಕ್ರಿಕೆಟ್ ಆಡ್ತಿರ್ತಾನೆ..." ಅಂತೆಲ್ಲ ಮಾತಾಡಿಕೊಂಡು ಸಿಟ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆವು. ನಮ್ಮ ಪಿಇ ಮೇಸ್ಟ್ರು ಕೂಡಾ ಬಹಳ ನೊಂದುಕೊಂಡುಬಿಟ್ಟಿದ್ದರು. ನಮ್ಮ ಹೈಸ್ಕೂಲ್ ಕಳೆದ ಮೂರು ವರ್ಷಗಳಿಂದ ಖೋಖೋ ಆಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಈ ವರ್ಷವಾದರೋ ನಾವು ಖೋಖೋ ಎಂದು ಕೇಳಿದಾಕ್ಷಣ ಖೋ ಕೊಟ್ಟವರಂತೆ ಓಡಿಹೋಗಿಬಿಡುತ್ತಿದ್ದೆವು. ಇವೆಲ್ಲ ವಿಷಯಗಳು ಸೇರಿಕೊಂಡು ನಮ್ಮ ಬ್ಯಾಟು ಬಾಲುಗಳಿಗೆ ಪಂಗನಾಮ ಹಾಕಿದ್ದವು.
ಮಾರನೇ ದಿನ ಶಾಲಾ ಮಟ್ಟದ ಸ್ಪೋರ್ಟ್ಸ್ ನಡೆಯುತ್ತಿತ್ತು. ನಮ್ಮ ಪಿಇ ಮೇಸ್ಟ್ರು ಎಲ್ಲಿಂದಲೋ ಒಟ್ಟು ಹಾಕಿ ಮೂರ್ನಾಲಕು ಖೋಖೋ ತಂಡಗಳನ್ನು ತಯಾರಿ ಮಾಡಿಸಿಯೇ ಬಿಟ್ಟಿದ್ದರು. ’ಯುಕ್ತಿ’ ’ಶಕ್ತಿ’ ’ಕೀರ್ತಿ’ ಮತ್ತು ’ಸ್ಪೂರ್ತಿ’ ಬಣಗಳು ಪ್ರತಿಯೊಂದು ಆಟದಲ್ಲೂ ತಾವೇ ಗೆಲ್ಲಬೇಕೆಂದು ಸೆಣಸತೊಡಗಿದ್ದವು. ಆದರೆ ಇವು ಯಾವುದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ನಾವು ಒಂದಿಷ್ಟು ಜನ ಮಾತ್ರ ಅತ್ತ ಇತ್ತ ಸುತ್ತಾಡುತ್ತ, ಹುಡುಗಿಯರು ಹೆಚ್ಚಿದ್ದ ಕಡೆ "ಥೂ... ಅವನಿಗೆ ಆಡ್ಲಿಕ್ಕೇ ಬರುದಿಲ್ಲಾ... ಅವನ್ನೆಂತಕ್ಕೆ ಸಿಲೆಕ್ಟ್ ಮಾಡಿದ್ರೋ ಮಾರಾಯ..." ಎಂದು ಕಮೆಂಟ್ ಕೊಡುತ್ತಾ ಹೀರೋಗಳಾಗಲು ಪ್ರಯತ್ನಿಸುತ್ತಿದ್ದೆವು. ಕೊನೆಗೆ ಯಾವ ಹುಡುಗಿಯೂ ಇತ್ತ ಕಣ್ಣು ಹಾಯಿಸದಿದ್ದಾಗ ನಾವೂ ಬೇಸತ್ತು ಒಂದುಕಡೆ ಸುಮ್ಮನೆ ಕುಳಿತು ಖೋಖೋ ನೋಡತೊಡಗಿದೆವು. ಆಗ ನಮ್ಮಲ್ಲೊಬ್ಬ "ಲೋ... ಕ್ರಿಕೆಟ್ ಆಡೋಣ್ವಾ?" ಅಂದ. ಎಲ್ಲರೂ ಅವನಿಗೆ ಬೈಯ್ಯತೊಡಗಿದರು. ನಿನ್ನೆ ಮಾತ್ರ ಮಂಗಳಾರತಿ ಮಾಡಿಸಿಕೊಂಡಿದ್ದು ಸಾಕಾಗ್ಲಿಲ್ವಾ... ಹಾಗೆ... ಹೀಗೆ ಎಂದು. "ಇವತ್ತು ನಮ್ಮನ್ನ ಯಾರೋ ನೋಡ್ತಾರೆ? ಪಿಇ ಮೇಸ್ಟ್ರು ಆಟ ಆಡ್ಸೋದ್ರಲ್ಲಿ ಬ್ಯುಸಿ ಇದಾರೆ. ನಾವು ಅತ್ಲಾಗೆ, ಕಾಲೇಜ್ ಹತ್ರ ಹೋಗಿ ಆಡಿದ್ರಾಯ್ತಪ್ಪಾ... ಯಾರಿಗೂ ಕಾಣೂದೂ ಇಲ್ಲಾ" ಎಂದ. ಎಲ್ಲರಿಗೂ ಅವನ ಮಾತು ಸರಿಯೆನಿಸಿತು. ಆದ್ರೆ ಬ್ಯಾಟು ಬಾಲು ಇಲ್ವಲ್ಲಾ! ಬಾಲು ಒಬ್ಬನ ಹತ್ತಿರ ಇತ್ತು. ಬ್ಯಾಟಿಗೆ, ಬ್ಯಾಟೇ ಆಗಬೇಕು ಎಂದೇನಿಲ್ಲವಲ್ಲ. ಅಲ್ಲೇ ಒಂದು ಮುರುಕು ಮನೆಗೆ ಹೋಗಿ ಒಂದು ರೀಪಿನ ಪೀಸನ್ನು ಸಂದೀಪ ಹುಡುಕಿಕೊಂಡು ಬಂದ. ಮತ್ತೆ ಶುರುವಾಯಿತು ನಮ್ಮ ಕ್ರಿಕೆಟಾಯಣ.
ಎಮ್. ಎಮ್. ಕಾಮರ್ಸ್ ಕಾಲೇಜಿನ ಹತ್ತಿರವೇ ನಮ್ಮ ಹೈಸ್ಕೂಲು. ಕಾಲೇಜು ಮತ್ತು ನಮ್ಮ ಹೈಸ್ಕೂಲಿನ ನಡುವೆ ಒಂದಿಷ್ಟು ಖಾಲಿ ಜಾಗ ಮತ್ತು ಒಂದು ಚಿಕ್ಕ ಬಿಲ್ಡಿಂಗ್ ಕೂಡಾ ಇತ್ತು. ಆ ಬಿಲ್ಡಿಂಗಿನ ಕದ ತೆರೆದದ್ದನ್ನು ನಾವಂತೂ ಯಾರೂ ನೋಡಿರಲಿಲ್ಲ. ಅದರ ಒಳಗೆ ಏನೇನೋ ನೆಡೆಯುತ್ತದೆ ಎಂಬ ಕುತೂಹಲಕಾರಿ ಕಥೆಗಳು ಮಾತ್ರ ಎಲ್ಲರಿಗೂ ತಿಳಿದಿತ್ತು. ಅದಲ್ಲದೆ ಆ ಬಿಲ್ಡಿಂಗಿನ ಗೋಡೆಯ ಸುತ್ತೆಲ್ಲಾ "ನಾಳೆ ಬಾ" ಎಂದು ಬೇರೆ ಬರೆದಿದ್ದರು. ನಮ್ಮಲ್ಲಿ ಕೆಲವರು ಇಲ್ಲಿ ಕ್ರಿಕೆಟ್ ಆಡುವುದಾ? ಎಂದು ಸ್ವಲ್ಪ ಹೆದರಿದರೂ ಕ್ರಿಕೆಟ್ಟಿನ ಆಕರ್ಷಣೆಯಲ್ಲಿ ಅದನ್ನೆಲ್ಲ ಮರೆತುಬಿಟ್ಟರು. ಸ್ಟಂಪ್ಸ್‌ಗೆ ಏನು ಮಾಡುವುದು ಎಂದು ಹುಡುಕುತ್ತಿರುವಾಗ ಚೇತನ ಒಂದು ಚಾಕ್ ಪೀಸ್ ಹಿಡಿದುಕೊಂಡು ಬಂದ. ಆ ಬಿಲ್ಡಿಂಗಿನ ಒಂದು ಕಂಬದ ಮೇಲೆ ಸ್ಟಂಪಿನ ಚಿತ್ರ ಬಿಡಿಸಿ ಇದೇ ಸ್ಟಂಪು ಎಂದ. ಎಲ್ಲರಿಗೂ ಅದೊಂದೇ ದಾರಿಯೆನಿಸಿ ಒಪ್ಪಿದರು. ಎರಡು ಟೀಮ್‌ಗಳನ್ನು ಮಾಡಿ, ಒಬ್ಬ ಹೆಚ್ಚಾದುದರಿಂದ ಅವನನ್ನು ಜೋಕರ್ ಮಾಡಿ ಆಟ ಪ್ರಾರಂಭವಾಯಿತು. ಲೆಗ್‌ಸೈಡ್ ಕಾಲೇಜಿನ ಲೈಬ್ರರಿ ಇರುವುದರಿಂದ ಲೆಗ್‌ಸೈಡ್ ರನ್ ನಿಷೇಧಿಸಲಾಯಿತು. ಕೇವಲ ಆಫ್‌ಸೈಡ್ ಅಷ್ಟೇ ರನ್ ಗಳಿಸಬೇಕಾದ್ದುದರಿಂದ ಬಾಲರ್‌ಗಳೆಲ್ಲಾ ಕೇವಲ ಲೆಗ್‌ಸೈಡ್ ಅಷ್ಟೇ ಬಾಲ್ ಹಾಕಲು ಪ್ರಾರಂಭಿಸಿದರು. ಬ್ಯಾಟ್ಸ್‌ಮನ್‌ಗಳಿಗೆ ಒಳ್ಳೇ ಕಿರಿಕಿರಿ ಪ್ರಾರಂಭವಾಗಿಬಿಟ್ಟಿತು. ಅದರಲ್ಲೂ ರಾಘು ಸಿಕ್ಕಾಪಟ್ಟೆ ಸಿಟ್ಟುಮಾಡಿಕೊಂಡಿದ್ದ. ಅವನಿಗೋ ಪಾಪ, ಲೆಗ್‌ಸೈಡ್ ಅಷ್ಟೇ ರನ್ ತೆಗೆಯಲು ಬರುತ್ತಿತ್ತು.
ಆಟ ಸುರಳೀತವಾಗಿ ಸಾಗುತ್ತಿತ್ತು. ಅತ್ತ ನಮ್ಮ ಪಿಇ ಮೇಸ್ಟ್ರು ಖೋಖೋ ಆಡಿಸುವುದರಲ್ಲಿ ಮುಳುಗಿಹೋಗಿದ್ದರು. ಖೋಖೋ ನೋಡಿ ನೋಡಿ ಬೆಸತ್ತುದಕ್ಕೋ ಏನೊ, ನಮ್ಮ ತರಗತಿಯ ಕೆಲವು ಹುಡುಗಿಯರು ಹಾಗೇ ಸುತ್ತುಹಾಕುತ್ತಾ ಕಾಲೇಜ್ ಕಡೆ ಬಂದುಬಿಟ್ಟರು. ನಾವು ಅಲ್ಲಿ ಕ್ರಿಕೆಟ್ ಆಡುತ್ತಿರುವುದನ್ನು ನೋಡಿ ತಮ್ಮ ತಮ್ಮೊಳಗೇ ಏನೇನೋ ಮಾತನಾಡಿಕೊಳ್ಳುತ್ತಾ ಮುಸಿ ಮುಸಿ ನಗತೊಡಗಿದರು. ಇದನ್ನೆಲ್ಲಾ ವೀಕ್ಷಿಸುತ್ತಾ, ಅದರಲ್ಲೂ ಬ್ಯಾಟಿಂಗ್ ಮಾಡುತ್ತಿದ್ದ ರಾಘುವಿಗೆ ಒಂದು ರೀತಿಯ ಉತ್ಸಾಹ ಉಕ್ಕಿಬಂದುಬಿಟ್ಟಿತು. ಲೆಗ್‌ಸೈಡ್ ಯಾರೂ ಫೀಲ್ಡರ್‌ಗಳು ಇಲ್ಲದ ಕಾರಣ, ಅಲ್ಲಿ ಬಾಲನ್ನು ಹೊಡೆದರೆ ಬ್ಯಾಟ್ಸ್‌ಮನ್ನೇ ಹೋಗಿ ತರಬೇಕು ಎನ್ನುವ ರೂಲ್ಸ್ ಇತ್ತು. ಈಗ ಹುಡುಗಿಯರೂ ಕಾಲೇಜಿನ ಹತ್ತಿರವೇ ಬಂದು ನಿಂತಿದ್ದರು. ಬಾಲರ್ ಕೂಡಾ ಲೆಗ್‌ಸೈಡ್ ಬಾಲ್ ಒಗೆಯುತ್ತಿದ್ದ. ರಾಘುವಿಗೆ ಹುಡುಗಿಯರ ಮುಂದೆ ಬೀಟ್ ಆಗುವುದು ಇಷ್ಟವಿರಲಿಲ್ಲ. ಈಸಲ ಲೆಗ್‌ಸೈಡಿಗೆ ಬಂದ ಬಾಲನ್ನು ಜೋರಾಗಿ ಕಾಲೇಜಿನ ಕಡೆಯೇ ಬಾರಿಸಿಬಿಟ್ಟ. ಬಾಲು ನೇರವಾಗಿ ಹೋಗಿ ಕಾಲೇಜ್ ಲೈಬ್ರರಿಯ ಕಿಟಕಿಯ ಗಾಜಿನ ಮೇಲೆ ಬಿತ್ತು. ಗಾಜು ಫಟಾರ್ ಎಂದು ಶಬ್ದ ಮಾಡುತ್ತಾ ಪುಡಿಪುಡಿಯಾಗಿ ಒಡೆದುಹೋಯಿತು. ಹುಡುಗಿಯರು ಕಿಟಾರ್ ಎಂದು ಚೀರುತ್ತಾ ಅಲ್ಲಿಂದ ದೂರಸರಿದರು. ಕಾಲೇಜ್ ಲೈಬ್ರರಿಯ ಒಳಗಿದ್ದ ಜನ ಏನಾಯಿತೆಂದು ಹೊರಗೆ ಬಂದು ನೋಡುವಷ್ಟರಲ್ಲಿ ನಮ್ಮಲ್ಲಿ ಒಬ್ಬನೂ ಅಲ್ಲಿರಲಿಲ್ಲ. ಒಂದಿಬ್ಬರು ಹೈಸ್ಕೂಲಿಗೆ ವಾಪಸ್ ಓಡಿಬಂದು ಏನೂ ಆಗಿಲ್ಲವೇನೋ ಎಂಬಂತೆ ಖೋಖೋ ನೋಡಲು ಶುರುಮಾಡಿದ್ದರು. ಒಂದಿಬ್ಬರು ಕಾಲೇಜ್ ಹಿಂದುಗಡೆಗೆ ಓಡಿಹೋಗಿ ಕಾಂಪೌಂಡ್ ಜಿಗಿದು ಮನೆಗೇ ಓಡಿದ್ದರು. ಉಳಿದವರು ಎತ್ತೆಂದರತ್ತ ಚಲ್ಲಾಪಿಲ್ಲಿಯಾಗಿ ಹೋಗಿದ್ದರು.
ಮಾರನೇ ದಿನ ಶಾಲೆಯಲ್ಲಿ ಎಲ್ಲರೂ ಭೇಟಿಯಾದಾಗ, ನಿನ್ನೆ ಏನೂ ನೆಡೆದೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದೆವು. ಆದರೆ ಒಬ್ಬರ ಮುಖವನ್ನು ಇನ್ನೊಬ್ಬ ನೋಡಿದಾಗ ತನಗೇ ಅರಿಯದ ಒಂದು ಕಳ್ಳ ನಗು ಮುಖದಲ್ಲಿ ಬಂದುಹೋಗುತ್ತಿತ್ತು. ಒಟ್ಟಿನಲ್ಲಿ ಯಾವುದೋ ಒಂದು ದೊಡ್ಡ ತಪ್ಪನ್ನು ಮಾಡಿದರೂ ಯಾರಿಗೂ ತಿಳಿಯಲೇ ಇಲ್ಲ ಎನ್ನುವ ಸಂತೋಷದಲ್ಲಿ ಎಲ್ಲರೂ ಬೀಗುತ್ತಿದ್ದೆವು. ಮಧ್ಯಾಹ್ನ ಯಾಕೋ ನಾಮ್ಮ ಮನೆಯಲ್ಲಿ ಊಟಕ್ಕೆ ತಡವಾಗಿ ನಾನು ವಾಪಸ್ ಶಾಲೆಗೆ ಹೋಗುವಾಗ ಮಧ್ಯಾಹ್ನದ ಮೊದಲನೇ ಅವಧಿ ಆಗಲೇ ಶುರುವಾಗಿಬಿಟ್ಟಿತ್ತು. ಸಂಸ್ಕೃತ ಹೇಳುತ್ತಿದ್ದ ಮೇಡಮ್ ಆಗಲೇ ಕ್ಲಾಸಿಗೆ ಬಂದಾಗಿತ್ತು. ನಾನು ಹೋಗಿ ಬಾಗಿಲಲ್ಲಿ ನಿಂತು ಮೇಡಮ್ ಅನ್ನುವಷ್ಟರಲ್ಲಿ, "ಓ... ಬಂದ್ಯೇನಪ್ಪಾ... ಬಾ. ನೋಡು... ನಿನ್ನ ಫ್ರೆಂಡ್ಸ್ ಎಲ್ಲಾ ಆ ಮೂಲೇಲಿ ನಿತ್ಕೊಂಡಿದಾರೆ. ನೀನೂ ಹೋಗಿ ಅವರ ಜೊತೆ ನಿಂತ್ಕೊ ಹೋಗು" ಎಂದರು. ನನಗೆ ಒಮ್ಮೆಲೇ ದಿಗಿಲಾಗಿ ಅತ್ತಕಡೆ ನೋಡಿದರೆ, ನಿನ್ನೆ ಕ್ರಿಕೆಟ್ ಆಡಲು ಹೋಗಿದ್ದ ಆರೂ ಜನ ತಲೆ ತಗ್ಗಿಸಿ ಒಂದುಕಡೆ ನಿಂತಿದ್ದರು. ನಾನೇ ಏಳನೆಯವನು. ನನ್ನ ಬರುವಿಗಾಗೇ ಕಾಯುತ್ತಿದ್ದರು. ಈ ವಿಷಯ ಇವರಿಗೆ ಹೇಗೆ ಗೊತ್ತಾಯ್ತಪ್ಪಾ ಎಂದುಕೊಳ್ಳುತ್ತಾ ಸಹೋದ್ಯೋಗಿಗಳ ಜೊತೆ ನಿಂತೆ. ಅಷ್ಟು ಹೊತ್ತಿಗೆ ನಮ್ಮ ಹೆಡ್ ಮಾಸ್ಟರ್ ಕ್ಲಾಸಿಗೆ ಬಂದರು. ಮೇಡಮ್ ಅವರಿಗೆ ಈ ಪ್ರಸಂಗದ ಬಗ್ಗೆ ವಿವರಿಸುತ್ತಾ "ನೋಡ್ರೀ ಈ ಸಪ್ತರ್ಷಿಗಳೇ ಹೋಗಿ ಗ್ಲಾಸ್ ಒಡದು ಬಂದದ್ದು." ಎಂದು ನಮ್ಮ ಪರಿಚಯ ಮಾಡಿಕೊಟ್ಟರು.
ಗಾಜು ಒಡೆದಾಗ ಹೆದರಿ ಓಡುವ ಭರಾಟೆಯಲ್ಲಿ ನಮ್ಮಲ್ಲೇ ಒಬ್ಬ ಕಾಲೇಜ್ ಕಾರಿಡಾರ್‌ನಲ್ಲೇ ಓಡತೊಡಗಿದ್ದ. ಕಾಲೇಜು ಪ್ಯೂನ್ ಅವನನ್ನು ಹಿಡಿದು ಯಾಕೆ ಓಡುತ್ತಿದ್ದೀಯಾ ಎಂದು ಗದರಿದಾಗ ಗಾಜು ಒಡೆದ ಸುದ್ದಿಯಿಂದ ಹಿಡಿದು ಆಟದಲ್ಲಿ ಯಾರು ಯಾರು ಇದ್ದರು ಎಂಬುದನ್ನೂ ಒಂದೂ ಬಿಡದಂತೆ ಅವನಿಗೊಪ್ಪಿಸಿಬಂದುಬಿಟ್ಟಿದ್ದ ನಮ್ಮೊಳಗಿದ್ದ ಹರಿಶ್ಚಂದ್ರ. ಆದರೂ ಯಾರಿಗೂ ಹೀಗಾಯಿತು ಎಂದು ಬಾಯಿಬಿಟ್ಟಿರಲಿಲ್ಲ. ನಮಗೆ ನಮ್ಮ ನಮ್ಮೊಳಗೇ ಸಂಶಯ ಶುರುವಾಗತೊಡಗಿತು. ಹೆಸರು ಕೊಟ್ಟಿದ್ದು ಯಾರು? ಅವನಿರಬೇಕು ಇವನಿರಬೇಕು ಎಂದು ಯೋಚಿಸುತ್ತಿರುವ ನಡುವೆಯೇ ಚೇತನ ಬಹುಶಃ ಹುಡುಗೀರು ಹೇಳಿರ್ಬೇಕು ಎನ್ನುತ್ತಿದ್ದ. ಕೊನೆಗೂ ಹೆಡ್ ಮಾಸ್ಟ್ರು ನಮ್ಮ ಹೆಸರುಗಳನ್ನು ಓದತೊಡಗಿದರು. ಎಲ್ಲರಿಗೂ ಆಶ್ಚರ್ಯ. ಯಾಕೆಂದರೆ ಅಲ್ಲಿದ್ದ ಹೆಸರುಗಳೆಲ್ಲಾ ನಮ್ಮ ನಿಕ್ ನೇಮ್ಸ್. ಅವೆಲ್ಲಾ ನಮ್ಮ ನಮ್ಮಲೇ ಇನ್ನೊಬ್ಬರನ್ನು ಕಿಚಾಯಿಸಲು ಇಟ್ಟ ಹೆಸರುಗಳು .ಡುಮ್ಮ, ಸೊಣಕ, ಕೋಳಿ, ಗಾಂಧಿ, ಮಾಣಿ, ಚುರ್‌ಮುರಿ... ಆದರೆ ಒಬ್ಬನ ಹೆಸರು ಮಾತ್ರ ಒರಿಜಿನಲ್. ಚೇತನ್ ಶೆಟ್ಟಿ! ಈ ಹೆಸರುಗಳನ್ನು ಚೇತನನೇ ಕೊಟ್ಟಿದ್ದು ಎನ್ನುವುದರಲ್ಲಿ ಯಾರಿಗೂ ಸಂಶಯ ಉಳಿಯಲಿಲ್ಲ. ಕ್ಲಾಸು ಮುಗಿದಾಗ ಎಲ್ಲರೂ ಹೋಗಿ ಚೇತನನನ್ನು ಹುರಿದು ಮುಕ್ಕುವುದೊಂದು ಬಾಕಿ ಇತ್ತು. ಎಲ್ಲರ ಮುಖದ ಮೇಲೂ ಸಿಟ್ಟು ತಾಂಡವವಾಡುತ್ತಿತ್ತು. ಗಾಜು ಒಡೆದುಬಂದ ವಿಷಯ ನಮ್ಮ ಮೇಸ್ಟ್ರುಗಳಿಗೆ ಗೊತ್ತಾಯಿತಲ್ಲಾ ಎಂಬುದಕ್ಕಲ್ಲ. ತಮ್ಮ ನಿಕ್ ನೇಮ್ ಹುಡುಗಿಯರಿಗೆ ಗೊತ್ತಾಗಿ ಅವರೆಲ್ಲಾ ನಮ್ಮನ್ನು ನೋಡಿ ನೋಡಿ ನಗತೊಡಗಿದುದಕ್ಕೆ.
Subscribe to:
Posts (Atom)