Thursday, January 10, 2008

ಕತ್ತಲೆಯ ಬೆಳಕು



"ಅಯ್ಯೋ... ಕರೆಂಟ್ ಹೋಯ್ತು!!!" ಈ ವಾಕ್ಯವನ್ನು ದಿನಕ್ಕೊಂದುಬಾರಿಯಾದರೂ ಕೇಳಿಯೇ ಇರುತ್ತೇವೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಕಡಿಮೆಯಿದ್ದರೂ ನಮ್ಮೂರಿನಲ್ಲಂತೂ ಸಧ್ಯದಲ್ಲೇ ಲೋಡ್ ಶೆಡ್ಡಿಂಗ್ ಶುರು ಆಗುತ್ತದಂತೆ. ಮಳೆಗಾಲ ಮುಗಿದು ಇನ್ನೂ ನಾಲ್ಕು ತಿಂಗಳು ಕಳೆದಿಲ್ಲ. ನಮ್ಮ KEBಯವರಿಗೆ ಎಷ್ಟು ದುಡ್ಡುಕೊಡುತ್ತೇವೆಂದರೂ, ಕೆಲಸವಿಲ್ಲದ ಕಾರಣಕ್ಕೋ ಏನೊ, ಅಂತೂ ಕರೆಂಟನ್ನು ದಿನಕ್ಕೆ ಎರಡು ಗಂಟೆಯಾದರೂ ತೆಗೆಯದಿದ್ದರೆ ಅವರಿಗೆ ಸಮಾಧಾನವಿಲ್ಲ. ರಾಜ್ಯದ ಕೋಟಿಗಟ್ಟಲೆ ಮುತ್ತೈದೆಯರ ಶಾಪ ತಗುಲಿಯೂ KEBಯವರು ಇಂದಿಗೂ ಬದುಕುಳಿದು ಕೆಲಸ ಮಾಡುತ್ತಿರುವುದು ಅಚ್ಚರಿಯ ಸಂಗತಿ! ಬಹುಶಃ ಈಗಿನ ಮುತ್ತೈದೆಯರ power ಮೊದಲಿನವರ ಹಾಗೆ ಉಳಿದಿಲ್ಲ ಎನಿಸುತ್ತದೆ. ಎಲ್ಲರೂ ಕರೆಂಟು ಹೋದ ಕೂಡಲೇ KEBಯವರ ವಿರುದ್ಧ ವಾಗ್ಸಮರಕ್ಕೆ ಸಿದ್ಧವಾಗಿಬಿಡುತ್ತಾರೆ. ಅದರಲ್ಲೂ ಕ್ರಿಕೆಟ್ ಮ್ಯಾಚ್ ಬರುತ್ತಿದ್ದಾಗ ಹೋದರಂತೂ ಎಲ್ಲ ಗಂಡಸರಿಂದಲೂ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಅಡಿಗೆ ಮಾಡಲು ಮಿಕ್ಸರ್ ಹಾಕಿದಾಗ ಅಥವಾ ರಾತ್ರಿ ವರ್ಷಗಟ್ಟಲೆ ನೆಡೆಯುವ ಕಥೆಯೇ ಮುಂದುವರಿಯದ ಮೆಗಾ ಧಾರಾವಾಹಿಗಳ ಸಮಯದಲ್ಲಿ ಕರೆಂಟು ಹೋಗಿಬಿಟ್ಟರಂತೂ ಮುಗಿಯಿತು. ಗಂಡಂದಿರ ಮೇಲಿನ ಸಿಟ್ಟೂ ಸೇರಿ KEBಯವರಿಗೆ ಸಹಸ್ರನಾಮಾವಳಿ ಪೂಜೆಯೇ ನೆರವೇರಿಬಿಡುತ್ತದೆ. ಇಷ್ಟಕ್ಕೂ KEBಯವರು ಕರೆಂಟನ್ನು ಯಾಕೆ ತೆಗೆಯುತ್ತಾರೆ ಎಂದು ಯೋಚಿಸಿದ್ದೇವೆಯೆ ?

ಈ ಕರೆಂಟು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕರೆಂಟಿಲ್ಲ ಎಂದರೆ ಟಿವಿ ಇಲ್ಲ, ಫ್ರಿಡ್ಜ್ ಇಲ್ಲ, ಲೈಟ್ ಇಲ್ಲ, ಮಿಕ್ಸರ್ ಇಲ್ಲ, ವಾಷಿಂಗ್ ಮಷಿನ್ ಇಲ್ಲ, ಫ್ಯಾನ್ ಇಲ್ಲ, ಎಸಿ ಇಲ್ಲ ಒಟ್ಟಿನಲ್ಲಿ ಏನೂ ಇಲ್ಲ. ಆದರೂ ನಾವಿದ್ದೇವೆ. ನಮ್ಮ ಜೊತೆ ಅಗಾಧವಾದ ಕತ್ತಲೆಯಿದೆ. ಮನುಷ್ಯ ವಿದ್ಯುಚ್ಛಕ್ತಿಯ ಮೇಲೆ ಹೆಚ್ಚಾಗಿಯೇ ಅವಲಂಬಿಸಿಬಿಟ್ಟಿದ್ದಾನೆ. ಅದಿಲ್ಲದಿದ್ದರೆ ಎನೂ ಇಲ್ಲವೆಂಬ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣಗಳೂ ಕರೆಂಟಿಲ್ಲದಿದ್ದರೆ ಉಪಯೋಗಕ್ಕೆ ಬರುವುದಿಲ್ಲ. ಈಗಂತೂ ಕಾರು ಬೈಕುಗಳೂ ಕೂಡಾ ವಿದ್ಯುಚ್ಛಕ್ತಿ ಚಾಲಿತವಾಗಿವೆ. ಕರೆಂಟಿಲ್ಲದೆ ಮೊದಲು ಜನ ಹೇಗೆ ಬದುಕುತ್ತಿದ್ದರಪ್ಪಾ ಎಂದು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿದೆ. ಹಿಂದೊಂದು ಕಾಲವಿತ್ತು, ನಿನ್ನೆ ಮಾಡಿದ ಅಡಿಗೆಯನ್ನು ಇವತ್ತು ತಿನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈಗ ದಿನನಿತ್ಯ ಅಡಿಗೆ ಮಾಡುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಹ್ಯಾಗಿದ್ದರೂ ಹಳಸಲು ಪೆಟ್ಟಿಗೆ (ಫ್ರಿಡ್ಜ್) ಇದೆಯಲ್ಲಾ. ಆದರೆ ಕರೆಂಟು ಹೋದರೆ ಮಾತ್ರ ಕೆಲಸ ಕೆಟ್ಟಿತು. ಅಡಿಗೆಯನ್ನಂತೂ ಹೊಸತಾಗಿ ಮಾಡಲೇಬೇಕು. ಅದೂ ಅಲ್ಲದೆ ಆ ಹಳಸಲು ಪೆಟ್ಟಿಗೆಯಲ್ಲಿ ಹಳಸಿಹೋದ ಪದಾರ್ಥಗಳ ದುರ್ಗಂಧ ಹೊರಹಾಕಲೂ ಒದ್ದಾಡಬೇಕು. ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕಪ್ಪಾ ಅವ್ರು ಕರೆಂಟ್ ತೆಗೀತಾರೆ?

ಹಿಂದೆ ಯಾವುದೋ personality development ಬಗ್ಗೆ ಪುಸ್ತಕ ಓದುತ್ತಿದ್ದ ನೆನಪು. ಶಿವ್ ಖೆರಾ ಅವರದ್ದು. ಬಹುತೇಕ ಕಡೆ be positive, be positive ಎಂದು ಹೀಳಿದ್ದರು. ನಾನೂ ಆಗ ಬಹಳಸ್ಟು ತಲೆ ಕೆಡಿಸಿಕೊಂಡಿದ್ದೆ. ಪೊಸಿಟಿವ್ ಆಗುವುದು ಎಂದರೇನು ಎಂದು. ಅಲ್ಲಿ ಕೆಲವು ಉದಾಹರಣೆಗಳೂ ಇದ್ದವು. ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರಿದ್ದರೆ, ಗ್ಲಾಸು ಅರ್ಧ ಖಾಲಿ ಇದೆ ಎನ್ನುವುದು ನೆಗೆಟಿವ್ ಥಿಂಕಿಂಗ್. ಗ್ಲಾಸು ಅರ್ಧ ತುಂಬಿದೆ ಎನ್ನುವುದು ಪೊಸಿಟಿವ್ ಥಿಂಕಿಂಗ್ ಎಂದು. ಆಗೆಲ್ಲಾ ನನಗನಿಸುತ್ತಿತ್ತು, ಎಲ್ಲದನ್ನೂ ಪೊಸಿಟಿವ್ ಆಗಿ ತಗೋಬೇಕು ಅಂತ ಹೇಳ್ತಿದಾರಲ್ಲಾ, ನೆಗೆಟಿವ್ ಥಿಂಕಿಂಗ್‌ಅನ್ನೂ ಪೊಸಿಟಿವ್ ಆಗಿ ಯಾಕೆ ತಗೊಳಲ್ಲಾ ಅಂತ. ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಅದು ಬೇರೆ ವಿಷಯ. ಆದರೆ ಈ ಕರೆಂಟು ಹೋಗುವುದನ್ನೂ ನಾವು ಪೊಸಿಟಿವ್ ಮಾರ್ಗದಲ್ಲಿ ವಿಚಾರ ಮಾಡಿದರೆ ನಮಗೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದೇನೊ. "ಯಾಕಾದ್ರೂ ಕರೆಂಟು ತೆಗೀತಾರೇನೊ?", "ಇದರಿಂದ ಇವರಿಗೇನು ಲಾಭ?" ಎಂದು ಯೋಚಿಸುವುದನ್ನು ಬಿಟ್ಟು "ಯಾಕೆ ಕರೆಂಟು ತೆಗೀತಾರೆ?" "ಇದರಿಂದ ನಮಗೇನು ಲಾಭ?" ಎಂದು ಯೋಚಿಸಬೇಕಾಗಿದೆ. ನಾನಂತೂ ಇದೇ ಮಾರ್ಗದಲ್ಲಿ ಯೋಚಿಸಲು ಪ್ರಾರಂಭಿಸಿದೆ. ಯಾಕೆಂದರೆ ನನ್ನ ಬ್ಲಡ್ ಗ್ರುಪ್ಪೇ ಹೇಳತ್ತೆ. B positive ! ಕೆಲವು ಪೊಸಿಟಿವ್ ಅಂಶಗಳು ಗಮನಕ್ಕೂ ಬಂದವು.

ಕರೆಂಟ್ ಹೋಗುವುದರಿಂದ ಏನಾಗುತ್ತದೆ? ಲೈಟ್ ಹತ್ತುವುದಿಲ್ಲ. ಎಲ್ಲ ಕಡೆ ಮೇಣದ ಬತ್ತಿಗಳನ್ನೋ ಚಿಮಣಿ ದೀಪಗಳನ್ನೋ ಹೊತ್ತಿಸುತ್ತೇವೆ. ಮನುಷ್ಯ ಬೆಂಕಿಯನ್ನು ಕಂಡು ಹಿಡಿಯುವ ಮೊದಲು ರಾತ್ರಿ ಪೂರ್ತಿ ಕತ್ತಲೆಯಲ್ಲೇ ಬದುಕುತ್ತಿದ್ದ. ಬೆಂಕಿಯನ್ನು ಕಂಡುಹಿಡಿದು ಕ್ರಂತಿಯನ್ನೇ ಮಾಡಿದ. ಆಗ ಆತನಿಗೆ ರಾತ್ರಿಯೂ ಬೆಳಕಾಯಿತು. ಅದೊಂದು ಕತ್ತಲೆಯಿಂದ ಬೆಳಕಿನೆಡೆಗೆ ಮನುಕುಲ ನೆಡೆದ ಕಾಲ. ಅಂಥ ಕಾಲವನ್ನು ನಮಗೆ ಈಗ ನಾವು ಹೊತ್ತಿಸಿದ ಮೇಣದಬತ್ತಿಗಳು, ಚಿಮಣಿ ದೀಪಗಳು ನೆನಪಿಸಿ ಕೊಡುತ್ತವೆ. ಮನುಷ್ಯ ಎಷ್ಟೇ ದೊಡ್ಡವನಾದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದಂತೆ. ಆದ್ದರಿಂದ KEBಯವರಿಂದ ಮನುಷ್ಯ ನೆಡೆದು ಬಂದ ಹಾದಿಯನ್ನು ಪ್ರತಿಯೊಬ್ಬ ನಾಗರಿಕನಿಗೂ ನೆನಪು ಮಾಡಿಸುವ ಕಾರ್ಯ ಪ್ರತಿದಿನವೂ ನಡೆಯುತ್ತದೆ. ಎಂತಹ ಮಹಾನ್ ಧ್ಯೇಯ. ಕರೆಂಟು ಹೋದಾಗ A/C ಕೂಡಾ ಕೆಲಸ ಮಾಡುವುದಿಲ್ಲ. ಮನೆಯಲ್ಲೇ ಕುಳಿತುಕೊಂಡು A/C ಹಚ್ಚಿಕೊಂಡು ಮನೆಯ ತುಂಬಾ ಇಂಗಾಲದ ಡೈ ಆಕ್ಸೈಡ್ ತುಂಬಿದ್ದರೂ ಅದನ್ನೇ ಮತ್ತೆ ಮತ್ತೆ ಉಸಿರಾಡುತ್ತಿರುವ ಜನ A/C ಕೆಲಸ ಮಾಡದೇ ಇದ್ದಾಗ ಮನೆಯಿಂದ ಹೊರಬರುತ್ತಾರೆ. ಹಿತವಾದ ಆಮ್ಲಜನಕಭರಿತ ತಣ್ಣನೆಯ ಗಾಳಿಯನ್ನು ಸೇವಿಸುತ್ತಾರೆ. ದೇಹದ ಎಲ್ಲ ಭಾಗಗಳಿಗೆ, ವಿಶೇಷವಾಗಿ ಮೆದುಳಿಗೆ ನವಚೈತನ್ಯ ಬಂದಂತಾಗುತ್ತದೆ. ಮನುಷ್ಯ ಆರೋಗ್ಯವಂತನಾಗುತ್ತಾನೆ. ದಿನನಿತ್ಯವೂ ಒಂದೆರಡು ಗಂಟೆ ಹಿತಕರವಾದ ಹವಾಸೇವನೆಯಿಂದ ಮನುಷ್ಯರನ್ನು ಆರೋಗ್ಯವಂತರನ್ನಾಗಿಸುವ KEBಯವರ ಧ್ಯೇಯ ನಿಜಕ್ಕೂ ಮೆಚ್ಚುವಂಥದ್ದೆ.

ಬೆಳೆಯುವ ಮಕ್ಕಳಲ್ಲಿ ಎಷ್ಟೊಂದು ಕಾಂಪಿಟಿಷನ್! ತಮ್ಮ ಮಕ್ಕಳು ಪಕ್ಕದ ಮನೆಯವರಿಗಿಂತ ಹೆಚ್ಚು ಸ್ಕೋರ್ ಮಾಡಬೇಕು. ಸಂಬಂಧಿಕರ ಮಗುವಿಗಿಂತ ಹೆಚ್ಚು ಓದಬೇಕು ಎಂದು ಮಕ್ಕಳ ಮೇಲೆ ಹೇರುವ ತಂದೆ ತಾಯಿಗಳೆಷ್ಟು. ಇಂತಹ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಂದೆ ತಾಯಿ ಹೆಚ್ಚು ಗಮನ ಹರಿಸುತ್ತಿಲ್ಲ. ಆದರೆ ಕರೆಂಟು ಹೋದರೆ ಅಭ್ಯಾಸಕ್ಕಂತೂ ಆಗುವುದಿಲ್ಲವಲ್ಲ. ಹೊರಗಡೆ ಎಲ್ಲಾ ಗೆಳೆಯರು ಸೇರಿ ಕತ್ತಲೆಯಲ್ಲೇ ಹರಟುತ್ತಾ ಕೂಡಬಹುದು. ಅಥವಾ ಬೇರೆ ಏನಾದರೂ ಆಟಗಳನ್ನು ಆಡಬಹುದು. ಒಟ್ಟಿನಲ್ಲಿ ಅಭ್ಯಾಸ, ಓದು ಎನ್ನುವ ದಿನನಿತ್ಯದ ಶೋಷಣೆಯಿಂದ ಮುಕ್ತಿ. ಮಕ್ಕಳಿಗೆ ತಮ್ಮ ಬಾಲ್ಯವನ್ನು ಹಿಂದಿರುಗಿಸುವ ಈ ಕತ್ತಲೆ ನಿಜಕ್ಕೂ KEBಯವರ ಕೊಡುಗೆಯಲ್ಲವೆ? ದಿನ ಪೂರ್ತಿ ಧಾರವಾಹಿಗಳನ್ನು ನೋಡುತ್ತಿದ್ದ ಅಥವಾ ಕಂಪ್ಯೂಟರನ್ನೇ ದಿಟ್ಟಿಸಿ ಆಯಾಸಗೊಂಡಿದ್ದ ಕಣ್ಣಿಗಂತೂ ಈ ಎರಡು ಗಂಟೆಗಳ ಕಾಲ ಸ್ವರ್ಗ ಸುಖವಿದ್ದಂತೆ. ಪ್ರತಿಯೊಬ್ಬರ ದೃಷ್ಟಿಯ ಬಗ್ಗೂ ಕಾಳಜಿವಹಿಸುವ ಈ ಕರೆಂಟು ತೆಗೆಯುವ ಕಾರ್ಯಕ್ರಮ ನಿಜಕ್ಕೂ ನೇತ್ರದಾನದಷ್ಟೇ ಶ್ರೇಷ್ಠವಾದುದಲ್ಲವೆ. ಕರೆಂಟು ಹೋದಾಗ ಮಾಡಲು ಕೆಲಸವಿಲ್ಲದೆ ಮನೆಯ ಹೆಂಗಸರು ಪಕ್ಕದ ಮನೆಯ ಸುಬ್ಬಮ್ಮನನ್ನೋ ಮುನಿಯಮ್ಮನನ್ನೋ ಕರೆದು ಹರಟುತ್ತಾ ಕೂತರೆ ಮಾತೆಯರಿಗೆ ಮಾತೆಯರೆಂಬ ಹೆಸರು ಸಾರ್ಥಕವಾದಂತಲ್ಲವೆ? ಹೆಂಗಸರಿಗೆ ಮರೆತುಹೋದ ತಮ್ಮ ಹುಟ್ಟುಗುಣವನ್ನು ಪುನಃ ನೆನಪಿಸುವ ಕಾರ್ಯ ನಿಜಕ್ಕೂ ಧರ್ಮಸ್ಥಾಪನೆಯ ಕಾರ್ಯವಲ್ಲವೆ?

"ಅಯ್ಯೋ..." ಕ್ಷಮಿಸಿ, "ಅರೆ ವ್ಹಾ... ಈ ಲೇಖನ ಬರೆಯುತ್ತಿರುವಾಗಲೇ ಮತ್ತೆ ಕರೆಂಟ್ ಹೋಯ್ತು". KEBಯವರು ನೂರು ವರ್ಷ ಸುಖವಾಗಿ ಬಾಳಲಿ. ನಾನು ಹೊರಗಡೆ ತಣ್ಣನೆಯ ಗಾಳಿ ಸೇವಿಸಿ ಆರೋಗ್ಯ ವರ್ಧಿಸಿಕೊಂಡು ಬರುತ್ತೇನೆ.

6 comments:

ದೀಪಕ said...

ನಮಸ್ಕಾರ/\:)

ಸಧ್ಯ.. ಇಲ್ಲಿ ಓದುವಾಗ ಕರೆ೦ಟ್ ಹೋಗಲಿಲ್ಲ.. ಹೋಗಿದ್ದರೆ, ಬರೋ ವರೆಗೆ ಮನಸ್ಸಿಗೆ ಸಮಾಧಾನವಾಗ್ತಾ ಇರಲಿಲ್ಲ !
ಯಾಕೆ ಅ೦ದ್ರೆ, ಈ ಲೇಖನ ಸ೦ಪೂರ್ಣವಾಗಿ ಓದ್ಲಿಕ್ಕೆ ಆಗ್ಲಿಲ್ಲ ಅನ್ನೋ ಕೊರಗು ಕಾಡುತ್ತಲ್ವಾ ?

ಲೇಖನ ಚೆನ್ನಾಗಿದೆ... ಹೀಗೆಯೇ, ನಿನ್ನ ಮನಸ್ಸಿನ ಧ್ವನಿಯು ಓದುಗರ ಮನಸ್ಸನ್ನು ತಲುಪುತ್ತಿರಲಿ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ

ಸಿದ್ಧಾರ್ಥ said...

ದೀಪಕನ ಅನಿಸಿಕೆಗಳಿಗೆ ಧನ್ಯವಾದಗಳು.
ಹೀಗೇ ಕಮೆಂಟಿಸುತ್ತಿರು :)

C.A.Gundapi said...

ಹೀಗೇ ಕಮೆಂಟಿಸುತ್ತಿರು :)
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು :)

ಮಗಾ ಚೆನ್ನಾಗಿದೆ. ಓಶೋ ಹೇಳಿದ ನೆನಪು ನಾವು ಇಂದಿಗೆ ಜನಸಂಕೆಯಲ್ಲಿ ಅದ್ಗ್ರಸ್ಥಾನ ಪದೆಯೋದಕ್ಕೆ "KEB" ತುಂಬಾ ಸಹಾಯ ಮಾಡಿದೆ ..:) ಪೋಸಿತೀವೆ ಥಿಂಕಿಂಗ್ :)

Basu said...

lekhana chennagi ide le....yavudo kadambarikarara kadambari odo anubhava agtide....

Dhanyvadhagalondige,
Basavaraj Yanigar

Durga Das said...
This comment has been removed by the author.
Durga Das said...

nim blood group B+ve aagidakku saarthakawaaithu :) ..

yene heli current hodaaga istondella saviyabahudu anta nenapisidakke dhanyawaadagalu.. :)

nimma orrina kade naanu kuda tirugaadideene, alli janaralliond vishisthathe ide "yenthaha amawaasya kathaalaadru saii, beedi deepavilladeye (Street Light) , keluomme torch illadeye tirugaadthare ".(eega swalpa kadime-aagirbahudu)


Namma bengaloorinalli beedideepa iddaru yesto accidentgalu aagtaave, jana morili beeltaare, raste badili malgiro naaigal baala tulitaare. :)

namgu nim oorin jana swalpa training kodbeku :)
nammalli adagiruva "kathaleyalli nadeyuwa " kaleyannu jaagruthagolisbeku :) :)

nimindale namage paata shuruwaagali yendu haaristha, heege innu olle olle B+ve lekanagalu barali yendu aashishtha, nanna bogalena nilstini :):)