Thursday, November 29, 2007

ಸಾಫ್ಟ್ ವೇರ್ ಉದ್ಯೋಗ - ಎಷ್ಟು ಸುರಕ್ಷಿತ ?


ಮೂರು ವರ್ಷಗಳ ಹಿಂದೆ ಮುಗಿದ ಇಂಜಿನಿಯರಿಂಗ್ ಮೊನ್ನೆ ಮೊನ್ನೆಯಷ್ಟೇ ಮುಗಿದಂತಿದೆ. ಆಗಿನ ಘಟನೆಗಳು ಇನ್ನೂ ಕಣ್ಣ ಮುಂದೆಯೇ ನೆಡೆಯುತ್ತಿದೆಯೇನೋ ಎನಿಸುತ್ತದೆ. ನನಗೆ ಅವನ ಪರಿಚಯವಾದದ್ದು ಇಂಜಿನಿಯರಿಂಗ್‍ನಲ್ಲೇ. ಮೊದಲನೇ ವರ್ಷದಲ್ಲಿ ನಾನು ಮತ್ತು ಅವನು ಹಾಸ್ಟೆಲ್‍ನಲ್ಲಿ ಅಕ್ಕಪಕ್ಕದ ರೂಮಿನವರು. ಒಟ್ಟೂ ಎಂಟು ಜನರು ನಾವು, ಎಲ್ಲಿ ಹೋದರೂ ಒಟ್ಟಿಗೆ, ಏನೇ ಮಾಡಿದರೂ ಒಟ್ಟಿಗೆ. ಯಾರಾದರೂ ಊರಿಗೆ ಹೋಗಿಬಂದರಂತೂ ಮುಗಿಯಿತು. ಎಲ್ಲರೂ ಮುತ್ತಿಬಿಡುತ್ತಿದ್ದೆವು. ತಂದ ತಿಂಡಿ ಖಾಲಿ ಆದಮೇಲೆಯೇ ಎಲ್ಲರೂ ಹಿಂತಿರುಗುತ್ತಿದ್ದುದು. ಈ ನಮ್ಮ ಗುಂಪಿನಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದವನೆಂದರೆ ಅವನು. ಶಾಂತ ಮನೋಭಾವ, ಗೆಳೆಯರ ಮೇಲಿನ ಕಾಳಜಿ, ಇತರರು ಬಯಸದೇ ಇದ್ದರೂ ಅವರಿಗೆ ಸಹಾಯವನ್ನೀಡುವ ಮನಸ್ಸು ಅವನಲ್ಲಿತ್ತು. ಅವನ ಹಾಸಿಗೆಯ ಮೇಲೆ ಎದ್ದಕೂಡಲೇ ಕಾಣಿಸಬೇಕು ಎಂದು ಗೋಡೆಗೆ ಅಂಟಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರ ಮತ್ತು ರಾಮಕೃಷ್ಣರ ಭಿತ್ತಿಚಿತ್ರಗಳು ಅವನ ಆದರ್ಶಗಳನ್ನು ಸಾರುತ್ತಿದ್ದವು.


ನಾನು ಕಂಪ್ಯೂಟರ್ ಸೈನ್ಸ್ ಆಯ್ದುಕೊಂಡಿದ್ದರೆ, ಅವನದು ಎಲೆಕ್ಟ್ರಾನಿಕ್ಸ್. ಆದರೂ ಅಕ್ಕಪಕ್ಕದ ರೂಮಿನವರಾದ ಕಾರಣ ದಿನವೂ ಒಂದೆರಡು ತಾಸು ಹರಟೆಗೆ ತೊಂದರೆಯಿರಲಿಲ್ಲ. ನಮ್ಮ ಗುಂಪಿನಲ್ಲಿ ಹೆಚ್ಚು ಗಂಭೀರವಾಗಿ ವಿಷಯಗಳನ್ನು ಓದುತ್ತಿದ್ದವನೆಂದರೆ ಅವನೇ. ಅವನಿಗಿಂತಲೂ ಹೆಚ್ಚಿಗೆ ಅಂಕಗಳಿಸುವ ಹುಡುಗರೂ ಸಹ ಅವನ ಹತ್ತಿರ ಬಂದು ತಿಳಿಯದೇ ಇದ್ದ ವಿಷಯಗಳನ್ನು ಚರ್ಚಿಸುವುದನ್ನು ನೋಡಿದ್ದೇನೆ. ಎಷ್ಟು ತಿಳಿದುಕೊಂಡಿದ್ದರೇನು ಪ್ರಯೋಜನ? ಹೊರಗಡೆ ಕೇಳುವುದು ಕೇವಲ ಅಂಕಗಳನ್ನೇ ತಾನೆ? ಇಂಜಿನಿಯರಿಂಗ್ ಮುಗಿಸಿ ಹೊರಬಂದಮೇಲೆಯೂ ಕೂಡ ನಾವೆಲ್ಲರೂ ಒಟ್ಟಿಗೆ ಮನೆಮಾಡಿ ಕೆಲಸಕ್ಕೆ ಹುಡುಕಾಟ ನಡೆಸಿದೆವು.


ಅವನೂ ಹುಡುಕುತ್ತಿದ್ದ. ಆದರೆ ನಮಗಿಂತ ಅಂಕಗಳಲ್ಲಿ ಕಡಿಮೆ ಇತ್ತು ಎಂದೋ ಏನೋ ನಮಗೆಲ್ಲರಿಗೂ ಕೆಲಸ ದೊರೆತಮೇಲೂ ಅವನ ಹುಡುಕಾಟ ಮುಂದುವರಿದಿತ್ತು. ಯಾವುದೇ ಇಂಜಿನಿಯರಿಂಗ್ ಕೋರ್ಸ್ ಮಾಡಿದರೂ ಕೂಡ ಬೆಂಗಳೂರಿನಲ್ಲಿ ಬದುಕಬೇಕಾದರೆ ಕೊನೆಗೆ ಸಾಫ್ಟ್ ವೇರ್ ಉದ್ಯೋಗವನ್ನೇ ಮಾಡಬೇಕು. ಇಲೆಕ್ಟ್ರಾನಿಕ್ಸ್ ಓದಿದರೂ ಕೂಡ ಅವನೂ ಕೆಲವು ಕೋರ್ಸ್‍ ಮಾಡಿ ಸಾಫ್ಟ್ ವೇರ್ ಉದ್ಯೋಗಕ್ಕೇ ಹುಡುಕಾಟ ನೆಡೆಸತೊಡಗಿದ. ಕೊನೆಗೂ ಒಂದು ಕೆಲಸ ಸಿಕ್ಕಿತು. ಆದರೆ ಅವನು ಮಾಡಿದ್ದ ಕೋರ್ಸಿಗೆ ಮತ್ತು ಅವನ ಕೆಲಸಕ್ಕೆ ಸಂಬಂಧವೇ ಇರಲಿಲ್ಲ. ಏನೇ ಆಗಲಿ ಒಟ್ಟಿನಲ್ಲಿ ಒಂದು ಕೆಲಸ ಸಿಕ್ಕಿತಲ್ಲಾ ಎಂದು ಸೇರಿಕೊಂಡ.


ಒಂದೈದು ತಿಂಗಳ ಹಿಂದೆ, ಬಹುಶಃ ಅವನು ಕೆಲಸಕ್ಕೆ ಸೇರಿ ಎರಡು ವರ್ಷಗಳೇ ಕಳೆದಿರಬಹುದು. ಕೈಗೆ ಒಳ್ಳೆಯ ಸಂಬಳವೂ ಬರುತ್ತಿತ್ತು. ಇದ್ದಕ್ಕಿದ್ದಂತೆಯೇ ಕಂಪನಿಗೆ ಲಾಸ್ ಆಗುತ್ತಿದೆ ಎಂದು ಕಾರಣಕೊಟ್ಟ ಕಂಪನಿ ಮ್ಯಾನೇಜ್‍ಮೆಂಟ್‍ನವರು ಇವನನ್ನು ಮತ್ತು ಇವನ ಜೊತೆ ಮತ್ತಿಬ್ಬರನ್ನು ಹೊರಹಾಕಿಬಿಟ್ಟರು. ಬೇರೆ ಕೆಲಸವಿಲ್ಲ. ಪ್ರತೀ ತಿಂಗಳು ಇವನೇ ಮನೆಗೆ ಹಣ ಕಳಿಸುತ್ತಿದ್ದ. ಮನೆಯಲ್ಲಿ ಅರ್ಥಿಕವಾಗಿ ಸ್ವಲ್ಪ ತೊಂದರೆಯಿದೆ. ವಯಸ್ಸಾದ ತಂದೆ ತಾಯಿ. ಔಷಧೋಪಚಾರಕ್ಕೂ ಹಣ ಬೇಕು. ಅಣ್ಣನಿಗೆ ಸರಿಯಾದ ಉದ್ಯೋಗ ದೊರೆತಿಲ್ಲ. ಅವನ ಮದುವೆಯನ್ನೂ ಮಾಡಬೇಕೆಂದು ನಿರ್ಧರಿಸಿದ್ದರು. ಅದಕ್ಕೂ ಇವನೇ ಹಣ ನೀಡಬೇಕಿತ್ತು. ಬೆಂಗಳೂರಿನಲ್ಲಿ ಇರುವ ಮನೆಬಾಡಿಗೆಯನ್ನೂ ಕೊಡಬೇಕು. ಇವನು ಮದುವೆಯಾಗಿಲ್ಲವೆಂಬುದೊಂದೇ ಇವನ ಅದೃಷ್ಟ.


ಬಹಳಷ್ಟು ಕಂಪನಿಗಳನ್ನು ಕೆಲಸಕ್ಕಾಗಿ ಅಲೆದ ಮೇಲೂ ಎಲ್ಲೂ ಕೆಲಸ ದೊರೆತಿಲ್ಲ. ಇದರ ಜೊತೆ ಉಳಿದೆಲ್ಲ ತೊಂದರೆಗಳು ಮತ್ತು ಮಾನಸಿಕ ವೇದನೆ. ಲಕ್ಷಗಟ್ಟಲೆ ಸುರಿದು ಇಂಜಿನಿಯರಿಂಗ್ ಕಲಿಸಿದ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲವಲ್ಲಾ ಎಂಬ ದುಃಖ. ಸಮಯಕ್ಕೆ ಸರಿಯಾಗಿ ಆಹಾರ ನಿದ್ದೆಯಿಲ್ಲದೆ ಓಡಾಟ ನೆಡಸಿದ್ದಕ್ಕಾಗೋ ಅಥವಾ ವಿಧಿಗೆ ಬೇರೆ ಯಾರೂ ಅಮಾಯಕರು ದೊರಕಲೇ ಇಲ್ಲವೋ ಎಂಬಂತೆ ಬಂದೊರಗಿದ ಕರುಳಬೇನೆ ರೋಗ. ೨೦-೨೧ ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ. ಒಂದುವಾರದ ಹಿಂದಷ್ಟೇ ಕೆಲಸದ ಹುಡುಕಾಟವನ್ನು ಪುನರಾರಂಭಿಸಲು ಮತ್ತೆ ಬೆಂಗಳೂರಿಗೆ ಬಂದಿದ್ದಾನೆ. ಕೆಲಸದ ಹುಡುಕಾಟ ಮುಂದುವರೆದಿದೆ. ಅವನ ಹುಡುಕಾಟ ಸಫಲವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವುದನ್ನು ಬಿಟ್ಟರೆ ನನಗೆ ಬೇರೆ ಏನೂ ತೋಚುತ್ತಿಲ್ಲ.

Monday, November 26, 2007

ಮದುವೆ ಆದ್ರು ನೋಡ್ರೀ, ಸಾಗರ್ ಮತ್ತು ಕಾದಂಬರಿ


ಸಾಗರ್ ನಮ್ಮ AceMAP ತಂಡದ (ಕುಟುಂಬದ ಎಂದರೇ ಹೆಚ್ಚು ಸೂಕ್ತ) ಹಿರಿಯ ಸದಸ್ಯರಲ್ಲೊಬ್ಬ. ನಮ್ಮ ಈ L&T Infotech ನಲ್ಲಿ ಕೆಲಸ ಮಾಡುತ್ತಿರುವವರ ಹುಡುಗರ ತಂಡದಲ್ಲಿ ಇದು ಮೊದಲನೇ ಮದುವೆಯ ಸಡಗರ. ಈಗ L&Tಯಲ್ಲಿ ಉಳಿದಿರುವವರು ಕೇವಲ ಮೂರೋ ನಾಲ್ಕೋ ಜನರಾದರೂ ಆ ಕುಟುಂಬದಿಂದ ಯಾರೂ ಬೇರೆಯಾಗಿಲ್ಲ. ಈ ಸಡಗರದ ಜೊತೆಗೆ AceMAP ತಂಡದ ಸದಸ್ಯರೆಲ್ಲಾ ಮತ್ತೊಮ್ಮೆ ಒಂದುಕಡೆ ಸೇರಬಹುದಲ್ಲಾ ಎನ್ನುವ ಸಂಭ್ರಮ. ಹಿಂದಿರುಗಿಬರಲು ರೈಲ್ವೆ ಟಿಕೆಟ್‍ಗಳು ದೊರತಿದ್ದರೂ ಹೋಗುವಾಗ ವೇಟಿಂಗ್ ಇದ್ದ ಕಾರಣ ವಿಆರ್‍ಏಲ್‍ನಲ್ಲಿ ಧಾರವಾಡಕ್ಕೆ ಶುಕ್ರವಾರ ರಾತ್ರಿ (23/11/2007) ಹೊರಟೆವು.


ಬಸ್ ಬಿಡುವುದು 9:30ಕ್ಕೇ ಆದರೂ ವಿಆರ್‍ಏಲ್‍ನವರು ತಮ್ಮ ಸ್ಟ್ಯಾಂಡರ್ಡ್ ಟೈಮನ್ನು ಕಾಯ್ದುಕೊಂಡು 11:00ಕ್ಕೆ ಬೆಂಗಳೂರಿಂದ ಹೊರಟರು. ಯಥಾಪ್ರಕಾರ ಯಾವಾಗಲೂ ಇಂತಹ ಬಸ್‍ಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವಂಥ ತಿಗಣೆಗಳು ಹೇರಳವಾಗಿ ನನ್ನ ಸೀಟ್‍ನ ಕೆಳಗೇ ಕುಳಿತಿದ್ದವು. ನಾವೆಲ್ಲರೂ ಮಾತಿನಲ್ಲಿ ಮಗ್ನವಾದರೆ, ಅವುಗಳು ನಮ್ಮ ರಕ್ತ ಹಂಚಿಕೊಳ್ಳುವುದರಲ್ಲಿ ಮಗ್ನವಾದವು.


ಮೈ ಕೊರೆವ ಛಳಿ. ಅದರಲ್ಲೂ ಎಲ್ಲ ಕಿಟಕಿಗಳನ್ನು ಮುಚ್ಚಿದರೂ ಎಲ್ಲಿಂದಲೋ ನುಸುಳಿಬರುವ ತಣ್ಣನೆಯ ಗಾಳಿ. ಇದರ ಮಧ್ಯ ಜಾಕೆಟ್ ತರಲು ಮರೆತಿದ್ದ ನಮ್ಮ ರೆಡ್ಡಿಗಾರು ಛಳಿಯಲ್ಲೇ ನಡುಗುತ್ತಾ "ಇದೇನು ಮಗಾ... ಛಲೀನೇ ಇಲ್ಲಾ... ಸಕತ್ತು ಹಾಟು..." ಎನ್ನುತ್ತಿದ್ದ. ಚಿತ್ರದುರ್ಗ ತಲುಪಿದೆವು. ಆ ಛಳಿಯಲ್ಲಿ ಒಂದೊಂದು ಕಪ್ ಬಿಸಿ ಬಿಸಿ ಟೀ ಚಪ್ಪರಿಸುತ್ತಾ ಮಾತನಾಡುವಾಗ ಆಗುವ ಆನಂದ ಅನುಭವಿಸಿಯೇ ತೀರಬೇಕು. ಅವರ ಕಂಪೆನಿಯ ಸಮಾಚಾರ ಇವರ ಕಂಪೆನಿಯ ಸಮಾಚಾರವೆಲ್ಲಾ ಮುಗಿಯಿತು. ಎಲ್ಲರೂ ವಿಷಯಕ್ಕಾಗಿ ತಡಕಾಡುತ್ತಿದ್ದರು. ಆಗಷ್ಟೇ ಯಾರೋ ಪ್ರಸ್ತಾಪಿಸಿದ್ದು, ’ಎಂ ಪಿ ಪ್ರಕಾಶ್ ಮತ್ತೆ ಕಾಂಗ್ರೆಸ್ ಜತೆಗೂಡಿ ಮತ್ತೆ ಸರ್ಕಾರ ರಚಿಸ್ತಾರಂತೆ!’. ಶುರುವಾಯಿತು ರಾಜಕೀಯದ ಡಿಸ್ಕಷನ್. ಒಬ್ಬ ದೇವೇಗೌಡರ ದುರ್ಭುದ್ಧಿಗೆ ವ್ಯಥೆಪಟ್ಟರೆ ಇನ್ನೊಬ್ಬ ಯಡಿಯೂರಪ್ಪನವರ ಸ್ಥಿತಿಗೆ ಮರುಕಪಟ್ಟ. ಒಟ್ಟಿನಲ್ಲಿ ಮುಂದಿನ ಇಲೆಕ್ಷನ್‍ನಲ್ಲಿ ಬಿಜೆಪಿಗೆ clean sweep mejority ಕೊಡಿಸಿಯೇ ಬಿಟ್ಟೆವು. ಅಷ್ಟರಲ್ಲಿ ನಮ್ಮ ಬಸ್ಸಿನ ಹಾರನ್ ಬಾರಿಸಿತು.


ಬಸ್ಸಿನಲ್ಲಿ ಮತ್ತೊಂದು ನಿದ್ದೆ ಮುಗಿಸಿದಾಗ ಹುಬ್ಬಳ್ಳಿ ತಲುಪಿದ್ದೆವು. ನನ್ನ ಹಿಂದೆಯೇ ಕುಳಿತಿದ್ದ ಕನ್ನಡ ’ಉಲಿಸಿ’ ’ಬೆಲೆಸಿ’ ಸಂಘದ ಅಧ್ಯಕ್ಷರು ಉಪಾಧ್ಯಕ್ಷರಾದ ಮಹೇಶ ಮತ್ತು ಸಾಯಿ ನಡುವೆ ಮಾತುಕತೆ ನೆಡೆದಿತ್ತು.
"ಹುಬ್ಬಲ್ಲಿ ಬಂತು ಮಗಾ"
"ಇದು ಹುಬ್ಬಲ್ಲಿ ಅಲ್ಲ ಮಚ್ಚಾ"
"ನಾನು ಹೇಲ್ತೀನಿ ಇದು ಹುಬ್ಬಲ್ಲಿನೇ"
"ಸರಿ ಬಿಡು"
ಇವರ ಇನ್ನೊಂದೆರಡು ಹಲ್ಲಿ ಪಲ್ಲಿಗಳನ್ನು ಕೇಳುವಷ್ಟರಲ್ಲಿ ಧಾರವಾಡ ತಲುಪಿದ್ದೆವು. ನಮ್ಮ ಸ್ವಾಗತಕ್ಕೆ ಸ್ವತಃ ಮದುವೆಗಂಡು ಸಾಗರ್ ಕಾಯುತ್ತಾ ಕುಳಿತಿದ್ದ. ಬಹಳ ದಿನಗಳ ನಂತರ ಸಾಗರ್‍ನನ್ನು ನೋಡಿದ ನಮಗೆ ಗಮನಕ್ಕೆ ಬಂದಿದ್ದು ಅವನ ಮುಖದಲ್ಲಿ ಆಗಲೇ ಮನೆಮಾಡಿದ್ದ ಅದೊಂದುರೀತಿಯ ಸಂತೋಷಭಾವ. ಅದು ನಮ್ಮೆಲ್ಲರ ಆಗಮನದಿಂದಲೋ ಅಥವಾ ಮದುವೆಯಾಗುತ್ತಿದ್ದೇನೆಂಬ ಖುಷಿಗೋ ಅವನೇ ಬಲ್ಲ.


ಕಲ್ಯಾಣಮಂಟಪದ ಎದುರುಗಡೆಯೇ ಸಾಗರ್ ನಮಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ. ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಕಿತ್ತೂರು ಕೋಟೆಗೆ ಪ್ರಯಾಣ ಬೆಳೆಸಿದೆವು. ಸಂಜೆ ಮೆರವಣಿಗೆ 5 ಗಂಟೆಗೆ ಪ್ರಾರಂಭವಾಗುವುದಿತ್ತು. ಅಷ್ಟರೊಳಗೆ ಹೋಗಿಬಂದುಬಿಡಬಹುದು ಎಂದು ದೃಢೀಕರಿಸಿಕೊಂಡೇ ಹೊರಟಿದ್ದೆವು. ಕಿತ್ತೂರಿನ ಕೋಟೆಯಲ್ಲಿ ಈಗ ಹೇಳಿಕೊಳ್ಳುವಂತಹದ್ದೇನೂ ಉಳಿದಿಲ್ಲವಾದರೂ ಧಾರವಾಡಕ್ಕೆ ಹೋದರೆ ಒಮ್ಮೆ ಅಲ್ಲಿಗೂ ಒಂದು ಭೇಟಿ ನೀಡಿ ಬರಬಹುದು. ಯಾವುದೇ ಶಿಲ್ಪಕಲಾಕೃತಿಗಳು ರಾರಾಜಿಸದಿದ್ದರೂ ರಾಣಿಯ ಅರಮನೆಯ ಅಡಿಪಾಯವನ್ನಷ್ಟಾದರೂ ನೋಡಬಹುದು. ಕಿತ್ತೂರು ಕೋಟೆಯನ್ನು ನೋಡಿಕೊಂಡು ಗುಂಡಪಿಯ ಗೆಳೆಯನ ಮನೆಗೆ ಹೋದೆವು. ಅಲ್ಲಿ ತಿಂದ ಕೊಬ್ಬರಿ ಹಾಕಿದ ಅವಲಕ್ಕಿ ಹಸಿದ ಹೊಟ್ಟೆಗೆ ಮೃಷ್ಟಾನ್ನ ತಿಂದಂತಾಯಿತು. ಗುಂಡಪಿಯ ಗೆಳೆಯನ ಹೊಲಗದ್ದೆಗಲನ್ನು ನೋಡಿಕೊಂಡು ವಾಪಸ್ ಧಾರವಾಡ ತಲುಪಿದಾಗ ೬ ಗಂಟೆಯಾಗಿತ್ತು. ಮೆರವಣಿಗೆ ಆಗ ತಾನೇ ಹೊರಟಿತ್ತು.


ಮದುವೆಯಲ್ಲಿ ಗಂಡು ಹೆಣ್ಣು ಮೆರವಣಿಗೆಯಲ್ಲಿ ಬರುವುದನ್ನು ಕೇವಲ ಟಿವಿಯಲ್ಲಿ ಸಿನೆಮಾಗಳಲ್ಲಿ ನೋಡಿದ್ದ ನನಗೆ ಇದೊಂದು ಹೊಸ ಅನುಭವ. ದೂರದಿಂದಲೇ ಮೊಟ್ಟಮೊದಲು ಕಣ್ಣಿಗೆ ಬಿದ್ದದ್ದು 25-30 ಟ್ಯೂಬ್‍ಲೈಟ್‍ಗಳು. ಅವು ಪೂರ್ತಿ ರಸ್ತೆಯನ್ನು ಅತಿಕ್ರಮಿಸಿಕೊಂಡುಬಿಟ್ಟಿದ್ದವು. ಅವೆಲ್ಲವುಗಳ ಮುಂದೆ ಹತ್ತಾರು ಮಕ್ಕಳು ಪಟಾಕಿಗಳನ್ನು ಸಿಡಿಸುತ್ತಿದ್ದರು. ಕುಡಕೆ, ಧಡಾಕಿ, ಬಾಳಂಗಳಕ್ಕೆ ಹೋಗಿ ಚಿತ್ರ ವಿಚಿತ್ರ ಚಿತ್ತಾರಗಳನ್ನು ಬಿಡಿಸುತ್ತಿದ್ದ ಪಟಾಕಿಗಳು ಮೆರವಣಿಗೆಗೆ ಭರ್ಜರಿ ಆರಂಭವನ್ನು ನೀಡಿದ್ದವು. ನಂತರ ನೆರೆದ ಟ್ಯೂಬ್‍ಲೈಟ್ ಸಾಲುಗಳ ಮಧ್ಯದಲ್ಲಿ ಆರ್ಕೆಸ್ಟ್ರಾದವರು ವಿವಿಧ ಹಿಂದಿ ಮತ್ತು ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ಅವರ ಮಧ್ಯದಿಂದ ಬರುತ್ತಿದ್ದ ಹುಡುಗಿಯ ಧ್ವನಿಯ ಹಿಂದೆ ಬಿದ್ದಿದ್ದ ನಮ್ಮಲ್ಲಿಬ್ಬರಿಗೆ ಅಚ್ಚರಿಯಾಗಿದ್ದು ಹುಡುಗನೇ ಹುಡುಗಿಯ ರೀತಿ ಹಾಡುತ್ತಿದ್ದುದನ್ನು ಕಂಡು. ಇವೆಲ್ಲವುಗಳು ದಾಟಿದಮೇಲೆ ಬರುತ್ತಿದ್ದ ನವದಂಪತಿ ಜೋಡಿ ಮಳೆಗಾಲದ ಮೋಡಗಳನ್ನೂ ದಾಟಿನಿಂತ ಎರಡು ಮಿನುಗುವ ತಾರೆಗಳಂತಿದ್ದರು. ಅವರ ಸುತ್ತಲು ಕುಣಿದು ಕುಪ್ಪಳಿಸುತ್ತಿದ್ದ ಹೆಣ್ಣುಮಕ್ಕಳು ಈ ತಾರಾಜೋಡಿಗೆ ಪ್ರಭಾವಲಯವನ್ನು ಮೂಡಿಸಿದಂತಿತ್ತು. ಈ ಪ್ರಭೆಯನ್ನು ಹೆಚ್ಚಿಸಲೋ ಕಲಕಲೋ ಎಂಬಂತೆ ಜೋಶ್ ತಡೆದುಕೊಳ್ಳಲಾಗದ ನಮ್ಮ AceMAPನ Josh Machine ಕರ್ಣ ಒಂದೆರಡು ಸ್ಟೆಪ್ ಹಾಕಲು ಹೋಗೇಬಿಟ್ಟರು.


ಮೆರವಣಿಗೆ ಕಲ್ಯಾಣಮಂಟಪ ತಲುಪಿದಮೇಲೆ ನಿಶ್ಚಿತಾರ್ಥ ಶಾಸ್ತ್ರ ನಡೆಯಿತು. ನಂತರ ಊಟ. ಆಮೇಲೆ ವಾಪಸ್ ನಮ್ಮ ರೂಮಿಗೆ ತೆರಳಿ ಅಲ್ಲಿದ್ದ ಎರಡೂ ಮಂಚಗಳನ್ನು ಸೇರಿಸಿ ತಂದಿದ್ದ ಇಸ್ಪೀಟ್ ಕಾರ್ಡ್‍ಗಳನ್ನು ಹೊರತೆಗೆದ ನಂತರ ಬೇರೆ ಪ್ರಪಂಚವೇ ಬೇಡವಾಯಿತು. ಸತತ ನಾಲ್ಕು ಗಂಟೆಗಳಕಾಲ ಆಟವಾಡಿ, ಒಂದು ರಾಂಗ್ ಷೋ ಕೂಡ ಮಾಡಿ ಅಜೇಯನಾಗಿ ನಿಂತಿದ್ದ ಮಹೇಶನನ್ನು ಸೋಲಿಸಲು ಸಾಧ್ಯವಿಲ್ಲವೆಂದು ಅರಿತಮೇಲೆ ಮಲಗಲು ನಿರ್ಧರಿಸಿದೆವು.


ಮಾರನೇ ದಿನ ಮದುವೆ ಮುಹೂರ್ತ 12ಕ್ಕಿತ್ತು. ನಾವೆಲ್ಲರೂ ಎದ್ದು ತಯಾರಾಗಿ ಕಲ್ಯಾಣಮಂಟಪ ತಲುಪುವಷ್ಟರಲ್ಲಿ ಆಗಲೇ 11:30 ಆಗಿಹೋಗಿತ್ತು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು, ’ಹುಡುಗ ಪಾಪ ಹಳ್ಳಕ್ಕೆ ಬಿದ್ದಾ..’ ಎಂದಂದುಕೊಳ್ಳುತ್ತಾ ಭರ್ಜರಿ ಊಟವನ್ನು ಮತ್ತೊಮ್ಮೆ ಮನಃಪೂರ್ವಕವಾಗಿ ಸವಿದೆವು. ಸಾಗರ್ ಮತ್ತು ಕಾದಂಬರಿಯರನ್ನು ಭೇಟಿಯಾಗಿ ವೈವಾಹಿಕ ಜೀವನದಲ್ಲಿ ಅವರಿಗೆ ಶುಭಕೋರಿ ಬೀಳ್ಕೊಡುವಾಗ ಎಲ್ಲರ ಹೃದಯವೂ ಭಾರವಾಗಿತ್ತೋ ಏನೋ. ಮಾತುಗಳು ಮೊದಲಿಗಿಂತ ಕಡಿಮೆಯಾಗಿಬಿಟ್ಟಿದ್ದವು. ಎಲ್ಲರಿಗೂ ಮೌನವೇ ಇಷ್ಟವೆನಿಸತೊಡಗಿತ್ತು. ಇವೆಲ್ಲವುಗಳ ನಡುವೆ ಆಗಾಗ ನೆನಪಿಗೆ ಬರುತ್ತಿದ್ದವರು AceMAP ಕುಟುಂಬದ ಉಳಿದ ಸದಸ್ಯರು. ಅನಿವಾರ್ಯ ಕಾರಣಗಳಿಗೊಳಗಾಗಿ ಮದುವೆಗೆ ಬರಲಾಗದುದಕ್ಕೆ ಅವರಿಗೂ ಸಂಕಟ.

ಯಾದವಿ ಮನೋಜ ದೀಪಕ
ಮಂಜು ವಿಜಯ ಅಶೋಕ
ಇವರೆಲ್ಲರಿಗೆ, ತಾವು ಬರಲಾಗಲಿಲ್ಲವಲ್ಲಾ
ಎಂಬುದೊಂದೇ ಶೋಕ
ನಮಗನಿಸಿದ್ದೂ ಅದೇ,
ನೀವೂ ಇರಬೇಕಿತ್ತು ನಮ್ಮ ಪಕ್ಕ.

ಹಳೆಯ ದಿನಗಳನ್ನು ನೆನಪಿಸಿಕೊಂಡಾಗ, ಹತ್ತಿರದವರು ದೂರಾದಾಗ, ಮನಸ್ಸು ಕೆಲಸದ ಏಕತಾನತೆಯಿಂದ ಬಳಲಿದಾಗ ನನ್ನನ್ನು ಸಂತೈಸುವುದು ಅಡಿಗರ ಆ ಒಂದು ಸಾಲು ಮಾತ್ರ.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"


ಸಾಗರ್ ಮತ್ತು ಕಾದಂಬರಿ ಅವರ ವೈವಾಹಿಕ ಜೀವನ ಶುಭಪ್ರದವಾಗಲಿ.

Thursday, November 22, 2007

ಉದಯವಾಯಿತು ಚೆಲುವ ಕನ್ನಡ ನಾಡು

====================
ರಚನೆ: ಶ್ರೀಯುತ ರಿಚರ್ಡ್ ಲೂಯಿಸ್
====================

ಕನ್ನಡ ಕಸ್ತೂರಿ ಅಂತಾರೆ.
ಆದರೆ, ಇಂಥಾ ನಮ್ಮ ಕನ್ನಡದ ಪರಿಸ್ಥಿತಿ ನಮ್ಮ ಕರ್ನಾಟಕದಲ್ಲಿ ಏನಾಗಿದ್ಯಪ್ಪಾ ಅಂತಂದ್ರೆ,
ನಾವು ಕನ್ನಡ ಅಂದ್ರೆ ಇನ್ನೊಬ್ಬ ಅಂತಾನೆ ’ಎನ್ನಡ’
ಅಲ್ಲಪ್ಪಾ ನಾನು ಮಾತಾದಿದ್ದು ಕನ್ನಡ,
ಇವ್ನಂತಾನಲ್ಲ ಎನ್ನಡ ಅಂತ ಇನ್ನೊಬ್ನಿಗೆ ಹೇಳಿದ್ರೆ
ಅವನಂತಾನೆ ’ಏಮ್ರಾ ಎಕ್ಕಡ?’

ಅಯ್ಯಯ್ಯೋ ಈ ಕನ್ನಡ ನಾಡ್ನಲ್ಲಿ ಕನ್ನಡವೇ ಇಲ್ವಲ್ಲಪ್ಪಾ
ಇಲ್ನೋಡಿದ್ರೆ ಎನ್ನಡ ಅಲ್ನೋಡಿದ್ರೆ ಎಕ್ಕಡ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

ಕನ್ನಡ ಕಸ್ತೂರಿ ಭಾಷೆ ಗತಿ ಹೀಗಾಯ್ತು.
ಹೋಗ್ಲಿ ನಮ್ಮ ಕನ್ನಡಿಗರ ಹೃದಯದಂತಿರುವ
ವಿಶಾಲವಾದ ಕರ್ನಾಟಕ ರಾಜ್ಯದ ಗತಿ ಏನಾಯ್ತಪ್ಪಾ ಅಂತಂದ್ರೆ,

ಕಾಸರಗೋಡು ಕೇರಳಾಕ್ಕೆ ಸೇರೋಯ್ತು.
ಬೆಳಗಾಮು ಮಹಾರಾಷ್ಟ್ರಕ್ಕೆ ಸೇರಲೇಬೇಕು.
ಕೋಲಾರ ಚೆನ್ನೈಗೆ ರಾಯಚೂರು ಆಂದ್ರಕ್ಕೆ
ಕಾವೇರಿ ಚೆನ್ನೈಗೆ ಕೃಷ್ಣಾ ನೀರು ಆಂದ್ರಕ್ಕೆ
ಸೇರ್‍ಬೇಕು ಸೇರ್‍ಬೇಕು ಸೇರಲೇಬೇಕು.
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ವಿಶಾಲ ಕರ್ನಾಟಕದ ಪರಿಸ್ಥಿತಿ ಹೀಗಾಯ್ತು.
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಏನಾಯ್ತಪ್ಪಾ ಅಂತಂದ್ರೆ,

ಸದಾಶಿವನಗರ ಬರೀ ಸಿಂದಿ ಗುಜರಾತಿಗಳದು
ಚಿಕ್ಕಪೇಟೆ ಬಳೇಪೇಟೆಗಳು ಬರೀ ಮಾರ್ವಾಡಿಗಳದು
ಅಳಿದುಳಿದ ಮಾವಳ್ಳಿ ಗುಟ್ಟಳ್ಳಿ ಸುಂಕೇನಳ್ಳಿ
ಹಳ್ಳಿ ಪಳ್ಳಿಗಳೆಲ್ಲಾ ಕನ್ನಡಿಗರದು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ನಮ್ಮ ಭಾಷೆನೂ ಹಿಂಗಾಯ್ತು, ರಾಜ್ಯಾನೂ ಹಿಂಗಾಯ್ತು
ನಮ್ಮ ಕಲೆ ಸಂಸ್ಕೃತಿಯ ಕನ್ನಡಿ ಈ ನಮ್ಮ ಟಿವಿ ಚಾನಲ್‍ಗಳ ಗತಿ ಏನಾಯ್ತಪ್ಪಾ ಅಂತಂದ್ರೆ,

ನಿಮ್ಮ ಉದಯಾ ಟಿವಿಗೆ ಮದ್ರಾಸಿನ ಯಜಮಾನರು
ನಮ್ಮ ಈ ಟಿವಿಕ್ಕ್ ಆಂದ್ರಾವಾರು ಯಜಮಾನರು
ಕಾವೇರಿ ಕೇರಳ, ಮುಂಬೈದು ಸುಪ್ರಭಾತ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಟಿವಿ ಸ್ಥಿತಿಯೇನೋ ಹೀಗಾಯ್ತು,
ಚಲನಚಿತ್ರಗಳ ಗತಿ ಏನಪ್ಪಾ ಅಂದ್ರೆ,

ಕನ್ನಡದ ಹೀರೋಯಿನ್‍ಗಳೆಲ್ಲಾ ಬಾಂಬೆ ಮದ್ರಾಸಿನವರು
ಕನ್ನಡದ ನಿರ್ದೇಶಕರೆಲ್ಲಾ ಕೇರಳ ಆಂದ್ರದವರು
ಲೈಟ್‍ಬಾಯ್ಸು ಕನ್ನಡದವರು ಸೆಟ್‍ಬಾಯ್ಸು ಕನ್ನಡದವರು
ಎಕ್ಸ್ಟ್ರಾಸು ಕನ್ನಡದವರು ಕ್ಯಾಂಪ್‍ಬಾಯ್ಸು ಕನ್ನಡದವರು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಕಲೆ ಸ್ಥಿತಿ ಹಿಂಗಾಯ್ತು, ಸಂಸ್ಕೃತಿನೂ ಹಿಂಗಾಯ್ತು
ರಾಜ್ಯದ ಆಡಳಿತ ಹೇಗಾಯ್ತಪ್ಪಾ ಅಂತಂದ್ರೆ,

ಐ ಎ ಎಸ್ ಆಫೀಸರುಗಳೆಲ್ಲಾ ಬಂಗಾಲದವರು
ಐ ಪಿ ಎಸ್ ಆಫೀಸರುಗಳೆಲ್ಲಾ ನಯಿದಿಲ್ಲಿಯವರು
ಡ್ರೈವರ್‍ಗಳು ಕನ್ನಡದವರು ಪಿಸಿಗಳು ಕನ್ನಡದವರು
ಮುಸರೆ ತಿಕ್ಕೋರು ಕನ್ನಡದವರು ಕೂಲಿ ಮಾಡೋರು ಕನ್ನಡದವರು
ಗಾಡಿ ಎಳ್ಯೋರು ಕನ್ನಡದವರು ಬೀಡಿ ಸೇದೋರು ಕನ್ನಡದವರು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಅಣ್ಣಾ ಚೆನ್ನೈ ಅಣ್ಣಾ,
ಎನ್ನಡಾ?
ಅಣ್ಣಾ ಆಂದ್ರದ್ ಅಣ್ಣಾ
ಏಮಿರಾ?
ನಿಮ್‍ಮೇಲೆ ನಮಗೇನೂ ಕೋಪ ಇಲ್ಲಾ
ನಾವು ನಿಮ್ಮನ್ನ ಕೇಳೋದಿಷ್ಟೆ

ನೀವಿಲ್ಲಿ ಬಂದಾಯ್ತು ಬಂದಿಲ್ಲಿ ನೆಲೆಸಾಯ್ತು
ಅನ್ನಬೇಡ ಎನ್ನಡ ಕಲಿ ಸ್ವಲ್ಪ ಕನ್ನಡ
ಪ್ರೀತಿಯಿಂದ ಕರೆದಾಗ ಎತ್ತಬೇಡ ಎಕ್ಕಡ
ಎನ್ನಡ ಎಕ್ಕಡ ಬಿಟ್ಟು ಕಲಿ ಕನ್ನಡ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಹಾಡನ್ನು ಆನಂದಿಸಲು ಈ ಕೊಂಡಿಗೆ ಹೋಗಿರಿ

’ಅಮ್ಮ’ಳಲ್ಲಿಲ್ಲದ ವಿಶೇಷತೆ ’ಮಮ್ಮಿ’ಯಲ್ಲೇನಿದೆ?


ಭಾರತೀಯರು ಭಾವಜೀವಿಗಳು. ಭಾಷೆ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನ. ಕೇವಲ ಭಾಷೆಯಿಂದಷ್ಟೇ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದೇನಿಲ್ಲ. ಮುಖಭಾವದಿಂದ, ಹಾವಭಾವದಿಂದ, ಕಣ್ಣಿನಿಂದ ಮನುಷ್ಯನ ಭಾವನೆಗಳು ವ್ಯಕ್ತವಾಗುತ್ತಲೇ ಇರುತ್ತದೆ. ಭಾರತದ ಯಾವುದೇ ಭಾಷೆಯ ಯಾವುದೇ ಶಬ್ದವನ್ನು ತೆಗೆದುಕೊಳ್ಳಿ, ಅದರಿಂದ ಒಂದು ಭಾವ ಒಸರುತ್ತಿರುತ್ತದೆ. ಇದು ಕೇವಲ ರೂಢಿಯಲ್ಲ, ಮನೋಶಾಸ್ತ್ರ. ಮನುಷ್ಯ ಯಾವುದೇ ಶಬ್ದ ಹೊರಹೊಮ್ಮಿಸುವಾಗ ಅದರ ಹಿಂದೊಂದು ಪ್ರೇರಣೆಯಿರುತ್ತದೆ. ಒಂದು ಭಾವವಿರುತ್ತದೆ. ಆ ಶಬ್ದವನ್ನು ಉಚ್ಛರಿಸಿದಾಗ ಆ ಭಾವ ತನ್ನಿಂತಾನೆಯೇ ಪ್ರಕಟವಾಗಿಬಿಟ್ಟಿರುತ್ತದೆ. ಧ್ವನಿಯ ವಿಶೇಷ ಕಸರತ್ತಿಲ್ಲದೆ ಯಾವ ಭಾಷೆಯನ್ನು ಆಡಿದಾಗ ಭಾವನೆಗಳು ಸರಾಗವಾಗಿ ಹರಿದು ಬರುತ್ತದೆಯೋ ಆ ಭಾಷೆ ಪರಿಪೂರ್ಣವಾಗಿದೆಯೆಂದರ್ಥ. ನಾವೆಲ್ಲರೂ ಗರ್ವದಿಂದ ಹೇಳಿಕೊಳ್ಳಬೇಕಾದ ಒಂದು ಅಂಶವೆಂದರೆ ನಮ್ಮ ಕಸ್ತೂರಿ ಕನ್ನಡವೂ ಇಂತಹ ಭಾಷೆಗಳಲ್ಲೊಂದು.


ಭಾಷೆ ಹುಟ್ಟುವುದು ಒಂದೆರಡು ಪಂಡಿತರು ಕುಳಿತು ಮಾಡುವ ಚರ್ಚೆಯಿಂದಲೋ ಅಥವಾ ಯಾವುದಾದರೂ ಮನಶಾಸ್ತ್ರಜ್ಞನ ಥೀಸಿಸ್‍ನಿಂದಲೋ ಅಲ್ಲ. ಒಂದು ಜನಾಂಗ ಬೆಳೆದಂತೆ, ಒಂದು ನಾಗರೀಕತೆ ಬೆಳೆದಂತೆ ಭಾಷೆಯೂ ಹುಟ್ಟಿ ಬೆಳೆಯುತ್ತದೆ. ಆಯಾ ಸ್ಥಳಗಳ ಭಾಷೆ ಆಯಾ ಜನಜೀವನವನ್ನು ಪ್ರತಿಬಿಂಬಿಸುತ್ತದೆ. ಸಾವಿರಾರು ವರ್ಷಗಳಿಂದ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಈ ಭಾಷೆಯ ಶಬ್ದಗಳನ್ನು ನಿನ್ನೆ ಮೊನ್ನೆ ಬಂದಂತಹ ಪರಕೀಯರ ಭಾಷೆಯ ಶಬ್ದಗಳು ಅತಿಕ್ರಮಿಸುವುದು ಎಷ್ಟು ಸೂಕ್ತ? ಅಂತಹ ಶಬ್ದಗಳು ನಮಗೆ ಹೊಂದುತ್ತವೆಯೇ? ಅಥವಾ ಅಂತಹ ಶಬ್ದಗಳ ಮೋಹಕ್ಕೊಳಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬೇಕೆ? ನಮ್ಮತನವನ್ನು ಕಳೆದುಕೊಳ್ಳಬೇಕೆ?


’ಅಮ್ಮಾ’ ಎನ್ನುವ ಎರಡಕ್ಷರದಲ್ಲಿ ಮುಕ್ಕೋಟಿ ದೇವತೆಗಳನ್ನು ಕಂಡ ಸಂಸ್ಕೃತಿ ನಮ್ಮದು. ಅಂತಹ ಶಬ್ದವನ್ನು ಮೂಲೆಗುಂಪಾಗಿಸಿ ಅದರ ಬದಲು ಕಾಯ್ದಿಟ್ಟ ಹೆಣವೆಂಬ ಅರ್ಥ ಕೊಡುವ ’ಮಮ್ಮಿ’ಯನ್ನು ತಂದು ಕೂರಿಸಬೇಕೆ? ಮಗು ನೋವಾದಾಗ ಮೊದಲು ತಾಯಿಯನ್ನು ನೆನಪಿಸಿಕೊಂಡು ಕೂಗುವ ’ಅಮ್ಮಾ’ ಎನ್ನುವ ಎರಡಕ್ಷರದಿಂದ ಹೊಮ್ಮುವ ಭಾವ ’ಮಮ್ಮಿ’ ಎಂದಾಗ ಮೂಡಿಬರುವುದಿಲ್ಲ. ಸಂತಸದ ಸುದ್ದಿಯನ್ನು ಮೊದಲು ತಾಯಿಗೆ ತಿಳಿಯಗೊಡಬೇಕು ಎನ್ನುವ ಆತುರದಲ್ಲಿ ಮನೆ ಹೊಕ್ಕಿ ’ಅಮ್ಮಾ’ ಎಂದು ಮಗ ಕರೆಯುವಾಗ ಸ್ಫುರಿಸುವ ಭಾವ ’ಮಮ್ಮಿ’ ಎಂದಾಗ ಸೊರಗಿಹೋಗುತ್ತದೆಯೇನೋ ಅನ್ನಿಸುತ್ತದೆ. ಇಂತಹ ಕೃತಕ ಭಾಷೆ ನಮ್ಮದಾಗಬೇಕೆ? ಶಬ್ದ ಶಬ್ದಕ್ಕೂ ಭಾವಸಂಚಾರವೀಯುವ ಸರ್ವೋನ್ನತ ಭಾಷೆಯನ್ನು, ಭಾವನೆಗಳನ್ನೇ ಹೊಮ್ಮಗೊಡದ ನಿರ್ಜೀವ ಭಾಷೆಯನ್ನಾಗಿಸುವುದರಲ್ಲಿ ಯಾವ ಪುರುಷಾರ್ಥವಿದೆ?


ಇಷ್ಟಕ್ಕೂ ನಾನು ಮನನೊಂದುಕೊಂಡದ್ದು, ನಮ್ಮ so called high society ಜನರು ತಮ್ಮ ತಾಯಿಯನ್ನು ಮಮ್ಮಿ ಎಂದಿದ್ದಕ್ಕಲ್ಲ. ಮುಖವನ್ನೇ ಕಾಣದಂತೆ ಮೇಕಪ್ ಮಾಡಿಕೊಳ್ಳುವ, ಸಾವಿರ ರೂಪಾಯಿಗಳಿಗೂ ಕೆಳಗೆ ವಸ್ತುಗಳೇ ಸಿಗದಂತಹ ’ಷಾಪಿಂಗ್ ಕಾಂಪ್ಲೆಕ್ಸ್’ ’ಮಾಲ್’ ಗಳಲ್ಲಿ ಸುತ್ತಾಡುವ ಬೆಡಗಿಯರು ತಮ್ಮ ತಾಯಂದಿರನ್ನು ’ಮಾಮ್’ ಎಂದು ಕರೆದಾಗಲಲ್ಲ. ನಮ್ಮ ಮನೆಯ ಹಿಂದುಗಡೆಯೇ ಗುಡಿಸಲು ಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡಿರುವ, ಆಂಗ್ಲ ಭಾಷೆಯ ಗಂಧವೇ ಇಲ್ಲದ ಮನೆಗಳ ಮಕ್ಕಳು ತಾಯಂದಿರನ್ನು ಮಮ್ಮಿ ಎಂದಾಗ. ಎಂದೂ ನಮ್ಮವಳಲ್ಲದ ನಮ್ಮವಳಾಗಲು ಸಾಧ್ಯವಿಲ್ಲದ ಈ ’ಮಮ್ಮಿ’ ನಮಗೆ ಬೇಕೆ? ಅವಳಿಗಾಗಿ ನಾವು ನಮ್ಮ ’ಅಮ್ಮ’ಳನ್ನು ತೊರೆಯಬೇಕೆ?